ಬೆಂಗಳೂರು: ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ‘ಬಿಟ್ ಕಾಯಿನ್’ ಹಗರಣದ ಉರುಳೀಗ ಈ ಹಿಂದೆ ತನಿಖೆ ನಡೆಸಿದ್ದ ಪೊಲೀಸರಿಗೇ ಸುತ್ತಿಕೊಳ್ಳುತ್ತಿದೆ. ಹಗರಣದ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡ (ಎಸ್​ಐಟಿ), ಇದೀಗ ಹೊಸದಾಗಿ ಎಫ್​ಐಆರ್ ದಾಖಲಿಸಿದೆ. ಸಾಕ್ಷ್ಯಾಧಾರ ನಾಶ ಮಾಡಿರುವ ಆರೋಪದಲ್ಲಿ ಹಿಂದಿನ ಸಿಸಿಬಿ ತನಿಖಾಧಿಕಾರಿಗಳನ್ನೇ ಆರೋಪಿ ಸ್ಥಾನದಲ್ಲಿರಿಸಿದ್ದು, ಪೊಲೀಸ್ ಇಲಾಖೆಯಲ್ಲಿಯೂ ಶೀತಲ ಸಮರಕ್ಕೆ ಕಾರಣವಾಗಿದೆ.
ಸಿಐಡಿ ವಿಶೇಷ ತನಿಖಾ ತಂಡದ ಡಿವೈಎಸ್​ಪಿ ಕೆ.ರವಿಶಂಕರ್, ಕಾಟನ್​ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಸೇರಿ ಇತರರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಅಧಿಕಾರಿಗಳು, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಲ್ಯಾಪ್​ಟಾಪ್, ಕಂಪ್ಯೂಟರ್, ಹಾರ್ಡ್​ಡಿಸ್ಕ್, ಪೆನ್​ಡ್ರೖೆವ್ ಇತರ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ವರದಿ ಪಡೆದಿದ್ದರು.
ಈ ಆರ್ಟಿಕಲ್​ಗಳನ್ನು ಎಸ್​ಐಟಿ ತಂಡ ಮತ್ತೆ ವಶಕ್ಕೆ ಪಡೆದು ಜುಲೈ 19ರಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆರ್ಟಿಕಲ್​ಗಳು ಮತ್ತು ಅಭಿಪ್ರಾಯ ವರದಿಯನ್ನು ರವಾನಿಸಿ ಹೊಸ ಅಭಿಪ್ರಾಯ ಕೋರಲಾಗಿತ್ತು. ಅದರಂತೆ ಎಫ್​ಎಸ್​ಎಲ್​ನಿಂದ ವರದಿ ಬಂದಿದೆ. 2020ರ ನವೆಂಬರ್ 9ರಂದು ವಶಕ್ಕೆ ಪಡೆದಿದ್ದ 2 ಪೆನ್ ಡ್ರೖೆವ್​ಗಳನ್ನು 2020ರ ನವೆಂಬರ್ 11ರಂದು ಮಿರರ್ ಇಮೇಜ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ವಶಕ್ಕೆ ಪಡೆದಿದ್ದ ಆರ್ಟಿಕಲ್​ಗಳಲ್ಲಿ ಹೆಚ್ಚುವರಿ ಫೈಲ್​ಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ. ಜತೆಗೆ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ತಿರುಚುವ, ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ ಎಂದು ದೂರಿನಲ್ಲಿ ಎಸ್​ಐಟಿ ತನಿಖಾಧಿಕಾರಿ ರವಿಶಂಕರ್ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಎಸ್​ಐಟಿ ತನಿಖೆ ಚುರುಕುಗೊಳಿಸಿದೆ.
ಸಿಸಿಬಿ ತನಿಖಾಧಿಕಾರಿಗಳಿಗೆ ಸಂಕಷ್ಟ:ಡಾರ್ಕ್ ವೆಬ್​ಸೈಟ್​ನಲ್ಲಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ತನಿಖಾಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಬಿಟ್ ಕಾಯಿನ್ ಹಗರಣ ತನಿಖೆ ಕೈಗೊಂಡಿರುವ ಎಸ್​ಐಟಿ ಅಧಿಕಾರಿಗಳು, ಸಿಸಿಬಿ ತನಿಖಾಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಬಿಟ್ ಕಾಯಿನ್ ಹಗರಣದ ನೆಪದಲ್ಲಿ ರಾಜಕಾರಣಿಗಳು ಪೊಲೀಸರನ್ನು ಬಲಿಪಶು ಮಾಡುತ್ತಿದ್ದಾರೆ. ತನಿಖೆ ಆರಂಭದಲ್ಲಿಯೇ ಸಾಕ್ಷಿನಾಶ ಮಾಡಿರುವ ಆರೋಪದ ಮೇಲೆ ಪೊಲೀಸರನ್ನೇ ಆರೋಪಿ ಮಾಡಿರುವ ಸಂಬಂಧ ಪೊಲೀಸರಲ್ಲಿ ಅಸಮಾಧಾನಗಳು ವ್ಯಕ್ತವಾಗಿವೆ.
ಪ್ರಭಾವಿ ಪುತ್ರ ರಕ್ಷಣೆಗೆ ಯತ್ನ?:ಸಿಸಿಬಿ ಅಧಿಕಾರಿಗಳ ಮೇಲೆ ಸಾಕ್ಷ್ಯ ನಾಶ ಆರೋಪದ ಬೆನ್ನಲ್ಲೇ ಈಗ ಬಿಟ್ ಕಾಯಿನ್ ಹಗರಣ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಕಾಂಗ್ರೆಸ್ ಶಾಸಕರ ಪುತ್ರ ಸೇರಿ ಪ್ರಭಾವಿಗಳ ಮಕ್ಕಳು ಸಿಲುಕಿದ್ದರು. ಇದೀಗ ಇವರ ರಕ್ಷಣೆ ಮಾಡುವ ಸಲುವಾಗಿ ಎಸ್​ಐಟಿ ಮುಂದಾಗಿದೆ ಎನ್ನಲಾಗುತ್ತಿದೆ. ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸಿನಲ್ಲಿ ಕಾಂಗ್ರೆಸ್ ಶಾಸಕರ ಪುತ್ರ ಸೇರಿ ಪ್ರಭಾವಿ ವ್ಯಕ್ತಿಗಳ ಮಕ್ಕಳು ಸೇರಿದ್ದರು. ಇದಾದ ಮೇಲೆ ಕಾಟನ್​ಪೇಟೆ ಠಾಣೆಯಲ್ಲಿ ಪ್ರತ್ಯೇಕವಾಗಿ ಬಿಟ್ ಕಾಯಿನ್ ದಂಧೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆಗಲೂ ಆರೋಪಗಳಿಂದ ಜಪ್ತಿಯಾದ ಮೊಬೈಲ್ ಮತ್ತು ಲ್ಯಾಪ್​ಟಾಪ್​ಗಳ ಮಾಹಿತಿ ಆಧಾರದ ಮೇರೆಗೆ ಸಿಸಿಬಿ ತನಿಖೆ ನಡೆಸಿತ್ತು. ಎರಡು ಪ್ರಕರಣಗಳು ಮಾತ್ರವಲ್ಲದೆ ಸಿಐಡಿ ತನಿಖೆ ನಡೆಸಿದ್ದ ಇ-ಗೌರ್ವರ್ ವೆಬ್​ಸೈಟ್ ಹ್ಯಾಕಿಂಗ್ ಪ್ರಕರಣದಲ್ಲಿ ಕೂಡಾ ಆರೋಪಿಗಳಿಂದ ಸಿಸಿಬಿ ಜಪ್ತಿ ಮಾಡಿದ್ದ ವಸ್ತುಗಳನ್ನು ಸಿಐಡಿ ವಶಕ್ಕೆ ಪಡೆದಿತ್ತು. ಇವುಗಳ ಆಧಾರದ ಮೇಲೆ ಸಿಐಡಿ ಆರೋಪಪಟ್ಟಿ ಸಲ್ಲಿಸಿತ್ತು. ಇದೀಗ 3 ಪ್ರಕರಣಗಳಿಗೆ ಒಂದೇ ಸಾಕ್ಷ್ಯ ಪೆನ್​ಡ್ರೖೆವ್, ಮ್ಯಾಕ್ಬುಕ್, ಮೊಬೈಲ್​ನಲ್ಲಿ ಟ್ಯಾಂಪರ್ ಮಾಡಲಾಗಿದೆ ಎನ್ನಲಾಗಿದೆ. ಈ ಮೂಲಕ ಪ್ರಭಾವಿ ಮಕ್ಕಳ ರಕ್ಷಣೆ ಸಹ ನಡೆಯುಸುತ್ತಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಲೆಫ್ಟಿಗಳಿಗೆಂದೇ ವಿಶೇಷ ಹೆಲ್ಮೆಟ್​: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗ’

ವಂಚಕರಿಗಿನ್ನು 420 ಬದಲು ಬೇರೆ ನಂಬರ್!; ಏನಿದು ಸಂಖ್ಯೆ ಬದಲಾವಣೆ?; ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
