ಬೆಂಗಳೂರು:ಸಂಕ್ರಾಂತಿ ಮರುದಿನವೇ ಪೊಲೀಸ್ ಇಲಾಖೆಗೆ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ನಿಮಿತ್ತ ಎಲ್ಲ ಪೊಲೀಸರಿಗೆ ಬೆಳ್ಳಿ ಪದಕ, ವೈದ್ಯಕೀಯ ತಪಾಸಣೆ ಭತ್ಯೆಯನ್ನು 1000 ರೂ.ನಿಂದ 1500 ರೂ.ಗೆ ಹೆಚ್ಚಳ ಸೇರಿ ಹಲವು ಮಹತ್ವದ ಘೋಷಣೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ.
ನೃಪತುಂಗ ರಸ್ತೆಯಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ಬಳಿಕ ಈ ವಿವರ ನೀಡಿದರು.
ಸುವರ್ಣ ಪೊಲೀಸ್ ಭವನ ನಿರ್ವಿುಸಲು ಯೋಜನೆ ರೂಪಿಸಲಾಗಿದ್ದು, ಬಜೆಟ್​ನಲ್ಲಿ ಹಣ ಮೀಸಲಿಡಲಾಗುವುದು. ಏಕೀಕರಣಕ್ಕೂ ಮುನ್ನ ಇದ್ದ ಮೈಸೂರು ರಾಜ್ಯ ಪೊಲೀಸ್ ಹೆಸರು ನಂತರ ಕರ್ನಾಟಕ ರಾಜ್ಯ ಪೊಲೀಸ್ ಎಂದಾಯಿತು. ಈ ಹೆಸರು ಬದಲಾಗಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ ನೀಡುವುದಾಗಿ ಘೋಷಿಸಿದರು. ಮಾದಕವಸ್ತು ಮತ್ತು ಸೈಬರ್ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸೈಬರ್ ಎಕನಾಮಿಕ್ ಆಂಡ್ ನಾಕೋಟಿಕ್ ಕ್ರೖೆಂ ಪೊಲೀಸ್ ಸ್ಟೇಷನ್​ನ (ಸಿಇಎನ್) ಇನ್​ಸ್ಪೆಕ್ಟರ್ ಹುದ್ದೆಯನ್ನು ಎಸಿಪಿ/ಡಿವೈಎಸ್​ಪಿ ಹುದ್ದೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದರು.
ರಾಜ್ಯದಲ್ಲಿ 43 ಸಿಇಎನ್ ಠಾಣೆಗಳಿದ್ದು, ಎಸಿಪಿ ದರ್ಜೆಯ ಅಧಿಕಾರಿ ನೇಮಕವಾಗುವುದರಿಂದ ತನಿಖಾ ಸಾಮರ್ಥ್ಯ ಹೆಚ್ಚಲಿದೆ. ಮೇಲ್ದರ್ಜೆಗೇರಿದ ತರುವಾಯ ಇನ್​ಸ್ಪೆಕ್ಟರ್, ಸಬ್ ಇನ್​ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ರಾಜ್ಯದ ಎಲ್ಲ ಪೊಲೀಸ್ ಸಿಬ್ಬದಿಯ ವಾರ್ಷಿಕ ವೈದ್ಯಕೀಯ ತಪಾಸಣಾ ಭತ್ಯೆಯನ್ನು 1 ಸಾವಿರ ರೂ.ನಿಂದ 1,500 ರೂ.ಗೆ ಏರಿಕೆ ಮಾಡಲಾಗುವುದು. 2013 ರಲ್ಲಿ ನಮ್ಮ ಸರ್ಕಾರವೇ ಈ ವಾರ್ಷಿಕ ವೈದ್ಯಕೀಯ ತಪಾಸಣಾ ಭತ್ಯೆಯನ್ನು ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ನಮ್ಮ ಸರ್ಕಾರವೇ ಹೆಚ್ಚಿಗೆ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆರೋಪಪಟ್ಟಿ ಸಲ್ಲಿಕೆಗೆ 60 ದಿನ ಗಡುವು:ರಾಜ್ಯದಲ್ಲಿ ಭಯದ ವಾತಾವರಣ ಇರಬಾರದು. ಶೋಷಣೆಗೊಳಗಾದವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಟ ಹೆಚ್ಚಾಗಬೇಕು. ವೈಜ್ಞಾನಿಕವಾಗಿರುವ ಸಮರ್ಥ ಆರೋಪ ಪಟ್ಟಿ ಸಲ್ಲಿಸಬೇಕು. ತನಿಖೆ ವೇಳೆ ದೋಷಾರೋಪಪಟ್ಟಿ ಸಲ್ಲಿಸುವುದು ವಿಳಂಬವಾದರೆ, ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತದೆ. ಈ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳೊಳಗೆ ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಬೇಕು. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣದ ಹೆಚ್ಚಾದರೆ, ಅಪರಾಧಗಳು ಇಳಿಮುಖವಾಗುತ್ತವೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಚುನಾವಣೆ ಇರುವುದರಿಂದ ನಿಗಾ ಇಡಿ:ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಗಸ್ತು ಪೊಲೀಸ್ ಹೆಚ್ಚಿಸಬೇಕು. ಗಸ್ತು ಪೊಲೀಸರು ಮೇಲಧಿಕಾರಿಗಳಿಗೆ ವರದಿ ಮಾಡಿಕೊಳ್ಳಬೇಕು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳು, ಅಪರಾಧ ಹಿನ್ನೆಲೆವುಳ್ಳವರ ಮೇಲೆ ತೀವ್ರ ನಿಗಾವಹಿಸಬೇಕು. ಕೋಮು-ಸಂಘರ್ಷಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
27 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ:ಕರ್ನಾಟಕವನ್ನು ಮಾದಕವಸ್ತುಮುಕ್ತ ರಾಜ್ಯ ಮಾಡಬೇಕು. ಕಳೆದ ಆರು ತಿಂಗಳಲ್ಲಿ ರಾಜ್ಯದ ವಿವಿಧೆಡೆ ದಾಳಿ ನಡೆಸಿ 27 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ. ಅದರಲ್ಲಿ 4,484 ಕೆ.ಜಿ. ಗಾಂಜಾ, ಮತ್ತು 23 ಕೆ.ಜಿ. ರಾಸಾಯನಿಕ ಮಾದಕವಸ್ತುಗಳಿವೆ. ಈ ಮಾದಕ ವಸ್ತುಗಳನ್ನು ಫೆಬ್ರವರಿ ಮೊದಲ ವಾರದಲ್ಲಿ ನಾಶಗೊಳಿಸಲು ಅನುಮತಿ ನೀಡಲಾಗಿದೆ ಎಂದರು. ಇನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯದ 26 ಐಪಿಎಸ್ ಅಧಿಕಾರಿಗಳನ್ನು ಬಲವಂತವಾಗಿ ಕೇಂದ್ರ ಸೇವೆಗೆ ಶಿಫಾರಸು ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಕೇಂದ್ರ ಸರ್ಕಾರದ ಮನವಿ ಮೇರೆಗೆ ರಾಜ್ಯದ ಅಧಿಕಾರಿಗಳ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ:ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ. ದಲಿತರು, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಸಿಎಂ ಕಟ್ಟಾಜ್ಞೆ ಮಾಡಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇತ್ತು. 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದು ಸ್ವಲ್ಪಮಟ್ಟಿಗೆ ಸುಧಾರಿಸಿದೆ. ರಾಷ್ಟ್ರಮಟ್ಟದಲ್ಲಿ ಈ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ.33ರಷ್ಟಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶೇ.33ಕ್ಕೂ ಅಧಿಕ ಗುರಿ ಸಾಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಿ:ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪ್ರಯತ್ನ ಹೆಚ್ಚು ಮಾಡಿದ್ದಾರೆ. ಇದು ಸಮಾಧಾನಕರವಾಗಿದೆ. ಸಣ್ಣಪುಟ್ಟ ಗಲಾಟೆ ಹೊರತಾಗಿ ಯಾವುದೇ ಕೋಮು-ಗಲಭೆಗಳು ನಡೆದಿಲ್ಲ. ಇತ್ತೀಚೆಗೆ ಸೈಬರ್ ಕ್ರೖೆಂ ಅಪರಾಧಗಳು ಹೆಚ್ಚಾಗುತ್ತಿವೆ. ಹೀಗಾಗಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸೈಬರ್ ಕ್ರೖೆಂ ವಿಭಾಗ ಬಲಪಡಿಸುವಂತೆ ಸೂಚಿಸಿದ್ದೇನೆ. ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ನಿಯಂತ್ರಿಸಬೇಕು. ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಸಿಎಂ ಹೇಳಿದರು.
8 ಹೆಚ್ಚುವರಿ ಡಿಸಿಪಿ ಹುದ್ದೆ:ಬೆಂಗಳೂರಿನ ಜನಸಂಖ್ಯೆ 1.50 ಕೋಟಿಗೆ ಏರಿಕೆಯಾಗಿದೆ. ಅಪರಾಧ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ನಗರದಲ್ಲಿ 8 ಹೆಚ್ಚುವರಿ ಡಿಸಿಪಿ ಹುದ್ದೆಗಳನ್ನು ಸೃಷ್ಟಿಸಲಾಗುವುದು. ನಗರ ಪೊಲೀಸ್ ಘಟಕದಲ್ಲಿ 8 ವಿಭಾಗಗಳಿದ್ದು, 8 ಡಿಸಿಪಿಗಳು ಇದ್ದಾರೆ. ಈ ಹೆಚ್ಚುವರಿ 8 ಡಿಸಿಪಿಗಳನ್ನು ಪ್ರತಿ ವಿಭಾಗಕ್ಕೆ ಒಬರಂತೆ ನಿಯೋಜಿಸಲಾಗುತ್ತದೆ ಎಂದು ಸಿಎಂ ಹೇಳಿದರು. ಈಗಾಗಲೇ ಎಲ್ಲ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಒಬ್ಬ ಎಎಸ್ಪಿ ಹುದ್ದೆಗಳನ್ನು ಸೃಜಿಸಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಈಗ ಬೆಂಗಳೂರು ನಗರದಲ್ಲೂ ಹೆಚ್ಚವರಿ ಡಿಸಿಪಿ ಹುದ್ದೆಗಳನ್ನು ಸೃಜಿಸಲಾಗುತ್ತಿದೆ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:5 × five =
Remember me
