ಬೆಳಗಾವಿ:ಉತ್ತರ ಕರ್ನಾಟಕ ಭಾಗದಲ್ಲಿ ಹೈನೋದ್ಯಮ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದ ನವೋದ್ಯಮಿ ಶಿವಕಾಂತ ಎಸ್. ಸಿದ್ನಾಳ (49) ಅವರ ಅಂತ್ಯಸಂಸ್ಕಾರ ಅವರು ಸ್ಥಾಪಿಸಿದ ಕುರಗುಂದ ಗ್ರಾಮದ ಹೊರವಲಯದಲ್ಲಿರುವ ವಿಜಯಕಾಂತ ಡೇರಿ ಆವರಣದಲ್ಲಿ ಜನಸಾಗರದ ಮಧ್ಯೆ ಭಾನುವಾರ ನೆರವೇರಿತು.
ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಬಳಿ ಇರುವ ವಿಜಯಕಾಂತ ಡೇರಿ ಆವರಣದಲ್ಲಿ ಮಧ್ಯಾಹ್ನ 1.50 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಬಳಿಕ ಡೇರಿ ಆವರಣದ ಹೃದಯ ಭಾಗದಲ್ಲಿ ಸಮಾಧಿ ಸ್ಥಳಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಸಂಜೆ 4.30 ಗಂಟೆಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಬೆಳಗಾವಿ ನಗರ, ರಾಮದುರ್ಗ, ಗೋಕಾಕ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಸವದತ್ತಿ ಹಾಗೂ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು, ಹೈನುಗಾರರು, ಕೂಲಿಕಾರ್ವಿುಕರು, ವಾಹನಗಳ ಚಾಲಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಕೆಲವರು ಶನಿವಾರ ರಾತ್ರಿಯಿಂದಲೇ ವಿಜಯಕಾಂತ ಡೇರಿ ಆವರಣದಲ್ಲಿ ಶಿವಕಾಂತ ಅವರ ಪಾರ್ಥಿವ ಶರೀರ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಲೆಂದು ಕಾಯುತ್ತಿದ್ದರು.

ವಿವಿಧ ಮಠಾಧೀಶರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ವಿಜಯಪುರ, ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಗೋವಾ ರಾಜ್ಯದ ಪಣಜಿ, ವಾಸ್ಕೋದ ವಿವಿಧ ಕ್ಷೇತ್ರಗಳ ಉದ್ಯಮಿಗಳು, ಗಣ್ಯರು, ಹಾಲಿ-ಮಾಜಿ ಶಾಸಕರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸ್ಥಳೀಯ ಮುಖಂಡರು ಭಾನುವಾರ ಬೆಳಗ್ಗೆಯೇ ಬೆಳಗಾವಿಗೆ ಆಗಮಿಸಿ ಶಿವಕಾಂತ ಸಿದ್ನಾಳ ಅವರಿಗೆ ನಮನ ಸಲ್ಲಿಸಿದರು.
ಅನಾರೋಗ್ಯ ಹಿನ್ನೆಲೆಯಲ್ಲಿ ಶಿವಕಾಂತ ಎಸ್. ಸಿದ್ನಾಳ ಅವರು ಮನೆಯಲ್ಲಿಯೇ ಇದ್ದರು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಮನೆಯಲ್ಲಿದ್ದುಕೊಂಡೇ ವಿಜಯಕಾಂತ ಡೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 2 ಸಾವಿರಕ್ಕೂ ಅಧಿಕ ನೌಕರರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಅಲ್ಲದೆ, ಡೇರಿ ಹಾಲು ಪೂರೈಕೆ ಮಾಡುತ್ತಿದ್ದ ಹೈನುಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಆರ್ಥಿಕ ಸೇರಿ ಎಲ್ಲ ರೀತಿ ಸಹಾಯ, ಸಹಕಾರ ನೀಡುತ್ತಿದ್ದರು. ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಲೆಕ್ಕಿಸದೆ ಸಂಸ್ಥೆಗಾಗಿ, ದುಡಿಯುತ್ತಿರುವ ಸಿಬ್ಬಂದಿಯ ಅಭಿವೃದ್ಧಿಗಾಗಿ ಚಿಂತಿಸುತ್ತಿದ್ದರು. ದೂರದ ಊರುಗಳಿಂದ ಮನೆ ಬಾಗಿಲಿಗೆ ಬರುವ ನೌಕರರು, ಹಾಲು ಪೂರೈಕೆದಾರರ ಜತೆ ಗಂಟೆಗಟ್ಟಲೇ ರ್ಚಚಿಸಿ ಅವರ ಸಮಸ್ಯೆ ಪರಿಹರಿಸುತ್ತಿದ್ದರು.
ಅವರು ಗಳಿಸಿದ ಜನರ ಪ್ರೀತಿ, ವಿಶ್ವಾಸಕ್ಕೆ ಜನಸಮೂಹವೇ ಸಾಕ್ಷಿಯಾಗಿತ್ತು. ಶಿವಕಾಂತ ಎಸ್. ಸಿದ್ನಾಳ ಅವರಿಗೆ ಪತ್ನಿ ದೀಪಾ ಸಿದ್ನಾಳ, ಪುತ್ರ ವಿಜಯಕಾಂತ, ಪುತ್ರಿ ನಿವೇದಿತಾ ಹಾಗೂ ಅಪಾರ ಬಂಧುಗಳು ಇದ್ದಾರೆ.
ರೈತರಿಗೆ, ಹೈನುಗಾರಿಕೆಗಾಗಿ ವಿಜಯಕಾಂತ ಡೇರಿ ಸ್ಥಾಪಿಸಲಾಯಿತು. ನಮ್ಮ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಡಾ. ವಿಜಯ ಸಂಕೇಶ್ವರರ ಕೊಡುಗೆ ಅಪಾರ ಇದೆ. ವಿಜಯಕಾಂತ ಡೇರಿ ಆರಂಭದಲ್ಲಿ ನಿರ್ವಣದ ಬಜೆಟ್ ಸುಮಾರು 25 ಕೋಟಿ ರೂ. ಗಡಿ ದಾಟಿತು. ಈ ಕುರಿತು ಡಾ. ವಿಜಯ ಸಂಕೇಶ್ವರ ಅವರೊಂದಿಗೆ ರ್ಚಚಿಸುತ್ತಿದ್ದ ಸಂದರ್ಭದಲ್ಲಿ ‘ಬಜೆಟ್ ಬಗ್ಗೆ ಲೆಕ್ಕ ಹಾಕಬೇಡಿ. ನೀವು ಡೇರಿ ಆರಂಭಿಸಿ ನಾನು ಇದ್ದೇನೆ’ ಎಂದು ಧೈರ್ಯ ತುಂಬಿದ್ದರು. ಇವತ್ತು ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ವಿಜಯಕಾಂತ ಡೇರಿಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದ ನನ್ನ ತಮ್ಮ ಶಿವಕಾಂತ ಸಿದ್ನಾಳ ಸಾಧನೆ ದೊಡ್ಡದು. ಬಹಳ ಸೌಮ್ಯ, ಸಜ್ಜನ ವ್ಯಕ್ತಿಯಾಗಿದ್ದನು. ಸದಾ ಉದ್ಯಮದ ಬೆಳವಣಿಗೆ ಬಗ್ಗೆ ಚಿಂತನೆ ಮಾಡುತ್ತಿದ್ದನು. ಚಿಕ್ಕ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ. ದೀಪಾ ಸಿದ್ನಾಳ, ವಿಜಯಕಾಂತ ಸಿದ್ನಾಳ ಅವರಿಗೆ ನನ್ನ ಬೆಂಬಲ ಇದೆ. ಎಲ್ಲ ರೀತಿಯ ಸಹಕಾರ ನೀಡಲಾಗುವುದು.
| ಶಶಿಕಾಂತ ಸಿದ್ನಾಳ್ ಶಿವಕಾಂತ ಸಹೋದರ
ಅಂತಿಮದರ್ಶನ ಸ್ಥಳದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಹಿರಿಯ ಚೇತನ | ಸಾಧನೆ ಸ್ಮರಿಸಿ ಕಂಬನಿ
ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಬಳಿ ಇರುವ ವಿಜಯಕಾಂತ ಡೇರಿ ಆವರಣದಲ್ಲಿ ಭಾನುವಾರ ಶಿವಕಾಂತ ಎಸ್. ಸಿದ್ನಾಳ ಅವರ ಪಾರ್ಥಿವ ಶರೀರದ ಎದುರು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಅಳಿಯನ ಅಗಲಿಕೆ ನೆನೆದು ಗದ್ಗದಿತರಾದರು.

ಅಂತ್ಯಕ್ರಿಯೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಡಾ. ವಿಜಯ ಸಂಕೇಶ್ವರ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಸಿದ್ನಾಳ ಕುಟುಂಬ ಬೈಲಹೊಂಗಲ ಹಾಗೂ ಬೆಳಗಾವಿ ಭಾಗದಲ್ಲಿ ಹೆಸರುವಾಸಿ ಯಾಗಿದೆ. ಶಿವಕಾಂತ ಅವರ ತಂದೆ ಎಸ್.ಬಿ. ಸಿದ್ನಾಳ ಅವರು ಜೀವನಪರ್ಯಂತ ಆದರ್ಶ ರಾಜಕಾರಣಿಯಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಕಾಂತ ಅವರನ್ನು ಸ್ಪರ್ಧೆಗಿಳಿಸುವುದಾಗಿ ಎಸ್.ಬಿ. ಸಿದ್ನಾಳರು ಹೇಳಿದ್ದರು. ‘ಅಪ್ಪಾಜಿ ಹೀಗೆ ಅನ್ನುತ್ತಿದ್ದಾರೆ ಎಂದು ಶಿವಕಾಂತ ನನ್ನೆದುರು ಹೇಳಿದಾಗ, ‘ನಿನ್ನ ಮಕ್ಕಳು ಸಣ್ಣವರಿದ್ದ್ದಾರೆ. ಮುಂದಿನ ಎಲೆಕ್ಷನ್​ಗೆ ನಿಲ್ಲಬಹುದು’ ಎಂದು ಹೇಳಿದ್ದೆ. ಅದಾದ ವರ್ಷದಲ್ಲಿ ಅವರ ಆರೋಗ್ಯ ಕೈಕೊಟ್ಟಿತು ಎಂದು ಹೇಳುತ್ತ ಭಾವುಕರಾದರು.
ಇವತ್ತು ಹಲವರು ಶಿವಕಾಂತ ಸಾಧನೆ ಸ್ಮರಿಸಿ ಮಾತನಾಡಿದ್ದೀರಿ. ಇಲ್ಲಿ ಸೇರಿರುವ ಜನರನ್ನು ನೋಡಿದರೆ ಸಿದ್ನಾಳ ಹಾಗೂ ಸಂಕೇಶ್ವರ ಕುಟುಂಬದ ಮೇಲೆ ಜನರು ಇಟ್ಟಿರುವ ಪ್ರೀತಿ ಎಂಥದ್ದು ಎಂಬುದು ಗೊತ್ತಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಶಿವಕಾಂತ ಮಾಡಿದ ಸಾಧನೆ ಅಪಾರ. ಶಿವಕಾಂತ ಅವರ ಪತ್ನಿ, ಮಕ್ಕಳು ಆದಿತ್ಯ ಮಿಲ್ಕ್ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಸಿಬ್ಬಂದಿ ಇನ್ನಿಲ್ಲದ ಸಹಕಾರ ನೀಡಿದ್ದಾರೆ. ಈ ಭಾಗದ ರೈತರಿಗಾಗಿ ಶಿವಕಾಂತ ಹಲವು ಉತ್ತಮ ಕೆಲಸ ಮಾಡಿದ್ದಾರೆ. ಓರ್ವ ಪತ್ನಿ ತನ್ನ ಪತಿಯ ಸೇವೆಯನ್ನು ಯಾವ ರೀತಿ ಮಾಡುತ್ತಾಳೆ ಎಂಬುದನ್ನು ಪುಸ್ತಕಗಳಲ್ಲಿ ಓದಿರುವೆ, ಕಣ್ಣಾರೆ ನೋಡಿರುವೆ. ಆದರೆ, ನನ್ನ ಮಗಳು ದೀಪಾ ಸಿದ್ನಾಳ ಸತತ ನಾಲ್ಕು ವರ್ಷ ತನ್ನ ಪತಿಯ ಸೇವೆ ಮಾಡಿದ್ದು ನನಗೆ ತೃಪ್ತಿ ತಂದಿದೆ ಎಂದು ಸಂಕೇಶ್ವರರು ಕಣ್ಣೀರಾದರು. ಶಿವಕಾಂತ ಸಿದ್ನಾಳ ಅವರು 15 ವರ್ಷ ವಿಜಯಕಾಂತ ಡೇರಿ ಸಂಸ್ಥೆಯ ವ್ಯವಸ್ಥಾಪಕರಾಗಿದ್ದರು. ಈಗ ಆ ಸ್ಥಾನವನ್ನು ಪುತ್ರಿ ದೀಪಾ ಸಿದ್ನಾಳ ತುಂಬಲಿದ್ದಾರೆ. ಈ ಭಾಗದ ರೈತರಿಗಾಗಿ ಮುಂದೆಯೂ ಸಂಸ್ಥೆ ಶ್ರಮಿಸಲಿದೆ. ಇಲ್ಲಿ ಯಾವುದೂ ಶಾಶ್ವತ ಅಲ್ಲ. ಬದಲಾವಣೆ ಅನಿವಾರ್ಯ. ಈ ಮೊದಲು ನೀಡಿದ ಸಹಕಾರವನ್ನು ಜನರು ಇನ್ನುಮುಂದೆಯೂ ನೀಡಬೇಕು. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೆಲವೇ ದಿನಗಳಲ್ಲಿ ಪುತ್ರಿ ದೀಪಾ ಹಾಗೂ ಅವರ ಮಕ್ಕಳು, ಕಾರ್ವಿುಕರು ಹಾಗೂ ಸಿಬ್ಬಂದಿ ವರ್ಗದ ಹಿತ ಕಾಪಾಡಲಿದ್ದಾರೆ ಎಂದರು.
ಸಾಂತ್ವನ ಹೇಳಿದ ಎಲ್ಲರಿಗೂ ಋಣಿ
ಶಿವಕಾಂತ ಅವರಿಗೆ ಛಲ ಮತ್ತು ಮುಂದಾಲೋಚನೆ ಇತ್ತು. ಹಲವು ಕನಸು ಮತ್ತು ಯೋಜನೆಗಳನ್ನು ಪತ್ನಿ ಹಾಗೂ ಮಕ್ಕಳ ಎದುರು ಹೇಳಿಕೊಂಡಿದ್ದರು. ಆ ಯೋಜನೆಗಳನ್ನು ಮುಂದುವರಿಸಲಾಗುವುದು. ಸಿದ್ನಾಳ ಹಾಗೂ ಸಂಕೇಶ್ವರ ಕುಟುಂಬ ರೈತರು ಹಾಗೂ ಕಾರ್ವಿುಕರ ಹಿತ ಕಾಪಾಡುತ್ತ ಸಂಸ್ಥೆ ಬೆಳೆಸಲಿವೆ ಎಂಬ ವಚನ ಕೊಡುತ್ತೇನೆ. ಇಂಥ ದುಃಖದ ಸಂದರ್ಭದಲ್ಲಿ ಸುಡುಬಿಸಿಲಿನಲ್ಲೂ ವಿವಿಧ ಭಾಗಗಳಿಂದ ಆಗಮಿಸಿ ಸಾಂತ್ವನ ಹೇಳಿದ್ದಕ್ಕೆ ತಮಗೆಲ್ಲರಿಗೂ ಚಿರಋಣಿಯಾಗಿರುವೆ ಎಂದು ಡಾ. ವಿಜಯ ಸಂಕೇಶ್ವರರು ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಧನ್ಯವಾದ ತಿಳಿಸಿದರು.
ಯುವ ಉದ್ಯಮಿ ಶಿವಕಾಂತ ಸಿದ್ನಾಳ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ. ನಮ್ಮಲ್ಲಿಯೇ ಇದ್ದಾರೆ. ಅವರು ಮಾಡಿದ ಸಾಧನೆ ಅವರನ್ನು ಜೀವಂತವಾಗಿರಿಸಿದೆ. ಅಳಿಯನಿಗಾಗಿ ಮಾವ ಡಾ. ವಿಜಯ ಸಂಕೇಶ್ವರ ಅವರು ಧಾರ್ವಿುಕ ಕ್ಷೇತ್ರಗಳೆಲ್ಲವನ್ನೂ ಸುತ್ತಿ ಪ್ರಾರ್ಥನೆ ಮಾಡಿದ್ದರು. ಈ ವಿಷಯ ಕುರಿತು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ದೂರವಾಣಿ ಕರೆ ಮಾಡಿ ಬಹಳವಾಗಿ ಹೇಳಿದ್ದಾರೆ. ಡಾ. ವಿಜಯ ಸಂಕೇಶ್ವರ ಅವರ ಪ್ರಯತ್ನ ಕುರಿತು ನೆನಪಿಸಿಕೊಂಡಿದ್ದಾರೆ. ಮೃತರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
| ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹುಕ್ಕೇರಿ ಹಿರೇಮಠ
ಕಿತ್ತೂರು ನಾಡಿನಲ್ಲಿ ಸಿದ್ನಾಳ ದೊಡ್ಡ ಮನೆತನ. ಈ ಭಾಗದ ತ್ರಿವಿಧ ದಾಸೋಹ ಕುಟುಂಬಗಳಲ್ಲಿ ಸಿದ್ನಾಳ ಕುಟುಂಬ ಕೂಡ ಒಂದು. ಅಂತಹ ಧಾರ್ವಿುಕ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಸಿದ ಶಿವಕಾಂತ ಸಿದ್ನಾಳ ಅವರೊಬ್ಬರು ಅಪಾರ ಶ್ರಮಜೀವಿ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಹೈನುಗಾರಿಕೆ ಉದ್ಯಮ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಮೂಲಕ ಇತರರಿಗೆ ಮಾದರಿಯಾಗಿ ಬೆಳೆದಿದ್ದರು. ಚಿಕ್ಕ ವಯಸ್ಸಿನಲ್ಲಿ ಸಾವಿರಾರು ಕುಟುಂಬಗಳಿಗೆ ಅನ್ನದಾತರಾಗಿದ್ದ ಶಿವಕಾಂತ ಸಿದ್ನಾಳ ಅವರು ಅಪರೂಪದ, ಒಳ್ಳೆಯ ವ್ಯಕ್ತಿಯಾಗಿದ್ದರು. ಇದೀಗ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ದೇವರು ಅವರ ಕುಟುಂಬಕ್ಕೆ ಆ ದುಃಖ ಭರಿಸುವ ಶಕ್ತಿ ನೀಡಲಿ.
| ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಕೂಡಲಸಂಗಮ ಪಂಚಮಸಾಲಿಪೀಠ:ಡಾ. ವಿಜಯ ಸಂಕೇಶ್ವರ ಅವರ ಅಳಿಯ, ಖ್ಯಾತ ಉದ್ಯಮಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಯಲ್ಲಿ ಛಾಪು ಮೂಡಿಸಿರುವ ಸಜ್ಜನರು, ದೈವಭಕ್ತರು ಆದ ಶಿವಕಾಂತ ಸಿದ್ನಾಳ ಅವರ ಅಕಾಲಿಕ ಮರಣ ಅತೀವ ದುಃಖ ತಂದಿದೆ. ಈ ದುಃಖದ ಸಮಯದಲ್ಲಿ ಮಹಾ ಮೃತ್ಯುಂಜಯನು ಸಂಕೇಶ್ವರರ ಮಗಳು ದೀಪಾ ಹಾಗೂ ಮೊಮ್ಮಕ್ಕಳಿಗೆ ಧೈರ್ಯ ಕೊಟ್ಟು ಸಿದ್ನಾಳರು ಬಿಟ್ಟು ಹೋಗಿರುವ ಕೆಲಸಗಳನ್ನು ಮುಂದುವರಿಸಲು ದೈವ ಸಹಕಾರ ನೀಡಿ ಕಾಪಾಡಲಿ ಎಂದು ಬೇಡಿಕೊಳ್ಳುತ್ತೇನೆ.
| ರಾಜಗುರು ಬಿ. ಎಸ್. ದ್ವಾರಕಾನಾಥ್
ಶಿವಕಾಂತರನ್ನು ನೆನೆದು ಗ್ರಾಮಸ್ಥರ ಕಣ್ಣೀರು: ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದಲ್ಲಿ ಅಂದಿನ ದಿನಗಳಲ್ಲಿ ಮಳೆ ಬಂದರೆ ಬೆಳೆ, ಆದಾಯ ಬರುತ್ತಿತ್ತು. ಇಲ್ಲದಿದ್ದರೆ ದೂರದ ನಗರ, ಪಟ್ಟಣ ಪ್ರದೇಶಗಳಿಗೆ ಕೆಲಸಕ್ಕಾಗಿ ಜನರು ಗುಳೆ ಹೋಗುತ್ತಿದ್ದರು. ಆರ್ಥಿಕ ಸಮಸ್ಯೆಯಿಂದ ಮಕ್ಕಳ ಶಿಕ್ಷಣ ಕೂಡ ಅರ್ಧಕ್ಕೆ ಮೊಟಕುಗೊಳ್ಳುತ್ತಿತ್ತು.
ಇಂಥ ಪರಿಸ್ಥಿತಿಗೆ ಒಂದು ಸುಸ್ಥಿರ ಅಭಿವೃದ್ಧಿ ಚಟುವಟಿಕೆ ಮೂಲಕ ಪರಿಹಾರ ಒದಗಿಸಬೇಕು ಎನ್ನುವುದು ಶಿವಕಾಂತ ಸಿದ್ನಾಳ ಅವರ ಕನಸಾಗಿತ್ತು. ಅದನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ 2006ರಲ್ಲಿ ಶಿವಕಾಂತ ಸಿದ್ನಾಳ ಅವರು ಆರಂಭಿಸಿದ ವಿಜಯಕಾಂತ ಡೇರಿ ಗ್ರಾಮಸ್ಥರ ಬದುಕಿಗೆ ಹೊಸ ಬೆಳಕು ನೀಡಿತು.
ಶಿವಕಾಂತ ಅವರು ನೀಡಿದ ಪ್ರೋತ್ಸಾಹದ ಫಲವಾಗಿ ಗ್ರಾಮದ ಬಹುತೇಕ ಮನೆಗಳಲ್ಲಿ ಇದೀಗ ನಿತ್ಯ ಕನಿಷ್ಠ 20 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮಕ್ಕಳು ಉನ್ನತ ಶಿಕ್ಷಣ ಕಲಿಯುತ್ತಿದ್ದಾರೆ. ‘ಶಿವಕಾಂತ ಸಿದ್ನಾಳ ಅವರೊಬ್ಬರು ಶ್ರಮಜೀವಿ. ದಿನದ 24 ಗಂಟೆಯೂ ವಿಜಯಕಾಂತ ಡೇರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಅವರು ಕಟ್ಟಿ ಬೆಳೆಸಿದ ಈ ಬೃಹತ್ ಉದ್ಯಮ ಶಾಶ್ವತವಾಗಿ ಉಳಿಯಲಿದೆ. ಈ ಪುಣ್ಯಾತ್ಮನಿಂದಲೇ ನಮ್ಮ ಊರುಗಳಿಗೆ ಗೌರವ, ಹೆಸರು ಬಂದಿದೆ. ಇಂತಹ ಸಾಧಕ, ಪರೋಪಕಾರಿ ಉದ್ಯಮಶೀಲ ನೇತಾರನನ್ನು ಕಳೆದುಕೊಂಡಿರುವುದು ನಮಗೆ ತುಂಬಲಾರದ ನಷ್ಟವಾಗಿದೆ. ಆ ಪುಣ್ಯಾತ್ಮನ ಕುಟುಂಬದಿಂದ ನಮ್ಮಂಥ ನೂರಾರು ಕುಟುಂಬಗಳಿಗೆ ಉದ್ಯೋಗ ದೊರೆಯುವಂತಾಗಿದೆ’ ಎಂದು ನೇಗಿನಹಾಳ, ಸಂಪಗಾಂವ, ಕುರಗುಂದ, ಎಂ.ಕೆ. ಹುಬ್ಬಳ್ಳಿ ಸೇರಿ ವಿವಿಧ ಗ್ರಾಮಗಳ ಜನರು, ವಿಜಯಕಾಂತ ಡೇರಿಯಲ್ಲಿ ದುಡಿಯುತ್ತಿರುವ 2 ಸಾವಿರಕ್ಕೂ ಅಧಿಕ ನೌಕರರು, ಅವರ ಕುಟುಂಬ ಸದಸ್ಯರು, ಹೈನುಗಾರರು ಕಂಬನಿ ಮಿಡಿದರು.
ಕೃಷಿಕ ಕುಟುಂಬದ ಕುಡಿ ಶಿವಕಾಂತ ಸಿದ್ನಾಳ:
ಮೂಲತಃ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ಶಿವಕಾಂತ ಸಿದ್ನಾಳ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು. ಅವರ ಅಜ್ಜ ಬಸಪ್ಪ ಸಿದ್ನಾಳ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ತಂದೆ ಎಸ್.ಬಿ. ಸಿದ್ನಾಳ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿದ್ದರು. ಮೂಲತಃ ಕೃಷಿಕರ ಕುಟುಂಬವಾಗಿದ್ದರಿಂದ ಸಿದ್ನಾಳ ಕುಟುಂಬಸ್ಥರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅದರಂತೆ ಶಿವಕಾಂತ ಸಿದ್ನಾಳ ಅವರು ವಿಜಯಕಾಂತ ಡೇರಿ ಸ್ಥಾಪಿಸುವ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಗೆ ಶ್ರಮಿಸುತ್ತಿದ್ದರು. ಬೈಲಹೊಂಗಲ, ಕಿತ್ತೂರು, ಸವದತ್ತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ ಹಿರಿಮೆ ಅವರದ್ದು.
ಮಠಾಧೀಶರು, ಗಣ್ಯರಿಂದ ಅಂತಿಮ ನಮನ ಸಲ್ಲಿಕೆ:
ವಿಜಯಕಾಂತ ಡೇರಿ ಆವರಣದಲ್ಲಿ ನೆರವೇರಿದ ಶಿವಕಾಂತ ಸಿದ್ನಾಳ್ ಅವರ ಅಂತ್ಯಸಂಸ್ಕಾರದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಮಾಜಿ ಸಿಎಂ ಜಗದೀಶ ಶೆಟ್ಟರ್, ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ ಸೇರಿ ಅನೇಕ ಗಣ್ಯರು ಪಾಲ್ಗೊಂಡು ನಮನ ಸಲ್ಲಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fourteen =
Remember me
