ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆತ್ಮವಿಶ್ವಾಸ ದೃಢಗೊಂಡಿದೆ. ಸುಧಾರಣೆಗಳ ಅನುಷ್ಠಾನದಲ್ಲಿನ ವೇಗ, ಮೂಲಸೌಕರ್ಯಗಳ ಹೆಚ್ಚಳ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ. ಆರ್ಥಿಕತೆಯಲ್ಲಿ ಮಹತ್ವದ ಮೈಲಿಗಲ್ಲು ದಾಖಲಿಸಲಾಗಿದ್ದು, ದೇಶ ಮುಂಬರುವ ದಿನಗಳಲ್ಲಿ ಸಾಗಬೇಕಾದ ಹಾದಿಯ ಬಗ್ಗೆ ಕೂಡ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟತೆ ಹೊಂದಿದ್ದಾರೆ. ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ರೈತರು, ಕಾರ್ವಿುಕರ ಕಲ್ಯಾಣಕ್ಕೆ ದಿಟ್ಟ ಕ್ರಮ ಕೈಗೊಳ್ಳಲಾಗಿದೆ.
| ಡಾ. ಎಸ್. ಜೈಶಂಕರ್
ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಯ ಭರವಸೆಗಳ ಮೇಲೆಯೇ 2024ರ ಲೋಕಸಭೆ ಚುನಾವಣೆ ನಡೆಯುತ್ತಿದೆ. 2014ರ ಜನಾದೇಶ ಭರವಸೆ ಮತ್ತು 2019ರ ಜನಾದೇಶ ವಿಶ್ವಾಸದ ಮೇಲೆ ಸಿಕ್ಕಿದ್ದರೆ, ಈ ಚುನಾವಣೆ ನಮ್ಮ ಖಾತರಿಗಳ ಮೇಲೆ ಎಂದು ಸ್ವತಃ ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಇದು ಕೇವಲ ಪ್ರಣಾಳಿಕೆ ಮತ್ತು ಭರವಸೆಗಳಲ್ಲ. ನಮಗೆ 10 ವರ್ಷಗಳ ದಾಖಲೆಯಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೆಲಸಗಳ ವಿಶ್ವಾಸಾರ್ಹತೆಯನ್ನು ನೋಡಿಯೇ ಜನರು ತೀರ್ಮಾನ ಮಾಡಬಹುದಾಗಿದೆ.
ಕರೊನಾ ಸಾಂಕ್ರಾಮಿಕ ಸವಾಲುಗಳನ್ನು ಜಯಿಸಿದ್ದು ಮಾತ್ರವಲ್ಲ, ಉತ್ತಮ ಹಣಕಾಸು ನೀತಿ, ಸುಧಾರಣೆ, ಶೇಕಡ 7ರಷ್ಟು ಜಿಡಿಪಿ ದರ ಸೇರಿ ಹಲವು ಕ್ಷೇತ್ರಗಳನ್ನು ಪ್ರಗತಿಯ ದಿಶೆಯಲ್ಲಿ ಕೊಂಡೊಯ್ದಿರುವುದನ್ನು ದೇಶ ಕಳೆದೈದು ವರ್ಷದಲ್ಲಿ ಕಂಡಿದೆ. ಒಂದೊಮ್ಮೆ ದುರ್ಬಲ ಆರ್ಥಿಕತೆಯಾಗಿದ್ದ ಭಾರತ, ಈಗ ಅಗ್ರ 5 ಆರ್ಥಿಕತೆಗಳಲ್ಲಿ ಒಂದು. ಶೀಘ್ರದಲ್ಲೇ ಮೂರನೇ ಸ್ಥಾನ ಪಡೆಯುವ ನಿರೀಕ್ಷೆಯಿದೆ. ದೇಶದ ವಿವಿಧ ಪ್ರದೇಶ, ಪಟ್ಟಣ ಮತ್ತು ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಜೀವನದ ಗುಣಮಟ್ಟದಲ್ಲಿ ಸುಧಾರಣೆಯಾಗಿದೆ. ಸುಲಭದಲ್ಲಿ ಸಾಲ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ವ್ಯವಹಾರ ಸುಲಭಗೊಳಿಸಲಾಗಿದೆ.
ಜನಸಂಖ್ಯೆಯ ಪ್ರತಿಯೊಂದು ವಿಭಾಗವು ಎಲ್ಲರನ್ನೊಳಗೊಂಡ ಬೆಳವಣಿಗೆಯಿಂದ ಪ್ರಯೋಜನ ಪಡೆದಿದೆ. ವಿಶೇಷವಾಗಿ ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಜನಕಲ್ಯಾಣ ಕಾರ್ಯಕ್ರಮಗಳು, ಪಡಿತರ, ಆರೋಗ್ಯ ಸೇವೆ, ಕಡಿಮೆ ಆದಾಯದವರಿಗೆ ವಸತಿ, ಕುಡಿಯುವ ನೀರು ಮತ್ತು ವಿದ್ಯುತ್, ಗ್ಯಾಸ್ ಸಿಲಿಂಡರ್, ಸ್ವಾವಲಂಬಿ ಉದ್ಯೋಗ ವ್ಯವಸ್ಥೆ, ಮಹಿಳೆಯರಿಗೆ ಸಾಲಗಳು, ರೈತರ ಕೃಷಿ ಮತ್ತು ಮನೆಯ ಅವಶ್ಯಕತೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲಾಗುತ್ತಿದೆ. ಡಿಜಿಟಲ್ ಇಂಡಿಯಾದಿಂದಾಗಿ ಆಡಳಿತದ ಗುಣಮಟ್ಟ ಸುಧಾರಣೆಯಾಗಿದೆ. ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಮತ್ತು ಗಡಿಯಲ್ಲಿ ಮೂಲಸೌಕರ್ಯ ನಿರ್ವಿುಸುವಲ್ಲಿ ಈಗ ಸ್ಪಷ್ಟ ನಿಲುವು ಇರುವುದರಿಂದ ದೇಶ ಮತ್ತಷ್ಟು ಸುರಕ್ಷಿತವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ.
ಮೋದಿಯವರ ಗ್ಯಾರಂಟಿಯು ವಿಕಸಿತ ಭಾರತದ ಹಾದಿಯನ್ನು ರೂಪಿಸಿದೆ. ಐದು ವರ್ಷಗಳ ಕಾಲ ನಿರ್ಗತಿಕರಿಗೆ ಉಚಿತ ಪಡಿತರ, ಹೆಚ್ಚುವರಿ ಮೂರು ಕೋಟಿ ಮನೆಗಳು ಹಾಗೂ ಉಚಿತ ವಿದ್ಯುತ್ ಖಚಿತಪಡಿಸಿಕೊಳ್ಳಲು ಮೇಲ್ಛಾವಣಿಯಲ್ಲಿ ಸೌರಶಕ್ತಿಯ ಭರವಸೆ ನೀಡಲಾಗಿದೆ. ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳ ವಿಸ್ತರಣೆ, 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಸಿಗಲಿದೆ. ಸ್ವಾನಿಧಿ ಮತ್ತು ವಿಶ್ವಕರ್ಮದಂತಹ ಯೋಜನೆ ಮುಂದುವರಿಸಲಾಗುವುದು. ಮೀನುಗಾರ ಸಮುದಾಯಕ್ಕೆ ಅನುಕೂಲ ಮಾಡಲು ವಿಶೇಷ ಗಮನ, ಕಿಸಾನ್ ಕಲ್ಯಾಣಕ್ಕಾಗಿ ಬೆಳೆ ವಿಮೆ ಹೆಚ್ಚಿಸುವುದು, ರಾಗಿ ಉತ್ಪಾದನೆ, ಮೀನುಗಾರಿಕೆ ಮತ್ತು ಹೈನುಗಾರಿಕೆಗೆ ಹೆಚ್ಚಿನ ಬೆಂಬಲ ನೀಡಲಿದ್ದೇವೆ. ಇ-ಶ್ರಮ್ ಯೋಜನೆ ಅಡಿಯಲ್ಲಿ ಕಾರ್ವಿುಕರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಮತ್ತು ಟ್ರಕ್ ಚಾಲಕರಿಗೆ ಹೆದ್ದಾರಿಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗುವುದು. ದೇಶದ ಯುವಕರು ನವೋದ್ಯಮ ಸಂಸ್ಕೃತಿಯ ಲಾಭ ಪಡೆದುಕೊಳ್ಳಬಹುದು ಮತ್ತು ಮುದ್ರಾ ಯೋಜನೆಯಲ್ಲಿ ಸಾಲದ ಮಿತಿ ರೂ. 20 ಲಕ್ಷಕ್ಕೆ ಹೆಚ್ಚಿಸಲಾಗುವುದು. ದೇಶದಲ್ಲಿ ಲಖ್​ಪತಿ ದೀದಿಯರ (ಸೋದರಿಯರನ್ನು ಲಕ್ಷಾಧೀಶರನ್ನಾಗಿ ಮಾಡುವುದು) ಸಂಖ್ಯೆ ಹೆಚ್ಚಿಸುವ ಉದ್ದೇಶವೂ ನಮ್ಮಲ್ಲಿದೆ.
ಇವೆಲ್ಲವೂ ಹೆಚ್ಚಿನ ಆರ್ಥಿಕ ಚಟುವಟಿಕೆ, ಬೃಹತ್ ಉತ್ಪಾದನೆ ಮತ್ತು ವಿಸ್ತರಿತ ಕೃಷಿ ಉತ್ಪಾದನೆಯ ವಾತಾವರಣದಲ್ಲಿ ನಡೆಯಲಿದೆ. ಮೇಕ್ ಇನ್ ಇಂಡಿಯಾ ಹೇಗೆ ಪ್ರಗತಿ ಸಾಧಿಸಿದೆ, ಹೊಸ ಉದ್ಯಮಗಳು ಮತ್ತು ಉದ್ಯೋಗಗಳನ್ನು ಹೇಗೆ ಸೃಷ್ಟಿಸಿದೆ ಎಂಬುದನ್ನು ದೇಶ ಈಗಾಗಲೇ ನೋಡಿದೆ. ಇದು ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ, ರೈಲ್ವೆ, ರಕ್ಷಣೆ, ಔಷಧಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಮೊಬೈಲ್​ನಂತರ ಕ್ಷೇತ್ರಗಳಿಗೂ ವಿಸ್ತರಣೆಯಾಗಲಿದೆ. ಉತ್ತಮ ಆರ್ಥಿಕ ಮತ್ತು ವಿದೇಶಿ ನೀತಿಗಳ ಪರಿಣಾಮವಾಗಿ ವಿನ್ಯಾಸ, ನಾವೀನ್ಯತೆ ಮತ್ತು ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಭಾರತ ಹೊರಹೊಮ್ಮಲು ಸಿದ್ಧವಾಗಿದೆ. ಸೆಮಿಕಂಡಕ್ಟರ್​ಗಳು, ಎಲೆಕ್ಟ್ರಿಕ್ ಕಾರು, ಡ್ರೋನ್, ಬಾಹ್ಯಾಕಾಶ ಅಥವಾ ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳನ್ನು ಹುಡುಕುತ್ತಿರುವ ಹೊಸ ಜಾಗತಿಕ ಉದ್ಯಮಗಳೂ ನಮ್ಮ ಮುಂದಿವೆ. ನಮ್ಮ ಪ್ರತಿಭೆ, ಮೂಲಸೌಕರ್ಯ ಮತ್ತು ಉತ್ತಮ ಆಡಳಿತ ವ್ಯವಸ್ಥೆ ಜಾಗತಿಕ ಉದ್ಯಮಗಳನ್ನು ಭಾರತಕ್ಕೆ ಸೆಳೆಯಬಹುದು. ಕರೊನಾ ಸಮಯದಲ್ಲಿ ನಾವು ಲಸಿಕೆ ಉತ್ಪಾದಿಸಿದೆವು. ನಮ್ಮದೇ ಆದ 5ಜಿ ತಂತ್ರಜ್ಞಾನವನ್ನು ಆವಿಷ್ಕರಿಸುವ ಮೂಲಕ, ಯುಪಿಐ ನಗದು ರಹಿತ ಪಾವತಿಗಳ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮತ್ತು ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಕೈಗೊಳ್ಳುವ ಮೂಲಕ, ನವ ಭಾರತದ ಸಾಮರ್ಥ್ಯವೇನು ಎಂಬುದನ್ನು ಜಗತ್ತಿನ ಮುಂದಿಟ್ಟಿದ್ದೇವೆ. ಈ ಫಲಿತಾಂಶಗಳಿಂದಾಗಿಯೇ ಜಾಗತಿಕ ಶಕ್ತಿಗಳು ನಮ್ಮೊಂದಿಗೆ ಕೈಜೋಡಿಸುವ ಆಸಕ್ತಿ ವ್ಯಕ್ತಪಡಿಸಿವೆ.
ಭಾರತೀಯರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ ಮೋದಿ ಸರ್ಕಾರ, ಪಾಸ್​ಪೋರ್ಟ್ ಕೇಂದ್ರಗಳ ಸಂಖ್ಯೆಯನ್ನು 77 ರಿಂದ 527ಕ್ಕೆ ಏರಿಸಿದೆ. ಉದ್ಯೋಗ, ಪ್ರವಾಸೋದ್ಯಮ ಅಥವಾ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯರನ್ನು ಸುರಕ್ಷಿತವಾಗಿರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಇದಕ್ಕೆ ಸಮರ್ಪಕ ಪ್ರಮಾಣದಲ್ಲಿ ಹಣಕಾಸು ನಿಧಿ ಒದಗಿಸಿ, ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸರ್ಕಾರಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ವಿದೇಶದಲ್ಲಿರುವ ರಾಯಭಾರ ಕಚೇರಿಗಳ ಸಂಖ್ಯೆ ಹೆಚ್ಚಾಗಲಿದ್ದು, ನಾವು ನಮ್ಮ ದೇಶದವರನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರಕ್ಷಿಸಬಹುದು. ಭಾರತ ವೇಗದಲ್ಲಿ ಬೆಳೆಯುತ್ತಿದೆ ಎನ್ನುವುದು ದಾಖಲೆ ಪ್ರಮಾಣದ ರಫ್ತುಗಳಲ್ಲೇ ಪ್ರತಿಫಲಿಸುತ್ತಿದೆ. ಕಳೆದ ವರ್ಷ ನಮ್ಮ ರಫ್ತು ಪ್ರಮಾಣ 765 ಬಿಲಿಯನ್ ಅಮೆರಿಕನ್ ಡಾಲರ್​ಗೆ ತಲುಪಿದೆ. ಅಂದರೆ, ನಮ್ಮಲ್ಲಿ ಉದ್ಯೋಗ ಪ್ರಮಾಣ ಹೆಚ್ಚಾಗಿ, ದೇಶ ಸಮೃದ್ಧಿಯಾಗುತ್ತಿದೆ ಎಂದರ್ಥ. ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನದೇ ಆದ ಪ್ರತಿಷ್ಠೆ, ಗೌರವ ಸಾಧಿಸಿದೆ. ಜಿ20 ಜಾಗತಿಕ ಗುಂಪಿನ ಅಧ್ಯಕ್ಷ ರಾಷ್ಟ್ರವಾದ ಹೆಮ್ಮೆ ನಮ್ಮದು. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದ ಒತ್ತಡಗಳನ್ನು ಎದುರಿಸಿ, ನಿಭಾಯಿಸಿದ್ದೇವೆ. ನಮ್ಮ ‘ಭಾರತ ಮೊದಲು’ ಎಂಬ ನಿಲುವುಗಳಿಂದಾಗಿ ಕ್ವಾಡ್ ಮತ್ತು ಐಎಂಇಸಿಯಂತಹ ಜಾಗತಿಕ ವೇದಿಕೆಯನ್ನು ಸೇರಲು ಸಾಧ್ಯವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆ ಎದುರಿಸುವಲ್ಲಿ, ನಮ್ಮ ದೃಢವಾದ ನಿಲುವಿಗೆ ಜಾಗತಿಕ ಮನ್ನಣೆಯೂ ಸಿಕ್ಕಿದೆ.
ಲೋಕಸಭೆ ಚುನಾವಣೆಯನ್ನು ಜಗತ್ತು ಆಸಕ್ತಿಯಿಂದ ನೋಡುತ್ತಿದೆ. ಈ ಜನಾದೇಶ ಮುಂದಿನ ಅವಧಿಯ ಆಡಳಿತದ ಬಗ್ಗೆ ನಿರ್ಧರಿಸುವ ಜತೆಗೆ ವಿಕಸಿತ ಭಾರತದ ಅನ್ವೇಷಣೆಯ ಯಶಸ್ಸನ್ನೂ ನಿರ್ಧರಿಸಲಿದೆ. ಯುದ್ಧ, ಉದ್ವಿಗ್ನತೆ, ವಿಭಜನೆ ಮತ್ತು ಆರ್ಥಿಕ ಬಿಕ್ಕಟ್ಟುಗಳ ಜಾಗತಿಕ ರಾಜಕೀಯ ನಿರೂಪಣೆಗಳ ಮಧ್ಯೆ, ಭಾರತಕ್ಕೆ ಬಲವಾದ ಮತ್ತು ಅನುಭವಿ ನಾಯಕತ್ವದ ಮಾರ್ಗದರ್ಶನ ಅತ್ಯಗತ್ಯ. ಆಗ ಮಾತ್ರ ನಾವು ಹೊಸ ತಂತ್ರಜ್ಞಾನಗಳು ಮತ್ತು ಪಾಲುದಾರರು ಸೃಷ್ಟಿಸುವ ಅವಕಾಶಗಳ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ನಾವು 2047ರ ದೂರದೃಷ್ಟಿ ಹೊಂದಿದ್ದು, 24/7 ಉತ್ತಮ ಆಡಳಿತದ ಅಗತ್ಯವಿದೆ. ಮೋದಿಯವರ ಗ್ಯಾರಂಟಿ ಈ ಎರಡನ್ನೂ ಒಳಗೊಂಡ ಪ್ಯಾಕೇಜ್ ಆಗಿದ್ದು, ದಶಕದ ಸಾಧನೆಗಳ ದಾಖಲೆಯಿಂದ ಬಿಗಿ ಬೆಂಬಲ ಬೆನ್ನಿಗಿದೆ. ಭವಿಷ್ಯದ ಬಗ್ಗೆ ನಿರ್ಧಾರ ಮಾಡಬೇಕಾದ ಈ ನಿರ್ಣಾಯಕ ಘಟ್ಟದಲ್ಲಿ, ರಾಷ್ಟ್ರವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಯಾರ ಮೇಲೆ ನಂಬಿಕೆ ಇಡಬಹುದು ಎಂಬುದನ್ನು ಯೋಚಿಸಿಯೇ ಹೆಜ್ಜೆ ಇಡಬೇಕಿದೆ.
(ಲೇಖಕರು ವಿದೇಶಾಂಗ ವ್ಯವಹಾರಗಳ ಸಚಿವ)
ಬಿರು ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಾಜಧಾನಿಗೆ ತಂಪೆರೆದ ಮಳೆರಾಯ: ಬೆಂಗಳೂರು ಮಂದಿ ಫುಲ್​ ಖುಷ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + seven =
Remember me
