| ರಾಜಶೇಖರ ಜೋಗಿನ್ಮನೆರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹಿಂದುಸ್ತಾನಿ ಸಂಗೀತವನ್ನು ಪ್ರಚುರ ಪಡಿಸಿದ ಪ್ರಮುಖರು ಯಾರೆಂದರೆ ಆ ಸಾಲಿನಲ್ಲಿ ಪಂಡಿತ್ ವಿನಾಯಕ ತೊರವಿ ಖಂಡಿತ ಇರುತ್ತಾರೆ. 40 ವರ್ಷಗಳ ಹಿಂದೆ ಅವರು ಆರಂಭಿಸಿದ ಗುರುರಾವ್ ದೇಶಪಾಂಡೆ ಸಂಗೀತ ಸಭಾ ಈ ನಾಡಿಗೆ ಕೊಟ್ಟ ಹಾಗೂ ಕೊಡುತ್ತಿರುವ ಕೊಡುಗೆ ಅಮೂಲ್ಯವಾದುದು. ಸಂಗೀತದ ಮಾಧುರ್ಯವನ್ನು ಶಿಷ್ಯರಿಗೆ, ಕೇಳುಗರಿಗೆ ಹಂಚುತ್ತ ತೊರವಿ ಅವರು ಸಾಗಿ ಬಂದ ಹಾದಿಯನ್ನು ಒಂದು ತಪಸ್ಸು ಎನ್ನಬಹುದು. ಸಂಗೀತವನ್ನೇ ಉಸಿರಾಡುತ್ತ ಬಂದ ತೊರವಿ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹಿರಿಯ ಸಾಧಕರಲ್ಲಿ ಒಬ್ಬರು. ಹಲವಾರು ಬಂದಿಶ್ ಮತ್ತು ತರಾನಾಗಳ ರಚನೆಯನ್ನೂ ಮಾಡಿದವರು.
ಶಾಸ್ತ್ರೀಯ ಸಂಗೀತದ ಸೌಂದರ್ಯವನ್ನು, ಆ ಗಾಯನದ ರಂಜಕತೆಯನ್ನು ಕೇಳುಗರ ಹೃದಯ ಮುಟ್ಟುವಂತೆ ಪ್ರಸ್ತುತಪಡಿಸುವುದು ಅವರ ವಿಶೇಷತೆ. ತೊರವಿ ಅವರ ಸಂಗೀತವೆಂದರೆ ಕಿರಾಣಾ, ಗ್ವಾಲಿಯರ್, ಪಟಿಯಾಲಾ, ಜೈಪುರ ಘರಾನಾದ ಉತ್ತಮ ಅಂಶಗಳ ಹದವಾದ ಪಾಕ. ದೇಶದ ಹಲವಾರು ಪ್ರಸಿದ್ಧ ಗಾಯಕರ ಮಾರ್ಗದರ್ಶನ, ಶಿಷ್ಯತ್ವ ಪಡೆದು ತಮ್ಮದೇ ಆದ ಗಾಯನ ಶೈಲಿ ರೂಢಿಸಿಕೊಂಡವರು ತೊರವಿ. ಆಗಿನ ಪ್ರಸಿದ್ಧ ಸಂಗೀತಗಾರರಾದ ತಮ್ಮಣ್ಣ ಗುರವ, ನಾರಾಯಣರಾವ್ ಮುಜುಂದಾರ್, ನಾರಾಯಣ ದಂಡಾಪುರ ಅವರಲ್ಲಿ ಸಂಗೀತ ಕಲಿಕೆ ಆರಂಭಿಸಿ ನಂತರ ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿತ ದಿನಗಳು ಅವರ ನೆನಪಿನಲ್ಲಿ ಈಗಲೂ ಹಸಿರಾಗಿರಬಹುದು.
ಸಂಗೀತ ಕಲಿಯಲೆಂದು ಹೋಗಿ ಮೂರು ವರ್ಷಗಳ ಕಾಲ ಕಲಿಕೆ ಇಲ್ಲದೇ ಗುರುಸೇವೆಯಲ್ಲಿಯೇ ಕಳೆಯಬೇಕಾದ ಸಂದರ್ಭ ಹಾಗೂ ಮುಂದೊಂದು ದಿನ ಈ ಬಾಲಕನ ಆಸಕ್ತಿಯನ್ನು ದೃಢಪಡಿಸಿಕೊಂಡು ಗುರುರಾವ್ ದೇಶಪಾಂಡೆ ಅವರು ಸಂಗೀತ ಕಲಿಸಲು ಆರಂಭಿಸಿದ್ದು… ಮೊದಲಾದ ಸಂಗತಿಗಳನ್ನು ತೊರವಿ ಅವರು ಆಗಾಗ ನೆನಪಿಸಿಕೊಳ್ಳುತ್ತಾರೆ.
ದೇಶದ ಸಂಗೀತದ ದಂತಕಥೆಗಳೆನಿಸಿದ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು ಮೊದಲಾದ ಕಲಾವಿದರ ಸಾಮೀಪ್ಯ ವಿನಾಯಕ ತೊರವಿ ಅವರ ಸಂಗೀತವನ್ನು ಸಮೃದ್ಧಗೊಳಿಸಿದೆ. ಅಂಥವರ ಗಾಯನದ ಸತ್ವವನ್ನು ಅರಗಿಸಿಕೊಂಡು ತಮ್ಮ ಗಾಯನದ ವಜನ್ ಹೆಚ್ಚಿಸಿಕೊಂಡ ಸಾಧಕ ತೊರವಿ. ತಾವು ಹಾಡುವಾಗ ಸಹಕಲಾವಿದರೊಂದಿಗೆ ಸಾಮರಸ್ಯ ಸಾಧಿಸುವ ಹಿರಿಯರಾಗಿ, ಶಿಷ್ಯರನ್ನು ಪ್ರೀತಿಯಿಂದ ಸಲಹುವ ಗುರುವಾಗಿ ಸರಳತೆ ಮೆರೆಯುವ ವ್ಯಕ್ತಿತ್ವ ಅವರದು.
ಲಯಕಾರಿ, ಸರಗಮ್ ಬೋಲ್ ತಾನ್​ಗಳನ್ನೆಲ್ಲ ತಬಲಾ ವಾದಕರ ಜೊತೆ ಅವರು ಅಚ್ಚುಕಟ್ಟಾಗಿ ಗಾಯನದಲ್ಲಿ ನಿರೂಪಿಸುತ್ತಾರೆ. ಅನೇಕ ಕಡೆ ಸಂಗೀತ ಶಿಬಿರ ನಡೆಸುತ್ತ ಸಂಗೀತ ಪ್ರಸರಣದಲ್ಲಿ ತೊಡಗಿಕೊಳ್ಳುತ್ತಲೇ ಬಂದಿದ್ದಾರೆ. ವಿನಾಯಕ ತೊರವಿ ತುಂಬ ದೀರ್ಘವಾಗಿ ಹಾಡುವುದು ಕಡಿಮೆ. ಆದರೆ ಹಾಡಿದ್ದನ್ನು ಒಂದು ಪ್ಯಾಕೇಜ್ ರೂಪದಲ್ಲಿ ಕಟ್ಟಿಕೊಡುವುದು ಅವರ ವಿಶೇಷತೆ.
ವಿನಾಯಕ ತೊರವಿಯವರು ಜನಿಸಿದ್ದು 1948ರ ಸೆಪ್ಟಂಬರ್ 4ರಂದು ರಾಣಿಬೆನ್ನೂರಿನಲ್ಲಿ. ಆ ದಿನ ವಿನಾಯಕ ಚತುರ್ಥಿಯಾಗಿತ್ತು. ಅವರ ತಂದೆ ಕೀರ್ತನಕಾರರಾದ ಮಲ್ಹಾರರಾವ್ ತೊರವಿ, ತಾಯಿ ಅನುಸೂಯಾ ಬಾಯಿ. ತಂದೆಯಿಂದಾಗಿ ಸಹಜವಾಗಿ ವಿನಾಯಕನಿಗೆ ಬಾಲ್ಯದಲ್ಲಿಯೇ ಸಂಗೀತದಲ್ಲಿ ಆಸಕ್ತಿ. ತಮ್ಮಣ್ಣ ಗುರುವ ಅವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು, ನಾರಾಯಣ ಮಜುಂದಾರ್ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆದರು. ಗುರುರಾವ್ ದೇಶಪಾಂಡೆ ಅವರೇ ಬಯಸಿ ‘ಈ ಬಾಲಕನನ್ನು ಕಳಿಸಿಕೊಡಿ, ಸಂಗೀತ ಕಲಿಸುವೆ’ ಎಂದು ಶಿಷ್ಯನನ್ನಾಗಿ ಸ್ವೀಕರಿಸಿದ್ದರು ಎನ್ನುವುದು ವಿಶೇಷ. ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆದರು. ಗುರುರಾವ್ ದೇಶಪಾಂಡೆ ವಿಧಿವಶರಾದಾಗ ಅಕ್ಷರಶಃ ಅನಾಥ ಪ್ರಜ್ಞೆ ತೊರವಿ ಅವರನ್ನು ಕಾಡಿತ್ತಂತೆ. ಆಗ ಪಂಡಿತ್ ಭೀಮಸೇನ ಜೋಶಿ ಅವರ ಬಳಿ ತೆರಳಿ ಅವರ ಕಾಲು ಹಿಡಿದು ಗಳಗಳ ಅತ್ತುಬಿಟ್ಟಿದ್ದರಂತೆ. ಆಗ ಜೋಶಿ ಅವರು, ‘ತೊರವಿ, ನೀನು ಪುಣೆಗೆ ಬಾ, ನಾನು ನಿನಗೆ ಸಂಗೀತ ಹೇಳಿಕೊಡುವೆ’ ಎಂದರಂತೆ. ತೊರವಿ ಅಲ್ಲಿಗೂ ಹೋದರು. ಜೋಶಿಯವರೂ ಪ್ರೀತಿಯಿಂದ ಕಲಿಸಿದರು.
ವಿನಾಯಕ ತೊರವಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ಪ್ರತಿಭಾವಂತ. ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದ. ದಸರಾ ಮಹೋತ್ಸವದ ದರ್ಬಾರ್ ಹಾಲ್, ಪುಣೆಯ ಸವಾಯಿ ಗಂಧರ್ವ ಸಂಗೀತ ಮಹೋತ್ಸವ, ಕೋಲ್ಕತ್ತಾದ ಸಂಗೀತ ಸಂಶೋಧನ ಅಕಾಡೆಮಿ, ದೆಹಲಿಯ ಭಾವೈಕ್ಯ ಸಂಗೀತ ಸಮಾವೇಶ, ಚನ್ನೈನ ಸಂಗೀತ ಮಹೋತ್ಸವ, ಸಾರ್ಕ್ ದೇಶಗಳ ಅಂತಾರಾಷ್ಟ್ರೀಯ ಸಮಾವೇಶ, ಹೈದರಾಬಾದಿನ ರಾಷ್ಟ್ರೀಯ ಭಾವೈಕ್ಯ ಸಂಗೀತೋತ್ಸವ, ಗ್ವಾಲಿಯರ್​ನ ತಾನ್​ಸೇನ 500ನೇ ಜಯಂತಿ ಉತ್ಸವ… ಹೀಗೆ ದೇಶ ವಿದೇಶದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಅವರು ಸಂಗೀತ ಸುಧೆ ಹರಿಸಿದ್ದಾರೆ. ವಿಶ್ವದಾದ್ಯಂತ ಅವರ ಸಂಗೀತ ವ್ಯಾಪಿಸಿದೆ. ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜ್ಯ ಸಂಗೀತ ನಾಟಕ ಅಕಾಡಮಿಯ ಕಲಾತಿಲಕ, ಭಾರತ ಸರ್ಕಾರದ ಫೆಲೋಶಿಪ್, ಮುಂಬಯಿಯ ಸುರ್​ವುಣಿ ಸುರಸಿಂಗಾರ್ ಪ್ರಶಸ್ತಿ, ಟಿ.ಚೌಡಯ್ಯ ಸ್ಮಾರಕ ಸಂಗೀತರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮುಂಬಯಿಯ ಸ್ವರಸಾಧನಾ ಪ್ರಶಸ್ತಿ, ಮುಂಬೈ ಮ್ಯೂಸಿಕ್ ಫೋರಂ ನೀಡುವ ಕಿರಾಣಾ ಘರಾನಾ ಪ್ರಶಸ್ತಿ ಸೇರಿ ಅನೇಕ ಗೌರವಗಳು ತೊರವಿ ಅವರನ್ನು ಅರಸಿ ಬಂದಿವೆ. ಅವರಿಗೀಗ 75 ವರ್ಷ. ಅವರ ಕಂಠಸಿರಿಗೆ ಇನ್ನೂ ನಲವತ್ತರ ಪ್ರಾಯ. ಹೀಗಾಗಿ ಅವರ ಸಂಗೀತ ಇನ್ನಷ್ಟು ವರ್ಷಗಳ ಕಾಲ ಪ್ರವಹಿಸುತ್ತಲೇ ಇರಲಿ.
ಹಿಂದೂಸ್ತಾನಿ ಸಂಗೀತದ ಅಮೃತವನ್ನು ಜಗತ್ತಿಗೆ ಹಂಚಿದ ಪಂ. ವಿನಾಯಕ ತೊರವಿ ಅವರ ಬದುಕಿನ ಅಮೃತ ಮಹೋತ್ಸವ ಸಂಭ್ರಮ ನಿಮಿತ್ತ ಬೆಂಗಳೂರಿನ ಮಲ್ಲೇಶ್ವರ ಸೇವಾಸದನದಲ್ಲಿ ಇಂದು(ಶನಿವಾರ) ಗುರು ಸನ್ಮಾನ ಏರ್ಪಡಿಸಲಾಗಿದೆ. ತೊರವಿ ಅವರ ಬಳಿ 30 ವರ್ಷಗಳಿಂದ ಸಂಗೀತಾಭ್ಯಾಸ ನಡೆಸುತ್ತಿರುವ ಸುರಮಣಿ ದತ್ತಾತ್ರೇಯ ವೇಲಣಕರ್ ನೇತೃತ್ವದ ಷಡ್ಜ ಕಲಾಕೇಂದ್ರದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಂಡಿತ್​ಜಿ ಅವರಿಗೆ 75ನೇ ವರ್ಷದ ವಿಶೇಷ ಸನ್ಮಾನ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಅವರು ಸಾನ್ನಿಧ್ಯ ವಹಿಸಲಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 16 =
Remember me
