ಬೆಂಗಳೂರು:ಇಸ್ರೇಲ್​ ಮಾದರಿ ಹೈನುಗಾರಿಕೆ ತಂತ್ರಜ್ಞಾನದೊಂದಿಗೆ ಡೇರಿ ಅಭಿವೃದ್ಧಿಪಡಿಸಿ ಯಶಸ್ಸು ಕಂಡಿರುವ ಛಲಗಾರ ಹಾಗೂ ಖುಷ್ಕಿ (ಒಣ) ಭೂಮಿಯನ್ನೇ ಹಸಿರು ತಾಣವಾಗಿ ಅಭಿವೃದ್ಧಿಪಡಿಸಿ ಸಮಗ್ರ ಬೇಸಾಯ ಪದ್ಧತಿ ಮೂಲಕ ಬಂಗಾರದ ಬೆಳೆ ತೆಗೆದು ಎಲ್ಲರಿಗೂ ಮಾದರಿಯಾಗಿರುವಪ್ರಗತಿಪರ ಕೃಷಿಕ ಎಂ.ಟಿ.ಕೃಷ್ಣೇಗೌಡಅವರಿಗೆ ಕನ್ನಡದ ನಂ.1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತವಿಜಯರತ್ನ-2022ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ “ವಿಜಯರತ್ನ-2022” ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್​, ಚಿತ್ರನಟ ರಮೇಶ್​ ಅರವಿಂದ್​, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಧಾನ ಪರಿಷತ್​ ಸದಸ್ಯ ಬಿ.ಜಿ.ಪಾಟೀಲ್​ ಮೊದಲಾದವರು ಇದ್ದರು.
ಪ್ರಗತಿಪರ ಕೃಷಿಕ ಕೃಷ್ಣೇಗೌಡ:ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆಯ ಯಶಸ್ವಿ ರೈತರೂ ಆದ ಸಮಾಜ ಸೇವಕ, ಕಾಂಗ್ರೆಸ್​ ಮುಖಂಡ ಎಂ.ಟಿ.ಕೃಷ್ಣೇಗೌಡರ ಸಾಧನೆ ದೊಡ್ಡದಾಗಿಯೇ ಇದೆ. ಕೃಷ್ಣೇಗೌಡರು ಅರಕಲಗೂಡು ತಾಲೂಕು ಮುದಗನೂರು ಕಾವಲಿನ ಶ್ರೀ ಲಕ್ಷ್ಮೀ ಫಾರ್ಮ್​ನಲ್ಲಿ (600 ಎಕರೆ ಜಮೀನು) ವೈಜ್ಞಾನಿಕವಾಗಿ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಹೊಗೆಸೊಪ್ಪು ಬೆಳೆಯುತ್ತಿದ್ದ ಕೃಷ್ಣೇಗೌಡರ ಕುಟುಂಬ ನಷ್ಟ ಅನುಭವಿಸಿತ್ತು. ಬಳಿಕ ಇಡೀ ಜಮೀನನ್ನು ಪ್ಲಾಂಟೇಷನ್​ ಮಾಡಿ 200 ಎಕರೆ ಗಂಧ, 200 ಎಕರೆ ಕಾಫಿ, 80 ಎಕರೆ ಅಡಕೆ, 20 ಎಕರೆ ಮಾವು, 20 ಎಕರೆ ಹಲಸು, 80 ಎಕರೆ ಜೋಳ ಹಾಗೂ 5 ಸಾವಿರ ತೆಂಗಿನಮರ ಬೆಳೆಸಿದ್ದಾರೆ. ಮಿಶ್ರ ಬೇಸಾಯ ಪದ್ಧತಿಯಲ್ಲಿ ಎಲ್ಲೆಡೆ ಸಪೋಟ, ಸೀಬೆ, ಬೇವು, ಸಿಲ್ವರ್​, ತೇಗ… ಹೀಗೆ ಎಲ್ಲ ರೀತಿಯ ಗಿಡ-ಮರಗಳನ್ನು ಹಾಕಿದ್ದಾರೆ. 1.25 ಲಕ್ಷ ಗಂಧದ ಮರಗಳನ್ನು ಬೆಳೆಸಿದ್ದಾರೆ. ಪ್ರತಿವರ್ಷ 20ರಿಂದ 25 ಸಾವಿರ ಗಂಧದ ಗಿಡ ನೆಡುತ್ತಲೇ ಇದ್ದಾರೆ. ಗಂಧದ ಮಧ್ಯೆ ಬೇವು ಬೆಳೆಯುತ್ತಿದ್ದಾರೆ. 12 ವರ್ಷಗಳಿಂದ ಎರಡು ಬಾರಿ ಬೇವು ಕಟಾವು ಮಾಡುವ ಮೂಲಕ ಲಾಭ ಗಳಿಸಿದ್ದಾರೆ.
ಇಸ್ರೇಲ್​ ಮಾದರಿ ಹೈನುಗಾರಿಕೆ:ಕೃಷ್ಣೇಗೌಡರು ತಮ್ಮ ಲಕ್ಷ್ಮೀ ಫಾರ್ಮ್​ನಲ್ಲಿ ಇಸ್ರೇಲ್​ ತಂತ್ರಜ್ಞಾನಕ್ಕೂ ಸವಾಲೊಡ್ಡುವ ರೀತಿ ವಿನೂತನ ತಂತ್ರಜ್ಞಾನ ಬಳಸಿ ಹೈನುಗಾರಿಕೆ ಮಾಡುತ್ತಿದ್ದಾರೆ. ಸದ್ಯ 800 ಹಸುಗಳು ಇದ್ದು, 350 ಹಸುಗಳು ನಿತ್ಯ 5 ಸಾವಿರ ಲೀಟರ್​ ಹಾಲು ನೀಡುತ್ತಿವೆ. ಇಬ್ಬರು ವೈದ್ಯರು ಸೇರಿದಂತೆ 12 ಜನ ಕೆಲಸಗಾರರು ನಿರ್ವಹಣೆ ಮಾಡುತ್ತಿದ್ದಾರೆ. ತಂತ್ರಜ್ಞಾನ ಮೂಲಕ ಹಾಲು ಕರೆಯುವಿಕೆ, ಪಶುಗಳ ಆರೋಗ್ಯ ರಕ್ಷಣೆ, ಸ್ವಚ್ಛತೆ, ಶುದ್ಧ ನೀರು ಸೇರಿದಂತೆ ಆಹಾರ ನೀಡುವಿಕೆ, ಕಸ ಸಂಗ್ರಹ, ಗಾಳಿ, ಬೆಳಕಿನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.
ಮೆಗಾ ಡೇರಿ ಗುರಿ:ಸಾರ್ವಜನಿಕರಿಗೆ ಸಾವಯವ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡಬೇಕು, ಹೆಚ್ಚು ಉದ್ಯೋಗ ಸೃಷ್ಟಿಸಬೇಕು ಎಂಬ ಉದ್ದೇಶದಿಂದ “ಶ್ರೀ ಲಕ್ಷ್ಮೀ ಗ್ರೂಪ್​ ಅಥವಾ ಮಗ್ಗೆ ಮನೆ” ಎಂಬ ಬ್ರಾಂಡ್​ನೊಂದಿಗೆ ಮೆಗಾ ಡೇರಿ ಸ್ಥಾಪಿಸುವ ಉದ್ದೇಶ ಕೃಷ್ಣೇಗೌಡರಲ್ಲಿದೆ. ಸದ್ಯ ಎರಡು ತಿಂಗಳೊಳಗೆ ಹೊಸ ಬ್ರಾಂಡ್​ ಮೂಲಕ ಪ್ಯಾಕಿಂಗ್​ ಹಾಲು, ತುಪ್ಪ ಸೇರಿದಂತೆ ಕೆಲ ಉತ್ಪನ್ನಗಳ ಮಾರಾಟ ಆರಂಭಿಸಲಿದ್ದಾರೆ.
ಕೃಷಿ ವಿವಿ ಮಾಡುವ ಬಯಕೆ:ಹೊಸ ತಂತ್ರಜ್ಞಾನ ಹಾಗೂ ಯಶಸ್ವಿ ಮಾದರಿಯಲ್ಲಿ ಬೆಳೆಗಳನ್ನು ಬೆಳೆಯಲು ರೈತರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ತಮ್ಮ ಫಾರ್ಮ್​ನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬಯಕೆ ಇದೆ ಎನ್ನುವ ಕೃಷ್ಣೇಗೌಡ ಅವರು, ಸಮಗ್ರ ಬೇಸಾಯ, ಸಾವಯವ ಕೃಷಿ ಬಗ್ಗೆ ರೈತರಿಗೆ ತಿಳಿಸಬೇಕು, ತಾವು ಬೆಳೆದ ಎಳನೀರು ಸೇರಿದಂತೆ ಎಲ್ಲ ಹಣ್ಣುಗಳ ಜ್ಯೂಸ್​ಗಳಿಗೆ ಬ್ರಾಂಡ್​ನೊಂದಿಗೆ ಪ್ಯಾಕೆಟ್​ ಮೂಲಕ ಮಾರಾಟ ಮಾಡುವುದನ್ನು ಕಲಿಸಬೇಕು ಎನ್ನುತ್ತಾರೆ.
ತಾಲೂಕು ಅಭಿವೃದ್ಧಿ ಗುರಿ:ಅರಕಲಗೂಡು ತಾಲೂಕಿನಲ್ಲಿ ಸರಿಯಾಗಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಎರಡು ಜೀವನದಿಗಳು ಹರಿಯುತ್ತಿದ್ದರೂ ಜನ ಬೋರ್​ವೆಲ್​ ನೀರು ಕುಡಿಯುತ್ತಿದ್ದಾರೆ. ಮೊದಲು ತಾಲೂಕಿನ ಜನರಿಗೆ ಕುಡಿಯಲು ನದಿ ನೀರು ಕೊಡಬೇಕು. ಭೂಮಿಗೆ ಯಂತ್ರಗಳನ್ನು ಬಳಸದೆ ನೀರು ಕೊಡುವ ಕೆಲಸವಾಗಬೇಕು. ಮುಖ್ಯವಾಗಿ ಎತ್ತರ ಜಾಗದಲ್ಲಿ ದೊಡ್ಡ ದೊಡ್ಡ ಟ್ಯಾಂಕ್​ಗಳನ್ನು ನಿರ್ಮಿಸಬೇಕು. ಮೊದಲು ಆ ಟ್ಯಾಂಕ್​ಗಳಿಗೆ ನದಿಗಳಿಂದ ನೀರು ತುಂಬಿಸಬೇಕು. ಬಳಿಕ ಯಾವುದೇ ಯಂತ್ರಗಳಿಲ್ಲದೆ ಗುರುತ್ವಾಕರ್ಷಣೆ ಸಹಾಯದಿಂದ ರೈತರ ಭೂಮಿಗೆ ನೀರು ನೀಡುವ ಕೆಲಸ ಆಗಬೇಕು. ಆದರೀಗ ನಮ್ಮ ತಾಲೂಕಿನಲ್ಲಿ 40ರಿಂದ 50 ಅಡಿ ಆಳದಲ್ಲಿ ನಾಲೆ ತೆಗೆಯಲಾಗಿದೆ. ಆ ನಾಲೆಯಿಂದ ನಮ್ಮ ತಾಲೂಕಿಗಿಂತ ಬೇರೆ ತಾಲೂಕು ಮತ್ತು ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತಿದೆ. ದಕ್ಷಿಣ ಕಾಶಿ ಖ್ಯಾತಿಯ ರಾಮನಾಥಪುರದಲ್ಲಿ ಬೀಳುವ ಸ್ಥಿತಿಗೆ ತಲುಪಿರುವ ದೇವಸ್ಥಾನಗಳನ್ನು ಸರಿಪಡಿಸಿ ಧಾರ್ಮಿಕ ಕೇಂದ್ರದ ಜತೆಗೆ, ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಪಡಿಸಬೇಕು ಎಂಬ ಆಸೆ ಇದೆ ಎನ್ನುತ್ತಾರೆ ಕೃಷ್ಣೇಗೌಡರು.
ಅರಕಲಗೂಡು ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಯುವಕರಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೆಲ ಯುವಕರು ಬೆಂಗಳೂರಿಗೆ ಹೋಗಿ ಎರಡು ತಿಂಗಳು ಕೆಲಸ ಮಾಡಿ ಮತ್ತೆ ಊರಿಗೆ ಬರುತ್ತಿದ್ದಾರೆ. ಆದ್ದರಿಂದ ನಮ್ಮ ತಾಲೂಕಿನ 10 ಸಾವಿರ ಯುವಜನತೆಗೆ ಇಲ್ಲೇ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇನೆ. ತಾಲೂಕಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್​ ಕಾಲೇಜು, ಪದವಿ ಕಾಲೇಜು ಸ್ಥಾಪಿಸಬೇಕೆಂಬ ಉದ್ದೇಶ ಇದೆ.| ಎಂ.ಟಿ.ಕೃಷ್ಣೇಗೌಡಪ್ರಗತಿಪರ ಕೃಷಿಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
