ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ, ತತ್ವ, ಸಿದ್ಧಾಂತಗಳಿಗೆ ಕಟಿಬದ್ಧವಾಗಿದ್ದುಕೊಂಡೇ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಭಾರತೀಯ ಜನತಾ ಪಾರ್ಟಿ 43 ವರ್ಷಗಳನ್ನು ಪೂರೈಸಿ, 44 ನೇ ವರ್ಷಕ್ಕೆ ಕಾಲಿಡುತ್ತಿದೆ. ಇದಕ್ಕೂ ಮುನ್ನವೇ ಬಿಜೆಪಿಯು ಭಾರತೀಯ ಜನಸಂಘ ಎಂಬ ಪ್ರಖರ ರಾಷ್ಟ್ರೀಯವಾದಿ ಪಕ್ಷದ ಛಾಯೆಯಲ್ಲಿ ಕಾಣದಂತೆ ಬೆಳೆದು ನಿಂತಿತ್ತು. ಅಧಿಕೃತವಾಗಿ ಬಿಜೆಪಿ ಸ್ಥಾಪನೆಯಾದ ಬಳಿಕ ಕೇವಲ ನಲ್ವತ್ತು ವರ್ಷಗಳಲ್ಲಿ, ಮೌಲ್ಯಗಳನ್ನು ಬಿಟ್ಟುಕೊಡದ ನಿಷ್ಠುರ ರಾಜಕೀಯದಿಂದ ಹೆಚ್ಚು ಜನಪ್ರಿಯವಾಗಿ ಕಳೆದ ವರ್ಷ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚೀನಾದ ಕಮ್ಯುನಿಸ್ಟ್ ಪಕ್ಷ 9.67 ಕೋಟಿ ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 18 ಕೋಟಿ ಸದಸ್ಯರನ್ನು ಹೊಂದಿದೆ. ಈ ಸಂಖ್ಯೆ ಹಲವು ದೇಶಗಳ ಜನಸಂಖ್ಯೆಗಿಂತ ಹೆಚ್ಚಿದೆ ಎಂಬುದು ಪಕ್ಷದ ವೇಗದ ವಿಸ್ತರಣೆಯನ್ನು ಬಿಂಬಿಸುತ್ತದೆ.
ಡಾ.ಶ್ಯಾಮಾ ಪ್ರಸಾದ್ ಮುಖರ್ಜಿಯವರು 1951, ಅಕ್ಟೋಬರ್ 21 ರಂದು ಜನಸಂಘ ಆರಂಭಿಸಿದರು. 1952 ರ ಲೋಕಸಭೆ ಚುನಾವಣೆಯಲ್ಲಿ ಜನಸಂಘದಿಂದ ಮೂರು ಸದಸ್ಯರು ಆಯ್ಕೆಯಾದರು. 1957 ರಲ್ಲಿ 4 ಹಾಗೂ 1962 ರ ಲೋಕಸಭೆ ಚುನಾವಣೆಯಲ್ಲಿ 14 ಸದಸ್ಯರು ವಿಜಯಿಯಾದರು. ಈ ರೀತಿ ಬೆಳೆಯುತ್ತಲೇ ಹೋದ ಜನಸಂಘ, ಬಳಿಕ ಪಂಡಿತ್ ದೀನದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ದಿಗ್ಗಜರಿಂದ 1980 ಏಪ್ರಿಲ್ 6 ರಂದು ಬಿಜೆಪಿಯಾಗಿ ಮರುಜನ್ಮ ಪಡೆಯಿತು.
ಏಕಾತ್ಮ ಮಾನವತಾವಾದ ಎಂಬ ಮಧ್ಯಮಮಾರ್ಗ:ಬಂಡವಾಳಶಾಹಿ, ಸಮಾಜವಾದ ಹಾಗೂ ಕಮ್ಯುನಿಸ್ಟ್ ಸಿದ್ಧಾಂತಗಳ ಬಗ್ಗೆ ಭಾರತದಲ್ಲಿ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿ, ಪಂಡಿತ್ ದೀನದಯಾಳ್ ಉಪಾಧ್ಯಾಯರು ‘ಏಕಾತ್ಮ ಮಾನವತಾವಾದ’ ಹಾಗೂ ‘ಅಂತ್ಯೋದಯ’ ಎಂಬೆರಡು ಧ್ಯೇಯಗಳನ್ನು ಬಿಜೆಪಿಯಲ್ಲಿ ಅನುಷ್ಠಾನಗೊಳಿಸಿ, ಅದರಂತೆ ಕಾರ್ಯತತ್ಪರರಾಗಲು ಕರೆ ನೀಡಿದರು. ಇಷ್ಟೇ ಅಲ್ಲದೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲು ಆಗ್ರಹಿಸಿ ಹೋರಾಡುತ್ತಲೇ ಮೃತರಾದ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿಯವರ ಆಶಯದ ಈಡೇರಿಕೆ ಕೂಡ ಈ ಪಕ್ಷವನ್ನು ಹುಟ್ಟುಹಾಕಲು ಪ್ರೇರಣೆ ನೀಡಿತ್ತು. ಅದರಂತೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪಕ್ಷದ ಈ ಪ್ರಮುಖ ಉದ್ದೇಶವೂ ಈಡೇರಿದೆ. ಇದು ಅಖಂಡ ಭಾರತ ನಿರ್ವಣದ ಒಂದು ಆಶಯ.
1989 ರಲ್ಲಿ ಲೋಕಸಭೆಯಲ್ಲಿ ಬಿಜೆಪಿ 85 ಸ್ಥಾನಗಳನ್ನು ಹಾಗೂ 1991 ರಲ್ಲಿ 120 ಸ್ಥಾನಗಳನ್ನು ಪಡೆಯಿತು. 2014 ರಲ್ಲಿ ಮೋದಿ ಅಲೆಯಿಂದಾಗಿ 282 ಹಾಗೂ 2019 ರಲ್ಲಿ 303 ಸೀಟುಗಳನ್ನು ದಾಖಲೆಯಂತೆ ಗಳಿಸಿದ ಬಿಜೆಪಿ, ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಇದೇ ರೀತಿ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಮೊದಲಾದ ನಾಯಕರು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಹೆಮ್ಮರವಾಗಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇದು ಇನ್ನಷ್ಟು ವಿಸ್ತರಣೆಯಾಗಿದೆ.
ತತ್ವಗಳೇ ಪ್ರಧಾನ ಶಕ್ತಿ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ಮುನ್ನಡೆ ಯುತ್ತಿರುವ ಬಿಜೆಪಿಯು ಹಿಂದುತ್ವದಲ್ಲಿನ ಮೌಲ್ಯಾದರ್ಶಗಳನ್ನು, ಪರಂಪರೆಯನ್ನು ಹಾಗೂ ‘ಸರ್ವೆ ಜನಾಃ ಸುಖಿನೋ ಭವಂತು ಸರ್ವೆ ಸಂತು ನಿರಾಮಯಾಃ’ ಎಂಬ ತತ್ವವನ್ನು ಅಕ್ಷರಶಃ ಪಾಲಿಸುತ್ತಿದೆ. ಇದನ್ನು ವಿದೇಶಿ ಕನ್ನಡಕದಿಂದ ನೋಡದೆ, ಭಾರತೀಯ ಪರಂಪರೆಯ ಕಣ್ಣಿನಲ್ಲಿ ನೋಡಿದರೆ ಹೆಚ್ಚು ಅರ್ಥವಾದೀತು. 1953ರಿಂದ 1968 ರವರೆಗೆ ಪಂಡಿತ್ ದೀನದಯಾಳ್ ಉಪಾಧ್ಯಾಯರು ಜನಸಂಘದ ಮುಖಂಡರಾಗಿದ್ದರು. ಅವರು ‘ಏಕಾತ್ಮ ಮಾನವತಾವಾದ’ ಎಂಬ ಪ್ರಬಂಧದಲ್ಲಿ ಬಂಡವಾಳಶಾಹಿ ತತ್ವಗಳನ್ನು ವಿಮಶಿಸಿದ್ದಾರೆ. ಏಕಾತ್ಮ ಮಾನವತಾವಾದ ಎಂಬುದು ಎಲ್ಲರನ್ನೂ ಒಳಗೊಂಡಿರುವ ವ್ಯವಸ್ಥೆ.
ನಮ್ಮ ರಾಷ್ಟ್ರೀಯ ಅಸ್ತಿತ್ವವನ್ನು ಅರ್ಥೈಸಿಕೊಳ್ಳದಿದ್ದರೆ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿರುವುದಿಲ್ಲ. ದೇಶದ ಸಮಸ್ಯೆಗಳಿಗೆ ಪರಿಹಾರಗಳು ಸಿಗಬೇಕಾದರೆ ಒಂದಾಗಿ ಚಿಂತಿಸುವ ಅಗತ್ಯವಿದೆ ಎಂಬುದು ಈ ಸಿದ್ಧಾಂತದ ತಿರುಳು. ಇದೇ ಬಿಜೆಪಿಯ ಮೂಲ ಸಿದ್ಧಾಂತ, ಮೂಲ ತತ್ವ. ದೇಶದ ಬೇರಾವುದೇ ಪಕ್ಷದ ನಾಯಕರು ಈ ದೇಶದ ಪರಂಪರೆಯನ್ನು ತಾನು ಪಾಲನೆ ಮಾಡುತ್ತೇನೆ ಅಥವಾ ಎಲ್ಲರನ್ನೂ ಒಂದಾಗಿ ಕರೆದೊಯ್ಯುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಮುಂದಾಗುವುದಿಲ್ಲ. ಅನೇಕ ಪಕ್ಷಗಳು ಚುನಾವಣಾ ಭಾಷಣದಲ್ಲಿ ಇದನ್ನು ಹೇಳುತ್ತವೆಯೇ ಹೊರತು, ಅದನ್ನು ಪಕ್ಷದ ಮೂಲ ಸಿದ್ಧಾಂತವಾಗಿಸುವ ಧೈರ್ಯ ಮಾಡುವುದಿಲ್ಲ. ಭಾರತದ ಮಣ್ಣಿಗೆ ಏಕಾತ್ಮ ಮಾನವತಾವಾದ ಹೊಂದಿಕೊಳ್ಳುವುದರಿಂದ ಇದನ್ನೇ ಧ್ಯೇಯವಾಗಿ ಬಿಜೆಪಿ ಪರಿಗಣಿಸಿದೆ. ಒಬ್ಬ ವ್ಯಕ್ತಿಯ ಬದುಕನ್ನು ಪರಿಪೂರ್ಣಗೊಳಿಸಲು ಆತ/ಆಕೆಗೆ ಶಿಕ್ಷಣ, ನೆಮ್ಮದಿ, ಸಂಸ್ಕಾರ ನೀಡುವ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಬೇಕು. ವ್ಯಕ್ತಿಯಿಂದ ಕುಟುಂಬ, ಅದರಿಂದ ಸಮಾಜ, ಸಮಾಜದಿಂದ ದೇಶ ಬೆಳೆಯುತ್ತದೆ. ಹಾಗಾಗಿ ತಳಮಟ್ಟದಲ್ಲಿರುವ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ಅಭಿವೃದ್ಧಿ ಯೋಜನೆಗಳು ಕೇಂದ್ರೀಕೃತವಾಗಿರಬೇಕು ಎಂಬುದು ಮತ್ತೊಂದು ಮೌಲ್ಯವಾದ ‘ಅಂತ್ಯೋದಯ’ದ ಗುರಿ.
2014 ರ ನಂತರ ಅಂತ್ಯೋದಯ: 2014 ರಿಂದ ಬಿಜೆಪಿ ದೇಶದಲ್ಲಿ ಬಹುಮತ ಗಳಿಸಿದೆ. ರಾಜ್ಯದಲ್ಲಿ ಕೂಡ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಡಬಲ್ ಎಂಜಿನ್ ಸರ್ಕಾರಿ ವ್ಯವಸ್ಥೆ ಸೃಷ್ಟಿಯಾಗಿ, ಅಂತ್ಯೋದಯ ಸಾಕಾರಗೊಂಡಿದೆ. ಇಷ್ಟು ವರ್ಷಗಳ ಕಾಲ ವಂಶವಾದ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಮತಬ್ಯಾಂಕ್ ರಾಜಕಾರಣ, ಓಲೈಕೆ ರಾಜಕೀಯ, ಪಾಶ್ಚಾತ್ಯ ದೃಷ್ಟಿಕೋನದಿಂದ ನಲುಗಿದ್ದ ದೇಶದ ಆಡಳಿತ ಹಾಗೂ ರಾಜಕೀಯ ವಲಯ, ಬಿಜೆಪಿ ಬಂದ ಬಳಿಕ ತನ್ನದೇ ಪರಂಪರೆಯ ಅಸ್ಮಿತೆಯನ್ನು ಮರಳಿ ಪಡೆದಿದೆ. ಅಧಿಕಾರವನ್ನು ಒಂದು ಕುಟುಂಬದ ಏಳಿಗೆಗೆ ಬಳಸದೆ, ಆಡಳಿತ ವ್ಯವಸ್ಥೆಗೆ ಸುಲಭವಾಗಿ ಕಾಣದ ದೂರದ ಹಳ್ಳಿಯೊಂದರಲ್ಲಿ ಕುಳಿತ ರೈತ, ಕಾರ್ವಿುಕ, ವಿದ್ಯಾರ್ಥಿ, ಮಹಿಳೆ, ವಿಶೇಷಚೇತನರ ಕಲ್ಯಾಣಕ್ಕೆ ಬಳಸಬೇಕೆಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ.
ಕಿಸಾನ್ ಸಮ್ಮಾನ್​ನಡಿ, ದೇಶದ 11 ಕೋಟಿಗೂ ಅಧಿಕ ರೈತ ಕುಟುಂಬಗಳಿಗೆ 2.25 ಲಕ್ಷ ಕೋಟಿ ರೂ. ನೆರವು, 8.43 ಕೋಟಿ ಮನೆಗಳಿಗೆ ಜಲಜೀವನ್ ಕೊಳಾಯಿ ಸಂಪರ್ಕ, 48.56 ಕೋಟಿ ಜನಧನ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ 1.95 ಲಕ್ಷ ಕೋಟಿ ರೂ. ಉಳಿತಾಯ, 23.30 ಕೋಟಿ ಆಯುಷ್ಮಾನ್ ಕಾರ್ಡ್​ಗಳ ವಿತರಣೆ, ಹೀಗೆ ಜನೋಪಕಾರಿಯಾದ ಅನೇಕ ಕ್ರಮಗಳನ್ನು ಬಿಜೆಪಿ ಜಾರಿಗೆ ತಂದಿದೆ. ಇಂತಹ ಯೋಜನೆಗಳು ಹಾಗೂ ಕಾರ್ಯಕ್ರಮಗಳು ತತ್ವ, ಸಿದ್ಧಾಂತಗಳನ್ನು ಎಂದಿಗೂ ಬಿಟ್ಟುಕೊಡದ ಆದರ್ಶ ನಡೆಗೆ ಮಾದರಿಯಾಗಿದೆ. ಆದ್ದರಿಂದಲೇ, ರಾಜಕೀಯವನ್ನು ವ್ಯಾಪಾರಿ ಮನೋಭಾವದಿಂದ ನೋಡುವ ಪಕ್ಷಗಳ ನಡುವೆ ಬಿಜೆಪಿ ವಿಭಿನ್ನವಾಗಿ ನಿಲ್ಲುತ್ತದೆ. ಈ ವಿಭಿನ್ನ ಧೋರಣೆಯು ಭಾರತದ ಸಮಗ್ರತೆ, ಐಕ್ಯತೆ ಹಾಗೂ ಜನ ಕಲ್ಯಾಣದ ಆಶಯವನ್ನೇ ಆಧಾರವಾಗಿ ಹೊಂದಿದೆ. ಸ್ವಹಿತಾಸಕ್ತಿಯನ್ನು ಮೂಲೆಗಟ್ಟಿ, ರಾಷ್ಟ್ರದ ಹಿತಾಸಕ್ತಿಯನ್ನು ಏಕೈಕ ಧ್ಯೇಯವಾಗಿಸಿಕೊಂಡರೆ ಯಾವುದೇ ಸಂಘಟನೆ ಅಥವಾ ಪಕ್ಷ ಜನರ ಪ್ರೀತಿ ಗಳಿಸಬಹುದು ಎಂಬುದಕ್ಕೆ ಬಿಜೆಪಿಯ ಈ ಬೆಳವಣಿಗೆಯೇ ಉತ್ತಮ ಉದಾಹರಣೆ. ಇದು ಇಡೀ ರಾಜಕೀಯ ಕ್ಷೇತ್ರಕ್ಕೆ ಒಂದು ಮಾದರಿಯೂ ಹೌದು.
(ಲೇಖಕರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು)
ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
