| ಮೃತ್ಯುಂಜಯ ಕಪಗಲ್ ಬೆಂಗಳೂರುರಾಜ್ಯದ ಹಿಂದುಳಿದ ತಾಲೂಕುಗಳ ಸಮಾನ, ಸಮತೋಲಿತ ಅಭಿವೃದ್ಧಿ ಸಾಧಿಸಲು ಉದ್ದೇಶಿತ ‘ವಿಶೇಷ ಅಭಿವೃದ್ಧಿ ಯೋಜನೆ’ ಸರ್ಕಾರದ ಮಟ್ಟದಲ್ಲಿ ಇನ್ನೂ ಟೇಕಾಫ್ ಆಗಿಲ್ಲ.
ಸಮಾಜ ಕಲ್ಯಾಣ, ಕೃಷಿ ಹಾಗೂ ಸಂಬಂಧಿಸಿದ ಇಲಾಖೆ, ಗ್ರಾಮೀಣಾಭಿವೃದ್ಧಿ, ನೀರಾವರಿ ಸೇರಿ 10 ಇಲಾಖೆಗಳು ವಿಶೇಷ ಅಭಿವೃದ್ಧಿ ಯೋಜನೆ (ಎಸ್​ಡಿಪಿ) ಅನುಷ್ಠಾನದ ಜವಾಬ್ದಾರಿ ಹೊತ್ತಿವೆ. ಚುನಾವಣೆ ಕೆಲಸ, ನಂತರ ಹೊಸ ಸರ್ಕಾರದ ಬಜೆಟ್ ತಯಾರಿ, ಗ್ಯಾರಂಟಿ ಯೋಜನೆಗಳಿಗೆ ಒತ್ತು ನೀಡಿದ್ದರ ಪರಿಣಾಮ ಎಸ್​ಡಿಪಿ ಮಹತ್ವವೇ ಗೌಣವಾಗಿದೆ.
ಪ್ರಸಕ್ತ ಆರ್ಥಿಕ ವರ್ಷಕ್ಕೆ 3,036.18 ಕೋಟಿ ರೂ. ಎಸ್​ಡಿಪಿಗೆ ಹಂಚಿಕೆಯಾಗಿದೆ. ಕೆಡಿಪಿ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ವರದಿ ಪ್ರಕಾರ ಆರ್ಥಿಕ ಪ್ರಗತಿಯಲ್ಲಿ ಶೂನ್ಯ ಸಾಧನೆ. ಹಿಂದಿನ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಅನ್ನು ಕಾಂಗ್ರೆಸ್ ಸರ್ಕಾರ ಪರಿಷ್ಕರಿಸಿದೆ. ಹಣಕಾಸು ಇಲಾಖೆ ಹೊಂದಿರುವ ಸಿದ್ದರಾಮಯ್ಯ ಜುಲೈನಲ್ಲಿ ಪರಿಷ್ಕೃತ ಬಜೆಟ್ ಮಂಡಿಸಿದ್ದಾರೆ. ಎಸ್​ಡಿಪಿಗೆ ನಿಗದಿತ ಅನುದಾನ ಕಡಿತವಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ. ಆದರೆ, ಭೌತಿಕ ಮತ್ತು ಆರ್ಥಿಕ ಪ್ರಗತಿ ವಿಷಯದಲ್ಲಿ ಎಸ್​ಡಿಪಿಯತ್ತ ಸರ್ಕಾರ ಇನ್ನೂ ಗಮನಹರಿಸಿಲ್ಲ.
ನಿರಾಸಕ್ತಿ:ಎಸ್​ಡಿಪಿಗೆ ಹಂಚಿಕೆಯಾದ ಅನುದಾನಕ್ಕೆ ಶಾಸನಾತ್ಮಕ ರಕ್ಷಣೆಯಿಲ್ಲ. ಯೋಜನೆ, ಯೋಜನೇತರ ಬಾಬ್ತಿನಲ್ಲಿ ಆಯಾ ಇಲಾಖೆಗೆ ನಿಗದಿತ ಅನುದಾನದಲ್ಲಿ ಒಂದಿಷ್ಟು ಎಸ್​ಡಿಪಿಗೆ ವಿಂಗಡಿಸಲಾಗುತ್ತದೆ.
ಸರ್ಕಾರಿ ಭಾಷೆಯಲ್ಲಿ ಕಡತಕ್ಕೊಂದು ಕಾರ್ಯಕ್ರಮ. ‘ವಿಶೇಷ ಅಭಿವೃದ್ಧಿ ಯೋಜನೆ’ ನಾಮಫಲಕ ಹೊರತುಪಡಿಸಿ ಪ್ರತ್ಯೇಕ ಅನುದಾನ ಒದಗಿಸುವುದಿಲ್ಲ. ಇದರಿಂದಾಗಿ ಯೋಜನೆಗೆ ತೆರೆದ ವಿಶೇಷ ಕೋಶವು ಪ್ರಾಮುಖ್ಯತೆ ಕಳೆದುಕೊಂಡಿದೆ. ಇಲಾಖೆಗಳಲ್ಲಿ ನಿರಾಸಕ್ತಿ ಮನೆ ಮಾಡಿದ್ದು, ಕ್ರಿಯಾ ಯೋಜನೆ ರೂಪಿಸಲು ಸಾಕಷ್ಟು ಕಾಲಾವಕಾಶ ಪಡೆಯುತ್ತವೆ. ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು, ಅನುಷ್ಠಾನಕ್ಕೆ ತರುವಷ್ಟರಲ್ಲಿ ಆರ್ಥಿಕ ವರ್ಷದ ಕೊನೆಯ ತ್ರೖೆಮಾಸಿಕಕ್ಕೆ ಕಾಲಿಟ್ಟಿರುತ್ತದೆ ಎಂದು ಮೂಲಗಳು ಹೇಳಿವೆ.
ಅಭಿವೃದ್ಧಿ ಕುಂಠಿತ:ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಸಾರ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕುಗಳನ್ನು ಮೇಲಕ್ಕೆತ್ತಿ, ಸಮತೋಲಿತ ಪ್ರಗತಿ ಸಾಧಿಸುವುದು ಎಸ್​ಡಿಪಿ ಗುರಿ. 15 ಸಾವಿರ ಕೋಟಿ ರೂ. ಇಲಾಖೆ ಜತೆಗೆ ಹೆಚ್ಚುವರಿ 16 ಸಾವಿರ ಕೋಟಿ ರೂ. ಅನ್ನು 8 ವರ್ಷಗಳ ಕಾಲಮಿತಿಯೊಳಗೆ ವ್ಯಯಿಸಲು ಶಿಫಾರಸು ಮಾಡಿತ್ತು. ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ಸೇರಿ 114 ತಾಲೂಕುಗಳು ರಾಜ್ಯ ವ್ಯಾಪಿ ಚಾಚಿಕೊಂಡಿದ್ದು, ಕಲ್ಯಾಣ ಕರ್ನಾಟಕ ಪ್ರಾಂತದಲ್ಲಿ ಸಿಂಹಪಾಲಿವೆ.
ಡಾ. ಡಿ.ಎಂ. ನಂಜುಂಡಪ್ಪ ನಿಗದಿತ ಗಡುವಿಗೆ ಹೆಚ್ಚುವರಿ 2 ವರ್ಷ ಅಂದರೆ 10 ವರ್ಷ ಎಸ್​ಡಿಪಿ ಮುಂದುವರಿದಿದ್ದು, ಶಿಫಾರಸಿಗಿಂತ ಹೆಚ್ಚಿನ ಮೊತ್ತ ವೆಚ್ಚವಾಗಿದೆ. ಅಂಕಿ-ಅಂಶ ಸಾರಿದರೂ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿಲ್ಲ.
ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ ಸಂಶೋಧನಾ ಸಂಸ್ಥೆಯು 2014ರಲ್ಲಿ ಸಲ್ಲಿಸಿದ ಅಧ್ಯಯನ ವರದಿಯು ಹಿಂದುಳಿದ ತಾಲೂಕುಗಳ ಸಂಖ್ಯೆ 114 ರಿಂದ 109ಕ್ಕೆ ಇಳಿದಿದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಿತ್ತು.
ಅತ್ಯಂತ ಹಿಂದುಳಿದ ತಾಲೂಕುಗಳ ಸಂಖ್ಯೆ 41ರಿಂದ 34ಕ್ಕೆ ಇಳಿದಿವೆ. ಆದರೆ, ಹಿಂದುಳಿದ ತಾಲೂಕುಗಳ ಸಂಖ್ಯೆ 35 ರಿಂದ 34ಕ್ಕೆ ಇಳಿಕೆಯಾಗಿದೆ. ವರದಿಯಂತೆ ಸಮಗ್ರ, ಸಮತೋಲಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲವೆಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಹಿಂದುಳಿದ ತಾಲೂಕುಗಳ ಸಚಿವ-ಶಾಸಕರ ಒತ್ತಾಸೆಯಂತೆ 2017ರಲ್ಲಿ ಸಿದ್ದರಾಮಯ್ಯ ಎಸ್​ಡಿಪಿ ಮುಂದುವರಿಸಿದರು. ನಂತರ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಮುಂದೆ ಸಾಗಿದೆ. ಈ ನಡುವೆ ವಿಶೇಷ ಅಭಿವೃದ್ಧಿ ಯೋಜನೆಯ ಸಾಧನೆ ಕುರಿತು ಸ್ಥೂಲ ಅಧ್ಯಯನ, ಮೌಲ್ಯಮಾಪನ ಮಾಡಿದ್ದರೂ ಫಲಿತಾಂಶ ಇನ್ನೂ ಹೊರಬಂದಿಲ್ಲ.
ಮತ್ತದೇ ಹಿನ್ನಡೆ:ಕಳೆದ ಆರ್ಥಿಕ ವರ್ಷ (2022-23)ದಲ್ಲಿ ಎಸ್​ಡಿಪಿಗೆ 3,099.77 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ಮೊದಲ ತ್ರೖೆಮಾಸಿಕದ ಅಂತ್ಯಕ್ಕೆ 160 ಕೋಟಿ ರೂ. ಬಿಡುಗಡೆಗೆ ಪ್ರತಿಯಾಗಿ 178.56 ಕೋಟಿ ರೂ. ವೆಚ್ಚವಾಗಿತ್ತು. ಪ್ರಸಕ್ತ ಹಣಕಾಸು ವರ್ಷ (2023-24)ಕ್ಕೆ 3,036.18 ಕೋಟಿ ರೂ. ಹಂಚಿಕೆಯಾಗಿದೆ. ಈ ಪೈಕಿ ಕೇವಲ 50 ಕೋಟಿ ರೂ. ಜೂನ್ ಅಂತ್ಯದವರೆಗೆ ಬಿಡುಗಡೆಯಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ನೀಡಿದ ಈ ಅನುದಾನದಲ್ಲಿ ನಯಾಪೈಸೆ ಖರ್ಚಾಗಿಲ್ಲ. ಅಭಿವೃದ್ಧಿಯಲ್ಲಿ ಮತ್ತದೇ ಹಿನ್ನಡೆಯನ್ನು ತ್ರೖೆಮಾಸಿಕ ಪ್ರಗತಿ ವರದಿ ಕೈಗನ್ನಡಿಯಾಗಿದೆ.
ಗ್ಯಾರಂಟಿ ಯೋಜನೆಗಳ ಆರ್ಥಿಕ ಸಂಪನ್ಮೂಲ ಹೊಂದಿಸಲಾಗಿದೆ. ಉಳಿದ ಅಭಿವೃದ್ಧಿ ಯೋಜನೆ ಈ ಬಾರಿ ಮಂದಗತಿಯಲ್ಲಿರಲಿವೆ ಎಂದು ಸರ್ಕಾರ ಸುಳಿವು ನೀಡಿದೆ. ವಿಶೇಷ ಅಭಿವೃದ್ಧಿ ಯೋಜನೆಗೆ ಕಾಗದದಲ್ಲಿ ಅನುದಾನ ಹಂಚಿಕೆಯಾಗಿದೆ. ವಾಸ್ತವಿಕವಾಗಿ ಸಿಗುವ ಮೊತ್ತವೆಷ್ಟು? ಎಂಬ ನಿಖರತೆಯಿಲ್ಲ. ಇದರಿಂದಾಗಿ ಎಸ್​ಡಿಪಿ ಅನುಷ್ಠಾನದ ಜವಾಬ್ದಾರಿ ಹೊತ್ತ 10 ಇಲಾಖೆಗಳು ಕ್ರಿಯಾ ಯೋಜನೆ ತಯಾರಿಗೆ ಮೀನಮೇಷ ಎಣಿಸುತ್ತಿವೆ ಎಂದು ಯೋಜನಾ ಇಲಾಖೆ ಮೂಲಗಳು ತಿಳಿಸಿವೆ.
ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?

2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fourteen =
Remember me
