|ಹರೀಶ್ ಬೇಲೂರುಬೆಂಗಳೂರು
ಕರೊನಾ ಎರಡನೇ ಅಲೆಯ ಅಬ್ಬರ ನಿಯಂತ್ರಿಸಲು ಲಾಕ್​ಡೌನ್ ಹೇರಿದ ಪರಿಣಾಮ ಈ ಬಾರಿ ಚಿನ್ನಾಭರಣಗಳ ಮಾರಾಟ ಉದ್ಯಮ ನೆಲಕಚ್ಚಿದೆ. ರಾಜ್ಯದಲ್ಲಿ ಸಣ್ಣ ಮತ್ತು ಕಾಪೋರೇಟ್ ವಲಯ ಸೇರಿ ಅಂದಾಜು 1 ಲಕ್ಷಕ್ಕಿಂತ ಹೆಚ್ಚು ಚಿನ್ನಾಭರಣ ಅಂಗಡಿಗಳಿದ್ದು, ಅಕ್ಷಯ ತೃತೀಯಾ ದಿನದಂದೇ ರಾಜ್ಯದಲ್ಲಿ ಅಂದಾಜು 700 ಕೋಟಿ ರೂ. ನಷ್ಟವಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಅಕ್ಷಯ ತೃತೀಯಾ ದಿನದಂದು ಅಂದಾಜು 1,500 ಕೆಜಿಗಿಂತ ಹೆಚ್ಚು ಚಿನ್ನಾಭರಣ ಮಾರಾಟವಾಗುತ್ತಿತ್ತು. ಆದರೆ, ಈ ಬಾರಿ ಲಾಕ್​ಡೌನ್​ನಿಂದಾಗಿ ಚಿನ್ನಾಭರಣ ಮಾರಾಟ ಮಳಿಗೆಗಳು ಬಾಗಿಲು ಮುಚ್ಚಿದ್ದರಿಂದ ವಹಿವಾಟು ನಡೆದಿಲ್ಲ. ಆದರೆ, ಕಾರ್ಪೋರೇಟ್​ ವಲಯದ ಜ್ಯುವೆಲ್ಲರಿ ಅಂಗಡಿಗಳು ಮಾತ್ರವೇ ಶೇಕಡ 20 ಚಿನ್ನಾಭರಣಗಳನ್ನು ಆನ್​ಲೈನ್ ಮೂಲಕ ಗ್ರಾಹಕರಿಗೆ ಮಾರಾಟ ಮಾಡಿದ್ದು, 275 ಕೋಟಿ ರೂ. ವಹಿವಾಟು ನಡೆಸಿವೆ. 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂಗೆ 4,450 ರೂ., 24 ಕ್ಯಾರೆಟ್ ಅಪರಂಜಿ ಚಿನ್ನದ ಪ್ರತಿ ಗ್ರಾಂಗೆ 4,784 ಹಾಗೂ ಪ್ರತಿ ಕೆಜಿ ಬೆಳ್ಳಿಗೆ 72,400 ರೂ.ನಂತೆ ಮಾರಾಟ ಮಾಡಲಾಗಿದೆ. ಕಳೆದ ವರ್ಷ ಲಾಕ್​ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಆನ್​ಲೈನ್ ಮೂಲಕ 45 ಕೋಟಿ ರೂ. ಚಿನ್ನಾಭರಣ ವಹಿವಾಟು ನಡೆದಿತ್ತು.
ಆಭರಣದ ಬದಲು ಹಣ ಕೊಡಿ:ಚಿನ್ನಾಭರಣಗಳ ಅಂಗಡಿಯಲ್ಲಿ ಒಂದು ವರ್ಷದಿಂದ ಚೀಟಿ ಹಾಕಿರುವ ಗ್ರಾಹಕರು ಕರೊನಾದಿಂದಾಗಿ ಈ ಬಾರಿ ಆಭರಣಗಳ ಬದಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಕ್ಷಯ ತೃತೀಯಾ ಅಥವಾ ಇತರ ಸಂದರ್ಭದಲ್ಲಿ ಆಭರಣ ಚೀಟಿ ಹಾಕಿದರೆ ಅದಕ್ಕೆ ಅಭರಣಗಳನ್ನೇ ಖರೀದಿಸಬೇಕೆಂಬ ನಿಯಮವಿದೆ. ಆದರೆ, ಕೆಲವರು ಆಭರಣ ನೀಡುವಂತೆ ಕೇಳಿದರೆ, ಇನ್ನೂ ಕೆಲವರು ಹಣ ನೀಡುವಂತೆ ಮನವಿ ಮಾಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಮಳಿಗೆಗಳ ಮಾಲೀಕರು ಆಭರಣ ಬೇಡ ಎಂದವರಿಗೆ ವಾಪಸ್ ಹಣ ಕೊಡುತ್ತಿದ್ದಾರೆ.
ಅಂದೇ ಖರೀದಿ ಯಾಕೆ?:ಭಾರತೀಯ ಸಂಪ್ರದಾಯದಲ್ಲಿ ಅಕ್ಷಯ ತೃತೀಯಾಕ್ಕೆ ವಿಶೇಷ ಮಹತ್ವವಿದೆ. ಈ ಶುಭದಿನದಂದು ಬಂಗಾರ ಖರೀದಿಸಿದರೆ ವರ್ಷವಿಡೀ ಒಳಿತಾಗುತ್ತದೆ, ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಗ್ರಾಹಕರು ಚಿನ್ನವನ್ನು ಖರೀದಿಸುತ್ತಾರೆ. ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಚಿನ್ನಾಭರಣ ಖರೀದಿಸುತ್ತಾರೆ.
ನೆರೆ ರಾಜ್ಯಗಳಿಗೆ ತೆರಳಿದ ಗ್ರಾಹಕರು:ರಂಜಾನ್ ಪ್ರಯುಕ್ತ ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರಗಳು ಆಭರಣಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಗಡಿ ಭಾಗದ ಜಿಲ್ಲೆಗಳ ಶೇಕಡ 20 ಗ್ರಾಹಕರು ಅಲ್ಲಿಗೆ ತೆರಳಿ ಚಿನ್ನಾಭರಣ ಖರೀದಿಸಿದ್ದಾರೆ. ಆಭರಣ ವಹಿವಾಟಿನಲ್ಲಿ ಶೇ.30-35 ಚೀಟಿ ವ್ಯವಹಾರದಿಂದ ನಡೆಯುತ್ತದೆ. ಅದರಂತೆ, ಈ ಬಾರಿಯೂ ನಂಬಿಕೆಯಿಟ್ಟು ಗ್ರಾಹಕರು ಚೀಟಿಗಳನ್ನು ಹಾಕಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಆಭರಣ ಮಳಿಗೆಗಳನ್ನು ಮುಚ್ಚಲಾಗಿದೆ. ಚೀಟಿ ಹಾಕಿರುವ ಕೆಲ ಗ್ರಾಹಕರು ಆಭರಣ ನೀಡುವಂತೆ ಕೇಳಿದ್ದಾರೆ. ಅಂಥವರಿಗೆ ಅಕ್ಷಯ ತೃತೀಯಾ ದಿನದಂದು ಪಾರ್ಸಲ್ ಮೂಲಕ ಮನೆಗೇ ಕಳುಹಿಸಲಾಗಿದೆ. ಜತೆಗೆ, ಚೀಟಿ ಹಾಕಿರುವ ಗ್ರಾಹಕರಿಗೆ ಸಾಂಕೇತಿಕವಾಗಿ ಸ್ಯಾನಿಟೈಸರ್, ಮಾಸ್ಕ್ ಮತ್ತು ಔಷಧ ಒಳಗೊಂಡ ಕರೊನಾ ಕಿಟ್ ಹಾಗೂ ಒಂದು ಗ್ರಾಂ ಚಿನ್ನದ ನಾಣ್ಯ ಸಹ ನೀಡಲಾಗುತ್ತಿದೆ ಎನ್ನುತ್ತಾರೆ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರಾಮಾಚಾರಿ.
ಶೇ.70 ಸಣ್ಣ ವ್ಯಾಪಾರಿಗಳು:ದೇಶದಲ್ಲಿ ಶೇ.30 ಕಾಪೋರೇಟ್ ಅಥವಾ ಬೃಹತ್ ಆಭರಣ ಮಳಿಗೆಗಳು ಇದ್ದರೆ, ಶೇ.70 ಸಣ್ಣ ಮಳಿಗೆಗಳಿವೆ. ಗ್ರಾಮೀಣ ಹಾಗೂ ಸಣ್ಣಪುಟ್ಟ ನಗರಗಳಲ್ಲಿ ಸಣ್ಣ ಮಳಿಗೆಗಳಲ್ಲಿ ವ್ಯಾಪಾರ ನಡೆಯಲಿದೆ. ಸಣ್ಣ ವ್ಯಾಪಾರಸ್ಥರಲ್ಲಿ ಬಹುತೇಕರು ವಂಶಪಾರಂಪರ್ಯವಾಗಿಯೇ ವೃತ್ತಿಯನ್ನು ನೆಚ್ಚಿಕೊಂಡು ಬಂದವರು. ಹಾಗಾಗಿ, ಅಕ್ಷಯ ತೃತೀಯಾ ದಿನದಂದು ಅವರಿಗೆ ದೊಡ್ಡ ಮಟ್ಟಿನ ವ್ಯಾಪಾರ ಇರುತ್ತದೆ. ಆದರೆ, ಕಳೆದೊಂದು ವರ್ಷದಿಂದ ಅಕ್ಷಯ ತೃತೀಯಾ ವ್ಯಾಪಾರವೂ ಕೈಕೊಟ್ಟಿದೆ.
ದೇಶಾದ್ಯಂತ 6.25 ಕೋಟಿ ರೂ. ನಷ್ಟ:ಕಾನ್ಪೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಡೇಟಾ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಲಾಕ್​ಡೌನ್ ಮತ್ತು ಕರೊನಾ ಕರ್ಫ್ಯೂ ಕಾರಣ ಒಟ್ಟಾರೆ ವ್ಯಾಪಾರೋದ್ಯಮ ಕ್ಷೇತ್ರಕ್ಕೆ 6.25 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಇದರಲ್ಲಿ 4.25 ಲಕ್ಷ ಕೋಟಿ ರೂ. ಚಿಲ್ಲರೆ ವ್ಯಾಪಾರೋದ್ಯಮ ಕ್ಷೇತ್ರಕ್ಕೂ, 2 ಲಕ್ಷ ಕೋಟಿ ರೂ. ಸಗಟು ವ್ಯಾಪಾರೋದ್ಯಮಕ್ಕೂ ನಷ್ಟವಾಗಿದೆ. ನಾಲ್ಕು ಕೋಟಿ ಕಿರು, ಸಣ್ಣ ಮತ್ತು ಮಧ್ಯಮ ಚಿಲ್ಲರೆ ವ್ಯಾಪಾರಸ್ಥರ ಸಂಘಟನೆಯಾದ ಫೆಡರೇಷನ್ ಆಫ್ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್​ಆರ್​ಎಐ) ಪ್ರಕಾರ, ಏಪ್ರಿಲ್​ನಲ್ಲಿ ಕಿರು ವ್ಯಾಪಾರಿಗಳ ಆದಾಯದಲ್ಲಿ ಶೇಕಡ 40 ನಷ್ಟ ಉಂಟಾಗಿದೆ. 2019ರಲ್ಲಿ ಅಕ್ಷಯ ತೃತೀಯಾಕ್ಕೆ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮಾರಾಟವಾಗಿತ್ತು. ಕಳೆದ ವರ್ಷ ಲಾಕ್​ಡೌನ್ ಕಾರಣ 500 ಕೋಟಿ ರೂ. ವಹಿವಾಟಷ್ಟೇ ನಡೆದಿತ್ತು.
ಚಿನ್ನ-ಬೆಳ್ಳಿ ದರ ಏರಿಕೆ:ದೆಹಲಿಯ ಚಿನಿವಾರ ಪೇಟೆಯಲ್ಲಿ ಅಕ್ಷಯ ತೃತೀಯಾ ದಿನವಾದ ಶುಕ್ರವಾರ ಚಿನ್ನದ ದರ 10 ಗ್ರಾಮಿಗೆ 146 ರೂಪಾಯಿ ಹೆಚ್ಚಳವಾಗಿದ್ದು 47,110 ರೂ. ಆಗಿದೆ. ಬೆಳ್ಳಿಯ ದರ ಒಂದು ಕಿಲೋಗೆ 513 ರೂಪಾಯಿ ಏರಿ 70,191 ರೂ. ಆಗಿದೆ. ಗುರುವಾರ ಚಿನ್ನದ ಬೆಲೆ 46,964 ರೂ., ಬೆಳ್ಳಿಯ ಬೆಲೆ 69,678 ರೂ. ಇತ್ತು.
ಕಾರ್ಪೋರೇಟ್​ ವಲಯದ ಆಭರಣ ಮಳಿಗೆಗಳು ವೆಬ್​ಪೋರ್ಟಲ್​ಗಳ ಮೂಲಕ ಚಿನ್ನಾಭರಣ ಮಾರಾಟ ಮಾಡಿವೆ. ಬರುವ ದಿನಗಳಲ್ಲಿ ವಿಶ್ವಕರ್ಮ ವೆಬ್ ಪೋರ್ಟಲ್ ಮೂಲಕ ಆಭರಣಗಳನ್ನು ಮಾರಾಟ ಮಾಡುವ ಯೋಜನೆಯಿದೆ. ಇದಕ್ಕೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ.
|ಬಿ.ರಾಮಾಚಾರಿರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 15 =
Remember me
