ನಮ್ಮ ನಡುವೆ ವಾಸ್ತು ಶಾಸ್ತ್ರವನ್ನು ನಂಬುವವರ ಸಂಖ್ಯೆ ದೊಡ್ಡದಿದೆ. ಅದೇ ರೀತಿ ಟೀಕೆ ಟಿಪ್ಪಣಿ ಮಾಡುವವರ ಪ್ರಮಾಣ ಸಾಕಷ್ಟಿದೆ. ಅನುಭವ ಹಾಗೂ ಮಾಹಿತಿ ಕೊರತೆಯೇ ಈ ವಿಭಿನ್ನ ಅಭಿಪ್ರಾಯಕ್ಕೆ ಕಾರಣ ಇರಬಹುದು. ಕಳೆದ ನಾಲ್ಕು ದಶಕದ ತಮ್ಮ ಸುದೀರ್ಘ ಅನುಭವ ಮತ್ತು ಅಧ್ಯಯನದ ಮೂಲಕ ವಾಸ್ತು ಶಾಸ್ತ್ರದ ಬಗ್ಗೆ ಕೃತಿಯೊಂದನ್ನು ಲೇಖಕರೊಬ್ಬರು ಹೊರತರುತ್ತಿದ್ದಾರೆ. ಐಐಟಿ ಖರಗ್​ಪುರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಪ್ರೊ. ಅಪ್ಪಣ್ಣ ಸರ್​ದೇಶಪಾಂಡೆ ಅವರು ತಮ್ಮ ಅನುಭವಗಳು ಹಾಗೂ 700ಕ್ಕೂ ಅಧಿಕ ಕೇಸ್ ಸ್ಟಡಿಯ ಸಾರವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದು, ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಈ ವೇಳೆ ಅವರದೇ ಮಾತಿನಲ್ಲಿ ವಾಸ್ತು ಶಾಸ್ತ್ರ ಹಾಗೂ ಕೃತಿಯ ವಿಶೇಷತೆಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಆರ್ಕಿಟೆಕ್ಚರ್ ಎಂಬುದು ಇಂಗ್ಲಿಷ್ ಶಬ್ದ. ಇದಕ್ಕೆ ಸಮಾನವಾದ ಕನ್ನಡ ಬಳಕೆ ಎಂದರೆ ವಾಸ್ತು ಶಾಸ್ತ್ರ. ಇದು ಹೇಗೆ ‘ವಸ್ತು’ ಸಂಸ್ಕೃತ ಶಬ್ದದಿಂದ ಬಂದಿದೆ. ವಸ್ತು ಎಂದರೆ ಫಿಸಿಕಲ್ ಆಬ್ಜೆಕ್ಟ್, ಕಟ್ಟಡ ಕೂಡ ಫಿಸಿಕಲ್ ಆಬ್ಜೆಕ್ಟ್. ಅದು ಮನುಷ್ಯರ ವಾಸ ಸ್ಥಾನ ಆಗಿರಬಹುದು, ಉದ್ಯಮ ಕ್ಷೇತ್ರವೂ ಇರಬಹುದು, ಉತ್ಪಾದನಾ ಸ್ಥಳ, ಕೈಗಾರಿಕೆ ಇರಬಹುದು, ಸಿನಿಮಾ ಮಂದಿರವೂ ಇರಬಹುದು. ಹೀಗೇ ಬೇಕಾದಷ್ಟು ರೂಪದಲ್ಲಿ ಇರಬಹುದು. ಅದರಲ್ಲಿ ಮನುಷ್ಯನ ಚಟುವಟಿಕೆ ಅಥವಾ ಆಕ್ಟಿವಿಟಿ ಬಂದಾಗ ವಾಸ್ತುಶಾಸ್ತ್ರ ಬರಲಿದೆ. ವೇರ್ ಹೌಸ್ ಅಥವಾ ಮನುಷ್ಯರ ಚಟುವಟಿಕೆ ಇರುವುದಿಲ್ಲವೋ ಅಲ್ಲಿ ವಾಸ್ತುಶಾಸ್ತ್ರ ಅಪ್ಲಿಕೇಶನ್, ಅಳವಡಿಕೆ ವಿಚಾರವೇ ಇರುವುದಿಲ್ಲ.
ವಾಸ್ತುಶಾಸ್ತ್ರ ಬೇಕಾ? ಖಂಡಿತಾ ಬೇಕು. ಒಬ್ಬ ಮೇಸ್ತ್ರಿ ಕೂಡ ಒಳ್ಳೆಯ ಮನೆ ಕಟ್ಟಿಕೊಡುತ್ತಾನೆ, ಇಂಜಿನಿಯರ್ ಕೂಡ ಮನೆ ಕಟ್ಟಿಸಿಕೊಡುತ್ತಾನೆ. ಹಾಗಾದರೆ ಆರ್ಕಿಟೆಕ್ಟ್, ಇಂಜಿನಿಯರ್, ಮೇಸ್ತ್ರಿ ನಡುವಿನ ವ್ಯತ್ಯಾಸವೇನು? ಅದನ್ನು ವಿಶ್ಲೇಷಣೆ ಮಾಡದೇ ಇದ್ದರೆ ಅದು ಮನೆ ಆಗಲ್ಲ, ಅದೊಂದು ಕಟ್ಟಡ ಅಷ್ಟೇ.
ಆರ್ಕಿಟೆಕ್ಚರ್ ಅಥವಾ ವಾಸ್ತುವು ನಮ್ಮ ಪರಿಸರಕ್ಕೆ ನೇರ ಸಂಬಂಧ ಇರುವ ವಿಚಾರ. ಆರ್ಕಿಟೆಕ್ಚರ್ ದ ಸೈನ್ಸ್ ಆಫ್ ವಾಸ್ತು ಶಾಸ್ತ್ರ ಎಂಬುದು ನನ್ನ ಕೃತಿಯ ಹೆಸರು. ಸರಳವಾಗಿ ಹೇಳುವುದಾದರೆ, ಈಗ ಆರ್ಕಿಟೆಕ್ಟ್ ಎಂದರೆ ನಾಲ್ಕು ಗೋಡೆ, ರೂಫ್, ಕಾಸ್ಮೆಟಿಕ್ ಟ್ರೀಟ್​ವೆುಂಟ್ ಕೊಡುವುದು ಎಂದಷ್ಟೇ ಆಗಿದೆ. ಬ್ಯೂಟಿಫುಲ್ ಮನೆ ಬೇಕು, ನೆರೆ ಮನೆಗಿಂತ ಚೆನ್ನಾಗಿರಬೇಕು ಎಂದು ಆಶಯ ಹೊಂದುವವರೇ ಹೆಚ್ಚು. ಆದರೆ, ವಾಸ್ತು ಎಂಬುದು ವಿಜ್ಞಾನ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದರ ಒಳ ಹೂರಣ ತಿಳಿಸುವ ಮುನ್ನ ಪ್ರಸ್ತುತ ನಮ್ಮ ನಡುವಿನ ಅಪಸವ್ಯಗಳ ಬಗ್ಗೆ ಬೆಳಕು ಚೆಲ್ಲುವುದಾದರೆ, ವಾಸ್ತು ಶಾಸ್ತ್ರ ನಿವೇಶನಕ್ಕೆ ಅನ್ವಯ ಆಗುವುದೇ ಇಲ್ಲ. ನಿವೇಶನ ಯಾವುದೋ ಶೇಪ್​ನಲ್ಲಿದೆ, ಇಳಿಜಾರಿನಲ್ಲಿದೆ, ಗೋಮುಖ ಇದೆ, ವ್ಯಾಘ್ರಮುಖ ಇದೆ ಎಂದು ಕೆಲವು ಪಂಡಿತರು ಮೋಸ ಮಾಡುತ್ತಿದ್ದಾರೆ. ಅದು ಸರಿಯಲ್ಲ. ವಾಸ್ತು ಶಾಸ್ತ್ರ ಆರಂಭವಾಗುವುದು ಮನುಷ್ಯದ ಉಪಸ್ಥಿತಿಯಿಂದ. ಮನೆ ಅಥವಾ ಕಟ್ಟಡದಿಂದ. ಹಾಗೆಯೇ, ಅಲ್ಲಿ ನೀರಿಡಿ, ಇಲ್ಲಿ ಕನ್ನಡಿ ಇಡಿ, ಇಲ್ಲಿ ದೀಪ ಇಡಿ ಎಂದೆಲ್ಲ ಹಾದಿ ತಪ್ಪಿಸುವವರೇ ಹೆಚ್ಚು. ಕಿಟಕಿ, ಬಾಗಿಲು ಇಡುವುದಲ್ಲ ವಾಸ್ತುಶಾಸ್ತ್ರ.
ಹಾಗಿದ್ದರೆ ವಾಸ್ತುಶಾಸ್ತ್ರ ಎಂದರೆ ಏನು? ನನ್ನ ಅನುಭವದ ಪ್ರಕಾರ, ಕೇಸ್ ಸ್ಟಡಿಗಳ ಪ್ರಕಾರ ಪಂಚ ಮಹಾ ಭೂತಗಳಲ್ಲಿನ (ಭೂಮಿ, ಜಲ, ಅಗ್ನಿ, ಗಾಳಿ, ಧ್ವನಿ) ಶಕ್ತಿಯನ್ನು ಎಷ್ಟು ಬೇಕೋ ಅಷ್ಟು ಸಂಯೋಜಿತ ಪ್ರಮಾಣವನ್ನು ಮಾತ್ರ ಮನೆಯೊಳಗೆ ಹರಿಸುವ ಒಂದು ಮಾರ್ಗ.
ಭೂಮಂಡಲಕ್ಕೆ ಸೂರ್ಯನೇ ಪ್ರಮುಖ ಆಧಾರ. ಆತನ ಕೇಂದ್ರಿತವೇ ಎಲ್ಲವೂ ನಡೆಯುವುದು. ಸೂರ್ಯನ ಆಧಾರದಲ್ಲೇ ಗಾಳಿ, ಅಗ್ನಿ, ಜಲ, ಧ್ವನಿ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿ ತಮ್ಮ ಚಟುವಟಿಕೆ ನಡೆಸಿದರೆ, ಸೂರ್ಯನ ಕಿರಣದ ಮುಖೇನ ಉತ್ಪತ್ತಿಯಾಗುವ ವಿಟಮಿನ್​ಗಳನ್ನು ಬಳಸಿಕೊಳ್ಳುವುದನ್ನು ವಾಸ್ತುಶಾಸ್ತ್ರ ಹೇಳಿಕೊಡುತ್ತದೆ. ಮನುಷ್ಯ ಮೊದಲು ಮನೆ ಹೊರಗೆ ಇದ್ದ, ಮಂಗನಿಂದ ಮಾನವನಾಗಿ ಮನೆಯೊಳಗೆ ಬಂದಿದ್ದಾನೆ. ಸೃಷ್ಟಿಯ ಒಳಗೆ ಇದ್ದವನು ಮನೆಯೊಳಗೆ ಬಂದಿದ್ದಾನೆ. ಪ್ರಕೃತಿ ಅವನಿಗೆ ಬೇಕಾದ್ದನ್ನು ನೀಡುತ್ತಿತ್ತು. ಮನೆಯೊಳಗೆ ಅವನಿಗೆ ಬೇಕಾದ್ದನ್ನು ತಲುಪಿಸುವ ಕೆಲಸ ಮಾಡುವ ಆರ್ಕಿಟೆಕ್ಚರ್​ಗಳನ್ನು ಡಾಕ್ಟರ್ ರೀತಿ ನೋಡಬೇಕೆಂಬುದು ನನ್ನ ಭಾವನೆ.
ವೈಜ್ಞಾನಿಕ ತಳಹದಿಯಲ್ಲಿ ಗಮನಿಸುವುದಾದರೆ, ಹೊರಾಂಗಣದಲ್ಲಿ ಚರ್ಮದ ಮೇಲೆ ನೇರ ಸೂರ್ಯನ ಬೆಳಕಿನಿಂದ ದೇಹವು ವಿಟಮಿನ್ ‘ಡಿ’ ಪಡೆದುಕೊಳ್ಳುತ್ತದೆ. ಆದರೆ, ಎಲ್ಲ ಸಮಯಕ್ಕೂ ಅಲ್ಲ. ಇನ್ನೊಂದು ವಿಷಯವೆಂದರೆ ನೇರಳಾತೀತ (ಅಲ್​ಟ್ರಾವೈಲೆಟ್) ವಿಕಿರಣವು ಮನುಷ್ಯನ ಆರೋಗ್ಯದ ಮೇಲೆ ಅಪಾಯಗಳನ್ನು ಉಂಟು ಮಾಡಬಹುದು. ಇದನ್ನೂ ವಾಸ್ತು ಶಾಸ್ತ್ರದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇದನ್ನು ಮನೆಯೊಳಗೆ ಎಷ್ಟು ಬೇಕೋ, ಮನೆಯ ಯಾವ ಪ್ರದೇಶಕ್ಕೆ ಬೇಕೋ ಅಷ್ಟನ್ನು ಕೊಡುವ ಕೆಲಸವನ್ನು ಆರ್ಕಿಟೆಕ್ಚರ್ ಮಾಡಬೇಕಾಗುತ್ತದೆ.
ಪಂಚ ಮಹಾಭೂತಗಳ ಎನರ್ಜಿಯಲ್ಲಿ ಎಷ್ಟು ಬೇಕೋ ಅಷ್ಟನ್ನು ಅನುಭವಿಸದೇ ವ್ಯತ್ಯಯಗಳು ಬೇರೆ ಬೇರೆ ಪರಿಣಾಮಕ್ಕೆ ಕಾರಣವಾಗುತ್ತದೆ. ಅದನ್ನೇ ಕೇಸ್ ಸ್ಟಡಿಯಲ್ಲಿ ಕಂಡುಕೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ, ಸಾಮರಸ್ಯ ಸೇರಿ ವಿವಿಧ ಆಯಾಮಗಳನ್ನು ಗಮನಿಸಿ ಅಧ್ಯಯನ ಮಾಡಲಾಗಿದೆ. ಇಲ್ಲಿ ಸೂರ್ಯನ ಚಲನೆ ಮೇಲೆ ಎಲ್ಲವೂ ನಿರ್ಧರಿಸಲಾಗುತ್ತದೆ. ಸೂರ್ಯನ ಚಲನೆ ಅರ್ಥ ಮಾಡಿಕೊಂಡರೆ ಸೂರ್ಯ ಪಥ ದಕ್ಷಿಣದಲ್ಲಿದ್ದಾಗ ಚಳಿ ಇರಲಿದೆ, ಮೋಡ ಕಡಿಮೆ ಇರಲಿದೆ. ಆಗ ಸೂರ್ಯನ ರೆಡಿಯೇಷನ್ ಜಾಸ್ತಿ ಬರಲಿದೆ. ಸೆ. 21ರಿಂದ ಮಳೆ ಕಡಿಮೆಯಾಗಿ ಆಕಾಶ ಸ್ವಚ್ಛವಾಗಿ ಸೂರ್ಯನ ಕಿರಣ ನೇರವಾಗಿ ಬೀಳಲಿದೆ. ಒಣ ಹವ ಇರಲಿದೆ. ಒಂದು ಮನೆಯನ್ನು ನಾಲ್ಕು ವಿಭಾಗ ಮಾಡಿ ಯಾವ ಭಾಗಕ್ಕೆ ಯಾವ ಪ್ರಮಾಣದಲ್ಲಿ ಬೆಳಕು, ಶಾಖ, ಗಾಳಿಯ ಪರಿಣಾಮ ಅಂದಾಜಿಸಿಯೇ ಕಿಟಕಿ ಬಾಗಿಲು ಸ್ಥಾಪನೆ ನಿರ್ಧಾರವಾಗುತ್ತದೆ. ಇದೇ ಕಾರಣಕ್ಕೆ ಪೂರ್ವ ಹಾಗೂ ಉತ್ತರಕ್ಕೆ ಮಹತ್ವವಿದೆ. ಹೆಚ್ಚು ಬೆಳಕು ಬೇಕು, ಪಕ್ಕದಲ್ಲಿ ಪಾರ್ಕ್ ಇದೆ. ಹೀಗಾಗಿ, ದೊಡ್ಡ ಕಿಟಕಿ ಬೇಕು ಎಂದು ಕಿಟಕಿ ಕೊಟ್ಟರೆ ಆಗುವುದಿಲ್ಲ. ಇಲ್ಲಿ ಸೂರ್ಯ ಮತ್ತು ದಿಕ್ಕುಗಳೇ ನಿರ್ಣಾಯಕವಾಗುತ್ತದೆ. ಸಾಮಾನ್ಯವಾಗಿ ಪೂರ್ವ ಭಾಗದಲ್ಲಿ ತಣ್ಣಗಿರುತ್ತದೆ, ಪಶ್ಚಿಮ ಭಾಗ ಬಿಸಿಯ ವಾತಾವಾರಣ ಇರಲಿದೆ. ಇದನ್ನು ಗಮನಿಸಿಯೇ ಮನೆಯ ಆಯತ ಇರಬೇಕಾಗುತ್ತದೆ. ಇಲ್ಲಿ ವ್ಯತ್ಯಾಸವಾದಾಗ ಆ ಮನೆಯಲ್ಲಿರುವ ವ್ಯಕ್ತಿಯ ನಡವಳಿಕೆ ವ್ಯತ್ಯಾಸ ಆಗುತ್ತದೆ.
ಕೆಲವರು ಹೇಳುವುದುಂಟು, ಆ ಮನೆಯಲ್ಲಿದ್ದ ಎಷ್ಟು ದುಡಿದರೂ ಹಣವೇ ನಿಲ್ಲುವುದಿಲ್ಲ ಎಂದು. ಆದರೆ, ಹಣಕ್ಕೂ ಮನೆಗೂ ನೇರ ಸಂಬಂಧ ಇರುವುದಿಲ್ಲ. ಆ ಮನೆಯಲ್ಲಿದ್ದಾಗಿನ ನಡವಳಿಕೆಯಿಂದ ಆಗುವ ವ್ಯತ್ಯಾಸ ಪರಿಣಾಮ ಬೀರಿರುತ್ತದೆ.
ಈ ಮಾತನ್ನು ಸುಮ್ಮನೇ ಹೇಳುತ್ತಿಲ್ಲ. ಪ್ರಯೋಗ ಮಾಡಲಾಗಿದೆ, ಅಧ್ಯಯನ ಮಾಡಲಾಗಿದೆ. ವಾಸ್ತು ಬಗೆಗಿನ ವರಾಹ ಮಿಹಿರರ ಬೃಹತ್ ಸಂಹಿತಾ, ಆಯುರ್ವೆದ ವಿಶ್ವಕೋಶ ಸೇರಿದಂತೆ ಅಮೆರಿಕಾ, ಇಂಗ್ಲೆಂಡ್​ನ ಲೇಖಕರು ಸಂಶೋಧಕರ 15 ಕೃತಿಗಳಲ್ಲಿನ ಪ್ರಮುಖ ಸಂಗತಿಗಳನ್ನು ಪರಿಗಣಿಸಲಾಗಿದೆ.
ಈ ಪ್ರಯತ್ನದ ಆರಂಭದಲ್ಲಿ ಖರಗ್​ಪುರದಲ್ಲಿ ಏಳು ಮನೆಗಳಲ್ಲಿ ವಾಸವಾಗಿದ್ದವರ ಮೇಲೆ ಅವಲೋಕನ ಮಾಡಿ ಮನೆಗಳಲ್ಲಿದ್ದವರಲ್ಲಿನ ವ್ಯತ್ಯಾಸಗಳ ಬಗ್ಗೆ ಮಾಹಿತಿ ಕಲೆಹಾಕಿ ವಿಶ್ಲೇಷಿಸಲಾಗಿದೆ. ಕುಟುಂಬ ಸದಸ್ಯರ ನಡುವಿನ ಮನಸ್ತಾಪ, ಆರೋಗ್ಯ ವಿಚಾರಗಳನ್ನು ಗಮನಿಸಲಾಗಿದೆ ಮತ್ತು ಮನೆಗಳನ್ನು ಬದಲಾವಣೆ ಮಾಡಿಸಿ ಪರಿಣಾಮ ಕಂಡುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಜಿರಲೆಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ.
1981ರಿಂದ ಈ ಬಗ್ಗೆ ಗಮನಹರಿಸಿದ್ದು ಸರಿಸುಮಾರು 700 ಕೇಸ್ ಸ್ಟಡಿಗಳ ಆಧಾರದ ಮೇಲೆ ಈ ನಿರ್ಣಯಕ್ಕೆ ಬರಲಾಗಿದೆ. ವೈಜ್ಞಾನಿಕ ದಾಖಲೆ ಕೂಡ ಸಾಕಷ್ಟಿವೆ. ಕಟ್ಟಡಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಸಿದ ಬಳಿಕ ಆದ ಗಮನಾರ್ಹ ಬದಲಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಉದಾಹರಣೆ ಈಗಲೂ ಕಣ್ಣಮುಂದೆ ಇದೆ.
ನಂಬಲು ಅಸಾಧ್ಯ ಎನಿಸಿದರೂ 80ಕ್ಕಿಂತ ಹೆಚ್ಚು ಪ್ರಕರಣದಲ್ಲಿ, ಡೈವರ್ಸ್ ಹಂತಕ್ಕೆ ಬಂದ ದಂಪತಿಗಳು ವಾಸ್ತು ಸಲಹೆ ಪಡೆದು ಬದಲಾವಣೆ ಮಾಡಿಕೊಂಡು ಅನ್ಯೋನ್ಯವಾಗಿದ್ದಿದೆ. ಶಿಕ್ಷಣದಲ್ಲಿ ಪೂರ್ಣ ಹಿಂದೆ ಬಿದ್ದಿದ್ದ ವಿದ್ಯಾರ್ಥಿ ಅತ್ಯುತ್ತಮ ಅಂಕ ಪಡೆದು ಐಐಟಿಯಲ್ಲಿ ಸೀಟು ಪಡೆದು ಈಗ ಅಮೆರಿಕಾದಲ್ಲಿ ನೆಲೆಸಿದವರಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡವರೂ ಇದ್ದಾರೆ. ಇಂದು ನಮ್ಮ ನಡುವೆ ವಾಸ್ತುಶಾಸ್ತ್ರ ಎಂದು ಪ್ರಕಟಗೊಂಡಿರುವ ಅನೇಕ ಪುಸ್ತಕ ನಂಬಲು ಬರುವುದಿಲ್ಲ. ಅವುಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿಲ್ಲ. ಅಲ್ಲದೆ, ನಮ್ಮ ಆರ್ಕಿಟೆಕ್ಚರ್ ಕೋರ್ಸ್​ಗಳಲ್ಲಿ ಸರಿಯಾದ ಶಿಕ್ಷಣವೂ ಕೊಡಲಾಗುತ್ತಿಲ್ಲ ಎಂದು ಹೇಳಲು ಬೇಸರವಾಗುತ್ತದೆ.
ಇನ್ನೂ ಸ್ಪಷ್ಟ ಪದಗಳಲ್ಲಿ ಹೇಳಬೇಕೆಂದರೆ ವಾಸ್ತುಶಾಸ್ತ್ರ ಒಂದು ಬಗೆಯ ವಿಜ್ಞಾನ, ಬೂದಿ ತೆಗೆದುಕೊಂಡು ಹೇಳುವುದಲ್ಲ. ನಮ್ಮ ತಂದೆಯವರು ಪೂರ್ವ ದಿಕ್ಕಿನಲ್ಲಿ ಬಾಗಿಲು ಇರಬೇಕೆಂದು ಎಂದು ಹೇಳುತ್ತಿದ್ದರು, ಏಕೆ ಹೇಳುತ್ತಾರೆ? ಅದರ ಕಾರಣವೇನು ಎಂದು ಹುಡುಕಾಡುವ ಕುತೂಹಲ ಹೆಚ್ಚಾಗಿ ಅಧ್ಯಯನ ಶುರು ಮಾಡಿದೆ. ಥೀಸೀಸ್ ಕೂಡ ಬರೆದೆ. ಒಮ್ಮೆ ಆಂಧ್ರದ ವ್ಯಕ್ತಿಯೊಬ್ಬ ಸ್ನೇಹಿತರಿಗೆ ವಾಸ್ತು ಬಗ್ಗೆ ತಪ್ಪು ಸಲಹೆ ಕೊಟ್ಟಿದ್ದು ಗಮನಕ್ಕೆ ಬಂದಿತ್ತು. ಜನ ಸಾಮಾನ್ಯರಿಗೆ ಈ ರೀತಿ ಆಗಬಾರದು, ನೈಜ ವಿಚಾರ ತಿಳಿಯಬೇಕು ಎಂಬ ಆಶಯದಿಂದ ಪುಸ್ತಕ ರಚನೆ ಕೆಲಸದಲ್ಲಿ ತೊಡಗಿದೆ. 300 ಪುಟಗಳ ಪುಸ್ತಕ ಸಿದ್ಧವಾಗಿದ್ದು, 15ಕ್ಕೂ ಹೆಚ್ಚು ಕೃತಿಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. 87 ಟೆಸ್ಟಿಮೋನಿಯಲ್(ಅನುಭವ ಪಡೆದವರು) ಪೈಕಿ 24ನ್ನು ಕೃತಿಯಲ್ಲಿ ಅವರದೇ ಹಸ್ತಾಕ್ಷರದಲ್ಲೇ ಬಳಸಿಕೊಳ್ಳಲಾಗಿದೆ. ಪ್ರಕೃತಿಯ ಗುಲಾಮ ಎಂದು ಒಪ್ಪಿಕೊಂಡರೆ ನಾವು ಖುಷಿಯಾಗಿರಲು ಸಾಧ್ಯ. ಪಂಚಮಹಾಭೂತ ಮತ್ತು ಸೂರ್ಯ, ವಾಸ್ತು ಕಟ್ಟಡ (ನಾಲ್ಕು ಭಾಗ), ಒಂಬತ್ತು ಮನೆಗಳು (ಒಂದು ಕಟ್ಟಡದ ಗುಣಗಳು), ಬಣ್ಣಗಳು, ಧ್ವನಿ, ಅಲಿಂದಾ (ದಿಕ್ಕುಗಳ ಪರಿಣಾಮ) ಎಲ್ಲವನ್ನೂ ಒಳಗೊಂಡ ವಾಸ್ತುಶಾಸ್ತ್ರದಿಂದ ಖಂಡಿತವಾಗಿ ಹಲವು ಸಮಸ್ಯೆ ಪರಿಹಾರ ಸಿಗಲಿದೆ.
ಇಷ್ಟರ ಮಧ್ಯೆ ವಾಸ್ತು ಹೆಸರಲ್ಲಿ ಜನರಿಗೆ ಮೋಸ ಮಾಡುವವರು ನಮ್ಮ ನಡುವೆ ಇದ್ದಾರೆ. ಮನೆಯೊಳಗೆ ಕಾಲಿಟ್ಟು ಇಲ್ಲಿ ಬಹಳ ಸಮಸ್ಯೆ ಇದೆ ಎಂದು ಹೇಳಿ, ಮಾನಸಿಕವಾಗಿ ಕುಗ್ಗಿಸಿ, ಅರ್ಥ ಆಗದಂತೆ ಒಗಟಾಗಿ ಹೇಳಿ ಹಣ ಕೀಳುತ್ತಾರೆ. ವಾಸ್ತು ಶಾಸ್ತ್ರ ಇರುವುದು ಎಲ್ಲರ ಹಿತಕ್ಕಾಗಿ, ಪಂಚಭೂತಗಳಲ್ಲಿರುವ ಶಕ್ತಿಯನ್ನು ಹಿತಮಿತವಾಗಿ ಬಳಸಿಕೊಳ್ಳುವುದಕ್ಕಾಗಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 15 =
Remember me
