ಹೆಣ್ಣಿನ ಸೌಂದರ್ಯದ ಗಣಿ ‘ಸೀರೆ’. ನಿರಾಭರಣ ಸುಂದರಿಯರ ಅಂದವನ್ನೂ ವೃದ್ಧಿಸುವ ಶಕ್ತಿ ಈ ಸೀರೆಗಿದೆ. ನಮ್ಮ ದೇಶದ ಸಾಂಪ್ರದಾಯಿಕ ಉಡುಗೆಯಾದರೂ ಎಲ್ಲ ಕಾಲಕ್ಕೂ ತನ್ನದೇ ಆದ ವಿಶಿಷ್ಟ ಛಾಪು ಕಾಪಾಡಿಕೊಳ್ಳುತ್ತಾ ಬಂದಿದೆ. ಥಳಕುಬಳುಕಿನ ಲೋಕದಲ್ಲೂ ಫ್ಯಾಶನ್ ಪ್ರಿಯರ ಮನಸೆಳೆಯುತ್ತಿದೆ. ಸೀರೆ ತೊಡದ ನಾರಿ, ಸೀರೆ ಇಲ್ಲದ ಮನೆಗಳನ್ನ ಹುಡುಕುವುದು ದುಸ್ಸಾಹಸವೇ ಸರಿ. ಅಪರೂಪಕ್ಕೆ ಸೀರೆ ತೊಡುವವರ ಬಳಿಯೂ ಸಾಕಷ್ಟು ವೆರೈಟಿಯ ಸೀರೆಗಳ ರಾಶಿ ಇದ್ದೇ ಇರುತ್ತೆ. ಇನ್ನು ಹೆಂಗೆಳೆಯರ ಫೇವರಿಟ್ ಡ್ರೆಸ್​ನ ಜಾಗದಲ್ಲೂ ಸೀರೆಯದ್ದೇ ಅಗ್ರಸ್ಥಾನ!| ಅರುಣ ಎಂ.ಜಿ.
ಭಾರತೀಯ ನಾರಿ ಅಂದಾಕ್ಷಣ ಕಣ್ಮುಂದೆ ಬರುವ ಚಿತ್ರ ಸೀರೆಯುಟ್ಟ ಸ್ತ್ರೀ. ಹಿಂದು ದೇವತೆಗಳ ಉಡುಪು ಕೂಡ ಸೀರೆಯೇ. ನಮ್ಮ ಸಂಸ್ಕೃತಿಯ ಜೀವಾಳವೇ ಸೀರೆ. ಬಹುತೇಕರಿಗೆ ಅಮ್ಮ.. ಅಜ್ಜಿ.. ಅಂದಾಕ್ಷಣ ಸೀರೆಯುಟ್ಟ ಮುಖ ನೆನಪಾಗುತ್ತೆ. ಅಷ್ಟರಮಟ್ಟಿಗೆ ನಮ್ಮ ಬದುಕಿನಲ್ಲಿ ಈ ಸೀರೆ ಹಾಸುಹೊಕ್ಕಾಗಿದೆ. ತಾನು ಉಡುವ ಮೊದಲ ಸೀರೆ ತಾಯಿ ಕೊಡಿಸಿದ್ದೇ ಆಗಬೇಕು ಇಲ್ಲವೇ ಗಂಡ ಇಷ್ಟಪಟ್ಟು ತಂದದ್ದೇ ಆಗಬೇಕು ಎಂಬ ಲೆಕ್ಕಾಚಾರ ಅದೆಷೊ್ಟೕ ಹೆಣ್ಣುಮಕ್ಕಳ ಮನದಲ್ಲಿ ಅಡಗಿರುತ್ತೆ. ಭಾವನಾತ್ಮಕ ನೆಲೆಗಟ್ಟಿನಲ್ಲೂ ಸೀರೆ ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ಅಷ್ಟೆ ಅಲ್ಲ, ಬಹುತೇಕ ಯುವಕ/ಯುವತಿಯರು ತಮ್ಮ ಮೊದಲ ತಿಂಗಳ ಸಂಬಳದಲ್ಲಿ ಅಮ್ಮನಿಗೊಂದು ಚಂದದ ಸೀರೆ ಕೊಡಿಸುವುದು ರೂಢಿ.
ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಅನಾದಿ ಕಾಲದಿಂದಲೂ ಅಂದರೆ ನಾಲ್ಕು ಸಾವಿರ ವರ್ಷಗಳಿಂದಲೂ ಸೀರೆಯೇ ಮಹಿಳೆಯರ ಪ್ರಮುಖ ಉಡುಗೆ. ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಭಾವಕ್ಕೆ ಒಳಪಟ್ಟರೂ ನಾರಿಯರಿಗೆ ಸೀರೆ ಮೇಲಿನ ಗೌರವ, ವ್ಯಾಮೋಹ, ಆಸೆ ಕಿಂಚಿತ್ತೂ ಕಡಿಮೆ ಆಗಿಲ್ಲ ಎಂದರೆ ತಪ್ಪಾಗಲಾರದು. ಸೀರೆಯಲ್ಲೂ ಹೊಸತನದ ರಹದಾರಿ ತೆರೆಯುತ್ತಲೇ ಇದ್ದು, ಆಯ್ಕೆಯ ವಿಸ್ತಾರ ಎಲ್ಲೆ ಮೀರಿದೆ. ಪಾಶ್ಚಿಮಾತ್ಯ ಮಹಿಳೆಯರಿಗೂ ಸೀರೆ ಮೇಲೆ ಕಣ್ಣಿದೆ. ಅಷ್ಟರಮಟ್ಟಿಗೆ ಹವಾ ಸೃಷ್ಟಿಸಿದೆ ಸೀರೆ. ದೇಶದೆಲ್ಲೆಡೆ ದಿನನಿತ್ಯದ ಉಡುಪಾಗಿ ಸೀರೆ ಬಳಕೆಯಲ್ಲಿದ್ದರೂ ಅದನ್ನು ಉಡುವ ಶೈಲಿ ಮಾತ್ರ ವಿಭಿನ್ನ. ಗುಜರಾತಿ ಶೈಲಿ, ಬೆಂಗಾಲಿ, ಆಂಧ್ರ, ಕರ್ನಾಟಕದ ಕೂರ್ಗಿ, ಮರಾಠಿ, ಕೇರಳ… ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತೆ. ಹಾಗೆ ಸಾಕಷ್ಟು ವೆರೈಟಿಯ ಸೀರೆಗಳೂ ಇವೆ. ದೇವನೊಬ್ಬ ನಾಮ ಹಲವು ಎಂಬಂತೆ ಸೀರೆಯೊಂದೇ ಆದರೂ ನಾಮ ಹಲವು. ಉಡುಪಿ ಸೀರೆ, ಮೊಳಕಾಲ್ಮೂರು ಸೀರೆ, ಕಾಂಜೀವರಂ, ಬನಾರಸ್, ಮೈಸೂರ್ ಸಿಲ್ಕ್, ಇಳಕಲ್, ಧಮಾವರಂ, ಕೇರಳ ಕಾಟನ್, ಗಾರ್ಡನ್ ಸಿಲ್ಕ್, ಪ್ಲೇನ್, ಸಿಂಥೆಟಿಕ್, ಡಿಸೈನರ್, ಪಾಲಿಸ್ಟರ್, ಲೈಟ್​ವೇಟ್, ಡಬಲ್​ಷೇಡ್… ಅಬ್ಬಬ್ಬಾ ಲೆಕ್ಕವಿಲ್ಲದಷ್ಟು ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪ್ರತಿ ಬ್ರಾಂಡ್​ನ ಸೀರೆಗೂ ಅದರದ್ದೇ ಗತ್ತು-ಬೆಲೆ-ಕಂಫರ್ಟ್​ಲುಕ್ ಇದ್ದೇ ಇದೆ. ಆ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮೈಸೂರು ಸಿಲ್ಕ್ ಸೀರೆಮೈಸೂರು ಸಿಲ್ಕ್ ಸೀರೆ ಅಂದ್ರೆ ಸಾಕು ಬಟ್ಟಲಗಲ ಕಣ್ಣರಳಿಸುತ್ತಾರೆ ಹೆಂಗೆಳೆಯರು. ನಮ್ಮ ಭಾಗದ ನಾರಿಯರ ಪಾಲಿಗೆ ಈ ಸೀರೆ ಭವ್ಯ ಪಾರಂಪರಿಕ ಉಡುಗೆಯ ಪ್ರತೀಕ. ಇದರ ಬೆಲೆ ಜನಸಾಮಾನ್ಯರ ಕೈಗೆಟಕುವುದಿಲ್ಲವಾದರೂ ಜೀವನದಲ್ಲಿ ಎಂದಾದರೊಮ್ಮೆ ಮೈಸೂರು ಸಿಲ್ಕ್ ಸೀರೆ ತೊಡಬೇಕು ಎಂದು ಅದ್ಹೆಷ್ಟೋ ಹೆಣ್ಮಕ್ಕಳು ಮನದಲ್ಲೇ ಲೆಕ್ಕಾಚಾರಹಾಕಿಕೊಳ್ಳುವುದಂತೂ ದಿಟ. ಆರ್ಥಿಕ ಸ್ಥಿತಿವಂತರ ಬಹುನೆಚ್ಚಿನ ಸೀರೆ ಸ್ಥಾನದಲ್ಲಿ ಮೈಸೂರು ಸಿಲ್ಕ್​ನದ್ದೇ ಹವಾ. ರಾಜ್ಯ, ದೇಶ ಮಾತ್ರವಲ್ಲ, ವಿದೇಶದಲ್ಲೂ ಈ ಸೀರೆ ಫೇಮಸ್. ನುಣುಪಾದ, ಶುದ್ಧ ರೇಷ್ಮೆ, ಕಡಿಮೆ ತೂಕ, ಎಂದಿಗೂ ಮಾಸದ ಜರಿಯುಳ್ಳ, ಈ ಸೀರೆಗಳ ಗುಣಮಟ್ಟಕ್ಕೆ ಸರಿಸಾಟಿ ಇಲ್ಲ. ಈ ಸೀರೆ ಉಟ್ಟರಂತೂ ತುಂಬಾ ಕಂಫರ್ಟ್ ಫೀಲ್ ಸಿಗುತ್ತೆ. ಅಂದಹಾಗೆ ಇದರ ಜನ್ಮಸ್ಥಳ ಮೈಸೂರು. ಶುದ್ಧ ರೇಷ್ಮೆ ನೂಲು ತೆಗೆಯುವ ಮತ್ತು ವಿವಿಧ ಬಣ್ಣ ಹಾಗೂ ವಿನ್ಯಾಸಗಳಲ್ಲಿ ಶುದ್ಧ ರೇಷ್ಮೆ ಬಟ್ಟೆ ನೇಯುತ್ತ ಕರ್ನಾಟಕದ ಪಾರಂಪರಿಕ ವೈಭವವನ್ನ ಪ್ರತಿನಿಧಿಸುತ್ತಿದೆ ಕೆಎಸ್​ಐಸಿ ಸಂಸ್ಥೆ(ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ).
ಈ ಸೀರೆಯ ಮೈಯ ಬಣ್ಣ ಒಂದೇ ಬಣ್ಣದ್ದಾಗಿದ್ದು, ಬಾರ್ಡರ್ ಮತ್ತು ಸೆರಗು ಬೇರೆ ಬಣ್ಣ ಹೊಂದಿದ್ದು, ಹೊಂಬಣ್ಣದ ಜರಿ ಉಳ್ಳಾದ್ದಾಗಿದೆ. ಹಸಿರು, ಕೆಂಪು, ಕಿತ್ತಳೆ, ಲಿಲಿಯಾಕ್, ಕಂದು, ಎಲಿಫೆಂಟ್ ಗ್ರೇ ಸೇರಿದಂತೆ ಹಲವು ಬಣ್ಣದ ಸೀರೆಗಳು ಸಾಂಪ್ರದಾಯಿಕ ಸೊಬಗಿನ ಜತೆಗೆ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ. ಕಸೂತಿ ಚಿತ್ತಾರ, ದೊಡ್ಡ ಬುಟ್ಟಾ ಪಲ್ಲು ಸೀರೆ, ಶ್ರೀಮಂತ ಪಲ್ಲು ಸೀರೆ, ಜವಾರ್ ಅಂಚಿನ ಸೀರೆ, ಸಣ್ಣ ಮಾವಿನ ಆಕಾರದ ಸೀರೆ, ಜರಿ ಪ್ರಿಂಟೆಡ್ ಸೀರೆ, ಟಿಶ್ಯೂ ಸೀರೆ, ಸಾಂಪ್ರದಾಯಿಕ ಜರಿ ಸೀರೆ, ಬಾಂಧನಿ ವಿನ್ಯಾಸದ ಸೀರೆಗೆ ಡಿಮಾಂಡ್ ಹೆಚ್ಚು. ಇದರ ಮತ್ತೊಂದು ವಿಶೇಷತೆ ಅಂದ್ರೆ ಪ್ರತಿ ಸೀರೆಯ ಅಂಚಿನಲ್ಲೂ ಸೀರೆ ತಯಾರಾದ ಕಾಲ, ಸೀರೆ ನೇಯ್ಗೆಗೆ ತೆಗೆದುಕೊಂಡ ಸಮಯದ ಮಾಹಿತಿ ಇರುತ್ತೆ. ಶುದ್ಧ ರೇಷ್ಮೆ ಮೃದುತ್ವ, ದೀರ್ಘಕಾಲಿಕ ಬಾಳಿಕೆಯ ಈ ಸೀರೆಗೆ ಮನಸೋತ ನಾರಿಯರು ತುಂಬಾ ಮಹತ್ವದ ಶುಭ ಕಾರ್ಯಕ್ರಮದಲ್ಲಿ ಉಡಲೆಂದೇ ಖರೀದಿಸಿ ಬೀರುವಿನಲ್ಲೂ ಜೋಪಾನ ಮಾಡುತ್ತಾರೆ. ಅಷ್ಟೇ ಅಲ್ಲ, ತಾನುಟ್ಟ ಮೈಸೂರು ಸಿಲ್ಕ್ ಸೀರೆಯನ್ನ ಮಗಳು-ಮೊಮ್ಮಗಳಿಗೆ ಪಾರಂಪರಿಕ ಸೀರೆ ಎಂದು ಹೆಮ್ಮೆಯಿಂದ ಕೊಡುವ ಪರಿಪಾಠ ಹಸಿರಾಗಿದೆ. ಅಜ್ಜಿಅಮ್ಮನ ಕಾಲಕ್ಕೂ ಆ ಸೀರೆಯ ಬಣ್ಣ ಮಾಸುವುದಿಲ್ಲ, ಹೊಳೆಯುತ್ತಲೇ ಇರುತ್ತೆ.
ಇಳಕಲ್ ಸೀರೆ ಉಟ್ಕೊಂಡು…ಇಳಕಲ್ ಸೀರೆ ಉಟ್ಕೊಂಡು ಮೊಳಕಾಲ್​ಗಂಟ ಎತ್ಕೊಂಡು… ಈ ಹಾಡು ಕೇಳಿದಾಕ್ಷಣ ನೆನಪಿಗೆ ಬರುತ್ತೆ ಇಳಕಲ್ ಸೀರೆ. ಇದು ಅಪ್ಪಟ ದೇಸಿ ಸೀರೆ. ಇದರ ಉಗಮ ಸ್ಥಳ ಬಾಗಲಕೋಟೆಜಿಲ್ಲೆ ಇಳಕಲ್ ಗ್ರಾಮ. ಹಾಗಾಗಿ ಇಳಕಲ್ ಹೆಸರು ಬಂದಿದೆ. ಸಾಂಪ್ರದಾಯಿಕ ಧಿರಿಸು ಎಂದೇ ಪ್ರಸಿದ್ಧವಾದ ಈ ಸೀರೆ ಅಜ್ಜಿಯಂದಿರು ಮಾತ್ರವಲ್ಲ, ಹೆಂಗೆಳೆಯರಿಗೂ ಇಷ್ಟ. ಸೀರೆಯ ಅಂಚು ಹಾಗೂ ಸೆರಗಿನ ವಿಶಿಷ್ಟ ವಿನ್ಯಾಸವೇ ಇಳಕಲ್ ಸೀರೆಯ ಜೀವಾಳ. ಬಹುಕಾಲ ಬಾಳಿಕೆ ಬರುತ್ತದೆ. ಉಟ್ಟರೆ ಮೈಗೆ ಬಲುಹಿತ. ಸೀರೆಯ ಅಂಚು 4ರಿಂದ 6 ಇಂಚಿನಷ್ಟಿರುತ್ತದೆ. ಕೈಮಗ್ಗದಲ್ಲಿ ನೇಯ್ದ ಇಳಕಲ್ ಸೀರೆ ಬೆಲೆ ಯಾಂತ್ರೀಕೃತ ಮಗ್ಗದಲ್ಲಿ ನೇಯ್ದ ಸೀರೆಗಿಂತ ದುಬಾರಿ ಬೆಲೆ. ರೇಷ್ಮೆ, ಸಿಂಥೆಟಿಕ್ ಹಾಗೂ ಹತ್ತಿ ಮಿಶ್ರಣದೊಂದಿಗೆ ಸೀರೆ ಸಿದ್ಧಗೊಳ್ಳುತ್ತದೆ. ಮೊದಲು ಸೀಮಿತ ಮಾರುಕಟ್ಟೆ ಇತ್ತು. ಇದೀಗ ಆನ್​ಲೈನ್ ಮಾರುಕಟ್ಟೆಯಲ್ಲೂ ಜಾಗ ಪಡೆದಿದೆ. ಕಾಲೇಜು-ಆಫೀಸ್​ಗಳಲ್ಲಿ ಎಥ್ನಿಕ್ ಡೇ ಇದ್ದರಂತೂ ಇಂತಹ ಸೀರೆಯುಟ್ಟು ಹೆಣ್ಮಕ್ಕಳು ಮಿಂಚುವ ಪರಿಪಾಠ ಬೆಳೆದಿದೆ. ಚಂದದೊಂದು ಸೀರೆ ಕೊಂಡು ಅದಕ್ಕೆ ಮ್ಯಾಚಿಂಗ್ ಅನ್ನಿಸುವ ಗ್ರ್ಯಾಂಡ್ ಲುಕ್ ಕೊಡುವ ಬ್ಲೌಸ್ ಧರಿಸುವುದು ಈಗಿನ ಟ್ರೆಂಡ್.
ಉಡುಪಿ ಸೀರೆಮೇಲ್ನೋಟಕ್ಕೆ ಇಳಕಲ್, ಧಾರವಾಡದ ಸೀರೆಯಂತೆ ಕಂಡರೂ ಉಡುಪಿ ಸೀರೆಯ ಬಾರ್ಡರ್- ಚಿತ್ತಾರ ವಿಭಿನ್ನವಾಗಿದೆ. ಒಂದು ಕಾಲದಲ್ಲಿ ಹೆಂಗಳೆಯರ ಅಚ್ಚುಮೆಚ್ಚಿನ ಬಟ್ಟೆಯಾಗಿದ್ದ ಉಡುಪಿ ಸೀರೆ ತದನಂತರ ನೇಪಥ್ಯಕ್ಕೆ ಸೇರಿತ್ತಾದರೂ ಇದೀಗ ಮತ್ತೆ ತೆರೆಗೆ ಬಂದಿದೆ. ಸೆರಗು ಒಂದಷ್ಟು ಗಾಢ ಬಣ್ಣ, ಅಂಚು ತಿಳಿ ಬಣ್ಣ, ಶುದ್ಧ ಕೈಮಗ್ಗದ ಹತ್ತಿ ನೂಲುಗಳಿಂದ ತಯಾರಾದ ಉತ್ಪನ್ನ ಈ ಸೀರೆ. ಉಟ್ಟರೆ ಆರಾಮದಾಯಕ, ಸರಳ. ಮಳೆಗಾಲದಲ್ಲಿ ಬೆಚ್ಚಗಿನ, ಬೇಸಿಗೆಯಲ್ಲಿ ಹಿತವಾದ ಫೀಲ್ ಕೊಡುತ್ತೆ ಈ ಸೀರೆ. ಇದರ ಬೆಲೆ ದುಬಾರಿಯಲ್ಲ. ಸುಮಾರು 700ರಿಂದ ಎರಡೂವರೆ ಸಾವಿರ ರೂ.ವರೆಗೂ ಇರುತ್ತೆ. ಕರಾವಳಿಯಲ್ಲಿ ಹುಟ್ಟಿದ ಈ ಸೀರೆಗಳು ನೇಕಾರರ ಸಹಕಾರ ಸಂಘಗಳಲ್ಲಿ ತಯಾರಾಗುವುದು ಮತ್ತೊಂದು ವಿಶೇಷ. ಕಾಲೇಜು ಯುವತಿಯರಿಗೂ ಇಷ್ಟವಾಗುವಂತೆ ಹೊಸಹೊಸ ಡಿಸೈನ್​ನಲ್ಲೂ ಈ ಸೀರೆ ಬಂದಿದೆ. ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ, ಮಮತಾ ಬ್ಯಾನರ್ಜಿ ಅವರೂ ಉಡುಪಿ ಸೀರೆಗೆ ಮನಸೋತಿದ್ದರು. ಇತ್ತೀಚಿಗೆ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಸೀರೆಯನ್ನು ರಾಷ್ಟ್ರಮಟ್ಟದ ಮಹಿಳಾ ರಾಜಕಾರಣಿಗಳಿಗೆ ಕೊಟ್ಟಿದ್ದನ್ನು ಸ್ಮರಿಸಬಹುದು.
ಮೊಳಕಾಲ್ಮೂರುಕನ್ನಡ ನಾಡಿನ ಮತ್ತೊಂದು ಪ್ರಸಿದ್ಧ ಸೀರೆ ಬ್ರಾಂಡ್ ಎಂದರೆ ಮೊಳಕಾಲ್ಮೂರು ಸೀರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಈ ಸೀರೆಯ ತವರೂರು. ಈ ಸೀರೆಯಲ್ಲಿ ಬಾರ್ಡರ್​ನದ್ದೇ ಆಕರ್ಷಕ ಲುಕ್. ಪ್ರಾಂತ್ಯದ ಹೆಸರಿನಿಂದಲೇ ಗುರುತಿಸಿಕೊಂಡಿದೆ. ಅಳಿವಿನಂಚಿನಲ್ಲಿರುವ ಈ ಸೀರೆಗೆ ಕಾಯಕಲ್ಪ ಕೊಡುವ ಕೆಲಸ ಜೋರಗಿಯೇ ನಡೆಯುತ್ತಿದೆ.
ಕಾಂಚೀಪುರಂಕಾಂಚೀಪುರಂ ಅಥವಾ ಕಾಂಜೀವರಂ ರೇಷ್ಮೆ ಸೀರೆಗೆ ತಮಿಳುನಾಡು ಮಾತ್ರವಲ್ಲ, ಕರ್ನಾಟಕದಲ್ಲೂ ಭಾರಿ ಬೇಡಿಕೆ. ಮದುಮಗಳಿಗೆ ಸೀರೆ ಖರೀದಿಸಬೇಕು ಅಂದ್ರೆ ಒಮ್ಮೆ ಕಾಂಚೀಪುರಂಗೆ ಹೋಗ್ಬೇಕು ಎಂಬ ಮಾತು ಸರ್ವೆ ಸಾಮಾನ್ಯ. ಅಷ್ಟರಮಟ್ಟಿಗೆ ಫೇಮಸ್ ಆಗಿದೆ ಕಾಂಚೀಪುರಂ ರೇಷ್ಮೆ ಸೀರೆಗಳು. ಅನೇಕ ಬಣ್ಣಗಳಲ್ಲಿ ಕಾಂಚೀಪುರಂ ರೇಷ್ಮೆಸೀರೆ ಲಭ್ಯವಿದ್ದು, ಪಲ್ಲು ಮತ್ತು ಬಾರ್ಡರ್​ಗಳು ಅತ್ಯಾಕರ್ಶಕ. ಇದರಲ್ಲಿ ಡಿಸೈನರ್ ಸೀರೆಗಳೂ ಲಭ್ಯ. ದಕ್ಷಿಣ ಭಾರತದ ದೇವಾಲಯಗಳಲ್ಲಿ ಕಂಡುಬರುವ ಸಂಕೀರ್ಣ ಕೆತ್ತನೆಗಳ ಚಿತ್ರ, ಮಹಾಕಾವ್ಯಗಳ ದೃಶ್ಯವುಳ್ಳ ವಿನ್ಯಾಸದ ಸೀರೆಗಳೂ ಇವೆ. ಇದರ ಬೆಲೆ ಸಾವಿರಾರು ರೂ.ನಿಂದ ಲಕ್ಷ ರೂ. ದಾಟುತ್ತದೆ. ಮದುವೆ ಸೇರಿದಂತೆ ಶುಭ ಸಮಾರಂಭದಲ್ಲಿ ಹೆಚ್ಚು ಬಳಕೆಯಲ್ಲಿರುವ ಸೀರೆ ಇದು.
ಕಾಟನ್ ಸೀರೆಕಾಟನ್ ಸೀರೆ ಅಜ್ಜಿಗೆಷ್ಟೆ ಸೀಮಿತ ಎಂಬ ಮಾತು ಈಗಿಲ್ಲ. ಎಲ್ಲ ವಯೋಮಾನದವರಿಗೂ ಇಷ್ಟವಾಗುವ ವಿಭಿನ್ನ ವಿನ್ಯಾಸದಲ್ಲಿ ಕಾಟನ್ ಸೀರೆಗಳು ಮೂಡಿಬಂದಿವೆ. ಮನೆಯಲ್ಲಿದ್ದಾಗ, ಆಫೀಸ್​ಗೆ, ಕಾಲೇಜಿಗೆ ಹೋಗುವಾಗ ಸಿಂಪಲ್ ಕಾಟನ್ ಸೀರೆ ಸಾಕು. ಮದುವೆ ಮತ್ತಿತರ ಶುಭ ಸಮಾರಂಭಕ್ಕೆ ಗ್ರಾ್ಯಂಡ್​ಲುಕ್​ವುಳ್ಳ ಕಾಟನ್ ಸೀರೆಗೆ ಆದ್ಯತೆ ಹೆಚ್ಚು. ಇನ್ನು ಬೇಸಿಗೆ ಶುರುವಾಗುತ್ತಿದ್ದಂತೆ ಕಾಟನ್ ಸೀರೆಗೆ ಎಲ್ಲಿಲ್ಲದ ಬೇಡಿಕೆ. ತಾಂತ್, ಒರಿಸ್ಸಾದ ಸಂಬಾಲ್ ಪುರಿ, ಬಾರ್ಡರ್​ನಲ್ಲಿ ದೇಗುಲಗಳ ಚಿತ್ರಣವುಳ್ಳ ಕೋಟ್ಕಿ ಕಾಟನ್ ಸೀರೆಗೆ ಡಿಮಾಂಡ್ ಇದೆ. ಈ ಎರಡೂ ಸೀರೆಗಳು ಸೆರಗಿನ ವಿನ್ಯಾಸದಿಂದಲೇ ಹೆಚ್ಚು ಆಕರ್ಷಕ. ಮಡಚಿದರೆ ಕರ್ಚಿಫ್​ನಂತೆ ಕಾಣುವ ಕಲ್ಕತ್ತಾ ಸೀರೆ, ತುಸು ಹೆಚ್ಚು ತೆಳುವಾದ ಚಾಂದೆರಿ ಸೀರೆ, ಗ್ರಾ್ಯಂಡ್ ಲುಕ್ ಕೊಡುವ ಥ್ರೆಡ್ ವರ್ಕ್​ವುಳ್ಳ, ಎಂಬ್ರಾಯಿಡರಿ ಡಿಸೈನ್​ವುಳ್ಳ ಲಕ್ನೋವಿ ಕಾಟನ್ ಸೀರೆ.. ಹೀಗೆ ತರಹೇವಾರಿ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸೂಪರ್ ನೆಟ್ ಕಾಟನ್ ಸೀರೆ ಫ್ಯಾಶನಬಲ್ ಆಗಿದ್ದು, ಯುವತಿಯರ ಮನ ಗೆದ್ದಿದೆ. ಇದೇ ಸಾಲಿಗೆ ಖಾದಿ ಸೀರೆಯೂ ಸೇರಿದೆ.
ಕೇರಳ ಸ್ಯಾರಿಕಾಲೇಜು ಹುಡುಗಿಯರ ಫೇವರಿಟ್ ಸೀರೆಯಲ್ಲಿ ಕೇರಳ ಸೀರೆಯೂ ಒಂದು. ಕೇರಳಿಗರ ಸಾಂಪ್ರದ್ರಾಯಿಕ ಉಡುಗೆಯಾದ ಇದು ಓಣಂ ಸೀರೆ ಎಂದೇ ಪ್ರಸಿದ್ಧಿ. ಗಂಧ ಬಣ್ಣದ ಗೋಲ್ಡನ್ ಜರಿಯುಳ್ಳ ಈ ಸೀರೆ ಎಲ್ಲರಿಗೂ ಒಪ್ಪುತ್ತದೆ. ಇದರಲ್ಲೂ ಎರಡು ರೀತಿ ಇದೆ. ಸೆಟ್ ಮುಂಡು(ಅಂದರೆ 2 ಪಂಚೆ ಇರುತ್ತದೆ, ಒಂದನ್ನು ಪಂಚೆ ರೀತಿ ಉಟ್ಟು, ಮತ್ತೊಂದು ಪಂಚೆಯನ್ನು ನಮ್ಮಲ್ಲಿ ಧಾವಣಿ ಹಾಕುವ ರೀತಿ ಹಾಕುತ್ತಾರೆ). ಮತ್ತೊಂದು ಸೆಟ್ ಸ್ಯಾರಿ. ಈ ಸ್ಯಾರಿಗೆ ಕೆಂಪು, ಹಸಿರು ಮತ್ತು ಹೊಂಬಣ್ಣದ ಬ್ಲೌಸ್ ಚೆನ್ನಾಗಿ ಒಪ್ಪುತ್ತದೆ. ಸೀರೆ ಬಾರ್ಡರ್ ಯಾವುದು ಇರುತ್ತೋ ಅದಕ್ಕೆ ಮ್ಯಾಚ್ ಆಗುವ ಬಣ್ಣದ್ದೇ ಗ್ರಾ್ಯಂಡ್ ಬ್ಲೌಸ್ ಧರಿಸಿದರೆ ಆಕರ್ಷಕ. ಫಫ್ ರೀತಿ ಬ್ಲೌಸ್ ಹೊಲಿಸುವುದು ಈಗಿನ ಟ್ರೆಂಡ್. ಖಾಸಗಿ ಕಂಪನಿಗಳಲ್ಲಿ ಯಾವುದಾದರೂ ಕಾರ್ಯಕ್ರಮದಲ್ಲಿ ಅಲ್ಲಿನ ಮಹಿಳಾ ಸಿಬ್ಬಂದಿ ಓಣಂ ರಂಗೋಲಿ ಬಿಡಿಸಿ ಕೇರಳ ಸೀರೆಯಲ್ಲಿ ಮಿಂಚುವುದು ಚಾಲ್ತಿಯಲ್ಲಿದೆ. ಈ ಸೀರೆ ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಲಭ್ಯ.
ಬನಾರಸಿಬನಾರಸಿ ಸೀರೆ ಅಥವಾ ಬನಾರಸ್ ಅಂದ್ರೆ ಸಾಕು ಹೆಣ್ಮಕ್ಕಳ ಮನದಲ್ಲಿ ಏನೋ ಖುಷಿ. ಶುಭ ಸಮಾರಂಭದಲ್ಲಿ ಬನಾರಸಿ ಸೀರೆಯುಟ್ಟ ಮಹಿಳೆಯೇಕೇಂದ್ರಬಿಂದು ಎಂಬಷ್ಟರ ಮಟ್ಟಿಗೆ ಫೇಮಸ್ ಈ ಸೀರೆ. ಬೆಲೆ ದುಬಾರಿ ಆದರೂ ಬನಾರಸಿ ಸೀರೆ ಧರಿಸುವಿಕೆ ಕೆಲವರಿಗೆ ಪ್ರತಿಷ್ಠೆಯ ಸಂಕೇತ. ಉತ್ತಮ ರೇಷ್ಮೆ ಮತ್ತು ಐಶಾರಾಮಿ ಕಸೂತಿಗೆ ಹೆಸರುವಾಸಿಯಾದ ಈ ಸೀರೆಗಳ ತಯಾರಿಕೆಗೆ ನುಣ್ಣಗೆ ನೇಯ್ದ ರೇಷ್ಮೆ ಬಳಸುತ್ತಾರೆ. ಚಿನ್ನ ಮತ್ತು ಬೆಳ್ಳಿ ಬಣ್ಣದ ಬ್ರೊಕೇಡ್ ಅಥವಾ ಜರಿಯಿಂದ ತಯಾರಿಸುತ್ತಾರೆ. ಹೂವಿನ, ಪೊಲಿಯೇಟ್ ಚಿತ್ರಗಳು, ಜಾಲ್ಲಾರ್ ಎಂಬ ನೇರವಾದ ಎಲೆಗಳ ಸುರುಳಿ ವಿನ್ಯಾಸ ಈ ಸೀರೆಯ ವಿಶೇಷತೆ. ಅಂದಹಾಗೆ ಈ ಸೀರೆಯ ತವರು ವಾರಣಾಸಿ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಬೆಂಗಳೂರಲ್ಲಿ ನಡೆದ ತನ್ನ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಬನಾರಸಿ ಸೀರೆ ಧರಿಸಿ ಮಿಂಚಿದ್ದರು.
ಸ್ಯಾರಿ ಲೋಕದಲ್ಲಿ ಇವುಗಳ ಹವಾ ಇದ್ದೇ ಇದೆನಾರಿಯ ಸ್ಯಾರಿ ಲೋಕದಲ್ಲಿ ತರಹೇವಾರಿ ಸೀರೆಗಳಿವೆ. ಲೆಕ್ಕ ಹಾಕುತ್ತ ಕೂತರೆ ಹನುಮಂತನ ಬಾಲ ಬೆಳೆದಂತೆ. ಧಮಾವರಂ, ಗಾರ್ಡನ್ ಸಿಲ್ಕ್, ಪ್ಲೇನ್, ಸಿಂಥೆಟಿಕ್, ಡಿಸೈನರ್, ಪಾಲಿಸ್ಟರ್, ಲೈಟ್​ವೇಟ್, ಡಬಲ್​ಷೇಡ್… ಹೀಗೆ ಹಲವು ಸೀರೆಗಳಿವೆ. ಫ್ಯಾಶನ್ ಲೋಕದಲ್ಲಿ ಡಿಸೈನರ್ ಸೀರೆಗಷ್ಟೇ ಆದ್ಯತೆ ಎಂದೇನಿಲ್ಲ. ಪಾರಂಪರಿಕ ಶೈಲಿಯ ಸೀರೆಯುಟ್ಟು ಕ್ಯಾಟ್​ವಾಕ್ ಮಾಡೋದು ಈಗಿನ ಟ್ರೆಂಡ್. ಅವರವರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಸೀರೆ ಖದೀಸುತ್ತರಾದರೂ ಜೀವನದ ಪ್ರಮುಖ ಕಾರ್ಯಕ್ರಮಗಳಲ್ಲಿ ನಾಡಿನ ಪ್ರತೀಕವಾದ ಮೈಸೂರು ಸಿಲ್ಕ್ ಸೀರೆಗೆ ಆದ್ಯತೆ ಅಧಿಕ. ಇನ್ನು ಪ್ಲೇನ್ ಸೀರೆಗೆ ಗ್ರ್ಯಾಂಡ್ ಬ್ಲೌಸ್ ಧರಿಸುವುದು ಈಗಿನ ಟ್ರೆಂಡ್. ಯುವತಿಯರು ಮಾತ್ರವಲ್ಲ, ಮಧ್ಯವಯಸ್ಸಿನ ಮಹಿಳೆಯರೂ ಪ್ಲೇನ್ ಸ್ಯಾರಿಗೆ ಮಾರುಹೋಗಿದ್ದಾರೆ.(ಇದು 2021ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + fifteen =
Remember me
