|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7 ನೇ ವೇತನ ಆಯೋಗ ರಚನೆಯನ್ನು ಬಜೆಟ್​ನಲ್ಲಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸಿರುವಂತೆಯೇ, ನೌಕರರು ಕೇಂದ್ರ ಮಾದರಿ ವೇತನ ಸಿಗುವುದೇ? ಇಲ್ಲವೇ ಎಂಬ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ 7 ನೇ ವೇತನ ಆಯೋಗ 2022ರ ಜುಲೈನಿಂದ ಜಾರಿಗೆ ಬರಬೇಕಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆಯಾದ ಕೇಂದ್ರದ ಮಾದರಿ ವೇತನ ಕ್ಕಾಗಿ ನೌಕರರು ಒತ್ತಡ ತರುತ್ತಿದ್ದಾರೆ. ಆದರೆ ಆ ವೇತನ ಸಿಕ್ಕುವುದೇ ಅಥವಾ ಸರ್ಕಾರ ಆಯೋಗದ ಮೂಲಕ ಮೂಗಿಗೆ ತುಪ್ಪ ಸವರುವುದೇ ಎಂಬುದು ನೌಕರರ ಪ್ರಶ್ನೆ.
ಯಾವ ಸಮಿತಿ?:ನೌಕರರ ವೇತನ ಪರಿಷ್ಕರಣೆಗೆ ಹೆಚ್ಚಿನ ಸಮಸ್ಯೆ ಇಲ್ಲ. ಆದ್ದರಿಂದ ಅಧಿಕಾರಿಗಳ ಸಮಿತಿ ರಚನೆಯಾಗಲಿ ಎಂಬುದು ರಾಜ್ಯ ಸರ್ಕಾರಿ ನೌಕರರ ಸಂಘದ ಒತ್ತಡವಾಗಿದೆ. ಆದರೆ ಸಚಿವಾಲಯ ನೌಕರರು ಹಾಗೂ ಇತರ ನೌಕರರ ಸಂಘಟನೆಗಳು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯೇ ಆಗಬೇಕು, ಇಲ್ಲದಿದ್ದರೆ ತಿಪ್ಪೆ ಸಾರಿಸುವ ಕೆಲಸವಾಗುತ್ತದೆಯೇ ಹೊರತು ನ್ಯಾಯ ಸಿಗುವುದಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.
5 ಆಯೋಗ ರಚನೆಯಾಗಿಲ್ಲ:ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 1966 ರಿಂದ 2017ರ ಅವಧಿ ಯಲ್ಲಿ 11 ವೇತನ ಆಯೋಗ ರಚನೆಯಾಗಬೇಕಾಗಿತ್ತು. ಆದರೆ ರಚನೆಯಾಗಿರುವುದು 6 ಮಾತ್ರ. 3 ಅಧಿಕಾರಿ ಸಮಿತಿ ಹಾಗೂ ಒಂದು ಸಂಪುಟ ಉಪ ಸಮಿತಿ ರಚನೆಯಾಗಿದೆ. ಇದರಿಂದಾಗಿಯೇ ಅನ್ಯಾಯವಾಗಿದೆ. ವೇತನ ಪರಿಷ್ಕರಣೆ ವೈಜ್ಞಾನಿಕವಾಗಿ ಆಗದೆ ಅವೈಜ್ಞಾನಿಕವಾಗಿದೆ ಎಂದು ನೌಕರರು ಹೇಳುತ್ತಾರೆ.
ಗ್ರೇಡ್ ಪೇ ಸಮಸ್ಯೆ:ಕೇಂದ್ರ ಸರ್ಕಾರ ತನ್ನ ನೌಕರರಿಗೆ ನೀಡುವ ಗ್ರೇಡ್ ಪೇಯನ್ನು ರಾಜ್ಯದಲ್ಲಿಯೂ ನೀಡಿದರಷ್ಟೇ ವ್ಯತ್ಯಾಸ ಇರುವುದಿಲ್ಲ. ಗ್ರೇಡ್ ಪೇ ರಾಜ್ಯ ಹಾಗೂ ಕೇಂದ್ರ ನೌಕರರ ನಡುವೆ ಅಂತರಕ್ಕೆ ಕಾರಣವಾಗುತ್ತದೆ. ಕನಿಷ್ಠ 5400 ರೂ.ಗಳಿಂದ ಗರಿಷ್ಠ 14 ಸಾವಿರ ರೂ. ತನಕ ಗ್ರೇಡ್ ಪೇ ವ್ಯತ್ಯಾಸ ಇದೆ ಎನ್ನುವ ನೌಕರರು, ಗ್ರೇಡ್ ಪೇ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ.
ಉಳಿತಾಯ:ರಾಜ್ಯದಲ್ಲಿ ಸರ್ಕಾರಿ ನೌಕರರ ಹುದ್ದೆ ಖಾಲಿಯಾದಂತೆ ಬೊಕ್ಕಸಕ್ಕೆ ಉಳಿತಾಯ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 7,79,439 ಮಂಜೂರಾದ ಹುದ್ದೆಗಳಿವೆ. ಅದರಲ್ಲಿ 2,69,572 ಹುದ್ದೆ ಖಾಲಿ ಇವೆ. ಇದರಿಂದಾಗಿ ವರ್ಷಕ್ಕೆ 8257 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತ ಬದ್ಧವೆಚ್ಚಗಳಲ್ಲಿ ಉಳಿತಾಯವಾಗುತ್ತಿದೆ. ಆ ಹಣವನ್ನು ಕೇಂದ್ರ ಮಾದರಿ ವೇತನಕ್ಕೆ ನೀಡಿ ಎಂಬ ಒತ್ತಾಯ ಕೇಳಿಬರುತ್ತಿದೆ.
ವೇತನ ಪರಿಷ್ಕರಣೆ ಸಂಬಂಧ ಶೇ.90 ಕಾರ್ಯ ಮುಕ್ತಾಯವಾಗಿದೆ. ಉಳಿದ ಕೆಲಸ ಮುಗಿಸಲು ಅಧಿಕಾರಿಗಳ ಸಮಿತಿಯಾದರೆ ಸಾಕು. ಬಜೆಟ್​ಗೆ ಮುನ್ನ ಸಿಎಂ ಕರೆದಾಗ ಮನವಿ ನೀಡುತ್ತೇವೆ. ಖಾಲಿ ಹುದ್ದೆ ಇರುವುದರಿಂದ ಒತ್ತಡದಲ್ಲಿ ನೌಕರರು ಕೆಲಸ ಮಾಡುತ್ತ ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಿದ್ದೇವೆ.
|ಸಿ.ಎಸ್. ಷಡಾಕ್ಷರಿಅಧ್ಯಕ್ಷ, ಸರ್ಕಾರಿ ನೌಕರರ ಸಂಘ
ಅಧಿಕಾರಿಗಳ ಸಮಿತಿ ರಚಿಸಿದರೆ ಉಪಯೋಗವಿಲ್ಲ. ಆದ್ದರಿಂದ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲೇ ಆಯೋಗ ರಚನೆ ಮಾಡಬೇಕು. ಅನ್ಯಾಯ ಸರಿಯಾಗದಿದ್ದರೆ ಹೋರಾಟದ ಹಾದಿ ಇದ್ದೇ ಇದೆ.
|ಪಿ. ಗುರುಸ್ವಾಮಿಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಎಷ್ಟು ಹೊರೆ?:ಕೇಂದ್ರ ಮಾದರಿ ವೇತನ ಜಾರಿ ಮಾಡಿದರೆ ವಾರ್ಷಿಕ ಸುಮಾರು 7,500 ಕೋಟಿ ರೂ. ಹೆಚ್ಚಿನ ಮೊತ್ತದ ಅಗತ್ಯವಿದೆ. ಗ್ರೇಡ್ ಪೇ ಹಾಗೂ ಇತರ ಭತ್ಯೆ ನೀಡಿದರೆ ಆ ಮೊತ್ತ 15 ಸಾವಿರ ಕೋಟಿ ರೂ. ಮೀರಲಿದೆ ಎಂಬುದು ಹಣಕಾಸು ಇಲಾಖೆ ಮೂಲಗಳ ಮಾಹಿತಿಯಾಗಿದೆ.

ಆಯೋಗ ಘೋಷಣೆ?:ಲಭ್ಯ ಮಾಹಿತಿ ಪ್ರಕಾರ ಸರ್ಕಾರ 7 ನೇ ವೇತನ ಆಯೋಗವನ್ನು ರಚನೆ ಮಾಡುತ್ತಿದೆ. ಆದರೆ ಆಯೋಗಕ್ಕೆ ನ್ಯಾಯಾಧೀಶರ ನೇಮಕವಾಗುವುದೋ ಅಥವಾ ನಿವೃತ್ತ ಅಧಿಕಾರಿ ಇರುವರೋ ಎಂಬ ಪ್ರಶ್ನೆಗೆ ಬಜೆಟ್​ನಲ್ಲಿಯೇ ಉತ್ತರ ಸಿಗಲಿದೆ. ಮೂಲಗಳ ಪ್ರಕಾರ ನಿವೃತ್ತ ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆ ನಿಚ್ಚಳವಾಗಿವೆ. ಕೇಂದ್ರ ಮತ್ತು ರಾಜ್ಯದ ನೌಕರರ ನಡುವೆ ವೇತನದಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ, ಸಣ್ಣಪುಟ್ಟ ವ್ಯತ್ಯಾಸವನ್ನು ಸಮಿತಿಯಿಂದಲೇ ಬಗೆಹರಿಸಬಹುದು ಎಂಬ ವಾದ ಇದ್ದರೆ, ಅಧಿಕಾರಿಗಳ ಸಮಿತಿಗೆ ನಿವೃತ್ತ ಐಎಎಸ್ ನೇಮಕವಾಗುತ್ತಾರೆ. ಅವರು ಯಾವತ್ತೂ ನೌಕರ-ವಿರೋಧಿ ಮನಸ್ಥಿತಿ ಹೊಂದಿರುತ್ತಾರೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ.
ಮಧ್ಯಂತರ ವರದಿ ಸಾಧ್ಯತೆ:ಬಹುದೊಡ್ಡ ಹಣಕಾಸಿನ ಹೊರೆ ತಡೆದು ಕೊಳ್ಳುವ ಸ್ಥಿತಿಯಲ್ಲಿ ರಾಜ್ಯವಿಲ್ಲ. ಸದ್ಯಕ್ಕೆ ಮಧ್ಯಂತರ ವರದಿ ಪಡೆದು ಜುಲೈಗೆ ಜಾರಿ ಮಾಡುವುದು, ಆ ನಂತರ ಅಂತಿಮ ವರದಿ ಪಡೆದು ಅದರ ಜಾರಿ ಜವಾಬ್ದಾರಿ ಯನ್ನು ಮುಂದಿನ ಸರ್ಕಾರದ ಹೆಗಲಿಗೆ ಹಾಕುವುದು ಸರ್ಕಾರದ ಕಾರ್ಯತಂತ್ರ ಇರುವಂತಿದೆ.
25 ರಾಜ್ಯಗಳಲ್ಲಿದೆ:ದೇಶದ 25 ರಾಜ್ಯಗಳಲ್ಲಿ ಕೇಂದ್ರ ನೌಕರರ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಹೈಕೋರ್ಟ್ ನೌಕರರಿಗೆ ನೀಡಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + 8 =
Remember me
