ಬೆಂಗಳೂರು:ಪ್ರಸಕ್ತ 2021-22ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಗುರಿ ಮೀರಿ ಅಂದಾಜು 9,500 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಮಾತುಗಳಲ್ಲಿ ಹೇಳಿದರು. ವಿವಿಧ ಇಲಾಖೆಗಳಿಗೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಹೆಚ್ಚುವರಿಯಾಗಿ ಅನುದಾನ ಕಲ್ಪಿಸಲು ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಧನ ವಿನಿಯೋಗ-2ಕ್ಕೆ ವಿಧಾನಸಭೆಯಲ್ಲಿ (ಪೂರಕ ಬಜೆಟ್) ಸರ್ವಾನುಮತದಿಂದ ಅಂಗೀಕರಿಸಲಾಯಿತು. ಧನವಿನಿಯೋಗಕ್ಕೆ ಒಪ್ಪಿಗೆ ಪಡೆಯುವ ಮುನ್ನ ವಿವಿಧ ಇಲಾಖಾವಾರು ಅನುದಾನದ ಮೇಲಿನ ಚರ್ಚೆಗೆ ಉತ್ತರಿಸಿದ ಬೊಮ್ಮಾಯಿ, ರಾಜ್ಯದ ಸ್ವಂತ ರಾಜಸ್ವ ಸ್ವೀಕೃತಿ 1,19,752 ಕೋಟಿ ರೂ., ಗುರಿ ಹೊಂದಲಾಗಿತ್ತು. ಮೋಟಾರು ವಾಹನ ತೆರಿಗೆ ಸಂಗ್ರಹ ಹೊರತುಪಡಿಸಿ ಕೋವಿಡ್ ನಡುವೆಯೂ ಅಬಕಾರಿ ತೆರಿಗೆ 2 ಸಾವಿರ ಕೋಟಿ ರೂ. ಅಧಿಕ ಸಂಗ್ರಹವಾಗಿರುವುದು ನಮ್ಮ ನಿರೀಕ್ಷೆ ಮೀರಿ ಆದಾಯ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಳವಾಗಿದ್ದು 700 ಕೋಟಿ ರೂ. ಸಂಗ್ರಹವಾಗಿದೆ. ತೆರಿಗೆಯೇತರ ಬಾಬ್ತುಗಳಿಂದ 4 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕಳೆದ ವರ್ಷ ಹೊಂದಲಾಗಿತ್ತು. ಇದನ್ನು ಮೀರಿ 6 ಸಾವಿರ ಕೋಟಿ ರೂ. ಸಂಗ್ರಹಿಸಲು ಸಾಧ್ಯವಾಗಿದೆ. 7,500 ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹ ನಿರೀಕ್ಷೆ ಇತ್ತು. ಇದು ಈ ಆರ್ಥಿಕ ವರ್ಷಾಂತ್ಯಕ್ಕೆ ಅಂದಾಜು 9,500 ಕೋಟಿ ರೂಪಾಯಿ ಮುಟ್ಟಲಿದೆ ಎಂದರು. ಆರ್ಥಿಕ ಶಿಸ್ತಿಗೆ ಒತ್ತು ನೀಡಿ ತೆರಿಗೆ ಸಂಗ್ರಹದಲ್ಲಿ ದಕ್ಷತೆ ತೋರಿದ ಪರಿಣಾಮ ವಾಹನ ತೆರಿಗೆ ಹೊರತುಪಡಿಸಿ ಉಳಿದೆಲ್ಲ ಆದಾಯ ಮೂಲಗಳ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿ ತೆರಿಗೆ ಸಂಗ್ರಹ ಮಾಡಲಾಗಿದೆ. ಕಳೆದ ಸೆಪ್ಟೆಂಬರ್, ಅಕ್ಟೋಬರ್​ನಲ್ಲಿ ಆರ್ಥಿಕ ಪರಿಸ್ಥಿತಿ ಗಮನಿಸಿದಾಗ ಈ ವರ್ಷ ರಾಜ್ಯದ ಬಜೆಟ್ ಗಾತ್ರ ಕುಗ್ಗುವ ಅನುಮಾನಗಳನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರು. ಆ ರೀತಿ ಆದರೆ ಅಭಿವೃದ್ಧಿಗೆ ತೊಡಕಾಗಲಿದೆ ಎಂದುಹೇಳಿ, ತೆರಿಗೆ ಸಂಗ್ರಹ ಇಲಾಖೆಯ ಸಭೆಗಳನ್ನು ನಡೆಸಿ ಯಾವ ರೀತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬಹುದು ಎಂಬುದರ ಬಗ್ಗೆ ಸೂಚನೆ ನೀಡಿದ ಫಲವಾಗಿ ತೆರಿಗೆ ಸಂಗ್ರಹ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಸಿಎಂ ಸಮರ್ಥಿಸಿಕೊಂಡರು.
ಸೆಕೆಂಡ್ಸ್ ಇಲ್ಲವೆಂಬ ಭ್ರಮೆ!:ಅಬಕಾರಿ ಇಲಾಖೆಯಲ್ಲಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ದಿಟ್ಟ ಕ್ರಮಕೈಗೊಂಡಿದ್ದು ಕೈ ಹಿಡಿಯಿತು. ಅಧಿಕಾರಿಗಳು ಗರಿಷ್ಠ ಪ್ರಮಾಣದ ಮಾರಾಟವಾಗದೆ ಹೆಚ್ಚಿನ ಆದಾಯ ಸಂಗ್ರಹ ಕಷ್ಟವೆಂದು ಕೈಚೆಲ್ಲಿದ್ದರು. ಪಾನೀಯ ನಿಗಮದ ಮೇಲೆ ಸೆಕೆಂಡ್ಸ್ ಮಾರಾಟವಿಲ್ಲ ಎಂಬ ಭ್ರಮೆ ಇತ್ತು. ಗೋವಾ ಹಾಗೂ ಇತರೆಡೆಗಳಿಂದ ಸೆಕೆಂಡ್ಸ್ ಮದ್ಯ ಬರುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ಅದರಂತೆ ಕ್ರಮ ಕೈಗೊಂಡ ಪರಿಣಾಮ ಅಬಕಾರಿ ಇಲಾಖೆಗೂ 2 ಸಾವಿರ ಕೋಟಿ ರೂ. ಅಧಿಕ ಆದಾಯ ಸಂಗ್ರಹವಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಮುದ್ರಾಂಕ ಶುಲ್ಕದಲ್ಲಿ ಶೇ.10 ಮಾರ್ಗಸೂಚಿ ದರಗಳಿಗೆ ರಿಯಾಯಿತಿ ನೀಡಿದ್ದರಿಂದ 700 ಕೋಟಿ ರೂ. ಹೆಚ್ಚು ಆದಾಯ ಸಂಗ್ರಹವಾಗಿದೆ. ತೆರಿಗೆರಹಿತ ಆದಾಯಗಳ ಹೆಚ್ಚಳಕ್ಕೂ ಗಮನ ನೀಡಿದ್ದೇವೆ. ಕಳೆದ ವರ್ಷ 4 ಸಾವಿರ ಕೋಟಿ ರೂ. ತೆರಿಗೆಯೇತರ ಆದಾಯ ಗುರಿ ಹೊಂದಲಾಗಿತ್ತು. ಅದರಲ್ಲೂ ಗುರಿ ಮೀರಿ 6 ಸಾವಿರ ತೆರಿಗೆಯೇತರ ಆದಾಯವನ್ನು ಸಂಗ್ರಹ ಮಾಡಲಾಗಿದೆ. ಇನ್ನು ಮಾರಾಟವಾಗದೆ ಉಳಿದಿದ್ದ ಕಬ್ಬಿಣದ ಅದಿರನ್ನು ಮಾರಾಟಕ್ಕೆ ಅವಕಾಶ ಮಾಡಿದ್ದು 500 ಕೋಟಿ ರೂ. ಆದಾಯ ಬರಲು ಕಾರಣವಾಯಿತು. ಹಲವು ಅಡೆತಡೆಗಳನ್ನು ನಿವಾರಿಸಿ ಗಣಿ ಚಟುವಟಿಕೆಗಳಿಗೆ ಮತ್ತೆ ಚಾಲನೆ ನೀಡಿ ತೆರಿಗೆಯೇತರ ಆದಾಯ ಸಂಗ್ರಹ ಮಾಡಲಾಗಿದೆ ಎಂದರು. ಬಳಿಕ 2023ರ ಮಾ.31ಕ್ಕೆ ಕೊನೆಗೊಳ್ಳುವ ವಿವಿಧ ಇಲಾಖೆಗಳ ಅನುದಾನ ಬೇಡಿಕೆಗಳಿಗೆ ಸಂಬಂದಿಸಿದ ಪ್ರಸ್ತಾವನೆಯನ್ನು ಮಂಡಿಸಿ ಅನುಮೋದನೆ ನೀಡುವಂತೆ ಸಿಎಂ ಕೋರಿದರು. ಪ್ರಸ್ತಾವನೆಯನ್ನು ಸಭಾಧ್ಯಕ್ಷರು ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನಕ್ಕೆ ಸಂಬಂಧಿತ ಯೋಜನೆ, ಕಾರ್ಯ ಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಫೆ.17ಕ್ಕೆ ಹೊರಡಿಸಿರುವ ಸುತ್ತೋಲೆ ವಾಪಸ್ ಪಡೆಯುವೆ.
|ಬಸವರಾಜ ಬೊಮ್ಮಾಯಿಸಿಎಂ (ಪರಿಷತ್​ನಲ್ಲಿ)
ಆರ್ಥಿಕ ಶಿಸ್ತಿನ ಮಂತ್ರ:ತೆರಿಗೆಯೇತರ ಆದಾಯವನ್ನು ಹೆಚ್ಚಿಸಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಣಕಾಸಿನ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಆ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಲಾಗಿದೆ. ವಿತ್ತೀಯ ಕೊರತೆ ನಿಭಾಯಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡರು. ಇದೇ ಆರ್ಥಿಕ ವರ್ಷದಲ್ಲಿ 67,100 ಕೋಟಿ ರೂ. ಸಾಲ ಪಡೆಯಲು ಅವಕಾಶ ಇದ್ದರೂ 63100 ಕೋಟಿ ರೂ. ಸಾಲ ಪಡೆದು 4 ಸಾವಿರ ಕೋಟಿ ರೂ. ಕಡಿಮೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ ವಿತ್ತೀಯ ಕೊರತೆಗಳನ್ನು ಸರಿದೂಗಿಸಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ವಿತ್ತೀಯ ಕೊರತೆಯನ್ನು ಸರಿದೂಗಿಸಿ ಆದಾಯ ಹೆಚ್ಚಳ ಮಾಡುವ ಕಡೆ ಸರ್ಕಾರ ಗುರಿ ಹೊಂದಿದೆ. ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹದ ಗುರಿಯನ್ನು ಹೆಚ್ಚಳ ಮಾಡಿದ್ದೇವೆ ಎಂದರು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಅನಗತ್ಯ ಹುದ್ದೆ ಹಾಗೂ ವೆಚ್ಚವನ್ನು ಕಡಿಮೆ ಮಾಡಿ ಆರ್ಥಿಕ ಶಿಸ್ತುನ್ನು ಕಾಪಾಡುವಂತೆ ಸಲಹೆ ಮಾಡಿದರು.
ಕೃಷಿ ಹೊಂಡ ಮುಂದುವರಿಕೆ, ಮರು ಪರಿಶೀಲನೆ:ಕೃಷಿ ಹೊಂಡ ನಿರ್ಮಾಣ ಯೋಜನೆ ಮುಂದುವರಿಸುವುದರ ಬಗ್ಗೆ ಪುನರ್ ಪರಿಶೀಲನೆ ಮಾಡುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು. ವಿಧಾನಸಭೆಯಲ್ಲಿ ಕೃಷಿ ಇಲಾಖೆ ಬೇಡಿಕೆ ಮೇಲೆ ನಡೆದ ಚರ್ಚೆಗೆ ಸಚಿವ ಬಿ.ಸಿ.ಪಾಟೀಲ್ ಉತ್ತರಿಸುವ ಸಂದರ್ಭ ಮಧ್ಯಪ್ರವೇಶಿಸಿದ ಸಿಎಂ, ಈ ಭರವಸೆ ನೀಡಿದರು. ಕೃಷಿ ಹೊಂಡ ಮಾಡಬಾರದೆಂಬ ಉದ್ದೇಶ ನಮ್ಮ ಸರ್ಕಾರಕ್ಕೇನಿಲ್ಲ. ಕೃಷಿ ಹೊಂಡಗಳಿಂದ ರೈತರಿಗೆ ನಾನಾ ರೀತಿಯ ಅನುಕೂಲವಾಗಿರುವ ಬಗ್ಗೆ ಕೃಷಿ ವಿಶ್ವವಿದ್ಯಾಲಯ ನೀಡಿರುವ ವರದಿಯನ್ನು ತರಿಸಿ ಪರಿಶೀಲಿಸುತ್ತೇನೆ. ಒಂದು ತಾಲೂಕಿನಲ್ಲಿ ಹೆಚ್ಚು, ಮತ್ತೊಂದು ತಾಲೂಕಿನಲ್ಲಿ ಕಡಿಮೆ ಕೃಷಿ ಹೊಂಡ ನಿರ್ವಣವಾಗಿವೆ. ಮಳೆ ಕಡಿಮೆ ಯಾದ ಪ್ರದೇಶಕ್ಕೆ ಅನುಕೂಲವಾಗಲಿದೆ. ಮೊದಲು ಜಲಾನಯನ ಯೋಜನೆಯಡಿ ಕೃಷಿ ಹೊಂಡ ಮಾಡುತ್ತಿದ್ದರು. ಅವಶ್ಯವಿರುವ ಕಡೆ ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಇದಕ್ಕೂ ಮುನ್ನ ಮಾತನಾಡಿದ ಬಿ.ಸಿ.ಪಾಟೀಲ್, 2014ರಿಂದ 19ರವರೆಗೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ಮಿಷನ್ ಮೋಡ್​ನಲ್ಲಿ ನಿರ್ವಿುಸಲಾಗಿತ್ತು. ಈಗ ಅದು ನಿಂತಿದೆ. ನರೇಗಾ ಯೋಜನೆಯಡಿ ನಿರ್ವಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
1,400 ಕೋಟಿ ರೂ. ಜಿಎಸ್​ಟಿ ವಂಚನೆ ಪತ್ತೆ:ಕಟ್ಟುನಿಟ್ಟಿನ ತೆರಿಗೆ ವಸೂಲಿ, ವ್ಯವಸ್ಥೆ ಸುಧಾರಣೆ, ಹೊಸ ಕ್ರಮಗಳ ಜಾರಿಗೆ ತಂದ ರೀತಿಯಲ್ಲೇ ತೆರಿಗೆ ವಂಚಿಸುವವರು ಹೊಸ ಕಳ್ಳದಾರಿಗಳನ್ನು ಹುಡುಕುತ್ತಿರುತ್ತಾರೆ ಎಂದ ಸಿಎಂ ಬೊಮ್ಮಾಯಿ ಅವರು ಜಿಎಸ್​ಟಿ ವಂಚನೆ ಪ್ರಕರಣವೊಂದನ್ನು ಮೇಲ್ಮನೆಯಲ್ಲಿ ಬಿಚ್ಚಿಟ್ಟರು. ವ್ಯಕ್ತಿಯೊಬ್ಬರು ಹೊಸ ಕಂಪನಿ ತೆರೆದು ಜಿಎಸ್​ಟಿ ವಿನಾಯಿತಿ, ಅನುಕೂಲತೆಗಳನ್ನು ಪಡೆದರು. ನಂತರ ಅದನ್ನು ಮುಚ್ಚಿ ಮತ್ತೊಂದು ಕಂಪನಿ ತೆರೆದು ಇದೇ ಲಾಭ ಪಡೆದರು. ಹೀಗೆಯೇ 25 ಕಂಪನಿಗಳನ್ನು ತೆರೆದು ಒಟ್ಟು 1,400 ಕೋಟಿ ರೂ. ಜಿಎಸ್​ಟಿ ವಂಚಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ರೈತರ ಆತ್ಮಹತ್ಯೆ ಪ್ರಮಾಣ ಇಳಿಕೆ:ಸರ್ಕಾರ ಕೈಗೊಂಡ ಹಲವು ರಚನಾತ್ಮಕ ಕಾರ್ಯಕ್ರಮಗಳಿಂದ ರೈತರ ಆತ್ಮಹತ್ಯೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ವಿಧಾನಸಭೆಯಲ್ಲಿ ಕೃಷಿ ಇಲಾಖೆ ಬೇಡಿಕೆ ಮೇಲಿನ ಚರ್ಚೆಗೆ ಉತ್ತರಿಸಿದರು. ಕರೊನಾ ನಂತರ ಕೃಷಿ ಬಗ್ಗೆ ವಿದ್ಯಾವಂತರು ಆಸಕ್ತಿ ತೋರುತ್ತಿದ್ದಾರೆ. ಸೂಟು ಬೂಟು ಹಾಕಿಕೊಂಡವರು ಕೃಷಿ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಕೃಷಿಗೆ ಹೊಸ ದಿಕ್ಕು ತೋರಲಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕನನ್ನು ಶಕ್ತಿವಂತನಾಗಿ ಮಾಡುವ ಹಲವು ಕ್ರಮಗಳನ್ನು ಕೈಗೊಂಡಿವೆ. ಇದರಿಂದ 2015-16ರಲ್ಲಿ 1062, 2016-17ರಲ್ಲಿ 932, 2017-18ರಲ್ಲಿ 1052, 2018-19ರಲ್ಲಿ 868, 2019-20ರಲ್ಲಿ 885, 2020-21ರಲ್ಲಿ 647 ಹಾಗೂ 2021-22ರಲ್ಲಿ 266 ಆತ್ಮಹತ್ಯೆಯಾಗಿವೆ ಎಂದು ವಿವರಿಸಿದರು.
ರಸಗೊಬ್ಬರ ಕೊರತೆ ಇಲ್ಲ:ಚನ್ನಪಟ್ಟಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಮಹಿಳೆಯರು ಕಣ್ಣೀರು ಹಾಕಿರುವ ಪ್ರಸಂಗ ವಿಧಾನಸಭೆಯಲ್ಲಿ ಚರ್ಚೆಗೆ ಬಂತು. ಕಾಂಗ್ರೆಸ್​ನ ಪರಮೇಶ್ವರ ನಾಯ್್ಕ ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ನಮ್ಮಲ್ಲಿ ರಸಗೊಬ್ಬರದ ಸಮಸ್ಯೆ ಇಲ್ಲ. ಬಫರ್ ಸ್ಟಾಕ್ ಇದೆ. ಗೊಬ್ಬರ ತಕ್ಷಣ ಕಳಿಸಿಕೊಡುತ್ತೇವೆ ಎಂದರು. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಗೊಬ್ಬರ ಕಳುಹಿಸುತ್ತೇವೆ ಎನ್ನುವುದು ಒಂದು ಭಾಗ. ಸರತಿಯಲ್ಲಿ ನಿಂತ ಹೆಣ್ಣು ಮಕ್ಕಳಿಗೆ ಗೊಬ್ಬರ ಕೊಟ್ಟಿಲ್ಲ, ಯಾರೋ ಫೋನ್ ಮಾಡಿದವರಿಗೆ ಗೊಬ್ಬರ ಕೊಟ್ಟಿದ್ದಾರೆಂದು ಹೆಣ್ಣು ಮಕ್ಕಳು ಕಣ್ಣೀರು ಹಾಕಿದ್ದಾರೆ. ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಎಚ್.ಡಿ.ಕುಮಾರಸ್ವಾಮಿ, ಯೂರಿಯಾ ಗೊಬ್ಬರ ಸಿಗದೆ ನಾವು ನಮ್ಮ ತೋಟದಲ್ಲಿ ಹಸುವಿನ ಗೊಬ್ಬರ ಬಳಸಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ರಸಗೊಬ್ಬರದ ದಾಸ್ತಾನು ಇದ್ದು ಕೊರತೆ ಇಲ್ಲ ಎಂದರು.
ಆ ಬೊಮ್ಮಾಯಿ ಇಷ್ಟು ಹುಷಾರಿರಲಿಲ್ಲ! ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್​ನ ರಮೇಶ್​ಕುಮಾರ್ ಟಾಂಗ್ ಕೊಟ್ಟರು. ವಿಧಾನಸಭೆಯಲ್ಲಿ ಮಂಗಳವಾರ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಕುರಿತ ವಿಶೇಷ ಚರ್ಚೆಯಲ್ಲಿ ಎಚ್.ಕೆ.ಪಾಟೀಲ್ ಮಾತನಾಡುತ್ತಿದ್ದರು. ಮಧ್ಯಪ್ರವೇಶಿಸಿದ ರಮೇಶ್​ಕುಮಾರ್, ಎಚ್.ಕೆ.ಪಾಟೀಲ್​ರನ್ನು ಕೆ.ಎಚ್.ಪಾಟೀಲ್ ಆಗ್ರಿ ಅಂದ್ರೆ ಅವರು ಒಪು್ಪವುದಿಲ್ಲ. ಈ ಕೇಸ್ ಡಿಫರೆಂಟ್. ನೀವು ಆ ರೀತಿ ಇಲ್ಲ. ನಾನು ಎಸ್.ಆರ್.ಬೊಮ್ಮಾಯಿ ನೋಡಿದ್ದೀನಿ, ಕೆ.ಎಚ್. ಪಾಟೀಲ್ರನೂ ನೋಡಿದ್ದೀನಿ. ಆ ಬೊಮ್ಮಾಯಿ ಇಷ್ಟು ಹುಷಾರಿರಲಿಲ್ಲ. ನೀವು ಬಹಳ ಹುಷಾರು ಎಂದು ಹಾಸ್ಯ ಚಟಾಕಿ ಹಾರಿಸಿದರು. ‘ನಾನು ಸಾಕಷ್ಟು ಬಾರಿ ನೋಡಿದ್ದೀನಿ ನೀವು ಯಾವಾಗಲೂ ಎಚ್.ಕೆ.ಪಾಟೀಲರಿಗೆ ಕೆ.ಎಚ್.ಪಾಟೀಲರಂತೆ ಆಗಿ ಅಂತ ಸಲಹೆ ಕೊಡುತ್ತಿರುತ್ತೀರಾ. ಆದರೆ, ಅವರು ಒಪ್ಪಂಗಿಲ್ಲ. ಅವರ ಜತೆ ಅಷ್ಟು ಅನ್ಯೋನ್ಯವಾಗಿದ್ದೀರಾ ಅವರನ್ನು ಕನ್ವೀನ್ಸ್ ಮಾಡಿ’ ಎಂದು ಸಿಎಂ ಬೊಮ್ಮಾಯಿ ಮತ್ತೆ ಕೆಣಕಿದರು. ನಾನು ಕೆ.ಎಚ್.ಪಾಟೀಲ್ ಆಗೋಲ್ಲ. ಅವರು ಯಾಕೆ ಹಂಗಿದ್ರು ಅಂದ್ರ ಅವರ ಫ್ರೆಂಡ್ ಎಸ್.ಆರ್.ಬೊಮ್ಮಾಯಿ ಇದ್ರು. ನಾನ್ಯಾಕೆ ಹೀಗಿದ್ದೀನಿ ಅಂದ್ರ ಫಾರ್ಚುನೇಟ್ಲಿ ನನ್ನ ಫ್ರೆಂಡ್ ಬಸವರಾಜ ಬೊಮ್ಮಾಯಿ ಅಂತ ಸ್ವಾರಸ್ಯಕರ ಚರ್ಚೆಗೆ ಎಚ್.ಕೆ.ಪಾಟೀಲ್ ತೆರೆ ಎಳೆದರು.
ಭೋಗ್ಯ ಧೋಖಾ, ಕ್ರಮಕ್ಕೆ ಒತ್ತಾಯ:ಖಾಲಿ ಇರುವ ಮನೆಗಳಿಗೆ ಭೋಗ್ಯದಾರರನ್ನು ಹುಡುಕಿಕೊಟ್ಟು ಮಾಲೀಕರಿಂದ ಲಕ್ಷಾಂತರ ಹಣ ವಸೂಲಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಜೆಡಿಎಸ್​ನ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದರು. ವಿಧಾನಪರಿಷತ್​ನಲ್ಲಿ ಶೂನ್ಯವೇಳೆ ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ‘ಓಯೋ ಸ್ಪೇಸ್​ನಿಂದ ವಂಚನೆ’ ಸುದ್ದಿ ಪ್ರಸ್ತಾಪಿಸಿ ಮಾತನಾಡಿದ ಅವರು, ಅನೇಕಲ್ ಭಾಗದಲ್ಲಿ ಆರೋಪಿಗಳು ಗ್ರಾಹಕರಿಂದ ಲಕ್ಷಾಂತರ ರೂ. ಪಡೆದು ಮನೆಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಭೋಗ್ಯದ ಅವಧಿ ಮುಕ್ತಾಯವಾದ ಬಳಿಕ ಹಣ ಮರಳಿಸದೆ ಸತಾಯಿಸುತ್ತಿದ್ದರು. ಮನೆ ಮಾಲೀಕರಿಗೂ ತಿಂಗಳ ಬಾಡಿಗೆ ಕೊಡದೆ, ಭೋಗ್ಯದ ಹಣ ಬಳಸಿಕೊಂಡು ವಂಚನೆ ಎಸಗಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಕೈಗಾರಿಕೆ ಸ್ಥಾಪನೆಗೆ ಮುಕ್ತ ಅವಕಾಶ:ರಾಜ್ಯದಲ್ಲಿ ಕೈಗಾರಿಕಾ ನೀತಿ ಸರಳೀಕರಣ ಮಾಡಲಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಬಿಟ್ಟು, ಇನ್ನುಳಿದ ಎಲ್ಲ ಅನುಮತಿಗಳನ್ನು ಸಿಂಗಲ್ ವಿಂಡೋ ಮೂಲಕ ಪಡೆದುಕೊಳ್ಳುವ ಮುಕ್ತ ಅವಕಾಶ ನೀಡಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಕಾಂಗ್ರೆಸ್​ನ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿ, ಬಂಡವಾಳ ಹೂಡಲು ಬರುವ ಕಂಪನಿಗಳು ತನ್ನ ಉತ್ಪನ್ನ ಪ್ರಾರಂಭವಾಗುವ ಮುನ್ನ ಕ್ಲಿಯರೆನ್ಸ್ ನೀಡಿದರೆ ಸಾಕು ಎಂದು ನೀತಿಯಲ್ಲಿದೆ. ಇದಕ್ಕಿಂತ ಇನ್ನೇನು ಸರಳೀಕರಣ ಮಾಡಲು ಸಾಧ್ಯವಿಲ್ಲ ಎಂದರು. ಸಭಾಪತಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸಿಂಗಲ್ ವಿಂಡೋದಲ್ಲಿ ಕಾನೂನು ಸಡಿಲಿಸಿ, ಸಾಕಷ್ಟು ಅವಕಾಶ ಮಾಡಲಾಗಿದೆ. ಬಂಡವಾಳ ಹೂಡುವವರಿಗೆ ಜಮೀನು ಒದಗಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಸ್ಥಾಪನೆಯಾಗಿದ್ದ ಅನೇಕ ಕಂಪನಿಗಳು ತಮಿಳುನಾಡಿಗೆ ಸ್ಥಳಾಂತರವಾಗಿದೆ. ಸಿಲಿಕಾನ್ ಸಿಟಿಯಲ್ಲಿಯೇ ಈ ಸ್ಥಿತಿಯಾದರೆ ಹೇಗೆ? ಎಂದು ರಾಥೋಡ್ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ತಡೆಯಲು ಜಿಪಿಎಸ್:ರಾಜ್ಯದ ಅಕ್ರಮ ಗಣಿಗಾರಿಕೆ ತಡೆಯಲು ಒನ್ ನೇಷನ್- ಒನ್ ಜಿಪಿಎಸ್ ಅಳವಡಿಸುವ ಕುರಿತು ಪರಿಶೀಲನೆ ಮಾಡಲಾಗುತ್ತಿದೆ ಎಂದು ಗಣಿ ಸಚಿವ ಹಾಲಪ್ಪ ಆಚಾರ್ ಮೇಲ್ಮನೆಯಲ್ಲಿ ತಿಳಿಸಿದರು. ಜೆಡಿಎಸ್​ನ ಸಿ.ಎನ್.ಮಂಜೇಗೌಡ ಪ್ರಶ್ನೆಗೆ ಉತ್ತರಿಸಿ, ದೆಹಲಿಯ ಡಿಐಎಂಟಿಎಸ್ ಸಂಸ್ಥೆಗೆ ಈ ಯೋಜನೆಯನ್ನು ವಹಿಸಲಾಗಿದ್ದು, ಅದು ಡಿಪಿಆರ್ ಮಾಡಲಿದೆ ಎಂದರು. ಖನಿಜ ಸಾಗಾಣಿಕೆ ವಾಹನಗಳ ಮೇಲೆ ನಿಗಾ ಇಡಲಾಗಿದೆ. ನಿಗದಿತ ಭಾರಕ್ಕಿಂತ ಹೆಚ್ಚಿನ ಪ್ರಮಾಣದ ಖನಿಜ ಸಾಗಾಣಿಕೆ ಮಾಡುತ್ತಿದ್ದರೆ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದರು. 5300 ಕೋಟಿ ರಾಜಸ್ವ ಸಂಗ್ರಹ ಮಾಡಲಾಗಿದೆ. ಮೂರು ವರ್ಷಗಳಲ್ಲಿ 27,763 ವಾಹನಗಳ ವಿರುದ್ಧ ಪ್ರಕರಣ ದಾಖ ಲಾಗಿದ್ದು, 17.17 ಕೋಟಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದರು.
ಬ್ರಾಹ್ಮಣ, ಲಿಂಗಾಯತ, ದಲಿತರ ಇತಿಹಾಸ | ಸ್ವಾರಸ್ಯಕರ ಚರ್ಚೆ
ಬ್ರಾಹ್ಮಣರು, ಲಿಂಗಾಯತರು ಮತ್ತು ದಲಿತರ ಇತಿಹಾಸ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು. ಕೃಷಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆ ಸಂದರ್ಭ ಸಚಿವ ಬಿ.ಸಿ.ಪಾಟೀಲ್, ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ರೈತರ ಟ್ರಾ್ಯಕ್ಟರ್​ಗೆ ಡೀಸೆಲ್ ಖರೀದಿ ಸಬ್ಸಿಡಿ ನೀಡುತ್ತದೆ. ಆದರೆ ನಾಡಗೌಡ ಅವರಂತಹ ಜಮೀನುದಾರರಿಗೆ ಈ ಸಬ್ಸಿಡಿ ಏನಕ್ಕೂ ಸಾಕಾಗುವುದಿಲ್ಲ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ್​ಕುಮಾರ್, ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಬಂದಾಗಿನಿಂದ ಯಾರೂ ಹೆಚ್ಚು ಜಮೀನು ಹೊಂದುವಂತಿಲ್ಲ. ನೀವು ಹೇಳುವ ಪ್ರಕಾರ ಅವರು ಜಮೀನು ಇಟ್ಟುಕೊಂಡರೆ ಅದು ಕಾನೂನು ಬಾಹಿರವಾಗುತ್ತದೆ. ಅದರ ಬಗ್ಗೆ ತನಿಖೆ ಕೂಡ ನಡೆಸಬೇಕಾಗುತ್ತದೆ. ನೀವು ಸಚಿವ ಸ್ಥಾನದಲ್ಲಿ ನಿಂತು ಹೇಳಿದ್ದೀರಿ. ಅದಕ್ಕೆ ಬದ್ದರಾಗಬೇಕಾಗುತ್ತದೆ ಎಂದರು.
ಸಂಪತ್ ಅಯ್ಯಂಗಾರ್ ಬಳಿ ಸಂಪತ್ತೇ ಇಲ್ಲ:ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಾಡಗೌಡರು ಹೆಸರಿಗೆ ಗೌಡರಾಗಿರಬಹುದು. ಗೌಡರಾದವರೆಲ್ಲರೂ ಶ್ರೀಮಂತರಾಗಿರುವುದಿಲ್ಲ. ಇಲ್ಲವೇ ಜಮೀನು ಹೊಂದಿರುವುದಿಲ್ಲ. ನನ್ನ ಸ್ನೇಹಿತರೊಬ್ಬರ ಹೆಸರು ಸಂಪತ್ ಅಯ್ಯಂಗಾರ್. ಆದರೆ ಅವರ ಬಳಿ ಸಂಪತ್ತೇ ಇಲ್ಲ ಎಂದರು. ಮಧ್ಯ ಪ್ರವೇಶಿಸಿದ ಸಚಿವ ಗೋವಿಂದ ಕಾರಜೋಳ, ನಾಡಗೌಡ, ದೇಸಾಯಿ, ಕುಲಕರ್ಣಿ, ದೇಶಮುಖ್… ಇವರಿಗೆ ಇನ್ನೂ 50 ವರ್ಷ ಸ್ಥಾನಮಾನಕ್ಕೆ ಭಾದ್ಯತೆ ಆಗುವುದಿಲ್ಲ. ಭೂಸುಧಾರಣಾ ಕಾಯ್ದೆ ಜಾರಿಗೆ ಬಂದೂ ಇನ್ನೂ ಕೆಲವರು ಭೂಮಿ ಬಿಟ್ಟುಕೊಟ್ಟಿಲ್ಲ. ಬೇನಾಮಿ ಹೆಸರಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರು. ಆಗ ಸಿದ್ದರಾಮಯ್ಯ, ನಿಯಮ ಮೀರಿ ಜಮೀನು ಇಟ್ಟುಕೊಂಡಿದ್ದರೆ ನೀವು ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಡಿವೈಡ್ ಆಂಡ್ ಡಿವಿಜನ್:ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರಜೋಳ ಹೇಳಿಕೆ ಕುರಿತು, ನೀವು ಅದನ್ನು ಹಾಗೆ ಹೇಳಿದರೆ ಹೇಗೆ? ಹೇಗೆ ಹೇಳಬೇಕೋ ಹಾಗೇ ಹೇಳಬೇಕು. ಅನ್ ಡಿವೈಡೆಡ್ ಫ್ಯಾಮಿಲಿ ಡಿವೈಡ್ ಆಗಿ ಡಿವಿಜನ್ ಆಗಿದೆ ಎಂದು ಹೇಳಬೇಕು. ಸಿದ್ದರಾಮಯ್ಯ ಅವರಂತ ಜಾಣ ವಕೀಲರು ಹೇಳಿಕೊಟ್ಟು ಅಂತಹ ಕೆಲಸ ಮಾಡಿದ್ದಾರೆ ಎಂದು ಕಾಲೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರೋ ವಕೀಲರು ಸಲಹೆ ಕೊಡಬಹುದು. ನನ್ನಂಥವರು ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಸಮಾಜ ನಿರ್ಮಾಣದ ಗುರಿ:12ನೇ ಶತಮಾನದಲ್ಲೇ ಬಸವಣ್ಣನವರು ಸಮಸಮಾಜ ನಿರ್ವಿುಸಲು ಅನುಭವ ಮಂಟಪ ಸ್ಥಾಪಿಸಿದರು. ಆ ಮಂಟಪಕ್ಕೆ ಹಿಂದುಳಿದವರನ್ನು ಸಿಂಹಾಸನದ ಮೇಲೆ ಕೂರಿಸಿದ್ದರು ಎಂದು ಗೋವಿಂದ ಕಾರಜೋಳ ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಹಿಂದುಳಿದವರಿಗೆ ಸ್ಥಾನಮಾನ ನೀಡಲು ಮುಂದಾಗಿದ್ದಕ್ಕೇ ಬಿಜ್ಜಳನ ಕಿವಿ ಊದಿ ಅವರನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದರು. ಸಮಸಮಾಜ ನಿರ್ವಣವಾಗಿದ್ದರೆ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಏಕೆ ಮತಾಂತರವಾಗುತ್ತಿದ್ದರು ಎಂದು ಕೆಣಕಿದರು. ಆಗ ಕಾರಜೋಳ, ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದೇ ಇರುತ್ತಾರೆ. ನಾವು ಸಮಾಜದ ಅಂಕು-ಡೊಂಕು ತಿದ್ದಬೇಕು. ಆಗ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯ ಎಂದು ಹೇಳಿದರು. ಇದೆಲ್ಲ ಕೇಳಿಸಿಕೊಂಡ ಸ್ಪೀಕರ್, ನಮ್ಮ ಇತಿಹಾಸದ ಬಗ್ಗೆ ಚರ್ಚೆ ಮಾಡಬೇಕು ಎಂದರು. ಆಗ ಸಿದ್ದರಾಮಯ್ಯ, ಇತಿಹಾಸ ತಿರುಚಿದ ವಿಷಯವೂ ಚರ್ಚೆಗೆ ಬರಬೇಕು ಎಂದು ಹೇಳಿದರು.
ಬ್ರಾಹ್ಮಣರಿಗೆ 5000, ದಲಿತರಿಗೆ 50:ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಬಿ.ರಾಚಯ್ಯ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು. ಬ್ರಾಹ್ಮಣರಿಗೆ 5000 ವರ್ಷಗಳ ಇತಿಹಾಸವಿದೆ. ಲಿಂಗಾಯಿತರಿಗೆ 800 ವರ್ಷಗಳ ಇತಿಹಾಸವಿದೆ. ದಲಿತರಿಗೆ ಸಂವಿಧಾನ ಬಂದಮೇಲೆ ಇತಿಹಾಸ ಬಂದಿದೆ ಎಂದು ಹೇಳಿದ್ದನ್ನು ರಮೇಶ್​ಕುಮಾರ್ ನೆನಪಿಸಿದರು. ಆಗ ಬಸವರಾಜ ಬೊಮ್ಮಾಯಿ, ನಾಡಗೌಡರು ಮೊದಲು ಅವಿಭಜಿತ ಕುಟುಂಬದಲ್ಲಿದ್ದಾಗ ಹೆಚ್ಚು ಆಸ್ತಿ ಹೊಂದಿರಬಹುದು. ಈಗ ವಿಭಜಿತರಾದ ಮೇಲೆ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದರು. ಆಗ ಗೋವಿಂದ ಕಾರಜೋಳ, ಗೌಡ, ಸಂಪತ್ ಹೆಸರು ಇಟ್ಟುಕೊಂಡವರಲ್ಲ ಶ್ರೀಮಂತರಾಗಿರಲು ಸಾಧ್ಯವಿಲ್ಲ. ಈಗಲೂ ಅನೇಕ ಜನ ವರ್ಷಗಳಿಂದಲೂ ಉಪಕಸುಬು ನಂಬಿಕೊಂಡೇ ಜೀವನ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯ ಫೋಟೋ ಇಟ್ಟರೆ ನಿನ್ನನ್ನೇ ಮನೆಯಿಂದ ಹೊರಹಾಕುವೆ ಎಂದ ಮಾಲೀಕ!

ಭೀಕರ ಅಪಘಾತ; ಮಿನಿ ಬಸ್ ಪಲ್ಟಿ, ಬೈಕ್ ಸವಾರ ಸ್ಥಳದಲ್ಲೇ ಸಾವು, 30ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 10 =
Remember me
