| ಪ್ರಶಾಂತ ರಿಪ್ಪನ್​ಪೇಟೆಕಾಶಿ ಎಂದರೆ ಕೈಲಾಸ, ಸಾಕ್ಷಾತ್ ಶಿವ ವಿಶ್ವನಾಥನಾಗಿ ನಿತ್ಯ ನಿವಾಸ ಮಾಡಿದ ಪುಣ್ಯ ನೆಲ. ಇಂತಹ ಕಾಶಿಯಲ್ಲಿ ವಿಶ್ವನಾಥನ ದೇವಾಲಯವನ್ನು ಅಮೂಲಾಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವಾಸಿಗಳ ಗಮನ ಸೆಳೆದಿದೆ. ಐತಿಹಾಸಿಕ ಕಾಶೀ ವಿಶ್ವನಾಥ ಧಾಮದ ಲೋಕಾರ್ಪಣೆಯಾದ ನಂತರ ಇದೇ ಮೊದಲ ಬಾರಿಗೆ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ.
ಕಾಶಿ ಎಂದರೆ ಜ್ಞಾನದ ತವರು. ಜಗತ್ತಿನ ಪ್ರಾಚೀನ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಕಾಶಿಯಲ್ಲಿ ಜ್ಞಾನ ಪ್ರಸಾರಕ್ಕೆ ಪುರಾತನ ಕಾಲದಿಂದಲೂ ಆದ್ಯತೆ ನೀಡಲಾಗಿದೆ. ಅಂತಹ ಕಾಶಿಯನ್ನು ಪಂಡಿತಪುರಿ ಎಂಬುದಾಗಿಯೂ ಕರೆಯಲಾಗುತ್ತದೆ. ಈ ಕಾರಣದಿಂದಲೇ ಕಾಶಿ ಪೀಠದ ಪ್ರಸ್ತುತ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರತಿವರ್ಷ ಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ವಿಧ್ವತ್ ಸಭೆ ಆಯೋಜಿಸಿ ನೂರಾರು ಪಂಡಿತರನ್ನು ಕರೆಯಿಸಿ ಸತ್ಕರಿಸುವ ಕಾರ್ಯವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅಂತೆಯೇ ಈ ವರ್ಷ ಶಿವರಾತ್ರಿಯ ಹಿಂದಿನ ದಿನ ಫೆ.28ರಂದು ನಡೆಯುವ ವಿದ್ವತ್ ಸಭೆಯಲ್ಲಿ ನಾಲ್ಕೈದು ಶ್ರೇಷ್ಠ ವಿದ್ವಾಂಸರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ವಿದ್ವತ್ ಸಭೆಯ ಜತೆಗೆ ಹೊಸದಾಗಿ ಶಾಸ್ತ್ರಾರ್ಥ ಚರ್ಚೆಯನ್ನು ಕಳೆದ ಎರಡು ವರ್ಷಗಳಿಂದ ಆರಂಭಿಸಲಾಗಿದೆ. ವೇದ-ವೇದಾಂತ, ಸಂಸ್ಕೃತಾಭ್ಯಾಸ ಮಾಡುವ ಸಾವಿರಾರು ವಿದ್ಯಾರ್ಥಿಗಳು ಕಾಶಿಯಲ್ಲಿದ್ದಾರೆ. ಅಂತಹ ವಿದ್ಯಾರ್ಥಿಗಳಿಗಾಗಿ ಶಾಸ್ತ್ರಾರ್ಥ ಚರ್ಚೆಯನ್ನು ಆಯೋಜಿಸುವ ಮೂಲಕ ಬುದ್ಧಿವಂತ ವಿದ್ಯಾರ್ಥಿಗಳ ಜ್ಞಾನಶಕ್ತಿಯನ್ನು ಒರೆಗಲ್ಲಿಗೆ ಹಚ್ಚಲಾಗುತ್ತದೆ.

ತರ್ಕ, ನ್ಯಾಯ, ಮೀಮಾಂಸೆ, ವ್ಯಾಕರಣ, ತತ್ವಶಾಸ್ತ್ರ ಹೀಗೆ ವಿವಿಧ ವಿಷಯಗಳಲ್ಲಿ ಉನ್ನತ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಮೊದಲೇ ಸೂಚಿಸಲಾದ ನಿಗದಿತ ವಿಷಯಗಳ ಮೇಲೆ ಪರ ಮತ್ತು ವಿರೋಧದ ಚರ್ಚೆ ಮಾಡಲು ಅವಕಾಶ ನೀಡಲಾಗುತ್ತದೆ. ಹೇಗೆ ದೈಹಿಕ ಬಲವುಳ್ಳವರು ಕುಸ್ತಿಪಂದ್ಯದಲ್ಲಿ ಗೆಲ್ಲುತ್ತಾರೆಯೋ ಹಾಗೆ ಬುದ್ಧಿ ಬಲವುಳ್ಳವರು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ. ಗೆದ್ದಂತಹ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನವನ್ನು ನೀಡಿ ಸತ್ಕರಿಸಲಾಗುತ್ತದೆ.
ಬೆಂಗಳೂರಿನ ಪ್ರಸಿದ್ಧ ವಿದ್ವಾಂಸರಾದ ಡಾ.ಶಿವಕುಮಾರ ಸ್ವಾಮಿಗಳು ತಮ್ಮ ಪುತ್ರ ತೇಜಸ್ ಅಕಾಲಿಕ ಮರಣದ ನಂತರ, ಆತನ ಹೆಸರಲ್ಲಿ ಸ್ಥಾಪಿಸಿರುವ ನಿಧಿಯಿಂದ ಈ ಶಾಸ್ತ್ರಾರ್ಥ ಚರ್ಚೆಯನ್ನು ಆಯೋಜಿಸಲಾಗುತ್ತಿದೆ. ಅದರ ಬಡ್ಡಿಹಣವನ್ನೇ ಬಹುಮಾನವಾಗಿ ಗೆದ್ದವರಿಗೆ ನೀಡುವ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳ ಶಾಸ್ತ್ರಾರ್ಥ ಚರ್ಚೆಯ ವಿಷಯವನ್ನಾಧರಿಸಿ ವಿದ್ವಾಂಸರು ತಮ್ಮ ವಿದ್ವತ್ ಸಭೆಯಲ್ಲಿ ಉಪನ್ಯಾಸವನ್ನು ನೀಡುವ ಮೂಲಕ ವಿಷಯ ತಾರ್ಕಿಕ ಅಂತ್ಯವನ್ನು ಕಾಣುತ್ತದೆ.

ಜಗದ್ಗುರು ವಿಶ್ವಾರಾಧ್ಯರ ಲಿಂಗೋದ್ಭವ ಲೀಲೆ:ಕಾಶಿಯಲ್ಲಿ ವಿಶ್ವನಾಥನ ಮಂದಿರವನ್ನು ಹೊರತುಪಡಿಸಿ ಅಷ್ಟೇ ಪ್ರಾಚೀನವಾದ ಕ್ಷೇತ್ರ ಜಗದ್ಗುರು ವಿಶ್ವಾರಾಧ್ಯ ಜ್ಞಾನಸಿಂಹಾಸನ ಜಂಗಮವಾಡಿ ಮಠ. ವಿಶ್ವನಾಥ ಮಂದಿರದಿಂದ ಕೂಗಳತೆ ದೂರದಲ್ಲಿರುವ ಜಗದ್ಗುರು ಜ್ಞಾನಸಿಂಹಾಸನ ಪೀಠದ ಸಂಸ್ಥಾಪಕರಾದ ಜಗದ್ಗುರು ವಿಶ್ವಾರಾಧ್ಯರು, ವಿಶ್ವನಾಥ ಮಹಾಲಿಂಗದಿಂದ ಆವಿರ್ಭವಿಸಿದ್ದು ಶಿವರಾತ್ರಿಯ ದಿನದಂದೇ. ಆ ಕಾರಣದಿಂದಲೇ ಶಿವರಾತ್ರಿಯಂದು ಜಗದ್ಗುರು ವಿಶ್ವಾರಾಧ್ಯರ ಪ್ರಾಕಟ್ಯ ಮಹೋತ್ಸವವನ್ನು ಆಚರಿಸಲಾಗುತ್ತದೆ.
ಮಾ.1ರಂದು ಶಿವರಾತ್ರಿಯಂದು ಜಗದ್ಗುರು ವಿಶ್ವಾರಾಧ್ಯರ ಮಂಗಲಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ನಡೆಯುತ್ತದೆ. ವಿವಿಧ ಸಾಂಸ್ಕೃತಿಕ ಮೇಳಗಳೊಂದಿಗೆ ಕಾಶೀಯ ಪ್ರಮುಖ ಬೀದಿಯಲ್ಲಿ ಜಗದ್ಗುರು ವಿಶ್ವಾರಾಧ್ಯರ ರಥೋತ್ಸವವನ್ನು ನಡೆಸಲಾಗುತ್ತದೆ. ನಂತರ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ನಂತರ ಫಲಾಹರ ಸ್ವೀಕರಿಸುತ್ತಾರೆ. ಅದೇ ದಿನ ಸಂಜೆ ಶಿವರಾತ್ರಿಯ ಅಂಗವಾಗಿ ಆರಂಭವಾಗುವ ವಿವಿಧ ಕಾರ್ಯಕ್ರಮಗಳು ಬೆಳಗಿನ ವರೆಗೆ ಅವ್ಯಾಹತವಾಗಿ ನಡೆಯುತ್ತವೆ.

ನೂತನ ಉತ್ತರಾಧಿಕಾರಿ ಪೀಠ ಪ್ರವೇಶ:ಯುಗ ಯುಗಳ ಇತಿಹಾಸ ಹೊಂದಿರುವ ಸನಾತನ ವೀರಶೈವ ಪಂಚಪೀಠಗಳಲ್ಲಿ ಕಾಶೀ ಪೀಠವು ಒಂದು. ಜ್ಞಾನದ ಸಂಕೇತವಾಗಿರುವ ಹಳದಿ ಧ್ವಜವನ್ನು ಹಿಡಿದ ಜಗದ್ಗುರು ವಿಶ್ವಾರಾಧ್ಯರು ಸಂಸ್ಥಾಪಿಸಿದ ಕಾಶೀ ಪೀಠವು ಜಂಗಮವಾಡಿ ಮಠ ಎಂದೇ ಪ್ರಸಿದ್ಧವಾಗಿದೆ. ಉತ್ತರ ಭಾರತದಲ್ಲಿ ವೀರಶೈವ ಪರಂಪರೆ ಮತ್ತು ಸಿದ್ಧಾಂತವನ್ನು ಪ್ರಚುರ ಪಡಿಸುವಲ್ಲಿ ಕಾಶೀಪೀಠದ ಪಾತ್ರ ಪ್ರಮುಖವಾದದ್ದು. ಇಂತಹ ಅವಿಚ್ಛಿನ್ನ ಪರಂಪರೆಯ ಕಾಶೀ ಪೀಠದ ಜ್ಞಾನಸಿಂಹಾಸನವನ್ನು 86 ಜಗದ್ಗುರುಗಳು ಆರೋಹಣ ಮಾಡಿದ್ದಾರೆ. ಪ್ರಸ್ತುತ ಇರುವ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಳೆದ 35 ವರ್ಷಗಳಿಂದ ಶ್ರೀಪೀಠವನ್ನು ಮುನ್ನಡೆಸುತ್ತಿದ್ದು, ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಿದ್ದಾರೆ.
ಇತ್ತೀಚೆಗೆ ತಮ್ಮ ನೂತನ ಉತ್ತರಾಧಿಕಾರಿಯನ್ನಾಗಿ ಮಹಾರಾಷ್ಟ್ರದ ಸೊಲ್ಲಾಪುರ ಹೂಟಗಿ ಮಠದ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳನ್ನು ಆಯ್ಕೆ ಮಾಡಿದ್ದು, ಇದೇ ಮೊದಲ ಬಾರಿಗೆ ಪೂಜ್ಯರು ಪೀಠವನ್ನು ಪ್ರವೇಶ ಮಾಡಲಿದ್ದಾರೆ. ಸೊಲ್ಲಾಪುರದಿಂದ ಪೂರ್ಣ ಒಂದು ರೈಲುಬೋಗಿಯನ್ನೇ ವ್ಯವಸ್ಥೆ ಮಾಡಿಕೊಂಡು ಸದ್ಭಕ್ತರೊಂದಿಗೆ ಫೆ.26ಕ್ಕೆ ಆಗಮಿಸಿದ್ದು ಡಾ.ಮಲ್ಲಿಕಾರ್ಜುನ ಶಿವಾಚಾರ್ಯರನ್ನು ಪರಂಪರೆಯಂತೆ ಭವ್ಯ ಸ್ವಾಗತದೊಂದಿಗೆ ಪೀಠಕ್ಕೆ ಆಹ್ವಾನಿಸಲಾಗಿದೆ.
ಮೂಲತಃ ರಾಯಚೂರು ಜಿಲ್ಲೆಯ ಜಾಲಹಳ್ಳಿಯವರಾದ ಶ್ರೀಗಳು ತಿರುಪತಿಯಲ್ಲಿ ಉನ್ನತ ಸಂಸ್ಕೃತಾಭ್ಯಾಸ ಮಾಡಿದ್ದು, ಪಂಚಭಾಷಾ ಪ್ರವೀಣರಾಗಿದ್ದಾರೆ. ಮುಂದಿನ ಮೇ ತಿಂಗಳಿನಲ್ಲಿ ನೂತನ ಜಗದ್ಗುರುಗಳ ಪಟ್ಟಾಧಿಕಾರ ಮಹೋತ್ಸವ ಜರುಗಲಿದೆ.
ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

ಯೂಕ್ರೇನ್​ಗೆ ಸೇರಿದ್ದ ವಿಶ್ವದ ಅತಿದೊಡ್ಡ ವಿಮಾನವನ್ನೂ ನಾಶ ಮಾಡಿದ ರಷ್ಯಾ ಸೇನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
