ಬೆಂಗಳೂರು:ಇತ್ತೀಚೆಗೆ ಕಾಡಾನೆ ಹಾವಳಿ ವಿಪರೀತ ಆಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಗುರುವಾರ ಉನ್ನತಮಟ್ಟದ ಸಭೆ ನಡೆಸಿ ಆನೆ ಹಾವಳಿ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿ ಸೂಚನೆಗಳನ್ನು ನೀಡಿದರು.ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ವಿಚಾರ ವಿನಿಮಯ ನಡೆಸಿದರು.ಮೂಡಿಗೆರೆಯಲ್ಲಿ ಕಾಡಾನೆ ನಿಗ್ರಹ ದಳದ ಕಾರ್ತಿಕ್ ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಆನೆ ದಾಳಿ ಸಾವಿನ ಎಲ್ಲ ಪ್ರಕರಣಗಳ ಕುರಿತಂತೆ ಪರಾಮರ್ಶಿಸಿ, ಯಾವ ಭಾಗದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ? ಇದಕ್ಕೆ ಕಾರಣವೇನು ಎಂಬ ಬಗ್ಗೆ ತಿಳಿದು ಪರಿಹಾರೋಪಾಯಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಆನೆಗಳು ಯಾವ ಯಾವ ಋತುವಿನಲ್ಲಿ ಯಾವ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ ಎಂಬ ಬಗ್ಗೆಯೂ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುಂಚಿತವಾಗಿಯೇ ಜಾಗೃತಿ ಮೂಡಿಸಲು ಮತ್ತು ಮಾಹಿತಿ ನೀಡಲು ಸೂಚಿಸಿದರು.ಅರಣ್ಯದಂಚಿನ ಶಾಲೆ ಕಾಲೇಜುಗಳಿಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ತಜ್ಞರು ತೆರಳಿ ವಿದ್ಯಾರ್ಥಿಗಳಿಗೆ ಆನೆಗಳು ಮತ್ತು ಕಾಡು ಪ್ರಾಣಿಗಳ ಸ್ವಭಾವದ ಬಗ್ಗೆ ಹಾಗೂ ಕಾಡು ಪ್ರಾಣಿಗಳ ನಾಡಿಗೆ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆಯೂ ತಿಳಿ ಹೇಳಲು ಸೂಚಿಸಿದರು.ರೈಲ್ವೆ ಬ್ಯಾರಿಕೇಡ್, ಆನೆ ನಿಗ್ರಹ ಕಂದಕ ಮತ್ತು ಸೌರ ಬೇಲಿಗಳನ್ನು ಅಳವಡಿಸುವ ಕುರಿತಂತೆಯೂ ಹೆಚ್ಚಿನ ಮುತುವರ್ಜಿ ವಹಿಸಬೇಕು. ವಿಳಂಬ ಮಾಡಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಎಲ್ಲ ಉನ್ನತ ಅಧಿಕಾರಿಗಳೂ ವಾರದಲ್ಲಿ ಕನಿಷ್ಠ ಎರಡು ದಿನ ಕಾಡಾನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದೂ ತಿಳಿಸಲಾಗಿದ್ದು, ಹಿರಿಯ ಐಎಫ್‌ಎಸ್ ಅಧಿಕಾರಿಗಳನ್ನು ವಿವಿಧ ಜಿಲ್ಲೆಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.ಈ ಅಧಿಕಾರಿಗಳು ನಿಯೋಜಿತ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಕುರಿತಂತೆ ಪರಿಶೀಲನಾ ಸಭೆ ಮಾಡಿ, ಜಿಲೆಯಲ್ಲಿ ಬಾಕಿ ಇರುವ ವಿವಿಧ ಪರಿಹಾರ ಧನ ಪಾವತಿಸುವ ಪ್ರಕರಣಗಳ ಕುರಿತೂ ಚರ್ಚಿಸಿ ಇತ್ಯರ್ಥಪಡಿಸಬೇಕು ಎಂದು ತಿಳಿಸಿದರು.ಆನೆಗಳು ನಾಡಿಗೆ ಬರುತ್ತಿರುವುದಕ್ಕೆ ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆ ಕಾರಣ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಕಾಡಿನಂಚಿನ ನೆಡುತೋಪುಗಳಲ್ಲಿ, ಪರಿಭಾವಿತ ಅರಣ್ಯದಲ್ಲಿ ಸೊಪ್ಪು, ಹಣ್ಣು, ಎಲೆ, ತೊಗಟೆ, ಬಿದುರು ಇತ್ಯಾದಿ ಸಿಗುವಂತೆ ಕ್ರಮ ವಹಿಸಲು ಹಾಗೂ ಅರಣ್ಯದೊಳಗೆ ಬೇಸಿಗೆಯಲ್ಲೂ ನೀರು ಲಭ್ಯವಾಗುವಂತೆ ನೋಡಿಕೊಳ್ಳಲು ನಿರ್ದೇಶಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
