ಉಡುಪಿ:ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಸತ್ತ ಪ್ರೇಮಿಗಳಿಬ್ಬರ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನದ ನಡುವೆಯೇ ಭಾನುವಾರ ತಡರಾತ್ರಿ ನಡೆಯಿತು. ಬೆಂಗಳೂರು ಮೂಲದ ಪ್ರೇಮಿಗಳು ಭಾನುವಾರ ನಸುಕಿನಲ್ಲಿ ಹೆಗ್ಗುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಾರು ಎಂಬಲ್ಲಿ ಪೆಟ್ರೋಲ್​ ಸುರಿದುಕೊಂಡು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅರೆಬರೆ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಂದ್ರಾಳಿಯ ಸ್ಮಶಾನದಲ್ಲಿ ರಾತ್ರಿ ಒಂದು ಗಂಟೆಗೆ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿ ಅಸ್ತಿ ಕೊಂಡೊಯ್ದರು. ಮೇ 19ರಂದೇ ನಾಪತ್ತೆಯಾಗಿದ್ದ ಜೋಡಿ, ಸಾವಿಗೂ ಮುನ್ನ ಬಾಡಿಗೆ ಕಾರು ಪಡೆದು ಸುತ್ತಾಡಿದ್ದರು. ಪಾಲಕರಿಗೆ ಮೊಬೈಲ್​ ಮೂಲಕ ಸಂದೇಶದ ಮೂಲಕ ಮನದ ನೋವನ್ನ ರವಾನಿಸಿದ್ದರು!
ಬೆಂಗಳೂರು ಆರ್​.ಟಿ.ನಗರ ನಿವಾಸಿ ಯಶವಂತ್​ ಯಾದವ್​(23) ಮತ್ತು ಜ್ಯೋತಿ(23) ಮೃತ ಪ್ರೇಮಿಗಳು. ಯುವ ಜೋಡಿ ಮೇ 18ರಿಂದ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜ್ಯೋತಿ ಚೋಳನಾಯಕನ ಹಳ್ಳಿ ನಿವಾಸಿಯಾಗಿದ್ದು, ಯಶವಂತ್​ ಮುನಿಯಪ್ಪ ಲೇಔಟ್​ ನಿವಾಸಿ. ಜ್ಯೋತಿ ಒಂದು ವರ್ಷದ ಹಿಂದೆ ಬಿ.ಕಾಂ. ಮುಗಿಸಿದ್ದರು. ಯಶವಂತ್​ ಪದವಿ ಮುಗಿಸಿ ಕಂಪ್ಯೂಟರ್​ ಕೋರ್ಸ್​ ಮಾಡುತ್ತಿದ್ದರು. ಇಂಟರ್​ವ್ಯೂಗೆ ಹೋಗಿ ಬರುವುದಾಗಿ ಹೇಳಿದ್ದ ಜ್ಯೋತಿ ಮರಳಿ ಮನೆಗೆ ಬಾರದ ಕಾರಣ ಪಾಲಕರು ಮೇ 19ರಂದು ಪೊಲೀಸರಿಗೆ ದೂರು ನೀಡಿದ್ದರು. ಯಶವಂತ್​ ಕೂಡ ಟ್ಯಾಲಿ ಕ್ಲಾಸ್​ಗೆಂದು ಹೋಗಿದ್ದು, ಹಿಂತಿರುಗದ ಬಗ್ಗೆ ಹೆತ್ತವರು ಮೇ 21ರಂದು ದೂರು ದಾಖಲಿಸಿದ್ದರು.
ಮಂಗಳೂರಿನಿಂದ ಬಾಡಿಗೆ ಕಾರು:ಯಶವಂತ್​-ಜ್ಯೋತಿ ಶನಿವಾರ ಮಂಗಳೂರಿಗೆ ಬೈಕ್​ನಲ್ಲಿ ಆಗಮಿಸಿದ್ದರು. ಅದಕ್ಕೂ ಮೊದಲು ಆನ್​ಲೈನ್​ ಮೂಲಕ ನಗರದ ಮಿಲಾಗ್ರಿಸ್​ನ ಕಾರು ರೆಂಟಲ್​ ಸರ್ವೀಸ್​ನಲ್ಲಿ ಒಂದು ದಿನಕ್ಕೆ ಸೆಲ್ಫ್​ ಡ್ರೈವ್​ ಕಾರು ಬುಕ್​ ಮಾಡಿದ್ದರು. ಮಂಗಳೂರಿನ ಬೀಚ್​ಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಳಿಕ ಜೋಡಿ ಉಡುಪಿಗೆ ತೆರಳಿತ್ತು. ಕಾರು ಬಾಡಿಗೆ ಪಡೆಯುವಾಗ ಯುವಕ ನೀಡಿದ ಆಧಾರ್​ ಕಾರ್ಡಿನ ಆಧಾರದಲ್ಲಿ ಅವರ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಯುವ ಜೋಡಿ ಮಂಗಳೂರಿನಲ್ಲಿ ಬಾಡಿಗೆಗೆ ಮನೆಯನ್ನೂ ಪಡೆದುಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಹೆತ್ತವರಿಗೆ ಮೆಸೇಜ್​:ಆತ್ಮಹತ್ಯೆಗೂ ಮುನ್ನ ಯಶವಂತ್​ ಮೊಬೈಲ್​ನಿಂದ ಮನೆಯವರಿಗೆ ಸಂದೇಶ ರವಾನಿಸಿದ್ದ. ‘ಹೆತ್ತವರನ್ನು ಬಿಟ್ಟು ಬದುಕಲಾರೆವು. ಪ್ರೀತಿಸಿದಾಕೆಗೂ ಮೋಸ ಮಾಡಲಾರೆ. ನಮಗೆ ಬಾಡಿಗೆ ಮನೆ, ಉದ್ಯೋಗ ಸಿಕ್ಕಿದೆ. ಆದರೂ ನಾವು ಸಂತೋಷವಾಗಿಲ್ಲ. ಹಾಗಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ, ಕ್ಷಮಿಸಿ’ ಎಂದು ಮೆಸೇಜ್​ ಕಳುಹಿಸಿದ್ದ. ಜತೆಗೆ ತಾವಿದ್ದ ಲೊಕೇಶನ್​ ಮಾಹಿತಿಯನ್ನೂ ಯಶವಂತ್​ ಶೇರ್​ ಮಾಡಿದ್ದ. ಯುವತಿ ಜ್ಯೋತಿಯ ಹೆತ್ತವರಿಗೂ ಯಶವಂತ್​ ಮೊಬೈಲ್​ನಿಂದ ಮೆಸೇಜ್​ (ಮಮ್ಮಿ ಡ್ಯಾಡಿ ಕ್ಷಮಿಸಿ ಬಿಡಿ) ಕಳುಹಿಸಲಾಗಿತ್ತು.

ಮಂಗಳೂರಿನ ದೇವಳದಲ್ಲಿ ಮದುವೆ?:ಮಂಗಳೂರಿನ ದೇವಸ್ಥಾನವೊಂದರಲ್ಲಿ ಯಶವಂತ್​- ಜ್ಯೋತಿ ಶನಿವಾರ ಮದುವೆಯಾಗಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಮದುವೆಯ ಫೋಟೋಗಳನ್ನು ಮನೆಯವರಿಗೆ ಕಳುಹಿಸಿದಾಗ ವಿರೋಧ ವ್ಯಕ್ತವಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಜೋಡಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಈ ಇಬ್ಬರು ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ಮೊದಲು ತಿಳಿದಿರಲಿಲ್ಲವೇ ಎಂಬ ಅನುಮಾನಗಳೂ ಮೂಡಿವೆ. ಒಂದೇ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ನಾಪತ್ತೆಯಾಗಿರುವ ದೂರು ನೀಡಿದ ಸಂದರ್ಭ “ಅವರಿಗೆ ಪರಸ್ಪರ ಸಂಬಂಧ ಇಲ್ಲ” ಎಂದು ಕುಟುಂಬದವರು ಹೇಳಿಕೆ ನೀಡಿದ್ದರು. ಯುವಕ-ಯುವತಿಯ ಮೊಬೈಲ್​ ಸಿಡಿಆರ್​ ಪರಿಶೀಲಿಸಿದಾಗ ಇಬ್ಬರೂ ನಿರಂತರ ಸಂಪರ್ಕದಲ್ಲಿ ಇದ್ದುದು ಪತ್ತೆಯಾಗಿದೆ.
ಕುಣಿಗಲ್​ನಲ್ಲಿ 6 ತಿಂಗಳ ಹಿಂದೆ ಪತ್ತೆಯಾಗಿದ್ದ ಬೈಕ್​ನ ಹಿಂದಿದೆ ದುರಂತ ಪ್ರೇಮಕತೆ! ಯುವಕ-ಯುವತಿ-ತಾಯಿ… ಒಬ್ಬರ ಹಿಂದೆ ಒಬ್ಬರ ಸಾವು

‘ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ, ಕಾರಂಜಿ ಕಲ್ಲು! ಡಮರುಗ, ಕಮಲ, ಆನೆ, ಕುದುರೆ… ಹಿಂದೂ ಚಿಹ್ನೆಯಲ್ಲ’

ಮಂಗ್ಳೂರಲ್ಲಿ ಮಸೀದಿ ಕೆಡವಿದಾಗ ದೇಗುಲ ಪ್ರತ್ಯಕ್ಷ! ಸತ್ಯ ತಿಳಿಯಲು ತಾಂಬೂಲ ಪ್ರಶ್ನೆಗೆ ಸಜ್ಜು, ಹೇಗೆ ನಡೆಯುತ್ತೆ ತಾಂಬೂಲ ಪ್ರಶ್ನೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
