ಸಾಯಂಸಂಧ್ಯೆಯಲ್ಲಿ- ಬಾಯಿಯಿಲ್ಲದ, ಬುದ್ಧಿವಂತಿಕೆ ಪ್ರದರ್ಶಿಸಲಾರದ ವೃಕ್ಷಸಮೂಹವೆಲ್ಲ ಮೌನಸೌಹಾರ್ದದಿಂದ ಮಾನವತ್ವಕ್ಕೆ ಪ್ರತೀಕಗಳ ಹಾಗಿದ್ದವು. ಆಕಾಶದಿಂದ ಸೂರ್ಯರಶ್ಮಿಯು ವೃಕ್ಷಗಳ ಮಧ್ಯದಿಂದ, ಎಲೆಗಳ ಮಧ್ಯದಿಂದ ಹರಿಯುತ್ತಾ ಗಮ್ಯವನ್ನು ತಲುಪುತ್ತಿತ್ತು.
ಎಳೆಬಿಸಿಲು ಬೀಳುವ ಜಾಗದಲ್ಲಿ ಗುಲಾಬಿ ಸಸಿ ನೆಡುತ್ತಿದ್ದ ರಾಮರಾವ್. ಸಮೀಪದಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸಿದೊಡನೆ ತಲೆ ಎತ್ತಿ ನೋಡಿದ.‘ಅಪ್ಪಾ’ ಎಂದ ಗಿರೀಶ್.
‘ಏನೋ! ಹತ್ತು ದಿನಗಳ ಹಿಂದೆ ತಾನೇ ಬಂದಿದ್ದೆ… ಮತ್ತೆ ಬಂದಿದ್ದೀಯಲ್ಲಾ?’ಮೊನ್ನೆ ನಾನು ಹೋಗಿದ್ದ ಇಂಟರ್​ವ್ಯೂನಲ್ಲಿ ಸೆಲೆಕ್ಟ್ ಆದೆ.’
‘ಕಂಗ್ರಾಟ್ಸ್! ಕೆಲಸ ಎಲ್ಲಿ? ಯಾವಾಗ ಜಾಯಿನ್ ಆಗಬೇಕು?’‘ಬೆಂಗಳೂರಿನಲ್ಲಿ. ಈ ವಾರದಲ್ಲಿ ಸೇರಿಕೊಳ್ಳಬೇಕು.’
‘ಹಾಗಾದರೆ ಇನ್ನು ಮುಂದೆ ನನ್ನ ಎ.ಟಿ.ಎಂ. ಕಾರ್ಡ್ ಅವಶ್ಯಕತೆ ಇಲ್ಲ ಅಲ್ಲವಾ!’
‘ಇಲ್ಲ. ಕೆಲಸಕ್ಕೆ ಸೇರಿ ಮೊದಲ ಸಂಬಳ ತಗೊಂಡ ತಕ್ಷಣವೇ ಕಳಿಸಿಬಿಡ್ತೇನೆ. ಆಶ್ರಮದ ದುಡ್ಡು ಈ ತಿಂಗಳು ಕಟ್ಟಿಬಿಟ್ಟಿದ್ದೇನೆ. ನಿನಗೆ ಎರಡು ಸಾವಿರ ಡ್ರಾ ಮಾಡಿ ತಂದಿದ್ದೇನೆ. ಇದೋ…’ ಎನ್ನುತ್ತಾ ಜೇಬಿನಿಂದ ತೆಗೆದು ನೀಡಿದ.
ಗುಲಾಬಿ ಸಸಿಗೆ ಪಾತಿ ಕಟ್ಟಿ ಗೊಬ್ಬರ ಹಾಕುತ್ತಾ, ‘ಇಷ್ಟು ಕಾಲ ಹಾಸ್ಟೆಲಿನಲ್ಲಿದ್ದೆ. ಇನ್ನು ಮುಂದೆ ಹೊಸ ಜಾಗ, ಹೊಸ ಜನರು, ಹೊಸ ಜೀವನ – ಜಾಗ್ರತೆಯಿಂದ ಇರು. ಏನಾದರೂ ಅಗತ್ಯ ಬಿದ್ದರೆ ಫೋನ್ ಮಾಡು. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಬೇಡ. ಸಾಲ ಮಾಡುವುದು-ಕೊಡುವುದು ಮಾಡಬೇಡ’ ಎಂದ ರಾಮರಾವ್.
‘ನಾನು ಹೋಗಿ ಬರಲಾ?’ ಎಂದ ಗಿರೀಶ್.‘ಬೆಂಗಳೂರಿಗೆ ಯಾವಾಗ ಹೊರಡುತ್ತೀ?’‘ನಾಳಿದ್ದು’ ಎಂದು ಹಿಂತಿರುಗಿ ಹೊರಟುಹೋದ ಗಿರೀಶ್.
ಮಗ ಕಣ್ಣೋಟದಿಂದ ಮರೆಯಾದೊಡನೆ ತಾನು ನೆಟ್ಟ ಪ್ರತಿ ಸಸಿಗೆ ನೀರುಣಿಸಿ ಮರಗಳ ಬಳಿ ನಿಂತು ಅವುಗಳೊಂದಿಗೆ ಮಾತಾಡುತ್ತಿರುವಂತೆ, ತನ್ನಲ್ಲಿ ತಾನೇ ಮಾತಾಡಿಕೊಂಡ. ಆಶ್ರಮದ ಕಡೆ ಬರುತ್ತಾ, ಪ್ರತಿದಿನದಂತೆಯೇ ಒಂದು ಮರವನ್ನು ಅಪ್ಪಿಕೊಂಡು ಹಿಂದಿರುಗಿದ ರಾಮರಾವ್.
ಹೆಂಡತಿಯ ಹಠಾತ್ ಮರಣದ ನಂತರ, ಸಕಲವನ್ನೂ ಕಳೆದುಕೊಂಡ ನಿರ್ಭಾಗ್ಯನಂತೆ ತಿರುಗಾಡುತ್ತಿದ್ದಾಗ ಸಾಧುವೊಬ್ಬ ಪರಿಚಯವಾಗಿ, ‘ಪ್ರಕೃತಿಯು ದೇವತೆಯಂತಹದ್ದು. ಮರಗಳು, ಪರ್ವತಗಳು, ಪ್ರಾಣಿಗಳು, ಎಲ್ಲವೂ ದೇವತಾರೂಪಗಳೇ. ಎಲ್ಲದರಲ್ಲಿಯೂ ಅಲೌಕಿಕ ಸ್ಪಂದನ ಇರುತ್ತದೆ. ಅವನ್ನು ಆರಾಧಿಸು, ಪ್ರೀತಿಸು. ಒಂಟಿತನದಲ್ಲಿ ಅವು ಜೊತೆಯಾಗಿ ನಿಲ್ಲುತ್ತವೆ. ಆನಂದವನ್ನೂ, ಸಂತೋಷವನ್ನೂ ನೀಡುತ್ತವೆ. ಅವೇ ನಿನ್ನ ಸ್ನೇಹಿತರು’ ಎಂದು ಬೋಧನೆ ಮಾಡಿದ. ಆಗಿನಿಂದ ರಾಮರಾವ್ ಪ್ರಕೃತಿಯ ಆರಾಧಕನಾಗಿದ್ದ.

ಆಶ್ರಮದಲ್ಲಿನ ತನ್ನ ಕೊಠಡಿಯೊಳಗೆ ಹೋದ. ಶಾಂತಿ ಕಾಣಿಸಲಿಲ್ಲ. ಬೀರೂವಿನಿಂದ ಬ್ರೆಡ್ ಬಿಸ್ಕತ್ತು ತೆಗೆದುಕೊಂಡು ಆಶ್ರಮದ ಗೇಟಿನತ್ತ ನಡೆದ. ಹೆಜ್ಜೆಗಳ ಸಪ್ಪಳ, ಪಾದಗಳ ವಾಸನೆ ಹಿಡಿದವೇನೋ, ಬಾಲಗಳನ್ನು ಆಡಿಸುತ್ತಾ ನಾಯಿಗಳು ಗೇಟಿನ ಬಳಿ ಸೇರಿಕೊಂಡವು. ಗೇಟು ದಾಟಿ ಹೊರಗೆ ಹೋಗಿ ಬ್ರೆಡ್ ಬಿಸ್ಕತ್ತುಗಳನ್ನು ಚೂರು ಚೂರು ಮಾಡಿ ಸ್ವಹಸ್ತದಿಂದ ತಿನ್ನಿಸಿದ. ಮುದ್ದಿನಿಂದ ಕುಂಯ್ಗುಟ್ಟತೊಡಗಿದವು. ಅವುಗಳ ಜೊತೆಗೆ ಸೇರಿಕೊಂಡು ತಾನು ಕೂಡ ಓಡಾಡುತ್ತಾ ತಂಟೆ ಮಾಡಿದ. ಅವುಗಳ ತುಂಟತನ ಅವನಿಗೆ ಪ್ರೀತಿಯ ಆನಂದ ವನ.
ವೃದ್ಧಾಶ್ರಮದಲ್ಲಿ ರಾಮರಾವ್ ಸಹಚರರಿಗೆ ಮಾಡಬಲ್ಲ ಎಲ್ಲ ಸಹಾಯಗಳನ್ನೂ ಮಾಡುತ್ತಾ ಎಲ್ಲರಿಗೂ ಪ್ರತಿನಿಧಿಯಂತಿದ್ದ. ನಿವೃತ್ತಿಯಾದ ನಂತರ ಬಂದು ಆಶ್ರಮ ಸೇರಿಕೊಂಡ. ಆಶ್ರಮದಲ್ಲಿಯೇ ಶಾಂತಿ ಪರಿಚಯವಾದಳು. ಶಾಂತಿಯ ಮಕ್ಕಳು ಕೂಡ ವಿದೇಶಗಳಲ್ಲಿ ಇದ್ದಿದ್ದರಿಂದ ಒಂಟಿಯಾಗಿ ಇರಲಾಗದೇ ಆಶ್ರಮಕ್ಕೆ ಸೇರಿದ್ದಳು. ರಾಮರಾವ್ ಹಗಲೆಲ್ಲಾ ಏನಾದರೊಂದು ಕೆಲಸ ಹೊಂಚಿಕೊಂಡು ಮಾಡುತ್ತಲೇ ಇರುತ್ತಿದ್ದ. ಗಿಡಗಳಿಗೆ ನೀರು ಹಾಕುವುದರಿಂದ ಹಿಡಿದು ಅಡುಗೆಮನೆಯಲ್ಲಿ ಸಹಾಯ ಮಾಡುವವರೆಗೂ ಏನಾದರೊಂದು ಮಾಡುತ್ತಲೇ ಇರುತ್ತಿದ್ದ. ಅವನ ಜೊತೆಯವರು, ‘ನೀವು ಇಷ್ಟು ಕೆಲಸ ಮಾಡುವಿರಲ್ಲಾ… ಆಯಾಸ ಆಗುವುದಿಲ್ಲವಾ!’ ಎಂದರೆ, ‘ಸಂಕಲ್ಪ ಇದ್ದರೆ ಕೆಲಸ ಮಾಡಲು ಶಕ್ತಿ ತನ್ನಷ್ಟಕ್ಕೆ ತಾನೇ ಬರುತ್ತದೆ. ಅದಕ್ಕೆ ಶರೀರ ಸಹಕರಿಸುತ್ತದೆ’ ಎಂದೆನ್ನುತ್ತಿದ್ದ.
ರಾಮರಾವ್​ಗೆ ಶಾಂತಿ ಪರಿಚಯವಾದ ಕೆಲವು ದಿನಗಳಲ್ಲಿಯೇ ತಮ್ಮಿಬ್ಬರ ಭಾವನೆಗಳು ಬಹಳ ಸಮೀಪವಾಗಿವೆ ಎನಿಸಿತು. ಶಾಂತಿಯ ಸಮಕ್ಷಮದಲ್ಲಿ ಒಂಟಿತನವನ್ನು ಮರೆತುಬಿಟ್ಟು ಸಾಂತ್ವನ ಹೊಂದುತ್ತಿದ್ದೇನೆ ಎನಿಸಿತು. ಒಂದು ದಿನ ಇಬ್ಬರೂ ಆಶ್ರಮದ ತೋಟದಲ್ಲಿ ನಡೆಯುತ್ತಿದ್ದಾಗ ತನ್ನ ಮನಸ್ಸಿನಲ್ಲಿನ ಭಾವನೆಗೆ ರೂಪ ಕೊಟ್ಟ.
‘ಶಾಂತೀ! ನಾವಿಬ್ಬರೂ ಏಕವಚನದಲ್ಲಿ ಮಾತಾಡಿಕೊಂಡರೆ ಹೃದಯಗಳು ಮತ್ತಷ್ಟು ಸಮೀಪವಾದಂತೆ ಅನಿಸುತ್ತದೆ. ಅಷ್ಟೇ ಅಲ್ಲ, ನಾವಿಬ್ಬರೂ ಒಂದೇ ರೂಮಿನಲ್ಲಿದ್ದರೆ ಚೆನ್ನಾಗಿರುವುದೇನೋ?’ ಎಂದ.
‘ನಾವಿಬ್ಬರೂ ಒಂದೇ ರೂಮಿನಲ್ಲಾ?’ ಎಂದು ಊಹಿಸದಿದ್ದ ಈ ಪ್ರಸ್ತಾಪಕ್ಕೆ ಅಚ್ಚರಿಗೊಂಡಳು.\‘ತಪ್ಪೇನಿದೆ? ಇರಕೂಡದೇನು?’ ಎಂದ.‘ಹಾಗಲ್ಲ. ನಾವಿಬ್ಬರೂ ಒಂದೇ ರೂಮಿನಲ್ಲಿದ್ದರೆ ಸಮಾಜವು ಕೋಳಿಯಾಗಿ ಕೂಗಿಕೊಳ್ಳುತ್ತದೆ’ ಎಂದಳು.
‘ನೋಡು ಶಾಂತಿ! ನಾವಿಬ್ಬರೂ ವೃದ್ಧಾಶ್ರಮದಲ್ಲಿದ್ದೇವೆ. ನಮ್ಮಿಬ್ಬರಿಗೂ ಇನ್ನು ಜೊತೆ ಯಾರೂ ಇಲ್ಲ. ಮಕ್ಕಳು ಹತ್ತಿರದಲ್ಲಿಲ್ಲ. ಅವರವರ ಜೀವನ ಅವರವರದು. ನಾವು ಜೀವನದ ಪ್ರಯಾಣಿಕರು. ಒಂಟಿಯಾಗಿ ಕುಳಿತು ಸಾಗುವ ಕಾಲುದಾರಿಯಲ್ಲಿ ಜೊತೆ ದೊರಕಿದರೆ ಪ್ರಯಾಣವು ಕೊರತೆ ಇಲ್ಲದೇ ಇರುತ್ತದೆ. ಪರಿಸ್ಥಿತಿಗಳು ನಮ್ಮಿಬ್ಬರನ್ನೂ ಇಲ್ಲಿಗೆ ಕರೆತಂದಿವೆ. ಈ ವಯಸ್ಸಿನಲ್ಲಿ ಮನಸ್ಸು ಬಿಚ್ಚಿ ಮಾತಾಡಿಕೊಳ್ಳಲು ಜೊತೆ ಇದ್ದರೆ ವಿರಕ್ತಿ ಕಡಿಮೆಯಾಗಿ, ಜೀವನದ ಮೇಲೆ ಸ್ವಲ್ಪ ಆಸೆ ಹುಟ್ಟುತ್ತದೆ. ಮನಸ್ಸಿನಲ್ಲಿ ಆನಂದ ಉಕ್ಕಿದರೂ, ನೋವುಂಟಾದರೂ, ಅರ್ಧ ರಾತ್ರಿಯಾದರೂ ಎದ್ದು ಮಾತಾಡಿಕೊಳ್ಳಬಹುದು. ಭಾವನೆಗಳನ್ನು ಹಂಚಿಕೊಳ್ಳಬಹುದು. ಇದರಲ್ಲಿ ತಪ್ಪಿದೆಯೆಂದು ನಾನಂದುಕೊಳ್ಳುವುದಿಲ್ಲ. ಅದೊಂದು ಮಾನಸಿಕ ಪ್ರಶಾಂತತೆ. ಅಷ್ಟೇ ಹೊರತು ಶಾರೀರಿಕ ಬಯಕೆ ಅಲ್ಲ. ಆದರೂ ಮದುವೆ ಮಾಡಿಕೊಂಡರೆ ಪ್ರಶ್ನಿಸುವವರು ಯಾರು? ಮಕ್ಕಳಿಗೆ ಆಸ್ತಿ ಬೇಕೇ ಹೊರತು ನಾವಲ್ಲ. ಸಮಾಜ ಎನ್ನುವೆಯಾ… ಸಮಾಜವೆಂಬ ನಾಲಿಗೆಗೆ ಮೂಳೆಯಿಲ್ಲ. ಯಾವ ರೀತಿ ಬೇಕೋ ಆ ರೀತಿ ತಿರುಗಬಲ್ಲದು. ಆಗ ಬರುವ ಧ್ವನಿ ತರಂಗಗಳು ಕೊಡತಿ ಹುಳುವಿನಂತೆ ಪ್ರಪಂಚವೆಲ್ಲಾ ವ್ಯಾಪಿಸುತ್ತವೆ. ಅವನ್ನು ಎದುರಿಸುವ ಆಯುಧ ಕೇವಲ ನಮ್ಮ ನಿಷ್ಕಪಟ ಹೃದಯ ಅಷ್ಟೇ. ನಮ್ಮಲ್ಲಿ ಸ್ವಚ್ಛತೆ ಇರಬೇಕು ಎಂಬುದು ನನ್ನ ಸ್ಥಿರ ಅಭಿಪ್ರಾಯ. ಈ ದಿನ ನಾವು ಯಾರ ಮೇಲೂ ಆಧಾರವಾಗಲಾರೆವು ಅಲ್ಲವಾ! ನೀನು ಒಪ್ಪಿಕೊಂಡರೆ ನಾನು ಆಶ್ರಮದ ವ್ಯವಸ್ಥಾಪಕರೊಂದಿಗೆ ಮಾತಾಡುತ್ತೇನೆ’ ಎಂದ.

ಒಂದು ದಿನವೆಲ್ಲಾ ಆಲೋಚನೆ ಮಾಡಿದಳು ಶಾಂತಿ. ರಾಮರಾವ್ ಪ್ರಸ್ತಾಪದಲ್ಲಿ ಅರ್ಥ ಇದೆಯೆಂದು ಅನಿಸಿತು. ಅದೇ ವಿಷಯವನ್ನು ರಾಮರಾವ್​ಗೆ ಹೇಳಿದಳು. ರಾಮರಾವ್ ಆಶ್ರಮದ ವ್ಯವಸ್ಥಾಪಕರೊಂದಿಗೆ ತಾವಿಬ್ಬರೂ ಒಟ್ಟಿಗೇ ಕೊಠಡಿಯಲ್ಲಿ ಇರುವೆವೆಂದಾಗ ಅವರು ಮೊದಲು ನಿರಾಕರಿಸಿದರು.
‘ಅರವತ್ತು – ಎಪ್ಪತ್ತು ವರ್ಷದ ವಯಸ್ಸಿನಲ್ಲಿ ಹೆಂಡತಿಯನ್ನೋ ಗಂಡನನ್ನೋ ಕಳೆದುಕೊಂಡು, ಇಲ್ಲವೇ ಮಕ್ಕಳಿಂದ ತ್ಯಜಿಸಲ್ಪಟ್ಟ ವ್ಯಕ್ತಿಗಳು ಒಂದೇ ಕಡೆ ಪರಸ್ಪರರಿಗೆ ಆಸರೆಯಾಗಿ ಜೊತೆಯಲ್ಲಿದ್ದರೆ ಸಮಾಜವು ಹರ್ಷ ಪಡದೇ ಇರಲು ಕಾರಣವೇನು? ಅಸೂಯೆಯಾ? ದ್ವೇಷವಾ? ಜೊತೆಯಾಗಿದ್ದರೆ ನಷ್ಟ ಯಾರಿಗೆ? ಒಂಟಿತನದಿಂದ ಎಂತಹ ಕ್ಷೋಭೆ ಅನುಭವಿಸುವರೋ ಎಂಬುದು ಸ್ವಾನುಭವವಾದರೆ ತಿಳಿಯುತ್ತದೆ’ ಎಂದು ಸುದೀರ್ಘವಾಗಿ ರ್ಚಚಿಸಿದ, ವಾದಿಸಿದ. ವ್ಯವಸ್ಥಾಪಕರು ಮೆಟ್ಟಿಲಿಳಿದು ಬಂದರು.
ಆಗಿನಿಂದ ಶಾಂತಿ, ರಾಮರಾವ್ ಜೊತೆಯಾಗಿ ಒಂದೇ ಕೊಠಡಿಯಲ್ಲಿ ವಾಸಿಸತೊಡಗಿದರು. ಮನುಷ್ಯರೊಬ್ಬರು ಜೊತೆಯಾಗಿ, ಆಸರೆಯಾಗಿ ಇರುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ, ಲಭಿಸುವ ಪ್ರಶಾಂತತೆಯ ಮುಂದೆ, ಸಮಾಜ ಮಾಡುವ ವ್ಯಂಗ್ಯ ವ್ಯಾಖ್ಯೆಗಳನ್ನು ಲೆಕ್ಕಿಸುವ ಆವಶ್ಯಕತೆಯೇ ಇಲ್ಲವೆಂಬ ಭಾವನೆ ಇಬ್ಬರಲ್ಲಿಯೂ ಉಂಟಾಯಿತು. ಇಬ್ಬರ ನಡುವೆ ಮಮತೆ, ಅನುರಾಗ ಬೆಳೆದವು. ಕಾಲ ಸರಿಯುತ್ತಿತ್ತು. ಜನವರಿ ತಿಂಗಳು ಬಂದಿತು. ಮಾವಿನ ಹೂಗಳು ಅರಳಿದವು.
ರಾಮರಾವ್ ನೆಟ್ಟಿದ್ದ ಗುಲಾಬಿ ಗಿಡವು, ಯೌವನ ಉಕ್ಕಿದ ಕನ್ಯೆಯಂತೆ, ನವವಧುವಿನಂತೆ ಬದಲಾಗಿತ್ತು. ಮೊಗ್ಗುಗಳು ಕಾಣಿಸಿಕೊಂಡವು. ರಾಮರಾವ್ ಮನಸ್ಸು ವಸಂತದಂತೆ ಅರಳಿತು. ಚಿಕ್ಕ ಹುಡುಗನಂತೆ ಆನಂದಿಸಿದ. ಸಾಯಂಕಾಲ ಸುರಿದ ಕಿರುಮಳೆಯಿಂದ ವಾತಾವರಣ ಆಹ್ಲಾದಕರವಾಗಿತ್ತು. ಆಶ್ರಮದ ಎದುರಿಗೆ ಕುಳಿತರು ಶಾಂತಿ, ರಾಮರಾವ್.
‘ವಾತಾವರಣ ಚೆನ್ನಾಗಿದೆ ಅಲ್ಲವಾ!’ ಎಂದಳು ಶಾಂತಿ.
‘ಶಾಂತೀ! ಪ್ರಕೃತಿ ದೇವರಿತ್ತ ವರ. ನನ್ನ ದೃಷ್ಟಿಯಲ್ಲಿ ದೇವರೆಂದರೆ ಪಂಚಭೂತಗಳೇ. ಪ್ರಕೃತಿಯನ್ನು ಗೆಲ್ಲಲು ಮರಗಳನ್ನು ಕಡಿಯುವುದು, ಭೂಗರ್ಭದಿಂದ ಖನಿಜ ಸಂಪತ್ತನ್ನು ಹೊರಗೆ ತೆಗೆಯುವುದು, ವಾತಾವರಣವನ್ನು ಕಲುಷಿತಗೊಳಿಸುವುದು, ಕೃತಕ ಮೋಡಗಳ ಸೃಷ್ಟಿ – ಹೀಗೆ ಎಷ್ಟೋ ಪ್ರಕ್ರಿಯೆಗಳನ್ನು ಮಾಡಿದ್ದರಿಂದಲೇ ನೂರು ವರ್ಷಗಳ ಹಿಂದಿನ ವಾತಾವರಣಕ್ಕೂ, ಪ್ರಸ್ತುತ ವಾತಾವರಣಕ್ಕೂ ಎಷ್ಟು ವ್ಯತ್ಯಾಸ ಇದೆಯೆಂಬುದನ್ನು ನಮ್ಮ ಕಣ್ಣುಗಳ ಮುಂದೆಯೇ ನೋಡುತ್ತಿರುವೆವು, ಅಲ್ಲವಾ. ಸ್ವಾರ್ಥಕ್ಕಾಗಿ ಮನುಷ್ಯ ಮಾಡುವ ಪ್ರಯತ್ನದಲ್ಲಿ ಪ್ರಕೃತಿ ಸಂಪತ್ತನ್ನೆಲ್ಲಾ ನಿರ್ವೀರ್ಯ ಮಾಡುತ್ತಿದ್ದಾನೆ. ಅದಕ್ಕೇ ಈ ಸುನಾಮಿಗಳು, ಭೂಕಂಪಗಳು, ಚಂಡಮಾರುತಗಳು ಹೆಚ್ಚಿ ಹೋಗುತ್ತಿವೆ’ ಎಂದು ರಾಮರಾವ್ ಮಾತಾಡುತ್ತಾ ಇದ್ದಾಗ ಆಶ್ರಮದ ಗೇಟಿನಿಂದ ಯುವಜೋಡಿಯೊಂದು ಒಳಗೆ ಬಂದಿದ್ದು ಕಂಡಿತು.

ಹತ್ತಿರ ಬಂದೊಡನೆ ಗುರುತಿಸಿದ ರಾಮರಾವ್. ತನ್ನ ಮಗ ಗಿರೀಶ್. ಪಕ್ಕದಲ್ಲೇ ಅಪರಿಚಿತ ಯುವತಿ. ಗಿರೀಶ್ ಕಡೆಗೆ, ‘ಯಾರು’ ಎನ್ನುವಂತೆ ನೋಡಿದ.
‘ಅಪ್ಪಾ! ಬಹಳ ಕಾಲದಿಂದ ಪರಿಚಯ. ಇಬ್ಬರೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಿನಗೆ ಹೇಳಿ ಮದುವೆ ಮಾಡಿಕೊಳ್ಳೋಣ ಎಂದುಕೊಂಡೆವು. ಆದರೆ ಪ್ರಾಜೆಕ್ಟ್ ಕೆಲಸದ ಮೇಲೆ ಮೂರು ತಿಂಗಳು ಅಮೆರಿಕಾಗೆ ಹೋಗೆಂದರು. ಇವಳಿಗೆ ವೀಸಾ ಬರಬೇಕೆಂದರೆ ಮ್ಯಾರೇಜ್ ಸರ್ಟಿಫಿಕೇಟ್ ಬೇಕಿತ್ತು. ಅದಕ್ಕೇ ರಿಜಿಸ್ಟಾ›ರ್ ಆಫೀಸಿನಲ್ಲಿ ಮದುವೆ ಆದೆವು’ ಎಂದ ಗಿರೀಶ್.
ತಾಯಿ ಇಲ್ಲದಿದ್ದರೂ, ತಾನೇ ತಾಯಿ-ತಂದೆ ಆಗಿ ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದಕ್ಕೆ ಕೃತಜ್ಞತೆ ಇಲ್ಲದಿದ್ದರೂ, ಕನಿಷ್ಠ ಹೇಳಲು ಕೂಡ ಸಮಯ ದೊರಕಲಿಲ್ಲವೇನು ಎಂದುಕೊಂಡಾಗ ವಿಪರೀತ ಕೋಪ ಬಂದು ಬೈಯಲು ಹೋದ. ತನ್ನ ವಯಸ್ಸು, ವಯಸ್ಸಿನೊಂದಿಗೆ ಭಗವದ್ಗೀತೆಯಲ್ಲಿ ಓದಿದ ಶ್ಲೋಕ ಜ್ಞಾಪಕಕ್ಕೆ ಬಂದಿತು.
ದುಃಖೇಷ್ವ-ಅನುದ್ವಿಗ್ನ-ಮನಃ ಸುಖೇಷು ವಿಗತ-ಸೃ್ಪಃ
ವಿತ-ರಾಗ-ಭಯ-ಕ್ರೋಧಃ ಸ್ಥಿತ-ಧೀರ್ ಮುನಿರ್ ಉಚ್ಯತೇ
(ಮೂರು ವಿಧಗಳ ದುಃಖಗಳಿಂದ ತಳಮಳ ಹೊಂದದವನು, ಸೌಖ್ಯ ಕೋಪಗಳಿಂದ ದೂರವಾದವನು ಸ್ಥಿರವಾದ ಮುನಿ ಎಂದು ಹೇಳಲ್ಪಡುತ್ತಾನೆ.)
ತನ್ನಲ್ಲಿ ತಾನು ಸಂಭಾಷಿಸಿಕೊಂಡ.ಸರಿ! ಅಮೆರಿಕಾಗೆ ಹೋಗಿ ಅಲ್ಲೇ ನೆಲೆಸಿಬಿಡುವುದಿಲ್ಲ ಅಲ್ಲವಾ!’‘ಇಲ್ಲ! ಪ್ರಾಜೆಕ್ಟ್ ಮುಗಿದೊಡನೆ ಬಂದು ಬಿಡ್ತೇನೆ’ ಎಂದು ಹೆಂಡತಿಯೊಂದಿಗೂ ಸಹ ಬಾಗಿ ಅವರ ಕಾಲುಗಳಿಗೆ ನಮಸ್ಕರಿಸಿದ.
‘ರಜನೀ! ಇವರ ಹೆಸರು ಶಾಂತಿ. ತಂದೆಯವರೊಂದಿಗೇ ಇವರ ರೂಮಿನಲ್ಲೇ ಇರುತ್ತಾರೆ’ ಎಂದ ಗಿರೀಶ್. ರಜನಿಯ ಮುಖದ ಭಾವನೆಗಳು ಬದಲಾಗಿದ್ದು ರಾಮರಾವ್ ದೃಷ್ಟಿಯನ್ನು ದಾಟಿ ಹೋಗಲಿಲ್ಲ.
‘ಸಂಪ್ರದಾಯಕ್ಕೆ, ಸತ್ಯಕ್ಕೆ ವ್ಯತ್ಯಾಸ ಅರ್ಥ ಆಯಿತಾ?’ ಎಂದ ಶಾಂತಿಯೊಂದಿಗೆ. ಶಾಂತಿ ನಕ್ಕು ಸುಮ್ಮನಾದಳು.
ಗೇಟಿನವರೆಗೂ ಹೋದ ಗಿರೀಶ್, ರಜನಿಯನ್ನು ಗೇಟಿನ ಬಳಿಯೇ ಬಿಟ್ಟು, ಹಿಂದಕ್ಕೆ ಮರಳಿ ಬಂದು, ‘ಅಪ್ಪಾ! ನಿನ್ನ ಹತ್ತಿರ ಏಕಾಂತದಲ್ಲಿ ಮಾತಾಡಬೇಕು’ ಎಂದ. ಅರ್ಥ ಮಾಡಿಕೊಂಡು ಶಾಂತಿ ದೂರ ಹೋದಳು.
‘ಏಕಾಂತವಾಗಿ ಮಾತಾಡೋ ವಿಷಯ ಏನಿದೆಯೋ?’ ಎಂದ ರಾಮರಾವ್.‘ನೀನು ಮಾಡುತ್ತಿರುವ ಕೆಲಸ ನನಗೆ ಒಂದಿಷ್ಟೂ ಇಷ್ಟ ಆಗಲಿಲ್ಲ’
‘ಯಾವ ಕೆಲಸ?’
‘ನೀವಿಬ್ಬರೂ ಅಷ್ಟು ಸನ್ನಿಹಿತವಾಗಿ ಒಂದೇ ರೂಮಿನಲ್ಲಿ ಇರುವುದು’‘ಅಂದರೆ ನಿನ್ನ ಉದ್ದೇಶ?’
‘ನಿನಗೆ ಅರ್ಥವಾಗಿರುತ್ತದೆ. ಬಿಡಿಸಿ ಹೇಳುವ ಅಗತ್ಯ ಇಲ್ಲ ಎಂದುಕೊಳ್ಳುತ್ತೇನೆ’‘ನನ್ನ ಮಡಿಲಿನಲ್ಲಿ ಆಡಿ, ನನ್ನ ತೋಳುಗಳಲ್ಲಿ ಬೆಳೆದವನು, ನನ್ನ ಬಗ್ಗೆ ಪೂರ್ತಿಯಾಗಿ ತಿಳಿದವನು ನೀನು. ನೀನೇ ಹೀಗೆ ಮಾತಾಡುವೆಯಾ?’
‘ಏನೇ ಆದರೂ ಸರಿ. ಅಮ್ಮ ಹೋದಾಗಿನಿಂದ ಒಂಟಿಯಾಗಿದ್ದೆ. ಈಗ ನಿನಗೆ ನನ್ನ ಜವಾಬ್ದಾರಿ ತೀರಿಹೋಗಿದೆ. ಆಶ್ರಮಕ್ಕೆ ಸೇರಿದ ಮೇಲೆ ಆಕೆಯ ಪರಿಚಯವಾಯಿತು. ಬಯಕೆಗಳು ಯಾವ ವಯಸ್ಸಿನಲ್ಲಾದರೂ ಬರಬಹುದು. ಶಿಸ್ತು, ಸಿದ್ಧಾಂತಗಳಿಂದ ಕೂಡಿದ ಜೀವನ ಇರಬೇಕು. ಆದರೆ ಜೀವನಕ್ಕೆ ಅನುಗುಣವಾಗಿ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳಕೂಡದೆಂದು ಪದೇಪದೇ ಹೇಳುತ್ತಿದ್ದವನು, ಈಗ ಮಾಡುತ್ತಿರುವುದು ಎರಡನೆಯದೇ ಅಲ್ಲವಾ!’
‘ಅಂದರೆ ನಾನು ತಪ್ಪು ಮಾಡುತ್ತಿದ್ದೇನೆ ಎಂದು ತಾನೇ! ಅಷ್ಟು ನೀಚತನಕ್ಕೆ ಇನ್ನೂ ಜಾರಿಲ್ಲವೋ!’ ಎಂದ ನೋವಿನಿಂದ, ಮಗ ತನ್ನನ್ನು ನಂಬದಿದ್ದುದಕ್ಕೆ.
‘ನೀನೇನು ಮಾಡುವೆಯೋ ಎಂದು ನನಗೇನು ಗೊತ್ತಾಗುತ್ತದೆ? ಇಷ್ಟು ಕಾಲ ನಾವಿಬ್ಬರೇ ಇದ್ದೆವು. ಈಗ ನಮ್ಮ ಜೀವನದಲ್ಲಿ ಮೂರನೇ ವ್ಯಕ್ತಿ ಪ್ರವೇಶಿಸಿದೆ. ರಜನಿಗೆ ಇದುವರೆಗೂ ಗೊತ್ತಿಲ್ಲ. ನಾನು ಹೇಳಲಿಲ್ಲ. ಈ ವಿಷಯ ತಿಳಿದರೆ ಆಕೆಗೆ ನನ್ನ ಮೇಲಿನ ಗೌರವ ಹೋಗುತ್ತದೆ’
‘ನಿಲ್ಲಿಸು! ಕನಿಷ್ಠ ತಂದೆಗೆ ಮದುವೆ ವಿಷಯ ಹೇಳಬೇಕೆಂಬ ಜ್ಞಾನವಿಲ್ಲ. ಆದರೆ ನನಗೇ ಹಿತಬೋಧೆ ಮಾಡುವೆಯಾ? ನಿನಗೆ ಈ ಆಲೋಚನೆ ಮೊದಲಿನಿಂದ ಇತ್ತು ಎನ್ನು! ಈಗ ಸೊಸೆಯನ್ನು ಅಡ್ಡವಿಟ್ಟುಕೊಂಡು ನಿನ್ನ ಮನಸ್ಸಿನಲ್ಲಿನ ಮಾತನ್ನು ಹೊರಹಾಕುತ್ತಿರುವೆಯಾ? ನಾನು ಮಾಡುತ್ತಿರುವುದು ನನ್ನ ಅಂತರಾತ್ಮಕ್ಕೆ ಗೊತ್ತಿದೆ. ಯಾರಿಗೂ ಸಮಜಾಯಿಷಿ ಕೊಡುವ ಅಗತ್ಯ ನನಗಿಲ್ಲ. ಒಂಟಿತನ ಹೇಗಿರುವುದೆಂದು ನನಗೆ ಗೊತ್ತು. ಆ ಅನುಭವ ನಿನಗೆ ಬರಕೂಡದೆಂದು ಒಬ್ಬ ತಂದೆಯಾಗಿ ನಾನು ಕೋರಿಕೊಳ್ಳುತ್ತೇನೆ. ಬಾಲ್ಯದಿಂದ ಯಾರ ಸಹಾಯವೂ ಇಲ್ಲದೇ ಸ್ವಯಂಕೃಷಿಯಿಂದ ಮೇಲೆ ಬಂದಿದ್ದೇನೆ. ಈ ದಿನ ಸ್ವತಂತ್ರನಾಗಿ, ಸಂಪಾದನೆ ಮಾಡುವವನಾದೊಡನೆ ನನಗೇ ನೀತಿಪಾಠ ಹೇಳುವ ಎತ್ತರಕ್ಕೆ ಬೆಳೆದುಬಿಟ್ಟಿದ್ದೀ. ಮುಂದೆ ಇನ್ನೂ ಎಷ್ಟು ಶಾಸನಗಳನ್ನು ಮಾಡುವೆಯೋ. ನಿನ್ನ ಜೀವನವನ್ನು ನೀನು ಉಳಿಸಿಕೋ ಸಾಕು’ ಎಂದ ರಾಮರಾವ್ ಉದ್ವೇಗದಿಂದ.
‘ಸಮಾಜವೇ ಕೋಳಿಯಾಗಿ ಅರಚಿಕೊಂಡರೂ ನೀನು ಮಾತ್ರ ಆಕೆಯೊಂದಿಗೇ ಇರುತ್ತೇನೆ ಎನ್ನುತ್ತಿದ್ದೀ!’
‘ಸಮಾಜ ಎಂದರೆ ನಾವೇ ಅಲ್ಲವೇನೋ! ನಾವು ಮಾಡಿಕೊಂಡಿರುವುವೇ ಅಲ್ಲವಾ ಈ ಸಂಪ್ರದಾಯಗಳು! ಗಂಡು ಹೆಣ್ಣು ಜೊತೆಯಾಗಿ ಜೀವಿಸಿದ ಮಾತ್ರಕ್ಕೆ ಇಲ್ಲಸಲ್ಲದ ಅಪವಾದಗಳನ್ನು ಸೃಷ್ಟಿಸುವ ಈ ಸಮಾಜ ಎಂದರೆ ನನಗೆ ಯಾವುದೇ ರೀತಿಯ ಗೌರವವಿಲ್ಲ. ನನ್ನ ಪರಿಧಿಗಳು ನನಗೆ ಗೊತ್ತು. ನಾನು ಯಾರಿಗೂ, ಕನಿಷ್ಠ ನಿನಗೂ ಭಾರವಾಗದೇ ನಿರ್ಗಮಿಸಲು ಪ್ರಯತ್ನಿಸುತ್ತೇನೆ’ ಎಂದ.
‘ಸರಿ, ನಿನ್ನ ಇಷ್ಟ!’ ಎಂದು ಸರಸರನೆ ನಡೆದು ಹೊರಟುಹೋದ.
ಸದಾ ನಗುತ್ತಾ ಎಲ್ಲರೊಂದಿಗೆ ಸ್ನೇಹದಿಂದ ತಿರುಗಾಡುತ್ತಿದ್ದ ರಾಮರಾವ್, ಆ ರಾತ್ರಿ ಉದಾಸೀನದಿಂದ ಇದ್ದಿದ್ದನ್ನು ಕಂಡು, ‘ಇಷ್ಟು ಉದಾಸೀನದಿಂದ ಇದ್ದೀರಲ್ಲಾ ಏಕೆ?’ ಎಂದು ಕೇಳಿದಳು ಶಾಂತಿ.
‘ಏಕೋ ಏನೋ ಶಾಂತೀ! ಈ ಸಮಾಜದಲ್ಲಿ ನೀತಿಯೊಂದಿಗೆ, ಪ್ರಾಮಾಣಿಕತೆಯೊಂದಿಗೆ ನಮ್ಮ ಇಷ್ಟ ಬಂದಂತೆ ಇರಲು ಅವಕಾಶವೇ ಇಲ್ಲ. ಇಷ್ಟ ಬಂದಂತೆ ಮಾತಾಡುತ್ತಾರೆ. ಆದಿಮಾನವನೇ ಸುಖ ಪಟ್ಟನೇನೋ! ಊಟ, ಒಂದಿಷ್ಟು ನೀರು, ಒಂಟಿ ಬಟ್ಟೆ ಇದ್ದರೆ ಹಾಯಾಗಿ ಜೀವನ ಕಳೆಯುತ್ತಿದ್ದ. ಅಂತಸ್ತುಗಳ ತಾರತಮ್ಯ, ಕುಲಮತ ದ್ವೇಷ, ಕೋಪ, ಅಸೂಯೆ ಇವು ಯಾವುವೂ ಇರುತ್ತಿರಲಿಲ್ಲ. ಅಂತಹ ನಿಷ್ಕಪಟ ವಾತಾವರಣ ಬರಬೇಕೆಂದರೆ ಯುಗಾಂತ ಆಗಬೇಕೇನೋ’
ರಾಮರಾವ್​ನಲ್ಲಿ ಯಾವುದೋ ಘರ್ಷಣೆ ಆರಂಭವಾಗಿದೆಯೆಂದೂ, ಅದಕ್ಕೆ ಕಾರಣ ಮಗನೊಂದಿಗೆ ನಡೆದ ಸಂಭಾಷಣೆ ಇರಬಹುದೆಂದೂ ಊಹಿಸಿ ಮೌನವಾಗಿದ್ದುಬಿಟ್ಟಳು ಶಾಂತಿ.
ಮತ್ತೆ ರಾಮರಾವೇ ಹೇಳಿದ. ‘ಒಂಟಿಯಾಗಿ ಬರುತ್ತೇವೆ. ಒಂಟಿಯಾಗಿ ಹೋಗುತ್ತೇವೆ. ರಕ್ತಸಂಬಂಧಗಳನ್ನು, ತಾಪತ್ರಯಗಳನ್ನು ಈ ವಯಸ್ಸಿನಲ್ಲಿ ತ್ಯಜಿಸಿ ನಿರ್ವಾಣ ಸ್ಥಿತಿಯನ್ನು ತಲುಪಲು ಪ್ರಯತ್ನ ಮಾಡಿದರೆ ಅವಸಾನ ಸ್ಥಿತಿಯಲ್ಲಿ ಪ್ರಶಾಂತತೆ ಬರುವುದೇನೋ! ಹೇಗೂ ಜೀವನದ ಸೂರ್ಯ ಪಶ್ಚಿಮದ ಶಿಖರಾಗ್ರದತ್ತ ತಲುಪುತ್ತಿದ್ದಾನೆ. ಶಿಖರದ ಆ ಕಡೆ ಏನಿದೆಯೋ ಯಾರಿಗೆ ಗೊತ್ತು. ಈ ಕ್ಷಣಕ್ಕಾಗಿ ಮನಸ್ಸನ್ನು ಸಿದ್ಧ ಮಾಡಿಕೊಂಡರೆ, ಈ ನೋವುಗಳು ಇರುವುದಿಲ್ಲ ಅಲ್ಲವಾ?’ ಎಂದ.
ಆ ರಾತ್ರಿಯೆಲ್ಲಾ ನಿದ್ರೆಯಿಲ್ಲದೇ ಶತಪಥ ತಿರುಗುತ್ತಿದ್ದ ರಾಮರಾವ್. ಮಗ ತನ್ನ ಮೇಲೆ ಹೊರಿಸಿದ ಆರೋಪವನ್ನು ಜೀರ್ಣಿಸಿಕೊಳ್ಳಲಾರದಾಗಿದ್ದ. ಎಲ್ಲವೂ ತಾನೇ ಆಗಿ ಅವನನ್ನು ಬೆಳೆಸಿದ್ದ. ಹೊಣೆಗಾರಿಕೆ ಕಲಿಸಿದ್ದ. ರೆಕ್ಕೆಗಳು ಮೂಡಿ ಹಕ್ಕಿ ಗೂಡಿನಿಂದ ಹಾರಿಹೋಯಿತು. ಅದು ಮರಳಿ ಬಂದು ತನಗೆ ಆಸರೆಯಾಗಿರುವುದೆಂದು ಆಶಿಸುವುದು ಅತ್ಯಾಸೆಯೇ ಆಗುತ್ತದೆ. ಚಿಕ್ಕಂದಿನಿಂದ ಕೈಚಾಚಿ ಯಾರನ್ನೂ ಏನೂ ಕೇಳಲಿಲ್ಲ. ತನ್ನ ಜೀವನಪೂರ್ತಿ, ಸಾಧ್ಯವಾದರೆ ಆನಂತರ ಕೂಡ ಯಾರ ಮೇಲೂ ಆಧಾರಗೊಳ್ಳದೇ ಇರಲು ಪ್ರಯತ್ನಿಸಬೇಕು. ಆ ನಿರ್ಧಾರದಿಂದ ಒಂದಿಷ್ಟು ಪ್ರಶಾಂತತೆ ಉಂಟಾಯಿತು.
ನಿರ್ಧಾರ ತೆಗೆದುಕೊಂಡರೆ ಎಷ್ಟು ಕಷ್ಟಗಳು ಬಂದರೂ, ಅವಾಂತರಗಳು ಉಂಟಾದರೂ ಆಚರಣೆಗೆ ತರುವ ಹಟಮಾರಿ ಗುಣ ಇರುವವನು ರಾಮರಾವ್.
ಬೆಳಗ್ಗೆಯೇ ಎದ್ದು, ಆಶ್ರಮದ ಮ್ಯಾನೇಜರ್ ಕೊಠಡಿಗೆ ಹೋಗಿ, ‘ಸಾರ್, ನಿಮಗೆ ಅಭ್ಯಂತರವಿಲ್ಲದಿದ್ದರೆ ಆಶ್ರಮದ ತೋಟದಲ್ಲಿ ಯಾರೂ ಉಪಯೋಗಿಸದೇ ಪಾಳುಬಿದ್ದ ರೂಮು ಇದೆಯಲ್ಲವಾ? ಕೊಂಚ ಕಾಲ ನಾನದನ್ನು ಉಪಯೋಗಿಸಬಹುದಾ?’ ಎಂದ ರಾಮರಾವ್.
ಆಶ್ಚರ್ಯದಿಂದ ನೋಡುತ್ತಾ, ‘ಅದು ಯಾವುದಕ್ಕೆ ಉಪಯೋಗಕ್ಕೆ ಬರುತ್ತದೆ?’ ಎಂದ ಮ್ಯಾನೇಜರ್.‘ಕಾಲ ಕಳೆಯಲು ಯಾವುದಾದರೂ ಕೈಕೆಲಸಗಳನ್ನು ಮಾಡೋಣವೆಂದು.’
ಕೈಕೆಲಸಗಳು ಎಂದಿದ್ದರಿಂದ ಮ್ಯಾನೇಜರ್ ನಿರಾಕರಿಸಲಿಲ್ಲ.ಅದೇ ದಿನ ಸಾಯಂಕಾಲ ಹೋಗಿ ತನಗೆ ಬೇಕಾದ ಸಾಮಗ್ರಿ ತಂದು ಆ ಕೊಠಡಿಯಲ್ಲಿಟ್ಟುಕೊಂಡ.
ತನ್ನ ಕೊಠಡಿಗೆ ಬಂದಾಗ, ‘ಮತ್ತೆ ಏನೋ ಹೊಸ ಕೆಲಸಕ್ಕೆ ಕೈ ಹಾಕಿದಂತಿದ್ದೀರಿ?’ ಎಂದಳು ಶಾಂತಿ ನಗುತ್ತಾ.
‘ಚಿಕ್ಕಂದಿನಲ್ಲಿ ಶಾಲೆಯಲ್ಲಿ ಚರಕಾ ತಿರುಗಿಸಿ ನೂಲು ತೆಗೆಯುವುದರಿಂದ ಬೋಲ್ಟುಗಳನ್ನು ಮಾಡುವವರೆಗೂ ಬಹಳ ಕೆಲಸಗಳನ್ನು ವಾರಕ್ಕೆ ಎರಡು ಗಂಟೆಗಳ ಕಾಲ ಕಲಿಸುತ್ತಿದ್ದರು. ಮಧ್ಯಾಹ್ನ ಕಾಲ ಕಳೆಯಲು ಏನಾದರೂ ಮಾಡೋಣವೆಂದುಕೊಂಡೆ. ಅಷ್ಟೇ,’ ಎಂದ ರಾಮರಾವ್.
‘ಬೆಳಗ್ಗಿನಿಂದ ಏನೋ ಒಂದು ಕೆಲಸ ಮಾಡುತ್ತಲೇ ಇದ್ದೀರಿ ಅಲ್ಲವಾ. ಅದು ಸಾಲದೇನು?’ ಎಂದಳು.
‘ನೋಡು ಶಾಂತಿ! ಮನುಷ್ಯ ಕೆಲಸವಿಲ್ಲದೇ ಖಾಲಿಯಾಗಿದ್ದರೆ ಅನವಶ್ಯಕ ಆಲೋಚನೆಗಳಿಂದ ಇತರರ ಮೇಲೆ ಅಸೂಯೆ, ದ್ವೇಷ ಹುಟ್ಟಬಹುದು. ಅದೇ ನಡೆದರೆ ವ್ಯಕ್ತಿಗಳನ್ನು ದೂಷಿಸುವುದು, ಕೆಟ್ಟ ಟೀಕೆಗಳನ್ನು ಮಾಡುವುದು, ಆತ್ಮನ್ಯೂನತೆ ಎಲ್ಲವೂ ಆರಂಭವಾಗುತ್ತವೆ; ನಮ್ಮ ಮನಸ್ಸೇ ನಮಗೆ ವಿರೋಧಿಯಾಗುತ್ತದೆ. ಕೆಲಸವನ್ನು ಇಷ್ಟಪಡುತ್ತಾ ಮಾಡಿದರೆ ಶ್ರಮ ತಿಳಿಯುವುದಿಲ್ಲ ಅಲ್ಲವಾ! ಆ ಮಗ್ನತೆ ನಮಗೆ ಪ್ರಶಾಂತತೆಯನ್ನು ನೀಡುತ್ತದೆ,’ ಎಂದ.
ದಿನವೂ ಮಧ್ಯಾಹ್ನ ಎರಡು ಗಂಟೆಗಳ ಕಾಲ ಒಂಟಿಯಾಗಿ ಆ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ. ಯಾರನ್ನೂ ಒಳಗೆ ಬರಲು ಅನುಮತಿಸುತ್ತಿರಲಿಲ್ಲ. ಹೊರಗೆ ಬೀಗ ಹಾಕಿ ತನ್ನ ಕೊಠಡಿಗೆ ಮರಳಿ ಬರುತ್ತಿದ್ದ. ಅಗತ್ಯ ಬಿದ್ದರೆ, ಅವರೇ ತೋರಿಸುತ್ತಾರೆ ಎಂದು ಶಾಂತಿ ಕೂಡ ತೋರಿಸೆಂದು ಕೇಳಲಿಲ್ಲ.
***
ತಿಂಗಳುಗಳು ಕಳೆದುಹೋಗುತ್ತಿದ್ದವು.
ಮೂರು ದಿನಗಳಿಂದ ಇದ್ದ ಚಂಡಮಾರುತವು ಕಡಿಮೆಯಾಯಿತು. ಸಾಯಂಕಾಲ ಆಕಾಶವು ಕಪ್ಪು ಬಿಳುಪು ಬಣ್ಣಗಳಿಂದ ಮೇಘಾಚ್ಛಾದಿತವಾಗಿತ್ತು. ಸಣ್ಣನೆಯ ಕಿರುಗಾಳಿ ಶರೀರವನ್ನು ಸೋಕುತ್ತಿತ್ತು.
‘ಶಾಂತೀ! ಮೂರು ದಿನಗಳಿಂದ ಈ ಎಡೆಬಿಡದೇ ಸುರಿನ ಮಳೆ ಮನಸ್ಸನ್ನು ಕೂಡ ನಿಸ್ತೇಜವಾಗಿ ಮಾಡಿದೆ. ಹಾಗೇ ಹೊರಗೆ ತಿರುಗಾಡಿ ಬಂದರೆ ಸ್ವಲ್ಪ ಆನಂದವಾಗಿರುವುದೇನೋ,’ ಎಂದ ರಾಮರಾವ್.
‘ಕತ್ತಲೆ ಬೀಳುತ್ತಿದೆ. ಚಳಿಗಾಳಿಯಲ್ಲಿ ತಿರುಗಾಡಿ ನ್ಯುಮೋನಿಯ ಬಂದರೆ,’ ತನ್ನ ಮನುಷ್ಯನಿಗಾಗಿ ಪಡುವ ತವಕ ಶಾಂತಿಯ ಸ್ವರದಲ್ಲಿ ಧ್ವನಿಸಿತ್ತು.
‘ಬಂದಾಗ ನೋಡಿಕೊಳ್ಳೋಣ ಬಿಡು,’ ಎಂದು ಕೊಡೆ ತೆಗೆದುಕೊಂಡು ಹೊರಗೆ ಹೊರಟ. ಸೀಸವಾದರೂ ಕರಗುವುದೇನೋ; ಆದರೆ ರಾಮರಾವ್ ಹಟಮಾರಿತನ ಬದಲಾಗದು ಎಂದುಕೊಂಡು ಶಾಂತಿ ಮಾತಾಡಲಿಲ್ಲ. ರಾಮರಾವ್ ಹೊರಗೆ ಹೊರಟ ಸ್ವಲ್ಪ ಹೊತ್ತಿಗೆ ಮಳೆ ಮತ್ತೆ ಆರಂಭವಾಗಿತ್ತು. ಕ್ರಮೇಣ ಕಪ್ಪಗಿನ ಮೋಡಗಳು ಆವರಿಸಿಕೊಂಡವು. ಮಳೆ ರಭಸಗೊಂಡಿತು. ಕತ್ತಲೆ ಮತ್ತಷ್ಟು ದಟ್ಟವಾಗಿತ್ತು.
ಎರಡು ಗಂಟೆಗಳಾದರೂ ರಾಮರಾವ್ ಬರದಿದ್ದುದರಿಂದ ಶಾಂತಿ ಕಂಗಾಲಾಗತೊಡಗಿದಳು. ‘ಹೇಳಿದರೂ ಕೇಳಲಿಲ್ಲ ಈ ಮನುಷ್ಯ ಏಕೋ ಏನೋ,’ ಒಂದು ಕಡೆ ಕಂಗಾಲು, ಮತ್ತೊಂದು ಕಡೆ ಭಯದಿಂದ ಆಲೋಚಿಸುತ್ತಿದ್ದಳು ಶಾಂತಿ.
ಅದೇ ಸಮಯದಲ್ಲಿ ಮ್ಯಾನೇಜರ್ ಕೊಠಡಿಯಲ್ಲಿ ಫೋನ್ ಮೊಳಗಿದ್ದು ಕೇಳಿಸಿತು ಶಾಂತಿಗೆ. ತಾನೇ ಹೋಗಿ ತೆಗೆದುಕೊಳ್ಳೋಣ ಎಂದುಕೊಳ್ಳುವಷ್ಟರಲ್ಲಿ ಮ್ಯಾನೇಜರ್ ಗಾಬರಿಯಿಂದ ಮಾತಾಡಿದ್ದು ಕೇಳಿಸಿತು. ಕೊಠಡಿಯ ಬಳಿಗೆ ಹೋಗುವಷ್ಟರಲ್ಲಿ ಮ್ಯಾನೇಜರ್​ನ ಮುಖವು ಬಣ್ಣ ಕಳೆದುಕೊಂಡಿತ್ತು. ಅವನು ಜೀವರಹಿತನಂತೆ ಕುಳಿತಿದ್ದ.
‘ಏನಾಯಿತೂ ಸಾರ್?’ ಕೇಳಿದಳು ಶಾಂತಿ.
‘ಶಾಂತಿಯವರೇ!’ ಹೇಗೆ ಹೇಳಬೇಕೆಂದು ತಿಳಿಯದೇ, ಬಾಯಿಯಿಂದ ಮಾತು ಹೊರಡದೇ ಗದ್ಗದ ಸ್ವರದಲ್ಲಿ ಹೇಳಿದ. ‘ರಾಮರಾವ್ ಅವರಿಗೆ ಆಕ್ಸಿಡೆಂಟ್ ಆಯಿತಂತೆ. ಮೂವರು ಯುವಕರು ಮೋಟರ್ ಬೈಕ್ ಮೇಲೆ ಹೋಗುತ್ತಾ ಕತ್ತಲೆಯಲ್ಲಿ ಗುದ್ದಿಬಿಟ್ಟು ಹೊರಟುಹೋದರಂತೆ. ರಾಮರಾವ್ ರಸ್ತೆಯ ಪಕ್ಕದಲ್ಲಿ ಬಿದ್ದುಹೋಗಿದ್ದಾಗ ದಾರಿಯಲ್ಲಿ ಹೋಗುತ್ತಿದ್ದವರು ನೋಡಿ ಆಂಬ್ಯುಲೆನ್ಸ್​ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ಸಮಯಕ್ಕೇ ಪ್ರಾಣ ಹೋಯಿತಂತೆ. ಜೇಬಿನಲ್ಲಿ ಗುರುತಿನ ಕಾರ್ಡ್ ನೋಡಿ ಫೋನ್ ಮಾಡಿದರು,’ ಎಂದ.
ಕೇಳಿದೊಡನೆ ಸ್ತಬ್ಧಳಾದಳು. ಆಲೋಚನಾ ಶಕ್ತಿಯನ್ನು ಕಳೆದುಕೊಂಡಳು. ಕಲ್ಲಿನ ಶಿಲ್ಪದಂತೆ ಬದಲಾದಳು. ಮತ್ತೆ ಮಾಮೂಲಿ ಮನುಷ್ಯಳಾಗಲು ಬಹಳ ಸಮಯ ಹಿಡಿದಿತ್ತು.
‘ಆಸ್ಪತ್ರೆಗೆ ಫೋನು ಮಾಡಿದೆ. ಪೋಸ್ಟ್ ಮಾರ್ಟಂ ಮಾಡಿ ಶವವನ್ನು ಕೊಡುತ್ತಾರಂತೆ. ಈ ನಡುವೆ ಅವರ ಮಗನಿಗೆ ಫೋನ್ ಮಾಡಿ. ಆತ ಬಂದ ನಂತರ ನಿರ್ಧಾರ ತೆಗೆದುಕೊಳ್ಳಬಹುದು’ ಎಂದ ಮ್ಯಾನೇಜರ್.
ಆಶ್ರಮದ ಪ್ರಕೃತಿಯಲ್ಲಿ ವಿಷಾದ, ಆಶ್ರಮವಾಸಿಗಳ ಹೃದಯದಲ್ಲಿ ವಿಷಾದ, ಆಶ್ರಮದ ಹೊರಗೆ ಜೋರು ಗಾಳಿಯೊಂದಿಗೆ ಎಡೆಬಿಡದ ಮಳೆ.
ಶಾಂತಿಯು ಅಶಾಂತಿಯಿಂದ ಕೊಠಡಿಯಲ್ಲಿ ಶತಪಥ ತಿರುಗಾಡುತ್ತಿದ್ದಳು. ಮನಸ್ಸನ್ನೆಲ್ಲಾ ತುಂಬಿದ ವ್ಯಥೆಯು ಪ್ರಸ್ತುತ ವಾತಾವರಣದಂತಿತ್ತು.
ನಿಶ್ಶಬ್ದ. ನಿರ್ವನುಷ್ಯ ನಿರ್ಜನ ಪ್ರದೇಶದಲ್ಲಿ ಅಮಾವಾಸ್ಯೆಯ ಕತ್ತಲೆಯಲ್ಲಿ ಗಾಳಿ ಕೂಡ ನಿಶ್ಚಲವಾದ ವೇಳೆ ಜೀವನದ ಚರಮಾಂಕದಲ್ಲಿ ಸಹಾಯಹಸ್ತ ನೀಡುವ ಆಪ್ತನನ್ನು ಕಳೆದುಕೊಂಡ ವೈರಾಗ್ಯಸ್ಥಿತಿಯಲ್ಲಿ ಭಯವುಂಟು ಮಾಡುವ ನಿಶ್ಶಬ್ದದೊಂದಿಗೆ ರೋದಿಸುತ್ತಿದ್ದಳು ಶಾಂತಿ.
ಮನಸ್ಸೆಲ್ಲಾ ಚಂಡಮಾರುತ. ತನಗೆ ಇಬ್ಬರು ಗಂಡುಮಕ್ಕಳಿದ್ದರೂ ಇಲ್ಲದಂತೆಯೇ. ಈ ವಿಷಯದಲ್ಲಿ ತಾನು ರಾಮರಾವ್ ಬಳಿ ಸ್ವಲ್ಪ ಮುಚ್ಚುಮರೆ ಮಾಡಿದ್ದಳು. ತಾನೆಂದರೆ ಮಕ್ಕಳಿಗೆ ಬಹಳ ಅಭಿಮಾನ, ಮಮತೆ ಎಂದಿದ್ದಳು. ಆದರೆ ಅವರು ಉದ್ಯೋಗಗಳು ದೊರಕಿದೊಡನೆ ತನ್ನನ್ನು ಈ ಆಶ್ರಮಕ್ಕೆ ಒಪ್ಪಿಸಿ ಅವರವರ ದಾರಿ ನೋಡಿಕೊಂಡಿದ್ದರು. ವಿದೇಶಗಳಿಗೆ ಹೊರಟುಹೋಗಿದ್ದರು.
ತಾನು ಒಂಟಿತನದಿಂದ, ಆಲೋಚನೆಗಳ ಜಡಿಮಳೆಯಿಂದ ಆಶ್ರಮಕ್ಕೆ ಬಂದಿದ್ದಳು. ಆ ಸಮಯದಲ್ಲಿ ಮನಸ್ಸೆಲ್ಲವೂ ಅಗಾಧವಾದ ಕಣಿವೆಯಲ್ಲಿನ ಅಂಧಕಾರದಂತಿತ್ತು. ಚಿಕ್ಕ ಕಾಂತಿಯೊಂದು ರಾಮರಾವ್ ರೂಪದಲ್ಲಿ ಕಾಣಿಸಿ, ಕ್ರಮೇಣ ಹುಣ್ಣಿಮೆಯ ಬೆಳದಿಂಗಳಿನಂತೆ ಪ್ರಭಾವಗೊಳಿಸಿತ್ತು. ಹೃದಯ ಸಮುದ್ರ ಗರ್ಭದ ಆಳದಲ್ಲಿ ಇದ್ದ ದುಃಖವನ್ನು ನೆನೆಸಿಕೊಂಡು ನೊಂದುಕೊಳ್ಳುವುದಕ್ಕಿಂತ, ನಿರ್ಮಲಾಕಾಶದಲ್ಲಿ ಜೀವನವನ್ನು ಕಳೆಯಬಹುದೆಂದು ರಾಮರಾವ್ ಮೂಲಕ ಕಲಿತುಕೊಂಡಿದ್ದಳು.
ಅನೂಹ್ಯವಾದ ಈ ಘಟನೆ ಪ್ರಕೃತಿಯ ಬೀಭತ್ಸದಂತಿತ್ತು. ಅದಕ್ಕೆ ಕಾಳರಾತ್ರಿ ಜೊತೆಯಾಗಿತ್ತು. ಆಕಾಶ ದುಃಖದ ಮಡುವಾಗಿ ರೋದಿಸುತ್ತಿರುವಂತೆ ಸುರಿಯುತ್ತಿತ್ತು ಮಳೆ. ಬಹಳ ವರ್ಷಗಳಿಂದ ಅದುಮಿ ಹಿಡಿದಿದ್ದ ದುಃಖವು ಶಾಂತಿಯ ಮನಸ್ಸಿನಿಂದ ಕೆನ್ನೆಗಳ ಮೇಲೆ ಜಾರುತ್ತಿತ್ತು.
ಜೀವನ ಸಮರದಲ್ಲಿ ಕಡುಕತ್ತಲೆಯಲ್ಲಿ ನಡೆಯುವ ದಾರಿಹೋಕನಿಗೆ ಅದೇ ದಾರಿಯಲ್ಲಿ ನಡೆಯುವ ಮತ್ತೊಬ್ಬ ದಾರಿಹೋಕನು ಜೊತೆಯಾದರೆ ಒಂದಿಷ್ಟು ಧೈರ್ಯ ನೀಡಬಲ್ಲ. ಅದೇ ನಡೆಯಿತೆಂದುಕೊಳ್ಳುವಷ್ಟರಲ್ಲಿ ಉಕ್ಕಿ ಬಂದ ತರಂಗವು ಮುಳುಗಿಸಿದ ತೀರದಲ್ಲಿ ಒಂಟಿಯಾಗಿ ಉಳಿದುಕೊಂಡ ದಾರಿಹೋಕನಂತಿತ್ತು ಈಗ ಶಾಂತಿಯ ಜೀವನ. ಆಶ್ರಮದ ಹೊರಗಿನ ಮಳೆಯ ಶಬ್ದ, ಬೀಸುವ ಗಾಳಿ, ಮಧ್ಯೆ ಮಧ್ಯೆ ಮಿಂಚುಗಳು, ಆ ಕ್ಷಣವನ್ನು ಮತ್ತಷ್ಟು ಭಯವಿಹ್ವಲವಾಗಿ ಮಾಡಲೆಂದೋ ಏನೋ ಗುಡುಗುಗಳು, ಯಾವುವೂ ಶಾಂತಿಯ ಕಿವಿಗಳನ್ನು ಸೋಕಲಿಲ್ಲ.
‘ನಾಳೆಯಿಂದ ನನಗೆ ಊರುಗೋಲು ಇಲ್ಲ ಅಲ್ಲವೇ? ಶಕ್ತಿ ಕಳೆದುಕೊಂಡ ಜೀವಚ್ಛವಕ್ಕೆ, ಆ ಸಹಾಯ ಕೂಡ ಇಲ್ಲದಿದ್ದರೆ ಹೆಜ್ಜೆ ಮುಂದೆ ಇಡಬಲ್ಲೆನೇನು ನಾನು,’ ಎಂದು ಆಲೋಚಿಸುತ್ತಿದ್ದಳು ಶಾಂತಿ.
ಆಲೋಚನೆಗಳ ಘರ್ಷಣೆಯಲ್ಲಿ ಸಮಯ ತಿಳಿಯಲಿಲ್ಲ. ಬೆಳಗಿನ ಜಾವ ಗಿರೀಶ್ ನೆನಪಿಗೆ ಬಂದ. ಕೊಠಡಿಯಲ್ಲಿ ಫೋನ್ ನಂಬರ್​ಗಾಗಿ ಹುಡುಕಿದಳು. ಕಾಣಿಸಲಿಲ್ಲ. ಮಂಚದ ಪಕ್ಕದಲ್ಲಿಯೇ ರಾಮರಾವ್ ಟ್ರಂಕುಪೆಟ್ಟಿಗೆ ಕಂಡಿತು. ತೆರೆಯಲೇ ಬೇಡವೇ ಎನ್ನುವ ಅನುಮಾನದಲ್ಲಿ ತಟಪಟಾಯಿಸಿದಳು. ಆದರೆ ಗಿರೀಶನಿಗೆ ಸುದ್ದಿ ಕೊಡಬೇಕು ಅಲ್ಲವಾ ಎಂಬ ನಿರ್ಧಾರದಿಂದ ಪೆಟ್ಟಿಗೆ ತೆರೆದಳು. ಒಳಗಿದ್ದ ಬಟ್ಟೆಗಳನ್ನು ತಿರುಗಿಸುತ್ತಿದ್ದಾಗ ತನ್ನ ಹೆಸರು ಬರೆದ ಕವರ್ ಕಂಡಾಗ ಆಶ್ಚರ್ಯಚಕಿತಳಾದಳು. ಆ ಕವರ್ ಮೇಲೆಯೇ ಗಿರೀಶ್ ನಂಬರ್ ಇತ್ತು.
ಆತುರ ತಡೆಯಲಾಗದೇ ಕವರ್ ಹರಿದು ಓದತೊಡಗಿದಳು.
‘ಶಾಂತೀ!
ಭವಿಷ್ಯತ್ ನನಗೆ ತಿಳಿಯದು. ಭೂತಕಾಲದ ಅನುಭವಗಳಿಗೆ ಬಣ್ಣ ಬಳಿದುಕೊಂಡು ವರ್ತಮಾನದಲ್ಲಿ ಬದುಕುತ್ತಿದ್ದೇನೆ. ನಾಳೆ ನನಗೇನಾದರೂ ಆದರೆ, ನನ್ನ ಕೆಲವು ಸ್ವಂತ ವಿಷಯಗಳು ನಿನಗೆ ತಿಳಿಯಲೆಂಬ ಉದ್ದೇಶದಿಂದ ಬರೆಯುತ್ತಿದ್ದೇನೆ.
ನಿನ್ನನ್ನು ಬಿಟ್ಟರೆ ನನಗೆ ನಿಜವಾಗಿಯೂ ಯಾರೂ ಇಲ್ಲ. ಬರೆಯುತ್ತಿರುವ ವಿಷಯವನ್ನು ಮೊದಲು ಹೇಳಿ, ನನ್ನ ಮೇಲೆ ಅನುಕಂಪ ಮೂಡಿಸಿಕೊಳ್ಳುವುದು ಇಷ್ಟವಿಲ್ಲದೇ ನಿನಗೆ ಹೇಳಲಿಲ್ಲ. ಜೀವನದ ಚರಮಾಂಕದಲ್ಲಿದ್ದೇನೆ. ಯಾವ ದಿನವಾದರೂ ದೀಪವು ಆರಿಹೋಗಬಹುದು.
ನನ್ನ ತಂದೆ ಕ್ರಿಶ್ಚಿಯನ್. ಅಮ್ಮ ಹಿಂದೂ. ಆದರೆ ನಾನು ಅನಾಥನಂತೆ ಬೆಳೆದೆ. ಬಾಲ್ಯದಲ್ಲಿ ಆ ದಿನ ನನ್ನ ಹೃದಯ ಫಲಕದ ಮೇಲೆ ಬಲವಾಗಿ ನಾಟಿಕೊಂಡ ಘಟನೆಯು ಈ ದಿನವೂ ನೆನಪಿದೆ. ನನ್ನ ನಾಲ್ಕು ವರ್ಷಗಳ ವಯಸ್ಸಿನಲ್ಲಿ, ಸಾಯಂಕಾಲ ಏಳು ಗಂಟೆ ಆಗುತ್ತಿತ್ತು. ಯಾರು ಯಾರೋ ಮನೆಗೆ ಬರುತ್ತಿದ್ದರು. ಹೋಗುತ್ತಿದ್ದರು. ಅಪರಿಚಿತರು, ಪರಿಚಿತರು ನನ್ನನ್ನು ಹತ್ತಿರಕ್ಕೆ ಕರೆದುಕೊಂಡು ಕಣ್ಣೀರು ಹಾಕುತ್ತಿದ್ದರು. ಸಮಾಧಾನಪಡಿಸುತ್ತಿದ್ದರು. ರಾತ್ರಿಯಾದರೂ ಅಪ್ಪ, ಅಮ್ಮ ಮನೆಗೆ ಬರಲಿಲ್ಲ. ಅಮ್ಮ ಬೇಕೆಂದು ಅತ್ತೆ. ‘ಅಳಬೇಡ ಮಗೂ. ಅಮ್ಮ ಎರಡು ದಿನಗಳಲ್ಲಿ ಬರುತ್ತಾಳೆ’ ಎಂದು ಒಬ್ಬ ಮುದುಕಿ ಹೇಳಿ ಸಮೀಪಕ್ಕೆ ಕರೆದುಕೊಂಡಳು. ಅರ್ಥವಾಗಲಿಲ್ಲ.
ರಾತ್ರಿ ನಿದ್ರೆಯಿಂದೆದ್ದು ಆಕೆಯನ್ನೇ ‘ಅಮ್ಮ ಎಲ್ಲಿ?’ ಎಂದು ಕೇಳಿದೆ. ಆ ಕಡೆ ತಿರುಗಿ ಮಲಗಿಕೊಂಡಳು. ಭಯಂಕರವಾದ ಕತ್ತಲೆ. ಪಕ್ಕದ ಕೊಠಡಿಯಲ್ಲಿ ಚಿಕ್ಕ ಬೆಳಕು ಕಾಣಿಸಿತ್ತು. ಎದ್ದು ಆ ಕೊಠಡಿಗೆ ಹೋದೆ. ಅಮ್ಮ, ಅಪ್ಪನ ಫೋಟೋ ಮುಂದೆ ಚಿಕ್ಕ ದೀಪ ಉರಿಯುತ್ತಿತ್ತು. ಫೋಟೋ ಎದುರಿಗೆ ನಿಂತು ‘ಅಮ್ಮಾ!’ ಎಂದು ಕರೆದೆ. ಮಾತಾಡಿಸಲಿಲ್ಲ. ಅಳು ಬಂದಿತು. ಆ ರಾತ್ರಿಯೆಲ್ಲಾ ಎಲ್ಲ ವಸ್ತುಗಳೂ ಮಸುಕುಮಸುಕಾಗಿಯೇ ಕಂಡವು. ಮಧ್ಯೆ ಮಧ್ಯೆ ಕಣ್ಣುಗಳನ್ನು ಒರೆಸಿಕೊಳ್ಳುತ್ತಿದ್ದೆ. ಬೆಳಗಿನ ಜಾವ ಯಾವಾಗ ನಿದ್ರಿಸಿದೆನೋ ತಿಳಿಯದು. ಎರಡು ದಿನಗಳ ನಂತರ ಹತ್ತಿರದ ಬಂಧುಗಳು ಬಂದು ‘ಇಲ್ಲಿಯೇ ಇರು’ ಎಂದು ಹೇಳಿ ನನ್ನನ್ನು ಅನಾಥಾಲಯಕ್ಕೆ ಒಪ್ಪಿಸಿಬಿಟ್ಟರು.
ದಿನವೂ ಅಮ್ಮನಿಗಾಗಿ ಎದುರು ನೋಡುತ್ತಿದ್ದೆ. ಬಹುಶಃ ಕಣ್ಣು ತೆರೆದಾಗ ತಿಳಿದ ಅಮ್ಮನ ವಾಸನೆ, ಅಮ್ಮನ ಸ್ಪರ್ಶ, ಅಮ್ಮನ ಅಪ್ಪುಗೆ, ಅಮ್ಮನ ಮಾತು, ಬಾಯಿ ತುಂಬಾ ‘ಕಂದಾ’ ಎಂದು ಕರೆಯುತ್ತಿದ್ದ ಅಮ್ಮನ ಕರೆ, ಬಾಲ್ಯದಲ್ಲಿ ನನ್ನನ್ನು ಪ್ರಭಾವಿತಗೊಳಿಸಿದಂತೆ ಬೇರಾವುದೂ ಮಾಡಲಿಲ್ಲವೇನೋ? ಅದಕ್ಕೇ ಅಮ್ಮನ ರೂಪ ಈ ದಿನವೂ ನನ್ನ ಮನಸ್ಸಿನಲ್ಲಿ ನಿಂತುಬಿಟ್ಟಿದೆ.
ಅನಾಥಾಶ್ರಮದಲ್ಲಿ ಎಲ್ಲರೂ ನನ್ನಂತಹವರೇ. ನಮ್ಮಲ್ಲಿ ನಾವೇ ಪರಸ್ಪರರಿಗೆ ಜೊತೆ. ಶಾಲೆಗೆ ಹೋಗುವಾಗ, ತಂದೆ ತಾಯಿ ಅವರವರ ಮಕ್ಕಳನ್ನು ಗೇಟಿನ ಬಳಿ ಇಳಿಸಿ, ಹಣೆಯ ಮೇಲೆ ಮುತ್ತಿಟ್ಟು ‘ಹುಷಾರು ಕಂದಾ!’ ಎಂದು ಹೇಳುತ್ತಿದ್ದರೆ ಅಮ್ಮನ ನೆನಪಾಗಿ ಅಳು ಬರುತ್ತಿತ್ತು. ಅಂಗಿಯಿಂದ ಕಣ್ಣೀರು ಒರೆಸಿಕೊಂಡು ಒಳಗೆ ಹೋಗುತ್ತಿದ್ದೆ.
ಜೊತೆಯ ಮಕ್ಕಳು ಅನಾಥ ಎಂದೆನ್ನುತ್ತಿದ್ದರೆ ಒಂದು ರೀತಿಯ ನ್ಯೂನತಾಭಾವನೆ ನನ್ನಲ್ಲಿ ಉಂಟಾಗಿತ್ತು. ಅದಕ್ಕೇ ನನಗೆ ಪರಿಚಿತರು ಕಡಿಮೆ. ಕಷ್ಟಪಟ್ಟು ಪದವಿ ಪಡೆದೆ. ಉದ್ಯೋಗಕ್ಕಾಗಿ ಅಪ್ಲೈ ಮಾಡಿದರೆ, ಕುಲ, ಮತ, ತಂದೆಯ ಹೆಸರು ಕೇಳುತ್ತಿದ್ದರು. ಯಾವುದೂ ನನಗೆ ತಿಳಿಯದಿದ್ದುದರಿಂದ ಅನಾಥಾಶ್ರಮ ಎಂದು ಬರೆಯುತ್ತಿದ್ದೆ.
ಸರ್ಕಾರಿ ಉದ್ಯೋಗ ದೊರಕಿತು. ನಾನಿದ್ದ ಬೀದಿಯಲ್ಲಿಯೇ ಪರಂಧಾಮಯ್ಯ ಇದ್ದರು. ಮೂವರು ಹೆಣ್ಣು ಮಕ್ಕಳ ತಂದೆ. ಪರಿಚಯವು ಬೆಳೆದ ನಂತರ ಮದುವೆ ಪ್ರಸ್ತಾಪ ತಂದರು. ನನ್ನ ವಿವರಗಳನ್ನು ಹೇಳಿದೆ. ‘ಇಂದು ಭೂಮಿಗೆ ಬಂದೆವು. ನಾಳೆ ಮಣ್ಣಿನಲ್ಲಿ ಬೆರೆತುಹೋಗುತ್ತೇವೆ. ಈ ಸ್ವಲ್ಪ ಸಮಯದಲ್ಲಿಯೇ ಕುಲ, ಮತ ಇವುಗಳ ಸಮರ್ಥನೆ ನಾನು ಮಾಡುವುದಿಲ್ಲ. ನನಗೆ, ನನ್ನ ಮಗಳಿಗೆ ಅಭ್ಯಂತರವಿಲ್ಲ. ನಿನಗೆ ಒಪ್ಪಿಗೆಯಿದ್ದರೆ ಹೇಳು,’ ಎಂದರು.
ಮದುವೆ ಆಯಿತು. ಆನಂತರ ನಾನು ಅನುಭವಿಸಿದ ಕ್ಷಣಗಳು ಯಾವ ದಿನವೂ ಜೀವನದಲ್ಲಿ ಊಹಿಸದಿದ್ದ ಮಧುರ ಘಟ್ಟಗಳು. ಸಾಂಸಾರಿಕ ಜೀವನದಲ್ಲಿ ಇಷ್ಟು ಆನಂದ ಇರುವುದಾ ಎಂದು ಅನುಭವಿಸುತ್ತಿದ್ದ ದಿನಗಳಲ್ಲೇ ಹಠಾತ್ತನೆ ಕಾಯಿಲೆ ಬಂದು ವೇಣಿ ನನ್ನನ್ನು ಬಿಟ್ಟು ಹೊರಟುಹೋದಳು.
ನೋಡಿದೆಯಾ! ನನ್ನ ಜೀವನದಲ್ಲಿ ಎಲ್ಲಿ ನೋಡಿದರೂ ಮರೀಚಿಕೆಗಳೇ! ಒಯಾಸಿಸ್ ಲಭಿಸಿತು ಎಂದುಕೊಂಡ ಸಮಯದಲ್ಲಿ ಭ್ರಾಂತಿ ಬಿಟ್ಟುಹೋಗುವ ಮೊದಲೇ ಅದು ಆವಿಯಾಗಿಬಿಟ್ಟಿತು. ಮರುಭೂಮಿ ಉಳಿದುಕೊಂಡಿತು.
ಗಿರೀಶ್ ನನ್ನ ಮಗನಲ್ಲ. ವೇಣಿ ನನ್ನನ್ನು ಬಿಟ್ಟುಹೋದ ಮೇಲೆ ಅವಳ ನೆನಪುಗಳು ನಿರಂತರವಾಗಿ ನನ್ನನ್ನು ಬೆನ್ನಟ್ಟಿದವು. ಮದುವೆಯ ಮೇಲೆ ಇಷ್ಟ ಹೋಗಿತ್ತು. ಅನಾಥನಾಗಿ ಬದುಕಿದ ನಾನು ಇನ್ನೊಬ್ಬ ಅನಾಥನನ್ನು ಹತ್ತಿರಕ್ಕೆ ಕರೆದುಕೊಂಡು, ತಂದೆಯ ಆಪ್ಯಾಯತೆ, ಮಮತೆಗಳನ್ನು ಹಂಚಿ ಅನಾಥ ಜೀವನದಿಂದ ವಿಮುಕ್ತಿ ಪ್ರಸಾದಿಸಿದರೆ ನನ್ನ ಜೀವನಕ್ಕೆ ಸಾರ್ಥಕತೆ ಲಭಿಸುತ್ತದೆ ಎನಿಸಿತು. ಅದರ ಫಲಿತಾಂಶವೇ ಗಿರೀಶ್. ಈ ದಿನದವರೆಗೂ ಗಿರೀಶ್​ಗೆ ಈ ವಿಷಯ ತಿಳಿಯದು. ಅವನ ದೃಷ್ಟಿಯಲ್ಲಿ ತಾಯಿ ಅವನ ಚಿಕ್ಕಂದಿನಲ್ಲಿಯೇ ಸತ್ತುಹೋಗಿದ್ದಳು.
ಗಿರೀಶ್ ಏಳನೇ ತರಗತಿಗೆ ಬರುವ ವೇಳೆಗೆ ಹಾಸ್ಟೆಲ್​ಗೆ ಸೇರಿಸಿದೆ. ಉದ್ಯೋಗರೀತ್ಯಾ ನಾನು ಎಲ್ಲ ಪ್ರದೇಶಗಳನ್ನೂ ತಿರುಗುತ್ತಿದ್ದೆ. ಅವನ ಓದಿಗಾಗಿ ನನ್ನ ಕೈಲಾದಷ್ಟು ಶ್ರಮಪಟ್ಟೆ. ಆದರೆ ವಯಸ್ಸು ಹೆಚ್ಚುತ್ತಿದ್ದಂತೆ ಜೊತೆಯ ಸ್ನೇಹಿತನಂತೆ ನಾನು ಇರಬೇಕೆಂದು ಅವನಿಗೆ ಅನಿಸಿತ್ತು. ಆ ಕೋರಿಕೆಯನ್ನು ತೀರಿಸಲಾರದಾದೆ. ಆ ವಿಷಯದಲ್ಲಿ ಅವನಿಗೆ ನನ್ನ ಮೇಲೆ ಕೋಪ ಇದ್ದಿರಬಹುದು. ಅವನು ನನಗೆ ತಿಳಿಯದೇ ಮದುವೆ ಮಾಡಿಕೊಂಡಾಗ ಕ್ಷಣಿಕಾವೇಶ ಬಂದ ಮಾತು ನಿಜವೇ. ಸಂಬಾಳಿಸಿಕೊಂಡೆ. ಆನಂತರ ಅವನು ನನ್ನ ಮೇಲೆ ಮಾಡಿದ ಟೀಕೆಗಳನ್ನು ತಡೆದುಕೊಳ್ಳಲಾರದಾದೆ. ತಪ್ಪಿರುವುದು ನನ್ನಲ್ಲಿಯಾ? ಅವನಲ್ಲಿಯಾ? ನನ್ನ ಪೋಷಣೆಯಲ್ಲಿಯಾ? ನನಗೆ ಈಗಲೂ ಸಂದೇಹವೇ.
ಆ ದಿನದಿಂದ ನನ್ನ ಮೇಲೆ ಸಿಟ್ಟು ಬೆಳೆಸಿಕೊಂಡ. ಫೋನ್​ನಲ್ಲಿ ಕೂಡ ಉದಾಸೀನದಿಂದ ಮಾತಾಡುತ್ತಿದ್ದಾನೆ. ಅದಕ್ಕೇ, ನಾನು ಕೂಡ ನನ್ನ ಸಾವಿನ ನಂತರ ಯಾರಿಗೂ ಭಾರವಾಗಕೂಡದೆಂಬ ನಿರ್ಣಯ ತೆಗೆದುಕೊಂಡೆ. ನನ್ನ ಸಮಾಧಿಯ ಏರ್ಪಾಡು ನಾನೇ ಮಾಡಿಕೊಂಡಿದ್ದೇನೆ. ನನ್ನ ನಿರ್ಗಮನದ ನಂತರ ಮೊದಲು ಆಶ್ರಮದಲ್ಲಿ ನಾನು ಕೆಲಸ ಮಾಡಿದ ಕೊಠಡಿಯೊಳಗೆ ಹೋಗಿ ನೋಡು. ಅರ್ಥವಾಗುತ್ತದೆ.
ವಿಶ್ರಾಂತಿ ಜೀವನದಲ್ಲಿ ಅವಿಶ್ರಾಂತವಾಗಿ ಆಶ್ರಮ ಸೇರಿದ ನನಗೆ ನಿನ್ನ ಪರಿಚಯ ಸಾಂತ್ವನ ನೀಡಿದೆ. ಕೃತಜ್ಞತೆಗಳು.
ಪತ್ರ ಓದಿದೊಡನೆ ಸಾವನ್ನು ಮೊದಲೇ ಊಹಿಸಿದೆಯಾ? ಎಂದು ಅನಿಸಬಹುದು. ಇದು ಆಸ್ತಿಗಾಗಿ ಉಯಿಲು ಬರೆದಂತೆಯೇ, ನೀನು ನನಗಿಂತ ಮೊದಲು ಪ್ರಪಂಚ ಬಿಟ್ಟರೆ, ಇದನ್ನು ಹರಿದುಬಿಟ್ಟು ಮತ್ತೊಂದನ್ನು ಮಾಡಿರುತ್ತಿದ್ದೆನೇನೋ, ಆಗಿನ ಪರಿಸ್ಥಿತಿಗೆ ಅನುಗುಣವಾಗಿ.
ವಿಧಿಯ ಕೈಯಲ್ಲಿ ಅನಾಥನಾದೆ. ಅನಾಥನಂತೆ ಬದುಕಿದೆ. ಅನಾಥನಂತೆಯೇ ಕುಲ ಮತ ಇಲ್ಲದ ಪ್ರಕೃತಿಯಲ್ಲಿ ಬೆರೆತುಹೋಗುತ್ತೇನೆ. ಈ ಪ್ರಕೃತಿಯನ್ನು ಪ್ರೀತಿಸು. ಒಂಟಿತನದಲ್ಲಿ ಒಳ್ಳೆಯ ಉಪಶಮನ ಹೊಂದುತ್ತೀ,
ವಿದಾಯ ರಾಮರಾವ್.
ಪತ್ರ ಓದಿ, ಸ್ವಂತ ಮಗ ಆಗಿರದಿದ್ದರೂ ರಾಮರಾವ್ ಗಿರೀಶ್​ಗಾಗಿ ಮಾಡಿದ ತ್ಯಾಗ ಶಾಂತಿಯ ದೃಷ್ಟಿಯಲ್ಲಿ ರಾಮರಾವ್​ನನ್ನು ಹಿಮಾಲಯ ಶಿಖರಾಗ್ರದ ಮೇಲೆ ನಿಲ್ಲಿಸಿತು. ತಾನು ಕೂಡ ಈ ವಿಷಯವನ್ನು ಗಿರೀಶ್ ಬಳಿ ರಹಸ್ಯವಾಗಿಯೇ ಇಡಲೆಂದು ನಿರ್ಧರಿಸಿದಳು. ಗಿರೀಶ್ ಫೋನ್ ನಂಬರ್ ನೋಡಿ ಫೋನ್ ಮಾಡಿದಳು. ನಡೆದ ವಿಷಯವನ್ನು ಗಿರೀಶ್​ಗೆ ಹೇಳಿದಳು. ಕೊನೆಗೆ, ‘ಅಂತ್ಯಕ್ರಿಯೆಗಳನ್ನು ಮಾಡಲು ನೀನು ಬರುವವರೆಗೂ ನಿನ್ನ ತಂದೆಯವರ ಶರೀರವನ್ನು ಇಡುತ್ತೇವೆಂದು ಮ್ಯಾನೇಜರ್ ಹೇಳೆಂದಿದ್ದಾರೆ’ ಎಂದಳು.
‘ಶಾಂತಿಯವರೇ! ನನಗೆ ರಜೆ ಸಿಗುವುದಿಲ್ಲ. ಅಂತ್ಯಕ್ರಿಯೆಗಳನ್ನು ಯಾರು ಮಾಡಿದರೂ ಒಂದೇ. ಆತನೇ ಇಲ್ಲದಿದ್ದಾಗ ನಾನು ಬಂದು ಮಾಡುವುದೇನಿದೆ. ನೀವು ಮಾಡಿಸಿ. ಖರ್ಚು ಎಷ್ಟಾಯಿತೆಂದು ಹೇಳಿದರೆ ಹಣ ಕಳುಹಿಸುತ್ತೇನೆ,’ ಎಂದ.
‘ಮಗನಾಗಿ ನಿರ್ವಹಿಸಬೇಕಾದ ಜವಾಬ್ದಾರಿ?’ ಎಂದಳು ಶಾಂತಿ.
‘ನನಗೆ ಆ ಸೆಂಟಿಮೆಂಟುಗಳಿಲ್ಲ,’ ಎಂದ ಗಿರೀಶ್. ಇನ್ನು ಕೇಳಲಾಗದೇ ಫೋನ್ ಇಟ್ಟುಬಿಟ್ಟಳು ಶಾಂತಿ.
ಮಾಡಬೇಕಾದ ಗಲಾಟೆಗಳನ್ನೆಲ್ಲಾ ಮಾಡಿ, ಪ್ರವಾಹದ ರಭಸ ಕಡಿಮೆಯಾದ ನಂತರ ಪ್ರಶಾಂತವಾಗಿ ಹರಿಯುವ ನದಿಯಂತೆ ಇತ್ತು ವಾತಾವರಣ. ನಿಶಿರಾತ್ರಿ ನಡೆದ ವಿಷಯಗಳಾವುವೂ ತಿಳಿಯದೇ, ಪೂರ್ವದಲ್ಲಿ ಬೆಳಕು ಮೂಡುತ್ತಿದ್ದಂತೆ ಮುಗ್ಧ ವೃಕ್ಷಗಳು ತಮ್ಮ ಗೆಳೆಯನಿಗಾಗಿ ನಿರೀಕ್ಷೆ ಮಾಡುತ್ತಿದ್ದವು. ಹಸಿವಿನೊಂದಿಗೆ ಅನ್ನದಾತನಿಗಾಗಿ ಕನವರಿಸುತ್ತಿದ್ದವು ಆಶ್ರಮದ ಗೇಟಿನ ಹೊರಗಿನ ಮೂಕಜೀವಿಗಳು.
ಆಶ್ರಮದ ಗೇಟಿನ ಮೂಲಕ ಆಂಬ್ಯುಲೆನ್ಸ್ ಬಂದಿತು. ರಾಮರಾವ್​ನ ಪಾರ್ಥಿವ ಶರೀರವನ್ನು ಆಶ್ರಮವಾಸಿಗಳೇ ವರಾಂಡಾಗೆ ತಂದರು. ವರಾಂಡಾದಲ್ಲಿ ಮೂಲೆಯಲ್ಲಿ ಕುಳಿತಿದ್ದಳು ಶಾಂತಿ. ಆಶ್ರಮದ ಮ್ಯಾನೇಜರ್ ಶಾಂತಿಯನ್ನು ಸಮೀಪಿಸಿ, ‘ರಾಮರಾವ್ ಮಗನಿಗೆ ಸುದ್ದಿ ಕಳುಹಿಸಿದಿರಾ?’ಎಂದ.
‘ರಜೆ ಇಲ್ಲವೆಂದ. ನಮ್ಮನ್ನೇ ಮಾಡಿ ಮುಗಿಸಿ ಎಂದ,’ ಎಂದಳು.
‘ಯಾರು ಮಾಡಿದರೂ ಒಂದೇ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು. ನಾನೇ ಮಾಡುತ್ತೇನೆ,’ ಎಂದನೊಬ್ಬ ಆಶ್ರಮವಾಸಿ. ಅತ್ತ ಕಡೆ ನೋಡಿ, ‘ಅಷ್ಟು ಮಾತ್ರದ ಹೃದಯ ಮಗನಿಗಿಲ್ಲವಾಯಿತು,’ ಎಂದುಕೊಂಡು ನಿಟ್ಟುಸಿರಿಟ್ಟಳು ಶಾಂತಿ. ಅಷ್ಟರಲ್ಲಿ ರಾಮರಾವ್ ಪತ್ರದಲ್ಲಿ ಬರೆದಿದ್ದ ಮನವಿಯ ನೆನಪಾಯಿತು.
‘ಮ್ಯಾನೇಜರ್ ಸಾರ್, ರಾಮರಾವ್ ಅವರು ತನಗಾಗಿ ಏನೋ ವಸ್ತು ತಯಾರು ಮಾಡುತ್ತಿರುವರೆಂದೂ, ತನ್ನ ಸಾವಿನ ನಂತರ ಆ ವಸ್ತುವನ್ನು ತನ್ನೊಂದಿಗೂ ಸಹ ಖನನ ಮಾಡಬೇಕೆಂದು ಬರೆದಿದ್ದಾರೆ. ಆತ ಈ ನಡುವೆ ಕೆಲಸ ಮಾಡುತ್ತಿದ್ದ ರೂಮನ್ನು ನೋಡೋಣವಾ?’ ಎಂದಳು ಶಾಂತಿ.
‘ನಡೆಯಿರಿ,’ ಎಂದ ಮ್ಯಾನೇಜರ್. ಶಾಂತಿ, ವಾಚ್​ವುನ್, ಮತ್ತಷ್ಟು ಜನ ಆಶ್ರಮವಾಸಿಗಳು, ಹೋಗಿ ಕೊಠಡಿಯ ಬಾಗಿಲು ತೆರೆದರು. ನೋಡಿದೊಡನೆ ಶಾಂತಿಯು ವಿಚಲಿತ ಮನಸ್ಕಳಾದಳು. ಉಳಿದವರು ಕೂಡ ರಾಮರಾವ್ ಮಾಡಿದ್ದ ಏರ್ಪಾಡು ಕಂಡು ಬೆರಗುಗೊಂಡರು. ತನ್ನ ಸಮಾಧಿಯ ಏರ್ಪಾಡು ತಾನೇ ಮಾಡಿಕೊಂಡಿರುವನೆಂದು ತಿಳಿದುಬಂದಾಗ ರಾಮರಾವ್​ನ ವ್ಯಕ್ತಿತ್ವಕ್ಕೆ ಶ್ಲಾಘನೆಗಳನ್ನು ಅರ್ಪಿಸದೇ ಇರಲಾರದಾದರು.
ಆ ಕೊಠಡಿಯಲ್ಲಿದ್ದುದು ಹೆಚ್ಚೂಕಡಿಮೆ ಪೂರ್ತಿ ಸಿದ್ಧವಾಗಿದ್ದ ಶವಪೆಟ್ಟಿಗೆ. ಅದರ ಮೇಲೆ ಅರಿಶಿನ ಕುಂಕುಮದ ಬೊಟ್ಟುಗಳು ಕೂಡ ಇದ್ದವು. ಕಾರಣವು ಶಾಂತಿಗೆ ಅರ್ಥವಾಗಿತ್ತು. ಒಂದು ಕಡೆ ತಂದೆಯನ್ನೂ, ಮತ್ತೊಂದು ಕಡೆ ತಾಯಿಯನ್ನೂ ನೆನಪಿಸಿಕೊಂಡಿದ್ದಾನೆ ಎಂದುಕೊಂಡಳು. ‘ಮಹನೀಯ ಈತ. ಯಾರ ಮೇಲೂ ಆಧಾರಪಡದೇ ತನ್ನ ಅಂತ್ಯಕ್ರಿಯೆಗಾಗಿ ಯೋಜನೆ ಮಾಡಿಕೊಂಡಿದ್ದಾನೆ,’ ಎಂದ ಮ್ಯಾನೇಜರ್.
ರಾಮರಾವ್ ಪಾರ್ಥಿವ ಶರೀರವನ್ನು ಆಶ್ರಮವಾಸಿಗಳೇ ಶವಪೆಟ್ಟಿಗೆಯೊಳಗೆ ಸೇರಿಸಿದರು. ರಾಮರಾವ್ ಶವವನ್ನು ಗೇಟು ದಾಟಿ ತೆಗೆದುಕೊಂಡು ಹೋಗುತ್ತಿದ್ದಾಗ ಗೇಟಿನ ಬಳಿ ನಾಯಿಗಳು ಮಾಡಿದ ಕೋಲಾಹಲ ಅಷ್ಟಿಷ್ಟಲ್ಲ. ಅತ್ತವು, ಅವು ಸುರಿಸಿದ ಕಣ್ಣೀರು ಅವುಗಳ ಮುಖಗಳ ಮೇಲೆ ಗೆರೆಗೆರೆಯಾಗಿ ಉಳಿದುಕೊಂಡಿದ್ದವು. ಎಲ್ಲರಿಗಿಂತ ಹಿಂದೆ ನಡೆಯುತ್ತಾ, ರಾಮರಾವ್ ಶವವನ್ನು ಸ್ವಲ್ಪ ದೂರ ಕಳಿಸಿ ಮರಳಿ ಬಂದವು ನಾಯಿಗಳು.
ಕಾಲ ಸಾಗುತ್ತಿತ್ತು. ರಾಮರಾವ್ ಇಲ್ಲದ ಕೊರತೆ ಶಾಂತಿಗೆ ಸ್ಪಷ್ಟವಾಗಿ ತಿಳಿಯುತ್ತಿತ್ತು. ರಾಮರಾವ್​ಗೆ ಜೀವನದ ಮೇಲಿದ್ದ ಅವಗಾಹನೆ, ಬದುಕಿದ ರೀತಿ, ಕಷ್ಟಗಳನ್ನು ಅತಿಕ್ರಮಿಸಿದ ಸಹನೆ, ನಿರ್ವಾಣ ಸ್ಥಿತಿಯ ಮೇಲಿದ್ದ ಅಭಿಪ್ರಾಯ ಪದೇಪದೆ ನೆನಪಿಗೆ ಬರತೊಡಗಿದವು. ಶಾಂತಿಯ ಆಲೋಚನಾ ವಿಧಾನದ ಮೇಲೆ ಅವು ಪ್ರಭಾವ ಬೀರಿದವು.
ಬೆಳಗ್ಗೆ ಪೂರ್ವದಲ್ಲಿ ಬೆಳಕು ಮೂಡುತ್ತಿದ್ದಂತೆ ಎದ್ದು ಗಿಡಗಳಿಗೆ ನೀರುಣಿಸಿದಳು. ಪ್ರತಿ ಗಿಡದ ಬಳಿ ನಿಂತು ತದೇಕಚಿತ್ತಳಾಗಿ ನೋಡಿದಳು. ಎಲೆಗಳು, ಚಿಗುರುಗಳನ್ನು ನೋಡುತ್ತಾ ಹೊಸ ಅನುಭೂತಿಗೆ ಒಳಗಾದಳು. ರಾಮರಾವ್ ಇಟ್ಟಿದ್ದ ಬ್ರೆಡ್ ಚೂರುಗಳನ್ನು ತೆಗೆದುಕೊಂಡಳು. ಒಣಗಿ ಹೋಗಿದ್ದವು. ಆಶ್ರಮದ ಗೇಟಿನ ಬಳಿಗೆ ನಡೆದಳು. ನಾಯಿಗಳೆಲ್ಲವೂ ಆಶ್ರಮದ ಗೇಟಿನ ಬಳಿ ದೀನವಾಗಿಯೂ, ಆತಂಕದಿಂದಲೂ ನಿಂತಿದ್ದವು. ಶಾಂತಿಯನ್ನು ನೋಡಿದೊಡನೆ ಭಯದಿಂದ ದೂರ ಸರಿದವು. ಶಾಂತಿ ಬ್ರೆಡ್ ಚೂರುಗಳನ್ನು ಅವುಗಳ ಮುಂದೆ ಹಾಕಿದಳು. ಅವುಗಳಲ್ಲಿ ಒಂದು ಧೈರ್ಯ ಮಾಡಿ ವಾಸನೆ ನೋಡಿತು. ಗುರುತು ಹಿಡಿಯಿತು. ಪರಿಚಯವಾದ ವಾಸನೆ ಅದು. ತಿನ್ನಲು ಆರಂಭಿಸಿದೊಡನೆ ಉಳಿದ ನಾಯಿಗಳು ಹತ್ತಿರಕ್ಕೆ ಬಂದವು. ಶಾಂತಿಗೆ ಅತಿ ಸಮೀಪವಾಗಿ ಬಂದು ಪಾದಗಳ ವಾಸನೆ ನೋಡಿದವು. ತಲೆ ಎತ್ತಿ ಶಾಂತಿಯ ಕಣ್ಣುಗಳೊಳಗೆ ನೋಡಿದವು. ಅವುಗಳ ಕಣ್ಣುಗಳಲ್ಲಿ ನೀರು. ಶಾಂತಿ ಚಲಿಸಿಬಿಟ್ಟಳು. ಹತ್ತಿರಕ್ಕೆ ಕರೆದುಕೊಂಡಳು.
ಹೌದು. ನಾನು ಒಂಟಿಯಲ್ಲ. ಈ ಮರಗಳು, ಸಸ್ಯಗಳು, ನಾಯಿಗಳು, ಈ ಪ್ರಕೃತಿಯೇ ನನ್ನ ಗೆಳೆಯ, ಎಂದುಕೊಳ್ಳುತ್ತಾ ಒಂಟಿತನವನ್ನು ಮರೆಯಲು ಪ್ರಯತ್ನಿಸುತ್ತಾ ಆಶ್ರಮದೊಳಗೆ ನಡೆದಳು.
ಪಂಜಾಬ್ ಪ್ರಾಂತ್ಯದ ಪೊಲೀಸರ ಮೇಲೆ ಪಾಕ್ ಸೇನೆಯಿಂದ ಹಲ್ಲೆ! ಅಷ್ಟಕ್ಕೂ ಆಗಿದ್ದೇನು..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
