ಬೆಂಗಳೂರು:ಸಮ ಸಮಾಜದ ನಿರ್ವಣದಲ್ಲಿ ಕಾಯಕ ಮತ್ತು ದಾಸೋಹ ತತ್ವಗಳ ಪ್ರೇರಣೆಯಲ್ಲಿ ಆಡಳಿತ ನಡೆಸುವ ಸಂಕಲ್ಪದ ಭಾಗವಾಗಿ ಸಮಾಜದಲ್ಲಿ ಸಂಪತ್ತಿನ ನ್ಯಾಯಯುತ ಹಂಚಿಕೆ ಮಾಡುವ ಆಶಯಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 15ನೇ ಬಾರಿಗೆ ಮಂಡಿಸಿರುವ 2024-25ನೇ ಸಾಲಿನ ಬಜೆಟ್ ಪ್ರಸ್ತುತಗೊಂಡಿದೆ. ದೇಶದ ಯಾವುದೇ ರಾಜ್ಯದಲ್ಲಿ ನೀಡದ ನೇರ ನೆರವು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡಿ, ಮುಂದಿನ ಆರ್ಥಿಕ ಸಾಲಿಗೂ ಬಜೆಟ್​ನಲ್ಲಿ ಅನುದಾನ ಮೀಸಲಿಡುವ ಮೂಲಕ ಗ್ಯಾರಂಟಿ ಬಗೆಗಿನ ಅಪಪ್ರಚಾರಕ್ಕೆ ಉತ್ತರ ಸಿಕ್ಕಂತಾಗಿದೆ.
ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಜನರ ಆಶೋತ್ತರ ಆಧರಿಸಿವೆ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ ನಡೆದಿದೆ. ನಿಷ್ಪಕ್ಷಪಾತ, ನ್ಯಾಯಯುತ ಸಮಾಜ ನಿರ್ವಣಕ್ಕೆ ಸಂಪತ್ತಿನ ಮರು ಹಂಚಿಕೆ ಕಾರ್ಯಕ್ರಮವಾಗಿ ಕಂಡಿದೆ. 2024-25ನೇ ಸಾಲಿಗೆ ಗ್ಯಾರಂಟಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಆ ಮೂಲಕ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ., ಅನ್ನ ಭಾಗ್ಯದ ಮೂಲಕ ನೆರವು, ಸರ್ಕಾರಿ ಬಸ್​ನಲ್ಲಿ ಮಹಿಳೆಯರ ಉಚಿತ ಪ್ರಯಾಣ, ಯುವ ನಿಧಿ ಆಸರೆ ಮೂಲಕ ಬಡ, ಬಡ ಮಧ್ಯಮ ಹಾಗೂ ಮಧ್ಯಮ ವರ್ಗಕ್ಕೆ ಒಂದು ಆಸರೆ ಸಿಕ್ಕಂತಾಗುತ್ತದೆ. ಸರಾಸರಿ ಮಾಸಿಕ ಐದು ಸಾವಿರ ರೂ.ಗಳಷ್ಟು ಹಣ ಸಿಕ್ಕರೆ ಸಹಜವಾಗಿ ಕುಟುಂಬಕ್ಕೆ ಸಮಾಧಾನ ಲಭಿಸಲಿದೆ. ಮುಖ್ಯವಾಗಿ ಕೊಳ್ಳುವ ಸಾಮರ್ಥ್ಯ ವೃದ್ಧಿಸಲಿದೆ. ಒಟ್ಟಾರೆ ದುರ್ಬಲ ವರ್ಗದ ಜನರಿಗೆ ಗೌರವಯುತ ಸ್ಥಾನಮಾನ ದೊರಕಿಸಲು ಆದ್ಯತೆ ನೀಡಲಾಗಿದೆ.
ರೈತರಿಗೆ ವರದಾನ:ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸುವ ಉದ್ದೇಶದಿಂದ ಹಲವು ಉಪಕ್ರಮ ಪ್ರಸ್ತಾಪಿಸಿದ್ದು, ಭವಿಷ್ಯದಲ್ಲಿ ಖಂಡಿತ ಫಲಕೊಡಲಿದೆ. ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿಯನ್ನು ಉತ್ತೇಜಿಸುವ ಹೊಸ ಯೋಜನೆ ‘ಕರ್ನಾಟಕ ರೈತ ಸಮೃದ್ಧಿ’ ರೈತಾಪಿ ವಲಯದಲ್ಲಿ ಹೊಸ ಆಶಾಭಾವನೆ ಹುಟ್ಟಿಸುವುದು ಖಚಿತ. ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ರೈತರ ಆದಾಯದಲ್ಲಿ ಸುಸ್ಥಿರತೆ ಕಂಡುಕೊಳ್ಳಲು ಇದು ಅನುಕೂಲವಾಗಬಹುದೆಂಬ ವಾದವಿದೆ. ಮಣ್ಣಿನ ಗುಣ, ಮಾರುಕಟ್ಟೆ ಬೇಡಿಕೆ ಆಧರಿಸಿ ರೈತರಿಗೆ ಮಾರ್ಗದರ್ಶನ ನೀಡುವುದರಿಂದ ಆರಂಭವಾಗಿ, ಹೊಸ ಕೃಷಿ ಪದ್ಧತಿ- ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸಿ, ಬೆಂಬಲ ನೀಡುವುದು, ಮೌಲ್ಯವರ್ಧನೆ, ಮಾರುಕಟ್ಟೆಯ ಬೆಂಬಲ ನೀಡುವ ಪ್ರಸ್ತಾಪ ಇಡೀ ಕೃಷಿಗೆ ಹೊಸ ಆಯಾಮ ನೀಡುವ ನಿರೀಕ್ಷೆ ಹುಟ್ಟಿಸಿದೆ.
ರಫ್ತು ಉತ್ತೇಜನಕ್ಕಾಗಿ ವಿಮಾನ ನಿಲ್ದಾಣಗಳ ಸಮೀಪ ಆಹಾರ ಪಾರ್ಕ್ ಸ್ಥಾಪನೆಯ ಕಲ್ಪನೆ ಕೂಡ ವಿಶೇಷವಾದದ್ದು. ಭವಿಷ್ಯದಲ್ಲಿ ಇದು ಕೃಷಿ ಕ್ಷೇತ್ರವನ್ನು ಎತ್ತರಕ್ಕೆ ಏರಿಸುವುದಕ್ಕೆ ಸಹಕಾರಿ. ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಕೂಡ ಆಡಳಿತಾತ್ಮಕ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ದೊರಕಿಸಬಹುದು.
ಬರ ಪರಿಸ್ಥಿತಿಯಲ್ಲೂ ರೈತರಿಗೆ ಆಸರೆಯಾಗಬಹುದಾದ ಸಿರಿಧಾನ್ಯ ಬೆಳೆ ಪ್ರೋತ್ಸಾಹಕ್ಕಾಗಿ ‘ನಮ್ಮ ಮಿಲ್ಲೆಟ್’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಮತ್ತು ಪೂರಕವಾಗಿ ಮೌಲ್ಯವರ್ಧನೆಗೆ ತಾಂತ್ರಿಕತೆ ನೆರವು ಪಡೆಯುವುದು ರೈತ ಸಮುದಾಯಕ್ಕೆ ದೊಡ್ಡ ಆಸರೆಯಾಗಬಹುದು.
ಕೃಷಿಗೆ ಸಂಬಂಧಿಸಿದ ದತ್ತಾಂಶ ರೂಪಿಸಲು ಮಷಿನ್ ಲರ್ನಿಂಗ್, ಉಪಗ್ರಹ ಚಿತ್ರ, ಸೆನ್ಸರ್​ಗಳ ಬಳಕೆ, ಬೆಳೆಗಳ ತಳಿ ಸಂರಕ್ಷಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ, ಕೃಷಿ ಭಾಗ್ಯ ಮುಂದುವರಿಕೆ, ಸಣ್ಣ ಸರೋವರ ನಿರ್ವಣ, ಇ-ಸ್ಯಾಪ್ ತಂತ್ರಾಂಶದ ಸೌಲಭ್ಯ, ಕೃಷಿ ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ಪ್ರಸ್ತಾಪ ಹೊಸ ಭರವಸೆ ಹುಟ್ಟುಹಾಕಿದೆ. ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿರುವ ತೋಟಗಾರಿಕೆ ಕ್ಷೇತ್ರಕ್ಕೆ ಬೆಂಬಲವಾಗಿ ಒಂದಷ್ಟು ಯೋಜನೆ ಪ್ರಕಟಿಸಲಾಗಿದೆ. ಕಿಸಾನ್​ವಾಲ್ ಸ್ಥಾಪನೆ ಹಾಗೂ ಪುಷ್ಪೋದ್ಯಮ ಪ್ರೋತ್ಸಾಹಿಸಲು ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆ, ಸ್ಪೈಸ್ ಪಾರ್ಕ್ ಖಂಡಿತವಾಗಿ ಈ ಕ್ಷೇತ್ರದವರ ನೆರವಿಗೆ ಬರಲಿದೆ. ಅವರ ಆರ್ಥಿಕ ಮಟ್ಟ ಉತ್ತಮಪಡಿಸಲು ಉಪಯೋಗವಾಗಲಿದೆ.
ಆರೋಗ್ಯ ಶಿಕ್ಷಣಕ್ಕೂ ಒತ್ತು:ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಮೂಲಸೌಕರ್ಯ ಹೆಚ್ಚಿಸಲು ಗಮನಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಶಾಲಾ, ಕಾಲೇಜು ಕೊಠಡಿ ನಿರ್ವಣ, ದುರಸ್ತಿ, ಶೌಚಾಲಯ ನಿರ್ವಣಕ್ಕೆ ದೊಡ್ಡ ಮೊತ್ತ ಮೀಸಲಿಡುವ ಮೂಲಕ ಪರಿಣಾಮಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ. ಮೂಲಸೌಕರ್ಯಕ್ಕಷ್ಟೇ ಆದ್ಯತೆ ನೀಡದೆ ಗುಣಾತ್ಮಕ ಶಿಕ್ಷಣಕ್ಕೂ ಗಮನ ನೀಡಲಾಗಿದೆ. ಅಲ್ಲದೆ ಸಾಮರಸ್ಯ, ವೈಜ್ಞಾನಿಕ ಮನೋಭಾವ ಕಲಿಸಲು ನಾವು ಮನುಜರು ಹೆಸರಿನ ವಿಚಾರ ವಿಮರ್ಶೆ, ಸಂವಾದ ಚಟುವಟಿಕೆ ಇಂದಿನ ಅಗತ್ಯಗಳಲ್ಲೊಂದು. ಆರೋಗ್ಯ ಕ್ಷೇತ್ರದಲ್ಲಿ ಲ್ಯಾಬ್​ಗಳ ಸ್ಥಾಪನೆ, ಆಧುನಿಕ ಉಪಕರಣಗಳ ಖರೀದಿಯಂತಹ ತೀರ್ಮಾನ ಸರ್ಕಾರಿ ಆರೋಗ್ಯ ಸೇವೆಗೆ ಆನೆ ಬಲ ನೀಡುವುದು ನಿಶ್ಚಿತ. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಆಯಾಮದ ಪ್ರಯತ್ನ, ಕೌಶಲಪೂರ್ಣ ಮಾನಸಂಪನ್ಮೂಲ ಸೃಷ್ಟಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲಿದೆ.
ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
