ಬೆಂಗಳೂರು:ಹೈನುಗಾರರಿಗೆ ಪ್ರೋತ್ಸಾಹಧನ ನೀಡಿ ಗಮನ ಸೆಳೆದಂತೆ ದೊಡ್ಡ ಸಂಖ್ಯೆಯಲ್ಲಿರುವ ಕುರಿಗಾಹಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಡಳಿತಾರೂಢ ಬಿಜೆಪಿ ತೆರೆಮರೆ ಕಾರ್ಯಾಚರಣೆ ಆರಂಭಿಸಿದೆ. ವಿವಿಧ ಸಮುದಾಯಗಳನ್ನು ಸೆಳೆಯಲು ಒಂದೊಂದೇ ‘ಜನಪ್ರಿಯ’ ಯೋಜನೆ ಜಾರಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒತ್ತು ನೀಡಿದ್ದು, ಕುರಿ ಸಾಕಾಣಿಕೆದಾರರ ಬಹುನಿರೀಕ್ಷಿತ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಿಷನ್-150 ಗುರಿ ಸಾಧಿಸುವ ರಣತಂತ್ರದ ಭಾಗವಾಗಿ ಜನಮನ ಸೂರೆಗೊಳ್ಳುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆಸಕ್ತಿವಹಿಸಿದೆ.
ಕುರಿಗಾಹಿಗಳಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಜತೆಗೆ ಆರ್ಥಿಕವಾಗಿ ಬಲವರ್ಧನೆ ಉದ್ದೇಶಿತ ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ ಜಾರಿಗೊಳಿಸಿದ್ದು, ಪ್ರತಿ ಸದಸ್ಯನ ಘಟಕ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುಷ್ಠಾನದ ಹಾದಿ ಸುಗಮಗೊಳಿಸಿದೆ. ಕುರಿದೊಡ್ಡಿಗೆ ಶೆಡ್ ನಿರ್ವಿುಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದು, ಇದನ್ನೂ ಜಾರಿಗೊಳಿಸಿದರೆ ಕುರುಬರ ಓಲೈಕೆಗೆ ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
ಸೌಲಭ್ಯಕ್ಕೆ ಅರ್ಹರು:ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 20 ಸಾವಿರ ಸದಸ್ಯರು ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಕ್ರಮೇಣ ಸದಸ್ಯರ ಸಂಖ್ಯೆ ಏರಿಕೆಗೂ ಪುಷ್ಠಿ ನೀಡಲಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಮಾಂಸದ ಬೇಡಿಕೆ ಮತ್ತು ಪೂರೈಕೆ ನಡುವಿನ ಕೊರತೆ ಸರಿದೂಗಿಸಲು ನೆರವಾಗಲಿದೆ ಎಂಬುದು ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಭಿಪ್ರಾಯ.
ಸಂತಸ:ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆ ನೀಡುವ ‘ತೆಲಂಗಾಣ ಮಾದರಿ’ ಯೋಜನೆ ಕನಸು ನನಸಾಗಿದ್ದಕ್ಕೆ ಕುರುಬ ಸಮುದಾಯದ ಹಿರಿಯ ನಾಯಕರು, ಮಹಾಮಂಡಳ ಸಂತಸಗೊಂಡಿದೆ. ಸಿಎಂ ಬೊಮ್ಮಾಯಿಯವರ ಆರ್.ಟಿ. ನಗರ ನಿವಾಸಕ್ಕೆ ಭಾನುವಾರ ತೆರಳಿ ಕಂಬಳಿ ಹೊದಿಸಿ ಸತ್ಕರಿಸುವ ಮೂಲಕ ಈ ನಿಯೋಗ ಸಂಭ್ರಮ ಹಂಚಿಕೊಂಡಿದೆ.
ಯೋಜನೆಯ ತಿರುಳು:ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯ ಯೋಜನೆಗೆ ಅರ್ಹ. ಪ್ರತಿ ಸದಸ್ಯನಿಗೆ 20 ಕುರಿ ಮತ್ತು ಒಂದು ಮೇಕೆಯನ್ನು ನೀಡಲಿದೆ. 1.75 ಲಕ್ಷ ರೂ. ಘಟಕ ವೆಚ್ಚದಲ್ಲಿ ಶೇ.50 ಮೊತ್ತವನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್​ಸಿಡಿಸಿ) ಸಾಲವಾಗಿ ನೀಡಲಿದೆ. ಶೇ.25 ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ಭರಿಸಲಿದೆ. ಘಟಕ ವೆಚ್ಚದಲ್ಲಿನ ಉಳಿದ ಮೊತ್ತ ಫಲಾನುಭವಿ ವಂತಿಗೆಯಾಗಿ ನೀಡಬೇಕಾಗುತ್ತದೆ. ಫಲಾನುಭವಿ ತನ್ನ ಪಾಲು ನೀಡುವುದಕ್ಕೆ ಸಾಲದ ವ್ಯವಸ್ಥೆ ಮಾಡಿದೆ. ಎನ್​ಸಿಡಿಸಿ ಸಾಲ ಮರುಪಾವತಿಗೆ ಫಲಾನುಭವಿಗೆ ಏಳು ವರ್ಷಗಳ ಕಾಲಾವಕಾಶವಿದೆ.
ಯೋಜನೆಯಡಿ 2022-23ನೇ ಸಾಲಿನಲ್ಲಿ 354.50 ಕೋಟಿ ರೂ. ಕಾದಿರಿಸಲಾಗಿದೆ. ಈ ಪೈಕಿ ಎನ್​ಸಿಡಿಸಿ ಸಾಲ 175 ಕೋಟಿ ರೂ., ಕೇಂದ್ರ ಸರ್ಕಾರ ಸಹಕಾರ ಇಲಾಖೆ ಸಾಲ 87.50 ಕೋಟಿ ರೂ. ಶೇ.5ರಷ್ಟು ಆಡಳಿತಾತ್ಮಕ ವೆಚ್ಚ ಸೇರಿ 92 ಕೋಟಿ ರೂ. ನೀಡಲಿದೆ. ರಾಜ್ಯ ಸರ್ಕಾರದ ಪಾಲು 87.5 ಕೋಟಿ ರೂ. ಇಷ್ಟೇ ಮೊತ್ತವನ್ನು ಫಲಾನುಭವಿ ವಂತಿಗೆ ಅಥವಾ ಬ್ಯಾಂಕ್ ಸಾಲ ಮೂಲಕ ಭರಿಸಿಕೊಳ್ಳಬೇಕು.
ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಹಾಗೂ ನಿಗಮದ ಜತೆಗೆ ಮಹಾಮಂಡಳ ಕೈಜೋಡಿಸಲಿದೆ. ಕುರಿಗಾಹಿಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡಲೆಂದು ಮಾರುಕಟ್ಟೆ ಪ್ರವೇಶಿಸಲಿದೆ.
|ಶರಣು ಬಿ. ತಳ್ಳಿಕೇರಿ, ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷ
ಮಾರುಕಟ್ಟೆ ಪ್ರವೇಶ:ಗೋಹತ್ಯೆ ನಿಷೇಧದಿಂದ ಶೇ.5-10ರಷ್ಟು ಮಾಂಸಾಹಾರಿಗಳು ಕುರಿ ಮಾಂಸದತ್ತ ಹೊರಳಿದ್ದು, ಬೇಡಿಕೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಮೇಲಿನ ಮಾಫಿಯಾ ಹಿಡಿತ ತಪ್ಪಿಸಲೆಂದು ಮಾರುಕಟ್ಟೆ ಪ್ರವೇಶಿಸಲು ಮಹಾಮಂಡಳ ಚಿಂತನೆ ನಡೆಸಿದೆ ಎಂದು ತಿಳಿಸಿದಾಗ ಬೊಮ್ಮಾಯಿ ಪ್ರಶಂಸಿಸಿದ್ದಾರೆ. ಒಂದು ಕೆಜಿ ಕುರಿ ಮಾಂಸಕ್ಕೆ 700 ರೂ.ಗಳಿದ್ದರೆ ಸಾಕಿ ಬೆಳೆಸಿದವರಿಗೆ 200 ರೂ. ಸಿಗುತ್ತಿದ್ದು, ಕುರಿಗಾಹಿಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡಲಾಗುವುದು. ‘ನಾರಿ ಸುವರ್ಣ’ ಜತೆಗೆ ಬನ್ನೂರು, ಡೆಕ್ಕಣಿ, ಬಳ್ಳಾರಿ, ಯಳಗ, ಕೆಂಗುರಿ ಇತ್ಯಾದಿ ದೇಸಿ ತಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ನಿಯೋಗ ವಿವರಿಸಿದೆ.
ಸಮುದಾಯಗಳತ್ತ ಗಮನ:ಇತರೆ ಹಿಂದುಳಿದ ವರ್ಗಗಳ ‘ದೊಡ್ಡಣ್ಣ’ ಕುರುಬರು ಯೋಜನೆಯ ಬಹುದೊಡ್ಡ ಫಲಾನುಭವಿ ಸಮುದಾಯವಾಗಲಿದೆ. ಅಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಮೇಲೆ ಪ್ರಭಾವ ಬೀರಲು ಬಿಜೆಪಿಯ ಸಮ್ಮೋಹನಾಸ್ತ್ರವಾಗಿ ಬಳಕೆಯಾಗುವ ಸಾಧ್ಯತೆಗಳಿವೆ. ಉಪಜೀವನಕ್ಕೆ ಕುರಿ ಸಾಕಾಣಿಕೆ ಅವಲಂಬಿತ ಬೇರೆ ಸಮುದಾಯಗಳ ಬಡ ಕುಟುಂಬಗಳೂ ಲಾಭ ಪಡೆಯಲೆಂದು ಯೋಜನೆಗೆ ‘ಕುರಿಗಾಹಿ’ ಎಂಬ ವ್ಯಾಪಕ ಅರ್ಥ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಸೇರಿ ತಳಸ್ತರ, ಹಿಂದುಳಿದ ಸಮುದಾಯಗಳು, ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸೇರಿ ವಿವಿಧ ಹಿಂದುಳಿದ ಸಮುದಾಯಗಳು ಕುರಿ, ಮೇಕೆ ಸಾಕಾಣಿಕೆ ನೆಚ್ಚಿಕೊಂಡಿವೆ. 12 ಲಕ್ಷ ಕುರಿಗಾಹಿ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಪ್ರತಿ ಕುಟುಂಬಕ್ಕೆ ನಾಲ್ಕು ಜನರಂತೆ ಲೆಕ್ಕ ಹಾಕಿದರೂ ಜನಸಂಖ್ಯೆ ಬಲ 50 ಲಕ್ಷ ಆಸುಪಾಸಿಗೆ ತಲುಪುತ್ತದೆ.
ಬಿಜೆಪಿಯಿಂದ ಹಾವೇರಿಯಲ್ಲಿ ಕುರಿಗಾಹಿಗಳ ಸಮಾವೇಶ:ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಲೆಂದು ಕುರಿಗಾಹಿಗಳ ಬೃಹತ್ ಸಮಾವೇಶ ಆಯೋಜಿಸಲು ಮಹಾಮಂಡಳ ತೀರ್ವನಿಸಿದೆ. ಸಿಎಂ ತವರು ಹಾವೇರಿ ಜಿಲ್ಲೆಯಲ್ಲಿ ಏರ್ಪಡಿಸಲಿರುವ ಸಮಾವೇಶದಲ್ಲಿ ಎರಡು ಲಕ್ಷ ಕುರಿಗಾಹಿಗಳನ್ನು ಸೇರಿಸಲು ಯೋಚಿಸಿದೆ. ಸಮಾವೇಶದ ಸ್ಥಳದ ಇನ್ನೂ ಅಂತಿಮವಾಗಿಲ್ಲ. ಸರ್ಕಾರಕ್ಕೆ ಧನ್ಯವಾದ ತಿಳಿಸುವ ಜತೆಗೆ ನೂತನ ಯೋಜನೆ ಬಗ್ಗೆ ಜಾಗೃತಿ ಮೂಡಿಸುವುದು ಸಮಾವೇಶದ ಉದ್ದೇಶವೆಂದು ಮಂಡಳಿ ಅಧ್ಯಕ್ಷ ಶರಣು ಬಿ. ತಳ್ಳಿಕೇರಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೆ ಕೋಮುಸಂಘರ್ಷ; 2 ಗುಂಪುಗಳ ಮಧ್ಯೆ ಗಲಾಟೆ, ಕಲ್ಲು ತೂರಾಟ, ಚಾಕು ಇರಿತ..

ಭೀಕರ ಅಪಘಾತ: 30ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್ ಪಲ್ಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
