|ಅವಿನಾಶ ಮೂಡಂಬಿಕಾನಬೆಂಗಳೂರು
ನವಜಾತ ಶಿಶುಗಳನ್ನು ಕದ್ದು ದುಡ್ಡಿಗಾಗಿ ಮಾರಾಟ ಮಾಡುವ ಜಾಲ ರಾಜ್ಯಾದ್ಯಂತ ವಿಸ್ತರಿಸಿರುವುದು ಪೊಲೀಸರಿಗೆ ತಲೆನೋವು ತರಿಸಿದೆ. ಮಕ್ಕಳಿಲ್ಲದ ದಂಪತಿಯನ್ನೇ ಟಾರ್ಗೆಟ್ ಮಾಡುವ ದಂಧೆಕೋರರು ಸದ್ದಿಲ್ಲದೆ ಡೀಲ್ ಕುದುರಿಸಿ ಪ್ರತಿ ಮಗುವಿಗೆ 2 ರಿಂದ 15 ಲಕ್ಷ ರೂ.ವರೆಗೆ ದರ ನಿಗದಿಪಡಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಶಿಶು ಕಳ್ಳಸಾಗಣೆ ಹಾಗೂ ಮಾರಾಟ ಜಾಲ ಸಕ್ರಿಯವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದರೂ ಠಾಣೆ ಮೆಟ್ಟಿಲೇರಿದ ಪ್ರಕರಣಗಳ ಪ್ರಮಾಣ ಬಹಳ ಕಡಿಮೆ. ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ 767 ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿದ್ದು, ಇಷ್ಟಾದರೂ ಜಾಲಕ್ಕೆ ಕಡಿವಾಣ ಹಾಕಲು ಹೊಸ ಕ್ರಮ ಕೈಗೊಂಡಿಲ್ಲ. ಬಡ ಪಾಲಕರು ಏಜೆಂಟ್​ಗಳ ಹಣದ ಆಮಿಷಕ್ಕೊಳಗಾಗಿ ಕರುಳಕುಡಿಯನ್ನೇ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಶಿಶು ಮಾರಾಟ ದಂಧೆಯಲ್ಲಿ ಮಹಾರಾಷ್ಟ್ರ, ಅಸ್ಸಾಂ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ ಮುಂಚೂಣಿ ಸ್ಥಾನದಲ್ಲಿದ್ದರೆ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು ನಂತರದ ಸ್ಥಾನದಲ್ಲಿವೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.
2-15 ಲಕ್ಷ ರೂ.ಗೆ ಡೀಲ್:ಮಕ್ಕಳ ಮಾರಾಟ ಜಾಲ ನಡೆಸುವ ಕಿಂಗ್​ಪಿನ್​ಗಳು ಪ್ರಾರಂಭದಲ್ಲಿ, ಮಕ್ಕಳಿಲ್ಲದೆ ಚಿಕಿತ್ಸೆಗಾಗಿ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಬರುವ ಶ್ರೀಮಂತ ದಂಪತಿಯನ್ನು ಪರಿಚಯಿಸಿಕೊಳ್ಳುತ್ತಾರೆ. ಕ್ರಮೇಣ ಅವರ ನಡೆ ಗಮನಿಸಿ ಕಡಿಮೆ ಬೆಲೆಗೆ ಮಗುವನ್ನು ಕೊಡುವುದಾಗಿ 2 ರಿಂದ 15 ಲಕ್ಷ ರೂ.ಗೆ ಡೀಲ್ ಕುದುರಿಸುತ್ತಾರೆ. ಇಂಥ ದಂಪತಿ ಮಗುವಿನ ಅಭಿಲಾಷೆಯಿಂದ ಏಜೆಂಟರು ಕೇಳಿದಷ್ಟು ಹಣ ಚೆಲ್ಲಲು ತಯಾರಾಗುತ್ತಾರೆ. ಇವರ ಬಯಕೆಯನ್ನೇ ಬಂಡವಾಳ ಮಾಡಿಕೊಳ್ಳುವ ಏಜೆಂಟ್​ಗಳು ಮುಂಗಡವಾಗಿ ಲಕ್ಷ-ಲಕ್ಷ ಹಣ ಪಡೆಯುತ್ತಾರೆ. ನಂತರ ರಾಜ್ಯದ ಕೊಳೆಗೇರಿ, ಸರ್ಕಾರಿ ಹೆರಿಗೆ ಆಸ್ಪತ್ರೆ, ಬಡವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ನವಜಾತ ಮಗುವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಮಗುವಿನ ಪಾಲಕರನ್ನು ಸಂರ್ಪಸಿ ಸ್ಥಳದಲ್ಲೇ ಲಕ್ಷಾಂತರ ರೂ. ಕೊಟ್ಟು ಅವರ ಮನವೊಲಿಸಿ ಮಗು ಖರೀದಿಸಿ ಮಾರಾಟ ಮಾಡುತ್ತಾರೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಶಿಕ್ಷೆ ಏನು?:ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿ ಪೊಲೀಸರಿಗೆ ಸಿಕ್ಕಿಬಿದ್ದು ಅಪರಾಧ ಸಾಬೀತಾದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ ) ಕಾಯ್ದೆ -2015ರ ಸೆಕ್ಷನ್ 81 ಪ್ರಕಾರ ಕನಿಷ್ಠ 3 ವರ್ಷಕ್ಕಿಂತ ಕಡಿಮೆ ಇಲ್ಲದಂತೆ 7 ವರ್ಷದ ವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಮಕ್ಕಳ ಮಾರಾಟ ದಂಧೆಯೂ ಮಾನವ ಕಳ್ಳಸಾಗಾಣಿಕೆಯಡಿ ಬರುತ್ತದೆ. ಆದರೆ ಇಂತಹ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತದೆ.
ಮಹಿಳೆಯರಿಗೆ ಕಮಿಷನ್:ಮಹಿಳೆಯರನ್ನೇ ಮುಂದಿಟ್ಟುಕೊಂಡು ಮಗು ಮಾರಾಟ ದಂಧೆ ನಡೆಸುವ ಕಿಂಗ್​ಪಿನ್​ಗಳು ತಮ್ಮ ಬಗ್ಗೆ ಸಣ್ಣ ಸುಳಿವೂ ಸಿಗದಂತೆ ಮುಂಜಾಗ್ರತೆ ವಹಿಸುತ್ತಾರೆ. ಮಹಿಳೆಯರು ಒಂದು ಮಗು ಮಾರಾಟ ಮಾಡಿಸಿದರೆ ಕಮಿಷನ್ ಲೆಕ್ಕದಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಇದರ ಜಾಲ ಕರ್ನಾಟಕದಿಂದ ಮುಂಬೈ, ಕೋಲ್ಕತ, ರಾಜಸ್ಥಾನ, ಗುಜರಾತ್​ಗೂ ಹರಡಿರುವುದು ಗೊತ್ತಾಗಿದೆ. ಒಂದು ರಾಜ್ಯದಲ್ಲಿ ಖರೀದಿಸಿದ ಮಗುವನ್ನು ಹೆಚ್ಚಾಗಿ ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ಅಷ್ಟು ಸುಲಭವಾಗಿ ಮಗುವಿನ ಪಾಲಕರನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ ಎಂಬುದು ಇದುವರೆಗೆ ಬಂಧನಕ್ಕೊಳಗಾದ ಆರೋಪಿಗಳ ವಾದ. ಮಗು ಮಾರಾಟ ದಂಧೆ ಬಗ್ಗೆ ಸಾರ್ವಜನಿಕರೂ ಜಾಗೃತವಾಗಿರಬೇಕಾಗಿದೆ.
ಕೇಸ್ ನಂ.1:ವಿಲ್ಸನ್​ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕೆಲಸದಾಕೆಗೆ ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವನ್ನು (38 ದಿನದ) ಸಾಮಾಜಿಕ ಕಾರ್ಯಕರ್ತೆ ತರುಣಮ್ ಬಾನು ಎಂಬಾಕೆ ತನ್ನ ಸಂಬಂಧಿಕರಿಗೆ ಆ.11ರಂದು 1.30 ಲಕ್ಷ ರೂ.ಗೆ ಮಾರಾಟ ಮಾಡಿದ್ದಳು. ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಮನೆ ಕೆಲಸದಾಕೆ ಶಿರೀನ್​ಗೆ ತಿಳಿಯದಂತೆ ಆಕೆಯ ಪ್ರಿಯಕರನ ಜತೆ ಸೇರಿ ತರುಣಮ್ ಮಗುವನ್ನು ಅಪಹರಿಸಿ ಮಾರಾಟ ಮಾಡಿದ್ದಳು.
ಕೇಸ್ ನಂ.2:ಸರ್ಕಾರಿ ಆಸ್ಪತ್ರೆಗಳು ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಪಾಲಕರ ಕಣ್ಣು ತಪ್ಪಿಸಿ ಮಗು ಕದ್ದು ಶ್ರೀಮಂತ ವ್ಯಕ್ತಿಗಳಿಗೆ ಮಾರಾಟ ಮಾಡá-ತ್ತಿದ್ದ ಶಿವಾಜಿನಗರದ ದೇವಿ, ಮುಂಬೈನ ರಂಜಿತಾ, ಶಂಕರ್ ನಾಯರ್ ಮತ್ತು ಆತನ ಪತ್ನಿ ಸುನೀತಾ ನಾಯರ್ ಗ್ಯಾಂಗ್ ಏ.11ರಂದು ದಕ್ಷಿಣ ವಿಭಾಗದ ಮಾನವ ಕಳ್ಳಸಾಗಣೆ ನಿಯಂತ್ರಣ ವಿಶೇಷ ತಂಡದ ಕೈಗೆ ಸಿಕ್ಕಿಬಿದ್ದಿತ್ತು. ಒಂದೂವರೆ ವರ್ಷಗಳಿಂದ ಈ ಗ್ಯಾಂಗ್ ಇದೇ ದಂಧೆಯಲ್ಲಿ ಸಕ್ರಿಯವಾಗಿರುವುದು ಸದ್ಯದ ವಿಚಾರಣೆಯಲ್ಲಿ ತಿಳಿದು ಬಂದಿದೆ. ಪಾಲಕರಿಗೆ 1.50 ರಿಂದ 2 ಲಕ್ಷ ರೂ.ವರೆಗೆ ಕೊಟ್ಟು, ಮಕ್ಕಳಿಲ್ಲದ ಶ್ರೀಮಂತರಿಗೆ 8-10 ಲಕ್ಷ ರೂ.ವರೆಗೆ ಮಗುವನ್ನು ಮಾರಾಟ ಮಾಡá-ತ್ತಿತ್ತು.
ಕೇಸ್ ನಂ.3:ಆ.4ರಂದು ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ್ದ ಮೈಸೂರು ಜಿಲ್ಲಾ ಪೊಲೀಸರು ನಂಜನಗೂಡಿನ ನಿವಾಸಿ ಶ್ರೀಮತಿ (60) ಮತ್ತು ಅವರ ಪುತ್ರಿ ಶ್ರೀಲಕ್ಷ್ಮಿ (31)ಯನ್ನು ಬಂಧಿಸಿದ್ದರು. ಆರೋಪಿಗಳು ಪ್ರತ್ಯೇಕ 2 ಪ್ರಕರಣದಲ್ಲಿ ಪಾಲಕರಿಗೆ 4 ಲಕ್ಷ ರೂ. ಆಮಿಷವೊಡ್ಡಿ 3 ಮತ್ತು 8 ತಿಂಗಳ ಎರಡು ಮಕ್ಕಳನ್ನು ಇಬ್ಬರು ಶ್ರೀಮಂತ ದಂಪತಿಗೆ ಮಾರಾಟ ಮಾಡಿ ಡೀಲ್ ಕುದುರಿಸಿದ್ದರು.
ಕೇಸ್ ನಂ.4:ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕದ್ದಿದ್ದ ಕೆಂಗೇರಿ ನಿವಾಸಿ ಮನೋವೈದ್ಯೆ ಡಾ.ರಶ್ಮಿ (34) ವರ್ಷದ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಈಕೆ 2020 ಮೇ.29ರಂದು ಚಾಮರಾಜಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹುಸ್ನಾಬಾನು ಎಂಬá-ವರ ಗಂಡು ಮಗá-ವನ್ನು ಕದ್ದು, ಮಕ್ಕಳಿಲ್ಲದ ದಂಪತಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದಳು.
ಕೇಸ್ ನಂ.5:ಮಂಗಳೂರಿನಲ್ಲಿ ಮಕ್ಕಳಿಲ್ಲದವರಿಗೆ ಮಗುವನ್ನು ಮಾರಾಟ ಮಾಡುವ ಹೈಟೆಕ್ ದಂಧೆಯನ್ನು ಮಾ.5ರಂದು ಪೊಲೀಸರು ಬಯಲಿಗೆಳೆದಿದ್ದರು. ಈ ಗ್ಯಾಂಗ್ ಹೆಣ್ಣು ಮಗುವಿಗೆ 4 ಲಕ್ಷ, ಗಂಡು ಮಗುವಿಗೆ 6 ಲಕ್ಷ ರೂ. ದರ ನಿಗದಿ ಮಾಡಿ ಹಲವು ಮಕ್ಕಳನ್ನು ಮಾರಾಟ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eleven =
Remember me
