| ಮೃತ್ಯುಂಜಯ ಕಪಗಲ್ ಬೆಂಗಳೂರು
ಬೇಡಿಕೆ ಇಲ್ಲವೆಂಬ ಕಾರಣವೊಡ್ಡಿ ಶಾಖೋತ್ಪನ್ನ ನೆಲೆಯ ವಿದ್ಯುತ್ ಘಟಕಗಳು ದೀರ್ಘಾವಧಿಯಿಂದ ಸ್ತಬ್ಧವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 5,000 ಕೋಟಿ ರೂ. ಹೊರೆ ಬೀಳುವ ಅಂದಾಜಿದೆ.
ಉತ್ತಮ ಮಳೆಯಿಂದಾಗಿ ಜಲಮೂಲದ ವಿದ್ಯುತ್ ಉತ್ಪಾದನೆ ಭರಪೂರವಾಗಿದ್ದರೆ, ಬೇಡಿಕೆ ಕುಸಿದಿದೆ. ದಿನದ ಬಳಕೆ ಪ್ರಮಾಣ 12ರಿಂದ 9,000 ಮೆಗಾ ವಾಟ್ (ಗರಿಷ್ಠ ಬಳಕೆ ಅವಧಿ) ಆಸುಪಾಸಿನಲ್ಲಿದೆ. ಖಾಸಗಿ ವಲಯದ ಜೈವಿಕ ತ್ಯಾಜ್ಯ, ಸೌರ ಮತ್ತು ಪವನ ಮೂಲದ ವಿದ್ಯುತ್ ಉತ್ಪಾದನೆ ಏರುಗತಿಯಲ್ಲಿದ್ದು, ಸರಾಸರಿ 4,500 ಮೆಗಾ ವಾಟ್ ಲಭಿಸುತ್ತಿದೆ. ಜತೆಗೆ ಕೇಂದ್ರದಡಿ ರಾಜ್ಯದ ಪಾಲು, ಎನ್​ಟಿಪಿಸಿ, ದಾಮೋದರ್ ಕಣಿವೆ ಯೋಜನೆಗಳಡಿ ಪುಷ್ಕಳ ವಿದ್ಯುತ್ ಲಭಿಸುತ್ತಿದೆ.
ಥರ್ಮಲ್ ಘಟಕಗಳು ಸ್ಥಗಿತ: ಕರೊನಾದಿಂದಾಗಿ ಉದ್ಯಮ-ವಹಿವಾಟು ಇನ್ನೂ ಚೇತರಿಸಿಕೊಳ್ಳದ ಕಾರಣ ವಿದ್ಯುತ್ ಬಳಕೆ ತಗ್ಗಿದೆ. ಬೇಡಿಕೆಗಿಂತ ಉತ್ಪಾದನೆ ದುಪ್ಪಟ್ಟಾಗಿರುವ ಪರಿಣಾಮ ಥರ್ಮಲ್ ಘಟಕಗಳು ದೀರ್ಘಾವಧಿಯಿಂದ ಸ್ಥಗಿತವಾಗಿವೆ. ಆರ್​ಟಿಪಿಎಸ್​ನ 8 ಮತ್ತು ಬಿಟಿಪಿಎಸ್ 3 ಘಟಕಗಳು ಸ್ತಬ್ಧವಾಗಿ ಒಟ್ಟು 3,420 ಮೆಗಾ ವಾಟ್ ಉತ್ಪಾದನೆ ಕೈ ಬಿಡಲಾಗಿದ್ದು, ಕೋಟ್ಯಂತರ ರೂ. ಆದಾಯ ಕೆಪಿಸಿಎಲ್ ಕೈತಪ್ಪಿದೆ.
ನಿರ್ವಹಣಾ ವೆಚ್ಚದ ದಿಗಿಲು:ಯಂತ್ರೋಪಕರಣಗಳ ತಿಂಗಳುಗಟ್ಟಲೆ ನಿಲುಗಡೆ ಯಿಂದ ಪುನರಾರಂಭ ದುಬಾರಿ ಆಗಲಿದ್ದು, ಹೆಚ್ಚುವರಿ ನಿರ್ವಹಣಾ ವೆಚ್ಚ ಭರಿಸಬೇಕಾಗುತ್ತದೆ ಎಂಬ ದಿಗಿಲೂ ಕೆಪಿಸಿಎಲ್​ಗಿದೆ. ಮಳೆಗಾಲದಲ್ಲಿ 1 ಅಥವಾ 2 ಘಟಕಗಳನ್ನು ಪಾಳಿ ಪ್ರಕಾರ ನಿಲ್ಲಿಸಿ, ಮತ್ತೆ ಶುರು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲ ಘಟಕಗಳು ಒಮ್ಮೆಲೇ ನಿಂತಿವೆ. ಕರೊನಾ-ಮಳೆಯಷ್ಟೇ ಅಲ್ಲ, ಖಾಸಗಿ ಮೂಲದಿಂದ ಕಡಿಮೆ ದರದಲ್ಲಿ ವಿದ್ಯುತ್ ಲಭ್ಯತೆಯೇ ಈ ಸಂಕಷ್ಟಕ್ಕೆ ಮೂಲ ಕಾರಣ. ಬಿಟಿಪಿಎಸ್ ವಿದ್ಯುತ್ ದರ ಸ್ವಲ್ಪಮಟ್ಟಿಗೆ ಜಾಸ್ತಿ ಇದ್ದರೂ ಆರ್​ಟಿಪಿಎಸ್ ವಿದ್ಯುತ್ ದರ ಪ್ರತಿ ಯೂನಿಟ್​ಗೆ ಸರಾಸರಿ 4.80 ರೂ. ಇದ್ದು, ಖಾಸಗಿ ದರ ಇದಕ್ಕಿಂತ 25 ಪೈಸೆ ಹೆಚ್ಚಿದೆ. ಖಾಸಗಿ ಸಂಸ್ಥೆ ಮತ್ತು ಸರ್ಕಾರದ ಮಧ್ಯೆ ಒಪ್ಪಂದ ಏರ್ಪಟ್ಟಿರುವುದರಿಂದ ಉತ್ಪಾದಿತ ವಿದ್ಯುತ್ ಖರೀದಿ ಅನಿವಾರ್ಯ. ಕೆಪಿಸಿ ಸರ್ಕಾರಿ ಸ್ವಾಮ್ಯದ್ದಾಗಿರುವ ಕಾರಣ ಬೇಕು ಎಂದಾಗ ಉತ್ಪಾದನೆ, ಇಲ್ಲವೆಂದಾಗ ಕಡಿತ ಮಾಡಲಾಗುತ್ತದೆ. ಸೌರ-ಪವನ ಮೂಲದ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿದ್ದಂತೆ ಕೆಪಿಸಿಎಲ್ ಘಟಕಗಳು ಆಗಾಗ್ಗೆ ಕಡ್ಡಾಯ ವಿರಾಮ ಪಡೆಯುತ್ತವೆ ಎಂದು ಮೂಲಗಳು ತಿಳಿಸಿವೆ. ಶಾಖೋತ್ಪನ್ನ ಘಟಕಗಳು ವಿದ್ಯುತ್ ಉತ್ಪಾದಿಸಲಿ ಇಲ್ಲವೇ ಬಿಡಲಿ, ನಿಗದಿತ ಶುಲ್ಕವಂತೂ ಭರಿಸಬೇಕಾಗುತ್ತದೆ. ಒಪ್ಪಂದದಂತೆ ಕಲ್ಲಿದ್ದಲು ಪೂರೈಸುವ ಕಂಪನಿಗಳಿಗೆ ಹಣ ಪಾವತಿಸಬೇಕಾಗುತ್ತದೆ. ಆದಾಯ ತಪ್ಪಿ, ಕಲ್ಲಿದ್ದಲು ವೆಚ್ಚ, ಶುಲ್ಕದ ಹೊರೆಯೂ ಸೇರಿ ಎಸ್ಕಾಂಗಳು ಮತ್ತು ಸರ್ಕಾರಕ್ಕೆ 5,000 ಕೋಟಿ ರೂ. ಹೊರೆ ಬೀಳಲಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.
ಬಿಎಸ್​ಎನ್​ಎಲ್​ನಂತೆ ದುಃಸ್ಥಿತಿಯಲ್ಲಿ ಕೆಪಿಸಿಎಲ್!:ಖಜಾನೆಗೆ ವಾರ್ಷಿಕ ನೂರಾರು ಕೋಟಿ ರೂ. ಆದಾಯ ತಂದು ಕೊಡುತ್ತಿದ್ದ ಕೆಪಿಸಿಎಲ್ ಬರಿದಾಗಿದ್ದು, ಎಸ್ಕಾಂ ಮತ್ತು ಕೆಪಿಟಿಸಿಎಲ್ ಭರಿಸಬೇಕಾದ ಬಾಕಿ ಮೊತ್ತ 28,000 ಕೋಟಿ ರೂ.ಗೆ ಏರಿದೆ. ವಿದ್ಯುತ್ ಯೋಜನೆಗಳಿಗಾಗಿ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲದ ಕಂತುಗಳನ್ನು ಮರುಪಾವತಿಸಬೇಕಾಗಿದೆ. ಒಂದೆಡೆ ಆದಾಯವಿಲ್ಲ, ಮತ್ತೊಂದೆಡೆ ಬಾಕಿ ಬರುತ್ತಿಲ್ಲ. ಇದರಿಂದಾಗಿ ಉದ್ಯೋಗಿಗಳ ಸಂಬಳ ಪಾವತಿಗೂ ಸಾಲ ಮಾಡಬೇಕಾದ ದುಃಸ್ಥಿತಿಗೆ ಸಿಲುಕಿದ್ದು, ರೋಗಗ್ರಸ್ತ ಬಿಎಸ್​ಎನ್​ಎಲ್ ಹಾದಿಯಲ್ಲಿ ಕೆಪಿಸಿಎಲ್ ಸಾಗಿದೆ ಎಂದು ಮೂಲಗಳು ಆತಂಕ ವ್ಯಕ್ತಪಡಿಸಿವೆ.
ವಾರ್ಷಿಕ ಲೆಕ್ಕಪತ್ರಕ್ಕೆ ಒಪ್ಪಿಗೆ
ಕೆಪಿಸಿಎಲ್ 2019-20ನೇ ಸಾಲಿನ ವಾರ್ಷಿಕ ಲೆಕ್ಕಪತ್ರಕ್ಕೆ ಒಪ್ಪಿಗೆ ನೀಡಿ, ಪ್ರಧಾನ ಮಹಾ ಲೆಕ್ಕಾಧಿಕಾರಿ ಹಾಗೂ ಮಹಾ ಲೆಕ್ಕಪರಿಶೋಧಕರ ಪರಿಶೀಲನೆಗೆ ರವಾನಿಸಲು ನಿರ್ಧರಿಸಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೆಪಿಸಿ ನಿರ್ದೇಶಕರ ಆಡಳಿತ ಮಂಡಳಿ ಈ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + four =
Remember me
