ನಿತ್ಯ ನುಸುಕಿನಲ್ಲೇ ಎದ್ದು, ಮಳೆ, ಚಳಿ ಲೆಕ್ಕಿಸದೆ ದುಡಿಯುವ ಕಾಯಕ ಜೀವಿಗಳು ಪತ್ರಿಕಾ ವಿತರಕರು. ಸೂರ್ಯೋದಯಕ್ಕೆ ಮೊದಲು ದಿನಪತ್ರಿಕೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುತ್ತಾರೆ. ಇಂತಹ ಸೇನಾನಿಗಳಿಗೆ ಶೈಕ್ಷಣಿಕ, ಆರ್ಥಿಕ, ಆರೋಗ್ಯ, ದ್ವಿಚಕ್ರ ವಾಹನ ಖರೀದಿಗೆ ಆರ್ಥಿಕ ನೆರವು, ಬಡ್ಡಿರಹಿತ ಸಾಲ ಸೇರಿ ನಾನಾ ಸವಲತ್ತುಗಳನ್ನು ಒದಗಿಸಬೇಕೆಂಬ ಒತ್ತಾಯ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಪ್ರತಿವರ್ಷ ಪತ್ರಿಕಾ ವಿತರಕರ ದಿನಾಚರಣೆ ವೇಳೆ ಇದು ಸದ್ದು ಮಾಡುತ್ತದೆಯಾದರೂ ನಂತರ ಮರೆತೇ ಹೋಗುತ್ತದೆ. ಸರ್ಕಾರದಿಂದ ಸ್ಥಾಪನೆಯಾಗಿರುವ ಪತ್ರಿಕಾ ವಿತರಕರ ಕಲ್ಯಾಣ ನಿಧಿಯ ನೆರವು ಸೇರಿ ಅನೇಕ ಬೇಡಿಕೆಗಳಿಗೆ ವಿತರಕರ ಆಗ್ರಹವಿದೆ. ಇವೆಲ್ಲದವರ ನಡುವೆಯೂ ತಮ್ಮ ಬದುಕಿನ ಅನುಭವಗಳನ್ನು ಕೆಲವು ಹಿರಿಯ ಪತ್ರಿಕಾ ವಿತರಕರು ಇಲ್ಲಿ ಮಂಡಿಸಿದ್ದಾರೆ.
ಸರ್ಕಾರದಿಂದ ಸಹಾಯ ಬೇಕು
ಪತ್ರಿಕಾ ವಿತರಣೆಯಿಂದ ಕುಟುಂಬ ನಿರ್ವಹಣೆಗೆ ವರದಾನವಾಗಿದೆ. 1978ರಿಂದಲೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಒಬ್ಬ ಮಗ ಬಿ.ಕಾಂ., ಮಗಳು ಪಿಯುಸಿ ಓದುತ್ತಿದ್ದಾಳೆ. ಇನ್ನೊಬ್ಬ ಮಗನಿಗೆ ಪಿಯುಸಿ ಓದಿಸಿದ್ದೇನೆ. ಮೂವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿರುವ ತೃಪ್ತಿ ಇದೆ. ಪ್ರತಿ ತಿಂಗಳು ದಿನಸಿ ಖರೀದಿ ಸೇರಿ ಇತರ ಖರ್ಚುಗಳು ಈ ಸಂಪಾದನೆಯಿಂದಲೇ ನಡೆಯುತ್ತಿದೆ. ಒಬ್ಬ ಮಗ ಪಾರ್ಶ್ವವಾಯುನಿಂದ ಹಾಸಿಗೆ ಹಿಡಿದಿದ್ದಾನೆ. ಪತ್ರಿಕೆ ವಿತರಣೆಯಿಂದ ಬರುವ ಸಂಪಾದನೆಯಲ್ಲಿ ಪ್ರತಿ ತಿಂಗಳು ಔಷಧ ಖರೀದಿಸಲು ಅನುಕೂಲವಾಗುತ್ತಿದೆ. ಅನ್ನ ಕೊಟ್ಟಿರುವ ವೃತ್ತಿಯನ್ನು ಸಾಯುವವರೆಗೂ ಮುಂದುವರಿಸುತ್ತೇನೆ. ಜೀವನ ಭದ್ರತೆ, ವಿಮೆ, ಪಿಂಚಣಿ, ಸಹಾಯಧನ ಸಹಿತ ಇನ್ನಿತರ ಸೌಲಭ್ಯ ಕಲ್ಪಿಸಿದರೆ ಇನ್ನಷ್ಟು ಸಹಾಯವಾಗಲಿದೆ. ಪತ್ರಿಕೆ ವಿತರಣೆ ಮಾಡುವ ವೃತ್ತಿ ಕೀಳಲ್ಲ ಎಂಬ ಭಾವನೆಯನ್ನು ಹೋಗಲಾಡಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ವೃತ್ತಿಯನ್ನು ಆರಂಭಿಸುವ ಹೊಸಬರಿಗೆ ಸರ್ಕಾರವು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು.
| ಗಂಗಾಧರ್ ರಾವ್ ಹೊಸಹಳ್ಳಿ ಎಕ್ಸ್​ಟೆನ್ಷನ್

ಪತ್ರಿಕಾ ವೃತ್ತಿಯಿಂದ ಕುಟುಂಬ ನಿರ್ವಹಣೆ
ಓದಿದ್ದು ಬೇರೆ, ವೃತ್ತಿ ಬೇರೆ, ಪ್ರವೃತ್ತಿ ಬೇರೆಯಾಗಿತ್ತು. ಚಿಕ್ಕವಯಸ್ಸಿನಿಂದಲೂ ಪತ್ರಿಕೆ ಓದುವ ಹವ್ಯಾಸ ಇತ್ತು. ನಾನು 16ನೇ ವಯಸ್ಸಿನಲ್ಲಿ ಪತ್ರಿಕೆ ಹಾಕುವ ವೃತ್ತಿಗೆ ಸೇರಿಕೊಂಡೆ. ಅಂದಿನಿಂದಲೂ ಈವರೆಗೆ ಪತ್ರಿಕಾ ಹಾಕುವ ಕಾಯಕ ಮಾಡುತ್ತಿದ್ದೇನೆ. ಈಗ ನನಗೆ 55 ವಯಸ್ಸು. ಪತ್ರಿಕೆಯಿಂದ ಬದುಕು ಕಟ್ಟಿಕೊಳ್ಳಲು ತುಂಬ ಸಹಾಯವಾಯಿತು. ಕೋವಿಡ್ ವೇಳೆ ಎಲ್ಲ ವಹಿವಾಟುಗಳು ಸ್ಥಗಿತವಾಗಿತ್ತು. ಆದರೆ, ಪತ್ರಿಕೆ ವೃತ್ತಿಯಿಂದ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಯಿತು. ಪತ್ರಿಕಾ ವೃತ್ತಿಯಿಂದಲೇ ಇಡೀ ಕುಟುಂಬ ನಿರ್ವಹಣೆಗೆ ಸಾಕಷ್ಟು ಅನುಕೂಲವಾಯಿತು. ಪತ್ರಿಕೆ ವಿತರಣೆ ವೃತ್ತಿಯಿಂದ ಬರುವ ಸಂಪಾದನೆಯಲ್ಲಿ ಸ್ವಲ್ಪ ಹಣವನ್ನು ಸಮಾಜ ಸೇವೆಗೂ ವಿನಿಯೋಗಿಸುತ್ತಿದ್ದೇನೆ. ಒಟ್ಟಿನಲ್ಲಿ ನನ್ನ ಜೀವನ ನೆಮ್ಮದಿಯಿಂದ ನಡೆಯುತ್ತಿದೆ. 2021ರಲ್ಲಿ ತಮಿಳುನಾಡಿನ ವಿವಿಯೊಂದು ನನಗೆ ಗೌರವ ಡಾಕ್ಟರೇಟ್ ಕೊಟ್ಟಿದೆ. ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದೇನೆ. ‘ಇಲ್ಲೇ ಹುಟ್ಟಿರುವುದು, ಇಲ್ಲೇ ಬೆಳೆದಿರುವುದು, ಇಲ್ಲೇ ಬದುಕು ಕಟ್ಟಿಕೊಂಡಿರುವುದು’.
| ಬಿ.ಎಲ್. ವಿಜಯಕುಮಾರ್ ಮಲ್ಲೇಶ್ವರ

ಪರಿಸ್ಥಿತಿ ಬದಲಾಗಿದ್ದರೂ ಆದಾಯಕ್ಕೆ ಕೊರತೆಯಿಲ್ಲ
ಪತ್ರಿಕೆಯನ್ನು ಓದುಗರಿಗೆ ತಲುಪಿಸುವ ಕೆಲಸವನ್ನು ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ. 14 ವರ್ಷದವನಾಗಿದ್ದಾಗ ಪತ್ರಿಕಾ ವಿತರಣೆ ಕ್ಷೇತ್ರಕ್ಕೆ ಬಂದೆ. ನಿಧಾನವಾಗಿ ವ್ಯವಹಾರದ ಏರಿಳಿತ ಅರ್ಥವಾಯಿತು. ನಂತರದಲ್ಲಿ ಬಿಎಸ್​ಎನ್​ಎಲ್ ಸಂಸ್ಥೆಯಲ್ಲಿ ಉದ್ಯೋಗ ಲಭಿಸಿತು. ಬಳಿಕ ಉದ್ಯೋಗದ ಜತೆಗೆ ಪತ್ರಿಕಾ ವಿತರಣೆಯನ್ನೂ ಮುಂದುವರಿಸಿದೆ. ಇದರಿಂದ ಬಂದಂತಹ ಲಾಭದ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಯಿತು. ಆರಂಭದಲ್ಲಿ ನಿತ್ಯ 2 ಸಾವಿರಕ್ಕೂ ಹೆಚ್ಚು ಪತ್ರಿಕೆ ವಿತರಿಸುತ್ತಿದ್ದೆ. ಆದರೀಗ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ವಿತರಣೆ ಸಂಖ್ಯೆಯೂ ಕುಸಿದಿದೆ. ಹಿಂದೆ ಸುಲಭವಾಗಿ ಕೆಲಸಕ್ಕೆ ಜನರು ಸಿಗುತ್ತಿದ್ದರು. ಸದ್ಯ ಪರಿಸ್ಥಿತಿ ಬದಲಾಗಿದ್ದು, ನಿರ್ವಹಣೆ ಕಷ್ಟವಾಗುತ್ತಿದೆ. ಪತ್ರಿಕಾ ವಿತರಣೆ ನಮ್ಮ ಕುಟುಂಬದ ಆದಾಯ ಮೂಲವಾಗಿದೆ. ಹೀಗಾಗಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಹೀಗಾಗಿ ಇದೇ ಪ್ರೀತಿಯಿಂದ ವಿತರಣೆ ಮುಂದುವರಿಸುತ್ತಿದ್ದೇವೆ.
| ವೆಂಕಟೇಶ್ ಜೆ.ಪಿ.ನಗರ
ಇಲ್ಲೂ ಉತ್ತಮ ಆದಾಯ ಗಳಿಕೆಗಿದೆ ಅವಕಾಶ
ಎರಡು ದಶಕಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ, ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಣಾಮ ಆರಂಭದ ದಿನಗಳಿಗೆ ಹೋಲಿಸಿದರೆ, ಪ್ರಸ್ತುತ ಸವಾಲುಗಳು ಹೆಚ್ಚಿವೆ. ಮುಖ್ಯವಾಗಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ವಿತರಣೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳ ನಡುವೆಯೂ ಪತ್ರಿಕಾ ವಿತರಣೆ ಮುಂದುವರಿಸಿದ್ದೇನೆ. ಪ್ರತಿ ತಿಂಗಳ ಒಟ್ಟು ಆದಾಯದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಕೊರೊನಾ ನಂತರ ಪತ್ರಿಕಾ ವಿತರಕರ ಪರಿಸ್ಥಿತಿ ಬದಲಾಗಿದೆ. ಹೀಗಿದ್ದರೂ ಕುಟುಂಬ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗಿಲ್ಲ. ಶ್ರಮವಹಿಸಿ ಕೆಲಸ ಮಾಡಿದರೆ, ಇಲ್ಲೂ ಉತ್ತಮ ಆದಾಯ ಗಳಿಸಲು ಅವಕಾಶವಿದೆ. ಹೀಗಾಗಿ ಬೆಂಗಳೂರಿನಂತಹ ನಗರದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.
| ಜಗದೀಶ್ ಪ್ರಸಾದ್ ವಿದ್ಯಾರಣ್ಯಪುರ

ಮೊಬೈಲ್ ಗೀಳಿನಿಂದ ಜನ ಪತ್ರಿಕೆಯಿಂದ ದೂರ
ತಂದೆ ಆರಂಭಿಸಿದ್ದ ಪತ್ರಿಕಾ ವಿತರಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಕುಟುಂಬದ ಎಲ್ಲ ಸದಸ್ಯರ ಸಹಕಾರದಿಂದ ಯಶಸ್ವಿಯಾಗಲು ಸಾಧ್ಯವಾಗಿದೆ. ಈ ವ್ಯವಹಾರ ನಮ್ಮ ಕುಟುಂಬದ ಆದಾಯ ಮೂಲವಾಗಿದ್ದು, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಜತೆಗೆ ಮಕ್ಕಳಿಬ್ಬರಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗಿದೆ. ಹಿಂದೆ ಅನೇಕರು ನಾವು ಪತ್ರಿಕೆ ವಿತರಿಸುತ್ತೇವೆ ಎನ್ನುತ್ತಾ ಕೆಲಸ ಕೇಳಿ ಬರುತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಓದುಗರ ಸಂಖ್ಯೆಯೂ ಕುಸಿದಿದೆ. ಮೊಬೈಲ್ ಗೀಳಿನಿಂದಾಗಿ ಹೊಸ ತಲೆಮಾರಿನ ಜನರು ಪತ್ರಿಕೆ, ನಿಯತಕಾಲಿಕೆ ಕೊಳ್ಳುತ್ತಿಲ್ಲ. ಇದರಿಂದ ವ್ಯಾಪಾರವೂ ಕುಸಿದಿದೆ. ಪತ್ರಿಕಾ ವಿತರಣೆ ಕ್ಷೇತ್ರದಲ್ಲಿ ಸುಮಾರು 60 ವರ್ಷಗಳಿಂದ ಸಾಕಷ್ಟು ಸೋಲು-ಗೆಲುವನ್ನು ಕಂಡಿದ್ದೇನೆ.
| ದಿವಾಕರ್ ವೀರಣ್ಣ ಜಯನಗರ
ಮಳೆ, ಗಾಳಿ ಇದ್ದರೂ ಕಾಯಕ ತಪ್ಪಿಸಿಲ್ಲ
ಪತ್ರಿಕಾ ವಿತರಣೆ ವೃತ್ತಿಯಿಂದ ಜೀವನ ಕಟ್ಟಿಕೊಂಡಿದ್ದೇನೆ. ಬ್ಯಾಂಕ್​ನಲ್ಲಿ ಮಾಡಿರುವ ಸಾಲವನ್ನೂ ತಿರಿಸಿದ್ದೇನೆ. ಶಿಕ್ಷಣ, ಕುಟುಂಬ ನಿರ್ವಹಣೆ, ಬಾಡಿಗೆ ಸೇರಿ ಎಲ್ಲ ವೆಚ್ಚಗಳಿಗೆ ಪತ್ರಿಕೆ ವಿತರಣೆಯಿಂದ ಬರುವ ಸಂಪಾದನೆಯಿಂದಲೇ ನಡೆಯುತ್ತಿದೆ. ಮೊದಲು ಬೀಟ್ ಬಾಯ್ ಆಗಿ ಸೇರಿಕೊಂಡೆ. 30 ವರ್ಷದಿಂದ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ವಿವಿಧ ಪತ್ರಿಕೆಗಳ ಮೇಲೆ 7-8 ಲಕ್ಷ ರೂ. ಠೇವಣಿ ಇಟ್ಟಿದ್ದೇನೆ. ಕೋವಿಡ್ ಬಳಿಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿರಿಯರು ಮಾತ್ರ ಪತ್ರಿಕೆ ಓದುತ್ತಿದ್ದಾರೆ. ಯುವ ಜನಾಂಗ ಓದುತ್ತಿಲ್ಲ. ಪತ್ರಿಕೆಯ ಯಶಸ್ಸು ನಿಂತಿರುವುದು ಜನರಿಗೆ ತಲುಪಿದಾಗ ಮಾತ್ರ. ಹಬ್ಬ, ಉತ್ಸವ, ಮಳೆ, ಗಾಳಿ ಏನೇ ಇದ್ದರೂ ನಮ್ಮ ಕಾಯಕ ತಪ್ಪಿಸುವಂತಿಲ್ಲ. ಹಲವು ಸವಾಲುಗಳ ನಡುವೆಯೂ ಪತ್ರಿಕೆ ಹಾಕಬೇಕಿದೆ. ಬಸ್ ನಿಲ್ದಾಣ, ಫುಟ್​ಪಾತ್ ಬಳಿಯೇ ಪತ್ರಿಕೆಗಳನ್ನು ಜೋಡಿಸಬೇಕು. ಮಳೆಗಾಲದಲ್ಲಿ ಪತ್ರಿಕೆಗಳು ಒದ್ದೆಯಾಗುತ್ತದೆ. ಆದರೂ, ಪ್ರತಿ ನಿತ್ಯ ಬೆಳಗ್ಗೆ ಕಷ್ಟಪಟ್ಟು ಗ್ರಾಹಕರ ಮನೆಗೆ ಪತ್ರಿಕಾ ಹಾಕುವಲ್ಲಿ ನಿರತರಾಗಿದ್ದೇವೆ.
| ವಿಜಯ್ ಸತೀಶ್ ಕುಮಾರ್ ಚಾಮರಾಜಪೇಟೆ

ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಂದೆಮಾದಹಳ್ಳಿ ಗ್ರಾಮದಲ್ಲಿ ನಾನು ಹುಟ್ಟಿದ್ದು. 1973ರ ಜ.16ರಂದು ಮಲ್ಲೇಶ್ವರ ಬಡಾವಣೆಯಲ್ಲಿ ಪತ್ರಿಕಾ ವಿತರಣೆ ವೃತ್ತಿಗೆ ಸೇರಿಕೊಂಡೆ. ಹಂತ ಹಂತವಾಗಿ ಪತ್ರಿಕೆ ಹಾಕುವುದುಕ್ಕೆ ಶುರು ಮಾಡಿದ್ದೆ. ಪತ್ರಿಕಾ ವಿತರಣೆ ವೃತ್ತಿಯು ನನಗೆ ಭಾಗ್ಯಲಕ್ಷ್ಮೀ ಇದ್ದಂತೆ. ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇನೆ. ಪತ್ರಿಕಾ ವಿತರಣೆ ಸಂಪಾದನೆಯಿಂದ ಸಂಜಯನಗರದಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿಸಿದ್ದೇನೆ. ಇಬ್ಬರು ಹೆಣ್ಣು ಮಕ್ಕಳಿಗೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಕೊಡಿಸಿದ್ದೇನೆ. ಕುಟುಂಬ ನಿರ್ವಹಣೆಗೂ ಅನುಕೂಲವಾಗಿದೆ. ಇಬ್ಬರೂ ಹೆಣ್ಣುಮಕ್ಕಳನ್ನು ಪತ್ರಿಕೆ ಹಾಕುತ್ತಿದ್ದ ಗ್ರಾಹಕರ ಮನೆಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಟ್ಟಿದ್ದೇನೆ. ಗೂಗಲ್, ಆಪಲ್ ಕಂಪನಿಯಲ್ಲಿ ಹೆಣ್ಣುಮಕ್ಕಳು ಉದ್ಯೋಗದಲ್ಲಿದ್ದಾರೆ. ಈಗ ನನಗೆ 68 ವರ್ಷ. 5 ಬಾರಿ ಅಮೆರಿಕಕ್ಕೆ ಪ್ರವಾಸ ಹೋಗಿದ್ದೇನೆ. ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದೇನೆ.
| ಬಿ.ರಾಮೇಗೌಡ ಮಲ್ಲೇಶ್ವರ

ಜೀವ ಇರುವವರೆಗೂ ಪತ್ರಿಕಾ ವಿತರಕ!
36 ವರ್ಷಗಳ ಹಿಂದೆ 60 ರೂ. ವೇತನದೊಂದಿಗೆ ಮನೆಮನೆಗೆ ಪತ್ರಿಕೆ ಹಾಕುವ ಕೆಲಸಕ್ಕೆ ಸೇರಿಕೊಂಡೆ. ಆಗ ಮಾವ ಮತ್ತು ಚಿಕ್ಕಪ್ಪ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಬಳಿಕ ವಿತರಣೆ ವ್ಯವಹಾರ ನನ್ನದಾಯಿತು. ಅಂದಿನಿಂದ ಇಂದಿನವರೆಗೆ ವಿವಿಧ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ವ್ಯವಹಾರ ನಿರ್ವಹಿಸಿದ್ದೇನೆ. ಹೀಗಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಕರೊನಾ ಸಮಯದಲ್ಲಿ ಸಮಸ್ಯೆಯಾಗಿತ್ತು. ಆದರೂ ವ್ಯವಹಾರ ಕೈಬಿಟ್ಟಿಲ್ಲ. ದಾಸರಹಳ್ಳಿಯಲ್ಲಿ ಸೈಟ್ ಖರೀದಿಸಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಜತೆಗೆ ಇಬ್ಬರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ತೃಪ್ತಿಯಿದೆ. ಒಬ್ಬಾಕೆ ಎಂ.ಟೆಕ್ ಪೂರ್ಣಗೊಳಿಸಿದ್ದಾಳೆ. ಮತ್ತೊಬ್ಬಳು ವೈದ್ಯೆಯಾಗಿದ್ದಾಳೆ. ಇದೆಲ್ಲವೂ ಸಾಧ್ಯವಾಗಿರುವುದು ಪತ್ರಿಕಾ ವಿತರಣೆಯಿಂದ. ಈ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲ. ಹೀಗಾಗಿ ಜೀವನಪೂರ್ತಿ ಪತ್ರಿಕಾ ವಿತರಣೆಯನ್ನು ಮುಂದುವರಿಸುತ್ತೇನೆ.
| ಕೃಷ್ಣಮೂರ್ತಿ ದಾಸರಹಳ್ಳಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 5 =
Remember me
