ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ಜೀವನದಲ್ಲಿ ಏನಾದರೂ ಸಣ್ಣಪುಟ್ಟ ಸಾಧನೆಗೆ ಕೈಹಾಕಿದಾಗ ಒಂದು ಸಣ್ಣ ಅಡ್ಡಿ, ಅಡಚಣೆಗೂ ವಿಚಲಿತರಾಗಿ ಬಿಡುವ; ಹೋದರೆ ಹೋಯಿತು ಎಂದು ಕೈಚೆಲ್ಲಿ ಬಿಡುವ ಅರೆಮನಸ್ಕರಿಗೆ ಶೂಟಿಂಗ್​ನಂಥ ಸ್ಪರ್ಧೆಗಳಲ್ಲಿ ಜೀವನದ ಪಾಠವಿದೆ. ಏಕಾಗ್ರತೆ, ಮನೋಬಲ ಕಾಪಾಡಿಕೊಳ್ಳುವ ಸಂದೇಶವಿದೆ.
ನೆರೆಹೊರೆ ಮಕ್ಕಳನ್ನು ನೋಡುತ್ತ ಆ ಬಾಲಕಿ ತಾನೂ ಸ್ಕೇಟಿಂಗ್ ಮಾಡಬೇಕೆಂದು ಆಸೆಪಟ್ಟಿದ್ದಳು. ಮಕ್ಕಳ ಆಸೆಯನ್ನು ಯಾವ ಅಪ್ಪ-ಅಮ್ಮ ಬೇಡವೆನ್ನುತ್ತಾರೆ? ಕಾಲಿಗೆ ಚಕ್ರ ಕಟ್ಟಿಕೊಂಡು ಆ ಹುಡುಗಿ ಸ್ಕೇಟಿಂಗ್ ರಿಂಗ್​ನಲ್ಲಿ ನಲಿದಾಡಿದ್ದಳು. ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ ಟೆನಿಸ್ ಆಡಬೇಕೆಂಬ ಆಸೆ ಚಿಗುರಿತ್ತು. ಮತ್ತೆ ಕೆಲವು ದಿನಗಳಲ್ಲೇ ಬಾಕ್ಸಿಂಗ್ ಕೂಡ ಸೆಳೆದಿತ್ತು.
ವಿಶೇಷವೆಂದರೆ, ಈ ಹುಡುಗಿ ಒಂದರ ಸಲುವಾಗಿ ಇನ್ನೊಂದನ್ನು ತ್ಯಾಗ ಮಾಡಲಿಲ್ಲ. ಓದಿನ ನಡುವೆ ಸಮಯ ಹೊಂದಿಸಿಕೊಂಡು ಮೂರೂ ಆಟ ಆಡತೊಡಗಿದ್ದಳು. 8ನೇ ತರಗತಿಗೆ ಬರುವ ಹೊತ್ತಿಗೆ ರಾಷ್ಟ್ರಮಟ್ಟದಲ್ಲಿ ಸ್ಕೇಟಿಂಗ್, ಟೆನಿಸ್, ಬಾಕ್ಸಿಂಗ್ ಮೂರರಲ್ಲೂ ಪದಕ ಗೆಲ್ಲುವ ಮಟ್ಟಿಗೆ ನೈಪುಣ್ಯ ಸಾಧಿಸಿದ್ದಳು. ಇಷ್ಟರ ಜತೆಗೆ ಆಕೆಗೆ ಸಂಗೀತದ ಒಲವೂ ಇತ್ತು. ವಯಲಿನ್ ತರಗತಿಗೆ ಸೇರಿಕೊಂಡಿದ್ದಳು. ವಯಲಿನ್ ಹಿಡಿದು ಜನ ಗಣ ಮನ ರಾಷ್ಟ್ರಗೀತೆಯನ್ನು ಆಕೆ ನುಡಿಸುತ್ತಿದ್ದರೆ, ಅಲ್ಲಿದ್ದವರೆಲ್ಲ ಎದ್ದುನಿಂತು ಭಾವಪರವಶರಾಗುತ್ತಿದ್ದರು.
ಹೈಸ್ಕೂಲ್​ಗೆ ಕಾಲಿಟ್ಟ ಮೇಲೆ ಆ ಹುಡುಗಿ ಹೊಸದೊಂದು ಕನಸು ಕಾಣತೊಡಗಿದ್ದಳು. ತನಗೊಂದು ಪಿಸ್ತೂಲು ಕೊಡಿಸುವಂತೆ ಅಪ್ಪನಿಗೆ ದುಂಬಾಲು ಬಿದ್ದಿದ್ದಳು. ನೇವಿಯಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ಅಪ್ಪನಿಗೆ ಮಗಳ ಆಸೆ ಪೂರೈಸುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಪಿಸ್ತೂಲು ಕೈಸೇರಿದಾಗ ಆಕೆಗೆ ಸ್ವರ್ಗಕ್ಕೆ ಮೂರೇ ಗೇಣು.
ಸ್ಥಿತಿವಂತ ಕುಟುಂಬಗಳಲ್ಲಿ ಕೇಳಿದ್ದನ್ನೆಲ್ಲ ಕೊಡಿಸುವ ಅಪ್ಪ-ಅಮ್ಮನ ಪ್ರೀತಿಯಿಂದ ಮಕ್ಕಳು ದಾರಿ ತಪು್ಪವ ಉದಾಹರಣೆಗಳೇ ಹೆಚ್ಚು. ಆದರೆ, ಈ ಹುಡುಗಿ ಇಡೀ ದೇಶ ಹೆಮ್ಮೆ ಪಡುವಂತೆ ಸಾಧನೆಯ ಶಿಖರ ಏರಿದ್ದು ವಿಶೇಷ. ಒಂದೇ ಒಲಿಂಪಿಕ್ಸ್​ನಲ್ಲಿ ಎರಡೆರಡು ಪದಕ ಗೆದ್ದ ಏಕಮಾತ್ರ ಭಾರತೀಯ ಒಲಿಂಪಿಯನ್ ಎಂಬ ಐತಿಹಾಸಿಕ ಹಿರಿಮೆಗೆ ಪಾತ್ರವಾಗಿರುವ ಮನು ಭಾಕರ್ ಈ ದೇಶದ ಹೆಮ್ಮೆ. ಪ್ಯಾರಿಸ್​ನಲ್ಲಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ವ್ಯಕ್ತಿಗತ ಹಾಗೂ ಮಿಶ್ರ ತಂಡ ಸ್ಪರ್ಧೆಯಲ್ಲಿ 2 ಕಂಚು ಗೆದ್ದಿರುವ ಮನು ಸಾಧನೆ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲೇ ವಿರಳಾತಿವಿರಳ.
16ನೇ ವಯಸ್ಸಿನಲ್ಲೇ ಶೂಟಿಂಗ್​ನ ವಿಶ್ವಕಪ್​ನಲ್ಲಿ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಾಗೂ ಯುವ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದ ಮನು, 2020ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಫೇವರಿಟ್ ಆಗಿ ಭಾರತವನ್ನು ಪ್ರತಿನಿಧಿಸಿದ್ದರಾದರೂ, ಅರ್ಹತಾ ಸುತ್ತಿನಲ್ಲೇ ಪಿಸ್ತೂಲ್ ಕೈಕೊಟ್ಟಿತು. ಅದರಿಂದ ಆಘಾತಕ್ಕೊಳಗಾದ ಅವರು ಬಾಕಿ ಸ್ಪರ್ಧೆಗಳಲ್ಲೂ ನೈಜ ಪ್ರದರ್ಶನ ತೋರಲು ವಿಫಲರಾಗಿ ಬರಿಗೈಯಲ್ಲಿ ಮರಳಿದ್ದರು. ಟೋಕಿಯೋದಲ್ಲಿ ಆಕೆ ಸುರಿಸಿದ ಕಣ್ಣೀರು ಪ್ಯಾರಿಸ್​ನಲ್ಲಿ ಪದಕವಾಗಿ ಪರಿವರ್ತನೆಗೊಂಡಿದೆ.
ಟೋಕಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ಭಾರತ ಶೂಟಿಂಗ್ ತಂಡದ ಕೋಚ್ ಆಗಿದ್ದ ಮಾಜಿ ಒಲಿಂಪಿಯನ್ ಜಸ್ಪಾಲ್ ರಾಣಾ ಗರಡಿಯಲ್ಲೇ ಮನು ಶೂಟಿಂಗ್ ಕಲಿತವರು. ಟೋಕಿಯೊ ನಿರಾಸೆಯ ಬಳಿಕ ಮನು, ರಾಣಾ ತರಬೇತಿಯಿಂದ ಹೊರನಡೆದಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕಾರು ಕೋಚ್ ಬದಲಾಯಿಸಿದರೂ ಯಶಸ್ಸು ಸಿಗದ ಕಾರಣ, ಏಳು ತಿಂಗಳ ಹಿಂದೆ ಮತ್ತೆ ರಾಣಾ ಅವರಿಗೆ ಮೊರೆಹೋಗಿದ್ದರು. ಟೋಕಿಯೊ ವೈಫಲ್ಯದ ಬಳಿಕ ಭಾರತದ ಶೂಟಿಂಗ್ ವಲಯದಲ್ಲಿ ಬಹಿಷ್ಕೃತರಂತಿರುವ ಜಸ್ಪಾಲ್ ರಾಣಾ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ನಿಯೋಗದ ಭಾಗವಾಗದ ಕಾರಣ ಅವರಿಗೆ ಕ್ರೀಡಾಗ್ರಾಮದಲ್ಲಿ ತಂಗಲು ಅವಕಾಶ ದೊರೆತಿಲ್ಲ. ಆದರೂ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಮನು ಸ್ಪರ್ಧೆಯ ವೇಳೆ ರಾಣಾ ನೈತಿಕ ಸ್ಥೈರ್ಯ ತುಂಬಿದ್ದರು. ಟೋಕಿಯೋ ವೈಫಲ್ಯದ ಬಳಿಕ ದುರಹಂಕಾರಿ ಎಂಬ ಟೀಕೆಗೆ ಗುರಿಯಾಗಿದ್ದ ರಾಣಾ ಹಾಗೂ ‘ಕೊಬ್ಬು ಕರಗಿತು’ ಎಂಬ ಅಪಹಾಸ್ಯಕ್ಕೆ ತುತ್ತಾಗಿದ್ದ ಮನು ಇಬ್ಬರಿಗೂ ಪ್ಯಾರಿಸ್ ಯಶಸ್ಸು ಪುನರ್ಜನ್ಮ ಕೊಡಿಸಿದೆ.
ಪ್ಯಾರಿಸ್​ನಲ್ಲಿ ಮನು ಸಾಧಿಸಿದ್ದನ್ನು ಪವಾಡ ಎಂದರೆ ತಪ್ಪಾಗುತ್ತದೆ. ಏಕೆಂದರೆ, ಆಕೆಯ ಸಾಧನೆ ಪರಿಶ್ರಮ, ಏಕಾಗ್ರತೆಯಿಂದ ಒಲಿದಿದ್ದೇ ಹೊರತು, ಅದೃಷ್ಟ ಅಥವಾ ಇನ್ನಾವುದೋ ಬಾಹ್ಯ ಸಂಗತಿಯಿಂದ ಅಲ್ಲ. ಕ್ರೀಡಾ ಸಾಧನೆಗಳನ್ನು ವಿಶ್ಲೇಷಿಸುವಾಗ ಅಂಕಿಸಂಖ್ಯೆಗಳೇ ಪ್ರಮುಖ ಆಧಾರ. ಆದರೂ, ಹಲವು ಬಾರಿ ಸೋಲು-ಗೆಲುವಿನ ಅಂತರ ಹೇಳುವ ಅಂಕಿಗಳು ಆಟದ ತೀವ್ರತೆಯನ್ನು, ಹೋರಾಟದ ಅಸಲಿಯತ್ತನ್ನು ಮರೆಮಾಚಿಬಿಡುತ್ತವೆ. ಆದರೆ, ಮನು ಸಾಧನೆ ವಿಶ್ಲೇಷಿಸುವಾಗ ಕೆಳಗಿನ ಅಂಕಗಳನ್ನು ಗಮನಿಸಲೇಬೇಕು.
10.2, 10.7, 10.4, 10.7, 10.5, 10.0, 10.6, 8.3, 10.0, 10.5, 9.6, 10.6, 9.4 ಮನು ಪ್ಯಾರಿಸ್​ನಲ್ಲಿ 10 ಮೀ. ಏರ್ ಪಿಸ್ತೂಲ್ ಮಿಶ್ರ ಶೂಟಿಂಗ್ ಸ್ಪರ್ಧೆಯ ಫೈನಲ್​ನಲ್ಲಿ ಗಳಿಸಿದ ಈ ಸ್ಕೋರ್​ಗಳಿಗೆ ಕಂಚಿನ ತೂಕವಿದೆ!
ವಿದ್ಯಾರ್ಥಿಗಳಿಗೆ ಏಕಾಗ್ರತೆ, ಇಚ್ಛಾಶಕ್ತಿ, ಮನೋಬಲದ ಮಹತ್ವವನ್ನು ಈ ಸ್ಕೋರ್​ಗಳ ಉದಾಹರಣೆ ಸಹಿತ ವಿವರಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ, ಜೆಇಇ, ನೀಟ್, ಸಿಇಟಿ ಮೊದಲಾದ ಪರೀಕ್ಷೆಗಳಲ್ಲಿ ಟಾಪರ್ ಕನಸು ಕಾಣುವ ಮಕ್ಕಳಿಗೆ ಒಲಿಂಪಿಕ್ಸ್​ನ ಶೂಟಿಂಗ್, ಆರ್ಚರಿ ಮೊದಲಾದ ಸ್ಪರ್ಧೆಗಳ ನೇರಪ್ರಸಾರ ವೀಕ್ಷಿಸಲು ಹೇಳಬೇಕು. ಪರೀಕ್ಷೆಯಲ್ಲಿ ಮಾತ್ರವಲ್ಲ, ಜೀವನದಲ್ಲಿ ಏನಾದರೂ ಸಣ್ಣಪುಟ್ಟ ಸಾಧನೆಗೆ ಕೈಹಾಕಿದಾಗ ಒಂದು ಸಣ್ಣ ಅಡ್ಡಿ, ಅಡಚಣೆಗೂ ವಿಚಲಿತರಾಗಿ ಬಿಡುವ; ಹೋದರೆ ಹೋಯಿತು ಎಂದು ಕೈಚೆಲ್ಲಿ ಬಿಡುವ ಅರೆಮನಸ್ಕರಿಗೆ ಶೂಟಿಂಗ್​ನಂಥ ಸ್ಪರ್ಧೆಗಳಲ್ಲಿ ಜೀವನದ ಪಾಠವಿದೆ. ಚಿತ್ತ ಚಂಚಲವಾಗುವುದರಿಂದ ಆಗುವ ಅನಾಹುತ ಹಾಗೂ ಏಕಾಗ್ರತೆ, ಮನೋಬಲ ಕಾಪಾಡಿಕೊಳ್ಳುವುದರಿಂದ ಒಲಿಯುವ ಶ್ರೇಷ್ಠ ಸಾಧನೆಗಳಿಗೆ ಪ್ಯಾರಿಸ್​ನ ಶೂಟಿಂಗ್ ಮತ್ತು ಆರ್ಚರಿ ಸ್ಪರ್ಧೆಗಳಲ್ಲಿ ಭಾರತೀಯರ ಪ್ರದರ್ಶನವೇ ಅತ್ಯುತ್ತಮ ಉದಾಹರಣೆ.
ಸರಬ್​ಜೋತ್ ಸಿಂಗ್ ಜತೆ 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯ ಫೈನಲ್​ನಲ್ಲಿ ಮನು 13 ಪ್ರಯತ್ನಗಳಲ್ಲಿ ಅತ್ಯಧಿಕ 10 ಬಾರಿ 10ಕ್ಕಿಂತ ಹೆಚ್ಚು ಅಂಕಕ್ಕೆ ಗುರಿ ಇಟ್ಟರು. ಶೂಟಿಂಗ್​ನಲ್ಲಿ 10 ಅಂಕ ಗಳಿಸುವುದೆಂದರೆ, ಟಾರ್ಗೆಟ್​ನ ಕೇಂದ್ರಬಿಂದುವಿಗೆ (ಬುಲ್ಸ್ ಐ) ನಿಖರವಾಗಿ ಗುರಿ ಇಡುವುದೆಂದರ್ಥ. ಮನು ಇದರಲ್ಲಿ ತೋರಿಸಿದ ಸ್ಥಿರತೆ ಅತ್ಯದ್ಭುತ. ಪ್ರಾರಂಭದಲ್ಲಿ ಸತತ 7 ಬಾರಿ ಮನು 10ಕ್ಕಿಂತ ಹೆಚ್ಚು ಅಂಕಗಳಿಗೆ ನಿಖರ ಗುರಿ ಇಟ್ಟಿದ್ದು ಎದುರಾಳಿ ಕೊರಿಯನ್ನರ ಜಂಘಾಬಲ ಉಡುಗಿಸಿತು. ಹಾಗೆಂದು ಕೊರಿಯನ್ನರು ಸಾಮಾನ್ಯದವರೇನೂ ಆಗಿರಲಿಲ್ಲ. 19ರ ತರುಣಿ ಓಹ್ ಯೆ ಜಿನ್ ಕೇವಲ ಎರಡೇ ದಿನ ಹಿಂದೆ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ವ್ಯಕ್ತಿಗತ ವಿಭಾಗದಲ್ಲಿ ಅತ್ಯಧಿಕ 243.2 ಅಂಕಗಳಿಗೆ ಗುರಿಯಿಟ್ಟು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನವನ್ನೇ ಗೆದ್ದಿದ್ದರು. ಮನು ಆ ಸ್ಪರ್ಧೆಯಲ್ಲಿ ಕಂಚಿಗೆ ತೃಪ್ತಿ ಪಡಬೇಕಾಗಿತ್ತು. ಜಿನ್​ರ ಜತೆಗಾರ ಲೀ ವೊನ್ಹೊ ಕೂಡ ಪುರುಷರ ವಿಭಾಗದ ವ್ಯಕ್ತಿಗತ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿದ್ದರು. ಆದರೆ, ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಹಾಕಿದ ಸತತ ಹತ್ತಂಕಗಳ ಬಿಗಿಪಟ್ಟಿಗೆ ಅವರಿಬ್ಬರು ಕಂಗಾಲಾದರು. 13 ಸುತ್ತುಗಳಲ್ಲಿ ಜಿನ್ 8 ಬಾರಿ ಹತ್ತಂಕಿ ದಾಟಿದರೆ, ಲೀ ವೊನ್ಹೊ 4 ಬಾರಿ ಮಾತ್ರ ಹತ್ತಂಕಿ ಗಳಿಸಿದರು. ಇತ್ತ ಮನು ಜತೆಗಾರ ಸರಬ್​ಜೋತ್ 9 ಬಾರಿ ಹತ್ತಂಕಿ ಗಡಿ ದಾಟುವ ಮೂಲಕ ಸಮರ್ಥ ಸಾಥ್ ನೀಡಿದರು. ಹೀಗಾಗಿ ಕೊರಿಯಾ ಯಾವ ಹಂತದಲ್ಲೂ ಭಾರತವನ್ನು ಹಿಂದಿಕ್ಕುವುದು ಸಾಧ್ಯವಾಗಲೇ ಇಲ್ಲ. ಮನು 8ನೇ ಸುತ್ತಿನಲ್ಲಿ ಕ್ಷಣಮಾತ್ರ ವಿಚಲಿತಗೊಂಡು 8.3 ಅಂಕ ಗಳಿಸಿದಾಗಲೂ ಸರಬ್​ಜೋತ್ 10.2 ಅಂಕ ಗಳಿಸಿ ತಂಡದ ಮನೋಬಲ ಕಾಪಾಡಿದರು. ಸರಬ್​ಜೋತ್ ಎಡವಿದಾಗ ಮನು ಹೆಚ್ಚಿನ ಅಂಕ ಗಳಿಸಿ ತಂಡದ ಮೇಲುಗೈ ಉಳಿಸಿದರು. ತನ್ಮೂಲಕ 13 ಸುತ್ತಿನ ಆಟದಲ್ಲಿ 8 ಸುತ್ತುಗಳಲ್ಲಿ ಭಾರತ ಗೆದ್ದು 16 ಅಂಕ ಸಂಪಾದಿಸಿದರೆ, ಕೊರಿಯದವರು 5 ಸುತ್ತುಗಳಿಂದ 10 ಅಂಕಕ್ಕಷ್ಟೇ ತೃಪ್ತಿ ಪಡಬೇಕಾಯಿತು. ಒಂದು ವಿಶೇಷವೆಂದರೆ, ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕಾಗಿ ಸೆರ್ಬಿಯಾ ಮತ್ತು ಟರ್ಕಿ ನಡುವೆ ಸಾಗಿದ ಫೈನಲ್​ನಲ್ಲಿ 15 ಸುತ್ತುಗಳ ಆಟ ನಡೆದರೂ, ಆ ಪಂದ್ಯದಲ್ಲಿ ಯಾರೊಬ್ಬರೂ ಮನುರಂತೆ 10 ಬಾರಿ ಹತ್ತಕ್ಕಿಂತ ಹೆಚ್ಚಿನ ಅಂಕಿಗೆ ಗುರಿ ಇಡಲಿಲ್ಲ.
ಶೂಟಿಂಗ್​ನಲ್ಲಿ ಮನು ಮತ್ತು ಸರಬ್​ಜೋತ್ ಒಬ್ಬರಿಗೊಬ್ಬರು ಬೆಂಬಲವಾಗಿ ತಂಡಸ್ಪೂರ್ತಿಯಿಂದ ಕಂಚು ಗೆದ್ದರೆ, ಮಹಿಳೆಯರ ಆರ್ಚರಿ ತಂಡ ಸ್ಪರ್ಧೆಯ ಕ್ವಾರ್ಟರ್​ಫೈನಲ್​ನಲ್ಲಿ ಭಾರತೀಯರ ಪ್ರದರ್ಶನ ಯಾವ ರೀತಿ ಇರಬಾರದು ಎನ್ನುವುದಕ್ಕೆ ನಿದರ್ಶನವಾಗಿತ್ತು. ನೆದರ್​ಲ್ಯಾಂಡ್ ವಿರುದ್ಧದ ಆರ್ಚರಿ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಭಾರತ, ಸತತ 4ನೇ ಒಲಿಂಪಿಕ್ಸ್​ನಲ್ಲಿ ಆಡುತ್ತಿರುವ ದೀಪಿಕಾ ಕುಮಾರಿ ಮತ್ತು ಅಂಕಿತಾ ಭಗತ್ ಅವರ ಕಳಪೆ ಪ್ರದರ್ಶನದಿಂದ ಸೋಲುವಂತಾಯಿತು. ತಂಡದ ಇನ್ನೋರ್ವ ಯುವ ಬಿಲ್ಗಾರ್ತಿ ಭಜನ್ ಕೌರ್ 6 ಯತ್ನಗಳಲ್ಲಿ 3 ಬಾರಿ ಹತ್ತಂಕಿ ಸಹಿತ ಗರಿಷ್ಠ 60ಕ್ಕೆ 56 ಅಂಕ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಆದರೆ, ದೀಪಿಕಾ 48 ಮತ್ತು ಅಂಕಿತಾ 46 ಅಂಕಕ್ಕೆ ಮಾತ್ರ ಗುರಿ ಇಡುವುದರೊಂದಿಗೆ ಭಾರತ ಸೋತಿತು. ಅದರಲ್ಲೂ ಅಂಕಿತಾ ಕೊನೆಯ ಸೆಟ್​ನ ಮೊದಲ ಯತ್ನದಲ್ಲಿ ಕೇವಲ 4 ಅಂಕ ಗಳಿಸಿದ್ದು, ಭಾರತದ ಕನಸನ್ನು ಮಣ್ಣುಗೂಡಿಸಿತು. ಆರ್ಚರಿ ರೇಂಜ್​ನಲ್ಲಿ ಪ್ರಬಲವಾದ ಗಾಳಿ ಬೀಸುತ್ತಿದ್ದ ಕಾರಣ ಬಿಲ್ಗಾರರಿಗೆ ಗುರಿ ಇಡುವುದು ಕಷ್ಟವಾಯಿತು ಎಂದು ಭಾರತದ ಕೋಚ್ ಪೂರ್ಣಿಮಾ ಮಹತೋ ಸಬೂಬು ಹೇಳಿದರು. ಆದರೆ, ಭಜನ್ ಕೌರ್​ಗೆ ಹಾಗೂ ನೆದರ್​ಲ್ಯಾಂಡ್ ಆಟಗಾರ್ತಿಯರಿಗೆ ಅಡ್ಡಿಯಾಗದ ಗಾಳಿ ದೀಪಿಕಾ, ಅಂಕಿತಾಗೆ ಮಾತ್ರ ತೊಂದರೆ ಕೊಟ್ಟಿದ್ದು ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗುಳಿಯಿತು.
ಇದರರ್ಥ, ಶೂಟಿಂಗ್ ಮತ್ತು ಆರ್ಚರಿಯಂಥ ಕ್ರೀಡೆಗಳಲ್ಲಿ ಆಟಗಾರರಿಗೆ ಕೌಶಲದ ಜತೆಗೆ ಮಾನಸಿಕ ತರಬೇತಿ ದೊಡ್ಡ ಮಟ್ಟದಲ್ಲಿ ಬೇಕಾಗುತ್ತದೆ. ಒಲಿಂಪಿಕ್ಸ್ ಸ್ಪರ್ಧೆಗೆ ಅರ್ಹತೆ ಗಳಿಸಿ ಬರುವ ಶೂಟರ್, ಆರ್ಚರ್​ಗಳೆಲ್ಲರೂ 10ಕ್ಕೆ10 ಅಂಕ ಗಳಿಸುವ ಕೌಶಲವಂತರೇ ಆಗಿರುತ್ತಾರೆ. ಆದರೆ, ಒಲಿಂಪಿಕ್ಸ್​ನಲ್ಲಿ ಗರಿಷ್ಠ ಅಂಕ ಗಳಿಸುವುದಕ್ಕೆ ಅವರಿಗೆ ಕೌಶಲಕ್ಕೆ ಪೂರಕವಾದ ಮಾನಸಿಕ ದೃಢತೆ, ಏಕಾಗ್ರತೆ ಬೇಕಾಗುತ್ತದೆ. ಮಿಶ್ರ ತಂಡ ಶೂಟಿಂಗ್ ಪದಕ ಸ್ಪರ್ಧೆಯ ನೇರಪ್ರಸಾರ ವೀಕ್ಷಿಸಿದವರು ಸ್ಪರ್ಧಿಗಳ ಮುಖಭಾವ ಗಮನಿಸಿದ್ದರೆ ಇದು ಅರ್ಥವಾಗುತ್ತದೆ. ಪಂದ್ಯದುದ್ದಕ್ಕೂ ಮನು ಮತ್ತು ಸರಬ್​ಜೋತ್ ಮುಖದಲ್ಲಿ ಭಾವನೆಗಳ ಒಂದು ಸಣ್ಣ ಗೆರೆಯನ್ನೂ ಗುರುತಿಸುವುದು ಸಾಧ್ಯವಿರಲಿಲ್ಲ. ಗುರಿಯ ಕಡೆಗೆ ತದೇಕಚಿತ್ತ, ಧ್ಯಾನಸ್ಥ ಸ್ಥಿತಿಯಲ್ಲಿದ್ದ ಇವರಿಬ್ಬರನ್ನು ಪ್ರದರ್ಶನದ ಏರಿಳಿತ, ಸಹಸ್ಪರ್ಧಿಗಳ ಹೆಚ್ಚುಗಾರಿಕೆ, ಪ್ರೇಕ್ಷಕರ ಗದ್ದಲ ಯಾವುದೂ ವಿಚಲಿತಗೊಳಿಸಲಿಲ್ಲ.
ಈ ಬಾರಿ ಒಲಿಂಪಿಕ್ಸ್​ನಲ್ಲಿ ಶೂಟಿಂಗ್ ಸ್ಪರ್ಧೆ ಭಾರತದ ತ್ರಿವರ್ಣಗೌರವ ಎತ್ತಿ ಹಿಡಿಯುತ್ತಿದೆ. ಗುರುವಾರ ಪುರುಷರ 50 ಮೀ. ರೈಫಲ್-3 ಪೊಸಿಷನ್ ಸ್ಪರ್ಧೆಯಲ್ಲಿ ಕಂಚಿಗೆ ಕೊರಳೊಡ್ಡಿದ ಮಹಾರಾಷ್ಟ್ರದ ರೈಲ್ವೇ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್ ಕುಸಾಲೆ ಕೂಡ ದೃಢಚಿತ್ತದ ಪ್ರತಿರೂಪವಾಗಿ ಪದಕವೇದಿಕೆ ಏರಿದರು. ಮೊದಲ ಎರಡು ಸುತ್ತಿನ ಅಂತ್ಯಕ್ಕೆ 6ನೇ ಸ್ಥಾನದಲ್ಲಿದ್ದ ಸ್ವಪ್ನಿಲ್, ಕೊನೆಯ ನಿರ್ಣಾಯಕ ಸುತ್ತಿನ 14 ಯತ್ನಗಳಲ್ಲಿ 10 ಬಾರಿ 10ಕ್ಕಿಂತ ಹೆಚ್ಚಿನ ಅಂಕಕ್ಕೆ ಗುರಿ ಇಡುವ ಮೂಲಕ 3ನೇ ಸ್ಥಾನಕ್ಕೇರಿದರು. ಮೊದಲ 2 ಸುತ್ತುಗಳ ಬಳಿಕ ಅಗ್ರಸ್ಥಾನದಲ್ಲಿದ್ದ ನಾರ್ವೆ ದೇಶದ ಸ್ಪರ್ಧಿ ಕೊನೆಯ ಸುತ್ತಿನಲ್ಲಿ ಏಕಾಗ್ರತೆ ಕಳೆದುಕೊಂಡು 5ನೇ ಸ್ಥಾನಕ್ಕೆ ಕುಸಿದರೆ, ಸ್ವಪ್ನಿಲ್ 6ನೇ ಸ್ಥಾನದಿಂದ 3ಕ್ಕೇರಿದ್ದು, ನಿರ್ಣಾಯಕ ಸಂದರ್ಭಗಳಲ್ಲಿ ಏಕಾಗ್ರತೆ, ಮನೋಬಲ ಕಾಪಾಡಿಕೊಳ್ಳುವುದು ಎಷ್ಟು ಅಗತ್ಯ ಎಂಬ ಪಾಠ ಕಲಿಸಿತು. ಒಂದೇ ಒಲಿಂಪಿಕ್ಸ್ ನಲ್ಲಿ ಕೇವಲ ಶೂಟಿಂಗ್​ನಲ್ಲೇ 3 ಕಂಚು ಗೆದ್ದು ಇತಿಹಾಸ ನಿರ್ವಿುಸಿರುವ ಭಾರತವು ಏಕಾಗ್ರತೆಯ ಮಹತ್ವವನ್ನು ಯುವಜನರಿಗೆ ತಿಳಿಸಿಕೊಟ್ಟಿದೆ. ತ್ರಿವಳಿ ಕಂಚಿಗೆ ಸಂಭ್ರಮ ಪಡುವ ಜತೆಗೆ ಪದಕ ಸಾಧನೆ ಕಲಿಸಿಕೊಟ್ಟಿರುವ ಪಾಠವನ್ನು ಎಲ್ಲರೂ ಕಲಿಯಬೇಕಿದೆ.
(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)
ಬಿಹಾರದ ನಳಂದದಲ್ಲಿ ವೈದ್ಯರ ಶವ ಪತ್ತೆ; ಹೊಡೆದು ಕೊಂದ ಹಂತಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
