|ಜಗನ್​ ರಮೇಶ್​ ಬೆಂಗಳೂರುನ್ಯಾಯಾಲಯದ ಆದೇಶದ ಹೊರತಾಗಿಯೂ ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿ ನಡೆಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್​, ನ್ಯಾಯಾಂಗ ನಿಂದನೆಯಡಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 5 ತಿಂಗಳು ಜೈಲು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಜೈಲುಶಿಕ್ಷೆಯಿಂದ ಪಾರಾಗಬೇಕು ಅಂದ್ರೆ ಪತ್ನಿಗೆ 22 ಲಕ್ಷ ರೂ. ಪಾವತಿಸಬೇಕು!
ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೆಟ್​ ನ್ಯಾಯಾಲಯ, ಪತ್ನಿಯ ಜೀವನ ನಿರ್ವಹಣೆಗೆ ಮಾಸಿಕ 24 ಸಾವಿರ ರೂ. ಪಾವತಿಸುವಂತೆ ಪತಿಗೆ 2012ರಲ್ಲೇ ಆದೇಶಿಸಿತ್ತು. ಅದಾದ ಬಳಿಕ ಹೈಕೋರ್ಟ್​ ಸಹ ಹಣ ಪಾವತಿಸುವಂತೆ ಪತಿಗೆ ನಿರ್ದೇಶಿಸಿತ್ತು. ಇಷ್ಟಾದರೂ, ಪತಿ ಈವರೆಗೂ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಆರೋಪಿಸಿ ಪತ್ನಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಪತ್ನಿಯ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್​. ಹೇಮಲೇಖಾ ಅವರಿದ್ದ ಪೀಠ, ಅರ್ಜಿದಾರರ ಪತಿ ಉದ್ದೇಶಪೂರ್ವಕವಾಗಿ ಕೋರ್ಟ್​ ಆದೇಶ ಉಲ್ಲಂಘಿದ್ದಾರೆಂಬ ತೀರ್ಮಾನಕ್ಕೆ ಬಂದು ಶಿಕ್ಷೆ ಪ್ರಕಟಿಸಿದೆ. ಅಪರಾಧಿಯು 5 ತಿಂಗಳು ಜೈಲು ಶಿಕ್ಷೆ ಅನುಭವಿಸುವ ಜತೆಗೆ 2 ಸಾವಿರ ರೂ. ದಂಡ ಪಾವತಿಸಬೇಕು ಅಥವಾ 10 ವರ್ಷಗಳಿಂದ ಪತ್ನಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಜೀವನಾಂಶದ ಮೊತ್ತ 22.10 ಲಕ್ಷ ರೂ. ಗಳನ್ನು ಸಂಪೂರ್ಣವಾಗಿ ಪಾವತಿಸಬೇಕು. ತಪ್ಪಿದರೆ ಹೆಚ್ಚವರಿಯಾಗಿ 1 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ.
ಕೋರ್ಟ್​ ಘನತೆ ವಿಷಯದಲ್ಲಿ ರಾಜಿಯೇ ಇಲ್ಲ:ಪತ್ನಿಯ ಜೀವನ ನಿರ್ವಹಣೆಗೆ ಹಣ ನೀಡುವಂತೆ ನ್ಯಾಯಾಲಯದ ನಿರ್ದಿಷ್ಟ ಆದೇಶವಿರುವಾಗ ವಯಸ್ಸಾದ ತಂದೆ-ತಾಯಿಯ ಜತೆಗೆ ಪತ್ನಿಯಾದವಳ ಜೀವನ ನಿರ್ವಹಣೆಯನ್ನೂ ನೋಡಿಕೊಳ್ಳುವ ಹೊಣೆ ಆರೋಪಿಯ ಮೇಲಿದೆ. ಕೋರ್ಟ್​ ಆದೇಶವಾಗಿ 10 ವರ್ಷಗಳೇ ಕಳೆದರೂ ಪತ್ನಿಗೆ ಹಣ ಪಾವತಿಸಿಲ್ಲ. ಈ ಮೂಲಕ ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಲಾಗಿದೆ. ಉದ್ದೇಶಪೂರ್ವಕವಾಗಿ ಕೋರ್ಟ್​ ಆದೇಶಗಳನ್ನು ಉಲ್ಲಂಘಿಸಿರುವ ಆರೋಪಿ, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಂಗದ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಅತಿ ಸೂಕ್ಷ್ಮವಾಗಿ ವರ್ತಿಸಬಾರದು. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ನೋಡಿಕೊಂಡು ದಿವ್ಯ ಮೌನ ವಹಿಸಬೇಕೆಂದೂ ಅರ್ಥವಲ್ಲ. ನ್ಯಾಯದೇಗುಲದ ಘನತೆಯನ್ನು ಕುಗ್ಗಿಸಲು ಯಾರೊಬ್ಬರಿಗೂ ಅನುಮತಿಸಬಾರದು. ನ್ಯಾಯಾಲಯದ ಗೌರವದ ವಿಚಾರದಲ್ಲಿ ಯಾವುದೇ ರಾಜಿ ಅಥವಾ ಮೃದುತ್ವಕ್ಕೆ ಅವಕಾಶ ಇರಬಾರದು ಎಂದು ಹೈಕೋರ್ಟ್​ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?:ಬೆಂಗಳೂರಿನ ಮಹಿಳೆಯೊಬ್ಬರು 2011ರಲ್ಲಿ ಪತಿಯ ವಿರುದ್ಧ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೆಟ್​ ಕೋರ್ಟ್​, ಪತ್ನಿಗೆ ಜೀವನ ನಿರ್ವಹಣೆಗಾಗಿ ಮಾಸಿಕ 24 ಸಾವಿರ ರೂ. ಪಾವತಿಸುವಂತೆ 2012ರ ಜ.19ರಂದು ಆದೇಶಿಸಿತ್ತು. ಮತ್ತೊಂದೆಡೆ ಪತಿ ಸಹ ಪತ್ನಿಯ ವಿರುದ್ಧ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್​ ದಾಖಲಿಸಿದ್ದರು. ಅದೇ ಪ್ರಕರಣದಲ್ಲಿ ಪತ್ನಿ ಹಿಂದು ವಿವಾಹ ಕಾಯ್ದೆಯಡಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಪತ್ನಿಯ ಅರ್ಜಿಯನ್ನು 2017ರ ಜೂ.1ರಂದು ಮಾನ್ಯ ಮಾಡಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ ಮಾಸಿಕ 30 ಸಾವಿರ ರೂ. ಗಳನ್ನು ಪಾವತಿಸುವಂತೆ ಪತಿಗೆ ಆದೇಶಿಸಿತ್ತಲ್ಲದೆ, ಮ್ಯಾಜಿಸ್ಟ್ರೆಟ್​ ಕೋರ್ಟ್​ ಘೋಷಿಸಿದ್ದ ಮೊತ್ತದೊಂದಿಗೆ ಈ ಮೊತ್ತವನ್ನು ಹೊಂದಿಸಿಕೊಳ್ಳಬಹುದು ಎಂದು ಆದೇಶಿಸಿತ್ತು.
ಹೈಕೋರ್ಟ್​ ಮೆಟ್ಟಿಲೇರಿದ ಪ್ರಕರಣ:ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​, ಕೌಟುಂಬಿಕ ನ್ಯಾಯಾಲಯದ ಆದೇಶ ಮಾರ್ಪಡಿಸಿ, ಮ್ಯಾಜಿಸ್ಟ್ರೆಟ್​ ಕೋರ್ಟ್​ ನೀಡಿದ್ದ ಆದೇಶದಂತೆ ಪತ್ನಿಗೆ 2 ತಿಂಗಳೊಳಗೆ ಹಣ ನೀಡುವಂತೆ ಪತಿಗೆ ನಿರ್ದೇಶಿಸಿ 2019ರ ಫೆ.18ರಂದು ಅರ್ಜಿ ಇತ್ಯರ್ಥಪಡಿಸಿತ್ತು. ಆದರೆ, ಆ ಆದೇಶವನ್ನು ಪತಿ ಪಾಲಿಸಿಲ್ಲ ಎಂದು ಆರೋಪಿಸಿ ಪತ್ನಿ ವಿಭಾಗೀಯ ಪೀಠದ ಮುಂದೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ, ಪತಿ ಹಣ ಪಾವತಿಸಲು ನ್ಯಾಯಾಲಯದಿಂದ 6 ವಾರ ಹೆಚ್ಚುವರಿ ಕಾಲಾವಕಾಶ ಪಡೆದುಕೊಂಡಿದ್ದರು. ಇದರಿಂದ, ಪತಿಯ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ಕೈಬಿಡಲಾಗಿತ್ತು. ಸಾಕಷ್ಟು ಕಾಲಾವಕಾಶ ನೀಡಿದ ಹೊರತಾಗಿಯೂ ಹಣ ಪಾವತಿಸದೆ ಪತಿ ಉದ್ದೇಶಪೂರ್ವಕವಾಗಿ ಕೋರ್ಟ್​ ಆದೇಶ ಉಲ್ಲಂಘಿಸುತ್ತಿದ್ದಾರೆಂದು ಆರೋಪಿಸಿ ಪತ್ನಿ ಅದೇ ವರ್ಷ ನ.13ರಂದು ಎರಡನೇ ಬಾರಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ತಪ್ಪು ಒಪ್ಪಿಕೊಂಡ ಪತಿ:ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ, ಪತ್ನಿ ಆರ್ಥಿಕವಾಗಿ ಸದೃಢಳಾಗಿದ್ದಾಳೆ. ಆಕೆಯ ಹೆಸರಿನಲ್ಲಿ ಆಸ್ತಿಯೂ ಇದೆ. ಕೌಟುಂಬಿಕ ನ್ಯಾಯಾಲಯದ ಪ್ರಕರಣದಲ್ಲಿ ಆಕೆಯ ಬ್ಯಾಂಕ್​ ಖಾತೆಯ ವಿವರಗಳನ್ನು ಸಲ್ಲಿಸಿದ್ದು, ಆಕೆಗೆ ಸಾಕಷ್ಟು ಆದಾಯವಿರುವುದು ಅದರಿಂದ ತಿಳಿದುಬಂದಿದೆ. ಸದ್ಯ ಇರುವ ಮನೆಯ ಜತೆಗೆ ಹೊಸ ಮನೆಯೂ ಹೊಂದಿದ್ದು, ಅದ್ದೂರಿಯಾಗಿ ಗೃಹಪ್ರವೇಶ ಮಾಡಲಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಆಕೆ ಐಶಾರಾಮಿ ಜೀವನ ನಡೆಸುತ್ತಿದ್ದಾಳೆ. ಮೇಲಾಗಿ ವೃದ್ಧ ಪಾಲಕರನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ. ಆದ್ದರಿಂದ, ಪತ್ನಿಗೆ ಜೀವನಾಂಶ ಪಾವತಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿದ್ದ ಪತಿ, ಮ್ಯಾಜಿಸ್ಟ್ರೆಟ್​ ಕೋರ್ಟ್​, ಕೌಟುಂಬಿಕ ಕೋರ್ಟ್​ ಹಾಗೂ ಹೈಕೋರ್ಟ್​ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದನ್ನು ಒಪ್ಪಿಕೊಂಡಿದ್ದರಲ್ಲದೆ, ಪತ್ನಿಗೆ 22,10,000 ರೂ. ಪಾವತಿಸುವ ಜವಾಬ್ದಾರಿ ತನ್ನ ಮೇಲಿದೆ ಎಂದು ಒಪ್ಪಿಕೊಂಡಿದ್ದರು.
ರೋಗಿ ಹೊಟ್ಟೆಯಲ್ಲಿತ್ತು 62 ಸ್ಪೂನ್! ತಪಾಸಣೆ ಮಾಡಿದ ವೈದ್ಯರೇ ಶಾಕ್​, ಆತನ ಮಾತು ಕೇಳಿದ್ರೆ ನೀವೂ ಶಾಕ್ ಆಗ್ತೀರಿ

ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಫ್ಲೆಕ್ಸ್​ಗಳನ್ನ ಹರಿದ ಕಿಡಿಗೇಡಿಗಳು, ಕಾಂಗ್ರೆಸ್​ ಆಕ್ಷೇಪ

ಪಿಎಫ್​ಐ ಬ್ಯಾನ್​ ಮಾಡಿದ್ದನ್ನು ಸ್ವಾಗತಿಸುತ್ತಲೇ ಮತ್ತೊಂದು ಡಿಮಾಂಡ್​ ಇಟ್ಟ ರಾಜ್ಯ ಕಾಂಗ್ರೆಸ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × four =
Remember me
