ಬೆಂಗಳೂರು:ಸಂಪಾದಿಸುವ ಸಾಮರ್ಥ್ಯವಿರುವ ಸಶಕ್ತ ಪುರುಷ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳಲು ಅವಕಾಶವಿಲ್ಲ ಎಂದು ಆದೇಶಿಸಿರುವ ಹೈಕೋರ್ಟ್, ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 25ರ ಅಡಿ ಪತ್ನಿಯಿಂದ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಉಡುಪಿ ತಾಲೂಕಿನ ಬಡನಿಡಿಯೂರು ಗ್ರಾಮದ 57 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣವೇನು?:ದಂಪತಿ 1993ರ ಮಾ.25ರಂದು ಮದುವೆಯಾಗಿದ್ದರು. ಗರ್ಭವತಿಯಾಗಿದ್ದ ಪತ್ನಿ ಮಗುವಿಗೆ ಜನ್ಮ ನೀಡುವ ಮೊದಲೇ 1994ರ ಫೆಬ್ರವರಿಯಲ್ಲಿ ಪತಿಯ ಮನೆ ತೊರೆದು ಹೋಗಿದ್ದರು. ಮಗು ಹುಟ್ಟಿದ ನಂತರವೂ ಆಕೆ ಗಂಡನ ಮನೆಗೆ ತೆರಳಿರಲಿಲ್ಲ. ಇದರಿಂದ, ಪತಿ ವೈವಾಹಿಕ ಜೀವನ ಮರುಸ್ಥಾಪಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 2005ರ ಜ.4ರಂದು ಕೋರ್ಟ್ ಪತಿಯ ಪರವಾಗಿ ಆದೇಶ ಮಾಡಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು 2009ರ ಏ.20ರಂದು ಹೈಕೋರ್ಟ್ ವಜಾಗೊಳಿಸಿತ್ತು. ಅದಾದ ಬಳಿಕವೂ ಪತ್ನಿ ಪತಿಯ ಜತೆ ತೆರಳಿರಲಿಲ್ಲ. ಇದರಿಂದ, ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತಿ, ಆ ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 25ರ ಅಡಿ ಶಾಶ್ವತ ಜೀವನಾಂಶ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ದಂಪತಿಗೆ ವಿಚ್ಛೇದನ ನೀಡಿ 2015ರ ಆ.19ರಂದು ಆದೇಶಿಸಿತ್ತು. ಆದರೆ, ಶಾಶ್ವತ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ವಾದ-ಪ್ರತಿವಾದವೇನು?:ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದ ಮೇಲ್ಮನವಿದಾರರ ವಕೀಲರು, ಪ್ರತಿವಾದಿ ಮಹಿಳೆ ಸಹಕಾರ ಸಂಘವೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಮೇಲ್ಮನವಿದಾರರು ಈಗ ಕೆಲಸ ಕಳೆದುಕೊಂಡಿದ್ದು, ಯಾವುದೇ ಆದಾಯವಿಲ್ಲದಂತಾಗಿದೆ. ಸಂಪಾದನೆಯಿಲ್ಲದ ಮೇಲ್ಮನವಿದಾರರ ಜೀವನ ನಿರ್ವಹಣೆಗೆ ಜೀವನಾಂಶ ನೀಡುವುದು ಪ್ರತಿವಾದಿ ಮಹಿಳೆಯ ಹೊಣೆಯಾಗಿದೆ ಎಂದಿದ್ದರು. ಮತ್ತೊಂದೆಡೆ, ಬ್ರಹ್ಮಾವರದ ಸಹಕಾರ ಸಂಘದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಮಾಸಿಕ ಕೇವಲ 8 ಸಾವಿರ ವೇತನ ಪಡೆಯುತ್ತಿದ್ದಾರೆ. ಜತೆಗೆ, ಮಗನನ್ನೂ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಹೈಕೋರ್ಟ್ ಆದೇಶವೇನು?:ಶಾಶ್ವತ ಜೀವನಾಂಶ ಕೋರಿ ಅರ್ಜಿ ಸಲ್ಲಿಕೆಯಾದಾಗ ಎರಡೂ ಕಡೆಯವರ ಸ್ಥಿತಿಗತಿ, ಸತಿ ಅಥವಾ ಪತಿಯ ಅಗತ್ಯತೆಗಳು ಹಾಗೂ ಜೀವನಾಂಶ ಕೋರಿದವರ ಆದಾಯ ಮತ್ತು ಆಸ್ತಿಯನ್ನು ಪರಿಗಣಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಪಾಟಿ ಸವಾಲಿನ ಸಂದರ್ಭದಲ್ಲಿ, ಪಿತ್ರಾರ್ಜಿತ ಜಮೀನು ಹಾಗೂ ಸದ್ಯ ವಾಸವಿರುವ ಮನೆಯಲ್ಲಿ ತಾವು ಪಾಲು ಹೊಂದಿರುವುದಾಗಿ ಮೇಲ್ಮನವಿದಾರರೇ ಒಪ್ಪಿಕೊಂಡಿದ್ದಾರೆ. ಮೇಲಾಗಿ ಈ ಎಲ್ಲ ಆಸ್ತಿಗಳೂ ಉತ್ತಮ ಮೌಲ್ಯ ಹೊಂದಿದೆ. ಆದರೆ, ಸಹಕಾರ ಸಂಘವೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ತಮ್ಮ 15 ವರ್ಷದ ಮಗನನ್ನೂ ನೋಡಿಕೊಳ್ಳುತ್ತಿದ್ದಾರೆ. ತಂದೆಯಾಗಿರುವ ಮೇಲ್ಮನವಿದಾರರು ಮಗನ ಜವಾಬ್ದಾರಿಯನ್ನೂ ತೆಗೆದುಕೊಂಡಿಲ್ಲ. ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣದ ಅಗತ್ಯವಿದ್ದು, ಈ ಎಲ್ಲ ಹೊರೆಯೂ ತಾಯಿಯ ಮೇಲೇ ಇದೆ. ಇನ್ನು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿರುವ ಮೇಲ್ಮನವಿದಾರರು ಸಂಪಾದನೆಯ ಸಾಮರ್ಥ್ಯವಿರುವ ಸಶಕ್ತ ವ್ಯಕ್ತಿಯಾಗಿದ್ದಾರೆ. ಆದ್ದರಿಂದ, ಅವರಿಗೆ ಶಾಶ್ವತ ಜೀವನಾಂಶ ನಿರಾಕರಿಸಿರುವ ಕೌಟುಂಬಿಕ ನ್ಯಾಯಾಲಯದ ಕ್ರಮ ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಮೇಲ್ಮನವಿ ವಜಾಗೊಳಿಸಿದೆ.
https://www.vijayavani.net/actor-satish-had-meals-with-food-delivery-boys-and-assured-free-tickets-for-movie/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
