ಡಾ.ಸಿ.ಪಿ.ಕೃಷ್ಣಕುಮಾರ್ಕುವೆಂಪು ಅವರು ‘ಮನುಷ್ಯ ಜಾತಿ ತಾನೊಂದೇ ವಲಂ’ ಮಾತಿನ ತಳಹದಿ ಮೇಲೆ ವಿಶ್ವಮಾನವ ಸಂದೇಶಕ್ಕೆ ಒತ್ತು ನೀಡಿದ್ದರು. ಅವರ ‘ಅನಿಕೇತನ’ ಕವನದಲ್ಲಿ ಈ ಸಂದೇಶ ಅಡಕವಾಗಿದೆ. ಎಲ್ಲರೂ ವಿಶ್ವಮಾನವರಾದರೆ ಸಾಕು. ಜಾತಿ, ಮತ, ಧರ್ಮ ಎಲ್ಲವನ್ನೂ ಮೀರಿ ಮುಂದೆ ಹೋಗಬೇಕು ಎನ್ನುತ್ತಿದ್ದ ಅವರು ಸವೋದಯ ತತ್ವಕ್ಕೂ ಹೆಚ್ಚು ಒತ್ತು ನೀಡಿದ್ದರು. ಅವರಿಗೆ ವಿಜ್ಞಾನ ಒಂದು ಕಣ್ಣಾಗಿದ್ದರೆ ಅಧ್ಯಾತ್ಮ ಮತ್ತೊಂದು ಕಣ್ಣಾಗಿತ್ತು. ಅವರ ಸಾಹಿತ್ಯದ ವೈಜ್ಞಾನಿಕ ದೃಷ್ಟಿ, ವೈಚಾರಿಕ ದೃಷ್ಟಿ, ಸವೋದಯ, ವಿಶ್ವಮಾನವ ದೃಷ್ಟಿ, ಪ್ರಕೃತಿಯ ಆರಾಧನೆ… ಹೀಗೆ ಎಲ್ಲವೂ ಸಮಾಜಕ್ಕೆ ಎಂದಿಗೂ ಪ್ರಸ್ತುತ ಎನಿಸುತ್ತದೆ.
ಸ್ವಾಮಿ ವಿವೇಕಾನಂದ ರನ್ನು ಕುರಿತು ‘ನವಯುಗದ ಆಚಾರ್ಯ’ ಎಂಬ ಮಾತು ಬಳಸುತ್ತಾರೆ. ನಾವು ಕನ್ನಡದ ಮಟ್ಟಿಗೆ ಕುವೆಂಪು ಅವರನ್ನು ‘ನವಯುಗದ ಆಚಾರ್ಯ’ ಎಂದು ಕರೆದರೆ ತಪ್ಪಾಗಲಾರದು. ಇಂದಿನ ಕಾಲದೇಶಗಳ ಬಹುದೊಡ್ಡ ಕವಿ ಕುವೆಂಪು. ಅವರ ಸಾಹಿತ್ಯದಲ್ಲಿ ಸ್ಥಳೀಯವಾದದ್ದು ತುಂಬ ಇದೆ. ಅವರೇ ಹೇಳುವಂತೆ ಸ್ಥಳೀಯತೆಯ ಮೇಲೆ ವಿಶ್ವ ಸಾರ್ವತ್ರಿಕತೆಯ ಕಾವು ಕೂತಿದ್ದು, ಅದು ಇಂದಿಗೂ ಪ್ರಸ್ತುತ. ಎಂದಿಗೂ ಕುವೆಂಪು ಅವರನ್ನು ಮಾರ್ಗದರ್ಶಕ, ದಾರ್ಶನಿಕ ಲೇಖಕ ಎಂದು ಕರೆಯಬಹುದು. ಅವರಲ್ಲಿದ್ದ ಪ್ರತಿಭೆ ಸಮಗ್ರ ಸಾಹಿತ್ಯ ಶ್ರೇಣಿಯನ್ನು ಯಶಸ್ವಿಯಾಗಿ ಸಂಚರಿಸಿದೆ. ಸಾಹಿತ್ಯದ ಎಲ್ಲ ಪ್ರಾಕಾರಗಳನ್ನು ಆವರಿಸಿದೆ.
ಕುವೆಂಪು ಅವರು ಮಕ್ಕಳ ಸಾಹಿತ್ಯದಿಂದ ಎಲ್ಲ ಸಾಹಿತ್ಯದ ಪ್ರಾಕಾರಗಳಲ್ಲೂ ಕೆಲಸ ಮಾಡಿದ್ದಾರೆ. ಇಷ್ಟೊಂದು ವೈವಿಧ್ಯ, ಸಮೃದ್ಧಿ, ಸತ್ವ ಕೊಟ್ಟ ಬರಹಗಾರರು ಯಾವ ಭಾಷೆಯಲ್ಲೂ ವಿರಳ. ಸಾಮಾನ್ಯವಾಗಿ ಯಾವುದೇ ವಿಮರ್ಶೆಯನ್ನು ‘ಮಹಾ’ ಎಂದು ಕರೆಯುವುದಿಲ್ಲ. ಆದರೆ, ಕುವೆಂಪು ಅವರ ವಿಮರ್ಶೆಯೂ ಮಹಾ ವಿಮರ್ಶೆಯಾಗಿದೆ.
ಕುವೆಂಪು ಅವರ ಸಾಹಿತ್ಯದಲ್ಲಿ ಸ್ಥಳೀಯತೆ ಇದೆ. ಅದರ ಮೇಲೆ ವಿಶ್ವ ಸಾರ್ವತ್ರಿಕತೆಯ ಕಾವು ಕೂತಿದೆ. ಹಾಗಾಗಿ, ಅವರು ರಾಷ್ಟ್ರಕವಿಯೂ ಹೌದು, ವಿಶ್ವಕವಿಯೂ ಹೌದು. ಆಧುನಿಕ ಯುಗದಲ್ಲಿ ಕುವೆಂಪು ಅವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯಬಹುದು. ಬಸವಣ್ಣನವರ ನೆಲೆಯಲ್ಲಿ ಕುವೆಂಪು ನಿಲ್ಲುತ್ತಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ್ದನ್ನು 20ನೇ ಶತಮಾನದಲ್ಲಿ ಕುವೆಂಪು ಅವರು ಮಾಡಿದ್ದಾರೆ. ಇಬ್ಬರು ಜಾತಿ, ಮತಗಳನ್ನು ಅಲ್ಲಗಳೆದು ಮುಂದೆ ಹೋದವರು. ಅಶ್ಪೃಶ್ಯತೆ ನಿವಾರಿಸಲು ಪ್ರಯತ್ನಿಸಿದರು. ಆದರೆ, ಕುವೆಂಪು ಅವರು ಸಮಾಜದಲ್ಲಿ ಬೇರೂರಿರುವ ಮೌಢ್ಯ ಮತ್ತು ಕಂದಾಚಾರವನ್ನು ಸಾಹಿತ್ಯದ ಮೂಲಕ ಹೋಗಲಾಡಿಸಲು ಪ್ರಯತ್ನಿಸಿದರು. ಆದರೆ, ಈ ಎಲ್ಲವೂ ಸಮಾಜದಲ್ಲಿ ಉಳಿದುಬಿಟ್ಟಿವೆ. ಅವು ಪ್ರಪಂಚದಿಂದಾಚೆ ಹೋಗುವವರೆಗೂ ಕುವೆಂಪು ಅವರ ಸಾಹಿತ್ಯ ಪ್ರಸ್ತುತ.
ಅವರ ಸಂಕಲನಗಳಾದ ‘ಕೋಗಿಲೆ’ ಮತ್ತು ‘ಸೋವಿಯತ್ ರಷ್ಯಾ’ ಸಾಮಾಜಿಕವಾಗಿ ಬಹಳ ಮುಖ್ಯ. ಇದರಲ್ಲಿ ಸಮಾನತೆ, ವೈಚಾರಿಕತೆ ಪತಿಪಾದಿಸುತ್ತಾರೆ. ‘ಅಗ್ನಿಹಂಸ’ ಆಧ್ಯಾತ್ಮಿಕವಾಗಿ ಮುಖ್ಯ. ಅವರ ಪ್ರಣಯಗೀತೆ, ಪ್ರೇಮಗೀತೆಗಳಲ್ಲೂ ಆಧ್ಯಾತ್ಮಿಕ ಹಿನ್ನೆಲೆಯನ್ನು ನೋಡಬಹುದು. ಪ್ರಕೃತಿ, ಪ್ರೇಮ, ಭಕ್ತಿ, ನಾಡು-ನುಡಿಗಳ ಬಗ್ಗೆ ಬರೆದಿರುವ ಪದ್ಯಗಳು ಎಂದಿಗೂ ಪ್ರಸ್ತುತ ಎನಿಸುತ್ತವೆ.
ಅವರ ‘ಸ್ಮಶಾನ ಕುರುಕ್ಷೇತ್ರ’ ಇಂದಿನ ವರ್ತಮಾನಕ್ಕೆ ಬಹಳ ಹತ್ತಿರವಾಗಿದೆ. ಅಲ್ಲಿ ಯುದ್ಧದ ಅನಾಹುತಗಳನ್ನು ಚಿತ್ರಿಸಿದ್ದಾರೆ. ಇಂದು ನಾವು ಜಾಗತಿಕವಾಗಿ ಯುದ್ಧದ ಅನಾಹುತಗಳನ್ನು ನೋಡುತ್ತಿದ್ದೇವೆ. ಅವರು ‘ಮಹಾಭಾರತ’ ಯುದ್ಧ ಕುರಿತು ‘ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ’ ಎಂದು ಹೇಳುತ್ತಾರೆ. ಮಹಾಭಾರತ ಯುದ್ಧ ಕಡೆಗೂ ಹೊಲಸಾಯಿತು. ಅದರಿಂದ ಪಾಂಡವರು, ಕೌರವರು ಯಾರೂ ಸುಖ ಪಡಲಿಲ್ಲ ಎಂದು ಹೇಳುತ್ತಾರೆ. ಇಂದು ಅದೇ ಮಾತನ್ನು ‘ಕಡೆಗುಂ ಪೊಲಸಾದುದೀ ಈ ಪ್ರಪಂಚ ಸಂಗ್ರಾಮಂ’ ಎಂದು ಹೇಳಬಹುದು. ಇಸ್ರೇಲ್, ಹಮಾಸ್, ರಷ್ಯಾ, ಯೂಕ್ರೇನ್ ದೇಶಗಳ ಯುದ್ಧಗಳನ್ನು ನೋಡಿದರೆ, ‘ಸ್ಮಶಾನ ಕುರುಕ್ಷೇತ್ರ’ದಲ್ಲಿ ಕವಿ ಒಂದು ರೀತಿಯ ಪ್ರವಾದಿಯಾಗಿದ್ದಾನೆ ಎನ್ನಬಹುದು. ಮುಂದೆ ಆಗುವುದನ್ನು ಭವಿಷ್ಯದಲ್ಲಿ ಕಂಡು ಅಂದೇ ಬರೆದಿದ್ದಾರೆ. ಆ ಕಾಲದ ಅವರ ನಾಟಕದಲ್ಲಿ ಆಧುನಿಕ ಪ್ರಜ್ಞೆ ಮೇಳೈಸಿರುವುದನ್ನು ಕಾಣಬಹುದು.
‘ಕಾನೂನು ಹೆಗ್ಗಡತಿ’ಯಲ್ಲಿ ವಾಸ್ತವತೆ, ಆದರ್ಶಗಳ ಸಾಮರಸ್ಯ ಕಾಣಬಹುದು. ಆದರೆ, ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ವಾಸ್ತವಿಕ ಚಿತ್ರಣ ಕಾಣಬಹುದು. ಅದನ್ನು ಸೂಕ್ಷ್ಮವಾಗಿ ನೋಡಿದರೆ ಪೂರ್ಣದೃಷ್ಟಿ ಕಾಣುತ್ತದೆ. ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಅಲ್ಲ. ಅದನ್ನೂ ಮೀರಿದ ಸತ್ಯವೂ ಇದೆ ಎನ್ನುವುದನ್ನು ಅದು ತಿಳಿಸುತ್ತದೆ. ಅದನ್ನೇ ಕುವೆಂಪು ಅವರು ‘ದರ್ಶನ’ ಎನ್ನುತ್ತಿದ್ದರು. ಬದುಕಿನ ಗಾಢತೆ, ಗೂಢತೆಗಳನ್ನು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಕಾನೂನು ಹೆಗ್ಗಡತಿಯಲ್ಲಿ ಬದುಕಿನ ಗಾಢತೆ ಮಾತ್ರ. ಗೂಢತೆ ಇಲ್ಲ.
(ಲೇಖಕರು ಹಿರಿಯ ಸಾಹಿತಿ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − three =
Remember me
