ರವೀಂದ್ರ ಎಸ್. ದೇಶಮುಖ್ಪುಣೆಯ ಪ್ರೌಢಶಾಲೆಯಲ್ಲಿ ಒಂದು ದಿನ ತರಗತಿಯ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಅವರ ಜೀವನದ ಗುರಿಯೇನು? ಆಸೆ ಏನು? ಎಂಬುದನ್ನು ಕಾಗದದಲ್ಲಿ ಬರೆದುಕೊಡಿ ಎಂದು ಹೇಳಿದರು. ಹದಿಹರೆಯ ವಯಸ್ಸಿನ ಮಕ್ಕಳಲ್ಲಿ ಕನಸಿಗೆ, ಆಸೆಗೆ ಕೊರತೆಯೇ? ವೈದ್ಯ, ಇಂಜಿನಿಯರ್, ಶಿಕ್ಷಕ ಆಗಬೇಕು, ಯಾವುದಾದರೂ ದೊಡ್ಡ ನೌಕರಿ ಸೇರಿ ಚೆನ್ನಾಗಿ ದುಡ್ಡು ಮಾಡಬೇಕು… ಅಬ್ಬಬ್ಬಾ ಕನಸುಗಳ ದೊಡ್ಡಜಾತ್ರೆ! ಒಬ್ಬ ಹುಡುಗನ ಗುರಿ ಓದುತ್ತಿದ್ದಂತೆ ಉಪಾಧ್ಯಾಯರ ಕಣ್ಣಂಚು ಒದ್ದೆಯಾಯಿತು. ಆತ ಬರೆದಿದ್ದ- ‘ಪರಮಾತ್ಮನ ಸಂಪೂರ್ಣ ಕೃಪೆಯನ್ನು ಪಡೆಯುವುದು ಮತ್ತು ಜನತಾ ಸೇವೆಯನ್ನು ಮಾಡುವುದು ನನ್ನ ಜೀವನದ ಗುರಿ!’ ಅಕ್ಷರಶಃ ಹಾಗೇ ಬದುಕಿ ಲೋಕಕ್ಕೆ ಅಧ್ಯಾತ್ಮದ ಸವಿಯನ್ನು, ಜೀವನದ ಪರಮೋದ್ದೇಶವನ್ನು, ಪ್ರೀತಿ, ಅಂತಃಕರಣದ ಬತ್ತದ ಸೆಲೆಯನ್ನು, ರಾಷ್ಟ್ರಧರ್ಮದ ಪ್ರಜ್ಞೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಮಾನವಸಹಿತ ಪ್ರತೀ ಜೀವಿಯಲ್ಲೂ ಭಗವಂತನ ಅಂಶವನ್ನು ಕಾಣುವ ದೃಷ್ಟಿ ಒದಗಿಸಿಕೊಟ್ಟರು!
ಜನರೆಲ್ಲ ನಡೆದಾಡುವ ದೇವರೆಂದೇ ಆರಾಧಿಸಿದರು. ಧರ್ಮೋದ್ಧಾರಕ್ಕಾಗಿ ರಾಷ್ಟ್ರಾದ್ಯಂತ ಸಂಚರಿಸಿ ನೂರಾರು ಮಂದಿರಗಳ ಜೀರ್ಣೋದ್ಧಾರ ಮಾಡಿದರು, ದೇವರ ಉತ್ಸವ-ಜಾತ್ರೆಗಳನ್ನು ಪುನರಾರಂಭಿಸಿದರು. ವರ್ಷಗಟ್ಟಲೇ ಸಮಾಧಿಸ್ಥಿತಿಯಲ್ಲಿ ಇರುತ್ತಿದ್ದ ಉತ್ತುಂಗಸಾಧನೆ ಇವರದ್ದು, ಬಡವರು, ನೊಂದವರತ್ತ ಕೃಪಾದೃಷ್ಟಿ ಚೆಲ್ಲಿ ಉದ್ಧರಿಸುತ್ತಿದ್ದರು. ಹೌದು, ಮಹಾನ್ ಸಂತ, ವರದಯೋಗಿ, ದತ್ತಾವತಾರೀ ಶ್ರೀ ಶ್ರೀಧರ ಸ್ವಾಮಿಗಳ ಬದುಕೇ ಪ್ರೇರಣೆಯ ಮಹಾಬೆಳಕು!ಬಾಲ್ಯದ ತೊದಲುನುಡಿಯಲ್ಲೇ ತಾಯಿಗೆ ತತ್ತ್ವಜ್ಞಾನ ಬೋಧಿಸಿ, ಜೀವನದ ಸತ್ಯ ಅರುಹಿದರು! ತುಂಬು ತಾರುಣ್ಯದಲ್ಲಿ ಬಹುತೇಕರು ಲೌಕಿಕ ಆಕರ್ಷಣೆಗಳಲ್ಲಿ ಮುಳುಗಿ ಹೋಗುವಾಗ ಇವರು ಋಷಿತುಲ್ಯವಾಗಿ ಬದುಕುತ್ತ, ತಪಸ್ಸಿಗೆ ಸಿದ್ಧಗೊಂಡರು. 19ನೇ ವಯಸ್ಸಿಗೆ ಸಜ್ಜನಗಡಕ್ಕೆ ತಪಸ್ಸಿಗೆ ಹೊರಟರು. ಆಗ ಅವರು ಕೈಗೊಂಡ ಪ್ರತಿಜ್ಞೆಯನ್ನು ಜೀವನಪರ್ಯಂತ ಪಾಲಿಸಿದ್ದಲ್ಲದೆ ಆ ಪಥದಲ್ಲಿ ಹಲವು ತಪಸ್ವಿಗಳು, ಅಧ್ಯಾತ್ಮ ಜಿಜ್ಞಾಸುಗಳು ನಡೆಯುವಂತೆ ಮಾಡಿದರು.
ಮರಣಪರ್ಯಂತ ಅಖಂಡ ಬ್ರಹ್ಮಚರ್ಯ ಪಾಲಿಸುತ್ತೇನೆ ಎಲ್ಲಿಯೂ ಮಠಾಧಿಪತಿಯಾಗಿ ಕುಳಿತುಕೊಳ್ಳುವುದಿಲ್ಲ. ಇನ್ನು ಮೇಲೆ ಹಣವನ್ನು ಮುಟ್ಟುವುದಿಲ್ಲ. ಯಾರಾದರೂ ಒತ್ತಾಯದಿಂದ ಕೊಟ್ಟರೆ, ಅದನ್ನು ಪರೋಪಕಾರಕ್ಕಾಗಿಯೇ ಬಳಸುವೆನು. ಬಡವರಿಗೂ ಕಷ್ಟದಲ್ಲಿ ಇದ್ದವರಿಗೂ ಸಾಧ್ಯವಾದಷ್ಟು ಸಹಾಯ ಮಾಡುವುದಕ್ಕಾಗಿಯೇ ನನ್ನ ದೇಹವು ಮೀಸಲಾಗಿರುವುದು. ಸಕಲ ಸೀಯರನ್ನೂ ತಾಯಿಯೆಂದೇ ತಿಳಿದಿರುವೆನು. ಸ್ತ್ರೀ-ಪುರುಷರಲ್ಲಿ ಯಾವ ಭೇದವನ್ನೂ ಎಣಿಸದೆ ಎಲ್ಲರಿಗೂ ಸಮಾನವಾಗಿ ಸೇವೆಯನ್ನು ಸಲ್ಲಿಸುವೆನು. ನನ್ನ ಸ್ವಂತದ ಅವಶ್ಯಕತೆಯನ್ನು ಕನಿಷ್ಠ ಮಿತಿಗೆ ಇಳಿಸಿ, ನನ್ನ ತನುಮನಗಳನ್ನು ಲೋಕಸೇವೆಗಾಗಿ ಅರ್ಪಿಸುವೆನು. ಸರ್ವವಿಧದಲ್ಲಿಯೂ ಶ್ರಮಿಸಿ ಧರ್ಮದ ಅವನತಿಯನ್ನು ತಡೆಗಟ್ಟುವೆನು. ‘ಮೇಲ್ಕಂಡ ಉದ್ದೇಶಗಳು ಪೂರ್ಣವಾಗಲೆಂದು ನನ್ನ ದೇಹವನ್ನು ಭಗವಂತನಿಗೆ ಅರ್ಪಿಸಿದ್ದೇನೆ’ ಎಂದು ಹೇಳಿ ಅದರಂತೆಯೇ ಅಕ್ಷರಶಃ ಬದುಕಿ ಅಧ್ಯಾತ್ಮದ ಔನ್ನತ್ಯವನ್ನು ತಲುಪಿದರು. ಹಾಗೆಯೇ, ದೀನ, ದುಃಖಿತರನ್ನು ಉದ್ಧರಿಸಿದರು.ಹಿಂದೆಲ್ಲ ನಮ್ಮ ಋಷಿಮುನಿಗಳು ಅಧ್ಯಾತ್ಮದ ಪ್ರಖರ ತೇಜಸ್ಸಿನಿಂದ ಜಗದೋದ್ಧಾರಗೈದ ನಿದರ್ಶನಗಳು ಬೇಕಾದಷ್ಟಿವೆ. ಆದರೆ, ಈ ಕಲಿ ಕಾಲದಲ್ಲಿ ಎಲ್ಲೆಲ್ಲೂ ಅನ್ಯಾಯ, ಸ್ವಾರ್ಥ, ಲೋಭಗಳೇ ತಾಂಡವವಾಡುತ್ತಿರುವಾಗ ಇಂಥ ಸಾಧನೆ ಸಾಧ್ಯವೇನು, ಅಂಥ ಋಷಿಸದೃಶ ಬದುಕು ಸಾಕಾರಗೊಳ್ಳುವುದೇನು ಎಂಬ ಕಳವಳ, ಪ್ರಶ್ನೆಗಳಿಗೆ ಶ್ರೀ ಶ್ರೀಧರ ಸ್ವಾಮಿಗಳ ಬದುಕೇ ಉತ್ತರವಾಯಿತು (07/12/1908-19/04/1973). ಶ್ರೀಧರರು ಉದ್ಧರಿಸಿದ ಜೀವಗಳೆಷ್ಟೋ, ಜ್ಞಾನಧಾರೆಯಿಂದ ಅಮೃತಪಥಕ್ಕೆ ಕೊಂಡೊಯ್ದ ದಿವ್ಯಪ್ರಭಾವವೆಷ್ಟೋ ಎಂಬುದನ್ನು ಭೌತಿಕವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಏಕೆಂದರೆ, ಅವರು ಮಾನವರ ಹೃದಯಗಳಲ್ಲಿ ಭಕ್ತಿ, ಪ್ರೀತಿ, ಅಂತಃಕರಣದ ನದಿಯನ್ನೇ ಹರಿಸಿದರು. ತಪಸ್ಸಿನ ಬಲದಿಂದ ವರದಹಳ್ಳಿಯ ಬೆಟ್ಟದ ಮೇಲೆ ಗಂಗೆಯನ್ನು ಆಹ್ವಾನಿಸಿದರು, ದುಷ್ಟಜನರ ಮನೋವೃತ್ತಿ ಬದಲಿಸಿ ಸನ್ಮಾರ್ಗಕ್ಕೆ ತಂದರು. ಧರ್ಮಧ್ವಜವನ್ನು ಸ್ಥಾಪಿಸಿ ಧರ್ಮಕ್ಕೆ ಸದಾ ಜಯ ಎಂದು ಸಾರಿದರು. ಇವರ ಲೀಲೆಗಳು, ಕೃಪಾಕಾರುಣ್ಯಗಳು ಅಸಾಧಾರಣ. ಮಠಾಧಿಪತಿಯಾಗದೆ ನಂಬುವ ಭಕ್ತರೆಲ್ಲರ ಕಾಮಧೇನುವಾದರು, ಹೃದಯಾಧಿಪತಿ ಮತ್ತು ಬಡವರ ಪಾಲಿನ ಭಗವಂತರಾದರು.
ಅದೊಮ್ಮೆ, ಶೀಗೆಹಳ್ಳಿಗೆ ಪರಿಚಯವಿರುವ ಭಕ್ತರ ಮನೆಗೆ ಪಾದಪೂಜೆಗೆ ಹೋಗಿದ್ದರು ಶ್ರೀ ಶ್ರೀಧರ ಸ್ವಾಮಿಗಳು. ಪಕ್ಕದ ಮನೆಯವ ಬಂದು, ‘ನಾನು ಬಡವ ಸ್ವಾಮಿ, ನಿಮ್ಮ ಪಾದಪೂಜೆ ಮಾಡುವಷ್ಟು ಯೋಗ್ಯತೆ ನನಗಿಲ್ಲ. ಆದರೆ ನಿಮ್ಮ ಪಾದಧೂಳಿಯನ್ನಾದರೂ ನಮ್ಮ ಮನೆಗೆ ಹಾಕಬೇಕು’ ಎಂದು ವಿನಯದಿಂದ ಬೇಡಿಕೊಂಡ. ಶ್ರೀಧರರು ಮುಗುಳ್ನಗುತ್ತ-‘ರಸ್ತೆಯ ಧೂಳನ್ನು ನಿನ್ನ ಮನೆಯಲ್ಲಿ ಅಲ್ಲಿಂದಿಲ್ಲಿಗೂ ಚೆಲ್ಲು. ಈ ಮನೆಯ ಪಾದಪೂಜೆಯ ನಂತರ ನಿನ್ನ ಮನೆಗೆ ಬರುವೆ’ ಎಂದರು. ಆ ಗೃಹಸ್ಥ ಅಚ್ಚರಿಗೊಂಡನಾದರೂ ಭಕ್ತಿಯಿಂದಲೇ ರಸ್ತೆಯ ಧೂಳನ್ನು ಮನೆಯ ಅಲ್ಲಲ್ಲಿ ಚೆಲ್ಲಿ ಗುರುಗಳಿಗೆ ಕಾಯುತ್ತ ಕುಳಿತ. ಶ್ರೀ ಶ್ರೀಧರ ಸ್ವಾಮೀಜಿ ಬಂದರು. ಈ ಗೃಹಸ್ಥ ಗುರುಗಳ ಪಾದಗಳಿಗೆ ನೀರು ಹಾಕಿ, ಪಾದತೀರ್ಥ ಸ್ವೀಕರಿಸಿ, ಮನೆಯೊಳಗೆ ಬರಮಾಡಿಕೊಂಡು ಹಾಲು, ಹಣ್ಣು ನೀಡಿ ಶ್ರದ್ಧಾಭಕ್ತಿಯಿಂದ ಉಪಚರಿಸಿದ. ಮನೆಯವರೆಲ್ಲ ಸೇರಿ ಹೂವು, ಪತ್ರೆ, ತುಲಸೀದಳಗಳಿಂದ ಪಾದಪೂಜೆ ಮಾಡಿ, ಭಜನೆ ಮಾಡಿ ನಮಸ್ಕರಿಸಿದರು. ಶಬರಿಯ ಕಾಯುವಿಕೆಯನ್ನು ಅಂತ್ಯಗೊಳಿಸಿ ಆ ಮಹಾತಪಸ್ವಿನಿಗೆ ಶ್ರೀರಾಮಚಂದ್ರ ದಿವ್ಯದರ್ಶನ ನೀಡಿ ಹರಸಿದಂತೆ ಶ್ರೀ ಶ್ರೀಧರ ಸ್ವಾಮೀಜಿ ಇವರ ಕುಟುಂಬದ ಭಕ್ತಿಗೆ ಮನಸೋತರು. ಆ ಮನೆಯಲ್ಲಿದ್ದ ಧೂಳಿನ ಮೇಲೆ ಅತ್ತಿಂದಿತ್ತ ಓಡಾಡಿ, ಮುಂದಿನ ಮನೆಗೆ ಪಾದಪೂಜೆ ಸ್ವೀಕರಿಸಲು ಹೋದರು. ಏನಾಶ್ಚರ್ಯ! ಈ ಬಡಕುಟುಂಬದವರು ಗುರುಗಳನ್ನು ಬೀಳ್ಕೊಟ್ಟು ಬರುವಷ್ಟರಲ್ಲಿ ಅವರು ಓಡಾಡಿದ ಜಾಗಗಳಲ್ಲಿ ಹಣವು ಚೆಲ್ಲಿತ್ತು. ಈ ಗೃಹಸ್ಥ ಏನು ಮಾಡಬೇಕೆಂದು ತಿಳಿಯದೆ ಧಾವಿಸಿ ಹೋಗಿ ಸ್ವಾಮೀಜಿಗೆ ವಿಷಯ ತಿಳಿಸಿದ. ‘ಕೆಲವು ನಾಣ್ಯಗಳನ್ನು ದೇವರ ಪೀಠದಲ್ಲಿಟ್ಟು ಪೂಜಿಸು, ಉಳಿದ ಭಾಗದಲ್ಲಿ ಸ್ವಲ್ಪ ನಿನ್ನ ಉಪಯೋಗಕ್ಕೂ ಮತ್ತು ಸ್ವಲ್ಪ ಭಾಗ ಬಡವರಿಗೆ ದಾನ ಮಾಡು’ ಎಂದರು ಶ್ರೀಧರರು. ಅಂದಿನಿಂದ ಆ ಗೃಹಸ್ಥನ ಬಡತನವೆಲ್ಲ ಕೊನೆಯಾಗಿ, ಸುಖದಿಂದ ಬದುಕಿದ (ಶ್ರೀಧರ ಸ್ಮರಣೆ-ಲೇಖಕರು: ಜಿ.ಟಿ.ಶ್ರೀಧರ ಶರ್ಮ).ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಶ್ರೀ ಶ್ರೀಧರ ಸ್ವಾಮೀಜಿಯವರ ದರ್ಶನ ಪಡೆದು, ಅವರ ಮುಂದೆ ವಿಧಾನಸೌಧ ನಿರ್ಮಾಣದ ನೀಲಿನಕ್ಷೆ ಇರಿಸಿ, ಆಶೀರ್ವಾದ ಕೋರಿದರು. ಆ ನಕ್ಷೆಯನ್ನು ನೋಡಿ ಕೆಲ ಮಾರ್ಪಾಡು ಸೂಚಿಸಿದ ಸ್ವಾಮೀಜಿ, ‘ಮಗು! ಇದು ಅತಿಭಾಗ್ಯದ ಕಾರ್ಯ. ಇದು ಯಶಸ್ವಿಯಾಗುವುದರಲ್ಲಿ ಸಂದೇಹ ಬೇಡ’ ಎಂದು ಆಶೀರ್ವದಿಸಿ ಮಂತ್ರಾಕ್ಷತೆ ನೀಡಿದರು ಮತ್ತು ಆಸ್ತಿಭಾರ ಹಾಕುವಾಗ ಕೆಲ ಮಂತ್ರಾಕ್ಷತೆ ಹಾಕಿ, ಕೆಲವನ್ನು ಕೆಲಸ ಮುಗಿಯುವವರೆಗೂ ಜತೆಯಲ್ಲಿ ಇರಿಸಿಕೊಳ್ಳುವಂತೆ ಹೇಳಿದರು. ಅದರಂತೆ ವಿಧಾನಸೌಧದ ವೈಭವ ಹೆಮ್ಮೆಯ ಪ್ರತೀಕವೂ ಆಗಿರುವುದು ಗೊತ್ತೇ ಇದೆ.ಶ್ರೀ ಶ್ರೀಧರ ಸ್ವಾಮಿಗಳು ಭೌತಿಕಶರೀರದ ಜೀವಿತಾವಧಿಯಲ್ಲಿ 15 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಅಭ್ಯಾಸ ಮಾಡಿದರು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಆಂಗ್ಲಭಾಷೆಯಲ್ಲಿ ಹಲವು ಶ್ರೇಷ್ಠ ಕೃತಿಗಳನ್ನು ರಚಿಸಿದರು. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಪತಕಿ ವಂಶಸ್ಥರಾದ ಇವರು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಚಿಂಚೋಳಿಯಲ್ಲಿ ದತ್ತಜಯಂತಿಯ ದಿನದಂದೇ, ಅದೂ ದತ್ತಾತ್ರೇಯರ ಪಲ್ಲಕ್ಕಿ ಇವರ ಮನೆಯಮುಂದೆ ಬಂದು ಮಂಗಳಾರತಿ ನಡೆಯುತ್ತಿದ್ದಾಗಲೇ ಜನಿಸಿದರು (ತಂದೆ ನಾರಾಯಣ ರಾವ್, ತಾಯಿ ಕಮಲಾಬಾಯಿ). ಕಲಬುರಗಿಯಿಂದ 28 ಕಿ.ಮೀ. ಅಂತರದಲ್ಲಿ ಇರುವ ಲಾಡಚಿಂಚೋಳಿ ಗ್ರಾಮದಲ್ಲಿ ಶ್ರೀಧರ ಸ್ವಾಮಿಗಳ ಭವ್ಯ ದೇಗುಲವಿದೆ. ಅಲ್ಲಿ ಶ್ರೀಧರರ ಪಾದುಕೆಗಳು, ಭವ್ಯಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ದತ್ತ ಜಯಂತಿ (ಶ್ರೀಧರ ಜಯಂತಿ), ಶ್ರೀಧರರ ಆರಾಧನಾ ಮಹೋತ್ಸವ ಸೇರಿ ಹಲವು ಕಾರ್ಯಕ್ರಮಗಳು ಭಕ್ತಿ, ಉಲ್ಲಾಸದಿಂದ ಆಚರಿಸಲ್ಪಡುತ್ತವೆ.ಕಲಬುರಗಿ, ಪುಣೆಯಲ್ಲಿ ಶಿಕ್ಷಣ ಪಡೆದು ಸಜ್ಜನಗಡದಲ್ಲಿ ಸಮರ್ಥ ರಾಮದಾಸರನ್ನು ಸಾಕ್ಷಾತ್ಕಾರ ಮಾಡಿಕೊಂಡು, ಧರ್ಮಪ್ರಸಾರಕ್ಕಾಗಿ ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸಿ, ಕರ್ನಾಟಕದ ಗೋಕರ್ಣ, ಶಿಗೇಹಳ್ಳಿ, ಶಿರಸಿ ಮುಂತಾದೆಡೆ ಪ್ರವಚನ ನೀಡಿದರು. ಸಾಗರ ಬಳಿಯ ವರದಹಳ್ಳಿ ತಪಸ್ಸಿಗೆ ಪ್ರಶಸ್ತ ಜಾಗವೆಂದು ಅಲ್ಲೇ ಹಲವು ವರ್ಷಗಳ ಕಾಲ ಕಠಿಣ ತಪಸ್ಸು ಆಚರಿಸಿದರು. 1943ರಿಂದ 1973ರ ಅವಧಿಯಲ್ಲಿ ವರದಹಳ್ಳಿ, ಮಂಗಳೂರು, ಸಜ್ಜನಗಡ, ಅಯೋಧ್ಯೆ, ಕನ್ಯಾಕುಮಾರಿ ಸೇರಿ ಹಲವೆಡೆ ಚಾತುರ್ಮಾಸ್ಯ ವ್ರತ ಆಚರಿಸಿದರು.ಭಾರತೀಯ ಸಂತ ಪರಂಪರೆಯಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದ ಇವರ ಹೃದಯವೈಶಾಲ್ಯದ ನುಡಿಗಳಿಗೆ ಕಳ್ಳನು ಪ್ರಾಮಾಣಿಕನಾದ, ಪತ್ನೀಪೀಡಕ ಸತ್ಪತಿಯಾದ, ಭೂತಪ್ರೇತಗಳು ದೂರವಾದವು. ಹೆದರಿಸುವ ಸರ್ಪಗಳೂ ಶಾಂತವಾದವು. ‘ಮನುಷ್ಯ ಕಡಿಮೆ ಪಡೆದು ಹೆಚ್ಚು ಕೊಡುವುದನ್ನು ಕಲಿಯಬೇಕು’ ಎಂದು ಬೋಧಿಸಿದ ಅವರು ಮಾಯೆಯಿಂದ ಹೊರಬರುವ ಸಮಷ್ಟಿಯ ಹಿತ ಬಯಸುವ ಪರಿಯನ್ನು ಹೇಳಿಕೊಟ್ಟರು. ಅನುಪಮ ಅಂತಃಕರಣದ ಶ್ರೀ ಶ್ರೀಧರ ಸ್ವಾಮಿಗಳು ಈ ಇಳೆ ಕಂಡ ಶ್ರೇಷ್ಠ ಸಂತರು. ಕಠಿಣ ತಪಸ್ಸು, ಮಮತೆ, ವಾತ್ಸಲ್ಯದ ಗುಣ, ಗುರುಪ್ರೀತಿಯಿಂದ ಮನುಕುಲಕ್ಕೆ ಹೊಂಬೆಳಕು ನೀಡಿದ ಅವರ ಸ್ಮರಣೆಯೇ ಅಪಾರ ಶಕ್ತಿ ಒದಗಿಸುವಂಥದ್ದು. ಬಾಲ್ಯದಿಂದಲೂ ಒಂದು ಪದ್ಯವನ್ನು ಆಗಾಗ ಹೇಳುತ್ತಿದ್ದ ಶ್ರೀಧರರು ಆ ಮೂಲಕ ಬದುಕಿನ ಉದ್ದೇಶ, ಸಾರ್ಥಕ್ಯವನ್ನೂ ತಿಳಿಸಿಕೊಟ್ಟಿದ್ದಾರೆ!ಘಟಿಕಾ ಗೇಲಿ ಪಳೇ ಗೇಲಿ ತಾಸ ವಾಜೇ ಝಣಾಣಾಆಯುಷ್ಯಾಚಾ ನಾಶ ಹೋತೋ ರಾಮ ಕಾರೆ ಮಣಾನಾ॥ಗಳಿಗೆ, ನಿಮಿಷ ಕಳೆದು ಹೋದವು. ಘಂಟೆ ಝಣಝಣ ಎಂದಿತು. ಆಯಸ್ಸು ಸುಮ್ಮನೇ ಕಳೆದು ಹೋಗುತ್ತಿದೆ. ‘ರಾಮ’ ಎಂಬ ನಾಮವನ್ನು ಹೇಳಿ!ಲೌಕಿಕದ, ಅಲೌಕಿಕದ ದಾರಿ ಕಾಣದಿದ್ದಾಗ, ಆ ಭಕ್ತಿಮಾರ್ಗವೇ ಮುಂದಿನ ಪಥವನ್ನು ತೋರಿಸಿಕೊಡುತ್ತದೆ. ಭಾರತಕ್ಕೆ ಈಗ ಬೇಕಾಗಿರುವ ಪಥವು ಇದುವೇ. ಅಲ್ಲವೇ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
