ನವದೆಹಲಿ:ದೇಶ ಮತ್ತು ವಿದೇಶಗಳಲ್ಲಿ 7ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಸೋಮವಾರ ಆಚರಿಸಲಾಯಿತು. ಕೋವಿಡ್-19 ಕಾರಣ ಸಾಮೂಹಿಕ ಆಚರಣೆಗಳು ಮಿತವಾಗಿ ನಡೆದವು. ವಿಶ್ವಸಂಸ್ಥೆ ಈ ವರ್ಷ ‘ಕ್ಷೇಮಕ್ಕಾಗಿ ಯೋಗ’. ಎಂಬ ಘೋಷವಾಕ್ಯ ನೀಡಿದೆ. ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಆನ್​ಲೈನ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರೊನಾ ಕಾಲಘಟ್ಟದಲ್ಲಿ ಯೋಗ ಭರವಸೆಯ ಕಿರಣವಾಗಿದೆ. ಸೋಂಕಿನ ಭೀತಿ ಕೂಡ ಯೋಗ ಸಂಭ್ರಮಕ್ಕೆ ಅಡ್ಡಿಯಾಗಿಲ್ಲ. ಬದಲಿಗೆ ಜನರು ಇನ್ನಷ್ಟು ಯೋಗಾಭ್ಯಾಸ ನಿರತರಾಗಿದ್ದಾರೆ. ಪ್ರಾಣವಾಯುವಿಗೆ ತಡೆಯೊಡ್ಡುವ ಕರೊನಾ ಸೋಂಕಿಗೆ ಪ್ರಾಣಾಯಾಮದ ಅನುಲೋಮ, ವಿಲೋಮಗಳು ಮದ್ದಾಗಿವೆ ಎಂದರು.
ಆತ್ಮವಿಶ್ವಾಸವನ್ನು ಹೆಚ್ಚಿಸುವ ಯೋಗ, ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಹೀಗಾಗಿಯೇ ವೈದ್ಯರು ಯೋಗಾಭ್ಯಾಸ ಮಾಡಲು ಸಲಹೆ ಮಾಡುತ್ತಾರೆ. ವೈದ್ಯರು, ಆರೋಗ್ಯ ಸಿಬ್ಬಂದಿ ಪ್ರಾಣಾಯಾಮ ಮಾಡುತ್ತಿರುವ ಚಿತ್ರಗಳು ಹೆಚ್ಚು ಹರಿದಾಡುತ್ತಿವೆ ಎಂದರು.
ಒಲಿ ವಿವಾದಾತ್ಮಕ ಹೇಳಿಕೆ:ಯೋಗದ ಮೂಲ ನೇಪಾಳವೇ ಹೊರತು, ಭಾರತವಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೇಪಾಳದ ಪ್ರಧಾನಿ ಕೆ.ಪಿ.ಶರ್ವ ಒಲಿ ನೀಡಿದ್ದಾರೆ. ಯೋಗ ಆವಿಷ್ಕಾರವಾದಾಗ ಭಾರತ ಅಸ್ತಿತ್ವದಲ್ಲೇ ಇರಲಿಲ್ಲ. ಅಲ್ಲಿ ಇದ್ದದು ರಾಜರ ಆಳ್ವಿಕೆಯ ಪ್ರಾಂತ್ಯಗಳು ಮಾತ್ರ. ನೇಪಾಳದಲ್ಲಿ ಯೋಗಾಭ್ಯಾಸ ಆಂತರಿಕವಾಗಿ ನಡೆಯುತ್ತಿದ್ದ ಕಾರಣ ಹೊರ ಜಗತ್ತಿಗೆ ಅಷ್ಟಾಗಿ ಪ್ರಚಾರವಾಗಿರಲಿಲ್ಲ ಎಂದಿದ್ದಾರೆ.
ಶಾಲಾಪಠ್ಯದಲ್ಲಿ ಯೋಗ:ಹರಿಯಾಣ ಸರ್ಕಾರ ಶಾಲಾಪಠ್ಯದಲ್ಲಿ ಯೋಗವನ್ನು ಸೇರಿಸಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಈ ವರ್ಷದಿಂದ ಯೋಗವನ್ನು ಕಲಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯೋಗದ ಅನನ್ಯ ಸಾಧಕರು. ಬಿಡುವಿಲ್ಲದ ಕೆಲಸದ ಮಧ್ಯೆಯೂ ನಿತ್ಯ ಅವರು ಯೋಗಾಭ್ಯಾಸ ಮಾಡುತ್ತಾರೆ. ವಿದೇಶ ಪ್ರವಾಸದಲ್ಲಿದ್ದರೂ ಯೋಗ ಮಾಡುತ್ತಾರೆ. ಆವರ್ತನ ಧ್ಯಾನವನ್ನು ನಾನು ಅವರಿಗೆ ಹೇಳಿಕೊಡುತ್ತಿರುವೆ.
|ಎಚ್.ಆರ್. ನಾಗೇಂದ್ರಪ್ರಧಾನಿಯವರ ಯೋಗ ಸಲಹೆಗಾರ
ಬೆಳ್ತಂಗಡಿ:ಆರೋಗ್ಯಭಾಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಎಲ್ಲ ಮನೆಯಲ್ಲಿ ಯೋಗಾಭ್ಯಾಸ ಮಾಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಸೋಮವಾರ ವೆಬಿನಾರ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದ ಸದಸ್ಯರೆಲ್ಲರೂ ಸೇರಿ ನಿತ್ಯವೂ ಯೋಗಾಭ್ಯಾಸ ಮಾಡಬೇಕು. ಮಿತವಾದ ಆಹಾರ ಸೇವನೆಯೊಂದಿಗೆ ಪ್ರಾರ್ಥನೆ, ಧ್ಯಾನ, ಉಪವಾಸ, ಉತ್ತಮ ಜೀವನಶೈಲಿಯಿಂದ ಮನಸ್ಸು ಹಾಗೂ ಪಂಚೇಂದ್ರಿಯಗಳ ನಿಯಂತ್ರಣ ಸಾಧ್ಯ. ಹಣ ಸಂಪಾದನೆ ಹಾಗೂ ಭೌತಿಕ ಸಂಪತ್ತಿನ ಸಂಗ್ರಹವಷ್ಟೇ ಜೀವನದ ಗುರಿ ಅಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏಕಾಗ್ರತೆಯೊಂದಿಗೆ ಅವರವರ ಕಾರ್ಯಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಯೋಗಾಭ್ಯಾಸ ಸಹಕಾರಿಯಾಗಿದೆ ಎಂದರು.
ದೈಹಿಕ ವ್ಯಾಯಾಮಕ್ಕಾಗಿ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಈಜು, ಕ್ರೀಡೆಗಳು ಮೊದಲಾದ ಪರ್ಯಾಯ ಚಟುವಟಿಕೆಗಳಿದ್ದರೂ, ಯೋಗಾಭ್ಯಾಸದಿಂದ ಮಾತ್ರ ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಪಡೆದು, ಜೀವನದಲ್ಲಿ ಉನ್ನತ ಸಾಧಕರಾಗಬಹುದು ಎಂದರು. ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಡಾ.ಜಯಕರ ಉಪಸ್ಥಿತರಿದ್ದರು. ಉಜಿರೆ ಎಸ್​ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಡಾ.ಶಿವಪ್ರಸಾದ ಶೆಟ್ಟಿ ವಂದಿಸಿದರು. ಡಾ.ಜ್ಯೋಸ್ನಾ ಮತ್ತು ಡಾ.ಮಂಜುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳದ ಶಾಂತಿವನ ಮತ್ತು ಮಣಿಪಾಲದ ಬಳಿ ಪರೀಕಾದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವಿದೆ. ಬೆಂಗಳೂರಿನ ನೆಲಮಂಗಲದಲ್ಲಿ 300 ಹಾಸಿಗೆಗಳ ಸಾಮರ್ಥ್ಯದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ.
|ಡಾ.ಡಿ.ವೀರೇಂದ್ರ ಹೆಗ್ಗಡೆಧರ್ಮಾಧಿಕಾರಿ, ಧರ್ಮಸ್ಥಳ
ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಸಹ ಬಲಗೊಳಿಸಿ. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಯೋಗ ಸಹಕಾರಿಯಾಗಿದೆ. ದೇಹ, ಬುದ್ಧಿ, ಮನಸ್ಸು ವಿವೇಕಗಳನ್ನು ಒಂದು ಕಡೆ ಕೂಡಿಸುವುದು ಯೋಗ. ಸಮಗ್ರ ಆರೋಗ್ಯ ಪದ್ಧತಿಯಾಗಿರುವ ಯೋಗ ಔಷಧರಹಿತ, ಅಡ್ಡಪರಿಣಾಮ ರಹಿತ ಸರಳ ಚಿಕಿತ್ಸಾ ಪದ್ಧತಿಯಾಗಿದೆ. ಯೋಗದ ರಾಜಧಾನಿ ಕರ್ನಾಟಕ. ವಿಶ್ವದ ಪ್ರಥಮ ಯೋಗ ವಿಶ್ವವಿದ್ಯಾಲಯ ಕರ್ನಾಟಕದಲ್ಲಿದೆ. ಯೋಗಾಭ್ಯಾಸ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಲಿ.
|ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
