|ಅವಿನಾಶ್​ ಜೈನಹಳ್ಳಿಮೈಸೂರು‘ಪ್ರವಾಸೋದ್ಯಮ ನಗರಿ’ ಮೈಸೂರಿನ ಪ್ರತಿಷ್ಠಿತ ಮತ್ತು ಐಷಾರಾಮಿ ಹೋಟೆಲ್​ ‘ಲಲಿತ ಮಹಲ್​ ಪ್ಯಾಲೇಸ್​’ ಖಾಸಗೀಕರಣಕ್ಕೆ ಸರ್ಕಾರ ಮತ್ತೆ ಕಾರ್ಯಪ್ರವೃತ್ತವಾಗಿದೆ.
ಮೈಸೂರು ಮಹಾರಾಜರು ಸ್ಥಾಪಿಸಿರುವ ಹಾಗೂ ಪ್ರವಾಸಿಗರಿಗೆ ಪಾರಂಪರಿಕ ಅನುಭವ ನೀಡುವ ಲಲಿತ ಮಹಲ್​ ಪ್ಯಾಲೇಸ್​ ಈಗಷ್ಟೇ ಶತಮಾನೋತ್ಸವ ಸಂಭ್ರಮದಲ್ಲಿ ಮಿಂದೆದ್ದಿದೆ. 1920ರಲ್ಲಿ ಭಾರತದ ವೈಸ್​ರಾಯ್​ ಅವರಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರು ‘ಲಲಿತ ಮಹಲ್​ ಪ್ಯಾಲೇಸ್​’ ನಿರ್ಮಾಣ ಮಾಡಿದ್ದರು. ಸದ್ಯ ಸರ್ಕಾರದ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ (ಜಂಗಲ್​ ಲಾಡ್ಜಸ್​ ಆ್ಯಂಡ್​ ರೆಸಾರ್ಟ್ಸ್​) ಅಡಿ ಲಾಭದಾಯಕ ಪಂಚತಾರಾ ಹೋಟೆಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಹತ್ತಾರು ಕೋಟಿ ರೂ. ಆದಾಯ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಆದರೆ, ಈ ಹೋಟೆಲ್​ ಖಾಸಗೀಕರಣ ಯತ್ನಕ್ಕೆ ಸರ್ಕಾರ ಮತ್ತೆ ಮುಂದಾಗಿದೆ. ಅದರಂತೆ, ಹೋಟೆಲ್​ ನಿರ್ವಹಣೆ ಜವಾಬ್ದಾರಿಯನ್ನು ತಾಜ್​ ಗ್ರೂಪ್​ಗೆ ನೀಡುವ ಸಂಬಂಧ ಜೂ. 14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ಸಭೆ ಆಯೋಜಿಸಲಾಗಿದೆ. ಅಂದಿನ ಸಭೆಯಲ್ಲಿ ಸಮ್ಮತಿ ದೊರೆತರೆ ಲಲಿತ ಮಹಲ್​ ಪ್ಯಾಲೇಸ್​ ಆಡಳಿತ ಖಾಸಗಿಯವರ ಪಾಲಾಗಲಿದೆ.
ರಾಜಮಹಾರಾಜರ ಕಾಲದ ವೈಭವ, ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಲಲಿತ ಮಹಲ್​ ಪ್ಯಾಲೇಸ್​ನಲ್ಲಿ ಕಾಲ ಕಳೆಯುವುದೇ ರೋಮಾಂಚನಕಾರಿ ಅನುಭವ. ಈ ಹೋಟೆಲ್​ಗೆ ವಿದೇಶಿ ಪ್ರವಾಸಿಗರೇ ಹೆಚ್ಚಾಗಿ ಬರುತ್ತಾರೆ. ಬೇಸಿಗೆ, ದಸರಾ ಮತ್ತು ವಾರಾಂತ್ಯದಲ್ಲಿ ಹೋಟೆಲ್​ ತುಂಬಿರುತ್ತದೆ. ಉಳಿದ ದಿನಗಳಲ್ಲೂ ಬಹುತೇಕ ಭರ್ತಿಯಾಗಿರುತ್ತದೆ. ಗತಕಾಲದ ವೈಭವ ಹೊಂದಿರುವ ‘ಲಲಿತ ಮಹಲ್​ ಪ್ಯಾಲೇಸ್​’ ನೋಡಲು ಮತ್ತು ಅಲ್ಲಿ ಕಾಫಿ ಕುಡಿಯಲು ಸ್ಥಳೀಯರು ಕೂಡ ಹೋಗುವುದು ವಿಶೇಷ.
ಹಿಂದೆಯೂ ಪ್ರಯತ್ನ ನಡೆದಿತ್ತು!:ಅರಮನೆಯಾಗಿದ್ದ ಲಲಿತ ಮಹಲ್​ 1973ರಲ್ಲಿ ರಾಜ್ಯ ಸರ್ಕಾರದ ಸುಪರ್ದಿಗೆ ಬಂತು. ಆ ಸಂದರ್ಭ ಸರ್ಕಾರ ಲಲಿತ ಮಹಲ್​ನಲ್ಲಿ ಹೋಟೆಲ್​ ನಡೆಸುವ ಅಧಿಕಾರವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿತು. ಆದರೆ, ಪ್ರವಾಸೋದ್ಯಮ ಇಲಾಖೆ ಲಲಿತ ಮಹಲ್​ ಅನ್ನು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಐಟಿಡಿಸಿ)ದ ಸುಪರ್ದಿಗೆ ವಹಿಸಿತು. ಆಗ ಹೋಟೆಲ್​ನಲ್ಲಿ 24 ಕೊಠಡಿಗಳು ಮಾತ್ರ ಇದ್ದವು. ಐಟಿಡಿಸಿಯ ಸುಪರ್ದಿಗೆ ಬಂದ ನಂತರ ಕೊಠಡಿಗಳ ಸಂಖ್ಯೆಯನ್ನು 30ಕ್ಕೆ ಏರಿಕೆ ಮಾಡಲಾಯಿತು.
ಬಳಿಕ ಅನೇಕ ವರ್ಷಗಳ ಕಾಲ ಐಟಿಡಿಸಿಯೇ ಲಲಿತ ಮಹಲ್​ ನಿರ್ವಹಣೆ ಮಾಡಿತ್ತು. ಆಗಲೂ ಲಲಿತ ಮಹಲ್​ನಿಂದ ಪ್ರತಿ ವರ್ಷ ಹತ್ತಾರು ಕೋಟಿ ರೂ. ಲಾಭವಾಗುತ್ತಿತ್ತು. ಆದರೂ, ಐಟಿಡಿಸಿ ದೇಶಾದ್ಯಂತ ನಡೆಸುತ್ತಿದ್ದ ಹೋಟೆಲ್​ಗಳಲ್ಲಿ 16 ಹೋಟೆಲ್​ಗಳು ನಷ್ಟದಲ್ಲಿವೆ ಎಂದು ಲಲಿತ ಮಹಲ್​ ಹೋಟೆಲ್​ ಸೇರಿದಂತೆ ಒಟ್ಟು 8 ಹೋಟೆಲ್​ಗಳ ಖಾಸಗೀಕರಣಕ್ಕೆ ಮುಂದಾಗಿತ್ತು. ಆದರೆ ವಿರೋಧದ ನಡುವೆ ಖಾಸಗೀಕರಣದಿಂದ ದೂರ ಸರಿಯಿತು.
ಖಾಸಗೀಕರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರದ ನಡೆಯನ್ನು ಅಂದಿನ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್​ ಖರ್ಗೆ ವಿರೋಧಿಸಿದ್ದರು. ರಾಜ್ಯ ಸರ್ಕಾರವೇ ಹೋಟೆಲ್​ ನೋಡಿಕೊಳ್ಳಲು ಸಿದ್ಧವಿದ್ದು, ನಮ್ಮ ಆಸ್ತಿಯನ್ನು ಮಾರುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ. ನಮ್ಮ ಪರಂಪರೆಯ, ಹೆಮ್ಮೆಯ ಲಲಿತ ಮಹಲ್​ ನವೀಕರಿಸಿ ನಾವೇ ನಿರ್ವಹಣೆ ಮಾಡುತ್ತೇವೆಂದು ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಜತೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಹೋರಾಟಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಕೇಂದ್ರ ಸರ್ಕಾರ ಖಾಸಗೀಕರಣ ಕೈಬಿಟ್ಟು 2017-18ರಲ್ಲಿ ಲಲಿತ ಮಹಲ್​ ನಿರ್ವಹಣೆಯನ್ನು ಮತ್ತೆ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ನೀಡಿತು. ಆದರೀಗ ರಾಜ್ಯ ಸರ್ಕಾರವೇ ಲಲಿತ​ ಮಹಲ್​ ಖಾಸಗೀಕರಣ ಮಾಡಲು ಮುಂದಾಗಿದೆ.
ಸಿನಿಮಾ ರಂಗಕ್ಕೆ ನಂಟು:ಲಲಿತ ಮಹಲ್​ ಪ್ಯಾಲೇಸ್​ಗೂ ಭಾರತೀಯ ಚಿತ್ರರಂಗಕ್ಕೂ ಎಲ್ಲಿಲ್ಲದ ನಂಟು. ಬಹುತೇಕ ಭಾರತೀಯ ಭಾಷೆಗಳ ಸಿನಿಮಾ ಚಿತ್ರೀಕರಣ ಇಲ್ಲಿ ನಡೆದಿದೆ. ಲಲಿತ ಮಹಲ್​ನಲ್ಲಿ ಚಿತ್ರೀಕರಣ ನಡೆಸುವುದೆಂದರೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಖುಷಿಯ ವಿಚಾರ ಮತ್ತು ಪ್ರತಿಷ್ಠೆಯ ಸಂಗತಿ. ಈವರೆಗೆ 650ಕ್ಕೂ ಹೆಚ್ಚು ಸಿನಿಮಾಗಳು ಚಿತ್ರೀಕರಣಗೊಂಡಿರುವುದು ಇಲ್ಲಿನ ವಿಶೇಷ. ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್​ ಅವರ ಬಹುತೇಕ ಸಿನಿಮಾಗಳ ಚಿತ್ರೀಕರಣ ಇಲ್ಲಿಯೇ ನಡೆದಿದೆ.
ಕಲಾಂ ವಾಸ್ತವ್ಯ:ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್​ ಕಲಾಂ ಅವರು “ಸಾಂಸ್ಕೃತಿಕ ನಗರಿ’ ಮೈಸೂರಿನೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಂತೆಯೇ, 2010ರಲ್ಲಿ ಜೆಎಸ್​ಎಸ್​ ಸಂಸ್ಥೆಯ ಸಮಾರಂಭಕ್ಕೆ ಬಂದಿದ್ದಾಗ ಲಲಿತ ಮಹಲ್​ ಪ್ಯಾಲೇಸ್​ ಹೋಟೆಲ್​ನ ರೂಂ. ನಂ. 222ರಲ್ಲಿ ವಾಸ್ತವ್ಯ ಹೂಡಿದ್ದರು. ಕಲಾಂ ಅವರು ಭಗವದ್ಗೀತೆ, ಕುರಾನ್​, ಬೈಬಲ್​ ಗ್ರಂಥಗಳನ್ನು ನಿತ್ಯವೂ ಓದುವ ಹವ್ಯಾಸ ಹೊಂದಿದ್ದರು. ಆದರೆ ಅವರ ವಾಸ್ತವ್ಯದ ಸಂದರ್ಭ ಲಲಿತಮಹಲ್​ ಹೋಟೆಲ್​ನಲ್ಲಿ ಆ ಗ್ರಂಥಗಳು ಇರಲಿಲ್ಲ. ಆದಕಾರಣ, ತಮ್ಮ ಸಹಾಯಕರ ಮೂಲಕ ಅವರೇ ಪವಿತ್ರ ಗ್ರಂಥಗಳನ್ನು ತರಿಸಿಕೊಂಡಿದ್ದರು. ಓದಿದ ಬಳಿಕ ಅವುಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದರು.
ಲಲಿತ ಮಹಲ್​ ಪ್ಯಾಲೇಸ್​ ಹೋಟೆಲ್​ನ್ನು ತಾಜ್​ ಗ್ರೂಪ್​ಗೆ ನೀಡುವ ಸಂಬಂಧ ಜೂ.14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯ ಸಭೆ ಆಯೋಜಿಸಿದೆ. ಇದು ಹೋಟೆಲ್​ ಖಾಸಗೀಕರಣದ ಉದ್ದೇಶ ಅಲ್ಲ, ನಿರ್ವಹಣೆಗೆ ಮಾತ್ರ ನೀಡುವ ಸಂಬಂಧ ಸಭೆ ನಡೆಯಲಿದೆ.| ವೆಂಕಟೇಶ್​ಪ್ರವಾಸೋದ್ಯಮ ಇಲಾಖೆ ನಿರ್ದೇಶಕ
ಬದುಕಿರುವಾಗಲೇ ಗುಬ್ಬಿ ಶಾಸಕ ಶ್ರೀನಿವಾಸ್​ರ ತಿಥಿ ಕಾರ್ಡ್​ ತಯಾರಿಸಿ ವಿಕೃತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + thirteen =
Remember me
