ಬೆಂಗಳೂರು:ಬಹು ಆಯ್ಕೆ ಮಾದರಿಯಲ್ಲಿ ಕೇವಲ ಎರಡು ದಿನ ನಡೆದಿದ್ದ 2021ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶೇ.99.9 ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಪಾಸ್ ಎಂದು ಈ ಮೊದಲೇ ಹೇಳಿದ್ದರಿಂದ ಎಲ್ಲ ವಿದ್ಯಾರ್ಥಿಗಳು ಹಾಜರಾಗಿದ್ದರು. ಒಬ್ಬ ಖಾಸಗಿ ವಿದ್ಯಾರ್ಥಿನಿ ಪರೀಕ್ಷೆ ವೇಳೆ ಬದಲಿ ವಿದ್ಯಾರ್ಥಿನಿ ಮೂಲಕ ಪರೀಕ್ಷೆ ಬರೆಸಲು ಹೋಗಿ ಸಿಕ್ಕಿಬಿದ್ದು ಡಿಬಾರ್ ಆದ ಕಾರಣ ಶೇ.100 ಫಲಿತಾಂಶಕ್ಕೆ ಪೆಟ್ಟು ಬಿದ್ದಿದೆ.
ಈ ಬಾರಿ ದಾಖಲೆ ಎನ್ನುವಂತೆ ಒಟ್ಟು 157 ವಿದ್ಯಾರ್ಥಿಗಳು ಪೂರ್ಣ 625 ಅಂಕಗಳಿಸಿ ಟಾಪರ್ಸ್ ಎನಿಸಿದ್ದಾರೆ. ಕಳೆದ ವರ್ಷ ಕೇವಲ 6 ವಿದ್ಯಾರ್ಥಿಗಳು ಸಂಪೂರ್ಣ ಅಂಕಗಳಿಸಿದ್ದರು. ಇನ್ನುಳಿದಂತೆ 289 ವಿದ್ಯಾರ್ಥಿಗಳು 623, ಇಬ್ಬರು ವಿದ್ಯಾರ್ಥಿಗಳು 622, 449 ಜನ 621 ಹಾಗೂ 28 ವಿದ್ಯಾರ್ಥಿಗಳು 620 ಅಂಕ ಗಳಿಸಿದ್ದಾರೆ. ಈ ಬಾರಿ 620 ರಿಂದ 625 ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ 925 ಇದ್ದು, ಕಳೆದ ವರ್ಷ 301 ಇತ್ತು. ಒಟ್ಟಾರೆ ಟಾಪರ್​ಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. 157 ಮಕ್ಕಳ ಪೈಕಿ 30 ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ಶೈಕ್ಷಣಿಕ ಜಿಲ್ಲೆಯವರಾಗಿದ್ದಾರೆ. ಬೆಂಗಳೂರು ಉತ್ತರದಲ್ಲಿ 15 ಮಂದಿ, ಉಡುಪಿಯ 11 ಮಂದಿ, ಮಂಗಳೂರಿನ 10 ಮಕ್ಕಳು, ಹಾಸನ ಮತ್ತು ಮೈಸೂರಿನಲ್ಲಿ ತಲಾ 9 ವಿದ್ಯಾರ್ಥಿಗಳು ಶೇ.100ಕ್ಕೆ ಅಂಕ ಪಡೆದಿದ್ದಾರೆ. ಚಾಮರಾಜನಗರ, ಕಲಬುರಗಿ, ಕೊಪ್ಪಳ, ಯಾದಗಿರಿಯಲ್ಲಿ ಒಬ್ಬ ವಿದ್ಯಾರ್ಥಿಯೂ ಈ ಸಾಧನೆ ಮಾಡಿಲ್ಲ.
ಲ್ಯಾಪ್​ಟಾಪ್ ಸಿಗುತ್ತಾ!:ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿ ಬಾರಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್​ಟ್ಯಾಪ್ ನೀಡುವ ಸಂಪ್ರದಾಯವನ್ನು ಮಂಡಳಿ ರೂಢಿಸಿಕೊಂಡು ಬಂದಿದೆ. ಆದರೆ, ಈ ಬಾರಿ 625ಕ್ಕೆ 625 ಅಂಕಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 157 ಇದೆ. ಇನ್ನೂ 620ರಿಂದ 625 ಅಂಕ ತೆಗೆದವರನ್ನು ನೋಡಿದರೆ, 625 ವಿದ್ಯಾರ್ಥಿಗಳಿದ್ದಾರೆ. ಇದರಿಂದ ಈ ಬಾರಿ ಲ್ಯಾಪ್​ಟ್ಯಾಪ್ ನೀಡುವುದು ಕಷ್ಟ ಎನ್ನಲಾಗುತ್ತಿದೆ.
ದಾಖಲಾತಿ ಹೆಚ್ಚಳಕ್ಕೆ ಕ್ರಮ:ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ, ನಮ್ಮಲ್ಲಿ 5,600 ಪದವಿ ಪೂರ್ವ ಕಾಲೇಜುಗಳಿದ್ದು, ಸುಮಾರು 12 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶವಿದೆ. ಜತೆಗೆ ಈ ವರ್ಷ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸುವ ಕಾರ್ಯವೂ ನಡೆಯುತ್ತಿದೆ. ಅನುದಾನ ರಹಿತ ಪಿಯು ಕಾಲೇಜು ಆರಂಭಿಸಲು ಅರ್ಜಿ ಆಹ್ವಾನಿಸಿದ್ದೇವೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಸಿಗಲಿದೆ. ಉಪನ್ಯಾಸಕರ ಕೊರತೆ ನಿಗಿಸಲು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಈಗಾಗಲೇ ಶೇ.84 ಶಾಲಾ ಶಿಕ್ಷಕರು ಕರೊನಾ ಲಸಿಕೆ ಪಡೆದಿದ್ದಾರೆ. ಉಳಿದ ಶಿಕ್ಷಕರಿಗೆ ಆಗಸ್ಟ್ 23ರೊಳಗೆ ಲಸಿಕೆ ನೀಡುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದೇವೆ. ಭೌತಿಕ ತರಗತಿ ಆರಂಭಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಪಾಳಿ ಪದ್ಧತಿಯಲ್ಲಿ ತರಗತಿ ನಡೆಯಲಿದೆ ಎಂದು ವಿವರ ನೀಡಿದರು.
ಅಂಕ ಆಧಾರಿತ ಗ್ರೇಡ್:ವಿದ್ಯಾರ್ಥಿಗಳಿಗೆ ಈ ಬಾರಿ ಅಂಕ ಆಧಾರಿತ ಗ್ರೇಡ್ ನೀಡಲಾಗಿದೆ. ‘ಎ+’, ‘ಎ’, ‘ಬಿ’, ‘ಸಿ’ ಗ್ರೇಡ್​ಗಳನ್ನು ಘೋಷಿಸಲಾಗಿದೆ. 90-100 ಅಂಕ ಗಳಿಸಿದವರಿಗೆ ‘ಎ+’ ಗ್ರೇಡ್ ನೀಡಲಾಗಿದ್ದು, ಒಟ್ಟು 1,28,931 ವಿದ್ಯಾರ್ಥಿಗಳು ಈ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇವರ ಪ್ರಮಾಣ ಶೇ.16.52 ಆಗಿದೆ. 80-89 ಅಂಕ ಗಳಿಸಿದವರಿಗೆ ‘ಎ’ ಗ್ರೇಡ್ ನೀಡಲಾಗಿದ್ದು, ಇವರ ಸಂಖ್ಯೆ 2,50,317. ಶೇಕಡವಾರು ಪ್ರಮಾಣ ಶೇ.32.07 ಆಗಿದೆ. ಅಂತೆಯೇ 60-79 ಅಂಕ ಪಡೆದವರು 2,87,684 ಜನ. ಇವರ ಪ್ರಮಾಣ ಶೇ.36.86 ದಾಖಲಾಗಿದೆ. 35-59 ಪ್ರತಿಶತ ಪಡೆದವರನ್ನು ಸಿ ಗ್ರೇಡ್ ಎಂದು ಘೋಷಿಸಲಾಗಿದ್ದು, ಇವರ ಪ್ರಮಾಣವು ಶೇ.14.55 ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಎಲ್ಲ ಜಿಲ್ಲೆಗಳಿಗೂ ಎ ಗ್ರೇಡ್:ಪ್ರತಿ ಭಾರಿ ಆಯಾ ಜಿಲ್ಲೆಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣ ಆಧರಿಸಿ ಜಿಲ್ಲೆಗಳಿಗೂ ‘ರ್ಯಾಂಕ್’ ನೀಡಲಾಗುತ್ತಿತ್ತು. ಈ ಪ್ರಮಾಣ ಹೆಚ್ಚಿಸಿ ಜಿಲ್ಲೆಗೆ ಉನ್ನತ ಸ್ಥಾನ ಪಡೆಯಲು ಆಯಾ ಜಿಲ್ಲಾಡಳಿತಗಳು ಕೂಡ ಶ್ರಮಿಸುತ್ತಿದ್ದವು. ಆದರೆ. ಈ ಬಾರಿ ಎಲ್ಲ ಜಿಲ್ಲೆಗಳಲ್ಲೂ ಶೇ.100 ಉತ್ತೀರ್ಣತಾ ಪ್ರಮಾಣ ದಾಖಲಾಗಿದ್ದು, ಜಿಲ್ಲೆಗಳೆಲ್ಲ ‘ಎ’ ಗ್ರೇಡ್ ಪಡೆದುಕೊಂಡಿವೆ.
ವೆಬ್​ಸೈಟ್​ನಲ್ಲಿ ವಿಳಂಬ:ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಮಧ್ಯಾಹ್ನ 3.30ರ ನಂತರ ಬಿಡುಗಡೆ ಮಾಡುವುದಾಗಿ ಮಂಡಳಿಯು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ 5 ಗಂಟೆಗೆ ಫಲಿತಾಂಶ ಸಿಕ್ಕಿತು. ಇದರಿಂದ ಕುತೂಹಲದಲ್ಲಿ ಫಲಿತಾಂಶ ಎದುರು ನೋಡುತ್ತಿದ್ದ ವಿದ್ಯಾರ್ಥಿಗಳು, ಪಾಲಕರು ಮಂಡಳಿಗೆ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಫಲಿತಾಂಶವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಯಲ್ಲಿ ಬಿಡುಗಡೆ ಮಾಡಿದರು. ನಂತರ ವಿವರಣೆ ನೀಡಿದ ಅವರು, ಈ ಬಾರಿ 8,76,508 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 8,71,443 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ವಿದ್ಯಾರ್ಥಿನಿ ಡಿಬಾರ್ ಆಗಿದ್ದು ಹೊರತಾಗಿ 8,71,442 ವಿದ್ಯಾರ್ಥಿಗಳು (ಶೇ.99.99) ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ.71.80 ಇತ್ತು. ಶೇ.9 ವಿದ್ಯಾರ್ಥಿ ಗಳು ಉತ್ತೀರ್ಣರಾಗಲು ಅವಶ್ಯವಿದ್ದ ಕನಿಷ್ಠ ಅಂಕಗಳನ್ನು ಪಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರಿಗೆ ಕನಿಷ್ಠ 1ರಿಂದ ಗರಿಷ್ಠ 28 ಕೃಪಾಂಕಗಳನ್ನು ನೀಡಿ ಉತ್ತೀರ್ಣ ಗೊಳಿಸಲಾಗಿದೆ. 13 ವಿದ್ಯಾರ್ಥಿಗಳು 28 ಕೃಪಾಂಕ ಪಡೆದವರಾಗಿದ್ದಾರೆಂದು ತಿಳಿಸಿದರು.
ಆ.23ರಿಂದ ಪ್ರೌಢಶಾಲೆ ಹಾಗೂ ಪಿಯು ವಿದ್ಯಾರ್ಥಿಗಳ ಭೌತಿಕ ತರಗತಿಗಳು ಆರಂಭವಾಗಲಿದ್ದು, ಪ್ರಾಥಮಿಕ ಶಾಲೆಗಳ ಆರಂಭ ಕುರಿತು ಈ ಮಾಸಾಂತ್ಯದಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಶಾಲಾರಂಭಕ್ಕೆ ಸಂಬಂಧಿಸಿದಂತೆ ತಜ್ಞರ ವರದಿ ಈಗಾಗಲೇ ಬಂದಿದೆ. ಪ್ರೌಢಶಾಲೆ ಮತ್ತು ಪಿಯುಸಿ ತರಗತಿ ಆರಂಭಿಸುವ ನಿರ್ಧಾರವನ್ನು ಸಿಎಂ ಘೊಷಣೆ ಮಾಡಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭಿಸುವ ಬಗ್ಗೆ ಆಗಸ್ಟ್ ಅಂತ್ಯದೊಳಗೆ ತೀರ್ವನಿಸಲಿದ್ದೇವೆ. ಭೌತಿಕ ತರಗತಿ ಹೇಗೆ ನಡೆಸಬೇಕು ಎಂಬುದು ಸಹಿತವಾಗಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ವಿಸõತ ಎಸ್​ಒಪಿಯನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದೇವೆ ಎಂದರು.
ಎಸ್​ಎಸ್​ಎಲ್​ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯಶಸ್ವಿಯಾಗಿ 2 ವರ್ಷ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಿದ ಕೀರ್ತಿ ಮಾಜಿ ಶಿಕ್ಷಣ ಸಚಿವ ಸುರೇಶ್​ಕುಮಾರ್ ಅವರಿಗೆ ಸಲ್ಲಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಸಂದರ್ಭದಲ್ಲಿಯೂ ಎಲ್ಲ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪಾಲಕರು, ವಿದ್ಯಾರ್ಥಿಗಳು ಆನ್​ಲೈನ್​ನಲ್ಲಿ ಪಾಠ ಕಲಿತು ಪರೀಕ್ಷೆ ಬರೆದಿದ್ದಾರೆ. ಶಿಕ್ಷಕರು ಸಹ ಉತ್ತಮವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಹಲವು ರಾಜ್ಯಗಳು ಮೊದಲ ಹಾಗೂ ಎರಡನೇ ಅಲೆಯಿಂದಾಗಿ ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಯನ್ನೇ ರದ್ದುಪಡಿಸಿದ್ದವು. ಆದರೆ ಇಡೀ ದೇಶದಲ್ಲೇ ಕರ್ನಾಟಕ ಎರಡು ವರ್ಷಗಳಿಂದ ಕರೊನಾ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ಕೀರ್ತಿ ಸುರೇಶ್​ಕುಮಾರ್ ಅವರಿಗೆ ಸಲ್ಲಬೇಕು ಎಂದರು.

ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
