|ಅರವಿಂದ ಅಕ್ಲಾಪುರಶಿವಮೊಗ್ಗ
ಕರೊನಾ ನಂತರ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ಮೂಲಕ ಹರಡುವ ಕೆಲವು ಮಾರಣಾಂತಿಕ ಕಾಯಿಲೆಗಳ ಬಗ್ಗೆ ಬೇರು ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಲು ಒನ್ ಹೆಲ್ತ್ ಯೋಜನೆ ರೂಪಿಸಿದೆ. ಕರ್ನಾಟಕದಲ್ಲೂ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೇಂದ್ರ ಪಶುಸಂಗೋಪನಾ ಇಲಾಖೆ ಮೂಲಕ ಜಾರಿಗೊಳಿಸಲಾಗಿದೆ.
ಹಲವು ದಶಕಗಳಿಂದ ಮಲೆನಾಡು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಜನರನ್ನು ಕಾಡುತ್ತಿರುವ ಕೆಎಫ್​ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್), ಇತ್ತೀಚಿನ ವರ್ಷಗಳಲ್ಲಿ ಆತಂಕ ಮೂಡಿಸಿರುವ ಅಂಥ್ರಾಕ್ಸ್, ಬ್ರುಸಿಲೋಸಿಸ್ ಬಗ್ಗೆ ತಜ್ಞರ ತಂಡ ಸ್ಥಳೀಯರನ್ನು ಸಂರ್ಪಸಿ ಅಧ್ಯಯನ ನಡೆಸಲಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಂಥ್ರಾಕ್ಸ್ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಬ್ರುಸಿಲೋಸಿಸ್ ಕುರಿತು ಅಧ್ಯಯನ ನಡೆಯಲಿದೆ.
ಜೂನ್​ನಲ್ಲಿ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆ ಆರಂಭಗೊಂಡಿದ್ದು, ಕೆಎಫ್​ಡಿ ಕುರಿತ ಅಧ್ಯಯನ ಶುರುವಾಗಿದೆ. ಪ್ರಾಣಿಶಾಸ್ತ್ರಜ್ಞ ಬೆಂಗಳೂರಿನ ಡಾ. ಪ್ರಕಾಶ್ ನೇತೃತ್ವದ ತಂಡ ಸಾಗರ ತಾಲೂಕಿನ ಅರಳಗೋಡು ಹಾಗೂ ತೀರ್ಥಹಳ್ಳಿ ತಾಲೂಕಿನ ಕೀಗಡಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ಈ ತಂಡದಲ್ಲಿ ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಡಾ. ವಿನಯ್ ಇದ್ದಾರೆ.
ಕೆಎಫ್​ಡಿಗೆ ಬಂತು ಬಲ:ಅಂಥ್ರಾಕ್ಸ್ ಹಾಗೂ ಬ್ರುಸಿಲೋಸಿಸ್ ಕಾಯಿಲೆಗಿಂತಲೂ ವೈದ್ಯರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಿರುವುದು, ಜನರನ್ನು ಭಯದಲ್ಲಿ ಬದುಕುವಂತೆ ಮಾಡಿರುವುದು ಕೆಎಫ್​ಡಿ. ಎಷ್ಟೇ ಪ್ರಯತ್ನ ಮಾಡಿದರೂ ಈ ವೈರಾಣು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ಪ್ರದೇಶಗಳಿಗೆ ವಿಸ್ತರಣೆಯಾಗುತ್ತಿದೆ.
ಬೇಸಿಗೆ ಅವಧಿಯಲ್ಲಿ ವ್ಯಾಪಕವಾಗಿ ಹರಡುವ ಕೆಎಫ್​ಡಿ ವೈರಾಣು ಕಾಡಂಚಿನಲ್ಲಿ ವಾಸಿಸುವ ಜನರಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ಸಾಗರ, ತೀರ್ಥಹಳ್ಳಿ ತಾಲೂಕಿನ ಕೆಲವು ಗ್ರಾಮಗಳ ಜನರು ಹಲವು ವರ್ಷಗಳಿಂದ ಕೆಎಫ್​ಡಿ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ಇದೀಗ ಕೆಎಫ್​ಡಿ ಕುರಿತು ಬೇರು ಮಟ್ಟದಲ್ಲಿ ಜನರನ್ನು ಸಂರ್ಪಸಿ ಮಾಹಿತಿ ಸಂಗ್ರಹಿಸುವುದರಿಂದ ಮುಂದಿನ ದಿನಗಳಲ್ಲಿ ವೈದ್ಯಕೀಯ ಲೋಕಕ್ಕೆ ಅನುಕೂಲವಾಗಲಿದೆ.
ವಿವಿಧ ಆಯಾಮ:ವೈರಾಣು ವ್ಯಾಪಕವಾಗಿ ಹರಡದಂತೆ ನಿಗಾವಹಿಸುವುದು, ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆ ಮಾಡುವುದು, ಅಂಕಿಅಂಶಗಳ ಸಂಗ್ರಹಣೆ ಮಾಡುವುದು ಈ ಯೋಜನೆಯ ವಿವಿಧ ಆಯಾಮಗಳಾಗಿವೆ. ಅಧ್ಯಯನ ನಡೆಸಿ ಸಂಗ್ರಹಿಸಲಾದ ಮಾಹಿತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ.
ಮಾಹಿತಿ ಸಂಗ್ರಹ:ಕೆಎಫ್​ಡಿ ವೈರಾಣು ತೀವ್ರಗೊಂಡ ಸಂದರ್ಭದಲ್ಲಿ ಸುತ್ತಲಿನ ಪರಿಸರದಲ್ಲಿ ಉಂಟಾದ ಬದಲಾವಣೆಗಳು, ವೈರಾಣು ವಾಹಕಗಳಾದ ಮಂಗಗಳ ವರ್ತನೆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಕೆಎಫ್​ಡಿ ವೈರಸ್ ಮಾನವನ ದೇಹದ ಮೇಲೆ ಬೀರುವಷ್ಟು ಪರಿಣಾಮ ಮಂಗಗಳ ಮೇಲೆ ಬೀರುವುದಿಲ್ಲ. ಮಂಗಗಳೇ ವೈರಸ್ ವಾಹಕಗಳಾದರೂ ಒಂದೆರಡು ಮಂಗಗಳು ಮಾತ್ರ ಸಾವನ್ನಪ್ಪುತ್ತವೆ. ಈ ವಿಷಯ ತಜ್ಞರ ಪಾಲಿಗೆ ತೀವ್ರ ಕುತೂಹಲ ಮೂಡಿಸಿದೆ. ಹೀಗಾಗಿ ಇದರ ಬಗ್ಗೆಯೂ ಅಧ್ಯಯನ ನಡೆಯಲಿದೆ.
ಔಷಧಕ್ಕೆ ಪೂರಕ:ಕೆಎಫ್​ಡಿ ವೈರಸ್ಸನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಪರಿಣಾಮಕಾರಿ ಚಿಕಿತ್ಸೆ ನೀಡುವುದು ಸಾಧ್ಯವಾಗದ ಕಾರಣ ಅನೇಕರು ಮೃತಪಟ್ಟಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕೆಎಫ್​ಡಿ ಅಧ್ಯಯನ ಸಂದರ್ಭದಲ್ಲಿ ವೈರಸ್ ಪತ್ತೆ, ಕಾಯಿಲೆ ತಡೆಗಟ್ಟುವ ವಿಧಾನದಲ್ಲಿ ಪರಿಣಾಮಕಾರಿ ಬದಲಾವಣೆಗಳು ಹಾಗೂ ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆಯೂ ಸಮರ್ಪಕ ಮಾಹಿತಿ ನೀಡುವಂತೆ ತಜ್ಞರ ತಂಡಕ್ಕೆ ಸೂಚನೆ ನೀಡಿದೆ.
ಮುಂದಿನ ದಿನಗಳಲ್ಲಿ ಪ್ರವಾಸ:ಈಗಾಗಲೇ ಎರಡು ಗ್ರಾಮಗಳಿಗೆ ಭೇಟಿ ನೀಡಿರುವ ತಜ್ಞರು ಮುಂದಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕೆಎಫ್​ಡಿ ತೀವ್ರವಾಗಿ ಕಾಣಿಸಿಕೊಂಡ, ಹೆಚ್ಚು ಸಾವುಗಳು ಸಂಭವಿಸಿದ ಗ್ರಾಮಗಳಿಗೂ ಭೇಟಿ ಕೊಡಲಿದ್ದಾರೆ. ಅಲ್ಲಿನ ಜನರೊಂದಿಗೆ ಸಂವಹನ ನಡೆಸಿ ಅಧ್ಯಯನ ವರದಿ ಸಿದ್ಧಪಡಿಸುತ್ತಾರೆ. ಅದನ್ನು ಆಧರಿಸಿ ಸರ್ಕಾರದ ಮಟ್ಟದಲ್ಲಿ ನೀತಿ ರೂಪಿಸಲಾಗುತ್ತದೆ.
ಅಧ್ಯಯನ ಹೇಗೆ?
ಇಷ್ಟು ವರ್ಷ ಕೆಎಫ್​ಡಿಯಿಂದ ತೀವ್ರ ಸಂಕಷ್ಟ ಎದುರಿಸಿದ ಪ್ರದೇಶಗಳಲ್ಲಿ ಜಾನುವಾರುಗಳು ಮಾತ್ರ ವೈರಸ್ ದಾಳಿಗೆ ತುತ್ತಾಗದಿರುವುದು ತಜ್ಞರಲ್ಲಿ ಆಶ್ಚರ್ಯ ಮೂಡಿಸಿದೆ. ಇದಕ್ಕೆ ಕಾರಣವೇನು? ಜಾನುವಾರುಗಳಲ್ಲಿ ಅಂತಹ ರೋಗ ನಿರೋಧಕ ಶಕ್ತಿ ಇದೆಯೇ? ಅಥವಾ ವೈರಸ್ ಅಷ್ಟೊಂದು ದುರ್ಬಲವೇ? ಎಂಬ ಬಗ್ಗೆ ಸಂಶೋಧನೆ ನಡೆಯಲಿದೆ. ಕೆಎಫ್​ಡಿ ಎಷ್ಟು ದಿನದಲ್ಲಿ ಉಲ್ಬಣಗೊಂಡಿತು? ವೈರಸ್ ಪತ್ತೆಯಾದ ಬಳಿಕ ಜನರು ಎದುರಿಸಿದ ಆರೋಗ್ಯ ಸಮಸ್ಯೆಗಳೇನು? ಕಾಯಿಲೆಯಿಂದ ಜನರು ಗುಣಮುಖರಾಗಲು ಎಷ್ಟು ಅವಧಿ ಬೇಕಾಗಿತ್ತು? ಎಂಬ ವಿಷಯಗಳ ಕುರಿತು ತಜ್ಞರು ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದ ತೋಟಗಾರಿಕೆ ಇಲಾಖೆಯ ತೋಟಯ್ಯ

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ದಂಪತಿ; ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
