| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಅರಣ್ಯವಾಸಿಗಳು ಕಳೆದ ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲದಿಂದ ಎದುರಿಸುತ್ತಿರುವ ಒಕ್ಕಲೆಬ್ಬಿಸುವ ಭೀತಿಯನ್ನು ನಿವಾರಣೆ ಮಾಡಲು ಸರ್ಕಾರ ಮುಂದಾಗಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಲು ನಿರ್ಧರಿಸಿವೆ.
ಅರಣ್ಯವಾಸಿಗಳ ಸಮ ಸ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪೆಂದು ರಾಜ್ಯದಲ್ಲಿ ಲಕ್ಷಾಂತರ ಜನರ ಆತಂಕಕ್ಕೆ ಕಾರಣವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ 2015ರಲ್ಲಿ ಇಂತಹದೊಂದು ಪ್ರಯತ್ನ ಆರಂಭಿಸಿತ್ತು. ಆದರೆ ಆನಂತರ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈಗ ಅರಣ್ಯವನ್ನು ಡಿ-ರಿಸರ್ವ್ ಮಾಡುವ ಮೂಲಕ ಪರಿಹಾರ ರೂಪಿಸಬೇಕಾಗಿದೆ.
ಹಿಂದಿನ ಯಾವುದೇ ಸರ್ಕಾರಗಳು ಜಂಟಿ ಸಮೀಕ್ಷೆ ಮಾಡುವ ಪ್ರಯತ್ನ ಮಾಡಿಲ್ಲ. ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಇದೀಗ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದು, ಸದ್ಯದಲ್ಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಇಲಾಖೆಯ ಅಧಿಕಾರಿಗಳ ಜತೆ ಜಂಟಿ ಸಭೆ ನಡೆಸಿ ಸಮೀಕ್ಷೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಎಷ್ಟು ಅರಣ್ಯವಿದೆ?:ರಾಜ್ಯದಲ್ಲಿ 33,23,854.98 ಹೆಕ್ಟೇರ್ ಪ್ರದೇಶವನ್ನು ಅಧಿಸೂಚಿತ ಅರಣ್ಯ ಪ್ರದೇಶವೆಂದು ಘೊಷಿಸಲಾಗಿದ್ದು, ಇದರಲ್ಲಿ 29,55,022.37 ಹೆಕ್ಟೇರ್ ಮೀಸಲು ಅರಣ್ಯ ಇದೆ. ದೇವರ ಕಾಡು, ಗಂಧ, ತೇಗ ಮೀಸಲು ಸಣ್ಣ ಹಾಗೂ ರಕ್ಷಿತ ಅರಣ್ಯ ಪ್ರದೇಶಗಳು ಸೇರಿದೆ. ಉಳಿದಂತೆ ಜಮ್ಮಾಬಾಣಿ, ಬಾನೆ, ಕುಮ್ಕಿ, ಅಮೃತ್ ಮಹಲ್ ಕಾವಲ್, ಬೆಟ್ಟಾ ಲ್ಯಾಂಡ್, ಖರಾಬ್, ನದಿಪಾತ್ರ ಹಾಗೂ ಸಮುದ್ರದ ಮುಳುಗಡೆ ಪ್ರದೇಶಗಳು, ಅರಣ್ಯ ಇನಾಮು ಭೂಮಿ, ಗೋಮಾಳ, ದಟ್ಟ ಮರಗಳಿರುವ ಅರಣ್ಯ ಪ್ರದೇಶ, ಯಾವುದೇ ಮರಗಿಡಗಳಿಲ್ಲದ ಸಿ ಅಂಡ್ ಡಿ ಭೂಮಿ, ಕರೆಕುಂಟೆ, ಶಾಲೆ, ಸಮುದಾಯದ ಬಳಕೆಯಲ್ಲಿರುವ ಒಟ್ಟು 43,35,694.80 ಹೆಕ್ಟೇರ್ ವಿವಿಧ ಅರಣ್ಯ ಭೂಮಿ ಇದೆ ಎಂದು ತಜ್ಞರ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಸಮೀಕ್ಷೆ ಆರಂಭ ಎಲ್ಲಿ?:ಬಹುತೇಕ ಜಿಲ್ಲೆಗಳಲ್ಲಿ ಸಮಸ್ಯೆ ಇದ್ದೆ ಇದೆ. ಆದರೆ ರಾಮನಗರ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ. ಆದ್ದರಿಂದ ಮೊದಲಿಗೆ ಅಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ. ಶೇ.10ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇರುವ ಕಡೆ ಕಂದಾಯ ಇಲಾಖೆಗೆ ಬಿಟ್ಟುಕೊಡಲಾಗುತ್ತದೆ. ಕಂದಾಯ ಇಲಾಖೆಯ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಡಿಎಫ್​ಒಗಳಿಗೆ ಸಮೀಕ್ಷೆ ಜವಾಬ್ದಾರಿ ನೀಡಲಾಗುತ್ತದೆ.
ಮುಗಿಯುವುದು ಯಾವಾಗ?:ಮೂರು ತಿಂಗಳಿನಲ್ಲಿ ಎಲ್ಲ ರೀತಿಯ ಸಿದ್ಧತೆಯನ್ನು ಪೂರ್ಣ ಮಾಡಿಕೊಂಡು ಸಮೀಕ್ಷೆ ಆರಂಭಿಸಲಾಗುತ್ತದೆ. ಆರು ತಿಂಗಳೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.
ಡೀಮ್್ಡ ಅರಣ್ಯ:ರಾಜ್ಯದಲ್ಲಿ 9.94 ಲಕ್ಷ ಎಕರೆ ಡೀಮ್ಡ್ ಫಾರೆಸ್ಟ್ ನಿಂದ 6.64 ಲಕ್ಷ ಎಕರೆ ಕೈ ಬಿಡಬೇಕಿದೆ. ಆಗ 3.30 ಲಕ್ಷ ಎಕರೆ ಮಾತ್ರ ಡೀಮ್ಡ್ ಫಾರೆಸ್ಟ್ ಆಗಿ ಉಳಿಯಲಿದೆ. ಡೀಮ್ಡ್ ಫಾರೆಸ್ಟ್​ನ 6.64 ಎಕರೆ ಕಂದಾಯ ಇಲಾಖೆಗೆ ಬರಲಿದೆ. ಡೀಮ್್ಡ ಅರಣ್ಯ ಯಾವುದು ಎನ್ನುವ ಬಗ್ಗೆ ವರದಿ ಸಲ್ಲಿಸುವಂತೆ 1996ರ ಫೆಬ್ರವರಿ 12 ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ 1997ರ ಜನವರಿ 10 ರಂದು ತಜ್ಞರ ಸಮಿತಿ ರಚಿಸಿತ್ತು. ಈ ಸಮಿತಿ 1997ರ ಏಪ್ರಿಲ್ 2 ರಂದು ತನ್ನ ವರದಿ ಸಲ್ಲಿಸಿತ್ತು.
ಶರಾವತಿ ಸಮಸ್ಯೆ:ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಕಳೆದ ಮೇ ತಿಂಗಳಲ್ಲಿ ವಾಪಾಸು ಕಳುಹಿಸಿದೆ. ಹಾಗಾಗಿ ಸರ್ಕಾರ ಇದೀಗ ಜಂಟಿ ಸಮೀಕ್ಷೆ ಮೂಲಕ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್​ಗೆ ಮನವಿ ಮಾಡಿ ಅರಣ್ಯವಾಸಿಗಳನ್ನು ಉಳಿಸಲು ಮುಂದಾಗಿದೆ.
ಬೀದರ್ ಜಿಲ್ಲೆಯ ಹಳ್ಳಿಗಳ ಪಾಡು:ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಎರಡು ಹಳ್ಳಿಗಳಲ್ಲಿ ಅರಣ್ಯ ಸಮಸ್ಯೆ ಇದೆ. ನೂರಾರು ವರ್ಷಗಳಿಂದ ಅಲ್ಲಿ ಕಟ್ಟಡಗಳಿವೆ, ಶಾಲೆ, ಕುಡಿಯುವ ನೀರು, ದೇವಸ್ಥಾನಗಳಿವೆ. ಅರಣ್ಯವೇ ಇಲ್ಲ. ಆದರೆ ಕಂದಾಯ ಇಲಾಖೆಯ ದಾಖಲೆಯಲ್ಲಿ ಮಾತ್ರ ಅರಣ್ಯವೆಂದು ನಮೂದಾಗಿದೆ. ಅಲ್ಲಿನ ನಿವಾಸಿಗಳಿಗೆ ನ್ಯಾಯ ನೀಡುವುದು ಸರ್ಕಾರದ ಕರ್ತವ್ಯವಾಗಿದೆ.
ಅರಣ್ಯ ಒತ್ತುವರಿಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಒತ್ತುವರಿ ತೆರವು ಮಾಡುತ್ತೇವೆ. ಆದರೆ ರೈತರು, ಬಡವರನ್ನು ಅರಣ್ಯದಲ್ಲಿಯೇ ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ಕಂದಾಯ ಇಲಾಖೆ ಜತೆ ಜಂಟಿ ಸಮೀಕ್ಷೆ ಮಾಡಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್​ಗೆ ಮನವಿ ಮಾಡುತ್ತೇವೆ.
| ಈಶ್ವರ ಖಂಡ್ರೆ ಅರಣ್ಯ ಸಚಿವ
ಒತ್ತುವರಿ ತೆರವು:ಕೆಲವೆಡೆ ಒತ್ತುವರಿ ಸಹ ಆಗಿದೆ. ಅದನ್ನು ತೆರವು ಮಾಡಿ ಅರಣ್ಯವನ್ನು ಉಳಿಸಿಕೊಳ್ಳುವುದು, ಬಡವರು, ರೈತರು ಇರುವ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಯ ವ್ಯಾಪ್ತಿಗೆ ತರುವುದು ಸಮೀಕ್ಷೆಯ ಉದ್ದೇಶವಾಗಿದೆ.
ಐದು ಲಕ್ಷ ಕುಟುಂಬಗಳು:ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯದಲ್ಲಿ ಸುಮಾರು 5 ಲಕ್ಷ ಆದಿವಾಸಿ ಕುಟುಂಬಗಳು ಅರಣ್ಯದಿಂದ ಎತ್ತಂಗಡಿಯ ಭೀತಿಯಲ್ಲಿವೆ. ಅರಣ್ಯ ಹಕ್ಕು ಕಾಯ್ದೆ 2012ರಲ್ಲಿ ನಿಯಮಗಳು ರೂಪುಗೊಂಡ ನಂತರ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಯಾವ ಪ್ರಮಾಣದಲ್ಲಿ ಪ್ರಚಾರ ಮಾಡಬೇಕಾಗಿತ್ತೋ ಅಷ್ಟರ ಮಟ್ಟಿಗೆ ಮಾಡದೇ ಇರುವುದರಿಂದಲೇ ದೊಡ್ಡ ಪ್ರಮಾಣದಲ್ಲಿ ಬುಡಕಟ್ಟು ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಕರ್ನಾಟಕ 18ನೇ ಸ್ಥಾನದಲ್ಲಿದೆ. ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಅರ್ಜಿ ಹಾಕಿದವರ ಸಂಖ್ಯೆ ಸುಮಾರು 2.26 ಲಕ್ಷ. ಸರ್ಕಾರ ಅದರಲ್ಲಿ 12 ಸಾವಿರ ಜನರಿಗೆ ಮಾತ್ರ ಒಪ್ಪಿಗೆ ನೀಡಿದೆ. ಒಟ್ಟಾರೆ ಆದಿವಾಸಿಗಳ ಜನಸಂಖ್ಯೆ 11.50 ಲಕ್ಷ ಇರಬಹುದೆಂದು ಅಂದಾಜಿದೆ. ತ್ರಿಪುರದಲ್ಲಿ ಮಾತ್ರ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಉತ್ತಮವಾಗಿ ಆಗಿದೆ. ಅಲ್ಲಿನ ಸರ್ಕಾರ ಮನೆಮನೆಗೆ ಹೋಗಿ ದಾಖಲೆಗಳನ್ನು ಸಂಗ್ರಹಿಸಿ ಸಕ್ರಮ ಮಾಡಿದೆ. ಒಡಿಶಾದಲ್ಲೂ ಸ್ವಲ್ಪ ಮಟ್ಟಿನ ಅನುಷ್ಠಾನ ಉತ್ತಮವಾಗಿದೆ. ಉಳಿದಂತೆ ಬಹುತೇಕ ಎಲ್ಲ ರಾಜ್ಯಗಳು ನಿರ್ಲಕ್ಷ್ಯ ತೋರಿಸಿವೆ.
ಸಮಸ್ಯೆ ಏನು?:1980ರಲ್ಲಿ ಅರಣ್ಯ ಕಾಯ್ದೆ ಬಂತು. ಅದರ ಪ್ರಕಾರ ಅರಣ್ಯ ವ್ಯಾಪ್ತಿಯಲ್ಲಿ ಯಾರೊಬ್ಬರೂ ವಾಸಿಸುವಂತಿಲ್ಲ. ಅರಣ್ಯ ಪ್ರದೇಶ ಹೆಚ್ಚಿಸಬೇಕೆಂದು 1982ರಲ್ಲಿ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಸಹ ಅರಣ್ಯವೆಂದು ದಾಖಲೆಗಳಲ್ಲಿ ನಮೂದಿಸಿದ್ದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಒಂದು ಹೆಕ್ಟೇರ್​ಗೆ 50 ಮರ ಇದ್ದರೆ ಮಾತ್ರ ಅರಣ್ಯವೆಂದು ಪರಿಗಣಿಸಬೇಕು. ರಾಜ್ಯದಲ್ಲಿ ಸುಮಾರು 6 ಲಕ್ಷ ಹೆಕ್ಟೇರ್​ನಷ್ಟು ಅರಣ್ಯ ಹೆಸರಿನ ಪ್ರದೇಶದಲ್ಲಿ 5 ಲಕ್ಷಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಅವುಗಳು ಆಗಿನಿಂದಲೂ ಒಕ್ಕಲೆಬ್ಬಿಸುವ ಭೀತಿಯಲ್ಲಿಯೇ ಇವೆ. ಅನೇಕ ಕಡೆಗಳಲ್ಲಿ ಹಳ್ಳಿಗಳಿವೆ, ದೊಡ್ಡ ಜನವಸತಿ ಪ್ರದೇಶಗಳಿವೆ. ಶಾಲೆ, ಆಸ್ಪತ್ರೆ, ಅಂಗನವಾಡಿ ಕಟ್ಟಡಗಳು, ದೇವಾಲಯ, ಧಾರ್ವಿುಕ ಕೇಂದ್ರಗಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲ್ಲದಿದ್ದರೂ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಅರಣ್ಯವೆಂದು ನಮೂದಾಗಿರುವುದು ಸಮಸ್ಯೆಯಾಗಿದೆ. ಜಂಟಿ ಸಮೀಕ್ಷೆಯ ಮೂಲಕ ಈಗ ಪರಿಹಾರ ರೂಪಿಸಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಗಮನಕ್ಕೆ ತಂದು ಡಿ-ರಿಸರ್ವ್ ಮಾಡಬೇಕಾಗಿದೆ. ಜನವಸತಿ ಇದ್ದರೂ ಸಹ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಅಡಮಾನವಿಡಲು, ಸಾಲ ಪಡೆಯಲು, ಮಾರಾಟ ಮಾಡಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು

ಗೃಹಜ್ಯೋತಿಗೆ ಒಂದು ವಾರದಲ್ಲೇ 51 ಲಕ್ಷಕ್ಕೂ ಅಧಿಕ ಜನರಿಂದ ನೋಂದಣಿ: ಕಡೇ ದಿನಾಂಕ ಯಾವತ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
