| ಜಗನ್​ ರಮೇಶ್​ಬೆಂಗಳೂರುವ್ಯಾಪಾರಿಗಳಿಂದ ವಂಚನೆಗೊಳಗಾಗುವ ಗ್ರಾಹಕರಿಗೆ ಪರಿಹಾರ ಕೊಡಿಸಲೆಂದೇ ಗ್ರಾಹಕ ನ್ಯಾಯಾಲಯಗಳನ್ನು ರಚಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಕೋರ್ಟ್​ ಮೆಟ್ಟಿಲೇರಿದವರೆಲ್ಲರಿಗೂ ಪರಿಹಾರ ಸಿಗುತ್ತದೆಂದು ಹೇಳಲು ಸಾಧ್ಯವಿಲ್ಲ. ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅನ್ಯಾಯಕ್ಕೊಳಗಾಗಿದ್ದಾರೆ ಎಂಬುದು ಮನವರಿಕೆಯಾದರೆ ಮಾತ್ರ ನ್ಯಾಯಾಲಯ ಸೂಕ್ತ ಪರಿಹಾರ ಕೊಡಿಸುತ್ತವೆ. ಸಾಕ್ಷ್ಯಾಧಾರವಿಲ್ಲದ ಕೆಲ ದೂರುಗಳು ವಜಾಗೊಂಡರೆ, ಮತ್ತೆ ಕೆಲ ಪ್ರಕರಣಗಳಲ್ಲಿ ದೂರುದಾರರಿಗೇ ದಂಡ ವಿಧಿಸಲಾಗುತ್ತದೆ. ಇಂಥದೇ ಪ್ರಕರಣವೊಂದರಲ್ಲಿ 40 ಪೈಸೆಗಾಗಿ ಕೋರ್ಟ್​ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬರು 4 ಸಾವಿರ ರೂ. ದಂಡ ತೆರುವಂತಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ವೊಂದರಲ್ಲಿ ಬಿರಿಯಾನಿಗೆ 40 ಪೈಸೆ ಹೆಚ್ಚುವರಿ ಹಣ ಪಡೆಯಲಾಗಿದೆ. ಈ ಮೂಲಕ ಗ್ರಾಹಕರನ್ನು ಹೋಟೆಲ್​ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಹಲಸೂರಿನ ಟಿ.ನರಸಿಂಹಮೂರ್ತಿ(61) ಎಂಬುವರು ಸಲ್ಲಿಸಿದ್ದ ದೂರನ್ನು ವಜಾಗೊಳಿಸಿರುವ ಬೆಂಗಳೂರು ಗ್ರಾಹಕ ನ್ಯಾಯಾಲಯ, ಯಾವ ಹೋಟೆಲ್​ ವಿರುದ್ಧ ದೂರು ನೀಡಲಾಗಿತ್ತೋ ಅದೇ ಹೋಟೆಲ್​ಗೆ 4 ಸಾವಿರ ರೂ. ಪರಿಹಾರ ನೀಡುವಂತೆ ದೂರುದಾರರಿಗೆ ಆದೇಶಿಸಿದೆ.
ಮಾನಸಿಕ ಯಾತನೆಗೆ ಪರಿಹಾರ ಬೇಕು:2021ರ ಮಾ.21ರಂದು ರಾತ್ರಿ 8.15ಕ್ಕೆ ಇನ್​ಫೆಂಟ್ರಿ ರಸ್ತೆಯಲ್ಲಿರುವ ಹೋಟೆಲ್​ಗೆ ತೆರಳಿ ಬಿರಿಯಾನಿ ಪಾರ್ಸಲ್​ ತೆಗೆದುಕೊಂಡಿದ್ದೆ. ಬಿಲ್​ನಲ್ಲಿ 264 ರೂ. 60 ಪೈಸೆ ಮೊತ್ತ ನಮೂದಿಸಲಾಗಿತ್ತು. ಕ್ಯಾಷ್​ ಕೌಂಟರ್​ನಲ್ಲಿ ಹಣ ಪಾವತಿಸಿದಾಗ 265 ರೂ. ಪಡೆದು ರಸೀದಿ ನೀಡಲಾಗಿತ್ತು. 40 ಪೈಸೆ ಹೆಚ್ಚುವರಿ ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಕ್ಯಾಷಿಯರ್​, ಹೋಟೆಲ್​ನ ಸೂಪರ್​ವೈಸರ್​ ಹಾಗೂ ಮ್ಯಾನೇಜರ್​ ಯಾರಿಂದಲೂ ಸೂಕ್ತ ಉತ್ತರ ಸಿಗಲಿಲ್ಲ. ಹೋಟೆಲ್​ನ ವರ್ತನೆ ಗ್ರಾಹಕರನ್ನು ಲೂಟಿ ಮಾಡುವುದಲ್ಲದೆ ಬೇರೇನೂ ಅಲ್ಲ. ಹೆಚ್ಚುವರಿ ಹಣ ಪಡೆಯುವ ಮೂಲಕ ಸೇವಾ ನ್ಯೂನ್ಯತೆ ಎಸಗಿರುವ ಹೋಟೆಲ್​ ನನಗೆ ಮಾನಸಿಕ ಆಘಾತ ಹಾಗೂ ಯಾತನೆ ಉಂಟು ಮಾಡಿದೆ. ಆದ್ದರಿಂದ, ನನಗೆ 1 ರೂ. ಪರಿಹಾರ ಪಾವತಿಸುವ ಜತೆಗೆ ಈ ವ್ಯಾಜ್ಯದ ವೆಚ್ಚವನ್ನೂ ಭರಿಸುವಂತೆ ಹೋಟೆಲ್​ಗೆ ನಿರ್ದೇಶಿಸಬೇಕು ಎಂದು ಕೋರಿ ನರಸಿಂಹಮೂರ್ತಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಹೋಟೆಲ್​ ವಾದವೇನು?:ದೂರುದಾರರು ಹೋಟೆಲ್​ನಲ್ಲಿ 2 ಬಿರಿಯಾನಿ ಪಾರ್ಸಲ್​ ತೆಗೆದುಕೊಂಡಿದ್ದರು. ತಲಾ 120 ರೂ. ಗಳಂತೆ 240 ರೂ., ಪಾರ್ಸೆಲ್​ ಶುಲ್ಕ 12 ರೂ. ಸೇರಿ ಒಟ್ಟು 252 ರೂ. ಗಳಾಗಿತ್ತು. ಈ ಮೊತ್ತಕ್ಕೆ ಶೇ.2.5 ಕೇಂದ್ರ ಜಿಎಸ್​ಟಿ ಹಾಗೂ ಶೇ.2.5 ರಾಜ್ಯ ಜಿಎಸ್​ಟಿ ಸೇರಿ ಒಟ್ಟು ಶೇ.5 ತೆರಿಗೆಯ ಮೊತ್ತ 12.60 ರೂ. ಸೇರಿಸಲಾಗಿದ್ದು, ಒಟ್ಟಾರೆ ಬಿಲ್​ 264.60 ರೂ. ಗಳಾಗಿವೆ. ತೆರಿಗೆಯ ಮೊತ್ತ 50 ಪೈಸೆಗಿಂತ ಹೆಚ್ಚಿದ್ದ ಕಾರಣ ಅದರ ಮುಂದಿನ ರೂಪಾಯಿ ಮೊತ್ತಕ್ಕೆ ಹೊಂದಾಣಿಕೆ ಮಾಡಲಾಗಿದೆ. ಮೇಲಾಗಿ ಈ ರೀತಿ ಮೊತ್ತ ಹೊಂದಿಸಿರುವುದು ಕೇವಲ ತೆರಿಗೆ ಮೊತ್ತದ ಮೇಲೆಯೇ ಹೊರತು ದೂರುದಾರರು ಖರೀದಿಸಿರುವ ಆಹಾರ ಪದಾರ್ಥದ ಮೇಲಲ್ಲ ಎಂದು ಹೋಟೆಲ್​ ಪರ ವಕೀಲರು ಕೋರ್ಟ್​ಗೆ ವಿವರಿಸಿದ್ದರು.
ಜಿಎಸ್​ಟಿ ಕಾಯ್ದೆಯಲ್ಲೂ ಅವಕಾಶವಿದೆ:ತೆರಿಗೆ ಮೊತ್ತ 0-99 ಪೈಸೆಯೊಳಗಿದ್ದಾಗ ಒಟ್ಟು ಮೊತ್ತವನ್ನು ಹೊಂದಿಸಲು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಕಾಯ್ದೆ-2017ರ ಸೆಕ್ಷನ್​ 170ರಲ್ಲಿ ಅವಕಾಶ ನೀಡಲಾಗಿದೆ. ಅದರ ಪ್ರಕಾರ ತೆರಿಗೆ ಮೊತ್ತವು 50 ಪೈಸೆಗಿಂತ ಕಡಿಮೆ ಇದ್ದಾಗ ಅದರ ಹಿಂದಿನ ರೂಪಾಯಿಗೆ ಹಾಗೂ 50 ಪೈಸೆಗಿಂತ ಹೆಚ್ಚಾಗಿದ್ದರೆ ಮುಂದಿನ ರೂಪಾಯಿಗೆ ಹೊಂದಿಸಬಹುದಾಗಿದೆ. ಈ ಪ್ರಕರಣದಲ್ಲಿ 60 ಪೈಸೆ ಇದ್ದ ಕಾರಣ ಅದರ ಮುಂದಿನ ರೂಪಾಯಿಗೆ ಹೊಂದಿಸಿ 265 ರೂ. ಪಡೆಯಲಾಗಿದೆ. ದೂರುದಾರರು ಆರೋಪಿಸಿರುವಂತೆ ಹೋಟೆಲ್​ ವತಿಯಿಂದ ಯಾವುದೇ ರೀತಿಯ ಸೇವಾ ನ್ಯೂನ್ಯತೆಯಾಗಿಲ್ಲ. ಆದ್ದರಿಂದ, ದೂರು ವಜಾಗೊಳಿಸಬೇಕೆಂದು ಹೋಟೆಲ್​ ಪರ ವಕೀಲರು ಮನವಿ ಮಾಡಿದ್ದರು.
ಕೋರ್ಟ್​ ಆದೇಶವೇನು?:ಕೇಂದ್ರ ಸರ್ಕಾರ 1, 2, 5, 10, 20, 25 ಹಾಗೂ 50 ಪೈಸೆಗಳ ಚಲಾವಣೆಯನ್ನು ಈಗಾಗಲೇ ಹಿಂಪಡೆದಿದೆ. ಜತೆಗೆ, ಯಾವುದೇ ಮೊತ್ತ 50 ಪೈಸೆಗಿಂತ ಕಡಿಮೆ ಇದ್ದಾಗ ಅದರ ಹಿಂದಿನ ರೂಪಾಯಿ ಹಾಗೂ 50 ಪೈಸೆಗಿಂತ ಹೆಚ್ಚಿದ್ದಾಗ ಅದರ ಮುಂದಿನ ರೂಪಾಯಿಗೆ ಹೊಂದಿಸಬೇಕು ಎಂದು ಸೂಚಿಸಿ 2006ರಲ್ಲೇ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಹೀಗಿರುವಾಗ 264.60 ರೂ.ಗಳಿಗೆ 265 ರೂ. ಪಡೆದಿರುವ ಹೋಟೆಲ್​ನ ಕ್ರಮ ಯಾವುದೇ ರೀತಿಯಲ್ಲೂ ಅನುಚಿತ ವ್ಯಾಪಾರ ಪದ್ಧತಿ ಎನಿಸುವುದಿಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ದೂರುದಾರರು ಯಾವುದೇ ಪರಿಹಾರ ಪಡೆಯಲು ಅರ್ಹರಾಗಿಲ್ಲ. ಕೇವಲ ಪ್ರಚಾರದ ಉದ್ದೇಶಕ್ಕೆ ಇಂಥ ದೂರು ಸಲ್ಲಿಸಿರುವಂತೆ ಕಂಡುಬರುತ್ತಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಇಂಥ ದೂರಿನಿಂದ ನ್ಯಾಯಾಲಯದ ಅಮೂಲ್ಯ ಸಮಯದ ಜತೆಗೆ ಹೋಟೆಲ್​ ಮತ್ತದರ ಪರ ವಕೀಲರ ಸಮಯವೂ ವ್ಯರ್ಥವಾಗಿದೆ. ಆದ್ದರಿಂದ ದೂರುದಾರರೇ ಪರಿಹಾರ ಪಾವತಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಗ್ರಾಹಕ ನ್ಯಾಯಾಲಯ, ಹೋಟೆಲ್​ಗೆ 2 ಸಾವಿರ ರೂ. ಪರಿಹಾರದ ಜತೆಗೆ ವ್ಯಾಜ್ಯದ ವೆಚ್ಚ 2 ಸಾವಿರ ರೂ. ಗಳನ್ನೂ ಪಾವತಿಸಬೇಕು ಎಂದು ದೂರುದಾರರಿಗೆ ಆದೇಶಿಸಿದೆ.
ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − ten =
Remember me
