| ಮಯೂರಲಕ್ಷ್ಮೀ
ಆತನಿಗಾಗ 14 ವರ್ಷ. ದೇಶದಲ್ಲಿ ಆಗ ನಾಗರಿಕ ಅಸಹಕಾರ ಚಳುವಳಿ ಜೋರಾಗಿತ್ತು. ಈ ಬಾಲಕನನ್ನು ಬ್ರಿಟಿಷರು ಬಂಧಿಸಿದರು. ಎಳೆದೊಯ್ದು ಛಡಿಯೇಟು ಕೊಟ್ಟರು. ತನ್ನ ಮೇಲೆ ಬೀಳುತ್ತಿದ್ದ ಏಟಿನ ಪ್ರಹಾರಕ್ಕೆ ರಕ್ತ ಸುರಿಯುತ್ತಿದ್ದರೂ ವಿಚಲಿತನಾಗದ ಆ ಬಾಲಕ ಮಾತ್ರ ‘ಭಾರತ್ ಮಾತಾ ಕೀ ಜೈ’ ಎಂದು ಅಬ್ಬರಿಸುತ್ತಲೇ ಇದ್ದ.
ಆ ಬಾಲಕನೇ ಕ್ರಾಂತಿಕಾರಿ ಚಂದ್ರಶೇಖರ ಆಜಾದ್. 1906ರ ಜುಲೈ 23ರಂದು ಮಧ್ಯಪ್ರದೇಶದ ಜಬುವಾ-ತೆಹಸೀಲ್ ಜಿಲ್ಲೆಯ ಭವ್ರಾ ಎಂಬ ಹಳ್ಳಿಯಲ್ಲಿ ಪಂಡಿತ್ ಸೀತಾರಾಂ ತಿವಾರಿ ಮತ್ತು ಜಾಗ್ರಣೀ ದೇವಿಯವರ ಪುತ್ರನಾಗಿ ಜನಿಸಿದ ಚಂದ್ರಶೇಖರ ತಿವಾರಿಯ ಜೀವಿತದ ಧ್ಯೇಯವೇ ಆಜಾದಿ ಆಗಿತ್ತು. ಎಂದೇ ಮುಂದೆ ಚಂದ್ರಶೇಖರ ತಿವಾರಿ, ಆಜಾದ್ ಆಗಿ ಬದಲಾದರು.
‘ಆಜಾದ್ ಹೀ ರಹೇ ಹೈ… ಆಜಾದ್ ಹೀ ರಹೇಂಗೇ…’ ನಾವು ಸ್ವತಂತ್ರರು… ಸ್ವತಂತ್ರರಾಗಿಯೇ ಬದುಕುತ್ತೇವೆ! ಎಂದು ಸಾರಿದ ಧೀಮಂತ ಚಂದ್ರಶೇಖರ ಆಜಾದ್. ಅವರು ಕ್ರಾಂತಿಕಾರೀ ಸಂಘಟನೆ ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್​ನ (ಎಚ್​ಎಸ್​ಆರ್​ಎ) ಕೇಂದ್ರಬಿಂದುವಾಗಿದ್ದರು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರ ಒಡನಾಟದೊಂದಿಗೆ ಸಂಘಟನೆಯಲ್ಲಿ ಹೆಚ್ಚು ಕಾರ್ಯಪ್ರವೃತ್ತರಾದರು. ರಹಸ್ಯವಾಗಿ ಆ ಸಂಘಟನೆಯ ಕಾರ್ಯಾಚರಣೆಗಳು ನಡೆಯುತ್ತಿದ್ದವು. ಅವರು ಅತ್ಯಂತ ಅವಶ್ಯಕವಾಗಿದ್ದ ಬಾಂಬ್ ತಯಾರಿಕೆಗಾಗಿ ಹಣ ಸಂಗ್ರಹಣೆಯಲ್ಲಿ ತೊಡಗಿದ್ದರು. ಭಾರತದಲ್ಲಿ ಡೊಮೀನಿಯನ್ ಸ್ಟೇಟ್ಸ್ ಘೊಷಣೆಗಾಗಿ ಬ್ರಿಟಿಷರು ವೈಸ್​ರಾಯ್ನನ್ನು ಭಾರತಕ್ಕೆ ಕಳುಹಿಸಿದ್ದರು. ಅವನು ಲಾಹೋರ್ ಅಧಿವೇಶನದಲ್ಲಿ ಪಾಲ್ಗೊಂಡು ಘೊಷಣೆ ನೀಡುವವನಿದ್ದ. ವೈಸ್​ರಾಯ್ ಪಯಣಿಸುತ್ತಿದ್ದ ರೈಲು ನಿಜಾಮುದ್ದೀನ್​ನಿಂದ ಹೊರಟಿತ್ತು. ಸರಿರಾತ್ರಿ ರೈಲು ಹಳಿಗಳ ಮೇಲೆ ವೈಸ್​ರಾಯ್ ಕುಳಿತಿದ್ದ ಬೋಗಿಗೆ ಬಾಂಬ್ ಸಿಡಿಸಲು ಆಜಾದ್ ಮತ್ತು ಅವರ ಸಹಚರರು ಗುರಿಯಿಟ್ಟಿದ್ದರು. ಆದರೆ ಇರುಳಲ್ಲಿ ಸರಿಯಾಗಿ ರೈಲು ಗೋಚರಿಸದ ಕಾರಣ ಅವನ ಪಕ್ಕದ ಬೋಗಿ ಸಿಡಿಯಿತು.
ವೈಸ್​ರಾಯ ಅಪಾಯದಿಂದ ಪಾರಾದ. ನಿರಾಶರಾದ ಆಜಾದ್ ಮತ್ತು ಸ್ನೇಹಿತರು ಮುಂದಿನ ಯೋಜನೆಗೆ ಸಿದ್ಧರಾದರು. ‘ಸ್ವಾತಂತ್ರಕ್ಕಾಗಿ ನಮ್ಮ ಬಲಿದಾನದ ಅಗತ್ಯವಿದೆ’ ಎಂದು ಬಾಂಬ್​ಗಳ ಸಿದ್ಧಾಂತ ಎನ್ನುವ ಬರಹದ ಮೂಲಕ ಕ್ರಾಂತಿಕಾರಿಗಳು ಸಾರಿದರು. ಬ್ರಿಟಿಷರು ಅವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟರು. ಅಷ್ಟರಲ್ಲಾಗಲೇ ಭಗತ್ ಸಿಂಗ್ ಮತ್ತು ಸಂಗಡಿಗರು ಬ್ರಿಟಿಷರ ಸೆರೆಯಾಗಿದ್ದರು. ಆಜಾದರಿಗೆ ಸಂಘಟನೆಯ ಜವಾಬ್ದಾರಿ ಹೆಚ್ಚಾಗಿತ್ತು. ಅವರನ್ನು ಜೀವಂತವಾಗಿ ಸೆರೆಹಿಡಿಯಬೇಕು, ಸಾಧ್ಯವಾಗದಿದ್ದರೆ ಕೊಲ್ಲಬೇಕು ಎಂದು ಬ್ರಿಟಿಷ್ ಸರ್ಕಾರ ನಿರ್ಧರಿಸಿತ್ತು.
1931ರ ಫೆ. 27 ರಂದು ಅಲಹಾಬಾದಿನ ರ್ಪಾನಲ್ಲಿ ಯಶಪಾಲ್ ಮತ್ತು ಸುರೇಂದ್ರ ಪಾಂಡೆ ಅವರೊಂದಿಗೆ ರಹಸ್ಯ ಸಮಾಲೋಚನೆ ನಡೆಯುತ್ತಿತ್ತು. ಯೋಜನೆಯ ನಿರ್ಧಾರದ ನಂತರ ಯಶಪಾಲ್ ಮತ್ತು ಸುರೇಂದ್ರ ಪಾಂಡೆ ಹೊರಡಲನುವಾದರು. ಆಜಾದ್ ಸ್ನೇಹಿತ ಸುಖದೇವ ರಾಜ್ ಅಲ್ಲಿಗೆ ಬಂದ. ಅವರ ಪರಿಚಯದ ವೀರ ಭದ್ರ ತಿವಾರಿ ಆಜಾದ್​ನ ಇರುವಿಕೆಯ ಕುರಿತು ಪೋಲಿಸರಿಗೆ ಮಾಹಿತಿ ನೀಡಿದ. ಪೋಲೀಸರು ಪಾರ್ಕನ್ನು ಸುತ್ತುವರಿದರು. ಜಾಲದ ಸುಳಿವು ಸಿಕ್ಕ ಕೂಡಲೇ ತನ್ನ ಸ್ನೇಹಿತ ಸುಖದೇವ ರಾಜ್​ನನ್ನು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ತಿಳಿಸಿದ ಚಂದ್ರಶೇಖರ್ ಆಜಾದ್ ತನ್ನ ಬಳಿಯಿದ್ದ ಎರಡೂ ರಿವಾಲ್ವರ್​ಗಳನ್ನು ಎರಡೂ ಕೈಯಲ್ಲಿ ಹಿಡಿದು ಒಂದೇ ಸಮನೆ ಪೋಲೀಸರ ಮೇಲೆ ಗುಂಡಿನ ಮಳೆಗರೆದ. ಆದರೆ ಕೆಲವೇ ಕ್ಷಣಗಳಲ್ಲಿ ಪೋಲಿಸರು ಹತ್ತಿರಕ್ಕೆ ಬರಲಾರಂಭಿಸಿದರು. ಆ ಕ್ಷಣದಲ್ಲಿ ಆಜಾದ್, ತನ್ನ ರಿವಾಲ್ವರಿನಲ್ಲಿದ್ದ ಕೊನೆಯ ಗುಂಡನ್ನು ಸರಿಯಾಗಿ ತನ್ನ ಹಣೆಗೇ ಹಾರಿಸಿಕೊಂಡ. ರಕ್ತದೋಕುಳಿ ಹರಿಯಿತು. ಉಸಿರು ನಿಂತರೂ ಆಜಾದ್ ಮುಖದ ಮಂದಹಾಸ ಹಾಗೆಯೇ ಇತ್ತು.
ವಿಚಾರ ತಿಳಿದು ಸಾವಿರಾರು ಸಂಖ್ಯೆಯಲ್ಲಿ ರ್ಪಾನ ಬಳಿ ಜನ ಸೇರಿದರು. ಬ್ರಿಟಿಷ್ ಪೋಲೀಸರ ಆಜ್ಞೆಯಿಂದಾಗಿ ಅಂತಿಮ ದರ್ಶನ ಪಡೆಯಲು ಯಾರಿಗೂ ಆಗಲಿಲ್ಲ. ಗಂಗೆಯ ದಡದಲ್ಲಿ ಆಜಾದ್ ಅಂತ್ಯಕ್ರಿಯೆ ರಹಸ್ಯವಾಗಿ ನಡೆಯಿತು. ಅವರ ಬಲಿದಾನದಿಂದ ಆಲ್ಪೆ›ಡ್ ಪಾರ್ಕ್ ಆಜಾದ್ ಉದ್ಯಾನವನ ಎಂದು ಹೆಸರಾಯಿತು.
‘ಕೊನೆಯ ಉಸಿರಿನವರೆಗೂ ಬ್ರಿಟಿಷರು ಈ ಕೈಗಳಿಗೆ ಕೋಳ ತೊಡಿಸಲಾರರು. ನನ್ನ ಕೈಯಲ್ಲಿ ಎಂಟು ಗುಂಡುಗಳಿರುವ ರಿವಾಲ್ವರ್ ಮತ್ತು ಇನ್ನೆಂಟು ಗುಂಡುಗಳು ಸದಾ ಇರಬೇಕು. ಸೆರೆಯಾಗುವ ಬದಲು ಶತ್ರುಗಳನ್ನು ಸುಟ್ಟು ಕೊನೆಯದೊಂದನ್ನು ನಾನೇ ಹೊಡೆದುಕೊಂಡು ಸಾಯುವೆ ಎಂದು ಪ್ರತಿಜ್ಞೆ ಮಾಡಿದ್ದ ಆಜಾದ್ ನುಡಿದಂತೆ ನಡೆದ ಮಹಾನ್ ಬಲಿದಾನಿ.
(ಲೇಖಕರು ಉಪನ್ಯಾಸಕಿ)
ಮುಡಾ ಹಗರಣಕ್ಕೆ ರಾಜ್ಯಪಾಲರ ಎಂಟ್ರಿ: ವರದಿ ಕೇಳಿದ ಥಾವರ್‌ ಚಂದ್‌ ಗೆಹ್ಲೋಟ್‌!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 4 =
Remember me
