ಬೆಂಗಳೂರು:ಕೋವಿಡ್ ಪ್ರಕರಣಗಳ ಸಂಖ್ಯೆ ಶುಕ್ರವಾರ ಮತ್ತಷ್ಟು ಏರಿಕೆ ಕಂಡಿದ್ದು, 833 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಒಂದೂವರೆ ತಿಂಗಳಿನಲ್ಲಿ ವರದಿಯಾಗಿರುವ ಅತೀ ಹೆಚ್ಚು ಸೋಂಕು ಪ್ರಕರಣಗಳು ಇದಾಗಿದೆ. ಇದೇ ವೇಳೆ ರಾಜ್ಯದಲ್ಲಿ ಮತ್ತೆ ಇಬ್ಬರಲ್ಲಿ (ಬಳ್ಳಾರಿ) ದಕ್ಷಿಣ ಆಫ್ರಿಕಾದ ರೂಪಾಂತರ ವೈರಾಣು ಕಾಣಿಸಿಕೊಂಡಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ (3), ಬ್ರಿಟನ್ (29) ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದ್ದು, 12 ದಿನಗಳ ಅವಧಿಯಲ್ಲಿ 7,166 ಮಂದಿ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 9.58 ಲಕ್ಷ ದಾಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಬೀದರ್, ಧಾರವಾಡ ಹಾಗೂ ಕಲಬುರಗಿಯಲ್ಲಿ ತಲಾ ಒಬ್ಬರು ಸೇರಿ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 12,386ಕ್ಕೆ ತಲುಪಿದೆ. ಸೋಂಕಿತರಲ್ಲಿ 545 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 9.37 ಲಕ್ಷ ಮೀರಿದೆ. ಸದ್ಯ 8,114 ಮಂದಿ ಸೋಂಕಿತರಲ್ಲಿ 125 ಮಂದಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
32 ಮಂದಿಯಲ್ಲಿ ರೂಪಾಂತರ ವೈರಸ್:ಬ್ರಿಟನ್​ನಿಂದ ಶುಕ್ರವಾರ ರಾಜ್ಯಕ್ಕೆ 196 ಮಂದಿ ಆಗಮಿಸಿದ್ದು, ನ.25ರ ನಂತರ ರಾಜ್ಯಕ್ಕೆ ಬಂದವರ ಸಂಖ್ಯೆ 14,126ಕ್ಕೆ ತಲುಪಿದೆ. 64 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅವರ ಸಂರ್ಪತರು ಸೇರಿ 29 ಮಂದಿಯಲ್ಲಿ ಬ್ರಿಟನ್ ರೂಪಾಂತರ ವೈರಸ್ ದೃಢಪಟ್ಟಿದೆ. ಮೂವರಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ವೈರಸ್ ವರದಿಯಾಗಿದೆ. ವಿದೇಶದಿಂದ ಬಂದು ಕೋವಿಡ್ ಪೀಡಿತರಾದವರು, ಅವರ ಸಂರ್ಪತರು ಸೇರಿ ಈವರೆಗೂ 200 ಮಂದಿಯ ಮಾದರಿ ಯನ್ನು ನಿಮ್ಹಾನ್ಸ್ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 32 ಮಂದಿಯಲ್ಲಿ ರೂಪಾಂತರ ವೈರಸ್ ದೃಢಪಟಿದೆ.
85 ಸಾವಿರ ಮಂದಿಗೆ ಲಸಿಕೆ:ರಾಜ್ಯದಲ್ಲಿ ಶುಕ್ರವಾರ 2,979 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನ ನಡೆದಿದ್ದು, 85,765 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 57,885 ಹಿರಿಯ ನಾಗರಿಕರು ಹಾಗೂ 12,055 ನಾನಾ ಆರೋಗ್ಯ ಸಮಸ್ಯೆ ಹೊಂದಿದವರು ಸೇರಿದ್ದಾರೆ. ಈವರೆಗೂ ಒಟ್ಟಾರೆ 12.70 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದು, ಇವರಲ್ಲಿ 4.78 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಹಾಗೂ 28.03 ಲಕ್ಷ ಮಂದಿ 2ನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಮುಂಚೂಣಿ ಕಾರ್ಯಕರ್ತರಲ್ಲಿ 1.73 ಲಕ್ಷ ಮಂದಿ ಮೊದಲ ಡೋಸ್ ಹಾಗೂ 12,930 ಮಂದಿ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಉಳಿದಂತೆ 60 ವರ್ಷ ಮೇಲ್ಪಟ್ಟ 2.75 ಲಕ್ಷ ಹಾಗೂ ನಾನಾ ಆರೋಗ್ಯ ಸಮಸ್ಯೆ ಹೊಂದಿರುವ 45-60 ವರ್ಷ ವಯೋಮಾನದ 50,343 ಮಂದಿ ಲಸಿಕೆ ಹಾಕಿಸಿಕೊಂಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಲಸಿಕೆ ಪಡೆಯಲು ಕರೆ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಕೋವ್ಯಾಕ್ಸಿನ್ ಲಸಿಕೆ ಪಡೆದು, ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಸಂಜೆ ವಿಕ್ಟೋರಿಯಾ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆ ಆಗಮಿಸಿದ ಸಿಎಂ, ಆರೋಗ್ಯ ತಪಾಸಣೆಗೊಳಪಟ್ಟು ಬಳಿಕ ಲಸಿಕೆ ಪಡೆದುಕೊಂಡರು. ಲಸಿಕೆಯಿಂದ ಯಾರಿಗಾದರೂ ಅಡ್ಡ ಪರಿಣಾಮ ಆಗಿದೆಯೇ ಎಂಬ ಬಗ್ಗೆ ವಿಚಾರಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಲಸಿಕೆ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಟ ಡಾ. ರಾಘವೇಂದ್ರ ರಾಜ್ ಕುಮಾರ್ ಸಹ ಲಸಿಕೆ ಪಡೆದುಕೊಂಡರು.
ಎರಡು ವಾರಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕರೊನಾ 2ನೇ ಅಲೆ ಮತ್ತೆ ಬರುತ್ತಿದೆ. ಕಳೆದ ಬಾರಿ ಕರೊನಾಗೆ ಸೋಂಕು ಒಳಗಾಗದವರಿಗೆ ಈ ಬಾರಿ ಬರುವ ಸಾಧ್ಯತೆ ಇದೆ. ಹಾಗಾಗಿ, ಮುಂದಿನ 6 ತಿಂಗಳ ಕಡ್ಡಾಯವಾಗಿ ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
|ಡಾ. ಸಿ.ಎನ್. ಮಂಜುನಾಥ್ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
