ಬೆಂಗಳೂರು:ನಿಗಮ-ಮಂಡಳಿಗಳಿಗೆ ನೇಮಕ ವಿಳಂಬ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟುಹಾಕಿದ್ದು, ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮಬೀರಲಿದೆ ಎಂಬ ಆತಂಕ ಮುಖಂಡರನ್ನು ಕಾಡುತ್ತಿದೆ.
ಸರ್ಕಾರಕ್ಕೆ ಒಂದು ವರ್ಷ ತುಂಬಿದ ದಿನವೇ 20 ಶಾಸಕರನ್ನು ವಿವಿಧ ನಿಗಮ, ಮಂಡಳಿಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನೇಮಿಸಿದ್ದರು. ಇದಾದ ಬಳಿಕ ತಮ್ಮ ಸರದಿ ಶುರುವಾಗಲಿದೆ ಎಂದು ಕಾರ್ಯಕರ್ತರು ಸಂಭ್ರಮಿಸಿದ್ದರು. ಆದರೆ ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಸದ್ದಿಲ್ಲ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ, ಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜತೆಗೆ ಮಾತುಕತೆ ನಡೆಸಿದಾಗ ಕಾರ್ಯಕರ್ತರ ನಿರೀಕ್ಷೆ ಗರಿಗೆದರಿತ್ತು. ಸಂತೋಷ್ 3 ದಿನಗಳ ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ನಂತರವೂ ಯಾವ ಸುಳಿವಿಲ್ಲ. ಇನ್ನೇನು ಅವಕಾಶ ಸಿಕ್ಕಿತು ಎನ್ನುವಷ್ಟರಲ್ಲಿ ಮುಂದಕ್ಕೆ ಹೋಗುತ್ತಿರುವುದು ಕಾರ್ಯಕರ್ತರನ್ನು ನಿರಾಸೆಯ ಮಡುವಿಗೆ ತಳ್ಳಿದೆ. ಪಕ್ಷದ ಶಿಸ್ತು, ನಿಷ್ಠೆಗೆ ಭಂಗ ಉಂಟಾದೀತು ಎಂಬ ಕಾರಣಕ್ಕೆ ಅತೃಪ್ತಿ ಹೊರಗೂ ಹಾಕಲಾಗದೆ, ನುಂಗಲಾಗದೆ ಬೇಗುದಿಯಲ್ಲಿ ಬೇಯುತ್ತಿದ್ದಾರೆ.
ಸಿಎಂಗೆ ಆಸಕ್ತಿ:ಸದ್ಯಕ್ಕೆ 20 ಶಾಸಕರನ್ನು ನಿಗಮ, ಮಂಡಳಿಗಳಿಗೆ ನೇಮಿಸಲಾಗಿದ್ದು, ಬಾಕಿಯಿರುವ 40 ನಿಗಮ- ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಿಸಲು ಬಿಎಸ್​ವೈಗೆ ಆಸಕ್ತಿಯಿದೆ. ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಜತೆಗೂ ವಿಚಾರ ವಿನಿಮಯ ನಡೆಸಿ, ಪಟ್ಟಿ ಅಂತಿಮಗೊಳಿಸಿದ್ದಾರೆ. ಬಿ.ಎಲ್.ಸಂತೋಷ್ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಪಟ್ಟಿ ಒಪ್ಪಿಸಿದ್ದಾರೆ. ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಿದ್ದು ನಂತರ ಏನಾಯಿತೆಂದು ತಿಳಿಯದಾಗಿದೆ ಎನ್ನುವುದು ಹೆಸರು ಹೇಳಲಿಚ್ಚಿಸದ ಕಾರ್ಯಕರ್ತರ ಅಳಲು.
ಪಾಲನೆಯಾಗದ ಸೂತ್ರ:ಪಕ್ಷದ ಸಂಘಟನೆ ಗಟ್ಟಿಗೊಳಿಸುವ ಕಾರ್ಯತಂತ್ರದ ಭಾಗವಾಗಿ ನಿಗಮ-ಮಂಡಳಿಗಳ ಪೈಕಿ ಕಾರ್ಯಕರ್ತರು ಮತ್ತು ಶಾಸಕರಿಗೆ 75:25 ಹಂಚಿಕೆ ಸೂತ್ರವನ್ನು ವರಿಷ್ಠರು ರೂಪಿಸಿದ್ದು, ಅದರಂತೆಯೇ ಶಾಸಕರ ಕೋಟಾವನ್ನು ಸಿಎಂ ಭರ್ತಿ ಮಾಡಿದ್ದಾರೆ. ಅಧಿಕಾರ ಹಂಚಿಕೆ ವಿಷಯದಲ್ಲಿ ಎಲ್ಲ ಹಂತದ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಟ್ಟಿಗೆ ಕೊಂಡೊಯ್ಯುವುದು, ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಬಲವರ್ಧನೆ ಚಟುವಟಿಕೆಗಳಲ್ಲಿ ತೊಡಗಿಸುವುದು ಪಕ್ಷದ ಸ್ಪಷ್ಟ ನಿಲುವಾಗಿದೆ. ಇದೇ ನೆಲೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಹಾಗೂ ಮೇಲ್ಮನೆಗೆ 5 ಸದಸ್ಯರ ನೇಮಕ ವೇಳೆ ಹಿರಿಯ ಕಾರ್ಯಕರ್ತರಿಗೆ ಮಣೆ ಹಾಕಲಾಯಿತು. ಪಕ್ಷದ ಈ ನಡೆ ಕಾರ್ಯಕರ್ತರಲ್ಲಿ ತುಂಬಿದ ಹುಮ್ಮಸ್ಸನ್ನು ‘ನಿಗಮ-ಮಂಡಳಿ’ ಕಸಿದುಕೊಂಡಿದೆ.
ಸೇವಾ ಹಿರಿತನ, ಪಕ್ಷದ ನಿಷ್ಠೆ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಇತ್ಯಾದಿ ಮಾನದಂಡದ ಆಧಾರದಲ್ಲಿ ಆಯಾ ಕ್ಷೇತ್ರದ ಶಾಸಕರು, ಹಿರಿಯರು ಆಯಾ ನಿಗಮ, ಮಂಡಳಿಗೆ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ. ಹಾಗೆಯೇ ಸಂಘ, ಪರಿವಾರದ ಅಭಿಪ್ರಾಯ ಪಡೆಯಲಾಗಿದೆ. ಸರ್ಕಾರ ಬಂದು ವರ್ಷ ಕಳೆದರೂ ಹಂಚಿಕೆ ಸೂತ್ರ ಪಾಲನೆಯಾಗಿಲ್ಲ. ಸಾಲುಗಟ್ಟಿ ಬರಲಿರುವ ಪರಿಷತ್, ಪಂಚಾಯಿತಿ ಹಾಗೂ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಿಗೆ ಸಂಘಟನೆ ಸಜ್ಜುಗೊಳಿಸುವುದು ಸವಾಲಾಗಲಿದೆ ಎಂದು ಪಕ್ಷದ ಮೂಲಗಳು ಆತಂಕ ವ್ಯಕ್ತಪಡಿಸಿವೆ.
ಇನ್ನಷ್ಟು ಪದಾಧಿಕಾರಿಗಳ ನೇಮಕ
ಬೆಂಗಳೂರು: ರಾಜ್ಯದ 8 ವಿಭಾಗಗಳಿಗೆ ಸಂಘಟನಾ ಪ್ರಧಾನ ಕಾರ್ಯದರ್ಶಿ, ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ. ಮೈಸೂರು-ಕೆ.ಟಿ. ಕುಮಾರಸ್ವಾಮಿ, ಸಬ್ಬನಹಳ್ಳಿ ಕೃಷ್ಣ, ಮಂಗಳೂರು- ಪ್ರಸಾದ್​ಕುಮಾರ್, ಶಿವಮೊಗ್ಗ- ಗಣೇಶ ರಾವ್, ನಟರಾಜ್, ಧಾರವಾಡ-ಜಯತೀರ್ಥ ಕಟ್ಟಿ, ರಾಜ ಕುಮಾರ್ ಬಸವಾ, ಬೆಳಗಾವಿ- ವಿಜಯ ಪುರದ ರವಿ ಅಕ್ಕಲಕೋಟೆ, ಚಿಕ್ಕೋಡಿಯ ರವಿ ಹಿರೇಮಠ, ಕಲಬುರಗಿ- ದತ್ತಾತ್ರಯ ತುಗಾಂವ್ಕರ್, ಸೂರ್ಯಕಾಂತ ದೋನಿ, ಬಳ್ಳಾರಿ- ಎನ್.ಪ್ರಮೋದ ಗೌಡ, ದಾವಣಗೆರೆ- ಜೇಷ್ಠ ಹಡಿವಾಳ, ಎಂ.ಸಿ.ಜಯಪ್ರಕಾಶ, ಗಿರೀಶ್(ದಾವಣಗೆರೆ ಜಿಲ್ಲಾ ಪೂರ್ಣಾವಧಿ), ಬೆಂ. ಗ್ರಾಮಾಂತರ- ಕಾಂತರಾಜು, ಬೆಂ. ನಗರ-ದಶರಥ ವೈಲಾಯ ನೇಮಕವಾದವರು.
ಶಂಕರಗೌಡ ಅಧಿಕಾರ ಸ್ವೀಕಾರ
ನವದೆಹಲಿ: ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಶಂಕರಗೌಡ ಈ. ಪಾಟೀಲ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ನಂತರ ದೆಹಲಿ ಕರ್ನಾಟಕ ಭವನದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೇಂದ್ರ ಸರ್ಕಾರದ ಹಂತದಲ್ಲಿ ಬಾಕಿ ಇರುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಉತ್ತಮ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲು ಸಹಕಾರ ಇರಲಿದೆ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 1 =
Remember me
