ಕಲಿಸುವುದು ಹೊಸ್ತೋಟರಿಗೆ ಪ್ರಿಯವಾದ ಕೆಲಸ. ಇದರಿಂದಾಗಿ ಸಾವಿರಾರು ಮಂದಿ ಯಕ್ಷರಂಗವೇರುವಂತಾಗಿ ಕಲೆಯ ಮುಂದುವರಿಕೆಗೆ ಒಂದು ದೊಡ್ಡ ಸಮೂಹವೇ ಸೃಷ್ಟಿ ಆಗಿದ್ದು ಚರಿತ್ರಾರ್ಹ ಸಂಗತಿ. ಯಾವುದೇ ಕಲೆಯ ಭವಿಷ್ಯಕ್ಕೆ ಹೊಸಬರನ್ನು ತಯಾರು ಮಾಡುವುದು ಕೂಡ ಮುಖ್ಯ. ಅವರು ಮಕ್ಕಳು, ಮಹಿಳೆಯರಿಗೂ ಯಕ್ಷಗಾನ ಕಲಿಸಿದರು.
ಮಾಗೋಡ ಫಾಲ್ಸ್ ಹೆಸರು ಬಹಳ ಜನರಿಗೆ ಗೊತ್ತಿದೆ. ಅದರಲ್ಲೂ ಪ್ರವಾಸೋದ್ಯಮ ಪರಿಕಲ್ಪನೆ ಹೆಚ್ಚು ಪ್ರಚಲಿತವಾದ ಮೇಲೆ ಇಂಥ ತಾಣಗಳಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಿದೆ. ಬೇಡ್ತಿ ನದಿಯು ಸೃಷ್ಟಿಸಿರುವ ಈ ಜಲಪಾತ ಸುಮಾರು 650 ಅಡಿ ಎತ್ತರವಿದೆ. ಎರಡು ಹಂತಗಳಲ್ಲಿ ನೀರು ಧುಮುಕುತ್ತ ನೋಡುಗರನ್ನು ಪರವಶವಾಗಿಸುತ್ತದೆ. ಜೋರು ಮಳೆ ಬೀಳುವಾಗ ಜಲಪಾತಕ್ಕೆ ಉತ್ಸಾಹ ಉಕ್ಕೇರಿ ಅದರ ಅವತಾರ ನೋಡಿ ನೋಡುಗರ ಎದೆ ಝುಲ್ ಎನ್ನುತ್ತದೆ.
(ಸದ್ಯ ಮಳೆಯ ಅಬ್ಬರ ಇರುವುದರಿಂದಾಗಿ, ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಕೆಲವು ಜಲಪಾತಗಳಿಗೆ ತಾತ್ಕಾಲಿಕವಾಗಿ ಜನರ ಪ್ರವೇಶ ನಿಷೇಧಿಸಿದೆ). ಮಾಗೋಡ ಸನಿಹದಲ್ಲಿ ಶ್ರೀವೀರಮಾರುತಿ ದೇಗುಲ ಇದೆ. ಅಲ್ಲಿ ಇದೇ ಆಷಾಢ ಏಕಾದಶಿಯಂದು ಒಂದು ವಿಶಿಷ್ಟ ಕಾರ್ಯಕ್ರಮ. ಅಂದು ಸಾಯಂಕಾಲ 6 ಗಂಟೆಗೆ ಸರಿಯಾಗಿ ಆರಂಭವಾದ ತಾಳಮದ್ದಲೆ ಸರಣಿ ಮರುದಿನ ಬೆಳಗಿನ ಜಾವ 6ಕ್ಕೆ ಸರಿಯಾಗಿ ಸಂಪನ್ನಗೊಂಡಿತು. ಸಂಘಟಕರು ಮೊದಲೇ ಹೇಳಿದ್ದರು- ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಶುರುವಾಗಿ ನಿಗದಿತ ಅವಧಿಯೊಳಗೆ ಮುಗಿಯುತ್ತದೆ ಎಂದು. ಇಲ್ಲಿನ ಶ್ರೀವೀರಮಾರುತಿ ತಾಳಮದ್ದಲೆ ಕೂಟವು ಕಳೆದ ವರ್ಷ ಆಷಾಢ ಏಕಾದಶಿಯಂದು ‘ಪ್ರಸಂಗ ಪಂಚಕ’ ಎಂಬ ವಿಶಿಷ್ಟ ಪರಿಕಲ್ಪನೆಗೆ ಚಾಲನೆ ನೀಡಿತ್ತು. ಅಂದರೆ 12 ತಾಸುಗಳ ಅವಧಿಯಲ್ಲಿ ಐದು ತಾಳಮದ್ದಲೆ ಪ್ರಸಂಗಗಳ ಪ್ರದರ್ಶನ. ಆಗ ಸುತ್ತಮುತ್ತಲಿನ ಸುಮಾರು 40 ಕಲಾವಿದರು ಭಾಗವಹಿಸಿದ್ದರು. ಈ ಸಲ ಸುಮಾರು 50 ಹಿರಿಕಿರಿಯ ಕಲಾವಿದರು ಭಾಗವಹಿಸಿದ್ದರು. ಬಂದ ಜನರಿಗೆಲ್ಲ ಸಂಘಟನೆಯೇ ಲಘು ಉಪಾಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಿತ್ತು. ಅತ್ತ ಮಾಗೋಡ ಜಲಪಾತದಲ್ಲಿ ನೀರಿನ ಅಬ್ಬರ ಕೇಳಿಸುತ್ತಿದ್ದರೆ ಇತ್ತ ತಾಳಮದ್ದಲೆಗಳಲ್ಲಿ ಮಾತಿನ ಪ್ರವಾಹ ಹರಿಯುತ್ತಿತ್ತು. ಯಕ್ಷಗಾನ ಪ್ರಚಲಿತದಲ್ಲಿ ಇರುವ ಪ್ರದೇಶಗಳಲ್ಲಿ ಯಕ್ಷಪ್ರೀತಿ ಹೀಗೆ ನಾನಾ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಲೆಯ ನಿರಂತರತೆ ಕಾಪಿಟ್ಟುಕೊಳ್ಳುವಲ್ಲಿ ಮತ್ತು ಮುಂದಿನ ತಲೆಮಾರಿಗೆ ಒಯ್ಯುವಲ್ಲಿ ಇಂಥ ಕಾರ್ಯಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತವೆನ್ನುವುದನ್ನು ಅಲ್ಲಗಳೆಯಲಾಗದು. ಹಾಗೇ, ಮನೆಗಳಲ್ಲಿ ಸಹ ಯಕ್ಷಗಾನ ಏರ್ಪಡಿಸಿ ಕಲಾಭಿಮಾನಿಗಳಿಗೆ ಊಟೋಪಚಾರ ಮಾಡುವ ರೂಢಿ ಇದೆ. ಯಕ್ಷಗಾನದ ಸತ್ವ-ಶಕ್ತಿಯೇ ಹಾಗಿರಬೇಕು. ಹರಿವ ತೊರೆಯ ಹಾಗೆ ಕಾಲಾನುಕಾಲಕ್ಕೆ ತನ್ನನ್ನು ತಾನು ನವೀಕರಣಕ್ಕೆ ಒಳಗಾಗಿಸಿಕೊಳ್ಳುತ್ತ ಪ್ರಸ್ತುತತೆ ಕಾಯ್ದುಕೊಳ್ಳುವ ಬಗೆ ಇದು.

ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಇಂಥ ಅಗ್ರಸಾಲಿನಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಸಹ ಮುಖ್ಯರಾಗಿ ನಿಲ್ಲುತ್ತಾರೆ. ಒಂದು ಧ್ಯೇಯ-ಉದ್ದೇಶಕ್ಕಾಗಿ ಜೀವನವನ್ನು ಮುಡಿಪಾಗಿಡುವುದು ಎಂದರೆ ಏನು ಎಂಬುದಕ್ಕೆ ಅವರ ಬದುಕು ಒಂದು ಉಜ್ವಲ ನಿದರ್ಶನ. ಶಿರಸಿ ಸನಿಹದ ಹನುಮಂತಿಯ ಹೊಸ್ತೋಟದ ಮಂಜುನಾಥ ವೆಂಕಟರಮಣ ಭಾಗವತರು ಕೃಷಿಕ ಕುಟುಂಬದವರು. ಯಕ್ಷಗಾನದ ಕಂಪು ಅಲ್ಲಿಯ ಗಾಳಿಯಲ್ಲೇ ಇದ್ದುದರಿಂದ ಸಹಜವಾಗಿ ಅತ್ತ ಸೆಳೆತ. ಅವರು ಅಕ್ಷರಶಃ ಯಕ್ಷಗಾನವನ್ನು ಜೀವಿಸಿದರು. ಯಕ್ಷಗಾನದಲ್ಲಿ ಅವರು ನಿರ್ವಿುಸಿದ ಹೊಸ ತೋಟ ಸದಾ ನಳನಳಿಸುವಂತಹದು. ಆ ತೋಟದಲ್ಲಿ ಅರಳಿದ ಹೂವುಗಳಿಗೆ ಲೆಕ್ಕವಿಲ್ಲ.
ತಮ್ಮ ಕಾರ್ಯಕ್ಷೇತ್ರದಲ್ಲಿ ಕೆಲವರು ಮಾಡುವ ಸಾಧನೆ ಕಂಡಾಗ ಮನುಷ್ಯಮಾತ್ರರಿಗೆ ಇದು ಸಾಧ್ಯವೇ ಎಂದು ಅನಿಸುವುದುಂಟು. ಹೊಸ್ತೋಟ ಭಾಗವತರಿಗೂ ಈ ಮಾತು ಅನ್ವಯ. ಪ್ರಸಂಗ ರಚನೆ, ಅರ್ಥಧಾರಿ-ಪಾತ್ರಧಾರಿ, ಯಕ್ಷ ಶಿಕ್ಷಣ, ಸಂಘಟನೆ, ಉಪನ್ಯಾಸ, ಯಕ್ಷಗಾನ ಹಸ್ತಪ್ರತಿಗಳ ಸಂಶೋಧನೆ-ಸಂಪಾದನೆ- ಪ್ರಕಟಣೆ… ಅಬ್ಬಾ! ಇದು ಮುಗಿಯದ ಯಾದಿ. ಈ ಒಂದೊಂದು ವಿಭಾಗದಲ್ಲೂ ಅನನ್ಯ-ಅನೂಹ್ಯ ಕಾರ್ಯ. ಸರಿಸುಮಾರು 300 ಯಕ್ಷಗಾನ ಪ್ರಸಂಗಗಳನ್ನು ಅವರು ರಚಿಸಿದ್ದಾರೆ ಎಂಬುದು ಇತಿಹಾಸದ ದಾಖಲೆ ಪುಟ ಸೇರುವಂತಹದು. ಯಕ್ಷಗಾನ ಪ್ರಸಂಗ ರಚನೆ ಎಷ್ಟು ಕಷ್ಟ ಎಂಬುದನ್ನು ಬಲ್ಲವರೇ ಬಲ್ಲರು. ಅಂಥದರಲ್ಲಿ ಇವರು ಸಲೀಸಾಗಿ ಪ್ರಸಂಗ ರಚನೆ ಮಾಡುತ್ತಿದ್ದುದು ಒಂದು ಅಚ್ಚರಿ. ಕುಂತಲ್ಲಿ ನಿಂತಲ್ಲಿ ಧ್ಯಾನಸ್ಥ ಸ್ಥಿತಿ ಇದ್ದರೆ ಮಾತ್ರ ಇಂಥ ಕಾರ್ಯ ಸಾಧ್ಯ. ಅವರು ಮಾತಾಡಿದರೆ ಯಕ್ಷಗಾನ ಪದ್ಯ ಹೊರಹೊಮ್ಮುತ್ತಿತ್ತು. ಆಶುಕವಿತ್ವ ಅವರಿಗೆ ಒಲಿದಿತ್ತು. ರಾಮಾಯಣ ಆಧರಿಸಿ 19 ಪ್ರಸಂಗ, ಭಾಗವತ ಆಧರಿಸಿ 20 ಪ್ರಸಂಗ, ಮಹಾಭಾರತವನ್ನು ವಸ್ತುವಾಗಿಟ್ಟುಕೊಂಡು 48ಕ್ಕೂ ಅಧಿಕ ಯಕ್ಷ ಪ್ರಸಂಗಗಳು… ಅವರ ಪ್ರತಿಭೆಯ ವಿಸ್ತಾರಕ್ಕೆ ಸಾಕ್ಷಿ. ಇದಲ್ಲದೆ, ಗೋವಿನ ಕುರಿತು ಸುಮಾರು 30 ಪ್ರಸಂಗಗಳನ್ನು ನೀಡಿದ್ದಾರೆ. ರಾಮಕೃಷ್ಣ ಪರಮಹಂಸರ ಮಹಿಮೆಯನ್ನು ಯಕ್ಷಗಾನಕ್ಕೆ ತಂದಿದ್ದಾರೆ. ಇಲ್ಲೊಂದು ವಿಶೇಷತೆ ಇದೆ. ಭಾಗವತರು ತಮ್ಮ 26ನೇ ವಯಸ್ಸಿನಲ್ಲಿ ಕಾರವಾರದ ರಾಮಕೃಷ್ಣ ಆಶ್ರಮದ ಸ್ವಾಮಿ ಪ್ರಭಾನಂದ ಅವರಿಂದ ದೀಕ್ಷೆ ಪಡೆದು ಅಭಯ ಚೈತನ್ಯ ಎಂಬ ಹೆಸರು ಪಡೆದು ಒಂದು ವರ್ಷ ಆಶ್ರಮವಾಸಿಯಾಗಿದ್ದರು. ಜೀವಿತೋದ್ದೇಶ ಬೇರೆ ಇದೆ ಎನಿಸಿತೋ ಏನೋ ಅಲ್ಲಿಂದ ಬಂದು ಮುಂದೆ ಯಕ್ಷಗಾನವನ್ನೇ ಜೀವನವಾಗಿಸಿಕೊಂಡರು. ದಿವ್ಯತ್ರಯರ (ರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರು) ಬಗ್ಗೆ ಭಾಗವತರಿಗೆ ಅಪಾರ ಗೌರವ, ಶ್ರದ್ಧೆ ಇತ್ತು. ರಾಮಕೃಷ್ಣ ಪರಮಹಂಸರ ಜೀವನದ ಕುರಿತು ಅಕ್ಷಯ ಕುಮಾರ ಸೇನ್ ಅವರು ಬಂಗಾಳಿಯಲ್ಲಿ ಪದ್ಯ ರೂಪದಲ್ಲಿ ರಚಿಸಿದ ‘ಶ್ರೀರಾಮಕೃಷ್ಣ ಪೂಂಥಿ’ಯನ್ನು ಕನ್ನಡದಲ್ಲಿ ಸುಮಾರು 24,000ದಷ್ಟು ದ್ವಿಪದಿಯಲ್ಲಿ ರಚಿಸಿದ್ದು ಭಾಗವತರ ಸೃಷ್ಟಿಶೀಲತೆಯ ದ್ಯೋತಕ. ಇಷ್ಟಿದ್ದರೂ ‘ಈ ಕಾರ್ಯದಲ್ಲಿ ನಾನು ಸೂತ್ರದ ಬೊಂಬೆ ಮಾತ್ರ. ಆಡಿಸಿದವರು ಗುರುದೇವ ಶ್ರೀರಾಮಕೃಷ್ಣರು’ ಎಂಬ ವಿನಯ ಅವರದು. ಶರಣರ ಕುರಿತು, ನಿಸರ್ಗದ ಕುರಿತು ಸಹ ಯಕ್ಷಗಾನ ಪ್ರಸಂಗ ರಚನೆ ಮಾಡಿದ್ದಾರೆ. ಇನ್ನು ಅವರ ಅಪ್ರಕಟಿತ ರಚನೆಗಳು ಅದೆಷ್ಟೋ ಇವೆ!
ಹೊಸ್ತೋಟ ಭಾಗವತರದು ಅಕ್ಷರಶಃ ಪರಿವ್ರಾಜಕ ಬದುಕು. ಒಂದೆಡೆ ನಿಲ್ಲದ ಜಂಗಮ ಮನಸ್ಥಿತಿ. ಅವರು ಮನಸ್ಸು ಮಾಡಿದ್ದರೆ ಒಂದೆಡೆ ನೆಲೆ ನಿಂತು ಸ್ಥಾವರ ಆಗಬಹುದಿತ್ತು. ಆದರೆ ಅದು ಅವರ ಜಾಯಮಾನ ಅಲ್ಲ. ಸದಾ ಎಲೆ ಅಡಿಕೆ ಮೆಲ್ಲುತ್ತಿದ್ದ ಅವರು (ಬಾಂದ್ರಿ ತಂಬಾಕು ಇರಲೇಬೇಕು) ನಿತ್ಯಸಂಚಾರಿ. ಅಂಗಿ, ಲುಂಗಿಯ ಸರಳ ದಿರಿಸು. ಸಂಪರ್ಕ ಸಾಧನ ಅಷ್ಟಾಗಿ ಇಲ್ಲದಿದ್ದ ಕಾಲದಲ್ಲಿ ಬಸ್ಸು ಸಿಕ್ಕರೆ ಸರಿ ಇಲ್ಲವಾದರೆ ನಡೆದೇ ಹೋಗುವ ರೂಢಿ ಅವರದು. ದಿನಾ ಬೆಳಗ್ಗೆ ಬೇಗ ಎದ್ದು ಮೂರ್ನಾಲ್ಕು ಕಿಲೋಮೀಟರ್ ವಾಕಿಂಗ್ ಮಾಡುವುದನ್ನು (ಆಗ ಬಾಯಲ್ಲಿ ಶುಂಠಿಎಣ್ಣೆ ಇಟ್ಟುಕೊಂಡು ಆಯಿಲ್ ಪೂಲಿಂಗ್ ಮಾಡುವುದು ಅಭ್ಯಾಸ) ಅವರು ಎಂದೂ ತಪ್ಪಿಸುತ್ತಿರಲಿಲ್ಲವಂತೆ. ಆಹಾರವೂ ಮಿತ. ರಾತ್ರಿ ಊಟ ಇಲ್ಲ. ಆಗೀಗ ಉಪವಾಸ ಮಾಡುವುದು ಬದುಕಿನ ಭಾಗವೇ ಆಗಿಹೋಗಿತ್ತು. ಸಂಚಾರಿ ಬದುಕಿನ ಅವರು ಆಯಾ ಪ್ರದೇಶಕ್ಕೆ ಹೋದಾಗ ಕೆಲವರ ಮನೆಯಲ್ಲಿ ಮಾತ್ರ ಉಳಿಯುವ ರೂಢಿ ಇಟ್ಟುಕೊಂಡಿದ್ದರು. ಅಲ್ಲಿ ಕೂಡ ತಮ್ಮಿಂದ ಆ ಮನೆಯವರಿಗೆ ಕಿಂಚಿತ್ತೂ ತೊಂದರೆ ಆಗಬಾರದು ಎಂಬ ಎಚ್ಚರಿಕೆ. ಅವರ ಅಗತ್ಯಗಳು ತುಂಬ ಮಿತವಾಗಿದ್ದವು. ಹೀಗಾಗಿ ಬೇರೆಯವರಿಗೆ ಭಾರವಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಕೆಲವರ ಪ್ರಕಾರ ಅವರು ಮುಂಗೋಪಿಯಾಗಿದ್ದರು. ಆದರೆ ಅವರ ಜೊತೆ ನಿಕಟವಾಗಿ ಒಡನಾಡಿದವರ ಪ್ರಕಾರ ಅವರು ಅಕ್ಕರೆಯ ಮೂಟೆಯಾಗಿದ್ದರು; ಹೊರನೋಟಕ್ಕೆ ಶೀಘ್ರಕೋಪಿಯ ಹಾಗೆ ಅನಿಸುತಿತ್ತು ಅಷ್ಟೇ.
ಹೊಸ್ತೋಟರ ಇತರ ಕೆಲಸಗಳದು ಒಂದು ತೂಕವಾದರೆ ಅವರ ಯಕ್ಷಗಾನ ಶಿಕ್ಷಣದ್ದೇ ಮತ್ತೊಂದು ತೂಕ. ಕಲಿಸುವುದು ಅವರಿಗೆ ಪ್ರಿಯವಾದ ಕೆಲಸ. ಇದರಿಂದಾಗಿ ಸಾವಿರಾರು ಮಂದಿ ಯಕ್ಷರಂಗವೇರುವಂತಾಗಿ ಕಲೆಯ ಮುಂದುವರಿಕೆಗೆ ಒಂದು ದೊಡ್ಡ ಸಮೂಹವೇ ಸೃಷ್ಟಿಯಾಗಿದ್ದು ಚರಿತ್ರಾರ್ಹ ಸಂಗತಿ. ಯಾವುದೇ ಕಲೆಯ ಭವಿಷ್ಯಕ್ಕೆ ಹೊಸಬರನ್ನು ತಯಾರು ಮಾಡುವುದು ಕೂಡ ಮುಖ್ಯ. ಅವರು ಮಕ್ಕಳು, ಮಹಿಳೆಯರಿಗೂ ಯಕ್ಷಗಾನ ಕಲಿಸಿದರು. ಅಂಧ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದು ಹೊಸ್ತೋಟ ಭಾಗವತರ ಜೀವನದ ಮತ್ತೊಂದು ಭಾವನಾತ್ಮಕ ಅಧ್ಯಾಯ. ಒಳಗಣ್ಣು ತೆರೆದರೆ ಮಾತ್ರ ಇಂಥ ಕಾರ್ಯ ಆಗುತ್ತದೆ. ಐವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿದ್ದು ಅವರ ಕಾರ್ಯವಿಸ್ತಾರಕ್ಕೆ ಪುರಾವೆ. ಯಕ್ಷಗಾನ ಕಲಿಸುವಾಗ ಜಾತಿವರ್ಗದ ಎಲ್ಲೆ ಮೀರಿ ಯೋಚಿಸಿದ್ದು ಅವರ ಸಮನ್ವಯ ಗುಣಕ್ಕೆ ಸಾಕ್ಷಿ.
ಭಾಗವತರ ಜೀವನ ವಿನ್ಯಾಸದಲ್ಲಿ, ಸೃಷ್ಟಿಶೀಲ ರಚನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಗೋಳಿ ಸಿದ್ಧಿವಿನಾಯಕ ದೇವಸ್ಥಾನ, ಅಂಕೋಲೆಯ ಮೋತಿಗುಡ್ಡ ಮುಂತಾದ ಸ್ಥಳಗಳು ಅವರ ಧ್ಯಾನಸ್ಥ ಬದುಕಿನ ತಾಣಗಳು ಕೂಡ ಆಗಿದ್ದವು. ವರ್ಷಕ್ಕೆ ಒಂದು ತಿಂಗಳು ಮೌನ ಆಚರಿಸುತ್ತಿದ್ದರು. ಇಂಥ ಮೌನದ ಕಾಲದಲ್ಲೇ ಅವರ ಅಕ್ಷರ ವ್ಯವಸಾಯಕ್ಕೆ ಹೊಸ ಹೊಳಹು, ವೇಗ ದೊರಕುತ್ತಿತ್ತು. ಹೊಸ್ತೋಟ ಭಾಗವತರ ಜೀವನ ಸಾಧನೆಯ ದಾಖಲಾತಿ ಆಗಬೇಕು, ಆ ಮೂಲಕ ಮುಂದಿನವರಿಗೂ ಅವರ ಬಗ್ಗೆ ತಿಳಿಯುವಂತಾಗಬೇಕು ಎಂದು ಕೆಲವರು ಆಲೋಚಿಸಿ ಮುಂದಡಿ ಇಟ್ಟ ಫಲವಾಗಿ ‘ಯಕ್ಷಹಂಸ’ ಎಂಬ ಕೃತಿ (ಹೊಸ್ತೋಟ ಮಂಜುನಾಥ ಭಾಗವತ ಸ್ಮರಣ ಸಂಪುಟ) ಹೊರಬಂದಿದೆ. ಭಾಗವತರ ಒಡನಾಡಿಗಳು, ಶಿಷ್ಯರು, ಯಕ್ಷ ಕಾರ್ಯದಲ್ಲಿ ಅವರ ಜೊತೆ ಕೈಜೋಡಿಸಿದವರು, ವಿದ್ವಾಂಸರು ಮುಂತಾದವರ ಬರಹಗಳನ್ನು ಒಳಗೊಳ್ಳುವ ಮೂಲಕ ಅವರ ಕುರಿತು ಒಂದು ಅಧಿಕೃತ ದಾಖಲೆಯಾಗಿ ಈ ಕೃತಿ ನಿಲ್ಲುತ್ತದೆ.
‘ಹೊಸ್ತೋಟರಂತಹ ಯಕ್ಷತಪಸ್ವಿಯ ಜೀವಿತದ ಮಹಾತ್ಕಾರ್ಯಗಳು ವ್ಯರ್ಥವಾಗಿ ಹೋಗಬಾರದು. ಅವುಗಳ ಪ್ರಯೋಜನವು ಯಕ್ಷಗಾನದ ಉಳಿವು, ಬೆಳವಣಿಗೆಗಾಗಿ ಸಿಗುವಂತಾಗಬೇಕು. ಅವರು ರೂಪಿಸಿರುವ ಸಿದ್ಧಾಂತಗಳು, ಮಾಡಿರುವ ಶೋಧಗಳು, ಬರೆದಿರುವ ಕೃತಿಗಳು, ಪ್ರಸಂಗ ರಾಶಿಗಳು- ಇವೆಲ್ಲ ಯಕ್ಷಗಾನ ಲೋಕಕ್ಕೆ, ಅದರ ಪರಿಶುದ್ಧತೆಯ ಉಳಿವಿಗೆ, ಮುಂದಿನ ಸಂಶೋಧನೆ ಗಳಿಗೆ ಅತಿ ಅಮೂಲ್ಯವಾದ ಅರಿವಿನ ಕೋಶವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಕೃತಿಯ ಪ್ರಧಾನ ಸಂಪಾದಕರಾದ ಡಾ. ವಿಜಯನಳಿನಿ ರಮೇಶ್ ಅವರು ಹೇಳಿರುವುದು ಸೂಕ್ತವಾಗಿದೆ. (ಕೃತಿ: ಯಕ್ಷಹಂಸ. ಪ್ರಕಟಣೆ- ವಿಕಿ ಬುಕ್ಸ್ ಶಿರಸಿ, ಪುಟಗಳು- 528. ಬೆಲೆ – 550 ರೂ.) ‘ಕಲಾಪ್ರವೃತ್ತನೊಬ್ಬನು ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಅವರು ಮಾಡಿದ್ದಾರೆ. ಅವರು ಯಕ್ಷಗಾನದಲ್ಲಿ ಏನು ಮಾಡಿಲ್ಲ ಎಂದರೆ, ಉತ್ತರಿಸಲು ಕಷ್ಟ. ಮತ್ತು ಅದೆಲ್ಲವನ್ನೂ ಉತ್ಕೃಷ್ಟತೆಯಿಂದ ಮಾಡಿದ್ದಾರೆ’ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಹೇಳುತ್ತಾರೆ.
ಕೊನೇ ಮಾತು: ಬಡತನದ ಹಿನ್ನೆಲೆಯ ಹೊಸ್ತೋಟ ಭಾಗವತರು ಚಿಕ್ಕವರಿದ್ದಾಗ ಕಷ್ಟದ ಬದುಕಿಗೆ ನೊಂದು ಒಮ್ಮೆ ಕೆರೆಯ ದಂಡೆಯಲ್ಲಿ ನಿಂತು ಆತ್ಮಹತ್ಯೆಯ ಯೋಚನೆ ಮಾಡಿದ್ದರಂತೆ. ಆಗ ಆಲ್ಲಿ ತನ್ನದೇ ವಯಸ್ಸಿನ ಮಕ್ಕಳು ಆಕಳುಗಳನ್ನು ಮೇಯಿಸುತ್ತ ಸಂತಸದಿಂದ ಇರುವುದನ್ನು ಕಂಡು, ಈ ಮಕ್ಕಳು ಕೂಡ ಇಷ್ಟು ಜೀವನೋತ್ಸಾಹದಿಂದ ಇರುವಾಗ ತಾನ್ಯಾಕೆ ಬದುಕಬಾರದು ಎಂಬ ಅನಿಸಿಕೆ ಒಡಮೂಡಿತಂತೆ. ಹಾಗೆ ಆ ಬಯಲಲ್ಲಿ ಜೀವನದರ್ಶನ ಕಂಡುಕೊಂಡ ಅವರಿಗೆ ಮುಂದೆ ಬಯಲೇ ಬದುಕಾಯಿತು. ಗೋಡೆ, ಬಾಗಿಲು ಇಲ್ಲದ ಬಯಲಿನಲ್ಲಿ ನಡೆಯುತ್ತ, ಹುಡುಕಾಟ ನಡೆಸುತ್ತ ಯಕ್ಷಲೋಕದಲ್ಲಿ ವಿಹರಿಸುತ್ತ ಸಾಗಿದರು. 80ನೆಯ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿ ಯಕ್ಷಪ್ರೇಮಿಗಳ ಹೃದಯದಲ್ಲಿ ಚಿರಸ್ಥಾಯಿಯಾದರು.
ಗೊಂಡಾ ರೈಲು ದುರಂತಕ್ಕೆ ಕಾರಣವೇನು ಗೊತ್ತಾ? ಅಪಘಾತದ ಪ್ರಾಥಮಿಕ ವರದಿಯಲ್ಲಿ ಕಾರಣ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
