| ಆರ್.ಕೃಷ್ಣ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಆಳ ಅಗೆದಷ್ಟೂ ವಿಸ್ತರಿಸುತ್ತಿದೆ. ಒಂದೇ ದಿನ ನಿಯಮಬಾಹಿರವಾಗಿ ಬರೋಬ್ಬರಿ 848 ನಿವೇಶನವನ್ನು ಬಿಡುಗಡೆ ಖಾತೆ ಮಾಡಿ, ಚಿರತೆ ವೇಗದಲ್ಲಿ ನೋಂದಣಿ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಈ ಕುರಿತು ಹಿಂದಿನ ಆಯುಕ್ತ ಜಿ.ಡಿ. ದಿನೇಶ್​ಕುಮಾರ್, 2022ರ ಫೆಬ್ರವರಿ 22ರಂದೇ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ಅಕ್ರಮದ ಬಗ್ಗೆ ದೂರು ನೀಡಿರುವುದು ಈ ಹಂತದಲ್ಲಿ ಗಮನಾರ್ಹ ಸಂಗತಿ. ಈ ಮೂಲಕ ಮುಡಾ ಹಿಂದಿನ ಅಧ್ಯಕ್ಷರಾಗಿದ್ದ ಎಚ್.ವಿ. ರಾಜೀವ್ ವಿರುದ್ಧವೂ ಈಗ ಗುರುತರ ಆರೋಪ ಕೇಳಿ ಬಂದಿದೆ. ರಾಜೀವ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಮ್ಮ ಅಧಿಕಾರ, ರಾಜಕೀಯ ಪ್ರಭಾವ ಬಳಸಿ ಎಚ್.ವಿ.ರಾಜೀವ್ ಅವರೇ ಅಧ್ಯಕ್ಷರಾಗಿರುವ ಜ್ಞಾನಗಂಗಾ ಗೃಹನಿರ್ವಣ ಸಹಕಾರ ಸಂಘದ ನಿವೇಶನಗಳ ಸಿಡಿ ಪಟ್ಟಿ ಬಿಡುಗಡೆ ಮಾಡಿಸಿಕೊಂಡು ಕೋರ್ಟ್ ಪ್ರಕರಣ ಮರೆಮಾಚಿ ತರಾತುರಿಯಲ್ಲಿ ಒಂದೇ ದಿನದಲ್ಲಿ ಖಾತೆ ಮಾಡಿಸಿಕೊಂಡಿದ್ದಾರೆ.
ಮೈಸೂರು ತಾಲೂಕು ಕೇರ್ಗಳ್ಳಿ, ನಗರ್ತಹಳ್ಳಿ, ಬಲ್ಲಹಳ್ಳಿ ಗ್ರಾಮ ವ್ಯಾಪ್ತಿಯ ವಿವಿಧ ಸರ್ವೆ ಸಂಖ್ಯೆಯಲ್ಲಿ ಒಟ್ಟು 252.10 ಎಕರೆ ಜಮೀನಿನಲ್ಲಿ ಬಡಾವಣೆ ರಚಿಸಲಾಗಿದೆ. 2020ರ ಜೂನ್ 30ರ ಸರ್ಕಾರಿ ಆದೇಶ ಸಂಖ್ಯೆ (ನಅಇ) 280, (ಮೈಅಪ್ರಾ) 2018ರ ಆದೇಶಕ್ಕೆ ವಿರುದ್ಧವಾಗಿ ಸದರಿ ಬಡಾವಣೆಗಳ ನಿವೇಶನ ಬಿಡುಗಡೆ ಮಾಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಕಡತಗಳ ಕಂಡಿಕೆ 65, 70, 87 ಮತ್ತು 85ರಲ್ಲಿ 2021ರ ಜನವರಿ 7ರಂದು ಆಯುಕ್ತರು ಅನುಮೋದನೆ ಮಾಡಿರುತ್ತಾರೆ ಎಂದು ಉಲ್ಲೇಖಿಸಿ 848 ನಿವೇಶನಗಳನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಒಂದೆರಡು ದಿನಗಳಲ್ಲಿಯೇ ಖಾತೆ ಮಾಡಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ನಿರ್ವಣವಾಗಿರುವ 252.10 ಎಕರೆ ಜಮೀನಿನಲ್ಲಿ ಕೆಲ ಸರ್ವೆ ಸಂಖ್ಯೆಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ಅಸಲು ದಾವಾ ಸಂಖ್ಯೆ-1041/2019 ಆದೇಶ 23-01-2020ರಂದು ಮಧ್ಯಂತರ ಆದೇಶವಿದೆ. ಅಲ್ಲದೆ ಸದರಿ ಬಡಾವಣೆಯ ನಿವೇಶನಗಳ ಹಕ್ಕು ವರ್ಗಾವಣೆ ಮಾಡಬಾರದು ಎಂದು ನಿರ್ದೇಶಿಸಲಾಗಿದೆ. ಮತ್ತೊಂದು ಅಸಲು ದಾವಾ ಸಂಖ್ಯೆ 1034-1038/2019ರ ಆದೇಶ 25-11-2019ರ ಅನ್ವಯ ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶ ಇದೆ. ಆದರೂ ಈ ಮಾಹಿತಿಯನ್ನು ಮರೆಮಾಚಿ, ಆದೇಶದ ವಿರುದ್ಧ್ದಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನಗಳನ್ನು ಬಿಡುಗಡೆಗೊಳಿಸಿರುವುದು ದೃಢಪಟ್ಟಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಕಡತ ರಕ್ಷಣೆ ಬಯಲು: ಪ್ರಕ್ರಿಯೆಯ ಭಾಗವಾಗಿ ಕಡತಗಳನ್ನು ಪರಿಶೀಲಿಸಿ ಅಧ್ಯಕ್ಷರು ವಾಪಸ್ ಆಯುಕ್ತರಿಗೆ ನೀಡಬೇಕು. ಆದರೆ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದ ಕಡತಗಳನ್ನು ಅಧ್ಯಕ್ಷರಾಗಿದ್ದ ಎಚ್.ವಿ.ರಾಜೀವ್ ತಮ್ಮ ಬಳಿ ಇಟ್ಟುಕೊಂಡು ಹಿಂದಿರುಗಿಸಿರಲಿಲ್ಲ.ಕೆಲವರು ಮಾಹಿತಿ ಹಕ್ಕಿನಡಿ ಈ ಬಡಾವಣೆ ಕುರಿತು ಮಾಹಿತಿ ಕೇಳಿದ್ದರು. ಆದರೆ ಕಡತ ಲಭ್ಯವಿಲ್ಲ ಎನ್ನುವ ಉತ್ತರ ನೀಡಿದ್ದರಿಂದ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಿದರು. ಅದರಂತೆ ಮುಡಾ ಆಯುಕ್ತರಿಗೆ ಕಡತ ತರಿಸಿಕೊಂಡು ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದರು. ಆ ಪ್ರಕಾರ ಕಡತ ನೀಡುವಂತೆ 2022ರ ಫೆಬ್ರವರಿ 16 ಹಾಗೂ 2022ರ ಫೆಬ್ರವರಿ 22ರಂದು ಎರಡು ಬಾರಿ ಮುಡಾ ಆಯುಕ್ತರು ಪತ್ರ ಬರೆದು ಕೋರಿದ್ದರೂ, ಅಧ್ಯಕ್ಷರು ಈ ಕಡತಗಳನ್ನು ನೀಡಿಲ್ಲ ಎಂದು ಉಲ್ಲೇಖಿಸಲಾಗಿದೆ.
ಸರ್ಕಾರಿ ಆದೇಶ ಹಾಗೂ ವಲಯ ನಿಯಮಾವಳಿಗಳಿಗೆ ವಿರುದ್ಧವಾಗಿ ಅಧ್ಯಕ್ಷರು ಕ್ರಮವಹಿಸಿದ್ದಾರೆ. ಈ ಬಡಾವಣೆಯ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರೇ, ಪ್ರಾಧಿಕಾರದ ಅಧ್ಯಕ್ಷರೂ ಆಗಿರುವುದರಿಂದ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿರುವ ಅಂಶವನ್ನು ತಮ್ಮ ಅವಗಾಹನೆಗೆ ತರಲಾಗಿದೆ. ತಮ್ಮ ಸುರ್ಪದಿಯಲ್ಲಿ ಇರುವ ಕಡತಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಬೇಕು ಎಂದು ಪತ್ರದಲ್ಲಿ ಸರ್ಕಾರದ ಕಾರ್ಯದರ್ಶಿಯನ್ನು ಕೋರಿದ್ದರು.
ವಾರದಲ್ಲಿ 23 ಸಾವಿರ ಚದರಡಿ ಮಂಜೂರುಇನ್ನೊಂದು ಪ್ರಕರಣದಲ್ಲಿ ಮುಡಾದ ಹಿಂದಿನ ಆಯುಕ್ತ ಜಿ.ಡಿ.ದಿನೇಶ್​ಕುಮಾರ್ ಅರ್ಜಿದಾರರಿಗೆ ವಾರದಲ್ಲಿಯೇ ಶೇ.50:50 ಅನುಪಾತದಲ್ಲಿ 23,881 ಚದರಡಿ ನಿವೇಶನ ಮಂಜೂರಾತಿಗೆ ಆದೇಶ ಮಾಡಿರುವುದು ಭಾರೀ ಆಶ್ಚರ್ಯಕ್ಕೆ ಕಾರಣ ವಾಗಿದೆ. ಬದಲಿ ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿ ಹತ್ತಾರು ವರ್ಷ ಮುಡಾ ಕಚೇರಿಗೆ ಅಲೆದಾಡಿದರೂ ಮಂಜೂರು ಮಾಡದ ಅಧಿಕಾರಿಗಳು, ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿವೇಶನ ಮಂಜೂರು ಮಾಡಿರುವುದು ಮುಡಾ ಕಾನೂನು ಶಾಖೆ ಟಿಪ್ಪಣಿಯಿಂದ ಬಹಿರಂಗಗೊಂಡಿದೆ.
ಮೈಸೂರಿನ ರಾಜೇಂದ್ರನಗರ ನಿವಾಸಿ ಸಯ್ಯದ್ ಜಾಫರ್ ಅವರ ಮಗ ಸಯ್ಯದ್ ಯೂಸುಫ್ ಎಂಬುವರು 2023ರ ಫೆಬ್ರವರಿ 28ರಂದು ತಮಗೆ ಸೇರಿದ ಮೈಸೂರು ತಾಲೂಕು ಕಸಬಾ ಹೋಬಳಿ ಈರನಗೆರೆ ಗ್ರಾಮದ ಸರ್ವೆ ನಂಬರ್ 85/1ರಲ್ಲಿನ 2.06 ಎಕರೆ ಜಮೀನನ್ನು ಮುಡಾ ಭೂಸ್ವಾಧೀನಪಡಿಸಿಕೊಳ್ಳದೆ ಬಡಾವಣೆಯಾಗಿ ಉಪಯೋಗಿಸಿಕೊಂಡಿದೆ. ಆದ್ದರಿಂದ ತಮ್ಮ ಜಮೀನಿಗೆ ಪರಿಹಾರವಾಗಿ 50:50ರ ಅನುಪಾತದಡಿ ನಿವೇಶನ ನೀಡುವಂತೆ ಕೋರಿದ್ದರು. ಆದರೆ ಸೈಯ್ಯದ್ ಯೂಸುಫ್ ಸಲ್ಲಿಸಿದ ಅರ್ಜಿಗೆ ಯಾವುದೇ ಸ್ವೀಕೃತ ಸಂಖ್ಯೆಯೇ ಇಲ್ಲ. ಹೀಗಾಗಿ, ಸ್ವೀಕೃತಿ ಶಾಖೆಯಲ್ಲಿ ಅರ್ಜಿ ದಾಖಲಾಗಿಲ್ಲ. ಬಳಿಕ ಅರ್ಜಿ ಭೂಸ್ವಾಧೀನ ಶಾಖೆಗೆ ತಲುಪಿದ ಬಗ್ಗೆಯೂ ಯಾವುದೇ ಪುರಾವೆ ಇಲ್ಲ. ಕಾರಣ ಅರ್ಜಿಯಲ್ಲಿ ಭೂಸ್ವಾಧೀನ ಶಾಖೆಯ ವಿಷಯವಾಗಿ ಸಂಖ್ಯೆಯೇ ನಮೂದಾಗಿಲ್ಲ.
ಆದರೆ ದಿನೇಶ್​ಕುಮಾರ್ ಅವರು ನೇರ ತಲುಪಿದ ಅರ್ಜಿಗೆ ಸ್ಪಂದಿಸಿ ಕಡತವನ್ನು ಮಂಡಿಸಿದ್ದಾರೆ. ಈ ಕಡತ ಮುಡಾದ ವಿವಿಧ ಶಾಖೆಗಳಲ್ಲಿ ಮಂಡನೆಯಾಗಿ 2023ರ ಮಾರ್ಚ್ 7ರಂದು ಕೇವಲ ಏಳೇ ದಿನದಲ್ಲಿ ದಿನೇಶ್ ಕುಮಾರ್ ಅವರ ಅಧಿಕೃತ ಜ್ಞಾಪನದ ಮೇರೆಗೆ ಈರನಗೆರೆಯಲ್ಲಿ ಭೂಸ್ವಾಧೀನಪಡಿಸಿಕೊಳ್ಳದೆ ಮುಡಾ ಬಳಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ 23,881 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ಸಾಮಾನ್ಯವಾಗಿ ಮುಡಾಗೆ ಸಲ್ಲಿಸುವ ಅರ್ಜಿ ಜತೆಗೆ ದಾಖಲೆಗಳನ್ನು ನೀಡುವಾಗ ಅವುಗಳ ದೃಢೀಕೃತ ಜೆರಾಕ್ಸ್ ಪ್ರತ್ನಿ ನೀಡಬೇಕು. ಆದರೆ ಈ ಜಮೀನಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಯಾವುದೇ ದಾಖಲೆಯು ದೃಢೀಕೃತ ಪ್ರತಿಯಲ್ಲ ಎಂದು ಕಾನೂನು ಶಾಖೆ ಅಕ್ಷೇಪಣೆ ಬರೆದಿದೆ. ಆದರೂ ಹಿಂದಿನ ಆಯುಕ್ತ ದಿನೇಶ್​ಕುಮಾರ್ ಯಾವುದೇ ನಿಯಮಾವಳಿಯನ್ನು ಪಾಲಿಸದೇ ನಿವೇಶನ ಮಂಜೂರಾತಿ ಆದೇಶ ಹೊರಡಿಸಿರುವುದು ಕಂಡುಬಂದಿದೆ ಎಂದು ಟಿಪ್ಪಣಿ ಹೇಳಿದೆ.
ನಮ್ಮ ಗೃಹ ನಿರ್ಮಾಣ ಸಂಘಕ್ಕೆ ಕಾನೂನಾತ್ಮಕವಾಗಿಯೇ ನಿವೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಮುಡಾ ಸಭೆಯಲ್ಲಿ ಹಿಂದಿನ ಆಯುಕ್ತರೇ ಇದ್ದು, ಸಹಿ ಹಾಕಿದ್ದಾರೆ. ಯಾವುದೇ ಪ್ರಭಾವ, ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ.
| ಎಚ್.ವಿ.ರಾಜೀವ್ ಮಾಜಿ ಅಧ್ಯಕ್ಷರು, ಮುಡಾ
ಲೋಕಾ ಪೊಲೀಸರ ಮೌನಒಂದೇ ದಿನದಲ್ಲಿ ಸುಮಾರು 800ಕ್ಕೂ ಹೆಚ್ಚು ಸೈಟುಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿರುವುದು ಲೋಕಾಯುಕ್ತ ಪೊಲೀಸರಿಗೆ ಕೇಳಿಸಿಲ್ಲ, ಲೋಕಾಯುಕ್ತ ಪೊಲೀಸರು ಕಾಂಗ್ರೆಸ್ ಸರ್ಕಾರದ ಕಾವಲು ಪಡೆಯಂತೆ ವರ್ತಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಕುಟುಕಿದ್ದಾರೆ. ಲೋಕಾಯುಕ್ತ ಪೊಲೀಸರು ಇಂತಹ ಗಂಭೀರ ವಿಷಯಗಳ ತನಿಖೆಯನ್ನು ನಡೆಸಲಾಗದಿದ್ದಲ್ಲಿ, ಲೋಕಾಯುಕ್ತವನ್ನು ವಿಸರ್ಜಿಸುವುದು ಒಳ್ಳೆಯದು ಎಂದೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹುಟ್ಟುವ ಮುನ್ನವೇ ಜಮೀನು ನೋಂದಣಿಮುಡಾ ಶೇ.50:50ರ ಅನá-ಪಾತದಡಿ ಮಂಜೂರಾದ ನಿವೇಶನವನ್ನು ಪಡೆದ ವ್ಯಕ್ತಿಗೆ, ಆತ ಹುಟ್ಟುವ ಮುನ್ನವೇ ಮೂಲ ಜಮೀನು ನೋಂದಣಿ ಆಗಿರುವ ಅಂಶ ಕಾನೂನು ಶಾಖೆ ಟಿಪ್ಪಣಿಯಲ್ಲಿ ನಮೂದಾಗಿದೆ. ಅರ್ಜಿದಾರ ಯೂಸುಫ್ ಹೆಸರಿಗೆ ಜಮೀನು ನೋಂದಣಿಯಾಗಿರುವುದು 1934ರ ಏಪ್ರಿಲ್ 16ರಲ್ಲಿ. ಆದರೆ, ಯೂಸುಫ್ ಆಧಾರ್ ದಾಖಲೆ ಪ್ರಕಾರ ಅವರು ಜನಿಸಿರುವುದು 1935ರ ಏಪ್ರಿಲ್ 8ರಂದು. ಅಂದರೆ ಯೂಸುಫ್ ಹುಟ್ಟುವುದಕ್ಕೂ ಒಂದು ವರ್ಷ ಮುಂಚಿತವಾಗಿಯೇ ಅವರ ಹೆಸರಿಗೆ ಜಮೀನು ನೋಂದಣಿ ಆಗಿರುವ ಪವಾಡ ನಡೆದಿದೆ.
ಹುಟ್ಟುಹಬ್ಬದಂದು ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್​ವುಡ್​ ಕ್ವೀನ್​!? ರಮ್ಯಾ ಕೈಹಿಡಿಯುವ ವರನ್ಯಾರು ಗೊತ್ತೇ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + twelve =
Remember me
