ಅನ್ಯ ಭಾಷೆಯ ಯಾವುದೇ ಸೋಂಕಿಲ್ಲದ ನೆಲ ಹಾವೇರಿ. ಇಲ್ಲಿನ ಆಗಸ ನೀಲಿಗಿಂತ ತುಸು ನೀಲಿ; ಇಲ್ಲಿನ ನೆಲ ಕಪ್ಪಿಗಿಂತ ಕಡುಗಪ್ಟು; ಇಲ್ಲಿನ ಹತ್ತಿ ಬಿಳುಪಿಗಿಂತ ಹೆಚ್ಚು ಬಿಳುಪು. ಸಾಧು ಸಂತರ, ದಾಸ, ಶರಣರ, ತತ್ವಜ್ಞಾನಿಗಳ, ಸಾಹಿತಿ- ವಿಚಾರವಾದಿಗಳ ನೆಲವೀಡು. ಹಾಗೆ ನೋಡಿದರೆ ಹಾವೇರಿಯನ್ನು ಯಾರೂ ಪ್ರಯತ್ನ ಪೂರ್ವಕವಾಗಿ ಪ್ರೀತಿಸಬೇಕಿಲ್ಲ. ಇಲ್ಲಿನ ಹಾದಿಯ ಪ್ರತಿಯೊಂದು ತಿರುವಿನಲ್ಲಿಯೂ ಭೂಮಿಯ ಬೆಡಗು ಎದ್ದು ತೋರುತ್ತದೆ. ಹಾವೇರಿಯೇ ನಿಮ್ಮನ್ನು ತುಂಬು ಹೃದಯದಿಂದ ಪ್ರೀತಿಸುತ್ತದೆ.
ಏಲಕ್ಕಿ ಹಾರದ ಸುಗಂಧ ನಿಮ್ಮನ್ನು ಸೋಂಕಿದರೆ ಸಾಕು, ಎಂಥ ಬರಡು ಹೃದಯದಲ್ಲೂ ಉಕ್ಕೇರುವ ಅನುರಾಗ ತುಂಬುತ್ತದೆ. ಹಾವೇರಿ ಜಿಲ್ಲೆಗೆ ಅದರದ್ದೇ ಆದ ನಿಷ್ಕೃಷ್ಟ ಭೂಮಿತಿ, ನಿಶ್ಚಿತ ಸಂಸ್ಕೃತಿ, ಹಾಗೆಯೇ ನಿರ್ದಿಷ್ಟ ಗುಣಗಳಿವೆ. ಇಂಥ ಹಾವೇರಿಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಿಕ್ಕಿದೆ. ಅತಿಥಿಗಳ ಸತ್ಕಾರಕ್ಕೆ ಹಾವೇರಿಯ ಜನತೆ ‘ಏನು ಬಂದಿರಿ ಹದುಳವಿದ್ದರೆ’ ಎಂದು ನಿಮಗಾಗಿ ಕಾಯುತ್ತಿದ್ದಾರೆ. ಕನಕದಾಸರ ನಾಡು, ಷರೀಫಜ್ಜನ ಬೀಡು, ಸರ್ವಜ್ಞ ನಡೆದಾಡಿದ ಊರು, ಏಲಕ್ಕಿ ನಾಡಿನಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರದಿಂದ ಕನ್ನಡದ ಕಹಳೆ ಮೊಳಗಲಿದೆ.
ಇಲ್ಲಿನ ಹಾವೇರಿ- ಹುಬ್ಬಳ್ಳಿ ರಸ್ತೆಯ ಅಜ್ಜಯ್ಯನ ಗುಡಿ ಎದುರು 150 ಎಕರೆ ವಿಶಾಲವಾದ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನದ ಬೃಹತ್ ವೇದಿಕೆಗಳು ನಿರ್ವಣಗೊಂಡಿವೆ. ಸಮ್ಮೇಳನದ ಮುಖ್ಯ ವೇದಿಕೆಗೆ ನಾಡಿನ ಸಾಕ್ಷಿಪ್ರಜ್ಞೆ ಕನಕ – ಶರೀಫ – ಸರ್ವಜ್ಞ ಪ್ರಧಾನ ವೇದಿಕೆ ಎಂದು ನಾಮಕರಣ ಮಾಡಲಾಗಿದೆ.
ಮೆರವಣಿಗೆ ಕಲಾತಂಡ 99:ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜ. 6ರಂದು ಬೆಳಗ್ಗೆ 7.30ಕ್ಕೆ ಹಾವೇರಿಯ ಪುರಸಿದ್ದೇಶ್ವರ ದೇಗುಲದಿಂದ ಪ್ರಾರಂಭವಾಗಲಿದ್ದು, ಒಟ್ಟು 99 ಕಲಾತಂಡಗಳು ಪಾಲ್ಗೊಳ್ಳಲಿವೆ. ಸಮ್ಮೇಳನಾಧ್ಯಕ್ಷರ ವಿಶೇಷ ಸಾರೋಟು ಸೇರಿ 15 ಸಾರೋಟುಗಳು ಇರಲಿವೆ. ಮೆರವಣಿಗೆ ಬೀದಿ ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ.
ವಸತಿ ಎಲ್ಲೆಲ್ಲಿ? ಎಷ್ಟು?:ಸಮ್ಮೇಳನದ ಹತ್ತು ಸಾವಿರ ಪ್ರತಿನಿಧಿಗಳಿಗೆ, 2,500 ಪೊಲೀಸರಿಗೆ 15 ಕಿಮೀ ವ್ಯಾಪ್ತಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. 308 ವಿವಿಐಪಿ, 1,328 ವಿಐಪಿ, 1,000 ಕಲಾವಿದರು, 1,000 ಸ್ವಯಂಸೇವಕರು, ಕಸಾಪದ 800 ಸದಸ್ಯರಿಗೆ ಸೇರಿ ಒಟ್ಟು 17,000ಕ್ಕೂ ಅಧಿಕ ಜನರಿಗೆ ಹಾವೇರಿ, ಶಿಗ್ಗಾಂವಿ, ಹುಬ್ಬಳ್ಳಿ, ರಾಣೆಬೆನ್ನೂರ, ದಾವಣಗೆರೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ನೋಂದಾಯಿತ ಪ್ರತಿನಿಧಿ:ಸಮ್ಮೇಳನಕ್ಕೆಂದು ಕಸಾಪ ಆನ್​ಲೈನ್ ಹಾಗೂ ಆಫ್​ಲೈನ್ ಮೂಲಕ ಹತ್ತು ಸಾವಿರ ಪ್ರತಿನಿಧಿಗಳನ್ನು ನೋಂದಣಿ ಮಾಡಿಕೊಂಡಿದೆ.
86 ಗಣ್ಯರಿಗೆ ಸನ್ಮಾನ:ದೇಶ- ವಿದೇಶದಲ್ಲಿ ನೆಲೆಸಿ ಕನ್ನಡದ ಕಂಪು ಸೂಸುತ್ತಿರುವ 86 ಸಾಧಕರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಗುತ್ತಿದೆ.
86 ಪುಸ್ತಕ ಬಿಡುಗಡೆ:86ನೇ ಸಾಹಿತ್ಯ ಸಮ್ಮೇಳನದಲ್ಲಿ 86 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ 36 ಪುಸ್ತಕಗಳು ಜಿಲ್ಲೆಗೆ ಸಂಬಂಧಿಸಿವೆ.
ಭರ್ಜರಿ ಭೋಜನ:ಸಮ್ಮೇಳನದ ವೇದಿಕೆ ಬಲಭಾಗದಲ್ಲಿ 40 ಎಕರೆ ಪ್ರದೇಶದಲ್ಲಿ ಬೃಹತ್ ಅಡುಗೆ ಮನೆಯಲ್ಲಿ ಸಾವಿರ ಬಾಣಸಿಗರಿಂದ ಭರ್ಜರಿ ಭೋಜನ ಸಿದ್ಧವಾಗುತ್ತಿದೆ. 250 ಊಟದ ಕೌಂಟರ್ ತೆರೆಯಲಾಗಿದ್ದು, ಸಹಾಯಕ್ಕಾಗಿ 2,500 ಕಾರ್ವಿುಕರು ಇದಕ್ಕಾಗಿ ದುಡಿಯುತ್ತಿದ್ದಾರೆ. ಮೊದಲ ದಿನ ಒಂದೂವರೆ ಲಕ್ಷ, ಎರಡನೇ ದಿನ ಒಂದು ಲಕ್ಷ , ಮೂರನೇ ದಿನ ಒಂದೂವರೆ ಲಕ್ಷ ಜನರಿಗೆ ಮೂರು ಹೊತ್ತು ಉಪಾಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 2.20 ಲಕ್ಷ ಶೇಂಗಾ ಹೋಳಿಗೆ, 2 ಲಕ್ಷ ಮೋತಿ ಚೂರ್ ಲಾಡು, 2.5 ಲಕ್ಷ ಲಡಕಿ ಪಾಕ್, 1 ಲಕ್ಷ ಮೈಸೂರ ಪಾಕ್, 80 ಸಾವಿರ ರವಾ ಉಂಡಿ, ಮತ್ತಿತರ ಖಾದ್ಯಗಳು ಸಿದ್ಧಗೊಂಡಿವೆ.
33 ಗೋಷ್ಠಿಗಳು:ಸಮ್ಮೇಳನದಲ್ಲಿ ಒಟ್ಟು 33 ಗೋಷ್ಠಿಗಳು ಜರುಗಲಿವೆ. ಕನ್ನಡ, ಕಾನೂನು, ಕನ್ನಡದ ಬಗ್ಗೆ ಯುವ ಚಿಂತನೆ, ರಾಷ್ಟ್ರೀಯ ಶಿಕ್ಷಣ ನೀತಿ, ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಕುರಿತು, ಕನ್ನಡ ಚಳವಳಿ, ಮಾಧ್ಯಮದಲ್ಲಿ ಕನ್ನಡ ಬಳಕೆ, ಶಿಕ್ಷಣದಲ್ಲಿ ಕನ್ನಡ, ಅನ್ನದಾತರ ಅಳಲು, ವರ್ತಮಾನದಲ್ಲಿ ಮಹಿಳೆ, ಬೆಳ್ಳಿತೆರೆ ಕಿರುತೆರೆ, ದಮನಿತರ ಸಬಲೀಕರಣ, ಹಾವೇರಿ ಜಿಲ್ಲಾ ದರ್ಶನ, ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕರ್ನಾಟಕದ ಕೊಡುಗೆ, ವಚನ ಪರಂಪರೆ, ಕನ್ನಡ ಸಾಹಿತ್ಯದ ಹೊಸ ಒಲವು ಸೇರಿದಂತೆ ಹಲವು ಗೋಷ್ಠಿಗಳು ಸಾಹಿತ್ಯಾಸಕ್ತರ ಚಿಂತನೆಗಳನ್ನು ಒರೆಗೆ ಹಚ್ಚಲಿವೆ.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ:ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರತಿನಿತ್ಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕನಕ, ಶರೀಫ ಮತ್ತು ಸರ್ವಜ್ಞರ ಆಯ್ದ ರಚನೆಗಳ ಗಾಯನ, ನೃತ್ಯರೂಪಕ, ಕನ್ನಡ ನಾಡು ನುಡಿ ಸಂಸ್ಕೃತಿ ಹಿರಿಮೆಯನ್ನು ಸಾರುವ ಖ್ಯಾತ ಕವಿಗಳ ಆಯ್ದ ಚಲನಚಿತ್ರ ಗೀತೆಗಳು, ಮೂಡುಬಿದರೆ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಂಗಾವತಿ ಪ್ರಾಣೇಶ ಹಾಗೂ ತಂಡದಿಂದ ಹಾಸ್ಯ ಸಂಜೆ, ಸರಿಗಮಪ ಖ್ಯಾತಿಯ ಹನುಮಂತ ಲಮಾಣಿ, ಖಾಸಿಮ್ ಅಲಿ ಮತ್ತು ರುಬಿನಾ ತಂಡದಿಂದ ಗಾಯನ ಹಾಗೂ ಡಾ.ಜ್ಯೂನಿಯರ್ ರಾಜಕುಮಾರ ಖ್ಯಾತಿಯ ಅಶೋಕ ಬಸ್ತಿ ಅವರಿಂದ ರಸಮಂಜರಿ ನಡೆಯಲಿದೆ.
2 ಸಾವಿರ ಸ್ವಯಂ ಸೇವಕರು:ಸಮ್ಮೇಳನದಲ್ಲಿ ಒಂದು ಸಾವಿರ ಮಹಿಳಾ ಸ್ವಯಂಸೇವಕರು ಸೇರಿ ಒಟ್ಟು 2 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಕಾರ್ಯ ನಿರ್ವಹಿಸಲಿದ್ದಾರೆ.
ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
