| ಬೈಂದೂರು ಚಂದ್ರಶೇಖರ ನಾವಡ
ಕಾರ್ಗಿಲ್​ನಿಂದ 1999ರ ಮೇ-ಜುಲೈನಲ್ಲಿ ಶತ್ರುಗಳನ್ನು ಹೊರಹಾಕುವ ಸೀಮಿತ ಪ್ರಮಾಣದಲ್ಲಿ ನಡೆದ ‘ಅಪರೇಶನ್ ವಿಜಯ್’ ಒಂದು ಪೂರ್ಣಪ್ರಮಾಣದ ಯುದ್ಧವಲ್ಲವಾದರೂ ಅದರ ಪರಿಣಾಮ ತುಂಬ ವ್ಯಾಪಕವಾಗಿತ್ತು. ಅದು ಕಾರ್ಗಿಲ್ ಸೆಕ್ಟರಿಗೆ ಮಾತ್ರ ಸೀಮಿತವಾದ ಸಂಘರ್ಷವಾಗಿರಲಿಲ್ಲ. ಎರಡು ಪರಮಾಣು ಸಂಪನ್ನ ರಾಷ್ಟ್ರಗಳ ನಡುವಿನ ಸಂಘರ್ಷವಾದದ್ದರಿಂದ ವಿಶ್ವಸಮುದಾಯ ಕೂಡ ಚಿಂತಿತವಾಗಿತ್ತು. ಸಂಪೂರ್ಣ ನಿಯಂತ್ರಣರೇಖೆ ಪ್ರಕ್ಷುಬ್ಧವಾಗಿತ್ತು. ಭಾರತೀಯ ಸೇನೆ ನಿಯಂತ್ರಣ ರೇಖೆಯಲ್ಲಿ ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿತ್ತು. ಸಂಘರ್ಷ ಯಾವುದೇ ಕ್ಷಣದಲ್ಲೂ ಪೂರ್ಣಪ್ರಮಾಣದ ಯುದ್ಧದಲ್ಲಿ ಪರಿವರ್ತನೆಯಾಗುವ ಸಾಧ್ಯತೆಯೂ ಇತ್ತು. ಸ್ಥಿತಿ ಸ್ಪೋಟಕ ಎನ್ನುವಂತಿತ್ತು.
ಜಮ್ಮು ಡಿವಿಜನ್ನಿನ ಪಲ್ಲನವಾಲಾ ಸೆಕ್ಟರಿನ ನಿಯಂತ್ರಣ ರೇಖೆಯಲ್ಲಿ ನಿಯೋಜನೆಗೊಂಡ ಮಹಾರ್ ರೆಜಿಮೆಂಟಿನ 19ನೇ ಬಟಾಲಿಯನ್​ನಲ್ಲಿ ಸೇವೆಯಲ್ಲಿದ್ದ ನನಗೆ ಆ ದಿನಗಳು ಮರೆಯಲು ಸಾಧ್ಯವಿಲ್ಲ. ಜನರಿಂದ ಸದಾ ಗಿಜಿಗುಡುತ್ತಿದ್ದ ಪಲ್ಲನವಾಲಾ ಟೌನ್ ಉಭಯ ದೇಶಗಳ ನಡುವಿನ ಸಂಘರ್ಷದ ಬಿಸಿ ಹೆಚ್ಚುತ್ತಿದ್ದಂತೆ ನಿರ್ಜನವಾಗಿತ್ತು. ನಿಯಂತ್ರಣ ರೇಖೆಯಿಂದ ಕೆಲವೇ ಕಿ.ಮೀ. ಸಮೀಪದ ನಗರದ ಅಂಗಡಿ-ಮುಂಗಟ್ಟು, ಜನವಸತಿ ಪ್ರದೇಶದ ಮೇಲೆ ಮೇ ತಿಂಗಳ ಎರಡು-ಮೂರನೇ ವಾರದಲ್ಲಿ ಪಾಕಿಸ್ತಾನದ ಶೆಲ್ ದಾಳಿ ಹೆಚ್ಚುತ್ತಿದ್ದಂತೆ ಸುರಕ್ಷಿತ ಸ್ಥಾನಗಳಿಗೆ ಜನರು ಗುಳೆ ಹೋಗಬೇಕಾಯಿತು. ಅಖ್ನೂರ್​ನಿಂದ ಪಲ್ಲನವಾಲಾ ತಲುಪಬೇಕಾದರೆ ಮಧ್ಯದಲ್ಲಿ ಸಿಗುವ ಜೋಡಿಯಾ ಟೌನ್ ಜನರೂ ತಮ್ಮ ಮನೆಗಳನ್ನು ಖಾಲಿ ಮಾಡಬೇಕಾಯಿತು.
ರೈತಾಪಿವರ್ಗದ ಪಡಿಪಾಟಲು: ನಿಯಂತ್ರಣ ರೇಖೆಯಿಂದ 2-3 ಕಿ.ಮೀ. ಹಿಂದೆಯೇ ಸೈನಿಕ ಚೆಕ್​ಪೋಸ್ಟ್ ಇರುತ್ತಿದ್ದವು. ಅಲ್ಲಿಂದ ಮುಂದಕ್ಕೆ ತಮ್ಮ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತಾಪಿವರ್ಗಕ್ಕೆ ಹಗಲಲ್ಲಿ ಸೇನೆಯ ವತಿಯಿಂದ ವಿತರಿಸಲಾದ ಪಾಸ್ ತೋರಿಸಿ ಹೋಗಲು ಅನುಮತಿ ಇತ್ತು. 1971ರ ಯುದ್ಧದಲ್ಲಿ ನಿಯಂತ್ರಣ ರೇಖೆಯಿಂದ 30 ಕಿ.ಮೀ. ದೂರದವರೆಗೂ ನುಗ್ಗಿದ್ದ ಪಾಕಿಸ್ತಾನಿಯರ ಅಟ್ಟಹಾಸವನ್ನು ಕಂಡು ಕೇಳಿದ್ದ ವೃದ್ಧರ ಬಾಯಿಯಿಂದ ಭಯವಾಹಕ ನೆನಪಿನ ಸುರುಳಿಯನ್ನು ಕೇಳುತ್ತಿದ್ದ ಯುವಕರು ಇನ್ನಷ್ಟು ಗಾಬರಿಗೊಳ್ಳುತ್ತಿದ್ದರು. ಸುಮಾರು ಮೂರೂವರೆ ದಶಕಗಳಿಂದ ಶಾಂತ ಗಡಿಯನ್ನು ಕಂಡು ಬೆಳೆದು ದೊಡ್ಡವರಾಗಿದ್ದ ಯುವಪೀಳಿಗೆ ಯುದ್ಧದ ಕಾಮೋಡ ಕಂಡು ಕಂಗಾಲಾಗಿದ್ದರು. ಹಳ್ಳಿಗೆ ಹಳ್ಳಿಯೇ ಖಾಲಿಯಾಗಿದ್ದವು. ಜಾನುವಾರುಗಳು ಅನಾಥವಾಗಿದ್ದವು.
ಪಾಕಿಸ್ತಾನದ ಕಡೆಯಿಂದ ನಡೆಯುವ ಮೋರ್ಟಾರ್ ಫಾಯರ್​ಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ವೃದ್ಧರು, ಮಹಿಳೆಯರು, ಮಕ್ಕಳು, ಜಾನುವಾರುಗಳು ಬಲಿಯಾಗುತ್ತಿದ್ದ ಹೃದಯವಿದ್ರಾವಕ ಘಟನೆಗಳು ನಿತ್ಯ ಎಂಬಂತೆ ಘಟಿಸುತ್ತಿದ್ದವು. ಸುಂದರ ಆಶಿಯಾನವನ್ನು ಕಟ್ಟಿಕೊಂಡು ನೆಮ್ಮದಿಯಿಂದ ಜೀವನ ಕಳೆಯುತ್ತಿದ್ದವರಿಗೆ ಒಮ್ಮೆಗೇ ಯುದ್ಧದ ಕಾಮೋಡ ಕವಿದಾಗ ಸಹಜವಾಗಿಯೇ ಜೀವನ ನರಕಸದೃಶವಾಗಿತ್ತು.
ದೂರದ ಕಾರ್ಗಿಲ್​ನಲ್ಲಿ ನಡೆಯುತ್ತಿದ್ದ ಸೈನಿಕ ಸಂಘರ್ಷ ಗಡಿಯುದ್ದಕ್ಕೂ ವಾತಾವರಣ ಉದ್ವಿಗ್ನವಾಗಿಸಿತ್ತು. ಸಂಪೂರ್ಣ ನಿಯಂತ್ರಣ ರೇಖೆ ಎರಡೂ ಕಡೆಯಿಂದ ನಡೆಯುತ್ತಿದ್ದ ಫಾಯರಿಂಗ್​ನಿಂದ ಸಕ್ರಿಯವಾಗಿತ್ತು. ಜೀರೋಲೈನ್​ನಲ್ಲಿ ನಿಯೋಜನೆಗೊಂಡಿದ್ದ ಯೋಧರು ಪೋಸ್ಟ್​ಗಳಲ್ಲಿ ಎರಡೆರಡು ಗಂಟೆಗಳಿಗೊಮ್ಮೆ ಪಾಳಿ ಬದಲಿ ಮಾಡಿಕೊಳ್ಳುತ್ತ ಶತ್ರುಗಳ ಕಡೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತಿದ್ದರು. ಸಣ್ಣ ರೈಫಲ್​ಗಳ ಫಾಯರ್ ನಿರಂತರ ಎಂಬಂತೆ ನಡೆಯುತ್ತಿತ್ತು. ಚಂದ್ರನ ಬೆಳಕಿಲ್ಲದ ದಿನಗಳಲ್ಲಿ ರಾತ್ರಿಯ ಕಾರಿರುಳಿನಲ್ಲಿ ಪ್ಯಾರಾ ಫಾಯರ್ ಮಾಡಲಾಗುತ್ತಿತ್ತು. ಆಗಸದ ಎತ್ತರದಲ್ಲಿ ಒಂದೆರಡು ನಿಮಿಷಗಳ ಕಾಲ ಹೊತ್ತಿ ಉರಿಯುತ್ತಿದ್ದ ಪ್ಯಾರಾ ಫಾಯರ್​ನಿಂದ ಸುತ್ತಲ ದೃಶ್ಯ ಸ್ಪಷ್ಟವಾಗಿ ಕಾಣುತ್ತಿತ್ತು. ದೂರದವರೆಗೆ ದೃಷ್ಟಿ ಹಾಯಿಸಿ ವೈರಿಗಳು ಇಲ್ಲವೆಂದು ಖಚಿತವಾದಾಗ ನಿರಾಳವೆನಿಸುತ್ತಿತ್ತು. ಜೀರೋಲೈನ್​ನಲ್ಲಿ ತೈನಾತಾದ ಸೈನಿಕರಿಗೆ ಮದ್ದುಗುಂಡುಗಳು ಮತ್ತು ಆಹಾರ ತಲುಪಿಸಲು ಆಳೆತ್ತರದ ಕುಣಿ ತೋಡಿ ದಾರಿ ಮಾಡಲಾಗಿತ್ತು.
ನಾಗರಿಕರ ಬವಣೆ: ‘ಅಪರೇಶನ್ ವಿಜಯ’ದ ಆ ಸಮಯದಲ್ಲಿ ಲೈನ್ ಆಫ್ ಕಂಟ್ರೋಲ್​ನಲ್ಲಿ ನಿಯೋಜನೆಗೊಂಡ ಸಕ್ರಿಯ ಫೀಲ್ಡ್ ಬಟಾಲಿಯನ್​ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಎಲ್ಲರ ಬಳಿಯೂ ಇರಬಹುದು. ಈಗಿನಂತೆ ಆಗಿನ್ನೂ ಮೊಬೈಲ್ ಕ್ರಾಂತಿ ಆಗಿಲ್ಲವಾದದ್ದರಿಂದ ಸಂಪರ್ಕ ಕೊರತೆಯಿಂದಾಗಿ ಸೈನಿಕರ ಜತೆಯಲ್ಲಿ ಅವರ ಕುಟುಂಬಸ್ಥರೂ ಮಾನಸಿಕವಾಗಿ ಬಳಲಬೇಕಾಯಿತು. ಸೋಲಿನ ಹತಾಶೆಯ ಪರಿಣಾಮವಾಗಿ ಪಾಕಿಸ್ತಾನದ ಕಡೆಯಿಂದ ಪರಮಾಣು ಅಸ್ತ್ರ ಪ್ರಯೋಗವಾದರೆ ಎನ್ನುವ ಭಯ ನಾಗರಿಕರನ್ನು ಕಾಡಿತ್ತು. ಸುಖ, ಸಮೃದ್ಧಿಯಿಂದ ಜನರಿಂದ ತುಂಬಿ ಮೆರೆಯುತ್ತಿದ್ದ, ಕಿಲಕಿಲ ನಗುತ್ತಿದ್ದ ಪಲ್ಲನವಾಲಾದಂತಹ ಗಡಿಯಂಚಿನ ಪಟ್ಟಣಗಳು ಬಿಕೋ ಎನ್ನುತ್ತಿತ್ತು. ತಮ್ಮ ಜನ್ಮಭೂಮಿಯನ್ನು ತೊರೆದು ನಿರಾಶ್ರಿತರಂತೆ ಬದುಕಬೇಕಾದ ಸಾಮಾನ್ಯ ಜನರ ಮಾನಸಿಕ ಸ್ಥಿತಿ ಹೇಗಿರಬಹುದು? ಊಹಿಸಿಕೊಳ್ಳುವುದು ಸಹ ಕಠಿಣ.
ಮಾನವ ಇತಿಹಾಸದಲ್ಲಿ ನಡೆದ ಅಸಂಖ್ಯ ಯುದ್ಧಗಳ ಭೀಕರ ಪರಿಣಾಮವನ್ನು ಕೇವಲ ಇತಿಹಾಸದ ಪುಸ್ತಕಗಳಲ್ಲಿ ಓದಿ ತಿಳಿದ ಜನರಿಗೆ ಗಡಿಯಲ್ಲಿ ಪಹರೆಗೆ ನಿಂತ ಯೋಧರ, ನೆಲೆಸಿದ ನಾಗರಿಕರ ಬವಣೆ ಕಟ್ಟುಕಥೆಯಾಗಿ ಕಾಣಬಹುದು. ಗಡಿಘರ್ಷಣೆಯಿಂದ ಸಾವಿರಾರು ಮೈಲು ದೂರದಲ್ಲಿ ಹಾಯಾಗಿ ತಿಂದುಡು ಸುಖವಾಗಿ ನಿದ್ದೆ ಸವಿಯುವವರು ಪಾಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸಿ ಎಂದು ಘೊಷಣೆ ಕೂಗಬಲ್ಲರು. ಸೇನೆಯನ್ನು ತರತರವಾಗಿ ನಿಂದಿಸಬಲ್ಲರು. ಗಡಿಯಲ್ಲಿ ಕರ್ತವ್ಯನಿರತ ಯೋಧರ, ಹಲವಾರು ತಲೆಮಾರುಗಳಿಂದ ಅಲ್ಲಿ ನೆಲೆಸಿರುವ ನಾಗರಿಕರ ಕಠಿಣ ಬದುಕಿನ ಬವಣೆಯ ಯಥಾರ್ಥತೆಯ ಅನುಭವ ಅವರಿಗಾಗುವುದು ಸಾಧ್ಯವೇ?
(ಲೇಖಕರು ನಿವೃತ್ತ ಸೈನಿಕರು, ಹವ್ಯಾಸಿ ಬರಹಗಾರರು)
ಕಾರ್ಗಿಲ್​ನಲ್ಲಿ ಸಂಘರ್ಷ ಕಾವೇರಿದಂತೆ ಯೋಧರ ದಿನನಿತ್ಯದ ಚಟುವಟಿಕೆಗಳ ಮೇಲೆ ಅದು ತನ್ನ ಪ್ರಭಾವ ಬೀರಿತು. ಪಾಕಿಸ್ತಾನಿಯರಿಗೆ ನಾವು ಹಾಗೂ ನಮಗೆ ಅವರು ಅಸ್ಪಷ್ಟವಾಗಿಯಾದರೂ ಸರಿ ಕಾಣುವಷ್ಟು ಸನಿಹದಲ್ಲಿದ್ದರಿಂದ ಉಭಯತ್ರರು ಪರಸ್ಪರರ ಚಲನವಲನ ವೀಕ್ಷಿಸಬಹುದಾಗಿತ್ತು. ಶಾಂತಿ ಕಾಲದಲ್ಲಿ ಪರಸ್ಪರರು ದೂರದಲ್ಲೇ ಶಿಷ್ಟಾಚಾರಗಳಿಂದ ವಂದನೆ ಪ್ರತಿವಂದನೆ ಮಾಡಿಕೊಳ್ಳುವ ಸ್ನೇಹಮಯ ವಾತಾವರಣ ಅಲ್ಲಿತ್ತು. ಆಗಾಗ ಅಲ್ಲಲ್ಲಿ ಭಾರತ-ಪಾಕ್ ಲೋಕಲ್ ಕಮಾಂಡರ್​ಗಳ ಕೋರಿಕೆಯ ಮೇರೆಗೆ ನಡೆಯುತ್ತಿದ್ದ ಫ್ಲಾಗ್ ಮೀಟಿಂಗ್​ಗಳಲ್ಲಿ ಒಂದೆಡೆ ಸೇರುವ, ಪರಸ್ಪರರು ಮಾತನಾಡುವ ಅವಕಾಶ ದೊರೆಯುತ್ತಿದ್ದವು. ಆದರೆ ಕಾರ್ಗಿಲ್ ಕದನದ ಕಾವೇರುತ್ತಿದ್ದಂತೆ ಉಭಯ ಸೈನಿಕರು ಪರಸ್ಪರರ ರಕ್ತಪಿಪಾಸುಗಳಾದಂತೆ ಅಲ್ಲಿನ ಪರಿದೃಶ್ಯ ಸಂಪೂರ್ಣ ಬದಲಾಯಿತು. ದಿನದಲ್ಲೂ ನಡೆಯುತ್ತಿದ್ದ ಫಾಯರಿಂಗ್​ನಿಂದಾಗಿ ನಮ್ಮ ಚಲನೆಗಳಿಗೆ ಬ್ರೇಕ್ ಬಿದ್ದವು. ಬೆಳಗ್ಗೆಯೇ ಪೂರ್ಣ ದಿನಕ್ಕಾಗುವಷ್ಟು ಖಿಚಡಿ ಅಥವಾ ಪೂರಿ ಪಲ್ಯ ನೀಡಲಾಗುತ್ತಿತ್ತು. ಇನ್ನು ರಾತ್ರಿ ಬಂಕರ್​ಗಳಲ್ಲಿ ಬೂಟು ತೊಟ್ಟು, ಮಗ್ಗುಲಲ್ಲಿ ಹೆಲ್ಮೆಟ್, ಮ್ಯಾಗಜಿನ್ ಲೋಡ್ ಮಾಡಿರುವ ಬಂದೂಕು ಇಟ್ಟುಕೊಂಡೇ ಮಲಗಬೇಕಾದ ಸ್ಥಿತಿ ಇತ್ತು. ರಾತ್ರಿಯಿಡೀ ಆಗಾಗ್ಗೆ ನಡೆಯುತ್ತಿದ್ದ ಲೈಟ್ ಮಶೀನ್ ಗನ್ ಫಾಯರಿಂಗ್ ಯೋಧರಿಗೆ ಶತ್ರು ತನ್ನ ಪೋಸ್ಟ್​ನಲ್ಲೇ ಇರುವ ಹಾಗೂ ತಮ್ಮೆಡೆಗೆ ಬರುತ್ತಿಲ್ಲದರ ಖಾತರಿ ನೀಡುವಂತಿರುತ್ತಿತ್ತು. ವೈರಿಗಳ ಪೋಸ್ಟ್ ಕಡೆಯಿಂದ ಫಾಯರಿಂಗ್ ನಿಂತರೆ ಅವರೆಲ್ಲಿ ತಮ್ಮೆಡೆಗೆ ಬರುತ್ತಿರುವರೋ ಎನ್ನುವ ಸಂಶಯ ಕಾಡುವ ಸ್ಥಿತಿ ಇತ್ತು. ಸೆಕ್ಟರ್​ನ ಎಲ್ಲೋ ನಡೆಯುವ ರೈಡ್​ಗಳ ಪ್ರತೀಕಾರ ಇನ್ನೆಲ್ಲೋ ತೆಗೆದುಕೊಳ್ಳುವ ಅಪನಂಬಿಕೆಯ ವಾತಾವರಣದಿಂದಾಗಿ ಯೋಧರ ಮಾನಸಿಕ ಶಾಂತಿ ಕಾಣೆಯಾಗಿತ್ತು. ಯಾವ ಸಮಯದಲ್ಲಿ ಏನಾಗುವುದೋ ಎನ್ನುವ ಚಿಂತೆ ಕಾಡುತ್ತಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 13 =
Remember me
