ಮೈಸೂರು:ಮೈಸೂರು ಜನರ ಹಾಗೂ ರಾಜಮನೆತನದ ವಿರೋಧದ ನಡುವೆಯೂ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್​ಡೌನ್​ ಕಟ್ಟಡವನ್ನು ನೆಲಸಮ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಸಾಥ್​ ನೀಡಿರುವ ವ್ಯಾಪಾರಸ್ಥರು ಅಂಗಡಿಗಳನ್ನು ಬುಧವಾರ ಮಧ್ಯಾಹ್ನದವರೆಗೆ ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ದೇವರಾಜ ಮಾರುಕಟ್ಟೆ ನೆಲಸಮ ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಗೆ ಬುಧವಾರ ಬೆಳಗ್ಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, 3 ವರ್ಷದಿಂದ ನಿಮ್ಮ‌ ಜತೆಯಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಪ್ರತಿಯೊಬ್ಬ ತಜ್ಞರೂ ಇದನ್ನು ಸಂರಕ್ಷಣೆ ಮಾಡಬಹುದು ಎಂದಿದ್ದಾರೆ. ಇನ್ನೂ ನೂರು ವರ್ಷ ಇದನ್ನು ಉಳಿಸಬಹುದು. ನಮ್ಮ ಪೂರ್ವಜರ ಜತೆ ಸೇರಿ ಇದನ್ನು ನೋಡಿಕೊಂಡು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರು ಕಲೆ ಎಂದು ಕೊಂಡಿದ್ದೇವೆ. ನಮ್ಮ ಮುಂಬರುವ ಪೀಳಿಗೆಗೂ ಉಳಿಸಬೇಕು. ನಾವು ಅನುಭವಿಸಿದ ಪರಂಪರೆ ಅವರಿಗೂ ಸಿಗಬೇಕು. ನಾವು ಕಟ್ಟಡ ಮಾತ್ರ ರಕ್ಷಣೆ ಮಾಡುತ್ತಿಲ್ಲ. ಪರರಂಪರೆ ಉಳಿಸಲು ಹೋರಾಟ ಮಾಡುತ್ತೇವೆ. ತಜ್ಞರ ಸಮಿತಿಯ ವರದಿ ಮೇಲೆ ನಂಬಿಕೆ ಇಲ್ಲ. ಯಾರ್ಯಾರು ಇರಬೇಕಿತ್ತೋ ಅವರು ಸಮಿತಿಯಲ್ಲಿ ಇಲ್ಲ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟಿಸಿ. ನಾವು ನಿಮ್ಮ ಜತೆ ಇರುತ್ತೇವೆ ಎಂದು ದೇವರಾಜ ಮಾರುಕಟ್ಟೆ ಬಾಡಿಗೆದಾರರಿಗೆ ಅಭಯ ನೀಡಿದರು.

ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್​ಡೌನ್​ ಕಟ್ಟಡವನ್ನು ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲು ಸರ್ಕಾರ ಉತ್ಸಾಹ ತೋರಿದೆ. ಇದಕ್ಕೆ ಜಿಲ್ಲಾ ಪಾರಂಪರಿಕ ಸಲಹಾ ಸಮಿತಿ ಸಹ ಅಸ್ತು ಎಂದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ನಗರ ಪಾಲಿಕೆ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘ, ಹೋರಾಟದ ಮೂಲಕ ಈ ಎರಡು ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡುವುದಕ್ಕೆ ಆರಂಭದಿಂದಲೂ ರಾಜಮನೆತನದ ಪ್ರಮೋದಾದೇವಿ ಒಡೆಯರ್​ ಹಾಗೂ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರಕ್ಕೆ ಈ ಕಟ್ಟಡಗಳನ್ನು ಪುನಶ್ಚೇತನಗೊಳಿಸಲು ಸಾಧ್ಯವಾಗದೆ ಇದ್ದರೆ ನಮ್ಮ ಸುಪರ್ದಿಗೆ ನೀಡಿದರೆ ನಾವು ಪುನಶ್ಚೇತನಗೊಳಿಸುತ್ತೇವೆ ಎಂದು ಪ್ರಮೋದಾದೇವಿ ಒಡೆಯರ್​ ಹೇಳಿಕೆ ನೀಡಿದ್ದರು. ಜಿಲ್ಲೆಯ ಸಾಕಷ್ಟು ಪಾರಂಪರಿಕ ತಜ್ಞರು ಸಹ ಈ ಕಟ್ಟಡಗಳನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ, ಸರ್ಕಾರ ಯಾವುದೇ ಸಲಹೆಯನ್ನು ಕಿವಿಗೆ ಹಾಕಿಕೊಳ್ಳದೆ ಕಟ್ಟಡ ನೆಲಸಮ ಮಾಡಲು ಹೊರಟಿರುವುದನ್ನು ಹೋರಾಟದ ಮೂಲಕ ತಡೆಯುವ ಪ್ರಯತ್ನ ನಡೆಯುತ್ತಿದೆ.
ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ “ಲ್ಯಾನ್ಸ್​ಡೌನ್​’ ಕಟ್ಟಡ 2012ರ ಆಗಸ್ಟ್​ 23, 24 ರಂದು ಸುರಿದ ಧಾರಾಕಾರ ಮಳೆಗೆ ಆ.25ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್​ಡೌನ್​ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಛಾವಣಿ ಕುಸಿದಿತ್ತು.2015ರ ಜನವರಿ 11ರಂದು ಲ್ಯಾನ್ಸ್​ಡೌನ್​ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್​ಡೌನ್​ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 2016ರ ಆಗಸ್ಟ್​ 28ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್​ಡೌನ್​ ಹಾಗೂ ದೇವರಾಜ ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವನ್ನು ಕೈ ಬಿಡಲಾಯಿತು. ನಂತರ ತಜ್ಞರು ಅಧ್ಯಯನ ನಡೆಸಿ ಕಟ್ಟಡದ ಸಂರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಸಂರಕ್ಷಣಾ ಕಾರ್ಯ ಕೈಬಿಟ್ಟು ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ಈ ಸಲಹೆ ಮೇರೆಗೆ ನಗರ ಪಾಲಿಕೆ ಕಟ್ಟಡ ಮರು ನಿರ್ಮಾಣಕ್ಕೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿತು.
ಪಾಲಿಕೆ ತೀರ್ಮಾನದ ವಿರುದ್ಧ ದೇವರಾಜ ಮಾರುಕಟ್ಟೆ ವರ್ತಕರು ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಕಟ್ಟಡ ಮರುನಿರ್ಮಾಣ ಅಥವಾ ಸಂರಕ್ಷಣಾ ಕಾರ್ಯದ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ನಂತರ ಕಟ್ಟಡದ ವಿಚಾರದ ಕುರಿತು ಪಾರಂಪರಿಕ ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್​ ನಿರ್ದೇಶನ ನೀಡಿತು. ಇದೀಗ ಸಮಿತಿಯು ಕಟ್ಟಡ ನೆಲಸಮಕ್ಕೆ ಒಪ್ಪಿಗೆ ಸೂಚಿಸಿದೆ.
ನಗರದ ಹೃದಯ ಭಾಗದಲ್ಲಿರುವ ಲ್ಯಾನ್ಸ್​ಡೌನ್​ ಹಾಗೂ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡಿದರೆ ನಗರದಲ್ಲಿರುವ ಸಾಕಷ್ಟು ಪಾರಂಪರಿಕ ಕಟ್ಟಡಗಳು ಸಹ ಇದೇ ರೀತಿ ಮುಂದೆ ತನ್ನ ಅಸ್ತಿತ್ವ ಕಳೆದುಕೊಳ್ಳುವುದು ನಿಶ್ಚಿತ. ಹೀಗಾಗಿ ಹೋರಾಟದ ಮೊದಲ ಹಂತವಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಮನವಿಗೆ ಸ್ಪಂದನೆ ದೊರೆಯದೆ ಇದ್ದರೆ ಮುಂದಿನ ಹಂತದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ನಗರ ಪಾಲಿಕೆ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಎಸ್​. ಮಹಾದೇವ್​ ತಿಳಿಸಿದ್ದಾರೆ.
ಯುವ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು: ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ದುರಂತ

ಕೆಜಿಎಫ್-2 ಸಿನಿಮಾ ನೋಡುವಾಗ ಥಿಯೇಟರ್​ನಲ್ಲೇ ಗುಂಡಿನ ದಾಳಿ: ಯುವಕನ ಸ್ಥಿತಿ ಗಂಭೀರ, ಟಾಕೀಸ್ ಬಂದ್​

ತಮಕೂರಲ್ಲಿ ಟಿ.ಬಿ. ಜಯಚಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಬೆಂಗಳೂರು ಆಸ್ಪತ್ರೆಗೆ ಮಾಜಿ ಸಚಿವ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
