ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಮಾಡಿಕೊಂಡ ಸ್ವಯಂಕೃತ ಅಪರಾಧಗಳನ್ನು ಸರಿಪಡಿಸಿಕೊಳ್ಳುತ್ತ ಸಾಗಿರುವ ರಾಜ್ಯ ಬಿಜೆಪಿ, ಲೋಕಸಭೆ ಚುನಾವಣೆಗೆ ಮೈಕೊಡವಿ ಸಿದ್ಧವಾಗುತ್ತಿದೆ. ಸಕಾರಾತ್ಮಕ ಸಂಗತಿಗಳನ್ನು ಮುಂದಿಟ್ಟುಕೊಂಡು, ತನ್ನ ಹಳೆಯ ಶೈಲಿಯಲ್ಲಿ ತಳಮಟ್ಟದ ಕಾರ್ಯಚಟುವಟಿಕೆಗೆ ಮೊರೆಹೋಗಲಿದೆ. ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಕಾರ್ಯಕಾರಿಣಿ ಶನಿವಾರ ನಡೆಯಿತು. ‘ಸ್ಪಷ್ಟ ನಿಲುವು’, ‘ಸಂಘಟಿತ ಪ್ರಯತ್ನ’, ‘ಸಕಾರಾತ್ಮಕ ವಿಚಾರ’ವೆಂಬ ಅಸ್ತ್ರಗಳನ್ನು ಬತ್ತಳಿಕೆಯಲ್ಲಿಟ್ಟುಕೊಂಡು 28ಕ್ಕೆ 28 ಕ್ಷೇತ್ರವನ್ನೂ ಗೆಲ್ಲಲು ನೇರವಾಗಿ ಜನರ ಮುಂದೆ ಹೋಗುವ ಬಗ್ಗೆ ತೀರ್ಮಾನ ಕೈಗೊಂಡರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಗುಂಗಿನಲ್ಲಿರುವ ಬಿಜೆಪಿ, ಕಾರ್ಯಕಾರಿಣಿಯಲ್ಲಿ ರಾಮನ ಪ್ರತಿಮೆಗೆ ಅಭಿಷೇಕ ಮಾಡಿ, ಜಯಘೋಷ ಹಾಕಿಯೇ ಸಭೆಗೆ ಮುನ್ನುಡಿ ಬರೆದಿದ್ದು ವಿಶೇಷ. ಜತೆಗೆ ಈಗ ಎದ್ದಿರುವ ಶ್ರೀರಾಮನ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಸುಳಿವೂ ಹೊರಹೊಮ್ಮಿತು.
ಪ್ರಮುಖವಾಗಿ ಕಾರ್ಯಕಾರಿಣಿಯಲ್ಲಿ ಎರಡು ನಿರ್ಣಯ ಕೈಗೊಳ್ಳಲಾಯಿತು. 550 ವರ್ಷಗಳ ಭಾರತೀಯರ, ಹಿಂದು ಸಮಾಜದ ಬಹುನಿರೀಕ್ಷಿತ ಬೇಡಿಕೆ ಈಡೇರಿಸಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ವಣ, ಪ್ರಾಣ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು. ಹಾಗೆಯೇ, ರಾಜ್ಯ ಸರ್ಕಾರ ಎಸ್​ಸಿಎಸ್​ಪಿ ಮತ್ತು ಟಿಎಸ್ಪಿಗೆ ಮೀಸಲಿಟ್ಟ ಹಣದ ಪೈಕಿ 11 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡ ವಿಚಾರವನ್ನು ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತು.
ಹಾಗೆಯೇ, ರಾಜ್ಯ ಸರ್ಕಾರ ರೈತರ ವಿರೋಧಿ, ದಲಿತ ವಿರೋಧ ನೀತಿ ಅನುಸರಿಸುತ್ತಿದೆ ಎಂಬುದು ಸಾಬೀತಾಗಿದೆ. ದಲಿತ ವರ್ಗಕ್ಕೆ ಶೋಷಿತ ವರ್ಗಕ್ಕೆ ಮೀಸಲಿಟ್ಟ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಬಳಸಿಕೊಳ್ಳುವ ಮೂಲಕ ಅದರ ಫಲಾನುಭವಿಗಳನ್ನು ವಂಚಿಸಲಾಗಿದೆ. ಈ ಸಂಗತಿ ಬಗ್ಗೆ ಜನಜಾಗೃತಿ ಮೂಡಿಸಲು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲು ತೀರ್ವನಿಸಲಾಯಿತು.
| ಸಿದ್ಧತೆಗೆ ವೇಳಾಪಟ್ಟಿ
ಮುಂದಿನ ದಿನಗಳಲ್ಲಿ ಇಡೀ ಸಂಘಟನೆಯನ್ನು ಸಕ್ರಿಯವಾಗಿಡುವ ನಿಟ್ಟಿನಲ್ಲಿ ಸಮಯ ಸಾರಿಣಿಯನ್ನು ಹಾಕಿಕೊಂಡಿರುವ ಪಕ್ಷ ಪಕ್ಷದ ನಾಯಕರಿಗೆ ಜವಾಬ್ದಾರಿಯನ್ನೂ ಹಂಚಿಕೆ ಮಾಡಿದೆ. ಸಮಾವೇಶ ಆಯೋಜನೆ, ಪ್ರಚಾರ ಅಭಿಯಾನ, ಪಕ್ಷದ ಸಭೆಗಳನ್ನು ಸಂಘಟಿಸುವ ನೀಲಿನಕ್ಷೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಚುನಾವಣೆ ವರೆಗೂ ಪೂರ್ಣ ಸಮಯ ನೀಡಿ ಎಂದು ಕೋರಲಾಗಿದೆ.
ಪ್ರಮುಖ 5 ತೀರ್ಮಾನಗಳು
* ಫೆ.5ರಿಂದ 25ರೊಳಗೆ ಕೇಂದ್ರದ ಯೋಜನೆಗಳ ಫಲಾನುಭವಿ ಮಹಿಳೆಯರು, ಸ್ವಸಹಾಯ ಸಂಘಗಳನ್ನು ಭೇಟಿ ಮಾಡುವುದು, ತಾಲೂಕು, ಜಿಲ್ಲಾಮಟ್ಟದ ‘ನಾರಿ ಶಕ್ತಿ’ ಸಮಾವೇಶ ಆಯೋಜನೆ.
* ಫೆ.18ರಿಂದ ಜಿಲ್ಲಾ ರಾಮ ಭಕ್ತ ಅಭಿಯಾನ ಆಯೋಜನೆ. ಪ್ರತಿ ಜಿಲ್ಲೆಯಿಂದ ಅಯೋಧ್ಯೆಗೆ ಪ್ರವಾಸ ಕಳಿಸುವುದು, ಇದಕ್ಕಾಗಿ ವ್ಯವಸ್ಥಿತವಾಗಿ ಪೂರ್ವತಯಾರಿ, ಸಮನ್ವಯ ಸಾಧಿಸುವುದು.
* ಫೆ.9, 10, 11ರಂದು ಗ್ರಾಮ ಚಲೋ ನಡೆಸುವುದು. ತಮ್ಮ ನೆರೆಹೊರೆ ಗ್ರಾಮ ಅಥವಾ ವಾರ್ಡ್​ನಲ್ಲಿ ಪಕ್ಷದ ಸಂಘಟನೆ, ಈ ಮೂಲಕ ಚಟುವಟಿಕೆ ಸಕ್ರಿಯಗೊಳಿಸುವುದು.
* ಜ.30ರಂದು 58 ಸಾವಿರ ಬೂತ್​ಗಳಲ್ಲಿ ಏಕಕಾಲಕ್ಕೆ ‘ಮತ್ತೊಮ್ಮೆ ಬಿಜೆಪಿ ಸರ್ಕಾರ, ಮತ್ತೊಮ್ಮೆ ಮೋದಿ’ ಗೋಡೆ ಬರಹ ಬರೆಯಲು ನಿಶ್ಚಯ. ಶಾಸಕರು, ಪರಿಷತ್ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಳ್ಳುವುದು.
* ಜ.30ರೊಳಗೆ 28 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣಾ ಕಾರ್ಯಾಲಯ ಸ್ಥಾಪನೆ, ಫೆ.3ರಿಂದ 5ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ ನಡೆಸಿ ಸ್ಥಳೀಯ ಕಾರ್ಯತಂತ್ರ ನಿರ್ಣಯಿಸುವುದು.
ಹಿಂದಿನ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆಲ್ಲಲಾಗಿತ್ತು. ಇದು ಜನರ ಸಂಕಲ್ಪ ಶಕ್ತಿಯಾಗಿತ್ತು. ಈ ಬಾರಿ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಬೇಕಿದೆ.
| ಬಿ.ಎಸ್. ಯಡಿಯೂರಪ್ಪ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ
ವಿಜಯೇಂದ್ರ ಎಚ್ಚರಿಕೆ ಸಂದೇಶ
ಲೋಕಸಭಾ ಚುನಾವಣೆ ಗೆಲ್ಲುವುದು ನಮ್ಮ ಮುಂದಿರುವ ಗುರಿ. ಈ ನಿಟ್ಟಿನಲ್ಲಿ ಅನೇಕ ನಿರ್ಣಯ ಕೈಗೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಭೆಯಲ್ಲಿ ಎಚ್ಚರಿಸಿದರು. ನಮ್ಮ ಎದುರಾಳಿಗಳನ್ನು ಹಗುರವಾಗಿ ತೆಗೆದುಕೊಳ್ಳದೆ, ನಮ್ಮ ಸಾಧನೆಗಳನ್ನು ಜನರ ಮುಂದಿಟ್ಟು, ಹಗಲು ರಾತ್ರಿ ಪಕ್ಷದ ಗೆಲುವಿಗಾಗಿ ಶ್ರಮ ಹಾಕಬೇಕಾಗಿದೆ ಎಂದರು. ಇದೇ ವೇಳೆ ತಾವು ರಾಜ್ಯ ಘಟಕಕ್ಕೆ ಮಾಡಿಕೊಂಡ ಆಯ್ಕೆ ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಉದ್ದೇಶ ಕಾರಣವನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು.
ದೂರಾದ ತಂದೆಯಿಂದಾಗಿ ಶಾಲೆಯಲ್ಲಿ ನಿಂದನೆ: ಪುತ್ರನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಾನಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
