ಧಾರವಾಡ/ಬೆಂಗಳೂರು:ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಆರು ಮಂದಿ ಸುಪಾರಿ ಹಂತಕರನ್ನು ಭಾನುವಾರ ಬಂಧಿಸಿದ್ದಾರೆ.
ತಮಿಳುನಾಡು ಹಾಗೂ ಬೆಂಗಳೂರು ಮೂಲದ ಅಶ್ವತ್ಥ್, ಪುರುಷೋತ್ತಮ ಎಂಬುವರು ಸೇರಿ 6 ಆರೋಪಿಗಳ ಹೆಸರು ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಳಿಬಂದಿದ್ದು, ಇಲ್ಲಿನ ಬಸವರಾಜ ಮುತ್ತಗಿ ಎಂಬಾತ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ.
ಸಿಬಿಐ ಅಧಿಕಾರಿಗಳು ತಮ್ಮ ಮೇಲೆ ಕಣ್ಣಿಟ್ಟಿರುವ ಸಂಶಯದ ಮೇರೆಗೆ ಆರೋಪಿಗಳು ಬೆಂಗಳೂರಿನಿಂದ ತಮಿಳುನಾಡಿಗೆ ಪರಾರಿಯಾಗುತ್ತಿದ್ದಾಗ ಚೆನ್ನೈ ಮತ್ತು ಬೆಂಗಳೂರಿನ ಸಿಬಿಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಖೆಡ್ಡಾಗೆ ಕೆಡವಿದ್ದಾರೆ.
ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳು, ಕೃತ್ಯ ನಡೆದ ದಿನದಿಂದ ತಲೆ ಮರೆಸಿಕೊಂಡಿದ್ದ ಈ ಆರೋಪಿಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದರು ಎನ್ನಲಾಗಿದೆ.
ಬೆಂಗಳೂರಿನಲ್ಲಿ ಬಂಧನ ಮಾಡಿದ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಭಾನುವಾರ ಸಂಜೆ ನಗರಕ್ಕೆ ಕರೆತಂದ ಅಧಿಕಾರಿಗಳು, ಇಲ್ಲಿನ ಪ್ರಧಾನ ಜೆಎಂಎಫ್​ಸಿ ನ್ಯಾಯಾಧೀಶೆ ವಿಜಯಲಕ್ಷ್ಮೀ ಘಾಣಾಪುರ ಅವರ ಎದುರು ಗೃಹ ಕಚೇರಿಯಲ್ಲಿ ಹಾಜರುಪಡಿಸಿದರು. ಅಧಿಕಾರಿಗಳ ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು, ಒಂದು ದಿನದ ಮಟ್ಟಿಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೋಮವಾರ ಕೋರ್ಟ್​ಗೆ ಹಾಜರುಪಡಿಸುವಂತೆ ಸೂಚಿಸಿದರು. ನಂತರ ಆರೋಪಿಗಳನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಪ್ರಕರಣದ ಹಿನ್ನೆಲೆ:2016ರ ಜೂ.15ರಂದು ಯೋಗೀಶಗೌಡ, ಧಾರವಾಡದ ಸಪ್ತಾಪುರದಲ್ಲಿ ಜಿಮ್ಲ್ಲಿ ಬೆಳಗಿನ ಜಾವ ವ್ಯಾಯಾಮ ಮಾಡುತ್ತಿದ್ದಾಗ ದುಷ್ಕರ್ವಿುಗಳು ಹತ್ಯೆ ಮಾಡಿದ್ದರು. ಆಸ್ತಿ ವಿವಾದಕ್ಕೆ ಹತ್ಯೆ ನಡೆದಿದೆ ಎಂಬ ಅನುಮಾನದ ಮೇರೆಗೆ ಸ್ಥಳೀಯ ಐವರನ್ನು ಪೊಲೀಸರು ಬಂಧಿಸಿದ್ದರು.
ಕೊಲೆ ಹಿಂದೆ ರಾಜಕೀಯ ಕೈವಾಡದ ಆರೋಪ ಕೇಳಿಬಂದ ಕಾರಣ 2019ರ ಸೆ.6ರಂದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಇದರ ಮೇರೆಗೆ ಸಿಬಿಐ 2019ರ ಸೆ.24ರಂದು ಬಸವರಾಜ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ್ ಕಟಗಿ, ಮಹಾಬಲೇಶ್ವರ್ ಹುಂಗಲ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ತಡೆಯಾಜ್ಞೆ ತೆರವಾಗುತ್ತಿದ್ದಂತೆ ಆರೋಪಿಗಳು ಸಿಬಿಐ ಬಲೆಗೆ
ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಿದ್ದಂತೆ ಅಧಿಕಾರಿಗಳು ಚುರುಕಿನಿಂದ ತನಿಖೆ ನಡೆಸುತ್ತಿದ್ದರು. ಆದರೆ, ಕೆಲ ತಿಂಗಳ ಹಿಂದೆ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ಕುರಿತು ಸುಪ್ರೀಂ ಕೋರ್ಟ್​ಗೆ ಸಿಬಿಐ ಅರ್ಜಿ ಸಲ್ಲಿಸಿತ್ತು.
ಅದನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್, ತಡೆಯಾಜ್ಞೆ ತೆರವು ನೀಡಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು 5 ದಿನದ ಹಿಂದೆ ಧಾರವಾಡಕ್ಕೆ ಬಂದು ಹಲವರನ್ನು ವಿಚಾರಣೆ ಗೊಳಪಡಿಸಿದ್ದರು. ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿಯನ್ನೂ ತೀವ್ರ ವಿಚಾರಣೆಗೆ ಗುರಿ ಪಡಿಸಿದ್ದ ಸಿಬಿಐ ತಂಡ, ಆತನಿಂದ ಲಭಿಸಿದ ಸುಳಿವು ಆಧರಿಸಿ, ಸುಪಾರಿ ಹಂತಕರನ್ನು ಪತ್ತೆಹಚ್ಚಿ ಬಂಧಿಸಿದೆ. ಬೆಂಗಳೂರಿನಲ್ಲಿ ಸೆರೆ ಸಿಕ್ಕ ಆರೋಪಿಗಳನ್ನು ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೊಲೆಗೆ ಸಂಚು ರೂಪಿಸಿದ್ದು ಸೇರಿ ಅನೇಕ ಸಂಗತಿಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಆರೋಪಿಗಳ ಹೇಳಿಕೆ ದಾಖಲಿಸಿ ಕೊಂಡಿರುವ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
