ಬೆಂಗಳೂರು: ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಸಾಧ್ಯವಾಗದ ಪರಿಣಾಮ ದಿನೇದಿನೆ ಉಲ್ಬಣಿಸುತ್ತಿರುವ ಹಣಕಾಸಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನವಾಗಿ ರಾಜ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲಾರಂಭಿಸಿದೆ. ಇದರ ಮೊದಲ ಯತ್ನವಾಗಿ ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಕೆಲ ಪ್ರಮುಖ ಇಲಾಖೆಗಳಿಗೆ ಕೊನೆಯ ಕಂತಿನ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅನುಮತಿ ಕಡ್ಡಾಯವೆಂಬ ಷರತ್ತು ವಿಧಿಸಿದೆ.
ಮುಂದಿನ ಬಜೆಟ್​ನಲ್ಲಿ ವಿವಿಧ ಇಲಾಖೆಗಳಿಗೆ ಅನುದಾನ ನಿಗದಿ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಬಜೆಟ್ ಎದುರು ನೋಡುತ್ತಿದೆ. ಸಾಲ ಮನ್ನಾ, ಪ್ರವಾಹ ಸೇರಿ ವಿವಿಧ ಕಾರಣಗಳಿಂದಾಗಿ ಹೆಚ್ಚಿನ ಹೊರೆ ಬಿದ್ದ ಪರಿಣಾಮ ಈಗಾಗಲೇ ಬಹುತೇಕ ಇಲಾಖೆಗಳಿಗೆ ಅನುದಾನ ಕಡಿತವಾಗಿದೆ. ಹಲವು ಇಲಾಖೆಗಳ ಅನುದಾನವನ್ನು ಪ್ರವಾಹದ ಪರಿಹಾರಕ್ಕೆ ತಿರುಗಿಸಿರುವುದು ವಾಸ್ತವ.
ಅಧಿಕಾರಿಗಳ ಸಮರ್ಥನೆ:ಸರ್ಕಾರದಲ್ಲಿ ಹಣಕಾಸಿನ ಪರಿಸ್ಥಿತಿ ಗಮನಿಸಿ ಹಣ ಬಿಡುಗಡೆ ಮಾಡಲಾಗುತ್ತದೆ. ಆದ್ದರಿಂದ ಇಂತಹ ಷರತ್ತು ವಿಧಿಸಲಾಗಿದೆ ಎಂಬುದು ಆರ್ಥಿಕ ಇಲಾಖೆ ಅಧಿಕಾರಿಗಳ ಸಮರ್ಥನೆ.
ಠೇವಣಿಗೂ ನಿರ್ಬಂಧ: ಅನೇಕ ಇಲಾಖೆಗಳಲ್ಲಿ ಹಣ ವೆಚ್ಚವಾಗದೆ ಇದ್ದರೆ ಕೂಡಲೇ ಹಣವನ್ನು ಬ್ಯಾಂಕ್​ಗಳಲ್ಲಿ ಠೇವಣಿಯನ್ನಿಟ್ಟು ಬಡ್ಡಿ ಪಡೆದರೂ ಸರ್ಕಾರಕ್ಕೆ ಪಾವತಿಸದೆ ಕಳ್ಳಗಂಟು ಮಾಡುತ್ತಿದ್ದವರಿಗೂ ಕಡಿವಾಣ ಹಾಕಲಾಗುತ್ತಿದೆ. ಬ್ಯಾಂಕ್​ಗಳಲ್ಲಿ ಠೇವಣಿ ಅಥವಾ ವೈಯಕ್ತಿಕ ಖಾತೆಯಲ್ಲಿ ಅನುದಾನ ಇಡಬಾರದು, ಒಂದು ವೇಳೆ ಇಡುವ ಪರಿಸ್ಥಿತಿ ಎದುರಾದರೆ ಆರ್ಥಿಕ ಇಲಾಖೆ ಅನುಮತಿ ಕಡ್ಡಾಯವೆಂದು ತಿಳಿಸಲಾಗಿದೆ.
ಯಾವುದಕ್ಕೆ ಕಡ್ಡಾಯ?:ಕೃಷಿ ಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಸಬ್ಸಿಡಿ, ಪೊಲೀಸ್ ಕಟ್ಟಡಗಳ ದುರಸ್ತಿ, ಬಸ್​ಗಳಲ್ಲಿ ಸಿಸಿ ಕ್ಯಾಮರಾ, ಕೆರೆಗಳ ಪುನಶ್ಚೇತನ, ಅರಣ್ಯ ರಕ್ಷಣೆ, ಪ್ರಾಣಿ-ಮಾನವ ಸಂಘರ್ಷ ನಿಯಂತ್ರಣ, ಸಸಿಗಳನ್ನು ನೆಡುವುದು, ಸಮಗ್ರ ವನ್ಯಜೀವಿ ಯೋಜನೆ, ಅರಣ್ಯದ ಸುತ್ತ ರೈಲ್ವೆ ಕಂಬಿಗಳ ಬ್ಯಾರಿಕೇಡ್, ಅಲ್ಪಾವಧಿ ಸಾಲಗಳ ಮರುಪಾವತಿ, ಕನಿಷ್ಠ ಬೆಂಬಲ ಬೆಲೆ, ವಿವಿಧ ಸಮುದಾಯಗಳ ಅಭಿವೃದ್ಧಿ, ಆದಿವಾಸಿಗಳ ಅಭಿವೃದ್ಧಿ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ, ವಕ್ಪ್ ಆಸ್ತಿಗಳ ರಕ್ಷಣೆ, ಅಲ್ಪಸಂಖ್ಯಾತರ ಹಾಸ್ಟೆಲ್​ಗಳು ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಲಿದೆ.
ಇವುಗಳ ಜತೆಯಲ್ಲೇ ಪರಿಶಿಷ್ಟರ ಸ್ವಉದ್ಯೋಗ ಯೋಜನೆಗಳು, ಮಕ್ಕಳ ರಕ್ಷಣಾ ಕೇಂದ್ರ, ಅನ್ನಭಾಗ್ಯ, ದೇವಸ್ಥಾನ ಹಾಗೂ ಇತರ ಧಾರ್ವಿುಕ ಕೇಂದ್ರಗಳ ಅಭಿವೃದ್ಧಿ, ಇನಾಮೇತರ ಭೂಮಿಗಳಿಗೆ ಪರಿಹಾರ, ವಿಜ್ಞಾನ ತಂತ್ರಜ್ಞಾನ ಮಂಡಳಿ, ವಾಜಪೇಯಿ ನಗರ ವಸತಿ ಯೋಜನೆ, ಆಶ್ರಯ ಬಸವ ವಸತಿ, ಸ್ಲಂಗಳ ಅಭಿವೃದ್ಧಿ, ಚೀನಾದೊಂದಿಗೆ ಪೈಪೋಟಿ, ಮಾರಾಟ ತೆರಿಗೆ ಮರುಪಾವತಿ, ಮೈಸೂರು ಪೇಪರ್ ಮಿಲ್​ಗೆ ನೆರವು, ಕೈಗಾರಿಕೆ ಕ್ಲಸ್ಟರ್​ಗಳ ಅಭಿವೃದ್ಧಿ, ತೆಂಗುಭಾಗ್ಯ, 9 ನಗರಗಳ ಕುಡಿಯುವ ನೀರು ಸರಬರಾಜು, ಬೆಂಗಳೂರು ಅಭಿವೃದ್ಧಿ ಯೋಜನೆಗಳು, ಸಬರ್ಬನ್ ರೈಲು, ಫೆರಿಪೆರಲ್ ರಿಂಗ್ ರಸ್ತೆ, ರಾಜ್ಯ ಹೆದ್ದಾರಿ ಅಭಿವೃದ್ಧಿ, ವಿವಿಧ ನೀರಾವರಿ ಯೋಜನೆಗಳು, ಉತ್ಸವಗಳು, ಅಕಾಡೆಮಿಗಳು, ಕನಕ ಟ್ರಸ್ಟ್, ಅಕ್ಕ ಸಮ್ಮೇಳನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಶಾಸಕರ ನಿಧಿ, ವಿದ್ಯಾರ್ಥಿ ವೇತನಗಳು, ಕೇಂದ್ರ ಪುರಸ್ಕೃತ ಯೋಜನೆಗಳಾದ ಕೃಷಿ ಸಿಂಚಯ, ಕೇಂದ್ರ ರಸ್ತೆ ನಿಧಿ, ಇದಲ್ಲದೇ ವಿವಿಧ ಪಿಂಚಣಿಗಳು, ಔಷಧ ಖರೀದಿ ಇತ್ಯಾದಿ ಸೇರಿವೆ.
26 ಇಲಾಖೆಗಳಿಗೆ ಅನ್ವಯ
ಕೊನೆಯ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಅನುಮತಿ ಕಡ್ಡಾಯವೆಂದು 26 ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರಲ್ಲಿ ಕೆಲವು ಸಹಾಯಧನ ಆಧಾರಿತ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳೂ ಸೇರಿವೆ. ಈ ಮೊದಲು ಆರ್ಥಿಕ ಇಲಾಖೆ ವತಿಯಿಂದ ಹಣ ಬಿಡುಗಡೆ ಮಾಡಲಾಗುತ್ತಿತ್ತಾದರೂ ಕಳೆದ ನಾಲ್ಕೈದು ವರ್ಷಗಳಿಂದ ಆಯಾ ಇಲಾಖೆಗೆ ಆರ್ಥಿಕ ಅಧಿಕಾರ ನೀಡಲಾಗಿದೆ. ಆದರೂ ಈ ರೀತಿಯ ಆದೇಶ ನೀಡಿರುವುದು ರಾಜ್ಯದ ಆರ್ಥಿಕ ಸಂಕಷ್ಟಕ್ಕೆ ಹಿಡಿದ ಕನ್ನಡಿ ಎಂದೇ ಹೇಳಲಾಗುತ್ತಿದೆ. ಆರ್ಥಿಕ ಅಧಿಕಾರ, ಪೂರಕ ಅಂದಾಜು ಏನೇ ಇದ್ದರೂ ಪರಿಷ್ಕೃತ ಮಿತಿಯಲ್ಲಿ ಹಣ ಬಿಡುಗಡೆಗೆ ಅನುಮತಿ ಪಡೆಯಲೇಬೇಕಾಗಿದೆ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಹಣ ಬಿಡುಗಡೆಯ ಆದೇಶವಲ್ಲವೆಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ. ಈ ಮೊದಲು ಯಾವುದೇ ಯೋಜನೆಯಲ್ಲಿ ಮೊದಲ 3 ತ್ರೖೆಮಾಸಿಕಗಳಿಂದ ಶೇ. 75 ಅನುದಾನ ಬಳಕೆ ಮಾಡಿಕೊಂಡರೆ ಉಳಿದ ಶೇ.25 ಬಿಡುಗಡೆ ಮಾಡಲಾಗುತ್ತಿತ್ತು.
ತೋಟಗಾರಿಕೆ, ಸಹಕಾರ, ಗೃಹ, ಸಾರಿಗೆ, ಅರಣ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ, ಮುಜರಾಯಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಆಹಾರ, ಇಂಧನ, ನಗರಾಭಿವೃದ್ಧಿ, ಲೋಕೋಪಯೋಗಿ ಸೇರಿ 26 ಇಲಾಖೆಗಳ ವಿವಿಧ ಯೋಜನೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆಯೊಂದಿಗೆ ನಾಲ್ಕನೇ ತ್ರೖೆಮಾಸಿಕದ ಹಣ ಬಿಡುಗಡೆ ಮಾಡಬೇಕು.
ಕೇಂದ್ರದತ್ತ ರಾಜ್ಯ ಚಿತ್ತ
ಈ ವರ್ಷದ ಬಜೆಟ್​ನಲ್ಲಿ ಈಗಾಗಲೇ ಬಹುತೇಕ ಎಲ್ಲ ಇಲಾಖೆಗಳಿಗೂ ಶೇ. 25 ತನಕ ಅನುದಾನ ಕಡಿತ ಮಾಡಲಾಗಿದೆ. ಮುಂದಿನ ವರ್ಷ ಸಹ ಕಡಿತವಾಗುವ ಸಾಧ್ಯತೆಗಳಿವೆ. 2020-21ರ ಬಜೆಟ್​ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಮೀಸಲಿಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದರೆ ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ರಾಜ್ಯಗಳಿಗೆ ಎಷ್ಟು ಅನುದಾನ ಸಿಗುತ್ತದೆ ಎಂಬುದನ್ನು ಆಧರಿಸಿರುತ್ತದೆ. ಆದ್ದರಿಂದಲೇ ಕೇಂದ್ರದ ಬಜೆಟ್ ಕಡೆ ದೃಷ್ಟಿ ಹರಿಸಿದೆ.
ಹಣಕಾಸು ಪರಿಸ್ಥಿತಿ ನೋಡಿಕೊಂಡು ಅನುದಾನ ಬಿಡುಗಡೆ ಮಾಡುತ್ತ ಹೋಗುತ್ತೇವೆ. ಆದ್ದರಿಂದ ಅನುಮತಿ ಕಡ್ಡಾಯವೆಂದು ಕೆಲವು ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಯಾವ ಯೋಜನೆಗೂ ಹಣ ನಿಲ್ಲಿಸುವುದಿಲ್ಲ. ಕೇಂದ್ರದ ಬಜೆಟ್ ಅನ್ನು ಎದುರು ನೋಡುತ್ತಿದ್ದೇವೆ. ಈ ವರ್ಷ ತೆರಿಗೆ ಸಂಗ್ರಹಣೆ ಗುರಿ ಮುಟ್ಟುವ ವಿಶ್ವಾಸವಿದೆ.
| ಡಾ.ಏಕರೂಪ್ ಕೌರ್ ಕಾರ್ಯದರ್ಶಿ, ಆರ್ಥಿಕ ಇಲಾಖೆ

ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 1 =
Remember me
