‘ರೆಡಿಟ್’ ಎಂಬ ಸಾಮಾಜಿಕ ಜಾಲತಾಣದಲ್ಲಿ 2023ರ ಆಗಸ್ಟ್​ನಲ್ಲಿ ‘ಮೋಸದಿಂದ ಕಟ್ಟಿದ ನನ್ನ ಜೀವನ’ ಎನ್ನುವ ಶೀರ್ಷಿಕೆಯಡಿಯಲ್ಲಿ ಕೆಳಕಂಡ ಲೇಖನ ಪ್ರಕಟವಾಯಿತು: ‘ನನ್ನ ವಯಸ್ಸು 19. ನಾನು ದೆಹಲಿಯ ಸಮೀಪದ ರಾಜ್ಯವೊಂದರ ನಿವಾಸಿ. ತಂದೆ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು, ತಾಯಿ ಗೃಹಿಣಿ. ಶಾಲೆಯಲ್ಲಿದ್ದಾಗಲೇ ಇಂಜಿನಿಯರ್ ಆಗಬೇಕೆಂಬ ಕನಸನ್ನು ಕಾಣುತ್ತಿದ್ದೆ. ಆದರೆ ಕೋವಿಡ್ ಮಹಾಮಾರಿಯ ಪರಿಣಾಮವಾಗಿ ಶಾಲೆಗಳು ಮುಚ್ಚಿದಾಗ ವಿದ್ಯಾಭ್ಯಾಸದಲ್ಲಿಯೇ ಆಸಕ್ತಿ ಹೊರಟುಹೋಯಿತು. ಆಗ ಕೇಂದ್ರೀಯ ವಿದ್ಯಾಲಯದಲ್ಲಿ 11ನೆಯ ತರಗತಿಯಲ್ಲಿದ್ದೆ. ಪ್ರತಿಷ್ಠಿತ ಐಐಟಿಗೆ ನಡೆಯುವ ಜೆಇಇ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಆದರೆ 10ನೇ ತರಗತಿಯಲ್ಲಿ ಶೇಕಡ 49 ಅಂಕಗಳನ್ನು ಮಾತ್ರ ಗಳಿಸಿದ್ದರಿಂದ ಹತಾಶನಾಗಿದ್ದೆ. 11ನೆಯ ತರಗತಿಗೆ ಬಂದಾಗ ಏನಾದರೂ ಮಾಡಿ ಉತ್ತಮ ಅಂಕಗಳನ್ನು ಪಡೆಯಬೇಕೆಂದು ನಿರ್ಧರಿಸಿ ಖಾಸಗಿ ಶಾಲೆಗೆ ಸೇರಿದೆ. ಅಲ್ಲಿಯೂ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹುಟ್ಟಲಿಲ್ಲ. ಇಡೀ ಸಮಯವನ್ನು ತಿನ್ನುವುದು, ನಿದ್ರಿಸುವುದು ಮತ್ತು ಸಿನಿಮಾ ನೋಡುವುದರಲ್ಲಿ ಕಳೆಯುತ್ತಿದ್ದೆ. ಹೀಗಾಗಿ ಆ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರಲಿಲ್ಲ. 12ನೆಯ ತರಗತಿಯಲ್ಲಿರುವಾಗಲೇ ಜೆ.ಇ.ಇ ಪರೀಕ್ಷೆ ಬರೆದೆ. ಅದರಲ್ಲಿಯೂ ಶೇ.48 ಅಂಕಗಳು ಬಂದವು.
ಆಗ ಹೇಗಾದರೂ ಮಾಡಿ ವಿದೇಶದಲ್ಲಿನ ಉತ್ತಮ ಕಾಲೇಜೊಂದಕ್ಕೆ ಸೇರಬೇಕೆಂದು ನಿರ್ಧರಿಸಿದೆ. ವಿದೇಶಿ ಕಾಲೇಜುಗಳ ವಿದ್ಯಾರ್ಥಿ ಆಯ್ಕೆ ಪ್ರಕ್ರಿಯೆಯ ಬಗ್ಗೆ ಕೂಲಂಕಶವಾಗಿ ಅಧ್ಯಯನ ಮಾಡಿದೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿರದ ಕಾರಣ ಯಾವುದೇ ವಿದೇಶಿ ಕಾಲೇಜಿಗೆ ಪ್ರವೇಶ ಪಡೆದರೂ ನನಗೆ ಶಿಷ್ಯವೇತನದ ಅವಶ್ಯಕತೆಯಿತ್ತು. ಅಮೆರಿಕದ ಯಾವ ಕಾಲೇಜುಗಳಲ್ಲಿ ಶಿಷ್ಯವೇತನ ಸಿಗುತ್ತದೆ ಎನ್ನುವುದರ ಬಗ್ಗೆ ಸಂಶೋಧನೆ ಮಾಡಿ ಅವುಗಳ ಪಟ್ಟಿ ಮಾಡಿಕೊಂಡೆ. ಆದರೆ ಆ ಕಾಲೇಜುಗಳಿಗೆ ಪ್ರವೇಶ ದೊರೆಯಬೇಕಾದರೆ 9, 10 ಮತ್ತು 11ನೆಯ ತರಗತಿಗಳಲ್ಲಿ ಉತ್ತಮ ಅಂಕಗಳು ಬರಬೇಕಾಗಿದ್ದು, ನಾನು ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿರಬೇಕಾಗಿತ್ತು.
ಅಮೆರಿಕದ ವಿಶ್ವವಿದ್ಯಾಲಯಗಳು 12ನೆಯ ತರಗತಿಯ ಫಲಿತಾಂಶ ಬರುವ ಮುಂಚೆಯೇ ಪ್ರವೇಶ ನೀಡುವುದರಿಂದ ನನ್ನ 9, 10, 11ನೆಯ ತರಗತಿಯ ಅಂಕಗಳು ಮತ್ತು 12ನೆಯ ತರಗತಿಯಲ್ಲಿ ನಾನು ಗಳಿಸಬಹುದಾದ ಸಂಭಾವ್ಯ ಅಂಕಗಳನ್ನು ಅರ್ಜಿಯಲ್ಲಿ ತಿಳಿಸಬೇಕಾಗಿತ್ತು. ಹೀಗಾಗಿ 9, 10, 11ನೆಯ ತರಗತಿಯಲ್ಲಿ ಗಳಿಸಿದ ಅಂಕಗಳನ್ನು ತಿದ್ದಲು ತೀರ್ವನಿಸಿದೆ.
9 ರಿಂದ 11ನೆಯ ತರಗತಿಯಲ್ಲಿ ಶೇ.70 ರಿಂದ 90 ಅಂಕ ಬಂದಿದೆ ಎಂದು ತೋರಿಸಿ ನಕಲಿ ಅಂಕಪಟ್ಟಿಗಳನ್ನು ತಯಾರು ಮಾಡಿದೆ. ಅವಕ್ಕೆ ಶಾಲೆಯ ಮೊಹರನ್ನು ಹಾಕಿ ನಮ್ಮ ಪ್ರಾಂಶುಪಾಲರ ನಕಲಿ ಸಹಿಯನ್ನು ಮಾಡಿದೆ. ನಮ್ಮ ಶಾಲೆಯ ಲೆಟರ್​ಹೆಡ್​ನಲ್ಲಿ ನನಗೆ 12ನೇ ತರಗತಿಯಲ್ಲಿ ಹೆಚ್ಚಿನ ಆಂಕಗಳು ಬರುತ್ತದೆ ಎಂದು ನಮ್ಮ ಪ್ರಾಂಶುಪಾಲರ ಹೆಸರಿನಲ್ಲಿ ಬರೆದೆ. ಅರ್ಜಿಯ ಜತೆ ಪ್ರಬಂಧ ಬರೆದು ಕಳಿಸಬೇಕಾಗಿತ್ತು. ಇದನ್ನು ಚಾಟ್ ಜಿ.ಪಿ.ಟಿ ಉಪಯೋಗಿಸಿ ಬರೆದು ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಅರ್ಜಿ ಕಳುಹಿಸಿದೆ. ಅಮೆರಿಕದ ವಿಶ್ವವಿದ್ಯಾಲಯಗಳಿಗೆ ನಮ್ಮ ಶಾಲೆಯ ಪ್ರಾಂಶುಪಾಲರು ತಮ್ಮ ಅಧಿಕೃತ ಇಮೇಲ್ ಮೂಲಕ ಅಂಕಪಟ್ಟಿ ದೃಢೀಕರಿಸಬೇಕಾಗಿದ್ದರಿಂದ ಶಾಲೆಯ ಅಧಿಕೃತ ಇ-ಮೇಲ್ ಐ.ಡಿ ಹೋಲುವಂತಹ ಇ-ಮೇಲ್ ಐ.ಡಿ ಯನ್ನು ಇಂಟರ್​ನೆಟ್ ಮೂಲಕ ಹಣವನ್ನು ಕೊಟ್ಟು ಪಡೆದೆ. ಅದನ್ನು ಬಳಸಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಪ್ರಮಾಣಪತ್ರಗಳೆಲ್ಲವೂ ನೈಜ ಎಂದು ದೃಢೀಕರಿಸುವ ಪತ್ರವನ್ನು ಕಳುಹಿಸಿದೆ. ಟ್ಯೂಷನ್ ಶುಲ್ಕವನ್ನು ಭರಿಸಲು ಸಾಧ್ಯವಿಲ್ಲವೆಂದು ಎಲ್ಲ ಕಾಲೇಜುಗಳಿಗೂ ತಿಳಿಸಿದೆ. ಇದನ್ನು ಪ್ರಮಾಣೀಕರಿಸಲು ತಂದೆಯ ನಕಲಿ ಆದಾಯ ಪ್ರಮಾಣಪತ್ರ ತಯಾರಿಸಿ, ಅರ್ಧದಷ್ಟು ವಿದ್ಯಾರ್ಥಿವೇತನ ಕೊಡಲು ಕೋರಿದೆ.
12ನೆಯ ತರಗತಿಯ ಪರೀಕ್ಷೆಗಳಲ್ಲಿ ಯಾವ ಪತ್ರಿಕೆಯನ್ನೂ ಸರಿಯಾಗಿ ಉತ್ತರಿಸಲಿಲ್ಲ. ಏತನ್ಮಧ್ಯೆ ಅಮೆರಿಕದ ಒಂದು ಪ್ರತಿಷ್ಠಿತ ಕಾಲೇಜು ನನ್ನ ಅರ್ಜಿಯನ್ನು ಸ್ವೀಕರಿಸಿ ಶೇ.75 ವಿದ್ಯಾರ್ಥಿವೇತನವನ್ನು ಕೊಡಲು ಒಪ್ಪಿತು. ಆದರೆ ಅಲ್ಲಿ ಉಳಿದ ಖರ್ಚುವೆಚ್ಚಗಳಿಗೆ ಬೇಕಾದ ಹಣವನ್ನು ಹೊಂದಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಆಗ ನಾನು ನನ್ನ ತಂದೆ ಕಾನ್ಸರ್ ರೋಗದಿಂದ ಇತ್ತೀಚೆಗೆ ಸತ್ತಿರುವುದಾಗಿಯೂ ಅವರ ಕಡಿಮೆ ಪಿಂಚಣಿಯಲ್ಲಿ ನನ್ನ ತಾಯಿಗೆ ನನ್ನ ಊಟ, ವಸತಿ ವೆಚ್ಚಕ್ಕೆ ಬೇಕಾದ ವಾರ್ಷಿಕ 5000 ಡಾಲರ್ ಖರ್ಚು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿ ನನ್ನ ಎಲ್ಲ ವೆಚ್ಚವನ್ನು ಕಾಲೇಜೇ ಭರಿಸಬೇಕೆಂದು ಕೋರಿ ಪತ್ರ ಬರೆದೆ. ಮುಂದೆ ನನ್ನ 12ನೆಯ ತರಗತಿಯ ಫಲಿತಾಂಶ ಬಂದು ನಾನು ಶೇ.58 ಅಂಕಗಳಿಸಿದ್ದೆ. ಆ ಅಂಕಪಟ್ಟಿಯನ್ನು ತಿದ್ದಿದ ನಾನು ನನಗೆ ಶೇ.91 ಅಂಕಗಳು ಬಂದಂತೆ ತೋರಿಸಿ ನನ್ನ ಶಾಲೆಯ ಇಮೇಲ್ ಬಳಸಿ ಅಮೆರಿಕಕ್ಕೆ ಕಳುಹಿಸಿದೆ. ನನ್ನ ಮನವಿಯನ್ನು ಪರಿಗಣಿಸಿದ ಆ ಕಾಲೇಜು ನನಗೆ ಸಂಪೂರ್ಣ ವಿದ್ಯಾರ್ಥಿವೇತನ ನೀಡಿ ಪ್ರವೇಶ ನೀಡುವುದಾಗಿ ತಿಳಿಸಿತು. ಇದನ್ನು ತಂದೆ-ತಾಯಿಗೆ ತಿಳಿಸಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ನಂತರ ಅಮೆರಿಕದ ಕಾಲೇಜಿನ ಪತ್ರವನ್ನು ಲಗತ್ತಿಸಿ ಅಮೆರಿಕದ ವೀಸಾಕ್ಕೆ ಅರ್ಜಿ ಸಲ್ಲಿಸಿದೆ. ವೀಸಾಗಾಗಿ ಸಂದರ್ಶನ ಮಾಡಿದ ಅಧಿಕಾರಿಗಳಿಗೆ ಅಂಕಪಟ್ಟಿಗಳು ನಕಲಿ ಎಂದು ತಿಳಿಯಲೇ ಇಲ್ಲ. ಏಕೆಂದರೆ ಅವರು ನಾನೇ ಅರ್ಜಿ ಸಲ್ಲಿಸಿದ ವ್ಯಕ್ತಿಯೋ ಇಲ್ಲವೋ ಹಾಗೂ ನನಗೆ ಇಂಗ್ಲೀಷ್ ಮಾತನಾಡಲು ಬರುತ್ತದೋ ಇಲ್ಲವೋ ಎನ್ನುವುದನ್ನು ಮಾತ್ರ ಪರಿಶೀಲನೆ ಮಾಡುತ್ತಾರೆ. ಅಮೆರಿಕದ ನಿರ್ದಿಷ್ಟ ಕಾಲೇಜಿಗೇ ಅರ್ಜಿ ಹಾಕಿದ್ದೇಕೆ ಎಂದು ವೀಸಾ ಅಧಿಕಾರಿ ಕೇಳಿದಾಗ ನಾನು ‘ನಾವು ಬಡಕುಟುಂಬದಿಂದ ಬಂದಿದ್ದು, ನನಗೆ ಸಂಪೂರ್ಣ ವಿದ್ಯಾರ್ಥಿವೇತನ ಕೊಡಲು ಒಪ್ಪಿರುವ ಕಾಲೇಜು ಅದು’ ಎಂದೆ. ‘ನೀನು ತುಂಬ ಸ್ಮಾರ್ಟ್ ಇರುವ ಕಾರಣದಿಂದಲೇ ನಿನಗೆ ಇಂತಹ ಉತ್ತಮ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿದೆ’ ಎಂದು ಹೇಳಿ ನನಗೆ ವೀಸಾ ಕೊಟ್ಟರು.
ಅಮೆರಿಕಕ್ಕೆ ಬಂದು ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದೇನೆ. ಒಬ್ಬ ವ್ಯಕ್ತಿ ಬುದ್ಧಿವಂತನಾಗಿದ್ದರೆ ಮತ್ತು ಉತ್ತಮ ರೀತಿ ನಕಲು ಮಾಡಲು ತಯಾರಾಗಿದ್ದರೆ ಎಂತಹವರಿಗಾದರೂ ನಾವು ಮೋಸ ಮಾಡಬಹುದು.
ಈ ಪೋಸ್ಟ್ ರೆಡಿಟ್ ಸಾಮಾಜಿಕ ಜಾಲತಾಣದಲ್ಲಿ ಬಿ.ಟೆಕ್ ಉಪಗುಂಪಿನಲ್ಲಿ ಪ್ರಕಟವಾಯಿತು. ರೆಡಿಟ್​ನಲ್ಲಿ ಪ್ರಕಟವಾದ ಪೋಸ್ಟ್​ಗಳನ್ನು ಪರಿಶೀಲಿಸಲು ಅದರ ಸದಸ್ಯರದ್ದೇ ಅದ ಸಂಪಾದಕರ ಗುಂಪುಗಳಿರುತ್ತವೆ. ಇಂತಹ ಸಂಪಾದಕರಲ್ಲಿ ಒಬ್ಬನಾಗಿದ್ದವನು ಭಾರತದಲ್ಲಿನ 19 ವರ್ಷದ ಯುವಕನೊಬ್ಬ. ಆತನಿಗೆ ಅದನ್ನು ಓದಿದ ಕೂಡಲೇ ಹೇಸಿಗೆ ಬಂದಿತು. ಅದನ್ನು ಬರೆದು ದೇಶಕ್ಕೆ ಕೆಟ್ಟ ಹೆಸರು ತಂದ ವಿದ್ಯಾರ್ಥಿಯನ್ನು ಪತ್ತೆ ಮಾಡಿ ಅವನಿಗೆ ಶಿಕ್ಷೆ ಕೊಡಿಸಬೇಕೆಂದು ಆತ ತೀರ್ವನಿಸಿದ. ಆತ ತನ್ನ ಅಗಾಧ ಕಂಪ್ಯೂಟರ್ ಜ್ಞಾನವನ್ನು ಬಳಸಿ ರೆಡಿಟ್ ಪೋಸ್ಟ್ ಹಾಕಿದ್ದ ಮೋಸಗಾರ ಭಾರತೀಯ ವಿದ್ಯಾರ್ಥಿ ಯಾರೆಂದು ಪತ್ತೆ ಮಾಡಿದ. ಆನಂತರ ಆ ವಿದ್ಯಾರ್ಥಿಯ ಹಿಂದಿನ ಎಲ್ಲ ಪೋಸ್ಟ್​ಗಳನ್ನೂ ಓದಿ ಆತ ಕಲಿಯುತ್ತಿದ್ದ ಕಾಲೇಜಿನ ಹೆಸರು, ವಿಳಾಸವನ್ನು ಪತ್ತೆ ಮಾಡಿದ್ದಲ್ಲದೆ ಆ ವಿದ್ಯಾರ್ಥಿಯ ಹೆಸರು ‘ಆರ್ಯನ್ ಆನಂದ್’ ಎಂದೂ ಪತ್ತೆ ಮಾಡಿದ.
ಅಷ್ಟಕ್ಕೇ ಸುಮ್ಮನಾಗದ ಆತ ಆನಂದ್ ಕಲಿಯುತ್ತಿದ್ದ ಪೆನ್ಸಿಲ್ವೇನಿಯಾದ ಕಾಲೇಜಿಗೆ ಇಮೇಲ್ ಕಳುಹಿಸಿ ಆನಂದನ ಕುಕೃತ್ಯದ ಮಾಹಿತಿಯಿತ್ತ. ಅದನ್ನು ಓದಿದ ಕಾಲೇಜಿನ ಆಡಳಿತವರ್ಗ ತನಿಖೆ ಆರಂಭಿಸಿತು. ಆನಂದ್​ನ ಅಂಕಪಟ್ಟಿಗಳು, ಅವನ ತಂದೆಯ ಮರಣದ ಸರ್ಟಿಫಿಕೇಟ್ ಮತ್ತಿತರ ಪ್ರಮಾಣಪತ್ರಗಳನ್ನು ಭಾರತಕ್ಕೆ ಕಳುಹಿಸಲಾಯಿತು. ಆನಂದ್ ಸುಳ್ಳು ದಾಖಲೆಗಳನ್ನು ಕೊಟ್ಟು ತಮ್ಮ ಕಾಲೇಜಿಗೆ ಪ್ರವೇಶ ಪಡೆದಿರುವುದು ಸಾಬೀತಾದ ಕೂಡಲೇ ಆ ಕಾಲೇಜು ಅಮೆರಿಕದ ಹೋಂ ಲ್ಯಾಂಡ್ ಸೆಕ್ಯೂರಿಟಿ ಪೊಲೀಸರಿಗೆ ದೂರು ನೀಡಿತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮೆರಿಕದ ಕಾಲೇಜಿಗೆ ಪ್ರವೇಶ ಪಡೆದ ಆರೋಪದ ಮೇರೆಗೆ ಹೋಂ ಲ್ಯಾಂಡ್ ಪೊಲೀಸರು ಆನಂದ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನಾರಂಭಿಸಿದರು. ಆನಂದ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದೆಲ್ಲವೂ ನಿಜವೆಂದು ಸಾಬೀತಾಗಿ ಆತ ಮೋಸದಿಂದ ಅಮೆರಿಕಕ್ಕೆ ಬಂದಿದ್ದಾನೆ ಎಂದು ತಿಳಿಯಿತು. ಮುಂದಿನ ತನಿಖೆಯಲ್ಲಿ ಆನಂದ್ ಫರೀದಾಬಾದ್​ನ ನಿವಾಸಿಯೆಂದೂ ಆತನ ತಂದೆ ಭಾರತೀಯ ವಾಯುಸೇನೆಯಲ್ಲಿರುವರೆಂದೂ ತಿಳಿಯಿತು. ಆಗ ಆನಂದ್​ನನ್ನು ಬಂಧಿಸಲಾಯಿತು. ನ್ಯಾಯಾಲಯದ ವಿಚಾರಣೆಯಲ್ಲಿ ಆನಂದ್ ತನ್ನ ತಪ್ಪೊಪ್ಪಿಕೊಂಡ. ಅವನಿಗೆ ಒಂದೂವರೆ ತಿಂಗಳ ಜೈಲುಶಿಕ್ಷೆಯಾಯಿತು. ಆತ ಅಲ್ಲಿಯವರೆಗೆ ತಾನು ಕಾಲೇಜಿನಿಂದ ಸ್ವೀಕರಿಸಿದ್ದ ವಿದ್ಯಾರ್ಥಿವೇತನದ ಮೊತ್ತವಾದ 70 ಲಕ್ಷ ರೂ. ವಿದ್ಯಾರ್ಥಿವೇತನವನ್ನು ಹಿಂದಿರುಗಿಸಬೇಕೆಂದು ಕಾಲೇಜು ಆದೇಶಿಸಿತು. ತನಗೆ ಅಷ್ಟು ಭಾರಿ ಮೊತ್ತ ಮರಳಿಸಲು ಸಾಧ್ಯವಿಲ್ಲವೆಂದು ಹೇಳಿದ ಆನಂದ್ ತನ್ನ ಮೇಲೆ ಕನಿಕರ ತೋರಲು ಕೋರಿದ. ಅವನ ಕೋರಿಕೆಯನ್ನು ಮನ್ನಿಸಿದ ಆ ಕಾಲೇಜು ಅವನಿಂದ ಹಣ ಪಡೆಯದಿರಲು ತೀರ್ವನಿಸಿತು. ಹೀಗಾಗಿ ಆನಂದ್​ನನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.
ಈ ಪ್ರಕರಣದ ರೂವಾರಿ 19 ವರ್ಷದ ಭಾರತೀಯ ಯುವಕ. ಇದನ್ನು ಪತ್ತೆ ಮಾಡಿದವನೂ 19 ವರ್ಷದ ಭಾರತೀಯ ಯುವಕ. ಇಬ್ಬರಲ್ಲಿಯೂ ಎಷ್ಟು ಅಂತರವಿದೆಯಲ್ಲವೇ? ‘ನೀತಿಪಾಠವಿಲ್ಲದ ವಿದ್ಯೆಯನ್ನು ಒಬ್ಬರಿಗೆ ಕಲಿಸುವುದು ಆತ ಸಮಾಜದ ಕಂಟಕವಾಗಲು ಕಲಿಸುವ ವಿದ್ಯೆಯೇ ಅಗುತ್ತದೆ’ ಎಂದರು ಅಮೆರಿಕದ ಮಾಜಿ ಅಧ್ಯಕ್ಷ ಥಿಯೋಡಾರ್ ರೂಸ್​ವೆಲ್ಟ್. ಮೋಸ ಮಾಡಿ ದೇಶಕ್ಕೆ ಕೆಟ್ಟ ಹೆಸರು ತಂದ ಆನಂದ್ ಈ ನುಡಿಯನ್ನು ಸಾಬೀತು ಮಾಡಿದ. ಪತ್ತೆಮಾಡಿದ ಇನ್ನೊಬ್ಬ ದೇಶದ ಮಾನ ಉಳಿಸಿದ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಗೊಂಡಾ ರೈಲು ದುರಂತಕ್ಕೆ ಕಾರಣವೇನು ಗೊತ್ತಾ? ಅಪಘಾತದ ಪ್ರಾಥಮಿಕ ವರದಿಯಲ್ಲಿ ಕಾರಣ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 8 =
Remember me
