ಬೆಂಗಳೂರು:ತುಟ್ಟಿ ಕಾಲದಲ್ಲಿ ಜನರ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೊರಿಸಿಲ್ಲ. ಕಲ್ಯಾಣ ಕಾರ್ಯಕ್ರಮಗಳು ಸೇರಿ ರಾಜ್ಯದ ಅಭಿವೃದ್ಧಿಯನ್ನೂ ನಿರ್ಲಕ್ಷಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಮುಂದಿಟ್ಟಿರುವ 2024-25ನೇ ಸಾಲಿನ ಮುಂಗಡಪತ್ರವು ‘ತೆರಿಗೆ ಭಾರರಹಿತ, ಪ್ರಗತಿಗೂ ಹಿತ’ದ ನಿಲುವು ತಳೆದಿದೆ.
ಹೆಚ್ಚುತ್ತಿರುವ ಯೋಜನೆ, ಯೋಜನೇತರ ಬದ್ಧತಾ ವೆಚ್ಚಗಳು, ಜನರ ನಿರೀಕ್ಷೆಗಳು, ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಮಾನತೆ ಪ್ರಣೀತ ಸೂತ್ರದ ಕಲ್ಯಾಣ ಕಾರ್ಯಕ್ರಮಗಳ ವೆಚ್ಚವನ್ನೂ ಸರಿದೂಗಿಸುವುದು ಸವಾಲಿನದು. ಹೊಸದಾಗಿ ಯಾವುದೇ ತೆರಿಗೆ ಹಾಕದೆ ಏರುಗತಿಯ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಸಿದ್ದರಾಮಯ್ಯ ತಮ್ಮ ಅನುಭವ ಧಾರೆಯೆರೆದಿದ್ದಾರೆ. 15ನೇ ಬಜೆಟ್ ಎಂಬುದು ಬರೀ ದಾಖಲೆ ಅಲ್ಲ, ಹೊಸ ಆದಾಯ ಮೂಲಗಳ ಅನ್ವೇಷಣೆ ಮಾಗೋಪಾಯಗಳನ್ನು ಕಟ್ಟಿಕೊಟ್ಟಿದ್ದಾರೆ.
ಅನ್ವೇಷಣೆ, ವಿಸ್ತರಣೆ:ತೆರಿಗೆಯೇತರ ಆದಾಯ ಮೂಲಗಳನ್ನು ಅನ್ವೇಷಿಸಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಒಲವು ವ್ಯಕ್ತವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ನಗರಾಭಿವೃದ್ಧಿ ಸಹಿತ ವಿವಿಧ ಇಲಾಖೆಗಳ ಆಸ್ತಿ ನಗದೀಕರಣಕ್ಕೆ ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಮಂಡ್ಯದ ಮೈಶುಗರ್ ಕಾರ್ಖಾನೆ ಆವರಣದಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ನಿರ್ವಿುಸಲು ತೀರ್ವನಿಸಿ, ಹಳೇ ಕಾರ್ಖಾನೆ ಯಂತ್ರೋಪಕರಣ, ಇನ್ನಿತರ ಚರಾಸ್ತಿ ನಗದೀಕರಣ ಮೂಲಕ ಈ ವೆಚ್ಚ ಹೊಂದಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸ್ಥಿರ ಆಸ್ತಿಗಳಿಂದ ಸಂಪನ್ಮೂಲ ಕ್ರೋಡೀಕರಣ, ವಸತಿ ಸೆಸ್, ವಿವಿಧ ಶುಲ್ಕಗಳನ್ನು ಪರಿಷ್ಕರಿಸಿ ಆದಾಯ ಸಂಗ್ರಹಿಸಲು ಕರ್ನಾಟಕ ಕೈಗೆಟುಕುವ ವಸತಿ ನಿಧಿ ಸ್ಥಾಪನೆ, ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯಡಿ ಕೊಳೆಗೇರಿ ಸೆಸ್ ದರ ಪರಿಷ್ಕರಣೆ ಪ್ರಸ್ತಾಪಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ನಿರ್ವಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ ‘ಫೈರ್ ಸೆಸ್’ ಅನ್ನು ಕಾಯ್ದೆ ಪ್ರಕಾರ ವಿಧಿಸಿ, ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ. ಬೆಂಗಳೂರಿನ ಸಂಗ್ರಹವಾಗುವ ತೆರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಕ್ಕು ಎಂದು ವ್ಯಾಖ್ಯಾನಿಸಿದ್ದಾರೆ. ಜತೆಗೆ ಜಾಹೀರಾತು ಹಾಗೂ ಪ್ರೀಮಿಯಂ ಎಫ್​ಎಆರ್ ನೀತಿ ಜಾರಿಗೆ ತರುವ ಮೂಲಕ ಎರಡು ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯಕ್ಕೂ ದಾರಿ ಮಾಡಿಕೊಡಲಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಇ-ತರಬೇತಿ, ತೆರಿಗೆ ಸೋರಿಕೆ ಮತ್ತು ಮೋಸ ಪತ್ತೆಗೆ ಒತ್ತು. ಮೂಲ ಸೌಲಭ್ಯಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ನೀತಿ-2018ಕ್ಕೆ ಮಧ್ಯಂತರ ಪರಿಷ್ಕರಣೆ ಪ್ರಕಟಿಸಿರುವ ಸಿದ್ದರಾಮಯ್ಯ, ರಸ್ತೆ, ಸೋಲಾರ್, ಜವಳಿ ಪಾರ್ಕ್, ಕೃಷಿ, ತೋಟಗಾರಿಕೆ, ಮೆಟ್ರೋ, ಜಲಸಾರಿಗೆ ಮುಂತಾದ ಕ್ಷೇತ್ರಗಳಿಗೆ ಖಾಸಗಿ ನೆರವು ಪಡೆಯುವ ಅಭಿಲಾಷೆಯನ್ನು ನಿವೇದಿಸಿದ್ದಾರೆ.
ಜನರ ಕಲ್ಯಾಣಕ್ಕೂ ಬದ್ಧತೆ:2024-25ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಪ್ರಸ್ತಾಪಿಸಿದ ಪ್ರಕಾರ ರಾಜಸ್ವ ಸ್ವೀಕೃತಿಗೆ ಅನುಪಾತವಾಗಿ ಬದ್ಧ ವೆಚ್ಚಗಳು ಶೇ.103ಕ್ಕೆ ಏರಿಕೆಯಾಗುವ ಅಂದಾಜಿದೆ. ಹಿಂದಿನ ವರ್ಷ (2023-24)ಶೇ.9 ಇದ್ದರೆ 2022-23ರಲ್ಲಿ ಶೇ.79 ಇತ್ತು. ವಿತ್ತೀಯ ಯೋಜನೆಯಲ್ಲಿ ಉಲ್ಲೇಖಿಸಿದಂತೆ 2024-25ರಲ್ಲಿ ವೇತನ, ಪಿಂಚಣಿ, ಬಡ್ಡಿ ಪಾವತಿ, ಆಡಳಿತಾತ್ಮಕ ವೆಚ್ಚವೂ ಸೇರಿ ಯೋಜನೇತರ 1,59,526 ಕೋಟಿ ರೂ., ಯೋಜನೆಗಳು ಆಧಾರಿತ ಬದ್ಧ ವೆಚ್ಚಗಳ ಮೊತ್ತ 1,10,957 ಕೋಟಿ ರೂ.ಗಳಿಗೆ ಹೆಚ್ಚಳವಾಗುವ ಅಂದಾಜಿದೆ.ಯೋಜನೆ, ಯೋಜನೇತರ ವೆಚ್ಚಗಳ ಏರಿಕೆಯನ್ನು ಗಮನಿಸಿಯೂ ಐದು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ., ಒಳಗೊಂಡು ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 1.20 ಲಕ್ಷ ಕೋಟಿ ರೂ. ಒದಗಿಸಲಾಗಿದೆ. ಒಟ್ಟು 3.71 ಲಕ್ಷ ಕೋಟಿ ರೂ. ಬಜೆಟ್ ಗಾತ್ರದಲ್ಲಿ 3.68 ಲಕ್ಷ ಕೋಟಿ ರೂ. ಆದಾಯ ಸ್ವೀಕೃತಿಯ ಅಂದಾಜಿದೆ. 1.05 ಲಕ್ಷ ಕೋಟಿ ರೂ. ಸಾಲ ಪ್ರಸ್ತಾಪಿಸಿದ ಹೊರತಾಗಿಯೂ ಮೂರು ಸಾವಿರ ಕೋಟಿ ಕೊರತೆ ಬಜೆಟ್ ಇದಾಗಲಿದೆ ಎನ್ನುವುದು ಗಮನಿಸಬೇಕಾದ ಅಂಶ. ಅಗಾಧ ವೆಚ್ಚಗಳಿಗೆ ಬೇಕಾದ ಆರ್ಥಿಕ ಸಂಪನ್ಮೂಲ ಎಲ್ಲಿಂದ ತರುತ್ತಾರೆ? ಎಂಬ ಪ್ರಶ್ನೆಗೂ ಸಿದ್ದರಾಮಯ್ಯ ತಮ್ಮ ಬಜೆಟ್​ನಲ್ಲಿ ಉತ್ತರಿಸಿದ್ದಾರೆ. ಅಲ್ಲದೆ, ತೆರಿಗೆ ಭಾರ ಹೊರಿಸದೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಬದ್ಧತೆ, ಉತ್ತರದಾಯಿತ್ವ ಮೆರೆದಿದ್ದಾರೆ.
ಮಷಿನ್ ಲರ್ನಿಂಗ್ ಆಡಳಿತ ಘಟಕ ಸ್ಥಾಪನೆ:ಕೃತಕ ಬುದ್ಧಿಮತ್ತೆ/ ಮಷಿನ್ ಲರ್ನಿಂಗ್ ಆಧಾರಿತ ತಂತ್ರಾಂಶ ಗಳನ್ನು ಬಳಸಿಕೊಂಡು ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ‘ಕೃತಕ ಬುದ್ಧಿಮತ್ತೆ/ ಮಷಿನ್ ಲರ್ನಿಂಗ್ ಆಡಳಿತ ಘಟಕ’ ಸ್ಥಾಪನೆ. ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಜವಾಬ್ದಾರಿ ಹೆಚ್ಚಿಸುವ ನಿಟ್ಟಿನಲ್ಲಿ ಇ-ಕಚೇರಿ ತಂತ್ರಾಂಶದ ಅನುಷ್ಠಾನವನ್ನು ಸರ್ಕಾರದ ಹಂತದಿಂದ ಗ್ರಾಮ ಪಂಚಾಯಿತಿ ಹಂತದವರೆಗಿನ ಎಲ್ಲ ಕಚೇರಿಗಳಿಗೆ ವಿಸ್ತರಣೆ. ಐಸಿಟಿ ಮೂಲಸೌಕರ್ಯ ಮತ್ತು ದತ್ತ ಸಂಗ್ರಹಣೆಗೆ ಸಂಬಂಧಿಸಿದ ಸೈಬರ್ ದಾಳಿಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಚಾಲ್ತಿ ಸೆಕ್ಯುರಿಟಿ ಆಪರೇಷನ್ ಸೆಂಟರ್ ಉನ್ನತೀಕರಣ, ಮುಂದಿನ ದಿನಗಳಲ್ಲಿ ಕ್ರಮೇಣ ಎಲ್ಲ ಸರ್ಕಾರಿ ದತ್ತಾಂಶಗಳನ್ನು ಕಡ್ಡಾಯವಾಗಿ ಸೆಕ್ಯುರಿಟಿ ಆಪರೇಷನ್ ಸೆಂಟರ್ ಸಂಸ್ಥೆಯ ಮೂಲಕ ನಿರ್ವಹಿಸಲು ಕ್ರಮವಹಿಸಲಾಗುವುದು. ಡಿಫೇಕ್ ಮತ್ತಿತರ ಸೈಬರ್ ಅಪರಾಧಗಳ ಪರಿಣಾಮಕಾರಿ ತನಿಖೆ ನಡೆಸಿ, ಪರಿಣಾಮಕಾರಿ ಕ್ರಮಕೈಗೊಳ್ಳುವ ಉದ್ದೇಶದಿಂದ 43 ಸೈಬರ್, ಎಕಾನಾಮಿಕ್ಸ್ ಮತ್ತು ನಕೋಟಿಕ್ಸ್ ಪೊಲೀಸ್ ಠಾಣೆಗಳನ್ನು ಉನ್ನತೀಕರಣ, ಕಾರಾಗೃಹಗಳ ಸುಗಮ ಆಡಳಿತ ಮತ್ತು ಭದ್ರತೆಗಾಗಿ ಕೃತಕಬುದ್ಧಿಮತ್ತೆ ತಂತ್ರಾಂಶ, ಬ್ಯಾಗೇಜ್ ಸ್ಕಾ್ಯನರ್ ಮುಂತಾದ ಆಧುನಿಕ ಉಪಕರಣಗಳನ್ನು ಖರೀದಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ತಂತ್ರಜ್ಞಾನದ ಸಮರ್ಥ ಬಳಕೆ :ತಂತ್ರಜ್ಞಾನದ ಸಾಧ್ಯತೆ, ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಸಿದ್ದರಾಮಯ್ಯ ಅವರ 2024-25ನೇ ಸಾಲಿನ ಬಜೆಟ್ ಹೆಗ್ಗಳಿಕೆ. ಕೃಷಿ, ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಯೋಜನೆಗಳು, ಆಡಳಿತ ಸೇವೆಯಲ್ಲಿ ದಕ್ಷತೆ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣದಲ್ಲಿ ಪಾರದರ್ಶಕತೆ…ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ತಾಂತ್ರಿಕ, ನವ್ಯ ತಂತ್ರಜ್ಞಾನವನ್ನು ಹಾಸುಹೊಕ್ಕಾಗಿಸಿದ್ದಾರೆ. ಸ್ಥಳೀಯ ಸರ್ಕಾರಗಳಿಗೆ ಡಿಜಿಟಿಲೀಕರಣ ಆದಾಯ, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ತಂತ್ರಾಂಶ ಆಧಾರಿತ ಸ್ವಚ್ಛತೆ, ಮರಗಳು, ಉದ್ಯಾನವನಗಳ ಗಣತಿ ಹಾಗೂ ಮೇಲ್ವಿಚಾರಣೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಐಪಿಒ ವೆಚ್ಚಗಳಿಗೆ ಸಹಾಯಧನ ಮತ್ತು ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಉದ್ಯಮಗಳ ಬಾಕಿ ಸಕಾಲಕ್ಕೆ ಪಾವತಿಗೆ ಎಲೆಕ್ಟ್ರಾನಿಕ್ ವೇದಿಕೆ ಸೃಜನೆ. ಕಲ್ಯಾಣ ಕರ್ನಾಟಕದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಸರ್ಕಾರಿ ದಾಖಲೆಗಳನ್ನು ಡಿಜಿ ಲಾಕರ್ ಆಪ್​ನಲ್ಲಿ ಸುರಕ್ಷಿತವಾಗಿರಿಸಲು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ‘ನನ್ನ ಗುರುತು’ ಅಭಿಯಾನ.
ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ವಾಸ್ತವಿಕವಾಗಿ ಜಮೆಯಾಗಬೇಕಾದ ಆಸ್ತಿ ತೆರಿಗೆ, ಇತರ ಶುಲ್ಕ ಪರಿಣಾಮಕಾರಿಯಾಗಿ ವಸೂಲಿ, ತೆರಿಗೆ ಸೋರಿಕೆ ತಡೆಗಟ್ಟಲು 3ಡಿ ಡ್ರೋನ್ ತಂತ್ರಜ್ಞಾನ ಬಳಸಿ ಸ್ವತ್ತುಗಳ ಮ್ಯಾಪಿಂಗ್ ಮತ್ತು ಮೌಲ್ಯಮಾಪನ ಕೈಗೊಳ್ಳಲಿದೆ. ಸ್ವಚ್ಛತೆಯಿಂದ ವಿವಿಧ ಕಾರ್ಯಗಳ ಮಾಹಿತಿ ಶೇಖರಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ.
ಜನಸ್ನೇಹಿ ಸೇವೆ:ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಫೋನ್. ಬೆಂಗಳೂರು ಮಹಾನಗರದಲ್ಲಿ ಮಹಿಳಾ ಸುರಕ್ಷತೆ ಒಳಗೊಂಡ ವೆಹಿಕಲ್ ಟ್ರಾ್ಯಕಿಂಗ್ ಮೊಬೈಲ್ ಆಪ್ ಅನುಷ್ಠಾನ. ಬಿಬಿಎಂಪಿ ವ್ಯಾಪ್ತಿಯ 20 ಲಕ್ಷ ಆಸ್ತಿ ಮಾಲೀಕರಿಗೆ ಡಿಜಿಟಲ್ ಇ-ಖಾತಾ, ಆಸ್ತಿ ತೆರಿಗೆ ಪಾವತಿ ವಿವರ. ದಾಸನಪುರ ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಬಯೋ ಸಿಎನ್​ಜಿ ಘಟಕ ಸ್ಥಾಪಿಸಿ, ಶೂನ್ಯತ್ಯಾಜ್ಯ ತರಕಾರಿ ಮಾರುಕಟ್ಟೆಯಾಗಿ ಪರಿವರ್ತನೆ. ಮಹಿಳೆಯರಲ್ಲಿ ಪ್ರಾರಂಭಿಕ ಹಂತದಲ್ಲೇ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಪತ್ತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮ್ಯಾನೋಗ್ರಾಫಿ ಯಂತ್ರಗಳ ಅಳವಡಿಕೆ. ಎಲ್ಲ ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಘಟಕಗಳನ್ನು ತೆರೆಯುವುದಾಗಿ ಬಜೆಟ್​ನಲ್ಲಿ ಘೋಷಿಸಲಾಗಿದೆ.
ಕೃಷಿ ತಾಂತ್ರಿಕತೆ ಜ್ಞಾನ ಪ್ರಸರಣಕ್ಕೆ ಬೆಂಗಳೂರು ಕೃಷಿವಿಜ್ಞಾನಗಳ ವಿಶ್ವ ವಿದ್ಯಾಲಯದ ಆರ್​ಕೆ ಶಾಲಾ ಕೃಷಿ ಕ್ಷೇತ್ರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ. ರಾಯಚೂರು ಕೃಷಿ ವಿವಿ ಆವಿಷ್ಕರಿಸಿ ಅಭಿವೃದ್ಧಿಪಡಿಸಿದ ಬೆಳೆಗಳಿಗೆ ಕೀಟಬಾಧೆ ಪತ್ತೆಹಚ್ಚುವ ‘ಇ-ಸ್ಯಾಪ್’ ತಂತ್ರಾಂಶ ಎಲ್ಲ ರೈತರಿಗೆ ಪರಿಚಯ.
ಗ್ಯಾರಂಟಿ ಯೋಜನೆಗಳ 36 ಸಾವಿರ ಕೋಟಿ ರೂ. ಬೃಹತ್ ಮೊತ್ತವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈ ತಂತ್ರಾಂಶವನ್ನು ಇನ್ನಷ್ಟು ಬಲಪಡಿಸಲು ಆದ್ಯತೆ. ಫಲಾನುಭವಿಗಳಿಗೆ ನೀಡುತ್ತಿರುವ ನಗದುರಹಿತ ಪ್ರಯೋಜನಗಳನ್ನು ಕ್ರಮೇಣ ರಾಜ್ಯ ಡಿಬಿಟಿ ವೇದಿಕೆಯಡಿ ಅಡಕಗೊಳ್ಳಲಿವೆ. ಸಕಾಲದಲ್ಲಿದ್ದ 922 ನಾಗರಿಕ ಸೇವೆಗಳ ಪೈಕಿ 439 ಸೇವೆಗಳನ್ನು ಸೇವಾ ಸಿಂಧು ಪೋರ್ಟಲ್​ಗೆ ಸೇರ್ಪಡೆ. ಉಳಿದ 429 ಸೇವೆಗಳನ್ನು ಸೇವಾ ಸಿಂಧುಗೆ ಹಂತ ಹಂತವಾಗಿ ಸೇರಿಸಲು ಉದ್ದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ಬಜೆಟ್​ನಲ್ಲಿ ತಿಳಿಸಿದ್ದಾರೆ.
ವಿಶ್ವದ ಅತ್ಯಂತ ಸಂತೋಷ ದೇಶ ಯಾವುದು ಗೊತ್ತಾ? ಭಾರತ ಸ್ಥಾನವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
