| ಡಾ. ಎಂ.ಆರ್.ವೆಂಕಟೇಶ್ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕಿರುವುದು ಅತ್ಯವಶ್ಯಕ. ಇದು ಸರ್ಕಾರದ ಪರಮೊದ್ದೇಶ ಕೂಡ. ಅರ್ಹರನ್ನು ಗುರುತಿಸಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳು ತೀರಾ ಅಗತ್ಯ. ಮುಂದುವರಿದಿರುವಿಕೆ ಅಥವಾ ಹಿಂದುಳಿದಿರುವಿಕೆಯನ್ನು ಗುರುತಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ವರ್ಗಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಿಗೆ ಸಂಬಂಧಪಟ್ಟಂತಹ ನಂಬಲರ್ಹ, ವಿಶ್ವಾಸಾರ್ಹ, ನಿಖರವಾದ ಸಮಗ್ರ ಅಂಕಿ ಅಂಶಗಳ ಮಾಹಿತಿಯ ಅವಶ್ಯಕತೆಯಿದೆ. ಈ ಕುರಿತಂತೆ ತುಲನೆ ಮಾಡುವಂತಹ ಅಂಕಿ ಅಂಶಗಳನ್ನು ಆಧರಿಸಿ ಮೀಸಲಾತಿ ಹಂಚಿಕೆಯನ್ನು ಮಾಡುವಂತೆ ಸವೋಚ್ಛ ನ್ಯಾಯಾಲಯ ನಿರ್ದೇಶನವನ್ನೂ ನೀಡಿದೆ. ಒಟ್ಟಾರೆ ಜನಪರ ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಸಮೀಕ್ಷೆ ಅತ್ಯಾವಶ್ಯಕವೆಂಬುದು ಸರ್ಕಾರದ ನಿಲುವು. ಸಾಮಾಜಿಕ ನ್ಯಾಯದ ಗುರಿಸಾಧನೆಗೆ ಈ ಸಮೀಕ್ಷೆ ಒಂದು ಮಾರ್ಗಸೂಚಿಯಾಗಿರಬೇಕೆಂಬುದೇ ನಮ್ಮೆಲ್ಲರ ಆಶಯ. ಆದರೆ, ಈ ಸಮೀಕ್ಷೆಯ ಹೆಸರಲ್ಲಿ 2015ರಲ್ಲಿ ಕರ್ನಾಟಕದಲ್ಲಿ ನಡೆದ ಜಾತಿ ಗಣತಿಯ ವೈಖರಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರು ಅತ್ಯಂತ ಅವೈಜ್ಞಾನಿಕವಾಗಿ ನಿರ್ವಹಿಸಿದ ಪಾತ್ರ ಮತ್ತು ಅವರ ಕರ್ತವ್ಯಗಳು, ಕಾರ್ಯವೈಖರಿ ಅನೇಕ ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸಮೀಕ್ಷೆ ನಡೆಸುವಾಗ ರಾಜ್ಯದ ಯಾವುದೇ ಭಾಗದ ಮನೆ ಕುಟುಂಬಗಳನ್ನು ಬಿಡುವಂತಿಲ್ಲ. ವಸತಿ ರಹಿತರನ್ನು ಒಳಗೊಂಡಂತೆ ಎಲ್ಲರನ್ನೂ ಈ ಸಮೀಕ್ಷೆಯಲ್ಲಿ ಸೇರಿಸಿಕೊಳ್ಳುವುದು ಕಡ್ಡಾಯ. 2015ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆ ಈ ರೀತಿ ಇರಲಿಲ್ಲ. ಪಟ್ಟಣ ಪ್ರದೇಶಗಳಲ್ಲಿ ಅದರಲ್ಲೂ ಅಂದಾಜು 1 ಕೋಟಿ 25 ಲಕ್ಷ ಜನಸಂಖ್ಯೆಯಿರುವ ಬೆಂಗಳೂರಿನಂತಹ ಅತ್ಯಂತ ಜನಸಂದಣಿ ನಗರದಲ್ಲಿ ಎಷ್ಟೋ ಬಡಾವಣೆಗಳಲ್ಲಿ ಅದರಲ್ಲೂ ಅನೇಕ ರೆವೆನ್ಯೂ ಬಡಾವಣೆಗಳಿಗಂತೂ ಸಮೀಕ್ಷೆ ನಡೆಯಲೇ ಇಲ್ಲ. ಕೆಲವು ಕಡೆ ಇಡೀ ರಸ್ತೆಗಳಲ್ಲಿ ಸಮೀಕ್ಷೆ ಮಾಡದೆ ಗಣತಿದಾರರು ಉಡಾಫೆ ತೋರಿದ್ದಾರೆ. ಬಹುತೇಕ ಉದ್ಯೋಗಸ್ಥ ಕುಟುಂಬ ಗಳ ಮನೆಗಳನ್ನು ಗಣತಿಯಲ್ಲಿ ಸೇರಿಸುವ ಗಂಭೀರ ಪ್ರಯತ್ನ ನಡೆದಿಲ್ಲ. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮನೆಗಳ ಸಮರ್ಪಕ ಗಣತಿ ಆಗಿಲ್ಲ.
ಬೆಂಗಳೂರಿನಲ್ಲಿ ಅಂದಾಜು 2 ಲಕ್ಷಕ್ಕೂ ಮೇಲ್ಪಟ್ಟು ಅಪಾರ್ಟ್​ವೆುಂಟ್​ಗಳಿದ್ದು, ಇಲ್ಲಿನ ಬಹುತೇಕ ಅಪಾರ್ಟ್​ವೆುಂಟ್​ಗಳಲ್ಲಿ ಗಣತಿದಾರರು ಸಮೀಕ್ಷೆ ಮಾಡುವ ಪ್ರಯತ್ನವನ್ನೇ ಮಾಡಿಲ್ಲ. ಗ್ರಾಮೀಣ ಭಾಗದ ಸಾಕಷ್ಟು ಹಳ್ಳಿಗಳಲ್ಲಿ ಗಣತಿದಾರರು ಗ್ರಾಮದ ಮುಖ್ಯಸ್ಥನ ಮನೆಯಲ್ಲೋ ಅಥವಾ ಪಂಚಾಯ್ತಿ ಆಫೀಸ್​ನಲ್ಲೋ ಕೂತು ಅಲ್ಲಿಂದಲೇ ಪ್ರತಿ ಮನೆಯಲ್ಲಿ ಇರುವಂತಹ ವಿವರ ಪಡೆದುಕೊಂಡು ಹೋಗಿದ್ದರು. ಗಣತಿದಾರರನ್ನಾಗಿ ನೇಮಿಸಿದ ಬಹುತೇಕ ಶಿಕ್ಷಕಕರು ಅನಧಿಕೃತವಾಗಿ ಅವರ ವಿದ್ಯಾರ್ಥಿಗಳನ್ನು ಗಣತಿಗೆ ಬಳಸಿಕೊಂಡಿರುವುದು ಸರ್ಕಾರದ ಬದ್ಧತೆ ಮತ್ತು ಗಂಭೀರತೆಯನ್ನು ಪ್ರಶ್ನಿಸುವಂತೆ ಮಾಡಿತ್ತು. ಈ ಕುರಿತ ಅನೇಕ ವರದಿಗಳು ಆಗಿನ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಶಿಕ್ಷಕರ ಪರವಾಗಿ ಅನಧಿಕೃತವಾಗಿ ಗಣತಿಗೆ ಬಂದಿದ್ದ ವಿದ್ಯಾರ್ಥಿಗಳು ಅರ್ಜಿಯ ಕಾಲಂಗಳನ್ನು ಪೆನ್ಸಿಲ್​ನಲ್ಲಿ ಭರ್ತಿ ಮಾಡುತ್ತಾ ಅರ್ಜಿ ಯಲ್ಲಿರುವ 55 ಕಾಲಂಗಳಲ್ಲಿ ಕೆಲವೇ ಕೆಲವು ಕಾಲಂಗಳ ವಿವರಗಳನ್ನು ಪಡೆದು ಉಳಿಕೆ ಕಾಲಂಗಳ ಸಂಪೂರ್ಣ ಮಾಹಿತಿ ಪಡೆಯದೇ ಹೋದರು. ನಂತರ ಮನೆಗಳಲ್ಲಿ ಕುಳಿತು ಉಳಿದ ಕಾಲಂಗಳನ್ನು ತುಂಬಿದ್ದರು. ಇಂತಹ ತೀರಾ ಅವೈಜ್ಞಾನಿಕ ಮತ್ತು ಅಸಮರ್ಪಕ ವಿಧಾನದಲ್ಲಿ ಮಾಡಿರುವ ಗಣತಿ ಯಾವ ರೀತಿಯಲ್ಲಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯನಿಗೆ ತಲುಪಿಸಲು ಮಾನದಂಡವಾಗುತ್ತದೆ? ಗಣತಿಯ ಯಾವ ಆಧಾರದಲ್ಲಿ ಆಯಾ ಜಾತಿಗೆ ಬಜೆಟ್ ಅನುದಾನ ನೀಡಲು ಸಹಕಾರಿಯಾಗುತ್ತದೆ?
ಹಿಂದುಳಿದ ವರ್ಗಗಳ ಆಗಿನ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಮತ್ತು ಅಂದಿನ ಸಚಿವ ಸಂಪುಟದಲ್ಲಿ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಅವರನ್ನು ನಮ್ಮ ನಿಯೋಗದೊಂದಿಗೆ 2016ರಲ್ಲೇ ಭೇಟಿ ಮಾಡಿದ್ದೆವು. ಸಮೀಕ್ಷೆ ನಡೆದ ರೀತಿಯ ಬಗ್ಗೆ, ಆಗಿರುವ ಅವಾಂತರಗಳ ಬಗ್ಗೆ ಮತ್ತು ಕಂಡುಬರುವ ಲೋಪಗಳ ಕುರಿತು ವಿವರವಾದ ಮಾಹಿತಿ ಹಾಗೂ ಅನೇಕ ಸಲಹೆಗಳನ್ನೂ ಕೊಡಲಾಗಿತ್ತು. ಆದರೆ, ನಮ್ಮ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ಅಲ್ಲದೆ, ಆಗಿರುವ ಲೋಪಗಳನ್ನು ಸರಿಪಡಿಸುವಂತಹ ಯಾವುದೇ ಗಂಭೀರ ಪ್ರಯತ್ನ ಕೂಡ ಆಗಲಿಲ್ಲ.
2016ರ ಸಮಯದಲ್ಲಿ ಸೋರಿಕೆಯ ಹೆಸರಲ್ಲಿ ಬಹಿರಂಗವಾಗಿರುವ ವರದಿಯ ಪ್ರಕಾರ ಕರ್ನಾಟಕದಲ್ಲಿ ಒಕ್ಕಲಿಗರು 49 ಲಕ್ಷ ಮತ್ತು ಲಿಂಗಾಯಿತರು 59 ಲಕ್ಷದಷ್ಟಿದ್ದಾರೆಂದು ವರದಿಯಾಗಿದೆ. ಈಗಾಗಲೇ ಉದಾಹರಿಸಿರುವಂತೆ ರಾಜ್ಯದಲ್ಲಿ ಸಮರ್ಪಕ ಗಣತಿ ಆಗಿಲ್ಲದಿರುವಾಗ ಹಾಗೂ ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯವಿರುವ ಪ್ರದೇಶಗಳಲ್ಲೇ ಸಮರ್ಪಕ ಗಣತಿಯಾಗದೆ ಅಸಡ್ಡೆ ತೋರಿರುವುದು ಹಲವಾರು ಕಾರಣಗಳಿಂದ ಸಂಶಯ ಮೂಡಿಸುತ್ತದೆ. ಕರ್ನಾಟಕ ಏಕೀಕರಣದ ನಂತರ 1961ರಲ್ಲಿ ಮೈಸೂರು ಸರ್ಕಾರದ ವತಿಯಿಂದ ನಡೆಸಲಾದ Mysore Backward Classes Committee, Final Report ಪ್ರಕಾರ ರಾಜ್ಯದಲ್ಲಿ ಒಕ್ಕಲಿಗರ ಸಂಖ್ಯೆ ಅಂದಾಜು ಶೇ.12.98 ಮತ್ತು ಲಿಂಗಾಯಿತರು ಶೇ.15.57. ಅದೇ ರೀತಿ 1972ರಲ್ಲಿ ಎಲ್.ಜಿ ಹಾವನೂರು ವರದಿ ಪ್ರಕಾರ ಒಕ್ಕಲಿಗರು ಶೇ. 11.89 ಮತ್ತು ಲಿಂಗಾಯತರು ಶೇ. 14.64% ಇರುವುದು ಸರಿಯಷ್ಟೆ. ಒಂದು ವರದಿಯ ಪ್ರಕಾರ 2011 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ ಹತ್ತು ಲಕ್ಷದಷ್ಟು ಜನಸಂಖ್ಯೆ ಏರಿಕೆಯಾಗುತ್ತಾ ಹೋಗುತ್ತಿದೆ. ಹೀಗಿರುವಾಗ ಶೇ. 12.98 ಪ್ರಕಾರ ಸರಾಸರಿ ಅನುಪಾತದಲ್ಲೇ ಒಕ್ಕಲಿಗರ ಜನಸಂಖ್ಯೆ ಕೂಡ ಏರಿಕೆಯಾಗಬೇಕಿರುವುದು ಎಲ್ಲರೂ ನಂಬುವ ವಾದ. ಕರ್ನಾಟಕದಲ್ಲಿ ಸಮೀಕ್ಷೆಯ ಉದ್ದೇಶಕ್ಕೆ ಗುರುತಿಸಿರುವ ಜಾತಿ-ಉಪಜಾತಿಗಳ ಪಟ್ಟಿ ಅನುಬಂಧ -3 ’ಎ’ ನಲ್ಲಿ ನಮೂದಿಸಿರುವಂತೆ ಒಕ್ಕಲಿಗರ 31 ಜಾತಿ – ಉಪಜಾತಿಗಳನ್ನು ಒಕ್ಕಲಿಗರ ಒಟ್ಟು ಜನಸಂಖ್ಯೆಗೆ ಪರಿಗಣಿಸಬೇಕು. ಅಲ್ಲದೆ, ಈ ಹಿಂದಿನ ವರದಿಗಳಲ್ಲಿ ಅಧಿಕೃತವಾಗಿ ಉಲ್ಲೇಖಿತವಾಗಿರುವ ಶೇಕಡಾವಾರು ಒಕ್ಕಲಿಗರ ಜನಸಂಖ್ಯೆ ಅಂದಾಜು ಕನಿಷ್ಠ ಒಂದು ಕೋಟಿ ಇರಲೇಬೇಕೆಂದು ನಮ್ಮ ಬಲವಾದ ಪ್ರತಿಪಾದನೆ. ಅದೇ ರೀತಿ ಲಿಂಗಾಯಿತರ ಜನಸಂಖ್ಯೆ ಕನಿಷ್ಠ 1.40 ಕೋಟಿ ಇರಬಹುದು.
ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಲೇಬೇಕು. ಒಕ್ಕಲಿಗರು ಅಥವಾ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆ ಬಂದಿದೆ, ಇದರಿಂದ ರಾಜಕೀಯ ಪ್ರಾಬಲ್ಯ ಕಡಿಮೆ ಆಗುತ್ತದೆ, ಅದಕ್ಕಾಗಿ ಗಣತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು. ಇಲ್ಲಿ ಸಮೀಕ್ಷೆ ಕಾರ್ಯ ಅವೈಜ್ಞಾನಿಕವಾಗಿ ನಡೆದಿದೆ ಎನ್ನುವುದಷ್ಟೆ ಮುಖ್ಯ. ಅದಕ್ಕೆ ಪೂರಕವಾಗಿ ಕೆಲವು ಜಾತಿಗಳ ಸಂಖ್ಯೆ ಕಡಿಮೆ ಆಗಿರುವುದನ್ನು ಉಲ್ಲೇಖಿಸಲಾಗಿದೆ. ನಿಜವಾಗಿಯೂ ರಾಜ್ಯ ಸರ್ಕಾರಕ್ಕೆ ಗುಣಮಟ್ಟದ ದತ್ತಾಂಶಗಳು ಬೇಕು ಎಂದಾದರೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಿ. ಪ್ರಶ್ನಾವಳಿಗಳ ರಚನೆಯಿಂದ, ಸಮೀಕ್ಷೆ ಕಾರ್ಯ ನಡೆಯುವವರೆಗೆ ಎಲ್ಲ ಸಮುದಾಯದ ಮುಖಂಡರು, ರಾಜಕೀಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕವಾಗಿ ಸಮೀಕ್ಷೆ ನಡೆಸಲಿ. ಆನಂತರ ಹೊರಬರುವ ಯಾವುದೇ ದತ್ತಾಂಶ, ಜನ ಸಂಖ್ಯೆಯ ಮಾಹಿತಿಯನ್ನು ಎಲ್ಲರೂ ಒಪ್ಪಿಯೇ ತೀರುತ್ತಾರೆ.
ಆದರೆ, ಕರ್ನಾಟಕದಲ್ಲಿ ಜಾತಿ ಗಣತಿಯ ಟ್ರಂಪ್ ಕಾರ್ಡ್ ಬಳಸಿ ಸಮುದಾಯಗಳನ್ನು ಒಡೆಯುವ ಸ್ಪಷ್ಟ ಹುನ್ನಾರ ಕಾಣುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದನ್ನು ಬಳಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಅವೈಜ್ಞಾನಿಕ ಜಾತಿ ಗಣತಿ ಖಂಡಿತ ಸಮಾಜದ ಮಧ್ಯೆ ಸಾಮರಸ್ಯವನ್ನು ಕದಡುತ್ತದೆ. ಅಶಾಂತಿಯ ವಾತಾವರಣ ಸೃಷ್ಟಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ಗುಜರಾತಿನಲ್ಲಿ ಪಟೇಲ ಸಮುದಾಯ, ಹರಿಯಾಣದಲ್ಲಿ ಜಾಟ್ ಸಮುದಾಯ ನಡೆಸಿದ ಮಾದರಿಯಲ್ಲೇ ರಾಜ್ಯದಲ್ಲೂ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಬಹುದು. ಈ ಅವೈಜ್ಞಾನಿಕ ಜಾತಿಗಣತಿಯನ್ನು ಸರ್ಕಾರ ಅಧಿಕೃತವಾಗಿ ಅಂಗೀಕರಿಸಿದಲ್ಲಿ ಭವಿಷ್ಯದಲ್ಲಿ ಒಕ್ಕಲಿಗರು, ಲಿಂಗಾಯತರಷ್ಟೆ ಅಲ್ಲದೆ ಅನೇಕ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯದಿಂದ ಹಿಡಿದು ಬೇರೆ ರೀತಿಯ ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಅನ್ಯಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಮಗ್ರ ಅಭಿವೃದ್ಧಿಯ ಕಾರ್ಯೋನ್ಮುಖವಾಗಬೇಕೆ ವಿನಃ ಅವೈಜ್ಞಾನಿಕವಾಗಿ ಹಾಗೂ ಪೂರ್ವಾಗ್ರಹ ಪೀಡಿತರಾಗಿ ಸಮೀಕ್ಷೆ ನಡೆಸಿರುವ ವರದಿಯನ್ನು ನವೆಂಬರ್​ನಲ್ಲಿ ಅಂಗೀಕರಿಸಿ ಬಿಡುಗಡೆ ಮಾಡುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸಿರುವುದು ಸರ್ಕಾರಕ್ಕೆ ಶೋಭೆ ತರುವ ವಿಚಾರವಲ್ಲ. ರಾಜ್ಯದ ವಿವಿಧ ಸಮುದಾಯಗಳು ಯಾವ ಸ್ಥಿತಿಯಲ್ಲಿವೆ ಎನ್ನುವುದನ್ನು ತಿಳಿಯಲು ಮತ್ತು ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ಹೋಗಲಾಡಿಸಲು ಜಾತಿಗಣತಿ ವರದಿ ಬಿಡುಗಡೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಮಾತಿನಲ್ಲಿ ನಿಜಕ್ಕೂ ಪ್ರಾಮಾಣಿಕತೆ, ಬದ್ಧತೆ, ಗಾಂಭೀರ್ಯತೆ ಕಾಣುತ್ತಿಲ್ಲ. ಅದಕ್ಕೆ, ಒಕ್ಕಲಿಗ, ಲಿಂಗಾಯತ ಸೇರಿ ಕೆಲವು ಸಮುದಾಯಗಳ ಕುರಿತು ಸಿದ್ದರಾಮಯ್ಯ ಅವರು ಹಿಂದೆಯೂ, ಈಗಲೂ ನಡೆದುಕೊಳ್ಳುತ್ತಿರುವ ರೀತಿಯೇ ಆಧಾರ. ಇತ್ತೀಚೆಗೆ ಕಾಂಗ್ರೆಸ್​ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಮಾತುಗಳೇ ಜ್ವಲಂತ ಸಾಕ್ಷಿ.
ಸರ್ಕಾರ ಈಗಿನ ಅಪೂರ್ಣ ವರದಿಯನ್ನು ಬಹಿರಂಗಪಡಿಸದೇ ಈ ಜಾತಿ ಸಮೀಕ್ಷೆಯ ಸೂಕ್ಷ್ಮತೆಯನ್ನು ಅರಿತು ವೈಜ್ಞಾನಿಕವಾಗಿ ಮತ್ತೊಮ್ಮೆ ಮರು ಸಮೀಕ್ಷೆ ಮಾಡಬೇಕು. ಈ ಅವೈಜ್ಞಾನಿಕ ಜಾತಿ ಗಣತಿಯಲ್ಲಿ ಆಗಿರುವ ಎಲ್ಲ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸ್ವಂತ ಹಿತಾಸಕ್ತಿಗಳಿಲ್ಲದ ತಟಸ್ಥ ಸಂಸ್ಥೆಯ (Neutral Agency) ಅಥವಾ ಸ್ವತಂತ್ರ ಸಂಸ್ಥೆಯೊಂದರಿಂದ (Independent Body) ಜಾತಿ ಗಣತಿ ಮಾಡಿಸಬೇಕು. ಈ ಜಾತಿ ಗಣತಿಯಲ್ಲಿ ಪ್ರತಿಯೊಬ್ಬರೂ ಕಡ್ಡಾಯ ವಾಗಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಕೇಳುವ ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ನಾವು ಕೇವಲ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಲು ಮಾನದಂಡವನ್ನಾಗಿ ಬಳಸಿಕೊಳ್ಳುತ್ತೇವೆಯೇ ವಿನಃ ಈ ವಿವರಗಳನ್ನು ಬೇರೆ ರೀತಿ ದುರ್ಬಳಕೆ ಮಾಡಿಕೊಳ್ಳುವುದಿಲ್ಲವೆಂದು ಜನಸಾಮಾನ್ಯನಿಗೆ ಸರ್ಕಾರ ಮನವರಿಕೆ ಮಾಡಿಕೊಡಬೇಕು. ಜನರೇ ಸ್ವಯಂಪ್ರೇರಿತವಾಗಿ ಬಂದು ಈ ಜಾತಿ ಗಣತಿಯಲ್ಲಿ ಪಾಲ್ಗೊಳ್ಳುವ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಬೇಕು.
ಆಧಾರ್ ಕಾರ್ಡ್ ನೋಂದಣಿಗೆ ಕೇಂದ್ರಗಳನ್ನು ಸ್ಥಾಪಿಸಿದ ಹಾಗೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಆಯಾ ಬೂತ್ ಮಟ್ಟದಲ್ಲೇ ಕೇಂದ್ರಗಳನ್ನು ಸ್ಥಾಪಿಸಿ ನೋಂದಣಿ ಮಾಡುವ ಹಾಗೆಯೇ ಈ ಜಾತಿ ಗಣತಿಗೂ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲೇ ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ ರಜಾ ದಿನಗಳಲ್ಲೂ ಗಣತಿ ಮಾಡುವಂತಾಗಬೇಕು. 2015ರ ಸಮೀಕ್ಷೆಯಲ್ಲಿ ಆಗಿರುವ ಎಲ್ಲ ಲೋಪಗಳನ್ನು ಮತ್ತೊಮ್ಮೆ ಪರಾಮಶಿಸಿ ಸರ್ಕಾರಕ್ಕೆ ರಾಜ್ಯದ ಇಡೀ ಸಮಾಜದ ಬಗ್ಗೆ ಬದ್ಧತೆ ಮತ್ತು ಗಂಭೀರತೆ ಇದ್ದಲ್ಲಿ ಕೂಡಲೇ ಮರುಸಮೀಕ್ಷೆಗೆ ಗಂಭೀರ ಚಿಂತನೆ ಮಾಡಬೇಕು.
(ಲೇಖಕರು ರಾಜ್ಯಾಧ್ಯಕ್ಷರು, ರಾಜ್ಯ ಒಕ್ಕಲಿಗರ ಒಕ್ಕೂಟ, ಬೆಂಗಳೂರು )
ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
