‘ಕಡಲಂತೆ ಕಾರಂತರು’ ಎನ್ನುವ ಮಾತಿದೆ. ಕಡಲಿನ ಅಗಾಧ ವಿಸ್ತಾರ, ಆಳಗಲ ಅಂತಃಸತ್ವದಂತೆಯೇ ಶಿವರಾಮ ಕಾರಂತರ ಬೌದ್ಧಿಕ ಶಕ್ತಿ, ಸೃಜನಶೀಲ ಪ್ರತಿಭೆ ಪದಗಳ ಅಳತೆಗೋಲಿಗೆ ನಿಲುಕದ ಸಂಗತಿ. 47 ಕಾದಂಬರಿಗಳು, 97 ನಾಟಕಗಳು, 9 ವಿಶ್ವಕೋಶಗಳು, 17 ವಿಚಾರ ಸಾಹಿತ್ಯ ಕೃತಿಗಳು, 231 ಮಕ್ಕಳ ಕತೆಗಳು, 480 ಲೇಖನಗಳು. ವಿಜ್ಞಾನ, ಪ್ರವಾಸ, ಹರಟೆ, ವಿಡಂಬನೆ, ಪ್ರಬಂಧ, ಅಮರ ಚಿತ್ರಕಥೆ, ಅನುವಾದ, ಶಿಲ್ಪ, ಚಿತ್ರ, ಯಕ್ಷಗಾನ, ಜಾನಪದ, ಶಿಕ್ಷಣ, ಪತ್ರಿಕೋದ್ಯಮ, ರಾಜಕೀಯ, ನಾಡು – ನುಡಿ, ದೇಶ- ಭಾಷೆ, ಸಂಸ್ಕೃತಿ ಜ್ಞಾನದ ಎಲ್ಲ ಶಾಖೆಗಳಲ್ಲೂ ಅವರು ಮಾಡಿದ್ದು ಹೊಸ ಹೊಸ ಪ್ರಯೋಗ, ಪಡೆದದ್ದು ಹೊಸ ಹೊಸ ಫಲಿತಾಂಶ! ಒಬ್ಬನೇ ವ್ಯಕ್ತಿ, ಒಂದೇ ಶತಮಾನದಲ್ಲಿ ನಾಲ್ಕು ಶತಕಕ್ಕಿಂತಲೂ ಹೆಚ್ಚು ಸತ್ವಯುತವಾದ ಕೃತಿಗಳನ್ನು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದ ವಿಶಾಲ ಜೀವನಾನುಭವದ ಮೂಸೆಯಲ್ಲಿ, ಆಳ ತಾತ್ವಿಕ ದೃಷ್ಟಿಕೋನದಲ್ಲಿ ಸೃಜನಶೀಲವಾಗಿ ಕಲಾತ್ಮಕವಾಗಿ ಅರಳಿಸಿರುವುದು ಅಪ್ರತಿಮ!
ಶಿವರಾಮ ಕಾರಂತರು ಹುಟ್ಟಿದ್ದು 1902ರ ಅ.10ರಂದು, ಸ್ವಾತಂತ್ರ್ಯಪೂರ್ವದಲ್ಲಿ. ಬಾಳಿದ್ದು ಸ್ವಾತಂತ್ರೊ್ಯೕತ್ತರದ 1997ರವರೆಗೆ. ಅವರ ಜೀವನದೃಷ್ಟಿ ರೂಪುಗೊಂಡದ್ದು ಸಂಪ್ರದಾಯ ಮತ್ತು ಆಧುನಿಕತೆಗಳ ಸಂಘರ್ಷಗಳ ನಡುವೆ. ಗಾಂಧಿ ಪ್ರಭಾವದಿಂದ ವಿದ್ಯಾಭ್ಯಾಸ ತೊರೆದು ಸ್ವದೇಶಿ ಚಳವಳಿಗಳಲ್ಲಿ ನಿರತರಾದರು. ಅವರ ಸುಧಾರಣೆಯ ತವಕ ಬರೇ ಬಾಯಿಮಾತಿನದ್ದಾಗಿರಲಿಲ್ಲ.
ಪುತ್ತೂರಿನ 32 ಹಳ್ಳಿಗಳಲ್ಲಿ ನಾಟಕ, ಶಾಂತಿ ಶಿಬಿರ, ಸಮೀಕ್ಷೆಗಳ ಮೂಲಕ ಅಸ್ಪ್ರಶ್ಯತೆ, ಬಡತನ ನಿವಾರಣೆ, ದೇವದಾಸಿ ಪದ್ಧತಿ ನಿವಾರಣೆ, ವಿಧವಾ ವಿವಾಹ, ಮದ್ಯನಿಷೇಧ, ಬ್ರಹ್ಮಚರ್ಯ ಪಾಲನೆ, ಗ್ರಾಮ ಸ್ವರಾಜ್ಯ ಮುಂತಾದ ಗಾಂಧಿತತ್ವಗಳನ್ನು ಅನುಷ್ಠಾನಕ್ಕೆ ತರಲು ಹೊರಟರು. ‘ದೇವದಾಸಿಯರ ವಿವಾಹ ಮಾಡಿಸಿದೆ. ಆದರೆ, ವಿಧವೆಯರಿಗೆ ವಿವಾಹ ಮಾಡಿಸಲಾಗದೆ ಸೋತೆ’ ಎಂದು ಹತಾಶರಾಗಿ ಗಾಂಧೀಜಿಗೆ ಪತ್ರ ಬರೆದರು. ವಿಧವೆಯರು ಬ್ರಹ್ಮಚಾರಿಣಿಯರಾಗಿಯೇ ಉಳಿಯಲಿ ಎಂಬ ಉತ್ತರ ಓದಿ ‘ಉಪ್ಪು-ಹುಳಿ-ಖಾರ ತಿನ್ನದ ಗಾಂಧಿಯವರಿಗೆ ಅವನ್ನೆಲ್ಲ ತಿನ್ನುವ ಮನುಷ್ಯನ ಕಷ್ಟ ಗೊತ್ತಾಗದು’ ಎಂದು ತೀರ್ವನಿಸಿದರಂತೆ. ಅನುಭವಕ್ಕೆ ಸಿಕ್ಕದ್ದು ಜ್ಞಾನಕ್ಕೆ ಲಭಿಸುತ್ತದೆ ಎಂಬಲ್ಲಿ ಅವರಿಗೆ ನಂಬಿಕೆಯಿರಲಿಲ್ಲ. ಎಷ್ಟೇ ಉನ್ನತವಾದ ಮೌಲ್ಯವಿರಲಿ ಅದನ್ನು ಇನ್ನೊಬ್ಬರಿಂದ ಎರವಲು ಪಡೆಯುವುದಕ್ಕಿಂತ ತನ್ನದೇ ಜೀವನಾನುಭವದ ಒರೆಗೆ ಹಚ್ಚುವುದರಿಂದ, ಅನುಭವ ಜನ್ಯವಾಗುವುದರಿಂದ ಮಾತ್ರ ಸತ್ವಯುತವಾಗುತ್ತದೆಯೆಂದು ಕಂಡುಕೊಂಡಿದ್ದರು.
ಕನ್ನಡದಲ್ಲಿ ಒಂದು ವಿಚಾರ ಪರಂಪರೆ ಆರಂಭವಾದದ್ದೆ ಕಾರಂತರಿಂದ. ಅಂಧಶ್ರದ್ದೆ, ಮೂಢನಂಬಿಕೆಗಳನ್ನು ವಿರೋಧಿಸುವವರಲ್ಲಿ ಕಾರಂತರು ಮುಂಚೂಣಿ ಯಲ್ಲಿದ್ದರು. ದಲಿತ ಚಳವಳಿಗಿಂತ ಮೊದಲೇ ಚೋಮನ ದುಡಿ, ಸಮೀಕ್ಷೆ ಮುಂತಾದ ಕಾದಂಬರಿಗಳಲ್ಲಿ, ವೈಚಾರಿಕ ಲೇಖನಗಳಲ್ಲಿ ಅಸಮಾನತೆಯ ಕುರಿತು ಪ್ರಶ್ನೆಗಳನ್ನೆತ್ತಿ, ಪರಿಹರಿಸಲು ಯತ್ನಿಸಿರುವುದು, ಎಲ್ಲ ಜಾತಿಗೆ ಪ್ರವೇಶವಿಲ್ಲದ ದೇವಸ್ಥಾನ ನನಗೆ ಬೇಡ ಎಂದಿರುವುದು ಅವರ ಮಾನವೀಯ ದೃಷ್ಟಿಕೋನಕ್ಕೆ ಸಾಕ್ಷಿ. ‘ಸಮೀಕ್ಷೆ’ ಕಾದಂಬರಿಯಲ್ಲಿ ಹರಿಜನ ಸೂರ-ಕಾಳಿ ಮೇಲ್ವರ್ಗದವರ ಹೊಲಗಳಲ್ಲಿ ದುಡಿಯುತ್ತ ಗುಡಿಸಲಲ್ಲಿ ಬಾಳಿ ಹೋಗುತ್ತಾರೆ. ಉಳಿದವೆಲ್ಲವು ಮೇಲ್ವರ್ಗದ ಪಾತ್ರಗಳು. ಯಾರ ಜೀವನ ಸಾರ್ಥಕ? ಎಂದು ಸಮೀಕ್ಷೆ ಮಾಡಿ ನೋಡುವಾಗ ಅವರು ಹೇಳುವುದು, ‘ಉಳಿದೆಲ್ಲ ಪಾತ್ರಗಳು ಜೀವನ ಪ್ರವಾಹದಲ್ಲಿ ತೇಲುತ್ತ ಮುಳುಗುತ್ತ ಹೋಗುತ್ತವೆ. ಸೂರ-ಕಾಳಿ ಮಾತ್ರ ಜೀವನ ಪ್ರವಾಹವನ್ನು ದಾಟಿಕೊಂಡು ಹೋಗುತ್ತಾರೆ. ಅವರ ಮೊಣಕಾಲಿನವರೆಗೆ ಮಾತ್ರ ನೀರು ಬರುತ್ತದೆ’ ಎಂದು.
‘ಗಂಡಿಲ್ಲದೆ ಹೆಣ್ಣು ವೇಶ್ಯೆಯಾಗುವುದಿಲ್ಲ’ ಎಂಬ ಮಾತನ್ನು ಅವರು ಉಚ್ಚರಿಸಿದ್ದಾರೆ. ಅವರು ಹೆಣ್ಣನ್ನು ಬಹಳ ಗೌರವಿಸಿದ್ದರು. ಅವರ ಕಾದಂಬರಿಗಳಲ್ಲಿ ಬಹಳ ಪಕ್ವ ಜೀವಗಳೆಂದರೆ, ನಿಜವಾದ ತತ್ವಜ್ಞಾನಿಗಳೆಂದರೆ ಹೆಣ್ಣುಜೀವಗಳೇ; ವಿಧವೆಯರು, ಮುದುಕಿಯರು, ಶ್ರಮಜೀವಿಗಳು, ತಾಯಂದಿರೇ. ಎಷ್ಟಾದರೂ ಹೆಣ್ಣು ಇಡಿಯ ಜೀವದ ಸಂತಾನವನ್ನು ಪೋಷಿಸುತ್ತ ಬರುವವಳು, ಜೀವಗಳನ್ನು ಸೃಷ್ಟಿಸುವವಳು. ಅವಳಲ್ಲಿ ತಾಯ್ತನದ ದಿವ್ಯತೆಯನ್ನು ಗುರುತಿಸುವುದು ಅಗತ್ಯ ಎಂಬುದನ್ನು ಧ್ವನಿಸುತ್ತಾರೆ. ಸಂಸಾರ ಕೊಡವಿಯೆದ್ದು ಪಲಾಯನಮಾಡಿ, ಕಣ್ಮುಚ್ಚಿ ಒಂಟಿಕಾಲಲ್ಲಿ ನಿಂತು ಮತ್ತೊಂದು ಕೈಯಲ್ಲಿ ಜಪಮಣಿ ಹಿಡಿದು ಮೀನೆಣಿಸುವ ಬಕಸನ್ಯಾಸಿಗಳ ಸಿನಿಕತೆ, ಡೋಂಗಿತನದ ನಡುವೆ ಜೀವನಪ್ರವಾಹದಲ್ಲಿ ಒಂಟಿಯಾದರೂ ಎದೆಗೆಡದೆ ಮಕ್ಕಳುಮರಿಗಳನ್ನು ಎದೆಗಪ್ಪಿಕೊಂಡು ಈಜಿ ದಡ ಮುಟ್ಟಿಸುವಲ್ಲಿ ಹಣ್ಣುಹಣ್ಣಾಗುವ ಹೆಣ್ಣುಜೀವಗಳನ್ನು ಇವರ ಬಹುಪಾಲು ಕಾದಂಬರಿಗಳಲ್ಲಿ ಕಾಣುತ್ತೇವೆ.
‘ಸನ್ಯಾಸಿಯ ಬದುಕು’ ಕಾದಂಬರಿಯಲ್ಲಿ ಬಸುರಿ ಸುಮಿತ್ರೆ ಸಮೇತ ಎರಡು ಮಕ್ಕಳನ್ನು ತೊರೆದು ರೈಲೇರಿದ ಶಂಕರ, ಕೃಷ್ಣಾನಂದ ಸ್ವಾಮೀಜಿಯಾಗಿ ವಿದೇಶಿ ರಾಧಾಳೊಂದಿಗೆ ಪೂಜೆ ಪಡೆಯುತ್ತ ಸುಖದ ಸುಪ್ಪತ್ತಿಗೆಯಲ್ಲಿ ಮುಳುಗಿದರೆ, ಅತ್ತ ರುಕ್ಮಾಯಿಯೆಂಬ ಒಂಟಿ ಹೆಣ್ಣುಜೀವ ಸುಮಿತ್ರೆ ಮತ್ತವಳ ಮಕ್ಕಳನ್ನು ಎದೆಗಪ್ಪಿಕೊಂಡು ಅವರಿವರ ಮನೆಚಾಕರಿ ಮಾಡಿ ಸಾಕುತ್ತಾಳೆ. ಮುದಿವಯಸ್ಸಲ್ಲಿ ಕಾಶಿಯಾತ್ರೆಗೆಂದು ಕೂಡಿಟ್ಟ ದುಡ್ಡನ್ನು ಸುಮಿತ್ರೆಯ ಮಗಳ ಮದುವೆಗೆ ಖರ್ಚುಮಾಡಿ ನಿಜವಾದ ಕಾಶಿ ಅಂತಃಕರಣದಲ್ಲಿ ಎಂಬುದಕ್ಕೆ ಸಾಕ್ಷಿಯಾಗುತ್ತಾಳೆ.
ಮೌಲ್ಯ ಹೇಳುವುದಲ್ಲ, ಬದುಕಿ ತೋರಿಸಿ ಎಂದ ಕಾರಂತರ ಒಡಹುಟ್ಟಿದವರು ಕಾದಂಬರಿಯ ವಾಸಂತಿ, ಕರುಳಿನ ಕರೆಯ ಭಾಗೀರಥಿ, ನಂಬಿದವರ ನಾಕ ನರಕದ ವಾಗ್ದೇವಿ, ಮರಳಿ ಮಣ್ಣಿಗೆಯ ಸರಸೋತಿ, ಪಾರೋತಿ, ನಾಗವೇಣಿ .. ಯಾವುದೋ ನಂಬಿಕೆಯನ್ನು ಅಪ್ಪಿಕೊಂಡು ಅಂತಮುಖಿಗಳಾಗಿ ಒಂಟಿಯಾಗಿಯೇ ಜೀವನ ಪ್ರವಾಹದಲ್ಲಿ ಈಜುವ ಜೀವನ್ಮುಖಿ ಪಾತ್ರಗಳು, ಜೀವನದಿಂದೆದ್ದ ತತ್ತ್ವಜ್ಞಾನಿಗಳು. ಮೂಕಜ್ಜಿ ಪಾತ್ರವಂತೂ ಕಾರಂತರೇ ತಮ್ಮ ಇಳಿವಯಸ್ಸಿನಲ್ಲಿ ಹಾಕಿದ ಸ್ತ್ರೀವೇಷ. ಬಾಳಿನಲ್ಲಿ ಯಾವುದು ಚೆಲುವು? ಯಾವುದು ಚೆಲುವಲ್ಲ? ಎಂದು ತನ್ನ ವಿರಾಗಸ್ಥಿತಿಯಲ್ಲೇ ಗುರುತಿಸುವ, ಲೋಕವು ಸಂತಾನಕ್ರಿಯೆಯನ್ನು ಅಶ್ಲೀಲವೆಂದರೆ ಅದನ್ನೇ ಒಂದು ಜೀವನಶಕ್ತಿಯೆನ್ನುವ ಮೂಕಜ್ಜಿಯ ಚಿಂತನೆಗಳು; ನೆಲದ ಇತಿಹಾಸ, ತಾತ್ವಿಕತೆಯನ್ನು ಹೇಳಲು ಕಥಾತಂತ್ರವಾಗಿ ಬಳಸಿದ ಅವಳ ಅತೀಂದ್ರಿಯ ಶಕ್ತಿ ಕಲಾತ್ಮಕ. ಆಕೆಯದ್ದು ವಿಜ್ಞಾನದ ವೈಚಾರಿಕ ಆಧ್ಯಾತ್ಮಿಕತೆಯೂ ಹೌದು, ಸಂತಳೊಬ್ಬಳ ಆಧ್ಯಾತ್ಮಿಕತೆಯೂ ಹೌದು.
ಈ ಕಾದಂಬರಿ ಓದಿದಾಗ ನಮಗೆ ಮೂಕಜ್ಜಿಯ ಮೇಲೆ ಅತ್ಯಂತ ಗೌರವವೂ ಪ್ರೀತಿಯೂ ಉಂಟಾಗುತ್ತದೆ. ಅಮೆರಿಕಾದಲ್ಲೋ ಇಂಗ್ಲೆಂಡಲ್ಲೋ ಬೇರೂರುತ್ತಿದ್ದರೆ ಕಾರಂತರು ಜಗತ್ಪ್ರಸಿದ್ಧ ತತ್ತ್ವಜ್ಞಾನಿ ಎಂದೇ ಪ್ರಸಿದ್ಧರಾಗುತ್ತಿದ್ದರು. ಚೋಮ, ಗೋಪಾಲಯ್ಯ, ಮುಕ್ಕಣ್ಣನಂತಹ ಕಾಯಕ ಸಂಸ್ಕೃತಿಯ ಪ್ರಕೃತಿಯ ಚಲನಶೀಲ ಚೈತನ್ಯದ ಪಾತ್ರಗಳ ಮೂಲಕ ಅವರು ಬದುಕಿನ ಬೇರುಗಳನ್ನು ನೆಲದಲ್ಲೇ ಹುಡುಕುತ್ತಾರೆ. ಕಣ್ಣಿಗೆ ಕಾಣಿಸುವ ಬದುಕನ್ನು ನಂಬುತ್ತಾರೆ, ‘ಬಾಳ್ವೆಯೇ ಬೆಳಕು ಸಾವಿನಾಚಿನ ಸಂಗತಿ ನನ್ನ ಚಿಂತನೆಗೆ ಮೀರಿದ್ದು’ ಎನ್ನುತ್ತಾರೆ. ತನ್ನನ್ನು ಅನಾಸ್ತಿಕ ಎನ್ನುತ್ತಾರೆ. ಈ ಕಾರಣದಿಂದಲೇ ಅವರ ಯಶವಂತರಾಯ ಪಾತ್ರವು ಒಬ್ಬ ವ್ಯಕ್ತಿ ಸತ್ತ ಅನಂತರ ಅವನ ಬದುಕಿನ ಸಾಕ್ಷಿಯನ್ನು ಸಾರ್ಥಕತೆಯನ್ನು ಅವನ ಬಾಳಿನ ಬೆಳಕಲ್ಲಿ ಹುಡುಕುತ್ತ ಹೋಗುತ್ತದೆ.
ಜೀವವಿರೋಧಿ ಮತ್ತು ವಿರಕ್ತಿ ಮೂಲವಾದ ವಿಚಾರಗಳನ್ನು ತಿರಸ್ಕರಿಸುವ ಜೀವನಪ್ರೇಮಿಯಾದ ಅವರ ಕೃತಿಗಳಲ್ಲಿ ಆಡಂಬರವಿಲ್ಲ, ತಾನು ಓದುಗನನ್ನು ಆಕರ್ಷಿಸಬೇಕೆಂಬ ಅವಸರವಿಲ್ಲ. ಒಬ್ಬ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು ನಿಧಾನವಾಗಿ ತನ್ನ ಏಕಾಂತದ ಅನುಭವಗಳನ್ನು ಹೇಳುವ ಹಾಗೆ ವಿವರಿಸುತ್ತಾರೆ.‘ಭಾರತೀಯ ಶಿಲ್ಪಕಲೆ’ ಕೃತಿಯಲ್ಲಿ ಗಾಂಧಾರ ಶಿಲ್ಪಕಲೆಯ ಕಾಲದಿಂದ ಚಾಲುಕ್ಯರ ಶಿಲ್ಪಕಲೆಯವರೆಗೆ ಸೌಂದರ್ಯ ಹೇಗೆ ಹರಿದು ಬಂತೆಂಬ ಇತಿಹಾಸ ತೆರೆದಿಟ್ಟಿದ್ದಾರೆ.
ಶಿಲ್ಪ- ವಾಸ್ತುಶಿಲ್ಪಗಳನ್ನು ಸವಿಯುವ ಹುಚ್ಚಿಂದ ಸಾಲ ಮಾಡಿ ಪಶ್ಚಿಮದೇಶಗಳನ್ನು ಸುತ್ತಿ ಬಂದಿದ್ದಾರೆ. ಯಕ್ಷಗಾನ ಬ್ಯಾಲೆ ನಿರ್ದೇಶಿಸಿ ಅದು ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುವಂತೆ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ಶಿವರಾಮ ಕಾರಂತರ ಕುರಿತು ಬರೆಯಲು ಹೊರಟು, ಎ.ಕೆ ರಾಮಾನುಜರ ‘ಅಂಗುಲ ಹುಳುವಿನ ಪರಕಾಯ ಪ್ರವೇಶ’ ಕವಿತೆಯಲ್ಲಿ ಕೋಗಿಲೆಯ ಹಾಡು ಅಳೆಯಲು ಹೊರಟ ಪಾಪದ ಅಂಗುಲ ಹುಳುವಿನದ್ದೇ ಸ್ಥಿತಿಯಂತಾಗಿದೆ ನನ್ನ ಸ್ಥಿತಿ. ಪೂರ್ಣವಿರಾಮವಿಲ್ಲದೆ ಕೊನೆಕಾಣದೆ ಚಲಿಸುತ್ತಲೇ ಇದ್ದೇನೆ ದಟ್ಟ ಕಾಡಿನೊಳಗೆ….
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
