| ಕೆ.ಎನ್.ರಾಘವೇಂದ್ರಮಂಡ್ಯಕರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿರುವ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ದಾಖಲು ಮಾಡಿಸಲು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಆದರೆ ಕೆಲ ಶಿಕ್ಷಕರು ಮಾಡುವ ಅಧ್ವಾನಕ್ಕೆ ಸರ್ಕಾರಿ ಶಾಲೆ ಎಂದರೆ ಮತ್ತೆ ಮೂಗು ಮುರಿಯುವಂತೆ ಮಾಡುತ್ತಿದೆ. ಇದಕ್ಕೆ ಇತ್ತೀಚಿಗೆ ನಾಗಮಂಗಲ ತಾಲೂಕು ನೆಲ್ಲಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಉದಾಹರಣೆ.
ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದ ಕೆಲ ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎನ್ನುವುದು ಬಹಿರಂಗ ಸತ್ಯ. ತಡವಾಗಿ ಬಂದರೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಏನು ಆಗಿಲ್ಲವೆನ್ನುವಂತೆ ಸುಮ್ಮನಾಗುತ್ತಾರೆ. ಇಂತಹುದೇ ಪ್ರಕರಣ ನೆಲ್ಲಿಗೆರೆ ಶಾಲೆಯಲ್ಲಿ ನಡೆದಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ ಶಾಲೆಗೆ ಭೇಟಿ ನೀಡಿದಾಗಲೂ, ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಂದಿಲ್ಲ. ವಿದ್ಯಾರ್ಥಿಗಳೆಲ್ಲರೂ ಶಾಲೆ ಆವರಣದಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದರು. ಇದು ಸಚಿವರ ಸಿಟ್ಟಿಗೆ ಕಾರಣವಾಗಿದೆ.
ಸಚಿವರ ಎದುರೇ ಅವ್ಯವಸ್ಥೆ: ಸಚಿವ ಬಿ.ಸಿ.ನಾಗೇಶ್ ಅವರು ಆ.12ರಂದು ಅನಿರೀಕ್ಷಿವಾಗಿ ನೆಲ್ಲಿಗೆರೆ ಶಾಲೆಗೆ ಭೇಟಿ ನೀಡಿದ್ದಾರೆ. ಆ ವೇಳೆ ವಿದ್ಯಾರ್ಥಿಗಳೆಲ್ಲರೂ ಶಾಲೆಯ ಆವರಣದಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದರು. ಬೆಳಗ್ಗೆ 10.30 ಆಗಿದ್ದರೂ ಶಿಕ್ಷಕರು ಹಾಜರಾಗಿರಲಿಲ್ಲ. ಸುಮಾರು 20 ನಿಮಿಷ ವಿದ್ಯಾರ್ಥಿಗಳು ಹಾಗೂ ಸ್ಥಳೀಯರನ್ನು ಮಾತನಾಡಿ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಅಲ್ಲಿಂದ ಹೊರಟಿದ್ದಾರೆ.
ಇದಾದ ನಂತರ ಶಾಲೆಗೆ ಆಗಮಿಸಿರುವ ಮೂವರು ಶಿಕ್ಷಕರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ. ಸಚಿವರ ಭೇಟಿ ಮಾಹಿತಿ ಪಡೆದು ಶಾಲೆಗೆ ಆಗಮಿಸಿದ ಬಿಇಒ ಸಹಿ ಮಾಡಿರುವ ಹಾಜರಾತಿಗೆ ಹಸಿರು ಪೆನ್‌ನಿಂದ ರೌಂಡಪ್ ಮಾಡಿದ್ದಾರೆ. ದಾಖಲೆಯೊಂದಿಗೆ ಮಾಹಿತಿಯನ್ನು ಡಿಡಿಪಿಐಗೆ ರವಾನಿಸಿದ್ದಾರೆ. ಇತ್ತ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇಲಾಖೆಯ ಮಾಹಿತಿಯಂತೆ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸುವ ಸಾಧ್ಯತೆ ಇದೆ.

ಪತ್ರ ಬರೆದ ಸಚಿವರು:ನೆಲ್ಲಿಗೆರೆ ಪ್ರಕರಣವನ್ನು ಉಲ್ಲೇಖಿಸಿ ರಾಜ್ಯದ ಎಲ್ಲ ಜಿಲ್ಲೆಯ ಉಪನಿರ್ದೇಶಕರಿಗೆ ಸಚಿವ ಬಿ.ಸಿ.ನಾಗೇಶ್ ಎಚ್ಚರಿಕೆಯ ಪತ್ರ ಬರೆದಿದ್ದಾರೆ. ಕೆಲ ಪ್ರಕರಣಗಳಲ್ಲಿ ಶಿಕ್ಷಕರು ಶಾಲೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಹಾಗೂ ಎಲ್ಲ ಶಿಕ್ಷಕರೂ ಹಾಜರಾಗದೇ, ತರಗತಿ ಕೋಣೆ ಬೀಗ ತೆಗೆಯದೆ ಮಕ್ಕಳು ಶಾಲಾ ಆವರಣದಲ್ಲಿ ಕಾಯುತ್ತಾ ಕುಳಿತಿರುವುದನ್ನು ನಾನು ಗಮನಿಸಿದ್ದೇನೆ. ನಾಗಮಂಗಲ ತಾಲೂಕು ನೆಲ್ಲಿಗೆರೆಯಲ್ಲಿಯೂ ಇಂತಹುದೇ ಪ್ರಕರಣ ನಡೆದಿದೆ.ಮಕ್ಕಳನ್ನು ಬೋದನೆಯಿಂದ ವಂಚಿತರಾಗಿಸಿ, ಅವರ ಸುರಕ್ಷತೆಗೆ ಧಕ್ಕೆ ತರಬಹುದಾದ ಶಿಕ್ಷಕರ ಇಂತಹ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಪ್ರಕರಣ ನಡೆದಲ್ಲಿ ಕಠಿಣ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಚನೆ ನೀಡಿದ್ದಾರೆ.
ಹಿಡಿತವಿಲ್ಲದ ಆಡಳಿತ:ಜಿಲ್ಲೆಯ ಮಟ್ಟಿಗೆ ನೋಡುವುದಾದರೆ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕರ ಮೇಲೆ ಹಿಡಿತವಿಲ್ಲ. ನೆಲ್ಲಿಗೆರೆ ಪ್ರಕರಣ ಕೇವಲ ಒಂದು ಉದಾಹರಣೆಯಷ್ಟೇ ಆಗಿದೆ. ಇಂತಹ ಶಿಕ್ಷಕರ ನಿರ್ಲಕ್ಷೃದ ಪ್ರಕರಣಗಳು ಕೆಲ ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಗ್ರಾಮೀಣ ಭಾಗದ ಕೆಲ ಶಾಲೆಗಳ ಶಿಕ್ಷಕರಂತೂ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿಯೇ ಇರುತ್ತಾರೆ. ಇನ್ನೂ ಕೆಲವರು ಸಂಘ ಸಂಸ್ಥೆಯೊಂದಿಗೆ ಸೇರಿಕೊಂಡು ಶಾಲೆಗಳಿಗೆ ಅತಿಥಿಯಂತಾಗಿರುತ್ತಾರೆ. ಶಾಲೆಗೆ ತಡವಾಗಿ ಹೋಗಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಾಲ ದೂಡುತ್ತಾರೆ. ಇನ್ನು ಅಧಿಕಾರಿಗಳು ಭೇಟಿ ಕೊಡುವುದು ಕಾಟಾಚಾರದಂತೆಯೇ ಆಗಿರುತ್ತದೆ. ಇಲಾಖೆಯ ದೊಡ್ಡ ಅಧಿಕಾರಿಗಳು ಶಾಲೆಗೆ ಬಂದಾಗ ಭರ್ಜರಿ ಊಟ ಹಾಕಿಸಿ ಕಳುಹಿಸುತ್ತಾರೆ.

ನೆಲ್ಲಿಗೆರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಚಿವರು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಬಿಇಒಗಳಿಗೆ ಸೂಚನೆ ನೀಡಲಾಗಿದೆ.| ಎಸ್.ಟಿ.ಜವರೇಗೌಡಡಿಡಿಪಿಐ
ಶಿಸ್ತು ಕ್ರಮವಾಗದೇ ಎಚ್ಚೆತ್ತುಕೊಳ್ಳಲ್ಲ:ಸರಿಯಾಗಿ ಶಾಲೆಗೆ ಬಾರದಿರುವುದು ಹಾಗೂ ಪಾಠ ಬೋಧನೆ ಮಾಡದಿರುವ ಬಗ್ಗೆ ಮಂಡ್ಯ ಜಿಲ್ಲೆಯಲ್ಲಿ ಶಿಸ್ತಿನ ಕ್ರಮಗಳು ತೆಗೆದುಕೊಂಡಿದ್ದು ಕಡಿಮೆ. ಇದರಿಂದಾಗಿ ಏನು ಆಗುವುದಿಲ್ಲ ಎನ್ನುವ ನಿರ್ಲಕ್ಷೃ ಮುಂದುವರೆದಿದೆ. ದಿಢೀರ್ ಭೇಟಿ ನೀಡುವ ಹಾಗೂ ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ. ಪ್ರಮುಖವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಉಸ್ತುವಾರಿ ನೋಡಿಕೊಳ್ಳಬೇಕು. ಶಿಕ್ಷಣ ಇಲಾಖೆಯನ್ನು ಸಭೆಗಷ್ಟೇ ಸೀಮಿತಗೊಳಿಸಿ, ಮಾಹಿತಿ ಪಡೆದು ಸುಮ್ಮನಾದರೆ ಅವ್ಯವಸ್ಥೆ ಮುಂದುವರೆಯುತ್ತಲೇ ಇರುತ್ತದೆ ಎನ್ನುವುದು ಇಲಾಖೆಯ ಅಧಿಕಾರಿಗಳ ಬೇಸರದ ನುಡಿ.
ಇನ್ನು ನೆಲ್ಲಿಗೆರೆ ಪ್ರಕರಣದ ಹಿನ್ನೆಲೆಯಲ್ಲಿ ಡಿಡಿಪಿಐ ಕೂಡ ಜಿಲ್ಲಾ ಮಟ್ಟಕ್ಕೆ ಅನ್ವಯವಾಗುವಂತೆ ಆದೇಶವನ್ನು ಹೊರಡಿಸಿದ್ದಾರೆ. ಸಚಿವರು ನೆಲ್ಲಿಗೆರೆ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಬೆಳಗ್ಗೆ 9.30ಕ್ಕೆ ಶಾಲೆಗೆ ಹಾಜರಾಗಬೇಕಿದ್ದ ಶಿಕ್ಷಕರು ಒಂದು ಗಂಟೆ ತಡವಾಗಿ ಬಂದಿರುವುದರಿಂದ ಮಕ್ಕಳು ಪಾಠ ಬೋಧನೆಯಿಂದ ವಂಚಿತವಾಗಿರುತ್ತಾರೆ. ಅಲ್ಲದೆ ಮಕ್ಕಳ ಸುರಕ್ಷತೆಯ ಕುರಿತು ನಿಗಾ ಇಡಬೇಕಾದ ಶಿಕ್ಷಕರು ಸಮಯ ಪಾಲನೆ ಮಾಡದೇ ಇರುವುದು ಸಮರ್ಥನೀಯವಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲಾ ಕರ್ತವ್ಯಕ್ಕೆ ಹಾಜರಾಗುತ್ತಿರುವುದನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳಲು ಹಾಗೂ ಮಕ್ಕಳ ಸುರಕ್ಷತೆ, ಬೋಧನೆ ಕುರಿತು ನಿಗಾ ವಹಿಸಲು ಎಲ್ಲ ಬಿಇಒಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತೆಯೇ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಸಮಯ ಪಾಲನೆ ಮಾಡಬೇಕು. ಮತ್ಯಾವುದೇ ಭಾಗದಲ್ಲಿ ಶಿಕ್ಷಕರ ಗೈರು ಹಾಜರಿ ಪ್ರಕರಣ ವರದಿಯಾದಲ್ಲಿ ಅಂತಹ ನೂನ್ಯತೆಗೆ ಸಂಬಂಧಿಸಿದಂತೆ ಬಿಇಒಗಳನ್ನು ಹೊಣೆಗಾರಿಕೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಆದೇಶ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತಾಗಿ ಕಸದ ಬುಟ್ಟಿ ಸೇರಿಲಿದೆಯೋ ಅಥವಾ ನಿಜವಾಗಿಯೂ ಕ್ರಮವಾಗಲಿದೆಯೋ ಎನ್ನುವುದನ್ನು ಕಾದುನೋಡಬೇಕಿದೆ.
ಕುಣಿಗಲ್​ನಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ: ರಸ್ತೆಬದಿ ನಿಂತು ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಆಯ್ತು ತಕ್ಕಶಾಸ್ತಿ

PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
