| ಕಿರಣ್​ ಮಾದರಹಳ್ಳಿಚಾಮರಾಜನಗರ‘ನಗುಮುಖದ ರಾಜಕುಮಾರ’, ಸ್ಯಾಂಡಲ್​ವುಡ್​ನ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ಹೋಗಿ ಮೂರು ತಿಂಗಳು ಕಳೆದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೋವು ಮಾತ್ರ ಕರಗಿಲ್ಲ. ರಾಜ್ಯದ ಗಡಿಯಂಚಿನ ಕುಗ್ರಾಮದಿಂದ ವಿದೇಶದವರೆಗೂ ‘ಅಪ್ಪು’ ಸಾವಿಗೆ ಭಾರವಾದ ಮನಸ್ಸಿನಲ್ಲೇ ಸಂತಾಪ ಸಲ್ಲಿಸುವ ಕಾರ್ಯ ಮುಂದುವರಿದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾ ಪುನೀತ್​ ಸಮಾಧಿ ನಮಿಸುತ್ತಾ ಕಣ್ಣೀರಿಡುತ್ತಿದ್ದಾರೆ. ವಿಪರ್ಯಾಸದ ಸಂಗತಿ ಏನೆಂದರೆ, ಪುನೀತ್​ರನ್ನು ಆಡಿಸಿ- ಬೆಳೆಸಿದ ಅವರದ್ದೇ ಮನೆಯ ಹಿರಿಯ ಜೀವಕ್ಕೆ ಪುನೀತ್​ ಅಗಲಿಕೆ ವಿಷಯ ಇನ್ನೂ ಗೊತ್ತಿಲ್ಲ!
ಡಾ.ರಾಜ್​ಕುಮಾರ್​ ಅವರ ಸಹೋದರಿ, ಪುನೀತ್​ರ​ ಸೋದರತ್ತೆ ನಾಗಮ್ಮ ಪಾಲಿಗೆ ಈಗಲೂ ತನ್ನ ಸೋದರಳಿಯ ಅಲ್ಲೆಲ್ಲೋ, ಅದ್ಯಾವುದೋ ಚಿತ್ರದ ಶೂಟಿಂಗ್​ನಲ್ಲಿ ಬಿಜಿ. ಬಿಡುವು ಸಿಕ್ಕಾಗ ಅತ್ತೆಯನ್ನು ನೋಡಲು ಬಂದೇ ಬರುತ್ತಾನೆ ಎನ್ನುವ ನಂಬಿಕೆ. ಅಂದಾಜು 92 ವರ್ಷದ ನಾಗಮ್ಮ ಚಾಮರಾಜನಗರ ಸಮೀಪದ ತಮಿಳುನಾಡಿನ ಗಾಜನೂರಿನಲ್ಲಿ ಮಗ ಗೋಪಾಲ್​, ಸೊಸೆ ಪ್ರೇಮಾ ಅವರೊಂದಿಗೆ ವಾಸವಿದ್ದಾರೆ. ಅನಾರೋಗ್ಯದಿಂದ ಬಳಸಲುತ್ತಿರುವ ಈ ಹಿರಿಯ ಜೀವ ಅಪ್ಪು ಸಾವಿನ ಸುದ್ದಿ ಕೇಳಿದರೆ ಆಘಾತಕ್ಕೊಳಗಾಗಬಹುದು ಎಂಬ ಭಯ ಕುಟುಂಬದವರದ್ದು. ಮೂರು ತಿಂಗಳಿನಿಂದ ನಾಗಮ್ಮಗೆ ಟಿವಿ ನೋಡಲು ಬಿಡುತ್ತಿಲ್ಲ… ಅಪ್ಪು ನೆನಪಾಗಿ ಕೇಳಿದರೆ, ನೋಡಲು ಅವರ ಸಿನಿಮಾ ಹಾಕಿಕೊಡಲಾಗ್ತಿದೆ…
ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವ ನಾಗಮ್ಮ ,ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚೇತರಿಕೆ ಕಂಡಿದ್ದರು. ಇತ್ತೀಚಿಗೆ ಕೆಳಕ್ಕೆ ಬಿದ್ದು ತಲೆಗೆ ಸಣ್ಣ ಗಾಯವೂ ಆಗಿತ್ತು. ಚಿಕಿತ್ಸೆ ಪಡೆದು ಈಗ ಗುಣಮುಖವಾಗಿದ್ದು, ಶುಶ್ರೂಷಕರು ಮನೆಯಲ್ಲೇ ಆರೈಕೆ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿರುವ ನಾಗಮ್ಮ ಅವರಿಗೆ ಅಪ್ಪು ನಿಧನರಾಗಿದ್ದಾರೆ ಎಂಬ ವಿಷಯ ಹೇಳಿದರೆ ಮತ್ತೊಂದು ಅನಾಹುತ ಸಂಭವಿಸಲಿದೆ ಎಂಬ ಆತಂಕ ಮನೆಯವರದ್ದು.

ಪುನೀತ್​ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೋವು ತಡೆಯಲಾಗದೆ ಚಾಮರಾಜನಗರ, ಮಂಡ್ಯ, ಕೊಪ್ಪಳ, ರಾಯಚೂರು, ಬೆಳಗಾವಿ ಇತರ ಕಡೆ 7ಕ್ಕೂ ಹೆಚ್ಚು ಅಭಿಮಾನಿಗಳು ಮೃತಪಟ್ಟರು. ಇನ್ನು ಅವರನ್ನು ಮಗುವಿನಿಂದ ನೋಡಿರುವ ಹಿರಿಯ ಜೀವ ನಾಗಮ್ಮ ಅವರಿಗೆ ವಿಷಯ ಗೊತ್ತಾದರೆ ಬದುಕಿ ಬಾಳಬೇಕಿದ್ದ ಮುದ್ದಿನ ಅಳಿಯ ಹೊರಟು ಹೋದನೆಂಬ ನೋವು ಖಂಡಿತವಾಗಿಯೂ ಕಾಡದೆ ಬಿಡುವುದಿಲ್ಲ. ಹಾಗಾಗಿ, ಅಪ್ಪು ಅಗಲಿಕೆ ವಿಚಾರದಲ್ಲಿ ನಾಗಮ್ಮ ಬಳಿ ಗೌಪ್ಯತೆ ಕಾಪಾಡಿಕೊಂಡು ಬಂದಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಮೂರು ತಿಂಗಳಿನಿಂದ ನಾಗಮ್ಮ ಟಿವಿ ನೋಡುತ್ತಿಲ್ಲ. ಹೊರಗಿನವರೊಂದಿಗೆ ಮಾತನಾಡಲು ಅವರನ್ನು ಬಿಡುತ್ತಿಲ್ಲ. ಅಪ್ಪು ವಿಚಾರ ಸೊಲ್ಲೆತ್ತದಂತೆ ತಾಕೀತು ಮಾಡಿ ಹತ್ತಿರದ ಸಂಬಂಧಿಕರನ್ನು ನಾಗಮ್ಮ ಬಳಿಗೆ ಕಳುಹಿಸಲಾಗುತ್ತಿದೆ. ಪುನೀತ್​ ಬಗ್ಗೆ ನಾಗಮ್ಮ ವಿಚಾರಿಸಿದರೆ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ, ಸ್ಪಲ್ಪ ದಿನಗಳ ಬಳಿಕ ಬರುತ್ತಾರೆಂದು ಹೇಳಿ ಕಾಲ ತಳ್ಳಲಾಗಿದೆ.
ಅಂತಿಮ ದರ್ಶನ ಮಾಡಲಾಗಲಿಲ್ಲ, ಸಿನಿಮಾ ನೋಡೋದು ಬಿಟ್ಟಿಲ್ಲ:ಅತ್ತೆ ನಾಗಮ್ಮ ಅವರ ಜತೆ ಮಾತಿಗೆ ಕುಳಿತಾಗಲೆಲ್ಲ ಪುನೀತ್​ ರಾಜ್​ಕುಮಾರ್​ ಅವರು, ತನ್ನ ತಂದೆ ಡಾ.ರಾಜ್​ಕುಮಾರ್​, ಗಾಜನೂರು ಹಾಗೂ ಅವರ ಬಾಲ್ಯದ ದಿನಗಳ ಬಗ್ಗೆ ಕೇಳುತ್ತಿದ್ದರು ಎಂದು ಮನೆಯವರು ಸ್ಮರಿಸುತ್ತಾರೆ. ಬೆಂಗಳೂರಿನಲ್ಲಿದ್ದಾಗ ಕರೆ ಮಾಡಿ ನಾಗಮ್ಮ ಅವರ ಆರೋಗ್ಯವನ್ನು ಅಪ್ಪು ವಿಚಾರಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಅವರು ಮೃತಪಟ್ಟ ವಿಷಯವನ್ನು ತಿಳಿಸಲಾಗಲಿಲ್ಲ. ಹೀಗಾಗಿ, ನಾಗಮ್ಮ ತನ್ನ ಪ್ರೀತಿಯ ಸೋದರಳಿಯನ ಅಂತಿಮ ದರ್ಶನದಲ್ಲೂ ಭಾಗವಹಿಸಲು ಸಾಧ್ಯವಾಗಲಿಲ್ಲ. ಈಗ ಅಪ್ಪು ನೆನಪಾಗಿ ಕೇಳಿದರೆ, ನೋಡಲು ಅವರ ಸಿನಿಮಾ ಹಾಕಿಕೊಡುತ್ತಿರುವುದಾಗಿ ಮನೆಯವರು ಹೇಳಿದ್ದಾರೆ.

ಬಾಂಧ್ಯವದ ಫೋಟೋ:ನಾಗಮ್ಮ ಅವರೊಂದಿಗೆ ಪುನೀತ್​ ರಾಜ್​ಕುಮಾರ್​ ತೆಗೆಸಿಕೊಂಡಿದ್ದ ಫೋಟೋಗಳು ಇಬ್ಬರ ನಡುವಿನ ಬಾಂಧವ್ಯವನ್ನು ಹೇಳುತ್ತವೆ. ಕೆಲ ತಿಂಗಳ ಹಿಂದೆ ‘ಗಂಧದ ಗುಡಿ’ ಚಿತ್ರೀಕರಣಕ್ಕಾಗಿ ಅಪ್ಪು ಗಾಜನೂರಿಗೆ ಬಂದಿದ್ದರು. ಆ ವೇಳೆ ಅಪ್ಪು ಜತೆ ನಾಗಮ್ಮ ತೆಗೆಸಿಕೊಂಡ ಫೋಟೋ ಕೊನೆಯದ್ದು ಎಂದು ಹೇಳಲಾಗುತ್ತಿದೆ. ಅದರದಲ್ಲಿ ಪುನೀತ್​ ತನ್ನ ಅತ್ತೆ ಹೇಳುವುದನ್ನು ನಗುತ್ತಾ ಕೇಳುವ ದೃಶ್ಯ, ಮತ್ತೊಂದು ಫೋಟೋದಲ್ಲಿ ಅತ್ತೆ ಮತ್ತು ಅಳಿಯನ ಪ್ರೀತಿಯ ಅಪ್ಪುಗೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್​ ಆಗಿದ್ದವು.
ಇಳಿ ವಯಸ್ಸು ಮತ್ತು ಅನಾರೋಗ್ಯ ಕಾರಣದಿಂದ ಆಘಾತಕ್ಕೊಳಗಾಗಬಹುದೆಂದು ಅತ್ತೆ ನಾಗಮ್ಮ ಅವರಿಗೆ ಪುನೀತ್​ ಸಾವಿನ ವಿಚಾರವನ್ನು ಹೇಳಿಲ್ಲ. ಮೂರು ತಿಂಗಳಿನಿಂದಲೂ ಅವರಿಗೆ ಈ ಕುರಿತು ಒಂದು ಸಣ್ಣ ಸುಳಿವೂ ಸಿಗದಂತೆ ನೋಡಿಕೊಳ್ಳುತ್ತಿದ್ದೇವೆ. ಅವರು ಅಪ್ಪು ಬಗ್ಗೆ ಕೇಳಿದರೆ ಶೂಟಿಂಗ್​ನಲ್ಲಿದ್ದಾರೆ ಎಂದು ಹೇಳಿ, ಸಿನಿಮಾ ಹಾಕಿಕೊಟ್ಟು ತೋರಿಸುತ್ತಿದ್ದೇವೆ. ಸದ್ಯದಲ್ಲೇ ರಾಘವೇಂದ್ರ ರಾಜ್​ಕುಮಾರ್​ ಗಾಜನೂರಿಗೆ ಬಂದು ನಾಗಮ್ಮ ಆರೋಗ್ಯ ವಿಚಾರಿಸಲಿದ್ದಾರೆ.| ಪ್ರೇಮಾ ಗೋಪಾಲ್​ನಾಗಮ್ಮ ಅವರ ಸೊಸೆ, ಗಾಜನೂರು
ಪುನೀತ್​ ಶಾಲೆ ಮೆಟ್ಟಿಲು ಹತ್ತಿದವರಲ್ಲ! ಅಚ್ಚರಿ ಮೂಡಿಸುತ್ತೆ ಈ ವಿಷ್ಯ

ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
